ಎರಡನೇ ಪೂರ್ವಕಾಲವೃತ್ತಾಂತ 25:1-28

  • ಅಮಚ್ಯ ಯೆಹೂದದ ರಾಜನಾದ (1-4)

  • ಏದೋಮಿನ ವಿರುದ್ಧ ಯುದ್ಧ (5-13)

  • ಅಮಚ್ಯ ಮಾಡಿದ ಮೂರ್ತಿಪೂಜೆ (14-16)

  • ಇಸ್ರಾಯೇಲಿನ ರಾಜ ಯೆಹೋವಾಷನ ವಿರುದ್ಧ ಯುದ್ಧ (17-24)

  • ಅಮಚ್ಯನ ಮರಣ (25-28)

25  ಅಮಚ್ಯ ರಾಜನಾದಾಗ ಅವನಿಗೆ 25 ವರ್ಷ. ಯೆರೂಸಲೇಮಿಂದ 29 ವರ್ಷ ಆಳಿದ. ಅವನ ತಾಯಿ ಹೆಸ್ರು ಯೆಹೋವದ್ದಾನ್‌. ಅವಳು ಯೆರೂಸಲೇಮಿನವಳು.+ 2  ಅಮಚ್ಯ ಯೆಹೋವನಿಗೆ ಇಷ್ಟ ಆಗೋದನ್ನೇ ಮಾಡ್ತಾ ಹೋದ. ಆದ್ರೆ ಅವನು ಅದನ್ನ ಪೂರ್ಣ ಹೃದಯದಿಂದ ಮಾಡಲಿಲ್ಲ. 3  ರಾಜ್ಯ ಪೂರ್ತಿಯಾಗಿ ಅವನ ಹತೋಟಿಗೆ ಬಂದ ತಕ್ಷಣ ರಾಜ ಅಮಚ್ಯ ತನ್ನ ಅಪ್ಪನನ್ನ ಸಾಯಿಸಿದ್ದ ಸೇವಕರನ್ನ ಕೊಂದುಹಾಕಿದ.+ 4  ಆದ್ರೆ ಅವನು ಅವ್ರ ಮಕ್ಕಳನ್ನು ಸಾಯಿಸಲಿಲ್ಲ. ಯಾಕಂದ್ರೆ ಮೋಶೆಯ ನಿಯಮ ಪುಸ್ತಕದಲ್ಲಿ ಯೆಹೋವ “ಮಕ್ಕಳು ಮಾಡಿದ ಪಾಪಕ್ಕೆ ಅಪ್ಪಂದಿರನ್ನ, ಅಪ್ಪಂದಿರು ಮಾಡಿದ ಪಾಪಕ್ಕೆ ಮಕ್ಕಳನ್ನ ಕೊಲ್ಲಬಾರದು. ಯಾರು ಪಾಪ ಮಾಡ್ತಾರೋ ಅವ್ರೇ ಸಾಯಬೇಕು”+ ಅಂತ ಆಜ್ಞೆ ಕೊಟ್ಟಿದ್ದನು. ಅಮಚ್ಯ ಆ ನಿಯಮ ಪಾಲಿಸಿದ. 5  ಅಮಚ್ಯ ಯೆಹೂದದ ಮತ್ತು ಬೆನ್ಯಾಮೀನಿನ ಜನ್ರನ್ನ ಒಟ್ಟುಸೇರಿಸಿದ. ಅವ್ರನ್ನ ಅವ್ರವ್ರ ತಂದೆಯ ಮನೆತನದ ಪ್ರಕಾರ, ಸಾವಿರ ಮತ್ತು ನೂರು ಜನ್ರ ಅಧಿಪತಿಗಳ ಕೈಕೆಳಗೆ ನಿಲ್ಲಿಸಿದ.+ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಗಂಡಸರ ಹೆಸ್ರನ್ನ ಬರೆಸಿದ.+ ಆಗ ಅವನಿಗೆ ಸೈನ್ಯಕ್ಕೆ ಸೇರೋಕೆ 3,00,000 ವೀರ ಸೈನಿಕರು ಇದ್ದಾರೆ ಅಂತ ಗೊತ್ತಾಯ್ತು. ಅವರು ತರಬೇತಿ ಪಡೆದ* ವೀರ ಸೈನಿಕರಾಗಿದ್ರು. ಅವ್ರಿಗೆ ಬರ್ಜಿ, ದೊಡ್ಡ ಗುರಾಣಿಗಳನ್ನ ಹಿಡ್ಕೊಂಡು ಯುದ್ಧಮಾಡೋಕೆ ಗೊತ್ತಿತ್ತು. 6  ಅಷ್ಟೇ ಅಲ್ಲ ಅವನು 100 ತಲಾಂತು* ಬೆಳ್ಳಿ ಕೊಟ್ಟು ಇಸ್ರಾಯೇಲ್ಯರಿಂದ 1,00,000 ವೀರ ಸೈನಿಕರನ್ನ ಬಾಡಿಗೆಗೆ ತರಿಸಿದ. 7  ಆದ್ರೆ ಸತ್ಯ ದೇವರ ಸೇವಕನೊಬ್ಬ ಅಮಚ್ಯನ ಹತ್ರ ಬಂದು “ರಾಜನೇ, ಇಸ್ರಾಯೇಲ್‌ ಸೈನ್ಯವನ್ನ ನಿನ್ನ ಜೊತೆ ತಗೊಂಡು ಹೋಗಬೇಡ. ಯಾಕಂದ್ರೆ ಯೆಹೋವ ಇಸ್ರಾಯೇಲ್ಯರ ಜೊತೆ ಇಲ್ಲ,+ ಎಫ್ರಾಯೀಮಿನಲ್ಲಿರೋ ಯಾರ ಜೊತೆನೂ ಇಲ್ಲ. 8  ನೀನೊಬ್ಬನೇ ಯುದ್ಧಕ್ಕೆ ಹೋಗು, ಧೈರ್ಯದಿಂದ ಹೋರಾಡು. ಇಲ್ಲದಿದ್ರೆ ಸತ್ಯ ದೇವರು ನಿನ್ನನ್ನ ಶತ್ರುಗಳ ಮುಂದೆ ಎಡವೋ ತರ ಮಾಡ್ತಾನೆ. ಯಾಕಂದ್ರೆ ದೇವರಿಗೆ ಸಹಾಯ ಮಾಡಕ್ಕೂ ಶಕ್ತಿಯಿದೆ,+ ಎಡವಿಸೋಕೂ ಶಕ್ತಿಯಿದೆ” ಅಂದ. 9  ಅದಕ್ಕೆ ಅಮಚ್ಯ “ಆದ್ರೆ ನಾನು ಇಸ್ರಾಯೇಲಿನ ಸೈನ್ಯಕ್ಕಾಗಿ 100 ತಲಾಂತು ಕೊಟ್ಟಿದ್ದೀನಲ್ಲಾ, ಅದ್ರ ಬಗ್ಗೆ ಏನು?” ಅಂತ ಕೇಳಿದ. ಅದಕ್ಕೆ ಸತ್ಯ ದೇವರ ಮನುಷ್ಯ ಅವನಿಗೆ “ಯೆಹೋವ ನಿನಗೆ ಅದಕ್ಕಿಂತ ಜಾಸ್ತಿ ಕೊಡ್ತಾನೆ”+ ಅಂತ ಹೇಳಿದ. 10  ಹಾಗಾಗಿ ಅಮಚ್ಯ ಎಫ್ರಾಯೀಮಿಂದ ತರಿಸಿದ್ದ ಸೈನಿಕರನ್ನ ವಾಪಸ್‌ ಕಳಿಸಿಬಿಟ್ಟ. ಆದ್ರೆ ಆ ಸೈನಿಕರಿಗೆ ಯೆಹೂದದ ಜನ್ರ ಮೇಲೆ ತುಂಬ ಕೋಪ ಬಂತು. ಅವರು ಕೋಪದಿಂದ ಕುದೀತಾ ಅವ್ರ ಊರಿಗೆ ವಾಪಸ್‌ ಹೋದ್ರು. 11  ಆಮೇಲೆ ಅಮಚ್ಯ ಧೈರ್ಯ ತಂದುಕೊಂಡು ತನ್ನ ಸ್ವಂತ ಸೈನ್ಯದ ಜೊತೆ ಉಪ್ಪಿನ ಕಣಿವೆಗೆ+ ಬಂದ. ಅವನು ಸೇಯೀರಿನ 10,000 ಗಂಡಸರನ್ನ ಕೊಂದುಹಾಕಿದ.+ 12  ಯೆಹೂದದವರು 10,000 ಜನ್ರನ್ನ ಜೀವಂತ ಹಿಡಿದು ಕಡಿದಾದ ಬಂಡೆ ಮೇಲೆ ಅವ್ರನ್ನ ಕರ್ಕೊಂಡು ಹೋಗಿ ಅಲ್ಲಿಂದ ಕೆಳಗೆ ತಳ್ಳಿದ್ರು. ಅವರು ಕೆಳಗೆ ಬಿದ್ದು ತುಂಡುತುಂಡಾದ್ರು. 13  ಆದ್ರೆ ಯಾವ ಸೈನಿಕರನ್ನ ಅಮಚ್ಯ ಯುದ್ಧಕ್ಕೆ ಕರ್ಕೊಂಡು ಬರದೆ ಅವ್ರ ಊರಿಗೆ ವಾಪಸ್‌ ಕಳಿಸಿದ್ದನೋ+ ಅವರು ಸಮಾರ್ಯದಿಂದ+ ಬೇತ್‌-ಹೋರೋನಿನ+ ತನಕ ಯೆಹೂದದ ಪಟ್ಟಣಗಳ ಮೇಲೆಲ್ಲ ಆಕ್ರಮಣ ಮಾಡಿದ್ರು. 3,000 ಜನ್ರನ್ನ ಕೊಂದು, ಸಿಕ್ಕಾಪಟ್ಟೆ ಕೊಳ್ಳೆ ಹೊಡೆದ್ರು. 14  ಆದ್ರೆ ಅಮಚ್ಯ ಎದೋಮ್ಯರನ್ನ ಕೊಂದು ವಾಪಸ್‌ ಬರುವಾಗ ಸೇಯೀರ್‌ ಜನ್ರ ದೇವರುಗಳನ್ನ ತಗೊಂಡು ಬಂದ. ಅವನ್ನ ತನ್ನ ದೇವರುಗಳಾಗಿ ಮಾಡ್ಕೊಂಡ.+ ಅವನು ಅವುಗಳಿಗೆ ಅಡ್ಡಬಿದ್ದು ಬಲಿ ಕೊಡೋಕೆ ಶುರುಮಾಡಿದ. 15  ಇದ್ರಿಂದ ಯೆಹೋವನಿಗೆ ಅಮಚ್ಯನ ಮೇಲೆ ತುಂಬ ಕೋಪ ಬಂತು. ಹಾಗಾಗಿ ಆತನು ಒಬ್ಬ ಪ್ರವಾದಿಯನ್ನ ಅವನ ಹತ್ರ ಕಳಿಸಿದನು. ಆ ಪ್ರವಾದಿ ಅವನಿಗೆ “ಆ ದೇವರುಗಳಿಗೆ ತಮ್ಮ ಸ್ವಂತ ಜನ್ರನ್ನೇ ನಿನ್ನ ಕೈಯಿಂದ ಬಿಡಿಸೋಕೆ ಆಗಲಿಲ್ಲ. ಅಂಥ ದೇವರುಗಳನ್ನ ನೀನು ಯಾಕೆ ಆರಾಧಿಸ್ತಾ ಇದ್ದೀಯಾ?”+ ಅಂದ. 16  ಪ್ರವಾದಿ ಇನ್ನೂ ಮಾತಾಡ್ತಾ ಇರುವಾಗಲೇ ರಾಜ ಅವನಿಗೆ “ಬಾಯಿ ಮುಚ್ಚು!+ ನಾನು ನಿನ್ನ ಹತ್ರ ಏನಾದ್ರೂ ಸಲಹೆ ಕೇಳಿದ್ನಾ?+ ನೀನು ಹೀಗೇ ಮಾತಾಡ್ತಾ ಇದ್ರೆ ನಾನು ನಿನ್ನನ್ನ ಸಾಯಿಸಿಬಿಡ್ತೀನಿ” ಅಂದ. ಆಗ ಆ ಪ್ರವಾದಿ “ನೀನು ಹೀಗೆ ಮಾಡಿದ್ರಿಂದ ಮತ್ತು ನನ್ನ ಸಲಹೆನ ಕೇಳದೆ ಇದ್ದಿದ್ರಿಂದ ದೇವರು ನಿನ್ನನ್ನ ನಾಶಮಾಡಬೇಕು ಅಂತ ತೀರ್ಮಾನ ಮಾಡಿದ್ದಾನೆ ಅಂತ ನಂಗೊತ್ತು”+ ಅಂತ ಹೇಳಿ ಸುಮ್ಮನಾದ. 17  ಆಮೇಲೆ ಅಮಚ್ಯ, ಯೇಹುವಿನ ಮೊಮ್ಮಗ ಯೆಹೋವಾಹಾಜನ ಮಗ ಇಸ್ರಾಯೇಲಿನ ರಾಜ ಯೆಹೋವಾಷನ ಹತ್ರ ಸಂದೇಶ ಕಳಿಸಿ “ಬಾ, ಯುದ್ಧ ಮಾಡೋಣ”*+ ಅಂದ. 18  ಅದಕ್ಕೆ ಇಸ್ರಾಯೇಲ್ಯರ ರಾಜ ಯೆಹೋವಾಷ ಯೆಹೂದದ ರಾಜ ಅಮಚ್ಯನಿಗೆ “ಲೆಬನೋನಿನ ಮುಳ್ಳುಗಿಡ ಲೆಬನೋನಿನ ದೇವದಾರು ಮರಕ್ಕೆ ‘ನಿನ್ನ ಮಗಳನ್ನ ನನ್ನ ಮಗನಿಗೆ ಕೊಡು’ ಅಂತ ಸಂದೇಶ ಕಳಿಸ್ತು. ಆದ್ರೆ ಲೆಬನೋನಿನ ಒಂದು ಕಾಡು ಪ್ರಾಣಿ ಅಲ್ಲಿಂದ ಹಾದು ಹೋಗ್ತಿದ್ದಾಗ ಲೆಬನೋನಿನ ಮುಳ್ಳುಗಿಡನ ತುಳಿದುಬಿಡ್ತು. 19  “ನಾನು* ಎದೋಮನ್ನ ಸದೆಬಡಿದೆ”+ ಅಂದ್ಕೊಂಡು ನಿನ್ನ ಹೃದಯ ಅಹಂಕಾರ ಪಡ್ತಿದೆ, ಇನ್ನು ದೊಡ್ಡ ಹೆಸ್ರನ್ನ ಬಯಸ್ತಿದೆ. ಆದ್ರೆ ಈಗ ಆ ನಿನ್ನ ಆನಂದ ನಿನ್ನ ಮನೆಯಲ್ಲೇ ಇರಲಿ. ಯಾಕೆ ಕಷ್ಟನ ಕೈಬೀಸಿ ಕರೀತಿದ್ದೀಯಾ? ಕಷ್ಟ ಬಂದ್ರೆ ನೀನು ಮುಳುಗೋದೂ ಅಲ್ಲದೆ ನಿನ್ನ ಜೊತೆ ಯೆಹೂದವನ್ನೂ ಮುಳುಗಿಸ್ತೀಯ” ಅಂತ ಸಂದೇಶ ಕಳಿಸಿದ. 20  ಆದ್ರೆ ಅಮಚ್ಯ ಅವನ ಮಾತನ್ನ ಕೇಳಲಿಲ್ಲ.+ ಯಾಕಂದ್ರೆ ಅವರು ಎದೋಮಿನ ದೇವರುಗಳನ್ನ ಆರಾಧಿಸಿದ್ರಿಂದ+ ಅವ್ರನ್ನ ಶತ್ರುಗಳ ಕೈಗೆ ಒಪ್ಪಿಸೋಕೆ ಸತ್ಯ ದೇವರೇ ಹೀಗೆ ಮಾಡಿದ್ದನು.+ 21  ಹಾಗಾಗಿ ಇಸ್ರಾಯೇಲಿನ ರಾಜ ಯೆಹೋವಾಷ ಯೆಹೂದದ ರಾಜ ಅಮಚ್ಯನ ಮೇಲೆ ಯುದ್ಧಕ್ಕೆ ಹೋದ. ಆ ಯುದ್ಧ ಯೆಹೂದಕ್ಕೆ ಸೇರಿದ ಬೇತ್‌​-⁠ಷೆಮೆಷಿನಲ್ಲಿ+ ನಡೀತು. 22  ಇಸ್ರಾಯೇಲ್‌ ಯೆಹೂದವನ್ನ ಸೋಲಿಸ್ತು. ಆಗ ಯೆಹೂದದ ಜನ್ರು ಅವ್ರ ಮನೆಗೆ* ಓಡಿಹೋದ್ರು. 23  ಯೆಹೋವಾಹಾಜನ* ಮೊಮ್ಮಗ ಯೆಹೋವಾಷನ ಮಗ ಯೆಹೂದದ ರಾಜ ಅಮಚ್ಯನನ್ನ ಇಸ್ರಾಯೇಲ್‌ ರಾಜ ಯೆಹೋವಾಷ ಬೇತ್‌-ಷೆಮೆಷಿನಲ್ಲಿ ವಶ ಮಾಡ್ಕೊಂಡ. ಆಮೇಲೆ ಅಮಚ್ಯನನ್ನ ಕೈದಿಯಾಗಿ ಯೆರೂಸಲೇಮಿಗೆ ಕರ್ಕೊಂಡು ಬಂದ. ಯೆಹೋವಾಷ ಯೆರೂಸಲೇಮಿನ ಗೋಡೆಯನ್ನ ಎಫ್ರಾಯೀಮ್‌ ಬಾಗಿಲಿಂದ+ ‘ಮೂಲೆಬಾಗಿಲಿನ’+ ತನಕ ಕೆಡವಿಬಿಟ್ಟ. ಅದು 400 ಮೊಳ* ಉದ್ದ ಇತ್ತು. 24  ಯೆಹೋವಾಷ ಸತ್ಯ ದೇವರ ಆಲಯದಲ್ಲಿ ಓಬೇದೆದೋಮನ ಉಸ್ತುವಾರಿ ಕೆಳಗಿದ್ದ ಬೆಳ್ಳಿಬಂಗಾರ ಮತ್ತು ರಾಜನ ಅರಮನೆಯ ಖಜಾನೆಯಲ್ಲಿದ್ದ ವಸ್ತುಗಳನ್ನೆಲ್ಲ ತಗೊಂಡ.+ ಜೊತೆಗೆ ಸ್ವಲ್ಪ ಜನ್ರನ್ನ ಕೈದಿಗಳಾಗಿ ಮಾಡ್ಕೊಂಡ. ಆಮೇಲೆ ಅವನು ಸಮಾರ್ಯಕ್ಕೆ ವಾಪಸ್‌ ಹೋದ. 25  ಇಸ್ರಾಯೇಲ್‌ ರಾಜ ಯೆಹೋವಾಹಾಜನ ಮಗ ಯೆಹೋವಾಷ ಸತ್ತು 15 ವರ್ಷ ಆದಮೇಲೂ ಯೆಹೂದದ ರಾಜ ಯೆಹೋವಾಷನ+ ಮಗ ಅಮಚ್ಯ+ ಬದುಕಿದ್ದ.+ 26  ಅಮಚ್ಯನ ಇಡೀ ಜೀವನಚರಿತ್ರೆ ಬಗ್ಗೆ ಯೆಹೂದ ಮತ್ತು ಇಸ್ರಾಯೇಲಿನ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿದೆ. 27  ಯಾವತ್ತಿಂದ ಅಮಚ್ಯ ಯೆಹೋವನನ್ನ ಬಿಟ್ಟುಬಿಟ್ಟನೋ ಅವತ್ತಿಂದ ಅವನ ಶತ್ರುಗಳು ಯೆರೂಸಲೇಮಲ್ಲಿ ಅವನ ವಿರುದ್ಧ ಸಂಚು ಮಾಡೋಕೆ ಶುರುಮಾಡಿದ್ರು.+ ಹಾಗಾಗಿ ಅವನು ಲಾಕೀಷಿಗೆ ಓಡಿಹೋದ. ಆದ್ರೆ ಅವನ ಶತ್ರುಗಳು ತಮ್ಮ ಜನ್ರನ್ನ ಲಾಕೀಷಿಗೆ ಕಳಿಸಿ ಅಲ್ಲಿ ಅವನನ್ನ ಕೊಂದು ಹಾಕಿದ್ರು. 28  ಅವರು ಅವನ ಶವನ ಕುದುರೆಗಳ ಮೇಲೆ ಹೊತ್ಕೊಂಡು ಬಂದು ಯೆಹೂದ ಪಟ್ಟಣದಲ್ಲಿ ಹೂಣಿಟ್ರು.

ಪಾದಟಿಪ್ಪಣಿ

ಅಕ್ಷ. “ಆರಿಸಿದ.”
ಒಂದು ತಲಾಂತು=34.2 ಕೆಜಿ. ಪರಿಶಿಷ್ಟ ಬಿ14 ನೋಡಿ.
ಅಥವಾ “ಮುಖಾಮುಖಿ ಭೇಟಿ ಆಗೋಣ.”
ಅಕ್ಷ. “ನೀನು.”
ಅಥವಾ “ಡೇರೆಗೆ.”
ಅಹಜ್ಯ ಅಂತಾನೂ ಕರೀತಿದ್ರು.
ಸುಮಾರು 178 ಮೀ. (584 ಅಡಿ). ಪರಿಶಿಷ್ಟ ಬಿ14 ನೋಡಿ.