ಎರಡನೇ ಪೂರ್ವಕಾಲವೃತ್ತಾಂತ 19:1-11

  • ಯೇಹು ಯೆಹೋಷಾಫಾಟನನ್ನ ಗದರಿಸಿದ (1-3)

  • ಯೆಹೋಷಾಫಾಟ ಮಾಡಿದ ಸುಧಾರಣೆ (4-11)

19  ಆಮೇಲೆ ಯೆಹೂದದ ರಾಜ ಯೆಹೋಷಾಫಾಟ ಯೆರೂಸಲೇಮಲ್ಲಿದ್ದ ತನ್ನ ಅರಮನೆಗೆ ಸುರಕ್ಷಿತವಾಗಿ* ಬಂದು ತಲುಪಿದ.+ 2  ದರ್ಶಿಯಾಗಿದ್ದ ಹನಾನೀಯ+ ಮಗ ಯೇಹು,+ ರಾಜ ಯೆಹೋಷಾಫಾಟನನ್ನ ಭೇಟಿಯಾಗೋಕೆ ಬಂದ. ಯೆಹೋಷಾಫಾಟನಿಗೆ ಅವನು “ಕೆಟ್ಟವನಿಗೆ ಸಹಾಯ ಮಾಡೋದು ಸರಿನಾ?+ ಯೆಹೋವನನ್ನ ದ್ವೇಷಿಸೋ ವ್ಯಕ್ತಿನ ಪ್ರೀತಿಸೋದು ಸರಿನಾ?+ ನೀನು ಹಾಗೆ ಮಾಡಿದ್ರಿಂದ ಯೆಹೋವನ ಕೋಪ ನಿನ್ನ ಮೇಲೆ ಹೊತ್ತಿ ಉರಿತಿದೆ. 3  ಹಾಗಿದ್ರೂ ದೇವರು ನಿನ್ನಲ್ಲಿ ಒಳ್ಳೇದನ್ನ ನೋಡಿದ್ದಾನೆ.+ ಯಾಕಂದ್ರೆ ನೀನು ದೇಶದಲ್ಲಿದ್ದ ಪೂಜಾಕಂಬಗಳನ್ನ* ತೆಗೆದುಹಾಕಿದೆ. ಸತ್ಯ ದೇವರನ್ನ ಆರಾಧಿಸೋಕೆ ನೀನು ನಿನ್ನ ಹೃದಯದಲ್ಲಿ ದೃಢ ತೀರ್ಮಾನ ಮಾಡ್ಕೊಂಡೆ”+ ಅಂದ. 4  ಯೆಹೋಷಾಫಾಟ ಯೆರೂಸಲೇಮಲ್ಲೇ ವಾಸವಿದ್ದ. ಒಂದಿನ ಅವನು ಬೆರ್ಷೇಬದಿಂದ ಎಫ್ರಾಯೀಮ್‌ ಬೆಟ್ಟ ಪ್ರದೇಶದ+ ತನಕ ಇದ್ದ ಜನ್ರನ್ನ ಅವ್ರ ಪೂರ್ವಜರ ದೇವರಾದ ಯೆಹೋವನ ಹತ್ರ ಮತ್ತೆ ಕರ್ಕೊಂಡು ಬರೋಕೆ ಹೋದ.+ 5  ಅವನು ದೇಶದಲ್ಲೆಲ್ಲ ಅಂದ್ರೆ ಯೆಹೂದದ ಭದ್ರಕೋಟೆಗಳಿದ್ದ ಪ್ರತಿಯೊಂದು ಪಟ್ಟಣಗಳಿಗೆ ನ್ಯಾಯಾಧೀಶರನ್ನ ನೇಮಿಸಿದ.+ 6  ಅವನು ನ್ಯಾಯಾಧೀಶರಿಗೆ “ನೀವು ಮಾಡೋ ಕೆಲಸದ ಮೇಲೆ ನಿಮಗೆ ಗಮನವಿರಲಿ. ಯಾಕಂದ್ರೆ ನೀವು ಮನುಷ್ಯರಿಗೋಸ್ಕರ ಅಲ್ಲ, ಯೆಹೋವನಿಗೋಸ್ಕರ ತೀರ್ಪು ಮಾಡ್ತೀರ. ನೀವು ತೀರ್ಪು ಕೊಡುವಾಗ ಆತನೇ ನಿಮ್ಮ ಜೊತೆ ಇರ್ತಾನೆ.+ 7  ನಿಮಗೆ ಯೆಹೋವನ ಮೇಲೆ ಭಯ ಇರಲಿ.+ ನೀವು ಮಾಡೋ ಕೆಲಸದ ಬಗ್ಗೆ ನಿಗಾವಹಿಸಿ. ಯಾಕಂದ್ರೆ ನಮ್ಮ ದೇವರಾದ ಯೆಹೋವ ಅನೀತಿವಂತನಾಗಲಿ+ ಪಕ್ಷಪಾತಿಯಾಗಲಿ+ ಲಂಚ ತಗೊಳ್ಳುವವನಾಗಲಿ ಅಲ್ಲ”+ ಅಂದ. 8  ಯೆರೂಸಲೇಮಲ್ಲೂ ಯೆಹೋಷಾಫಾಟ ಲೇವಿಯರಲ್ಲಿ, ಪುರೋಹಿತರಲ್ಲಿ ಮತ್ತು ಇಸ್ರಾಯೇಲ್‌ ಕುಲದ ಮುಖ್ಯಸ್ಥರಲ್ಲಿ ಕೆಲವರನ್ನ ಯೆಹೋವನಿಗೋಸ್ಕರ ನ್ಯಾಯಾಧೀಶರಾಗಿ ನೇಮಿಸಿದ. ಇವರು ಯೆರೂಸಲೇಮಲ್ಲಿದ್ದ ಜನ್ರಿಗೆ ತೀರ್ಪು ಕೊಡ್ತಿದ್ರು.+ 9  ಅವನು ಅವ್ರಿಗೆ ಹೀಗೆ ಆಜ್ಞೆ ಕೊಟ್ಟ “ನೀವು ಯೆಹೋವನಿಗೆ ಭಯಪಟ್ಟು ನಂಬಿಕೆಯಿಂದ ಮತ್ತು ಪೂರ್ಣಹೃದಯದಿಂದ ಹೀಗೆ ಮಾಡಬೇಕು. 10  ತಮ್ಮತಮ್ಮ ಪಟ್ಟಣಗಳಲ್ಲಿ ವಾಸಿಸ್ತಿರೋ ನಿಮ್ಮ ಅಣ್ಣತಮ್ಮಂದಿರು ಯಾವುದಾದ್ರೂ ಕೊಲೆ ಅಪರಾಧಕ್ಕೆ ಸಂಬಂಧಿಸಿ ತೀರ್ಪು ಮಾಡಿ ಅಂತ ನಿಮ್ಮ ಹತ್ರ ಬಂದ್ರೆ+ ಅಥವಾ ಯಾವುದಾದ್ರೂ ನಿಯಮ, ಆಜ್ಞೆ, ಕಟ್ಟಳೆ ಅಥವಾ ತೀರ್ಪುಗಳ ಬಗ್ಗೆ ಪ್ರಶ್ನೆ ಮಾಡಿದ್ರೆ ನೀವು ಅವ್ರನ್ನ ಎಚ್ಚರಿಸಬೇಕು. ಯಾಕಂದ್ರೆ ಅವರು ಯೆಹೋವನ ಮುಂದೆ ತಪ್ಪಿಲ್ಲದವರಾಗಿ ಇರಬೇಕು. ಇಲ್ಲದಿದ್ರೆ ಆತನ ಕೋಪ ನಿಮ್ಮ ಮೇಲೆ ಮತ್ತು ನಿಮ್ಮ ಅಣ್ಣತಮ್ಮಂದಿರ ಮೇಲೆ ಬರುತ್ತೆ. ನಿಮ್ಮ ಮೇಲೆ ಆ ಅಪರಾಧ ಬರಬಾರದು ಅಂದ್ರೆ ನೀವು ಇದನ್ನೇ ಮಾಡಬೇಕು. 11  ಮುಖ್ಯ ಪುರೋಹಿತ ಅಮರ್ಯನನ್ನ ನಿಮ್ಮ ಮೇಲೆ ನೇಮಿಸಿದ್ದೀನಿ. ಅವನು ಯೆಹೋವನಿಗೆ ಸಂಬಂಧಪಟ್ಟ ವಿಷ್ಯಗಳನ್ನ ನೋಡಿಕೊಳ್ತಾನೆ.+ ಇಷ್ಮಾಯೇಲನ ಮಗ ಜೆಬದ್ಯನನ್ನ ಯೆಹೂದ ಕುಲದ ನಾಯಕನಾಗಿ ನೇಮಿಸಿದ್ದೀನಿ. ಅವನು ರಾಜನಿಗೆ ಸಂಬಂಧಪಟ್ಟ ವಿಷಯಗಳನ್ನ ನೋಡಿಕೊಳ್ತಾನೆ. ಲೇವಿಯರು ನಿಮ್ಮ ಮೇಲೆ ಅಧಿಕಾರಿಗಳಾಗಿ ಇರ್ತಾರೆ. ಹಾಗಾಗಿ ಧೈರ್ಯದಿಂದ ಕೆಲಸಮಾಡಿ. ಒಳ್ಳೇ ಕೆಲಸ ಮಾಡುವವರ ಜೊತೆ ಯೆಹೋವ ಇರಲಿ.”+

ಪಾದಟಿಪ್ಪಣಿ

ಅಥವಾ “ಶಾಂತಿಯಿಂದ.”