ಎರಡನೇ ಪೂರ್ವಕಾಲವೃತ್ತಾಂತ 15:1-19

  • ಆಸ ಮಾಡಿದ ಸುಧಾರಣೆ (1-19)

15  ಓದೇದನ ಮಗ ಅಜರ್ಯನ ಮೇಲೆ ದೇವರ ಪವಿತ್ರಶಕ್ತಿ ಬಂತು.  ಹಾಗಾಗಿ ಅವನು ಆಸನನ್ನ ಭೇಟಿಯಾಗಿ ಹೀಗಂದ “ರಾಜ ಆಸನೇ, ಎಲ್ಲ ಯೆಹೂದ ಮತ್ತು ಬೆನ್ಯಾಮೀನ್‌ ಕುಲದವರೇ, ಕೇಳಿ! ನೀವು ಎಲ್ಲಿ ತನಕ ಯೆಹೋವನ ಪಕ್ಷದಲ್ಲಿ ಇರ್ತೀರೋ ಅಲ್ಲಿ ತನಕ ಆತನೂ ನಿಮ್ಮ ಜೊತೆ ಇರ್ತಾನೆ.+ ನೀವು ದೇವರನ್ನ ಹುಡುಕಿದ್ರೆ ಆತನು ನಿಮಗೆ ಸಿಕ್ತಾನೆ.+ ಆದ್ರೆ ನೀವು ಆತನನ್ನ ಬಿಟ್ರೆ ಆತನೂ ನಿಮ್ಮನ್ನ ಬಿಟ್ಟುಬಿಡ್ತಾನೆ.+  ತುಂಬ ದಿನಗಳ ತನಕ ಇಸ್ರಾಯೇಲ್ಯರು ಸತ್ಯ ದೇವರಿಲ್ಲದೆ, ಪುರೋಹಿತರು ಇಲ್ಲದೆ, ನಿಯಮ ಪುಸ್ತಕ ಇಲ್ಲದೆ ಇದ್ರು.+  ಆದ್ರೆ ಅವ್ರಿಗೆ ಕಷ್ಟ ಬಂದಾಗ ಅವರು ಇಸ್ರಾಯೇಲ್‌ ದೇವರಾದ ಯೆಹೋವನ ಹತ್ರ ವಾಪಸ್‌ ಹೋದ್ರು. ಅವರು ತನ್ನನ್ನ ಹುಡುಕೋಕೆ ದೇವರೇ ಅವ್ರಿಗೆ ಸಹಾಯಮಾಡಿದನು.+  ದೇಶದಲ್ಲಿ ಶಾಂತಿ ಇಲ್ಲದಿದ್ರಿಂದ ಆಗ ಯಾರೂ ಸುರಕ್ಷಿತವಾಗಿ ಪ್ರಯಾಣ ಮಾಡೋಕೆ ಆಗ್ತಿರಲಿಲ್ಲ.*  ಎಲ್ಲ ತರದ ಕಷ್ಟಗಳಿಂದ ದೇವರು ಅವ್ರನ್ನ ಅಲ್ಲೋಲಕಲ್ಲೋಲ ಮಾಡಿದ್ರಿಂದ ಒಂದು ಜನಾಂಗ ಇನ್ನೊಂದು ಜನಾಂಗವನ್ನ, ಒಂದು ಪಟ್ಟಣ ಇನ್ನೊಂದು ಪಟ್ಟಣವನ್ನ ನಾಶಮಾಡ್ತಿತ್ತು.+  ಆದ್ರೆ ಈಗ, ನೀವು ಧೈರ್ಯವಾಗಿರಿ. ಭಯಪಡಬೇಡಿ.*+ ನಿಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುತ್ತೆ.”  ಅಜರ್ಯ ಹೇಳಿದ ಈ ಮಾತುಗಳನ್ನ ಮತ್ತು ಪ್ರವಾದಿ ಓದೇದನ ಭವಿಷ್ಯವಾಣಿಯನ್ನ ಕೇಳಿದ ತಕ್ಷಣ ಆಸ ಧೈರ್ಯ ತಂದ್ಕೊಂಡ. ಯೆಹೂದದಿಂದ, ಬೆನ್ಯಾಮೀನಿಂದ ಮತ್ತು ಎಫ್ರಾಯೀಮ್‌ ಬೆಟ್ಟ ಪ್ರದೇಶದಲ್ಲಿ ಅವನು ವಶ ಮಾಡ್ಕೊಂಡಿದ್ದ ಪಟ್ಟಣಗಳಿಂದ ಅಸಹ್ಯ ಮೂರ್ತಿಗಳನ್ನ ತೆಗೆದುಹಾಕಿದ.+ ಯೆಹೋವನ ಮಂಟಪದ ಮುಂದೆ ಇದ್ದ ಯೆಹೋವನ ಯಜ್ಞವೇದಿನ ರಾಜ ಆಸ ಮತ್ತೆ ಕಟ್ಟಿಸಿದ.+  ಎಫ್ರಾಯೀಮ್‌, ಮನಸ್ಸೆ, ಸಿಮೆಯೋನ್‌ ಪ್ರಾಂತ್ಯಗಳಲ್ಲಿದ್ದ ವಿದೇಶಿಯರಿಗೆ ಆಸನ ಜೊತೆ ಅವನ ದೇವರಾದ ಯೆಹೋವ ಇದ್ದಾನೆ ಅಂತ ಗೊತ್ತಾದಾಗ ಎಷ್ಟೋ ಜನ ಇಸ್ರಾಯೇಲನ್ನ ಬಿಟ್ಟು ಆಸನ ಹತ್ರ ಬಂದಿದ್ರು. ಹಾಗಾಗಿ ಆಸ ಯೆಹೂದ ಮತ್ತು ಬೆನ್ಯಾಮೀನಿನ ಎಲ್ಲ ಜನ್ರನ್ನ, ಆ ವಿದೇಶಿಯರನ್ನ ಒಟ್ಟುಸೇರಿಸಿದ.+ 10  ಆಸನ ಆಳ್ವಿಕೆಯ 15ನೇ ವರ್ಷದ ಮೂರನೇ ತಿಂಗಳಲ್ಲಿ ಅವ್ರೆಲ್ಲ ಯೆರೂಸಲೇಮಲ್ಲಿ ಒಟ್ಟುಸೇರಿದ್ರು. 11  ಅವರು ತಂದಿದ್ದ ಕೊಳ್ಳೆಯಿಂದ ಆ ದಿನ 700 ದನ ಮತ್ತು 7,000 ಕುರಿಗಳನ್ನ ಯೆಹೋವನಿಗೆ ಬಲಿ ಕೊಟ್ರು. 12  ಅಷ್ಟೇ ಅಲ್ಲ ಅವ್ರ ಪೂರ್ವಜರ ದೇವರಾದ ಯೆಹೋವನನ್ನ ಪೂರ್ಣ ಹೃದಯದಿಂದ ಮತ್ತು ಪೂರ್ಣ ಪ್ರಾಣದಿಂದ ಆರಾಧಿಸ್ತೀವಿ* ಅಂತ ಹೇಳಿ ಒಪ್ಪಂದ ಮಾಡ್ಕೊಂಡ್ರು.+ 13  ಇಸ್ರಾಯೇಲ್‌ ದೇವರಾದ ಯೆಹೋವನನ್ನ ಆರಾಧಿಸದೆ ಇರೋರು ಚಿಕ್ಕವರಾಗಿರಲಿ, ದೊಡ್ಡವರಾಗಿರಲಿ, ಗಂಡಸರಾಗಿರಲಿ, ಹೆಂಗಸರಾಗಿರಲಿ ಅವ್ರನ್ನ ಕೊಲ್ಲಬೇಕು.+ 14  ಹೀಗೆ ಅವರು ಗಟ್ಟಿ ಸ್ವರದಲ್ಲಿ, ಖುಷಿಯಿಂದ ಕೂಗ್ತಾ, ತುತ್ತೂರಿ ಮತ್ತು ಕೊಂಬುಗಳನ್ನ ಊದುತ್ತಾ ಯೆಹೋವನಿಗೆ ಮಾತುಕೊಟ್ರು. 15  ಹೀಗೆ ಮಾತು ಕೊಟ್ಟಿದ್ದಕ್ಕೆ ಯೆಹೂದದ ಜನ್ರು ಖುಷಿಪಟ್ರು. ಯಾಕಂದ್ರೆ ಅವರು ಹೃದಯದಾಳದಿಂದ ಈ ಮಾತು ಕೊಟ್ಟಿದ್ರು. ಅವರು ಆತನನ್ನ ತುಂಬ ಹುಡುಕಿದ್ರು. ಆಗ ಆತನು ಅವ್ರಿಗೆ ಸಿಕ್ಕಿದನು.+ ಅವ್ರ ಸುತ್ತ ಇದ್ದ ಶತ್ರುಗಳು ಆಕ್ರಮಣ ಮಾಡದೆ ಅವರು ನೆಮ್ಮದಿಯಿಂದ ಇರೋ ತರ ಯೆಹೋವ ನೋಡ್ಕೊಂಡ.+ 16  ರಾಜ ಆಸ ತನ್ನ ಅಜ್ಜಿ ಮಾಕಾಳನ್ನ+ ರಾಜಮಾತೆಯ ಸ್ಥಾನದಿಂದ ಇಳಿಸಿದ. ಯಾಕಂದ್ರೆ ಅವಳು ಪೂಜಾಕಂಬದ*+ ಆರಾಧನೆಗಾಗಿ ಅಸಹ್ಯವಾದ ಒಂದು ಮೂರ್ತಿಯನ್ನ ಮಾಡಿಸಿದ್ದಳು. ಆಸ ಆ ಮೂರ್ತಿಯನ್ನ ಕಡಿದು, ಚೂರುಚೂರು ಮಾಡಿ ಕಿದ್ರೋನ್‌ ಕಣಿವೆಯಲ್ಲಿ ಸುಟ್ಟುಹಾಕಿದ.+ 17  ಆದ್ರೆ ಇಸ್ರಾಯೇಲಿನಲ್ಲಿದ್ದ ದೇವಸ್ಥಾನಗಳನ್ನ ತೆಗೆದುಹಾಕಲಿಲ್ಲ.+ ಹಾಗಿದ್ರೂ ಆಸ ಸಾಯೋ ತನಕ ಅವನ ಹೃದಯ ಸಂಪೂರ್ಣವಾಗಿ ದೇವರ ಕಡೆ ಇತ್ತು.+ 18  ಆಸ ಮತ್ತು ಅವನ ಅಪ್ಪ ಚಿನ್ನ, ಬೆಳ್ಳಿ ಮತ್ತು ಬೇರೆಬೇರೆ ಪಾತ್ರೆಗಳನ್ನ ಪವಿತ್ರ ಸೇವೆಗೆ ಅಂತಾನೇ ಇಟ್ಟಿದ್ರು. ಆಸ ಆ ವಸ್ತುಗಳನ್ನ ತಂದು ಸತ್ಯ ದೇವರ ಆಲಯದಲ್ಲಿ ಇಟ್ಟ.+ 19  ಆಸನ ಆಳ್ವಿಕೆಯಲ್ಲಿ 35 ವರ್ಷದ ತನಕ ಯಾವುದೇ ಯುದ್ಧ ಇರಲಿಲ್ಲ.+

ಪಾದಟಿಪ್ಪಣಿ

ಅಕ್ಷ. “ಹೊರಗೆ ಹೋಗೋರಿಗೂ ಒಳಗೆ ಬರೋರಿಗೂ ಶಾಂತಿ ಇರಲಿಲ್ಲ.”
ಅಕ್ಷ. “ನಿಮ್ಮ ಕೈಗಳು ಜೋಲು ಬೀಳದಿರಲಿ.”
ಅಕ್ಷ. “ಹುಡುಕ್ತೀವಿ.”