ಎರಡನೇ ಪೂರ್ವಕಾಲವೃತ್ತಾಂತ 14:1-15

  • ಅಬೀಯನ ಮರಣ (1)

  • ಆಸ ಯೆಹೂದದ ರಾಜನಾದ (2-8)

  • ಆಸ 10,00,000 ಇಥಿಯೋಪ್ಯದವ್ರನ್ನ ಸೋಲಿಸಿದ (9-15)

14  ಆಮೇಲೆ ಅಬೀಯ ತೀರಿಹೋದ. ಅವನನ್ನ ದಾವೀದಪಟ್ಟಣದಲ್ಲಿ+ ಸಮಾಧಿ ಮಾಡಿದ್ರು. ಅವನಾದ್ಮೇಲೆ ಅವನ ಮಗ ಆಸ ರಾಜನಾದ. ಅವನ ಕಾಲದಲ್ಲಿ ಹತ್ತು ವರ್ಷದ ತನಕ ದೇಶದಲ್ಲಿ ಸಮಾಧಾನ ಇತ್ತು. 2  ಆಸ ತನ್ನ ದೇವರಾದ ಯೆಹೋವನಿಗೆ ಇಷ್ಟ ಆಗಿದ್ದನ್ನ ಮತ್ತು ಸರಿಯಾಗಿದ್ದನ್ನೇ ಮಾಡಿದ. 3  ಅವನು ಬೇರೆ ದೇವರುಗಳ ಯಜ್ಞವೇದಿಗಳನ್ನ,+ ದೇವಸ್ಥಾನಗಳನ್ನ ತೆಗೆದುಹಾಕಿದ. ವಿಗ್ರಹಸ್ತಂಭಗಳನ್ನ+ ಪುಡಿಪುಡಿ ಮಾಡಿದ. ಪೂಜಾಕಂಬಗಳನ್ನ*+ ಕಡಿದುಹಾಕಿದ. 4  ಆಮೇಲೆ ಅವನು ಯೆಹೂದದ ಜನ್ರಿಗೆ ತಮ್ಮ ಪೂರ್ವಜರ ದೇವರಾದ ಯೆಹೋವನನ್ನ ಆರಾಧಿಸೋಕೆ ಮತ್ತು ಆತನು ಕೊಟ್ಟಿರೋ ನಿಯಮ ಪುಸ್ತಕನ ಮತ್ತು ಆಜ್ಞೆಗಳನ್ನ ಪಾಲಿಸೋಕೆ ಹೇಳಿದ. 5  ಹಾಗಾಗಿ ಅವನು ಯೆಹೂದದ ಎಲ್ಲ ಪಟ್ಟಣಗಳಿಂದ ದೇವಸ್ಥಾನಗಳನ್ನ ಮತ್ತು ಧೂಪ ಕಂಬಗಳನ್ನ ತೆಗೆದುಹಾಕಿದ.+ ಅವನು ಆಳ್ತಿದ್ದಾಗ ದೇಶದಲ್ಲಿ ಸಮಾಧಾನ ಇತ್ತು. 6  ಯೆಹೋವ ಅವನಿಗೆ ವಿಶ್ರಾಂತಿ ಕೊಟ್ಟಿದ್ರಿಂದ ದೇಶದಲ್ಲಿ ಯಾವ ಸಮಸ್ಯೆನೂ ಇರ್ಲಿಲ್ಲ. ಆಗ ಯಾರೂ ಅವನ ಮೇಲೆ ಯುದ್ಧಕ್ಕೆ ಬರ್ಲಿಲ್ಲ.+ ಹಾಗಾಗಿ ಯೆಹೂದದಲ್ಲಿ ಭದ್ರ ಕೋಟೆಗಳಿದ್ದ ಪಟ್ಟಣಗಳನ್ನ ಕಟ್ಟಿದ.+ 7  ಅವನು ಯೆಹೂದದ ಜನ್ರಿಗೆ “ನಾವು ಈ ಪಟ್ಟಣಗಳನ್ನ ಕಟ್ಟಿ ಅವುಗಳನ್ನ ಗೋಡೆ, ಗೋಪುರ,+ ಬಾಗಿಲು ಮತ್ತು ಕಂಬಿಗಳಿಂದ ಭದ್ರ ಮಾಡೋಣ. ನಾವು ನಮ್ಮ ದೇವರಾದ ಯೆಹೋವನನ್ನ ಆರಾಧಿಸಿದ್ರಿಂದ ಈ ದೇಶ ಇನ್ನೂ ನಮ್ಮ ಕೈ ಕೆಳಗೇ ಇದೆ. ನಾವು ಆತನನ್ನ ಆರಾಧಿಸಿದ್ರಿಂದ ನಾಲ್ಕು ದಿಕ್ಕಿನಲ್ಲಿರೋ ಶತ್ರುಗಳಿಂದ ಆತನು ನಮ್ಮನ್ನ ಬಿಡಿಸಿ ನಮಗೆ ಶಾಂತಿ ಕೊಟ್ಟಿದ್ದಾನೆ” ಅಂದ. ಹೀಗೆ ಅವರು ಪಟ್ಟಣಗಳನ್ನ ಕಟ್ಟಿ ಮುಗಿಸಿದ್ರು.+ 8  ಆಸನ ಸೈನ್ಯದಲ್ಲಿ ಯೆಹೂದದಿಂದ ಬಂದಿದ್ದ 3,00,000 ಗಂಡಸರಿದ್ರು. ಅವ್ರ ಹತ್ರ ದೊಡ್ಡದೊಡ್ಡ ಗುರಾಣಿ ಮತ್ತು ಈಟಿಗಳಿದ್ವು. ಬೆನ್ಯಾಮೀನ್‌ ಕುಲದಿಂದ ಬಂದಿದ್ದ 2,80,000 ವೀರ ಸೈನಿಕರು ಆ ಸೈನ್ಯದಲ್ಲಿದ್ರು. ಇವ್ರ ಹತ್ರ ಚಿಕ್ಕ ಗುರಾಣಿ* ಮತ್ತು ಬಿಲ್ಲುಗಳಿದ್ವು.*+ 9  ಆಮೇಲೆ ಇಥಿಯೋಪ್ಯದ ಜೆರಹ 10,00,000 ಗಂಡಸರಿದ್ದ ಸೈನ್ಯದ ಜೊತೆ ಆಸನ ವಿರುದ್ಧ ಯುದ್ಧಕ್ಕೆ ಹೋದ. ಅವನ ಹತ್ರ 300 ರಥ ಇತ್ತು.+ ಅವನು ಮಾರೇಷಕ್ಕೆ+ ಬಂದಾಗ, 10  ಆಸ ಮಾರೇಷದ ಚೆಫಾತಾ ಕಣಿವೆಯಲ್ಲಿ ಸೈನ್ಯಕಟ್ಟಿ ಅವನ ವಿರುದ್ಧ ಯುದ್ಧಕ್ಕೆ ಬಂದ. 11  ಆಮೇಲೆ ಆಸ ತನ್ನ ದೇವರಾದ ಯೆಹೋವನಿಗೆ ಪ್ರಾರ್ಥನೆ ಮಾಡ್ತಾ+ ಹೀಗಂದ “ಯೆಹೋವನೇ, ನೀನು ಯಾರಿಗೆ ಸಹಾಯ ಮಾಡೋಕೆ ಇಷ್ಟ ಪಡ್ತೀಯೋ ಅವರು ತುಂಬ ಜನ ಇದ್ರೂ ಅವ್ರಿಗೆ ಶಕ್ತಿ ಇಲ್ಲಾ ಅಂದ್ರೂ ನೀನು ಅದ್ರ ಬಗ್ಗೆ ತಲೆ ಕೆಡಿಸ್ಕೊಳ್ಳಲ್ಲ.+ ನಮ್ಮ ದೇವರಾದ ಯೆಹೋವನೇ, ದಯವಿಟ್ಟು ನಮಗೆ ಸಹಾಯಮಾಡು. ನಾವು ನಿನ್ನನ್ನೆ ನಂಬ್ಕೊಂಡಿದ್ದೀವಿ.*+ ನಿನ್ನ ಹೆಸ್ರನ್ನ ಹೊತ್ಕೊಂಡು ಈ ಜನಸಾಗರದ ವಿರುದ್ಧ ಯುದ್ಧಕ್ಕೆ ಬಂದಿದ್ದೀವಿ.+ ಯೆಹೋವನೇ, ನೀನೇ ನಮ್ಮ ದೇವರು. ಇವತ್ತಿದ್ದು ನಾಳೆ ನಾಶ ಆಗೋ ಮನುಷ್ಯ ನಿನ್ನ ವಿರುದ್ಧ ಜಯ ಸಾಧಿಸೋಕೆ ಬಿಡಬೇಡ.”+ 12  ಹಾಗಾಗಿ ಯೆಹೋವ ಆಸನ ಮತ್ತು ಯೆಹೂದದ ಮುಂದೆ ಇಥಿಯೋಪ್ಯದ ಜನ್ರನ್ನ ಸೋಲಿಸಿದನು. ಆಗ ಇಥಿಯೋಪ್ಯದವರು ಓಡಿಹೋದ್ರು.+ 13  ಆಸ ಮತ್ತು ಅವನ ಜನ್ರು ಅವ್ರನ್ನ ಗೆರಾರಿನ+ ತನಕ ಅಟ್ಟಿಸಿಕೊಂಡು ಹೋದ್ರು. ಇಥಿಯೋಪ್ಯದವರಲ್ಲಿ ಒಬ್ಬನೂ ಜೀವಂತವಾಗಿ ಉಳಿಯದೆ ಎಲ್ಲರೂ ನಾಶವಾಗಿ ಹೋಗೋ ತನಕ ಅವ್ರನ್ನ ಹತಿಸಿದ್ರು. ಯೆಹೋವ ಮತ್ತು ಆತನ ಸೈನ್ಯದಿಂದಾಗಿ ಅವರು ನುಚ್ಚುನೂರಾದ್ರು. ಇದಾದ್ಮೇಲೆ ಯೆಹೂದದವರು ಸಿಕ್ಕಾಪಟ್ಟೆ ಕೊಳ್ಳೆಹೊಡೆದು ಅದನ್ನ ತಗೊಂಡು ಹೋದ್ರು. 14  ಗೆರಾರಿನ ಸುತ್ತ ಇದ್ದ ಎಲ್ಲ ಪಟ್ಟಣಗಳಲ್ಲಿ ಯೆಹೋವನ ಭಯ ಇದ್ದಿದ್ರಿಂದ ಯೆಹೂದದವರು ಆ ಪಟ್ಟಣಗಳನ್ನ ಆಕ್ರಮಣ ಮಾಡಿ ಅವನ್ನೂ ಲೂಟಿಮಾಡಿದ್ರು. ಯಾಕಂದ್ರೆ ಲೂಟಿಮಾಡೋಕೆ ಅಲ್ಲಿ ಎಷ್ಟೋ ವಸ್ತುಗಳಿದ್ವು. 15  ಅವರು ಪ್ರಾಣಿಗಳನ್ನ ಇಟ್ಟುಕೊಂಡಿದ್ದವರ ಮೇಲೂ ಆಕ್ರಮಣ ಮಾಡಿ ಎಷ್ಟೋ ಕುರಿಗಳನ್ನು ಮತ್ತು ಒಂಟೆಗಳನ್ನ ವಶ ಮಾಡಿಕೊಂಡ್ರು. ಆಮೇಲೆ ಅವರು ಯೆರೂಸಲೇಮಿಗೆ ವಾಪಸ್‌ ಹೋದ್ರು.

ಪಾದಟಿಪ್ಪಣಿ

ಸಾಮಾನ್ಯವಾಗಿ ಇಂಥ ಗುರಾಣಿಗಳನ್ನ ಬಿಲ್ಲುಗಾರರು ತಗೊಂಡು ಹೋಗ್ತಿದ್ರು.
ಅಕ್ಷ. “ಕಾಲಿಂದ ತುಳಿತಿದ್ದ ಬಿಲ್ಲುಗಳು.”
ಅಕ್ಷ. “ಒರಗಿಕೊಂಡಿದ್ದೀವಿ.”