ಒಂದನೇ ಸಮುವೇಲ 23:1-29
23 ಸ್ವಲ್ಪ ಸಮಯ ಆದ್ಮೇಲೆ ದಾವೀದನಿಗೆ “ಫಿಲಿಷ್ಟಿಯರು ಕೆಯೀಲಾ+ ನಗರದ ಮೇಲೆ ಯುದ್ಧ ಮಾಡ್ತಿದ್ದಾರೆ, ಅಲ್ಲಿನ ಕಣಗಳಿಂದ ಧಾನ್ಯವನ್ನ ಲೂಟಿ ಮಾಡ್ತಿದ್ದಾರೆ” ಅನ್ನೋ ಸುದ್ದಿ ಮುಟ್ಟಿತು.
2 ಆಗ ದಾವೀದ “ಈ ಫಿಲಿಷ್ಟಿಯರನ್ನ ಸಾಯಿಸೋಕೆ ನಾನು ಹೋಗಬಹುದಾ?” ಅಂತ ಯೆಹೋವನ ಹತ್ರ ಕೇಳಿದಾಗ+ ಯೆಹೋವ ದಾವೀದನಿಗೆ “ಹೋಗು, ಫಿಲಿಷ್ಟಿಯರನ್ನ ಸಾಯಿಸಿ ಕೆಯೀಲಾವನ್ನ ರಕ್ಷಿಸು” ಅಂದನು.
3 ಆದ್ರೆ ದಾವೀದನ ಗಂಡಸ್ರು “ನೋಡು! ಯೆಹೂದದಲ್ಲಿ ಇರುವಾಗ್ಲೇ+ ನಮಗೆ ಇಷ್ಟು ಭಯ ಆಗುತ್ತೆ ಅಂದ್ರೆ ಫಿಲಿಷ್ಟಿಯರ ಸೈನ್ಯದ ವಿರುದ್ಧ ಯುದ್ಧ ಮಾಡೋಕೆ+ ಕೆಯೀಲಾಗೆ ಹೋದ್ರೆ ಇನ್ನೆಷ್ಟು ಭಯ ಆಗಬಹುದು!” ಅಂದ್ರು.
4 ಆಗ ದಾವೀದ ಮತ್ತೆ ಯೆಹೋವನ ಹತ್ರ ಕೇಳಿದಾಗ+ ಯೆಹೋವ ಅವನಿಗೆ “ಎದ್ದೇಳು, ಕೆಯೀಲಾಗೆ ಹೋಗು. ನಾನು ಫಿಲಿಷ್ಟಿಯರನ್ನ ನಿನ್ನ ಕೈಗೆ ಒಪ್ಪಿಸ್ತೀನಿ”+ ಅಂದನು.
5 ದಾವೀದ ತನ್ನ ಗಂಡಸ್ರ ಜೊತೆ ಕೆಯೀಲಾಗೆ+ ಹೋಗಿ ಫಿಲಿಷ್ಟಿಯರ ವಿರುದ್ಧ ಹೋರಾಡಿದ. ದಾವೀದ ಅವ್ರ ಪ್ರಾಣಿಗಳನ್ನ ತಗೊಂಡ. ಫಿಲಿಷ್ಟಿಯರಲ್ಲಿ ಜಾಸ್ತಿ ಜನ್ರನ್ನ ಸಾಯಿಸಿದ. ಅಷ್ಟೇ ಅಲ್ಲ ಕೆಯೀಲಾ ನಗರದ ಜನ್ರನ್ನ ಕಾಪಾಡಿದ.
6 ಅಹೀಮೆಲೆಕನ ಮಗ ಎಬ್ಯಾತಾರ+ ದಾವೀದನ ಹತ್ರ ಕೆಯೀಲಾಗೆ ಓಡಿ ಬಂದಾಗ ಅವನ ಹತ್ರ ಏಫೋದ್ ಇತ್ತು.
7 ಸೌಲನಿಗೆ “ದಾವೀದ ಕೆಯೀಲಾಗೆ ಬಂದಿದ್ದಾನೆ” ಅನ್ನೋ ಸುದ್ದಿ ಸಿಕ್ತು. ಆಗ ಸೌಲ “ದೇವರು ಅವನನ್ನ ನನ್ನ ಕೈಗೆ ಒಪ್ಪಿಸಿದ್ದಾನೆ.*+ ಯಾಕಂದ್ರೆ ಭದ್ರ ಬಾಗಿಲುಗಳಿರೋ ನಗರಕ್ಕೆ ಅವನಾಗೇ ಬಂದು ಸಿಕ್ಕಿಕೊಂಡಿದ್ದಾನೆ” ಅಂದ.
8 ಹಾಗಾಗಿ ಕೆಯೀಲಾಗೆ ಹೋಗಿ ದಾವೀದನನ್ನ, ಅವನ ಗಂಡಸ್ರನ್ನ ಹಿಡಿಯೋಕೆ ಸೌಲ ಎಲ್ಲ ಜನ್ರನ್ನ ಯುದ್ಧಕ್ಕಾಗಿ ಒಟ್ಟುಸೇರಿಸಿದ.
9 ಸೌಲ ತನ್ನ ವಿರುದ್ಧ ಮಾಡ್ತಿರೋ ಈ ಪಿತೂರಿ ಬಗ್ಗೆ ದಾವೀದನಿಗೆ ಗೊತ್ತಾಯ್ತು. ಆಗ ಅವನು ಪುರೋಹಿತ ಎಬ್ಯಾತಾರನಿಗೆ “ಏಫೋದನ್ನ ಇಲ್ಲಿ ತಗೊಂಡು ಬಾ”+ ಅಂದ.
10 ಆಮೇಲೆ ದಾವೀದ “ಯೆಹೋವನೇ, ಇಸ್ರಾಯೇಲ್ ದೇವರೇ, ಸೌಲ ನನ್ನಿಂದಾಗಿ ಕೆಯೀಲಾ ನಗರ ನಾಶ ಮಾಡೋಕೆ+ ಯೋಚ್ನೆ ಮಾಡ್ತಾ ಇದ್ದಾನೆ ಅಂತ ನಿನ್ನ ಸೇವಕ ಕೇಳಿಸ್ಕೊಂಡಿದ್ದಾನೆ.
11 ಯೆಹೋವನೇ, ಇಸ್ರಾಯೇಲ್ ದೇವರೇ, ಕೆಯೀಲಾದ ನಾಯಕರು* ನನ್ನನ್ನ ಅವನ ಕೈಗೆ ಒಪ್ಪಿಸಿಬಿಡ್ತಾರಾ? ನಿನ್ನ ಸೇವಕನಾದ ನಾನು ಕೇಳಿಸ್ಕೊಂಡಿರೋ ತರ ಸೌಲ ಇಲ್ಲಿ ಬರ್ತಾನಾ? ದಯವಿಟ್ಟು ನಿನ್ನ ಸೇವಕನಿಗೆ ಹೇಳು” ಅಂದ. ಅದಕ್ಕೆ ಯೆಹೋವ “ಅವನು ಬರ್ತಾನೆ” ಅಂದನು.
12 ಆಮೇಲೆ ದಾವೀದ “ಕೆಯೀಲಾ ನಗರದ ನಾಯಕರು ನನ್ನನ್ನ, ನನ್ನ ಗಂಡಸ್ರನ್ನ ಸೌಲನ ಕೈಗೆ ಒಪ್ಪಿಸಿಬಿಡ್ತಾರಾ?” ಅಂತ ಕೇಳಿದ. ಅದಕ್ಕೆ ಯೆಹೋವ “ಅವರು ನಿಮ್ಮನ್ನ ಒಪ್ಪಿಸಿಬಿಡ್ತಾರೆ” ಅಂದನು.
13 ತಕ್ಷಣ ದಾವೀದ ಮತ್ತು ಅವನ ಜೊತೆ ಇದ್ದ ಸುಮಾರು 600 ಗಂಡಸ್ರು+ ಕೆಯೀಲಾವನ್ನ ಬಿಟ್ಟು ಎಲ್ಲೆಲ್ಲಿಗೆ ಹೋಗೋಕೆ ಸಾಧ್ಯ ಇತ್ತೋ ಅಲ್ಲಿಗೆಲ್ಲ ಹೋದ್ರು. ದಾವೀದ ಕೆಯೀಲಾದಿಂದ ತಪ್ಪಿಸ್ಕೊಂಡ ಅನ್ನೋ ಸುದ್ದಿ ಸೌಲನಿಗೆ ಸಿಕ್ಕಿದಾಗ ಅವನು ದಾವೀದನ ಹಿಂದೆ ಹೋಗಲಿಲ್ಲ.
14 ದಾವೀದ ಜೀಫ್+ ಕಾಡಲ್ಲಿರೋ ಬೆಟ್ಟದ ಪ್ರದೇಶಕ್ಕೆ ಹೋಗಿ ಉಳ್ಕೊಂಡ. ಜನ್ರು ಯಾರೂ ಅಲ್ಲಿಗೆ ಹೋಗೋಕೆ ಆಗ್ತಿರಲಿಲ್ಲ. ಸೌಲ ಅವನನ್ನ ಬಿಡದೆ ಹುಡುಕ್ತಿದ್ದ.+ ಆದ್ರೆ ಯೆಹೋವ ದಾವೀದನನ್ನ ಅವನ ಕೈಗೆ ಒಪ್ಪಿಸಲಿಲ್ಲ.
15 ತನ್ನ ಪ್ರಾಣ ತೆಗಿಯೋಕೆ ಸೌಲ ಹುಡುಕ್ತಿದ್ದಾನೆ ಅಂತ ಹೋರೆಷಿನ ಜೀಫ್ ಕಾಡಲ್ಲಿದ್ದಾಗ ದಾವೀದನಿಗೆ ಗೊತ್ತಿತ್ತು.*
16 ಸೌಲನ ಮಗ ಯೋನಾತಾನ ಹೋರೆಷಿನಲ್ಲಿದ್ದ ದಾವೀದನ ಹತ್ರ ಹೋಗಿ ಯೆಹೋವನ ಮೇಲಿದ್ದ ಭರವಸೆಯನ್ನ* ಬಲಪಡಿಸಿದ.+
17 ಯೋನಾತಾನ ದಾವೀದನಿಗೆ “ಹೆದರಬೇಡ. ನನ್ನ ತಂದೆ ಕೈಗೆ ನೀನು ಸಿಗಲ್ಲ. ನೀನು ಇಸ್ರಾಯೇಲಿನ ರಾಜನಾಗ್ತೀಯ.+ ನಾನು ನಿನಗೆ ಎರಡನೆಯವನಾಗಿ ಇರ್ತೀನಿ. ಈ ವಿಷ್ಯ ನನ್ನ ತಂದೆಗೂ ಗೊತ್ತು”+ ಅಂದ.
18 ಆಮೇಲೆ ಅವರಿಬ್ರೂ ಯೆಹೋವನ ಮುಂದೆ ಒಂದು ಒಪ್ಪಂದ ಮಾಡ್ಕೊಂಡ್ರು.+ ದಾವೀದ ಹೋರೆಷಲ್ಲಿ ಉಳ್ಕೊಂಡ. ಯೋನಾತಾನ ತನ್ನ ಮನೆಗೆ ವಾಪಸ್ ಹೋದ.
19 ಜೀಫ್ ನಗರದ ಗಂಡಸ್ರು ಗಿಬೆಯಾದಲ್ಲಿದ್ದ ಸೌಲನ ಹತ್ರ ಹೋಗಿ+ “ದಾವೀದ ನಮಗೆ ಹತ್ರದಲ್ಲಿರೋ ಹೋರೆಷಲ್ಲಿ+ ಅಡಗಿದ್ದಾನೆ.+ ಅದು ಯೆಷೀಮೋನಿನ* ದಕ್ಷಿಣಕ್ಕಿರೋ*+ ಹಕೀಲಾ ಬೆಟ್ಟದಲ್ಲಿದೆ.+ ಅಲ್ಲಿಗೆ ಹೋಗೋದು ಅಷ್ಟು ಸುಲಭ ಅಲ್ಲ.
20 ರಾಜನೇ ನಿನಗೆ ಯಾವಾಗ ಬರೋಕೆ ಇಷ್ಟ ಆಗುತ್ತೋ ಆಗ ಬಾ. ನಾವು ಅವನನ್ನ ನಿನ್ನ ಕೈಗೆ ಒಪ್ಪಿಸ್ತೀವಿ”+ ಅಂದ್ರು.
21 ಅದಕ್ಕೆ ಸೌಲ ಅವ್ರಿಗೆ “ನೀವು ನನಗೆ ಕನಿಕರ ತೋರಿಸಿರೋದ್ರಿಂದ ಯೆಹೋವ ನಿಮ್ಮನ್ನ ಆಶೀರ್ವದಿಸಲಿ.
22 ದಯವಿಟ್ಟು ಹೋಗಿ ಅವನು ಎಲ್ಲಿದ್ದಾನೆ, ಅವನನ್ನ ಯಾರು ನೋಡಿದ್ರು ಅಂತ ಸರಿಯಾಗಿ ತಿಳ್ಕೊಳ್ಳಿ. ಯಾಕಂದ್ರೆ ಅವನು ತುಂಬ ಕುತಂತ್ರಿ ಅಂತ ನನಗೆ ಹೇಳಿದ್ದಾರೆ.
23 ಅವನು ಎಲ್ಲೆಲ್ಲಿ ಅಡಗಿಕೊಳ್ತಾನೋ ಆ ಸ್ಥಳಗಳನ್ನ ಜಾಗರೂಕತೆಯಿಂದ ಕಂಡುಹಿಡಿದು ಆಧಾರ ಸಹಿತ ನನ್ನ ಹತ್ರ ಬನ್ನಿ. ಆಗ ನಾನು ನಿಮ್ಮ ಜೊತೆ ಬರ್ತಿನಿ. ಅವನು ಆ ಪ್ರದೇಶದಲ್ಲಿದ್ರೆ ನಾನು ಅವನನ್ನ ಹುಡುಕ್ತೀನಿ. ಅವನು ಯೆಹೂದದ ಸಾವಿರಾರು ಜನ್ರ ಮಧ್ಯದಲ್ಲಿದ್ರೂ ನಾನು ಅವನನ್ನ ಬಿಡಲ್ಲ” ಅಂದ.
24 ಹಾಗಾಗಿ ಅವರು ಅಲ್ಲಿಂದ ಸೌಲನಿಗಿಂತ ಮುಂಚೆ ಜೀಫ್+ ನಗರಕ್ಕೆ ಹೋದ್ರು. ಆ ಸಮಯದಲ್ಲಿ ದಾವೀದ ಮತ್ತು ಅವನ ಗಂಡಸ್ರು ಮಾವೋನ್+ ಕಾಡಲ್ಲಿದ್ರು. ಅದು ಯೆಷೀಮೋನಿನ ದಕ್ಷಿಣಕ್ಕಿದ್ದ ಅರಾಬಾದಲ್ಲಿತ್ತು.+
25 ಆಮೇಲೆ ಸೌಲ ತನ್ನ ಗಂಡಸ್ರ ಜೊತೆ ದಾವೀದನನ್ನ ಹುಡುಕೋಕೆ ಬಂದ.+ ಅದು ದಾವೀದನಿಗೆ ಗೊತ್ತಾದ ತಕ್ಷಣ ಅವನು ಒಂದು ಕಡಿದಾದ ಬಂಡೆ+ ಕಡೆ ಇಳಿದು ಹೋಗಿ ಮಾವೋನ್ ಕಾಡಲ್ಲೇ ಉಳ್ಕೊಂಡ. ಈ ವಿಷ್ಯ ಸೌಲನಿಗೆ ಗೊತ್ತಾದಾಗ ದಾವೀದನಿದ್ದ ಮಾವೋನ್ ಕಾಡಿಗೆ ಬಂದ.
26 ಸೌಲ ಬೆಟ್ಟದ ಒಂದು ಕಡೆ ಇದ್ದಾಗ ದಾವೀದ, ಅವನ ಗಂಡಸ್ರು ಇನ್ನೊಂದು ಕಡೆ ಇದ್ರು. ದಾವೀದ ಸೌಲನಿಂದ ತಪ್ಪಿಸ್ಕೊಳ್ಳೋಕೆ ಬೇಗಬೇಗ ಹೋಗ್ತಿರುವಾಗ+ ಸೌಲ ಮತ್ತು ಅವನ ಗಂಡಸ್ರು ದಾವೀದನನ್ನ, ಅವನ ಗಂಡಸ್ರನ್ನ ಹಿಡಿಯೋಕೆ ಹತ್ರತ್ರ ಬರ್ತಿದ್ರು.+
27 ಆದ್ರೆ ಒಬ್ಬ ಸಂದೇಶವಾಹಕ ಸೌಲನ ಹತ್ರ ಬಂದು “ಬೇಗ ಬಾ, ಫಿಲಿಷ್ಟಿಯರು ದೇಶದ ಮೇಲೆ ದಾಳಿ ಮಾಡಿದ್ದಾರೆ!” ಅಂದ.
28 ತಕ್ಷಣ ಸೌಲ ದಾವೀದನನ್ನ ಅಟ್ಟಿಸ್ಕೊಂಡು ಹೋಗೋದನ್ನ ಬಿಟ್ಟು+ ಫಿಲಿಷ್ಟಿಯರ ವಿರುದ್ಧ ಹೋದ. ಹಾಗಾಗಿ ಆ ಸ್ಥಳಕ್ಕೆ “ಬೇರ್ಪಡಿಸಿದ ಕಡಿದಾದ ಬಂಡೆ” ಅನ್ನೋ ಹೆಸ್ರು ಬಂತು.
29 ಆಮೇಲೆ ದಾವೀದ ಅಲ್ಲಿಂದ ಮೇಲೆ ಬಂದು ಏಂಗೆದಿಯಲ್ಲಿ ಇರೋ+ ಗುಹೆಗಳಲ್ಲಿ ಉಳ್ಕೊಂಡ.
ಪಾದಟಿಪ್ಪಣಿ
^ ಅಕ್ಷ. “ನನ್ನ ಕೈಗೆ ಮಾರಿಬಿಟ್ಟಿದ್ದಾನೆ.”
^ ಬಹುಶಃ, “ಭೂಮಾಲೀಕರು.”
^ ಬಹುಶಃ, “ಅವನು ಹೆದರುತ್ತಿದ್ದ.”
^ ಅಕ್ಷ. “ಕೈ.”
^ ಬಹುಶಃ, “ಮರುಭೂಮಿ; ಅರಣ್ಯಪ್ರದೇಶ.”
^ ಅಕ್ಷ. “ಬಲಗಡೆ.”