ಒಂದನೇ ಸಮುವೇಲ 15:1-35

  • ಸೌಲ ಅಗಾಗನನ್ನ ಉಳಿಸಿ ಅವಿಧೇಯನಾದ (1-9)

  • ಸಮುವೇಲ ಸೌಲನಿಗೆ ಬುದ್ಧಿ ಹೇಳಿದ (10-23)

    • “ಬಲಿಗಿಂತ ಮಾತು ಕೇಳೋದೆ ಆತನಿಗೆ ತುಂಬ ಇಷ್ಟ” (22)

  • ಸೌಲನಿಂದ ಅಧಿಕಾರ ಕಿತ್ಕೊಳ್ಳಲಾಯ್ತು (24-29)

  • ಸಮುವೇಲ ಅಗಾಗನನ್ನ ಸಾಯಿಸಿದ (30-35)

15  ಸಮುವೇಲ ಸೌಲನಿಗೆ “ಯೆಹೋವ ತನ್ನ ಜನ್ರಾದ ಇಸ್ರಾಯೇಲ್ಯರ ಮೇಲೆ ನಿನ್ನನ್ನ ರಾಜನಾಗಿ ಅಭಿಷೇಕಿಸೋಕೆ ನನ್ನನ್ನ ಕಳಿಸಿದ್ದನು.+ ಈಗ ಯೆಹೋವ ಏನು ಹೇಳಬೇಕು ಅಂತಿದ್ದಾನೋ ಅದನ್ನ ಕೇಳಿಸ್ಕೊ.+ 2  ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಾನೆ ‘ನಾನು ಅಮಾಲೇಕ್ಯರ ಹತ್ರ ಲೆಕ್ಕ ಕೇಳ್ತೀನಿ. ಯಾಕಂದ್ರೆ ಇಸ್ರಾಯೇಲ್ಯರು ಈಜಿಪ್ಟಿಂದ ಬರ್ತಿದ್ದಾಗ ಅಮಾಲೇಕ್ಯರು ಅವ್ರನ್ನ ದಾರೀಲಿ ವಿರೋಧಿಸಿದ್ರು.+ 3  ಈಗ ನೀನು ಹೋಗಿ ಅಮಾಲೇಕ್ಯರನ್ನ+ ಸದೆಬಡಿದು ಅವ್ರನ್ನ, ಅವ್ರಿಗೆ ಸೇರಿದ ಎಲ್ಲವನ್ನೂ ಪೂರ್ತಿ ನಾಶಮಾಡು.+ ಅವ್ರಲ್ಲಿ ಒಬ್ರನ್ನೂ ಸುಮ್ನೆ* ಬಿಡಬಾರದು. ಗಂಡಸ್ರು, ಹೆಂಗಸ್ರು, ಮಕ್ಕಳು, ಕೂಸುಗಳು, ಹೋರಿಗಳು, ಕುರಿಗಳು, ಒಂಟೆಗಳು, ಕತ್ತೆಗಳು ಹೀಗೆ ಎಲ್ಲವನ್ನ ಸಾಯಿಸಬೇಕು.’”+ 4  ಸೌಲ ಜನ್ರನ್ನ ಒಟ್ಟುಸೇರಿಸಿ ಅವ್ರನ್ನ ತೆಲಾಯೀಮಿನಲ್ಲಿ ಲೆಕ್ಕ ಮಾಡಿದಾಗ 2,00,000 ಕಾಲಾಳುಗಳು ಮತ್ತು 10,000 ಯೆಹೂದದ ಗಂಡಸ್ರು ಇದ್ರು.+ 5  ಸೌಲ ಇವ್ರ ಜೊತೆ ಅಮಾಲೇಕ್ಯರಿಗೆ ಸೇರಿದ ಪಟ್ಟಣಕ್ಕೆ ಮುಂಚೆನೇ ಹೋಗಿ ಕಣಿವೆ* ಹತ್ರ ಹೊಂಚುಹಾಕಿ ಕೂತ್ಕೊಂಡ. 6  ಸೌಲ ಕೇನ್ಯರಿಗೆ+ “ಇಸ್ರಾಯೇಲ್ಯರು ಈಜಿಪ್ಟಿಂದ ಹೊರಗೆ ಬಂದಾಗ ನೀವು ಅವ್ರಿಗೆಲ್ಲ ಶಾಶ್ವತ ಪ್ರೀತಿ ತೋರಿಸಿದ್ರಿ.+ ಹಾಗಾಗಿ ಈಗ ಅಮಾಲೇಕ್ಯರ ಪ್ರದೇಶದಿಂದ ಹೋಗಿ. ಇಲ್ಲಾಂದ್ರೆ ಅವ್ರ ಜೊತೆ ನಾನು ನಿಮ್ಮನ್ನೂ ನಾಶ ಮಾಡಬೇಕಾಗುತ್ತೆ”+ ಅಂದ. ಆಗ ಕೇನ್ಯರು ಅಮಾಲೇಕ್ಯರ ಪ್ರದೇಶದಿಂದ ಹೋದ್ರು. 7  ಆಮೇಲೆ ಸೌಲ ಅಮಾಲೇಕ್ಯರನ್ನ+ ಹವೀಲಾದಿಂದ+ ಈಜಿಪ್ಟಿನ ಪಕ್ಕದಲ್ಲಿದ್ದ ಶೂರಿನ+ ತನಕ ಸಾಯಿಸ್ತಾ ಬಂದ. 8  ಸೌಲ ಅಮಾಲೇಕಿನ ರಾಜ ಅಗಾಗನನ್ನ+ ಜೀವಂತವಾಗಿ ಹಿಡಿದ. ಉಳಿದ ಜನ್ರನ್ನೆಲ್ಲ ಕತ್ತಿಯಿಂದ ಸಂಪೂರ್ಣವಾಗಿ ನಾಶ ಮಾಡಿದ.+ 9  ಆದ್ರೆ ಅಗಾಗನನ್ನ, ಉತ್ತಮವಾದ ಕುರಿ, ದನಕರು, ಕೊಬ್ಬಿದ ಪ್ರಾಣಿ, ಟಗರು, ಮತ್ತು ಎಲ್ಲ ಒಳ್ಳೇ ವಸ್ತುಗಳನ್ನ ಸೌಲ ಮತ್ತು ಅವನ ಜನ ನಾಶ ಮಾಡ್ದೆ* ಹಾಗೇ ಬಿಟ್ರು.+ ಅವುಗಳನ್ನ ಪೂರ್ತಿ ನಾಶ ಮಾಡೋಕೆ ಅವ್ರಿಗೆ ಮನಸ್ಸಿರಲಿಲ್ಲ. ಆದ್ರೆ ಅವರು ಪ್ರಯೋಜನಕ್ಕೆ ಬಾರದ, ಅಗತ್ಯ ಇಲ್ಲದ ವಸ್ತುಗಳನ್ನ ಸಂಪೂರ್ಣ ನಾಶಮಾಡಿದ್ರು. 10  ಆಗ ಸಮುವೇಲನಿಗೆ ಯೆಹೋವನಿಂದ ಈ ಸಂದೇಶ ಬಂತು. 11  “ಸೌಲನನ್ನ ನಾನು ರಾಜನಾಗಿ ಮಾಡಿದಕ್ಕೆ ನನಗೆ ತುಂಬ ಬೇಜಾರಾಗ್ತಿದೆ. ನಾನು ಹೇಳಿದ ಹಾಗೆ ಅವನು ಕೇಳ್ತಾ ಇಲ್ಲ.* ನನ್ನ ಮಾತಿನ ಪ್ರಕಾರ ನಡೀತಾ ಇಲ್ಲ.”+ ಇದನ್ನ ಕೇಳಿ ಸಮುವೇಲನಿಗೆ ತುಂಬ ದುಃಖ ಆಯ್ತು. ಇಡೀ ರಾತ್ರಿ ಅವನು ಯೆಹೋವನಿಗೆ ಶ್ರದ್ಧೆಯಿಂದ ಪ್ರಾರ್ಥಿಸಿದ.+ 12  ಸೌಲನನ್ನ ಭೇಟಿ ಮಾಡೋಕೆ ಸಮುವೇಲ ಬೆಳಿಗ್ಗೆ ಬೇಗ ಎದ್ದಾಗ ಅವನಿಗೆ “ಸೌಲ ಕರ್ಮೆಲಿಗೆ+ ಹೋಗಿ ತನಗೋಸ್ಕರ ಒಂದು ಸ್ಮಾರಕ ಕಂಬ ನಿಲ್ಲಿಸಿ,+ ಅಲ್ಲಿಂದ ಗಿಲ್ಗಾಲಿಗೆ ಹೋದ” ಅನ್ನೋ ಸುದ್ದಿ ಸಿಕ್ತು. 13  ಕೊನೆಗೂ ಸಮುವೇಲ ಸೌಲನನ್ನ ಭೇಟಿಯಾದ. ಆಗ ಸೌಲ “ಯೆಹೋವ ನಿನ್ನನ್ನ ಆಶೀರ್ವದಿಸ್ಲಿ. ಯೆಹೋವ ನನಗೆ ಹೇಳಿದ ಹಾಗೇ ನಾನು ಮಾಡಿದ್ದೀನಿ” ಅಂದ. 14  ಆದ್ರೆ ಸಮುವೇಲ “ಹಾಗಾದ್ರೆ ನನ್ನ ಕಿವಿಗೆ ಬೀಳ್ತಿರೋ ಕುರಿಗಳ ಮತ್ತು ದನಗಳ ಸದ್ದು ಎಲ್ಲಿಂದ?”+ ಅಂತ ಕೇಳಿದ. 15  ಅದಕ್ಕೆ ಸೌಲ “ಜನ ಅವುಗಳನ್ನ ಅಮಾಲೇಕ್ಯರಿಂದ ತಗೊಂಡು ಬಂದಿದ್ದಾರೆ. ನಿನ್ನ ದೇವರಾದ ಯೆಹೋವನಿಗೆ ಬಲಿಯಾಗಿ ಅರ್ಪಿಸೋಕೆ ಆಡುಕುರಿಗಳಲ್ಲಿ ದನಕರುಗಳಲ್ಲಿ ಒಳ್ಳೇದ್ದನ್ನ ನಾಶ ಮಾಡದೆ* ಉಳಿಸಿದ್ದಾರೆ. ಆದ್ರೆ ಬೇರೆಲ್ಲವನ್ನ ನಾವು ಸಂಪೂರ್ಣ ನಾಶ ಮಾಡಿದ್ವಿ” ಅಂದ. 16  ಅದಕ್ಕೆ ಸಮುವೇಲ “ಸಾಕು ನಿಲ್ಲಿಸು! ಕಳೆದ ರಾತ್ರಿ ಯೆಹೋವ ನನಗೆ ಏನು ಹೇಳಿದ್ನೋ ಅದನ್ನ ನಿನಗೆ ಹೇಳ್ತೀನಿ”+ ಅಂದಾಗ ಸೌಲ “ಹೇಳು” ಅಂದ. 17  ಸಮುವೇಲ ಹೀಗಂದ: “ಇಸ್ರಾಯೇಲ್‌ ಕುಲಗಳ ಮೇಲೆ ನಿನ್ನನ್ನ ಅಧಿಕಾರಿಯಾಗಿ ಮಾಡಿದಾಗ ಮತ್ತು ಯೆಹೋವ ನಿನ್ನನ್ನ ಇಸ್ರಾಯೇಲಿನ ಮೇಲೆ ರಾಜನಾಗಿ ಅಭಿಷೇಕಿಸಿದಾಗ+ ನಿನ್ನ ದೃಷ್ಟಿಯಲ್ಲೇ ನೀನು ತುಂಬ ಚಿಕ್ಕವನು ಅಂತ ಅನಿಸಿತ್ತಲ್ವಾ?+ 18  ಆಮೇಲೆ ಯೆಹೋವ ಒಂದು ಕೆಲಸದ ಮೇಲೆ ನಿನ್ನನ್ನ ಕಳಿಸ್ತಾ ‘ಹೋಗು, ಆ ಪಾಪಿಗಳಾದ ಅಮಾಲೇಕ್ಯರನ್ನ ಸಂಪೂರ್ಣ ನಾಶ ಮಾಡು.+ ಅವರು ಅಳಿದು ಹೋಗೋ ತನಕ ಅವ್ರ ವಿರುದ್ಧ ಯುದ್ಧ ಮಾಡು’+ ಅಂತ ಹೇಳಿದ್ದನು. 19  ಆದ್ರೆ ಯಾಕೆ ನೀನು ಯೆಹೋವನ ಮಾತು ಕೇಳಲಿಲ್ಲ? ಅದ್ರ ಬದ್ಲು ನೀನು ಅತಿಯಾಸೆಯಿಂದ ಕೊಳ್ಳೆ ಮೇಲೆ ಮುಗಿಬಿದ್ದೆ.+ ಯೆಹೋವನಿಗೆ ಯಾವುದು ಇಷ್ಟ ಇಲ್ವೋ ಅದನ್ನೇ ಮಾಡ್ದೆ!” 20  ಆಗ ಸೌಲ ಸಮುವೇಲನಿಗೆ ಹೀಗಂದ: “ನಾನು ಯೆಹೋವನ ಮಾತು ಕೇಳಿದೆ ಅಲ್ವಾ! ಯೆಹೋವ ಹೇಳಿದ ಕೆಲಸವನ್ನ ಮಾಡೋಕೆ ನಾನು ಹೋದೆ. ಅಮಾಲೇಕಿನ ರಾಜ ಅಗಾಗನನ್ನ ಹಿಡ್ಕೊಂಡು ಬಂದೆ. ಅಮಾಲೇಕ್ಯರನ್ನ ಪೂರ್ತಿ ನಾಶ ಮಾಡ್ದೆ.+ 21  ಆದ್ರೆ ಸಂಪೂರ್ಣವಾಗಿ ನಾಶ ಮಾಡಬೇಕಾಗಿದ್ದ ಕೊಳ್ಳೆಯಿಂದ ಜನ ಉತ್ತಮವಾದ ಕುರಿ ದನಕರುಗಳನ್ನ ನಿನ್ನ ದೇವರಾದ ಯೆಹೋವನಿಗೆ ಗಿಲ್ಗಾಲಿನಲ್ಲಿ ಬಲಿಯಾಗಿ ಅರ್ಪಿಸೋಕೆ ತಗೊಂಡ್ರು.”+ 22  ಆಮೇಲೆ ಸಮುವೇಲ “ಯೆಹೋವನಿಗೆ ಯಾವುದು ತುಂಬ ಇಷ್ಟ? ಪ್ರಾಣಿಗಳನ್ನ ಸರ್ವಾಂಗಹೋಮ ಬಲಿಯಾಗಿ ಕೊಡೋದಾ ಅಥವಾ ಯೆಹೋವನ ಮಾತು ಕೇಳೋದಾ?+ ಬಲಿಗಿಂತ ಮಾತು ಕೇಳೋದೆ+ ಆತನಿಗೆ ತುಂಬ ಇಷ್ಟ, ಟಗರಿನ ಕೊಬ್ಬಿಗಿಂತ+ ಗಮನಕೊಟ್ಟು ಕೇಳೋದೆ ಆತನಿಗೆ ಮುಖ್ಯ. 23  ತಿರುಗಿಬೀಳೋದು+ ಕಣಿಹೇಳೋದಕ್ಕೆ ಸಮ+ ಮತ್ತು ದುರಹಂಕಾರದ ಕೆಲಸಗಳು ಮೂರ್ತಿಗೂ* ಮಂತ್ರತಂತ್ರಕ್ಕೂ ಸಮ. ಯೆಹೋವನ ಮಾತು ಕೇಳೋಕೆ ನಿನಗಿಷ್ಟ ಇಲ್ಲದೆ ಇರೋದ್ರಿಂದ+ ಇನ್ನು ಮುಂದೆ ನೀನು ರಾಜನಾಗಿ ಇರೋದು ಆತನಿಗೆ ಇಷ್ಟ ಇಲ್ಲ”+ ಅಂದ. 24  ಆಗ ಸೌಲ ಸಮುವೇಲನಿಗೆ “ಯೆಹೋವನ ಆಜ್ಞೆಯನ್ನ ಮತ್ತು ನಿನ್ನ ಮಾತುಗಳನ್ನ ಮೀರಿ ನಾನು ಪಾಪ ಮಾಡಿದ್ದೀನಿ. ಯಾಕಂದ್ರೆ ನಾನು ಜನ್ರಿಗೆ ಹೆದರಿ ಅವರು ಹೇಳಿದ್ದನ್ನ ಕೇಳಿದೆ. 25  ದಯವಿಟ್ಟು ನನ್ನ ಪಾಪ ಕ್ಷಮಿಸು. ನಾನು ಯೆಹೋವನ ಮುಂದೆ ಅಡ್ಡಬೀಳೋಕೆ ಆಗೋ ತರ ನೀನು ನನ್ನ ಜೊತೆ ಬಾ”+ ಅಂದ. 26  ಆದ್ರೆ ಸಮುವೇಲ ಸೌಲನಿಗೆ “ನಾನು ನಿನ್ನ ಜೊತೆ ಬರಲ್ಲ. ಯೆಹೋವನ ಮಾತು ಕೇಳೋಕೆ ನಿನಗಿಷ್ಟ ಇಲ್ಲದೆ ಇರೋದ್ರಿಂದ ಇನ್ನು ಮುಂದೆ ನೀನು ರಾಜನಾಗಿ ಇರೋದು ಯೆಹೋವನಿಗೆ ಇಷ್ಟ ಇಲ್ಲ. ನೀನು ಇಸ್ರಾಯೇಲಿನ ಮೇಲೆ ರಾಜನಾಗಿ ಆಳೋದನ್ನ ಮುಂದುವರಿಸಲ್ಲ”+ ಅಂದ. 27  ಸಮುವೇಲ ಅಲ್ಲಿಂದ ಹೋಗೋಕೆ ತಿರುಗಿದಾಗ ಸೌಲ ಸಮುವೇಲನ ತೋಳಿಲ್ಲದ ಮೇಲಂಗಿಯ ಅಂಚನ್ನ ಹಿಡಿದು ಎಳೆದ. ಅದು ಹರಿದುಹೋಯ್ತು. 28  ಆಗ ಸಮುವೇಲ “ಯೆಹೋವ ಇವತ್ತು ಇಸ್ರಾಯೇಲ್‌ ಮೇಲಿನ ನಿನ್ನ ಅಧಿಕಾರವನ್ನ ಕಿತ್ಕೊಳ್ತಾನೆ.* ಅದನ್ನ ನಿನಗಿಂತ ಒಳ್ಳೆಯವನಿಗೆ ಕೊಡ್ತಾನೆ.+ 29  ಅಷ್ಟೇ ಅಲ್ಲ ಇಸ್ರಾಯೇಲಿನ ಮಹಿಮಾಭರಿತ ದೇವರು+ ಸುಳ್ಳು ಹೇಳಲ್ಲ+ ಅಥವಾ ಮನಸ್ಸು ಬದಲಾಯಿಸಲ್ಲ.* ಯಾಕಂದ್ರೆ ಮನಸ್ಸು ಬದಲಾಯಿಸೋಕೆ+ ಆತನೇನು ಸಾಮಾನ್ಯ ಮನುಷ್ಯನಲ್ಲ” ಅಂದ. 30  ಅದಕ್ಕೆ ಸೌಲ “ನಾನು ಪಾಪ ಮಾಡಿದ್ದೀನಿ. ಆದ್ರೆ ದಯವಿಟ್ಟು ನನ್ನ ಜನ್ರ ಹಿರಿಯರ ಮುಂದೆ ಮತ್ತು ಇಸ್ರಾಯೇಲಿನ ಮುಂದೆ ನನ್ನ ಮಾನ ಕಳಿಬೇಡ. ನೀನು ನನ್ನ ಜೊತೆ ಬಾ. ನಾನು ನಿನ್ನ ದೇವರಾದ ಯೆಹೋವನ ಮುಂದೆ ಅಡ್ಡಬೀಳ್ತೀನಿ”+ ಅಂತ ಕೇಳ್ಕೊಂಡ. 31  ಹಾಗಾಗಿ ಸಮುವೇಲ ಸೌಲನ ಜೊತೆ ಹೋದ, ಸೌಲ ಯೆಹೋವನಿಗೆ ಅಡ್ಡಬಿದ್ದ. 32  ಸಮುವೇಲ “ಅಮಾಲೇಕ್ಯರ ರಾಜ ಅಗಾಗನನ್ನ ನನ್ನತ್ರ ಕರ್ಕೊಂಡು ಬನ್ನಿ” ಅಂದ. ಆಗ ಒಲ್ಲದ ಮನಸ್ಸಿಂದ* ಅಗಾಗ ಅವನ ಹತ್ರ ಹೋದ. ಯಾಕಂದ್ರೆ “ಇನ್ನು ನನಗೆ ಮರಣದ ಭಯ ಇಲ್ಲ” ಅಂತ ಅಗಾಗ ತನ್ನ ಮನಸ್ಸಲ್ಲೇ ಅಂದ್ಕೊಳ್ತಿದ್ದ. 33  ಆದ್ರೆ ಸಮುವೇಲ ಅವನಿಗೆ “ನಿನ್ನ ಕತ್ತಿ ತುಂಬ ಸ್ತ್ರೀಯರ ಮಕ್ಕಳನ್ನ ಕಿತ್ಕೊಂಡು ಅವ್ರನ್ನ ದುಃಖದಲ್ಲಿ ಮುಳುಗಿಸ್ತು. ಆದ್ರೆ ಎಲ್ಲ ಸ್ತ್ರೀಯರಿಗಿಂತ ಹೆಚ್ಚು ದುಃಖ ನಿನ್ನ ತಾಯಿ ಅನುಭವಿಸ್ತಾಳೆ” ಅಂತ ಹೇಳಿ ಅಗಾಗನನ್ನ ಯೆಹೋವನ ಮುಂದೆ ಗಿಲ್ಗಾಲಿನಲ್ಲಿ ತುಂಡುತುಂಡಾಗಿ ಕಡಿದುಹಾಕಿದ.+ 34  ಆಮೇಲೆ ಸಮುವೇಲ ರಾಮಕ್ಕೆ ಹೋದ ಮತ್ತು ಸೌಲ ಗಿಬೆಯಾದಲ್ಲಿದ್ದ ತನ್ನ ಸ್ವಂತ ಮನೆಗೆ ಹೋದ. 35  ಸಮುವೇಲ ಸೌಲನಿಗೋಸ್ಕರ ತುಂಬ ದುಃಖಪಟ್ಟ.+ ಇದಾದ್ಮೇಲೆ ಅವನು ಬದುಕಿರೋ ತನಕ ಸೌಲನ ಮುಖ ನೋಡಲಿಲ್ಲ. ಸೌಲನನ್ನ ಇಸ್ರಾಯೇಲಿನ ಮೇಲೆ ರಾಜನಾಗಿ ಮಾಡಿದ್ದಕ್ಕೆ ಯೆಹೋವನಿಗೆ ತುಂಬ ದುಃಖ ಆಯ್ತು.+

ಪಾದಟಿಪ್ಪಣಿ

ಅಥವಾ “ಕನಿಕರ ತೋರಿಸಬಾರದು.”
ಅಥವಾ “ನಾಲೆ.”
ಅಥವಾ “ಕನಿಕರದಿಂದ.”
ಅಕ್ಷ. “ನನ್ನನ್ನ ಹಿಂಬಾಲಿಸ್ತಾ ಇಲ್ಲ.”
ಅಥವಾ “ಕನಿಕರದಿಂದ.”
ಅದು ಮನೆದೇವರು, ಮೂರ್ತಿಗಳು.
ಅಕ್ಷ. “ಹರಿದುಹಾಕ್ತಾನೆ.”
ಅಥವಾ “ವಿಷಾದಪಡಲ್ಲ.”
ಬಹುಶಃ, “ಧೈರ್ಯದಿಂದ.”