ಒಂದನೇ ಪೂರ್ವಕಾಲವೃತ್ತಾಂತ 15:1-29

  • ಲೇವಿಯರು ಮಂಜೂಷವನ್ನ ಯೆರೂಸಲೇಮಿಗೆ ತಂದ್ರು (1-29)

    • ಮೀಕಲ ದಾವೀದನನ್ನ ತಿರಸ್ಕರಿಸಿದಳು (29)

15  ದಾವೀದ ತನಗಾಗಿ ದಾವೀದಪಟ್ಟಣದಲ್ಲಿ ಮನೆಗಳನ್ನ ಕಟ್ಟಿಸಿದ. ಸತ್ಯ ದೇವರ ಮಂಜೂಷ ಇಡೋಕೆ ಒಂದು ಜಾಗ ಸಿದ್ಧಮಾಡಿ ಡೇರೆ ಹಾಕಿಸಿದ.+ 2  ಆಗ ದಾವೀದ “ಲೇವಿಯರಲ್ಲದೇ ಸತ್ಯ ದೇವರ ಮಂಜೂಷವನ್ನ ಯಾರೂ ಹೊರಬಾರದು. ಯಾಕಂದ್ರೆ ಯೆಹೋವನ ಮಂಜೂಷ ಹೊರೋಕೆ, ಆತನಿಗಾಗಿ ಸೇವೆ ಮಾಡೋಕೆ ಯೆಹೋವ ಅವ್ರನ್ನ ಆರಿಸ್ಕೊಂಡಿದ್ದಾನೆ”+ ಅಂದ. 3  ಆಮೇಲೆ ದಾವೀದ ತಾನು ಸಿದ್ಧಮಾಡಿದ ಜಾಗಕ್ಕೆ ಯೆಹೋವನ ಮಂಜೂಷ ತರೋಕೆ ಇಸ್ರಾಯೇಲ್ಯರನ್ನೆಲ್ಲ ಯೆರೂಸಲೇಮಲ್ಲಿ ಸೇರಿಸಿದ.+ 4  ದಾವೀದ ಆರೋನನ ವಂಶದವ್ರನ್ನ,+ ಲೇವಿಯರನ್ನ+ ಒಟ್ಟುಸೇರಿಸಿದ. ಅವರು ಯಾರಂದ್ರೆ: 5  ಕೆಹಾತ್ಯರಲ್ಲಿ ಮುಖ್ಯಸ್ಥನಾಗಿದ್ದ ಊರೀಯೇಲ್‌, ಅವನ 120 ಸಹೋದರರು, 6  ಮೆರಾರೀಯರಲ್ಲಿ ಮುಖ್ಯಸ್ಥನಾಗಿದ್ದ ಅಸಾಯ,+ ಅವನ 220 ಸಹೋದರರು, 7  ಗೇರ್ಷೋಮ್ಯರಲ್ಲಿ ಮುಖ್ಯಸ್ಥನಾಗಿದ್ದ ಯೋವೇಲ,+ ಅವನ 130 ಸಹೋದರರು. 8  ಎಲೀಚಾಫಾನ+ ವಂಶದವ್ರಲ್ಲಿ ಮುಖ್ಯಸ್ಥನಾಗಿದ್ದ ಶೆಮಾಯ, ಅವನ 200 ಸಹೋದರರು. 9  ಹೆಬ್ರೋನನ ವಂಶದವ್ರಲ್ಲಿ ಮುಖ್ಯಸ್ಥನಾಗಿದ್ದ ಎಲೀಯೇಲ್‌, ಅವನ 80 ಸಹೋದರರು. 10  ಉಜ್ಜೀಯೇಲನ+ ವಂಶದವ್ರಲ್ಲಿ ಮುಖ್ಯಸ್ಥನಾಗಿದ್ದ ಅಮ್ಮೀನಾದಾಬ, ಅವನ 112 ಸಹೋದರರು. 11  ಆಮೇಲೆ ದಾವೀದ ಪುರೋಹಿತರಾದ ಚಾದೋಕ್‌,+ ಎಬ್ಯಾತಾರರನ್ನ,+ ಲೇವಿಯರಾದ ಊರೀಯೇಲ್‌, ಅಸಾಯ, ಯೋವೇಲ, ಶೆಮಾಯ, ಎಲೀಯೇಲ್‌, ಅಮ್ಮೀನಾದಾಬನನ್ನ ಕರೆಸಿದ. 12  ದಾವೀದ ಅವ್ರಿಗೆ ಹೀಗಂದ: “ನೀವು ಲೇವಿ ಕುಲದ ಮುಖ್ಯಸ್ಥರು. ನೀವು, ನಿಮ್ಮ ಸಹೋದರರು ಪವಿತ್ರ ಮಾಡ್ಕೊಂಡು ಇಸ್ರಾಯೇಲ್‌ ದೇವರಾದ ಯೆಹೋವನ ಮಂಜೂಷವನ್ನ ನಾನು ಅದಕ್ಕಾಗಿ ಸಿದ್ಧಮಾಡಿದ ಜಾಗಕ್ಕೆ ತಗೊಂಡು ಬನ್ನಿ. 13  ಮೊದಲ್ನೇ ಸಲ ಅದನ್ನ ತಗೊಂಡು ಬರದ+ ಕಾರಣ ನಮ್ಮ ದೇವರಾದ ಯೆಹೋವನಿಗೆ ನಮ್ಮ ಮೇಲೆ ತುಂಬ ಕೋಪ ಬಂತು.+ ಯಾಕಂದ್ರೆ ಅದನ್ನ ತಗೊಂಡು ಬರಬೇಕಾದ ಸರಿಯಾದ ರೀತಿ ಗೊತ್ತಿರಲಿಲ್ಲ.”+ 14  ಹಾಗಾಗಿ ಪುರೋಹಿತರು, ಲೇವಿಯರು ಇಸ್ರಾಯೇಲ್‌ ದೇವರಾದ ಯೆಹೋವನ ಮಂಜೂಷವನ್ನ ತರೋಕೆ ತಮ್ಮನ್ನ ಪವಿತ್ರ ಮಾಡ್ಕೊಂಡ್ರು. 15  ಯೆಹೋವ ಮೋಶೆಗೆ ಹೇಳಿದ ಹಾಗೆ ಲೇವಿಯರು ಸತ್ಯ ದೇವರ ಮಂಜೂಷದ ಕೋಲುಗಳನ್ನ ತಮ್ಮ ಹೆಗಲ ಮೇಲೆ ಹೊತ್ಕೊಂಡ್ರು.+ 16  ಆಮೇಲೆ ದಾವೀದ ಸಂಗೀತದ ಉಪಕರಣಗಳ ಜೊತೆ ಅಂದ್ರೆ ತಂತಿವಾದ್ಯಗಳ+ ಜೊತೆ ಝಲ್ಲರಿಗಳ+ ಜೊತೆ ಸಂತೋಷದಿಂದ ಹಾಡೋಕೆ ತಮ್ಮ ಸಹೋದರರನ್ನ ನೇಮಿಸೋಕೆ ಲೇವಿಯರ ಮುಖ್ಯಸ್ಥರಿಗೆ ಹೇಳಿದ. 17  ಹಾಗಾಗಿ ಲೇವಿಯರು ಯೋವೇಲನ ಮಗ ಹೇಮಾನನನ್ನ,+ ಹೇಮಾನನ ಸಹೋದರರಲ್ಲಿ ಬೆರೆಕ್ಯನ ಮಗ ಆಸಾಫನನ್ನ,+ ತಮ್ಮ ಸಹೋದರರಾದ ಮೆರಾರೀಯರಿಂದ ಕೂಷಾಯನ ಮಗ ಏತಾನನನ್ನ+ ನೇಮಿಸಿದ್ರು. 18  ಅವ್ರ ಜೊತೆ ಎರಡ್ನೇ ದಳದವರಾದ ಅವ್ರ ಸಹೋದರರು ಇದ್ರು.+ ಅವರು ಯಾರಂದ್ರೆ ಜೆಕರ್ಯ, ಬೇನ್‌, ಯಾಜೀಯೇಲ್‌, ಶೆಮೀರಾಮೋತ್‌, ಯೆಹೀಯೇಲ್‌, ಉನ್ನಿ, ಎಲೀಯಾಬ್‌, ಬೆನಾಯ, ಮಾಸೇಯ, ಮತ್ತಿತ್ಯ, ಎಲೀಫೆಲೇಹು, ಮಿಕ್ನೇಯ. ಬಾಗಿಲು ಕಾಯುವವರಾದ ಓಬೇದೆದೋಮ, ಯೆಗೀಯೇಲ್‌. 19  ಗಾಯಕರಾದ ಹೇಮಾನ್‌,+ ಆಸಾಫ,+ ಏತಾನ ತಾಮ್ರದ ಝಲ್ಲರಿಗಳನ್ನ+ ಬಾರಿಸಬೇಕಿತ್ತು. 20  ಜೆಕರ್ಯ, ಅಜೀಯೇಲ್‌, ಶೆಮೀರಾಮೋತ್‌, ಯೆಹೀಯೇಲ್‌, ಉನ್ನಿ, ಎಲೀಯಾಬ್‌, ಮಾಸೇಯ, ಬೆನಾಯ ಅಲಾಮೋತ್‌*+ ಸ್ವರದಲ್ಲಿ ತಂತಿವಾದ್ಯಗಳನ್ನ ನುಡಿಸ್ತಿದ್ರು. 21  ಮತ್ತಿತ್ಯ,+ ಎಲೀಫೆಲೇಹು, ಮಿಕ್ನೇಯ, ಓಬೇದೆದೋಮ, ಯೆಗೀಯೇಲ್‌, ಅಜಜ್ಯ ಸಂಗೀತ ನಿರ್ದೇಶಕರಾಗಿದ್ರು. ಅವರು ಶೆಮಿನಿತ್‌*+ ಸ್ವರದಲ್ಲಿ ತಂತಿವಾದ್ಯಗಳನ್ನ ನುಡಿಸ್ತಿದ್ರು. 22  ಲೇವಿಯರ ಮುಖ್ಯಸ್ಥನಾದ ಕೆನನ್ಯ+ ಮಂಜೂಷ ಹೊರುವವರ ಉಸ್ತುವಾರಿ ವಹಿಸಿದ್ದ. ಯಾಕಂದ್ರೆ ಅವನು ಆ ಕೆಲಸದಲ್ಲಿ ನಿಪುಣನಾಗಿದ್ದ. 23  ಬೆರೆಕ್ಯ, ಎಲ್ಕಾನ ಮಂಜೂಷದ ಬಾಗಿಲು ಕಾಯುವವರಾಗಿದ್ರು. 24  ಪುರೋಹಿತರಾದ ಶೆಬನ್ಯ, ಯೋಷಾಫಾಟ್‌, ನೆತನೇಲ್‌, ಅಮಾಸೈ, ಜೆಕರ್ಯ, ಬೆನಾಯ, ಎಲೀಯೆಜರರು ಸತ್ಯ ದೇವರ ಮಂಜೂಷದ+ ಮುಂದೆ ತುತ್ತೂರಿಗಳನ್ನ ಜೋರಾಗಿ ಊದ್ತಿದ್ರು. ಓಬೇದೆದೋಮ, ಯೆಹೀಯ ಸಹ ಮಂಜೂಷದ ಬಾಗಿಲು ಕಾಯುವವರಾಗಿ ಸೇವೆ ಮಾಡ್ತಿದ್ರು. 25  ಆಮೇಲೆ ದಾವೀದ, ಇಸ್ರಾಯೇಲಿನ ಹಿರಿಯರು, ಸಾವಿರ ಸಾವಿರ ಜನ್ರ ಮೇಲೆ ನೇಮಿಸಿರೋ ಮುಖ್ಯಸ್ಥರು ಯೆಹೋವನ ಒಪ್ಪಂದದ ಮಂಜೂಷವನ್ನ ಓಬೇದೆದೋಮನ+ ಮನೆಯಿಂದ ತರೋಕೆ ಸಂತೋಷದಿಂದ ಹೋದ್ರು.+ 26  ಯೆಹೋವನ ಒಪ್ಪಂದದ ಮಂಜೂಷವನ್ನ ಹೊರೋಕೆ ಸತ್ಯ ದೇವರು ಲೇವಿಯರಿಗೆ ಸಹಾಯ ಮಾಡಿದ್ರಿಂದ ಅವರು ಏಳು ಹೋರಿ, ಏಳು ಟಗರುಗಳನ್ನ ಬಲಿಯಾಗಿ ಅರ್ಪಿಸಿದ್ರು.+ 27  ದಾವೀದ ಮಂಜೂಷವನ್ನ ಹೊತ್ಕೊಂಡಿದ್ದ ಎಲ್ಲ ಲೇವಿಯರಂತೆ, ಗಾಯಕರಂತೆ, ಸಾಮಾನುಗಳನ್ನ ಹೊರುತ್ತಿದ್ದವ್ರ, ಗಾಯಕರ ಮುಖ್ಯಸ್ಥನಾದ ಕೆನನ್ಯನ ಹಾಗೆ ತೋಳಿಲ್ಲದ ನೂಲಿನ ನಿಲುವಂಗಿಯನ್ನ ಹಾಕಿದ್ದ. ಅಷ್ಟೇ ಅಲ್ಲ ದಾವೀದ ನಾರಿನ ಏಫೋದನ್ನ ಸಹ ಹಾಕಿದ್ದ.+ 28  ಎಲ್ಲ ಇಸ್ರಾಯೇಲ್ಯರು ಸಂತೋಷದಿಂದ ಆರ್ಭಟಿಸ್ತಾ,+ ಝಲ್ಲರಿಗಳನ್ನ ಬಾರಿಸ್ತಾ, ಜೋರಾಗಿ ತಂತಿವಾದ್ಯಗಳನ್ನ ನುಡಿಸ್ತಾ,+ ಕೊಂಬುಗಳನ್ನೂ ತುತ್ತೂರಿಗಳನ್ನೂ ಊದ್ತಾ+ ಯೆಹೋವನ ಒಪ್ಪಂದದ ಮಂಜೂಷವನ್ನ ತರ್ತಿದ್ರು. 29  ಆದ್ರೆ ಯೆಹೋವನ ಒಪ್ಪಂದದ ಮಂಜೂಷ ದಾವೀದಪಟ್ಟಣದ ಒಳಗೆ ಬಂದಾಗ+ ಸೌಲನ ಮಗಳಾದ ಮೀಕಲ+ ಕಿಟಕಿಯಿಂದ ಕೆಳಗೆ ನೋಡಿದಳು. ರಾಜ ದಾವೀದ ಜಿಗಿತಾ ಸಂಭ್ರಮಿಸ್ತಾ ಇರೋದನ್ನ ನೋಡಿ ತನ್ನ ಹೃದಯದಲ್ಲಿ ಅವನನ್ನ ತಿರಸ್ಕರಿಸಿದಳು.+

ಪಾದಟಿಪ್ಪಣಿ