ಕೊರಿಂಥದವರಿಗೆ ಬರೆದ ಮೊದಲನೇ ಪತ್ರ 1:1-31

  • ವಂದನೆ (1-3)

  • ಕೊರಿಂಥದವ್ರಿಗಾಗಿ ಪೌಲ ದೇವರಿಗೆ ಧನ್ಯವಾದ ಹೇಳ್ತಾನೆ (4-9)

  • ಒಂದಾಗಿರೋಕೆ ಪ್ರೋತ್ಸಾಹ (10-17)

  • ಕ್ರಿಸ್ತನ ಮೂಲಕ ದೇವರ ಶಕ್ತಿ ಮತ್ತು ವಿವೇಕ (18-25)

  • ಯೆಹೋವನ ಬಗ್ಗೆ ಮಾತ್ರ ಹೆಮ್ಮೆಪಡಬೇಕು (26-31)

1  ದೇವರ ಇಷ್ಟದಿಂದ ಅಪೊಸ್ತಲನಾಗಿ+ ಇರೋಕೆ ಯೇಸು ಕ್ರಿಸ್ತ ಕರೆದಿರೋ ಪೌಲನಾದ ನಾನು, ನಮ್ಮ ಸಹೋದರ ಸೊಸ್ಥೆನನ ಜೊತೆಯಲ್ಲಿ 2  ಕೊರಿಂಥದಲ್ಲಿರೋ+ ದೇವರ ಸಭೆಗೆ ಈ ಪತ್ರ ಬರಿತಾ ಇದ್ದೀನಿ. ಅಷ್ಟೇ ಅಲ್ಲ ಬೇರೆಬೇರೆ ಜಾಗಗಳಲ್ಲಿ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಹೆಸ್ರಲ್ಲಿ ನಂಬಿಕೆ ಇಟ್ಟವ್ರಿಗೂ*+ ಈ ಪತ್ರ ಬರಿತಾ ಇದ್ದೀನಿ. ಕ್ರಿಸ್ತ ಅವ್ರ ಮತ್ತು ನಮ್ಮ ಪ್ರಭು ಆಗಿದ್ದಾನೆ. ನೀವು ಕ್ರಿಸ್ತ ಯೇಸು ಜೊತೆ ಒಂದಾಗಿರಬೇಕು ಅಂತ ದೇವರು ನಿಮ್ಮನ್ನ ಆರಿಸ್ಕೊಂಡನು+ ಮತ್ತು ಪವಿತ್ರ ಜನ್ರಾಗಿ ಇರೋಕೆ ಕರೆದನು. 3  ನಮ್ಮ ತಂದೆಯಾದ ದೇವರಿಂದ ಮತ್ತು ಪ್ರಭು ಯೇಸು ಕ್ರಿಸ್ತನಿಂದ ನಿಮ್ಮೆಲ್ರಿಗೆ ಅಪಾರ ಕೃಪೆ, ಶಾಂತಿ ಸಿಗ್ಲಿ. 4  ದೇವರು ನಿಮಗೆ ಕ್ರಿಸ್ತ ಯೇಸು ಮೂಲಕ ಅಪಾರ ಕೃಪೆ ತೋರಿಸಿದ್ದಕ್ಕೆ ಯಾವಾಗ್ಲೂ ನನ್ನ ದೇವರಿಗೆ ಧನ್ಯವಾದ ಹೇಳ್ತೀನಿ. 5  ನೀವು ಕ್ರಿಸ್ತನ ಜೊತೆ ಒಂದಾಗಿ ಇರೋದ್ರಿಂದ ದೇವರು ನಿಮಗೆ ಎಲ್ಲ ಕೊಟ್ಟಿದ್ದಾನೆ. ದೇವರ ಮಾತನ್ನ ಹೇಳೋ ಒಳ್ಳೇ ಸಾಮರ್ಥ್ಯ ಮತ್ತು ಅದ್ರ ಪೂರ್ಣ ಜ್ಞಾನ ಕೊಟ್ಟಿದ್ದಾನೆ.+ 6  ಯಾಕಂದ್ರೆ ಕ್ರಿಸ್ತನ ಬಗ್ಗೆ ನಾನು ಕೊಟ್ಟ ಸಾಕ್ಷಿಯನ್ನ+ ನೀವು ಬಲವಾಗಿ ನಂಬಿದ್ದೀರ. 7  ಇದ್ರಿಂದ ನಮ್ಮ ಪ್ರಭು ಯೇಸು ಕ್ರಿಸ್ತ ಮತ್ತೆ ಬರೋ ಸಮಯಕ್ಕಾಗಿ ಕಾತುರದಿಂದ ಕಾಯ್ತಿರೋ ನಿಮಗೆ ಯಾವ ಸಾಮರ್ಥ್ಯದಲ್ಲೂ* ಕೊರತೆಯಿಲ್ಲ.+ 8  ಅಷ್ಟೇ ಅಲ್ಲ, ನೀವು ಕೊನೆ ತನಕ ದೃಢವಾಗಿರೋಕೆ ದೇವರು ಸಹಾಯ ಮಾಡ್ತಾನೆ. ಆಗ ನಮ್ಮ ಪ್ರಭು ಯೇಸು ಕ್ರಿಸ್ತನ ದಿನದಲ್ಲಿ ನಿಮ್ಮ ಮೇಲೆ ಆರೋಪ ಹೊರಿಸೋಕೆ ಯಾವುದೇ ಕಾರಣ ಇರಲ್ಲ.+ 9  ದೇವರು ನಂಬಿಗಸ್ತನು,+ ಆತನು ತನ್ನ ಮಗನಾದ ನಮ್ಮ ಪ್ರಭು ಯೇಸು ಕ್ರಿಸ್ತನ ಜೊತೆ ಪಾಲುದಾರರಾಗೋಕೆ ನಿಮ್ಮನ್ನ ಕರೆದಿದ್ದಾನೆ. 10  ಸಹೋದರರೇ, ನಿಮ್ಮೆಲ್ಲರ ಮಾತು ಒಂದೇ ತರ ಇರಬೇಕು, ನಿಮ್ಮಲ್ಲಿ ಒಡಕು ಇರಬಾರದು,+ ನಿಮ್ಮೆಲ್ಲರ ಮನಸ್ಸು, ಯೋಚಿಸೋ ರೀತಿ ಒಂದೇ ತರ ಇದ್ದು ನೀವು ಸಂಪೂರ್ಣವಾಗಿ ಒಂದಾಗಿರಬೇಕು ಅಂತ ನಾನು ನಮ್ಮ ಪ್ರಭು ಯೇಸು ಕ್ರಿಸ್ತನ ಹೆಸ್ರಲ್ಲಿ ನಿಮ್ಮನ್ನ ಬೇಡ್ಕೊಳ್ತೀನಿ.+ 11  ಯಾಕಂದ್ರೆ ನನ್ನ ಸಹೋದರರೇ, ನಿಮ್ಮೊಳಗೆ ಜಗಳ ಇದೆ ಅಂತ ಖ್ಲೋಯೆಯ ಕುಟುಂಬದಲ್ಲಿ ಸ್ವಲ್ಪ ಜನ ನನಗೆ ಹೇಳಿದ್ದಾರೆ. 12  ನಿಮ್ಮಲ್ಲಿ ಕೆಲವರು “ನಾನು ಪೌಲನ ಶಿಷ್ಯ” ಅಂತ ಹೇಳಿದ್ರೆ, ಇನ್ನು ಕೆಲವರು “ನಾನು ಅಪೊಲ್ಲೋಸನ+ ಶಿಷ್ಯ,” “ನಾನು ಕೇಫನ* ಶಿಷ್ಯ,” “ನಾನು ಕ್ರಿಸ್ತನ ಶಿಷ್ಯ” ಅಂತ ಹೇಳ್ತಿದ್ದೀರ. 13  ಕ್ರಿಸ್ತನನ್ನ ನಿಮ್ಮ ಮಧ್ಯ ನೀವೇ ಭಾಗ ಮಾಡ್ಕೊಂಡು ಬಿಟ್ಟಿದ್ದೀರಾ? ನಿಮಗೋಸ್ಕರ ಮರದ ಕಂಬದಲ್ಲಿ ಸತ್ತಿದ್ದು ಪೌಲನಾ? ನೀವು ದೀಕ್ಷಾಸ್ನಾನ ಪಡ್ಕೊಂಡಿದ್ದು ಪೌಲನ ಹೆಸ್ರಲ್ಲಾ? 14  ಕ್ರಿಸ್ಪ+ ಮತ್ತು ಗಾಯನನ್ನ+ ಬಿಟ್ಟು ಇನ್ಯಾರಿಗೂ ನಾನು ದೀಕ್ಷಾಸ್ನಾನ ಮಾಡಿಸದೆ ಇರೋದಕ್ಕೆ ದೇವರಿಗೆ ಧನ್ಯವಾದ ಹೇಳ್ತೀನಿ. 15  ಹಾಗಾಗಿ ನನ್ನ ಹೆಸ್ರಲ್ಲಿ ದೀಕ್ಷಾಸ್ನಾನ ಪಡ್ಕೊಂಡ್ರಿ ಅಂತ ನೀವ್ಯಾರೂ ಹೇಳೋಕೆ ಆಗಲ್ಲ. 16  ಹಾಂ, ನಾನು ಸ್ತೆಫನನ+ ಮನೆಯವ್ರಿಗೂ ದೀಕ್ಷಾಸ್ನಾನ ಮಾಡಿಸ್ದೆ. ಇವ್ರನ್ನ ಬಿಟ್ಟು ಬೇರೆ ಯಾರಿಗೂ ದೀಕ್ಷಾಸ್ನಾನ ಮಾಡಿಸಿದ್ದು ನನಗೆ ನೆನಪಿಲ್ಲ. 17  ಯಾಕಂದ್ರೆ ಕ್ರಿಸ್ತ ನನ್ನನ್ನ ಕಳಿಸಿದ್ದು ದೀಕ್ಷಾಸ್ನಾನ ಮಾಡಿಸೋಕೆ ಅಲ್ಲ, ಸಿಹಿಸುದ್ದಿ ಸಾರೋಕೆ. ಆತನು ನನ್ನನ್ನ ಕಳಿಸಿದ್ದು+ ಮೇಧಾವಿಗಳ ತರ ಮಾತಾಡಿ* ಸಾರೋಕೆ ಅಲ್ಲ. ಹಾಗೆ ಸಾರಿದ್ರೆ ಕ್ರಿಸ್ತನು ಹಿಂಸಾ ಕಂಬದ* ಮೇಲೆ ಸತ್ತಿದ್ದು ವ್ಯರ್ಥ ಆಗ್ತಿತ್ತು ಅಲ್ವಾ? 18  ಯಾಕಂದ್ರೆ ಹಿಂಸಾ ಕಂಬದ* ಮೇಲೆ ಕ್ರಿಸ್ತನು ಸತ್ತ ವಿಷ್ಯ ನಾಶ ಆಗೋ ಜನ್ರಿಗೆ ಹುಚ್ಚು ಮಾತಾಗಿದೆ,+ ಆದ್ರೆ ರಕ್ಷಣೆ ಪಡಿತಿರೋ ನಮಗೆ ಅದು ದೇವರ ಶಕ್ತಿಯನ್ನ ತೋರಿಸುತ್ತೆ.+ 19  “ನಾನು ವಿವೇಕಿಗಳ ವಿವೇಕವನ್ನ ನಾಶಮಾಡ್ತೀನಿ, ಬುದ್ಧಿವಂತರ ಬುದ್ಧಿವಂತಿಕೆ ತಳ್ಳಿಹಾಕ್ತೀನಿ”+ ಅಂತ ಬರೆದಿದೆ ಅಲ್ವಾ. 20  ಈ ಲೋಕದಲ್ಲಿರೋ* ವಿವೇಕಿಗಳಿಗೆ, ಪಂಡಿತರಿಗೆ,* ವಾದ ಮಾಡುವವ್ರಿಗೆ ಏನಾಯ್ತು? ಈ ಲೋಕದ ವಿವೇಕ ಹುಚ್ಚುತನ ಅಂತ ದೇವರು ತೋರಿಸಿದ್ದಾನೆ ಅಲ್ವಾ. 21  ಈ ಲೋಕದ ಜನ್ರು ಅವ್ರ ವಿವೇಕದ+ ಮೇಲೆ ನಂಬಿಕೆ ಇಟ್ಟಿದ್ರಿಂದ ದೇವರನ್ನ ತಿಳ್ಕೊಳ್ಳಲಿಲ್ಲ.+ ನಾವು ಸಾರೋ ಸಂದೇಶವನ್ನ ಆ ಜನ್ರು ಅರ್ಥ ಇಲ್ಲದ ಮಾತು ಅಂತ ಹೇಳ್ತಾರೆ.+ ಆದ್ರೆ ಆ ಸಂದೇಶದಿಂದಾನೇ ದೇವರು ನಂಬುವಂಥ ಜನ್ರನ್ನ ರಕ್ಷಿಸೋಕೆ ಇಷ್ಟಪಟ್ಟನು. ಹೀಗೆ ದೇವರು ತನ್ನ ವಿವೇಕವನ್ನ ತೋರಿಸಿದನು. 22  ಯೆಹೂದ್ಯರು ಅದ್ಭುತಗಳನ್ನ+ ಕೇಳ್ತಾರೆ, ಗ್ರೀಕರು ವಿವೇಕವನ್ನ ಹುಡುಕ್ತಾರೆ. 23  ಆದ್ರೆ ನಾವು ಕ್ರಿಸ್ತನು ಮರದ ಕಂಬದ ಮೇಲೆ ಸತ್ತ ಅಂತ ಸಾರ್ತಿವಿ. ಇದು ಯೆಹೂದ್ಯರಿಗೆ ಜೀರ್ಣ ಮಾಡ್ಕೊಳ್ಳೋಕೆ ಆಗದ ವಿಷ್ಯ, ಬೇರೆ ಜನ್ರಿಗೆ ಇದು ಹುಚ್ಚುಮಾತು.+ 24  ಹಾಗಿದ್ರೂ ದೇವರು ಕರೆದಿರೋ ಯೆಹೂದ್ಯರಿಗೂ ಗ್ರೀಕರಿಗೂ ಕ್ರಿಸ್ತನೇ ದೇವರ ಅದ್ಭುತ ಮತ್ತು ವಿವೇಕ ಆಗಿದ್ದಾನೆ.+ 25  ದೇವರ ಯಾವ ಮಾತುಗಳನ್ನ ಜನ್ರು ಹುಚ್ಚುತನ ಅಂದ್ಕೊಳ್ತಾರೋ ಅದು ಮನುಷ್ಯರ ಬುದ್ಧಿಗಿಂತ ದೊಡ್ಡದು. ದೇವರ ಯಾವ ಮಾತುಗಳಿಗೆ ಜನ್ರು ಶಕ್ತಿ ಇಲ್ಲ ಅಂದ್ಕೊಳ್ತಾರೋ ಅದು ಮನುಷ್ಯರ ಶಕ್ತಿಗಿಂತ ದೊಡ್ಡದು.+ 26  ಸಹೋದರರೇ, ದೇವರು ನಿಮ್ಮನ್ನ ಕರೆದಾಗ ನೀವು ಎಂಥವರಾಗಿದ್ರಿ ಅಂತ ಗೊತ್ತಲ್ವಾ? ನಿಮ್ಮಲ್ಲಿ ತುಂಬ ಜನ ಮನುಷ್ಯರ ದೃಷ್ಟಿಯಲ್ಲಿ ಬುದ್ಧಿ ಇಲ್ಲದೆ ಇರುವವರು,+ ಶಕ್ತಿ ಇಲ್ಲದವರು, ಬಡ* ಕುಟುಂಬದಲ್ಲಿ ಹುಟ್ಟಿದವರು ಆಗಿದ್ರಿ.+ 27  ದೇವರು ವಿವೇಕಿಗಳಿಗೆ ನಾಚಿಕೆ ಆಗೋ ತರ ಈ ಲೋಕದ ದೃಷ್ಟಿಯಲ್ಲಿ ಬುದ್ಧಿ ಇಲ್ಲದವ್ರನ್ನ ಆರಿಸ್ಕೊಂಡನು. ದೇವರು ಶಕ್ತಿಶಾಲಿಗಳಿಗೆ ನಾಚಿಕೆ ಆಗೋ ತರ ಈ ಲೋಕದ ದೃಷ್ಟಿಯಲ್ಲಿ ಶಕ್ತಿ ಇಲ್ಲದವ್ರನ್ನ ಆರಿಸ್ಕೊಂಡನು.+ 28  ಹೆಸ್ರು ಮಾಡಿದ ಜನ್ರಿಗೆ ನಾಚಿಕೆ ಆಗೋ ತರ ಮಾಡೋಕೆ ದೇವರು ಈ ಲೋಕದ ದೃಷ್ಟಿಯಲ್ಲಿ ಕೀಳಾದ, ಲೆಕ್ಕಕ್ಕೆ ಬಾರದ, ಏನೂ ಅಲ್ಲದ ಜನ್ರನ್ನ ಆರಿಸ್ಕೊಂಡನು.+ 29  ಯಾರಿಗೂ ತನ್ನ ಮುಂದೆ ಕೊಚ್ಕೊಳ್ಳೋಕೆ ಆಗಬಾರದು ಅಂತ ದೇವರು ಹೀಗೆ ಮಾಡಿದನು. 30  ನೀವು ಆತನಿಂದಾನೇ ಕ್ರಿಸ್ತ ಯೇಸು ಜೊತೆ ಒಂದಾಗಿದ್ದೀರ. ದೇವರ ವಿವೇಕ ಮತ್ತು ನೀತಿಯನ್ನ+ ಕ್ರಿಸ್ತ ನಮಗೆ ತೋರಿಸ್ಕೊಡ್ತಾನೆ. ಆತನಿಂದ ನಾವು ಪವಿತ್ರರಾಗೋಕೆ+ ಮತ್ತು ಆತನು ಕೊಟ್ಟ ಬಿಡುಗಡೆ ಬೆಲೆಯ ಮೂಲಕ ರಕ್ಷಣೆ ಪಡಿಯೋಕೆ ಆಗುತ್ತೆ.+ 31  ಹಾಗಾಗಿ ವಚನ ಹೇಳೋ ಹಾಗೆ “ಹೆಮ್ಮೆಪಡುವವನು ಯೆಹೋವನ* ಬಗ್ಗೆ ಹೆಮ್ಮೆಪಡ್ಲಿ.”+

ಪಾದಟಿಪ್ಪಣಿ

ಅಕ್ಷ. “ಹೆಸ್ರನ್ನ ಕರಿಯುವವ್ರಿಗೆ.”
ಅಕ್ಷ. “ವರದಲ್ಲೂ.”
ಇನ್ನೊಂದು ಹೆಸ್ರು ಪೇತ್ರ.
ಅಥವಾ “ಮಾತಿನ ಚಾತುರ್ಯದಿಂದ.”
ಪದವಿವರಣೆಯಲ್ಲಿ “ಲೋಕದ ವ್ಯವಸ್ಥೆ” ನೋಡಿ.
ಅಂದ್ರೆ, ನಿಯಮ ಪುಸ್ತಕದಲ್ಲಿ ಪರಿಣತರು.
ಅಥವಾ “ಗಣ್ಯರಲ್ಲದ.”