ವಿಮೋಚನಕಾಂಡ 18:1-27

  • ಇತ್ರೋ ಮತ್ತು ಚಿಪ್ಪೋರ ಬಂದ್ರು (1-12)

  • ನ್ಯಾಯತೀರಿಸೋ ಬಗ್ಗೆ ಇತ್ರೋನ ಸಲಹೆ (13-27)

18  ಯೆಹೋವ ಮೋಶೆಗಾಗಿ, ಇಸ್ರಾಯೇಲ್ಯರಿಗಾಗಿ ಮಾಡಿದ್ದನ್ನೆಲ್ಲ ಅಂದ್ರೆ ಈಜಿಪ್ಟಿಂದ ಇಸ್ರಾಯೇಲ್ಯರನ್ನ ಹೇಗೆ ಬಿಡಿಸ್ಕೊಂಡು ಬಂದನು ಅನ್ನೋದನ್ನ ಮಿದ್ಯಾನಿನ ಪುರೋಹಿತನಾಗಿದ್ದ ಮೋಶೆಯ ಮಾವ+ ಇತ್ರೋ ಕೇಳಿಸ್ಕೊಂಡ.+ 2  ಮೋಶೆ ತನ್ನ ಹೆಂಡತಿ ಚಿಪ್ಪೋರಳನ್ನ ಇತ್ರೋ ಮನೆಗೆ ಕಳಿಸಿದ್ದ. ಮೋಶೆ ಮಾವ ಇತ್ರೋ ಅವಳನ್ನ, 3  ಅವಳ ಇಬ್ರು ಗಂಡುಮಕ್ಕಳನ್ನ+ ನೋಡ್ಕೊಳ್ತಿದ್ದ. ಮೋಶೆ “ನಾನು ಇಲ್ಲಿ ವಿದೇಶಿಯಾಗಿ ವಾಸಿಸ್ತಾ ಇದ್ದೀನಿ” ಅಂತ ಹೇಳಿ ತನ್ನ ಮಗನಿಗೆ ಗೇರ್ಷೋಮ್‌*+ ಅಂತ ಹೆಸರಿಟ್ಟಿದ್ದ. 4  “ನನ್ನ ತಂದೆಯ ದೇವರು ನಂಗೆ ಸಹಾಯಕನಾಗಿ ನನ್ನನ್ನ ಫರೋಹನ ಕತ್ತಿಯಿಂದ ತಪ್ಪಿಸಿ ಕಾಪಾಡಿದನು”+ ಅಂತ ಹೇಳಿ ಇನ್ನೊಬ್ಬ ಮಗನಿಗೆ ಎಲೀಯೆಜರ್‌* ಅಂತ ಹೆಸರಿಟ್ಟಿದ್ದ. 5  ಮೋಶೆಯ ಹೆಂಡತಿಮಕ್ಕಳನ್ನ ಕರ್ಕೊಂಡು ಅವನಿದ್ದ ಕಾಡಿಗೆ ಇತ್ರೋ ಬಂದ. ಮೋಶೆ ಅಲ್ಲಿ ಸತ್ಯದೇವರ ಬೆಟ್ಟದ ಹತ್ರ ಡೇರೆ ಹಾಕೊಂಡಿದ್ದ.+ 6  “ನಾನು ನಿನ್ನ ಮಾವ ಇತ್ರೋ ನಿನ್ನ ಹತ್ರ ಬರ್ತಾ ಇದ್ದೀನಿ.+ ನಿನ್ನ ಹೆಂಡತಿ, ಮಕ್ಕಳನ್ನ ಕರ್ಕೊಂಡು ಬರ್ತಾ ಇದ್ದೀನಿ” ಅಂತ ಇತ್ರೋ ಸುದ್ದಿ ಕಳಿಸಿದ. 7  ಸುದ್ದಿ ಸಿಕ್ಕಿದ ತಕ್ಷಣ ಮೋಶೆ ಮಾವನನ್ನ ನೋಡೋಕೆ ಹೋದ. ಅವನನ್ನ ನೋಡಿ ಬಗ್ಗಿ ನಮಸ್ಕಾರ ಮಾಡಿ ಮುತ್ತು ಕೊಟ್ಟ. ಅವರೆಲ್ಲ ಒಬ್ರಿಗೊಬ್ರು ಹೇಗಿದ್ದೀರ ಅಂತ ವಿಚಾರಿಸ್ಕೊಂಡು ಡೇರೆ ಒಳಗೆ ಹೋದ್ರು. 8  ಯೆಹೋವ ಇಸ್ರಾಯೇಲ್ಯರಿಗೋಸ್ಕರ ಫರೋಹನಿಗೂ ಈಜಿಪ್ಟಿಗೂ ಏನೆಲ್ಲ ಮಾಡಿದ ಅಂತ ಮೋಶೆ ಮಾವನಿಗೆ ಹೇಳಿದ.+ ಅಷ್ಟೇ ಅಲ್ಲ ಪ್ರಯಾಣ ಮಾಡ್ತಾ ಇದ್ದಾಗ ಅವರಿಗೆ ಏನೆಲ್ಲ ಕಷ್ಟ ಬಂತು,+ ಯೆಹೋವ ಆ ಕಷ್ಟಗಳಿಂದ ಹೇಗೆಲ್ಲ ಬಿಡಿಸಿದನು ಅಂತಾನೂ ಹೇಳಿದ. 9  ಯೆಹೋವ ಇಸ್ರಾಯೇಲ್ಯರನ್ನ ಈಜಿಪ್ಟಿಂದ ಬಿಡಿಸಿ ಅವರಿಗಾಗಿ ಮಾಡಿದ ಎಲ್ಲ ಒಳ್ಳೇ ವಿಷ್ಯಗಳನ್ನ ಕೇಳಿಸ್ಕೊಂಡಾಗ ಇತ್ರೋಗೆ ತುಂಬ ಖುಷಿ ಆಯ್ತು. 10  ಆಗ ಅವನು “ಈಜಿಪ್ಟಿನ ಕೈಯಿಂದ ಫರೋಹನ ಕೈಯಿಂದ ನಿಮ್ಮನ್ನ ಬಿಡಿಸಿದ, ಈಜಿಪ್ಟಿನ ಅಧಿಕಾರದ ಕೆಳಗಿಂದ ಇಸ್ರಾಯೇಲ್ಯರನ್ನ ಬಿಡಿಸಿ ಕಾಪಾಡಿದ ಯೆಹೋವನನ್ನ ಹೊಗಳಿ. 11  ತನ್ನ ಜನ್ರ ಜೊತೆ ದುರಹಂಕಾರದಿಂದ ನಡ್ಕೊಂಡವರಿಗೆ ಯೆಹೋವ ತನ್ನ ಶಕ್ತಿ ತೋರಿಸಿದ್ದಾನೆ. ಇದ್ರಿಂದ ಆತನೇ ಬೇರೆಲ್ಲ ದೇವರಿಗಿಂತ ಮಹೋನ್ನತ ದೇವರು+ ಅಂತ ನಂಗೀಗ ಗೊತ್ತಾಯ್ತು” ಅಂದ. 12  ಆಮೇಲೆ ಇತ್ರೋ ದೇವರಿಗೆ ಸರ್ವಾಂಗಹೋಮ ಬಲಿ ಮತ್ತು ಬೇರೆ ಬಲಿಗಳನ್ನ ಅರ್ಪಿಸೋಕೆ ಪ್ರಾಣಿಗಳನ್ನ ತಂದ. ಆರೋನ ಮತ್ತು ಇಸ್ರಾಯೇಲ್ಯರ ಎಲ್ಲ ಹಿರಿಯರು ಮೋಶೆ ಮಾವನ ಜೊತೆ ಸತ್ಯದೇವರ ಮುಂದೆ ಊಟ ಮಾಡೋಕೆ ಬಂದ್ರು. 13  ಮಾರನೇ ದಿನ ಮೋಶೆ ದಿನಾಲೂ ಮಾಡೋ ತರ ಜನ್ರಿಗೆ ನ್ಯಾಯತೀರಿಸೋಕೆ ಕೂತ. ಜನ ಬೆಳಿಗ್ಗೆಯಿಂದ ಸಂಜೆ ತನಕ ಮೋಶೆ ಮುಂದೆ ಬಂದು ನಿಲ್ತಿದ್ರು. 14  ಜನರಿಗಾಗಿ ಮೋಶೆ ಮಾಡ್ತಿದ್ದ ಎಲ್ಲವನ್ನ ಅವನ ಮಾವ ನೋಡಿ “ಹೀಗೆ ಯಾಕೆ ಮಾಡ್ತಾ ಇದ್ದೀಯ? ಬೆಳಿಗ್ಗೆಯಿಂದ ಸಂಜೆ ತನಕ ಜನ ಬಂದು ನಿನ್ನ ಮುಂದೆ ನಿಲ್ತಾರಲ್ಲ. ಒಬ್ಬನೇ ಯಾಕೆ ಇದನ್ನೆಲ್ಲ ಮಾಡ್ತಾ ಇದ್ದೀಯಾ?” ಅಂತ ಕೇಳಿದ. 15  ಅದಕ್ಕೆ ಮೋಶೆ “ಯಾಕಂದ್ರೆ ಜನ್ರು ದೇವರ ಮಾರ್ಗದರ್ಶನ ಕೇಳಿ ತಿಳ್ಕೊಳ್ಳೋಕೆ ನನ್ನ ಹತ್ರ ಬರ್ತಾರೆ. 16  ಏನಾದ್ರೂ ಜಗಳ ಆದ್ರೆ ನನ್ನ ಹತ್ರ ಬರ್ತಾರೆ. ಯಾರು ಸರಿ ಅಂತ ನಾನು ವಿಚಾರಣೆ ಮಾಡಿ ತೀರ್ಪು ಕೊಡ್ತೀನಿ. ಅಷ್ಟೇ ಅಲ್ಲ ಅದ್ರ ಬಗ್ಗೆ ಸತ್ಯದೇವರು ಏನು ಹೇಳ್ತಾನೆ, ಆತನ ನಿಯಮಗಳೇನು ಅಂತ ಹೇಳ್ತೀನಿ”+ ಅಂದ. 17  ಆಗ ಇತ್ರೋ ಹೀಗಂದ: “ನೀನು ಇದನ್ನ ಮಾಡ್ತಿರೋ ವಿಧಾನ ಸರಿ ಇಲ್ಲ. 18  ಇದು ತುಂಬ ದೊಡ್ಡ ಜವಾಬ್ದಾರಿ. ಇದನ್ನ ನೀನೊಬ್ಬನೇ ಮಾಡೋಕೆ ಆಗಲ್ಲ. ಹೀಗೇ ಮಾಡ್ತಿದ್ರೆ ನೀನೂ ಈ ಜನರೂ ಸುಸ್ತಾಗಿ ಹೋಗ್ತೀರ. 19  ನಾನು ಹೇಳಿದ ತರ ಮಾಡು. ದೇವರು ನಿನ್ನ ಜೊತೆ ಇರ್ತಾನೆ.+ ನೀನು ಜನ್ರ ಪ್ರತಿನಿಧಿಯಾಗಿ ಸತ್ಯದೇವರ ಹತ್ರ ಮಾತಾಡು,+ ಅವರು ಮಾಡೋ ಜಗಳದ ಬಗ್ಗೆ ಹೇಳು.+ 20  ಸತ್ಯದೇವರ ಆಜ್ಞೆಗಳು, ನಿಯಮಗಳು ಏನಂತ+ ಜನ್ರಿಗೆ ಹೇಳಿ ಅವರನ್ನ ಎಚ್ಚರಿಸು. ಅವರು ಹೇಗೆ ನಡ್ಕೊಬೇಕು, ಏನು ಕೆಲಸ ಮಾಡ್ಬೇಕು ಅನ್ನೋದನ್ನ ಅರ್ಥಮಾಡಿಸು. 21  ಅಷ್ಟೇ ಅಲ್ಲ ನೀನು ಜನ್ರಿಂದ ಯೋಗ್ಯ ಪುರುಷರನ್ನ+ ಆರಿಸ್ಕೊ. ಅವರಿಗೆ ದೇವರ ಮೇಲೆ ಭಯ ಇರಬೇಕು, ಅವರ ಮೇಲೆ ಜನರಿಗೆ ನಂಬಿಕೆ ಇರಬೇಕು, ಅವರಿಗೆ ದುರಾಸೆ ಇರಬಾರದು.+ ಅವರನ್ನ 1,000 ಜನ್ರ ಮೇಲೆ, 100 ಜನ್ರ ಮೇಲೆ, 50 ಜನ್ರ ಮೇಲೆ, 10 ಜನ್ರ ಮೇಲೆ ಮುಖ್ಯಸ್ಥರಾಗಿ ನೇಮಿಸು.+ 22  ಜನ್ರ ಮಧ್ಯ ಜಗಳ ನಡೆದಾಗ ಆ ಮುಖ್ಯಸ್ಥರು ತೀರ್ಪು ಕೊಡ್ಲಿ. ಅವರಿಗೆ ಕಷ್ಟ ಆದ್ರೆ ನಿನ್ನ ಹತ್ರ ಬರಲಿ.+ ಚಿಕ್ಕ ಚಿಕ್ಕ ಜಗಳ ಆದ್ರೆ ಅವರೇ ವಿಚಾರಿಸಿ ತೀರ್ಮಾನ ಮಾಡ್ಲಿ. ಹೀಗೆ ನಿನ್ನ ಕೆಲಸನ ಅವರ ಜೊತೆ ಹಂಚ್ಕೊಂಡ್ರೆ ನಿನಗೆ ಸುಲಭ ಆಗುತ್ತೆ.+ 23  ಹೀಗೆ ಮಾಡೋಕೆ ದೇವರು ಒಪ್ಪಿಗೆ ಕೊಟ್ರೆ ಮಾಡು. ಆಗ ನಿನಗೆ ಸುಸ್ತಾಗಲ್ಲ. ಜನ್ರೆಲ್ಲ ನೆಮ್ಮದಿಯಿಂದ ಮನೆಗೆ ಹೋಗ್ತಾರೆ.” 24  ಮೋಶೆ ತಕ್ಷಣ ಮಾವನ ಮಾತಿಗೆ ಒಪ್ಪಿ ಹೇಳಿದ್ದೆಲ್ಲ ಮಾಡಿದ. 25  ಮೋಶೆ ಎಲ್ಲ ಇಸ್ರಾಯೇಲ್ಯರಲ್ಲಿ ಯೋಗ್ಯರಾಗಿದ್ದ ಪುರುಷರನ್ನ ಆರಿಸ್ಕೊಂಡ. ಅವರನ್ನ 1,000 ಜನ್ರ ಮೇಲೆ, 100 ಜನ್ರ ಮೇಲೆ, 50 ಜನ್ರ ಮೇಲೆ, 10 ಜನ್ರ ಮೇಲೆ ಮುಖ್ಯಸ್ಥರಾಗಿ ನೇಮಿಸಿದ. 26  ಜನ್ರ ಮಧ್ಯ ಏನಾದ್ರೂ ಜಗಳ ಆದಾಗ ಆ ಮುಖ್ಯಸ್ಥರೇ ತೀರ್ಪು ಕೊಟ್ರು. ಕಷ್ಟ ಆದ್ರೆ ಮೋಶೆ ಹತ್ರ ಬರ್ತಿದ್ರು.+ ಚಿಕ್ಕ ಚಿಕ್ಕ ಜಗಳಗಳನ್ನ ಅವರೇ ವಿಚಾರಿಸಿ ತೀರ್ಮಾನ ತಗೊಳ್ತಾ ಇದ್ರು. 27  ಆಮೇಲೆ ಮೋಶೆ ತನ್ನ ಮಾವನನ್ನ ಕಳಿಸ್ಕೊಟ್ಟ.+ ಇತ್ರೋ ತನ್ನ ದೇಶಕ್ಕೆ ಹೋದ.

ಪಾದಟಿಪ್ಪಣಿ

ಅರ್ಥ “ವಿದೇಶಿಯಾಗಿ ವಾಸ ಮಾಡೋನು.”
ಅರ್ಥ “ದೇವರೇ ನನ್ನ ಸಹಾಯಕ.”