ಲೂಕ 7:1-50

  • ಸೇನಾಧಿಕಾರಿಯ ನಂಬಿಕೆ (1-10)

  • ನಾಯಿನ್‌ ಊರಿನ ವಿಧವೆಯ ಮಗನಿಗೆ ಯೇಸು ಮತ್ತೆ ಜೀವ ಕೊಟ್ಟನು (11-17)

  • ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನನನ್ನ ಯೇಸು ಹೊಗಳಿದನು (18-30)

  • ಗಮನ ಕೊಡದೇ ಇರೋ ಪೀಳಿಗೆಗೆ ಬೈದನು (31-35)

  • ಪಾಪ ಮಾಡಿದ ಸ್ತ್ರೀಯನ್ನ ಕ್ಷಮಿಸಿದನು (36-50)

    • ಸಾಲ ತಗೊಂಡವರ ಉದಾಹರಣೆ (41-43)

7  ಜನ್ರಿಗೆ ಈ ವಿಷ್ಯಗಳನ್ನ ಹೇಳಿದ ಮೇಲೆ ಯೇಸು ಕಪೆರ್ನೌಮಿಗೆ ಹೋದನು. 2  ಅಲ್ಲಿ ಸೇನಾಧಿಕಾರಿಗೆ ಇಷ್ಟವಾಗಿದ್ದ ಒಬ್ಬ ಸೇವಕ ಹುಷಾರಿಲ್ಲದೆ ಸಾವುಬದುಕಿನ ಮಧ್ಯ ಹೋರಾಡ್ತಾ ಇದ್ದ.+ 3  ಆ ಸೇನಾಧಿಕಾರಿ ಯೇಸು ಬಗ್ಗೆ ಕೇಳಿಸ್ಕೊಂಡಾಗ ತನ್ನ ಸೇವಕನನ್ನ ವಾಸಿಮಾಡು ಅಂತ ಬೇಡ್ಕೊಳ್ಳೋಕೆ ಯೆಹೂದ್ಯರ ಹಿರಿಯರಲ್ಲಿ ಕೆಲವ್ರನ್ನ ಕಳಿಸಿದ. 4  ಅವರು ಯೇಸು ಹತ್ರ ಬಂದು “ದಯವಿಟ್ಟು ಆ ಸೇನಾಧಿಕಾರಿಗೆ ಸಹಾಯ ಮಾಡು. ಅವನು ತುಂಬ ಒಳ್ಳೆಯವನು. 5  ಯಾಕಂದ್ರೆ ಯೆಹೂದ್ಯರಂದ್ರೆ ಅವನಿಗೆ ಪಂಚಪ್ರಾಣ. ಅವನೇ ಸಭಾಮಂದಿರ ಕಟ್ಟಿಸಿದ್ದು” ಅಂತ ಹೇಳಿ ತುಂಬ ಬೇಡ್ಕೊಂಡ್ರು. 6  ಯೇಸು ಅವ್ರ ಜೊತೆ ಹೋದನು. ಆದ್ರೆ ಅವರು ಆ ಮನೆಗೆ ಹತ್ರ ಇದ್ದಾಗ ಆ ಸೇನಾಧಿಕಾರಿ ತನ್ನ ಸ್ನೇಹಿತರನ್ನ ಕಳಿಸಿ “ಯಜಮಾನ, ನನ್ನ ಸಲುವಾಗಿ ತೊಂದ್ರೆ ತಗೊಬೇಡ. ನೀನು ನನ್ನ ಮನೆಗೆ ಬರುವಷ್ಟು ಯೋಗ್ಯ ನಾನಲ್ಲ.+ 7  ಅದಕ್ಕೇ ನಾನು ನಿನ್ನ ಹತ್ರ ಬರಲಿಲ್ಲ. ನನಗೆ ಆ ಅರ್ಹತೆ ಇಲ್ಲ. ನೀನು ಒಂದು ಮಾತು ಹೇಳಿದ್ರೆ ಸಾಕು ನನ್ನ ಸೇವಕ ವಾಸಿ ಆಗ್ತಾನೆ. 8  ನಾನು ಸಹ ಅಧಿಕಾರಿಯ ಕೆಳಗಿರುವವನೇ. ನನ್ನ ಕೆಳಗೂ ಸೈನಿಕರಿದ್ದಾರೆ. ನಾನು ‘ಹೋಗು’ ಅಂದ್ರೆ ಹೋಗ್ತಾರೆ. ‘ಬಾ’ ಅಂದ್ರೆ ಬರ್ತಾರೆ. ನನ್ನ ಸೇವಕನಿಗೆ ‘ಇದನ್ನ ಮಾಡು’ ಅಂದ್ರೆ ಮಾಡ್ತಾರೆ” ಅಂದ. 9  ಇದನ್ನ ಕೇಳಿ ಯೇಸುಗೆ ತುಂಬ ಆಶ್ಚರ್ಯ ಆಯ್ತು. ತನ್ನ ಹಿಂದೆ ಬರ್ತಿದ್ದ ಜನ್ರ ಕಡೆ ತಿರುಗಿ “ನಿಜ ಹೇಳ್ತೀನಿ, ಇಸ್ರಾಯೇಲಲ್ಲಿ ಇಷ್ಟು ನಂಬಿಕೆ ಇರೋರನ್ನ ನಾನು ನೋಡೇ ಇಲ್ಲ”+ ಅಂದನು. 10  ಹಿರಿಯರು ಮನೆಗೆ ಹೋಗಿ ನೋಡಿದಾಗ ಆ ಸೇವಕ ಹುಷಾರಾಗಿದ್ದ.+ 11  ಆಮೇಲೆ ಯೇಸು ನಾಯಿನ್‌ ಅನ್ನೋ ಊರಿಗೆ ಹೋದನು. ಶಿಷ್ಯರು ಮತ್ತು ತುಂಬ ಜನ್ರೂ ಅಲ್ಲಿಗೆ ಹೋದ್ರು. 12  ಆತನು ಆ ಊರಿನ ಬಾಗಿಲ ಹತ್ರ ಬಂದಾಗ ಸತ್ತುಹೋಗಿದ್ದ ಒಬ್ಬನನ್ನ ಜನ ಹೊತ್ಕೊಂಡು ಹೋಗ್ತಿದ್ರು. ಅವನು ತಾಯಿಗೆ ಒಬ್ಬನೇ ಮಗನಾಗಿದ್ದ.*+ ಅವಳು ವಿಧವೆ ಆಗಿದ್ದಳು. ಅವಳ ಜೊತೆ ಊರಿನ ತುಂಬ ಜನ ಇದ್ರು. 13  ಅವಳನ್ನ ನೋಡಿ ಒಡೆಯನ ಮನಸ್ಸು ಕರಗಿ ಹೋಯ್ತು.+ ಆತನು ಆ ಸ್ತ್ರೀಗೆ “ಅಳಬೇಡ”+ ಅಂದನು. 14  ಚಟ್ಟದ ಹತ್ರ ಹೋಗಿ ಅದನ್ನ ಮುಟ್ಟಿದನು. ಶವ ಹೊರುತ್ತಿದ್ದವರು ನಿಂತ್ರು. ಆಗ ಯೇಸು “ಯುವಕನೇ, ಎದ್ದೇಳು ಅಂತ ನಿನಗೆ ಅಪ್ಪಣೆ ಕೊಡ್ತಾ ಇದ್ದೀನಿ!”+ ಅಂದನು. 15  ಸತ್ತಿದ್ದವನು ಎದ್ದು ಕೂತು ಮಾತಾಡೋಕೆ ಶುರುಮಾಡಿದ. ಯೇಸು ಅವನನ್ನ ತಾಯಿಗೆ ಒಪ್ಪಿಸಿದನು.+ 16  ಎಲ್ರಿಗೂ ತುಂಬ ಭಯ ಆಯ್ತು. ಅವರು “ಒಬ್ಬ ದೊಡ್ಡ ಪ್ರವಾದಿ ನಮ್ಮ ಹತ್ರ ಬಂದಿದ್ದಾನೆ,”+ “ದೇವರು ತನ್ನ ಜನ್ರನ್ನ ನೆನಪಿಸ್ಕೊಳ್ತಿದ್ದಾನೆ”+ ಅಂತ ದೇವರನ್ನ ಹೊಗಳಿದ್ರು. 17  ಯೇಸು ಬಗ್ಗೆ ಈ ಸುದ್ದಿ ಯೂದಾಯದಲ್ಲಿ ಮತ್ತು ಸುತ್ತಮುತ್ತ ಎಲ್ಲ ಪ್ರದೇಶಗಳಲ್ಲಿ ಹಬ್ಬಿತು. 18  ಯೋಹಾನನ ಶಿಷ್ಯರು ಈ ವಿಷ್ಯಗಳನ್ನ ಯೋಹಾನನಿಗೆ ಹೇಳಿದ್ರು.+ 19  ಅವನು ಇಬ್ಬರು ಶಿಷ್ಯರನ್ನ ಕರೆದು “ನಮಗೆ ಸಹಾಯ ಮಾಡೋಕೆ ದೇವರು ಒಬ್ಬನನ್ನ ಕಳಿಸ್ತೀನಿ ಅಂತ ಹೇಳಿದ್ನಲ್ಲಾ ಅದು ನೀನೇನಾ?+ ಅಥವಾ ಇನ್ನೊಬ್ಬನು ಬರ್ತಾನಾ?” ಅಂತ ಕೇಳೋಕೆ ಅವ್ರನ್ನ ಒಡೆಯನ ಹತ್ರ ಕಳಿಸಿದ. 20  ಅವರು ಯೇಸು ಹತ್ರ ಬಂದು “‘ನಮಗೆ ಸಹಾಯ ಮಾಡೋಕೆ ದೇವರು ಒಬ್ಬನನ್ನ ಕಳಿಸ್ತೀನಿ ಅಂತ ಹೇಳಿದ್ನಲ್ಲಾ ಅದು ನೀನೇನಾ? ಅಥವಾ ಇನ್ನೊಬ್ಬನು ಬರ್ತಾನಾ?’ ಅಂತ ಯೋಹಾನ ಕೇಳಿದ” ಅಂದ್ರು. 21  ಆ ಸಮಯದಲ್ಲಿ ನಾನಾ ರೋಗಗಳಿಂದ ಕಷ್ಟಪಡ್ತಿದ್ದ ಜನ್ರನ್ನ,+ ಕೆಟ್ಟ ದೇವದೂತರು ಹಿಡಿದಿದ್ದ ಜನ್ರನ್ನ ಯೇಸು ವಾಸಿಮಾಡಿದನು. ತುಂಬ ಕುರುಡರಿಗೆ ಕಣ್ಣು ಕಾಣಿಸೋ ತರ ಮಾಡಿದನು. 22  ಹಾಗಾಗಿ ಯೇಸು ಆ ಇಬ್ರು ಶಿಷ್ಯರಿಗೆ “ನೀವು ಇಲ್ಲಿ ನೋಡಿದ್ದನ್ನ ಕೇಳಿದ್ದನ್ನ ಹೋಗಿ ಯೋಹಾನನಿಗೆ ಹೇಳಿ. ಕುರುಡರಿಗೆ ಈಗ ಕಣ್ಣು ಕಾಣ್ತಿದೆ,+ ಕುಂಟರು ನಡಿತಿದ್ದಾರೆ, ಕುಷ್ಠರೋಗಿಗಳು ವಾಸಿ ಆಗ್ತಿದ್ದಾರೆ, ಕಿವುಡರಿಗೆ ಕಿವಿ ಕೇಳಿಸ್ತಿದೆ,+ ಸತ್ತವರಿಗೆ ಮತ್ತೆ ಜೀವ ಬಂದಿದೆ, ಬಡವರು ಸಿಹಿಸುದ್ದಿ ಕೇಳಿಸ್ಕೊಳ್ತಿದ್ದಾರೆ.+ 23  ಸಂಶಯನೇ ಇಲ್ಲದೆ ನನ್ನ ಮೇಲೆ ನಂಬಿಕೆ ಇಡುವವನು ಸಂತೋಷವಾಗಿ ಇರ್ತಾನೆ” ಅಂದನು.+ 24  ಯೋಹಾನನ ಶಿಷ್ಯರು ಹೋದ ಮೇಲೆ ಯೇಸು ಅಲ್ಲಿದ್ದ ಜನ್ರಿಗೆ ಯೋಹಾನನ ಬಗ್ಗೆ ಹೀಗಂದನು “ನೀವು ಯಾರನ್ನ ನೋಡಬೇಕಂತ ಕಾಡಿಗೆ ಹೋದ್ರಿ? ಗಾಳಿಗೆ ಅಲ್ಲಾಡೋ ಗಿಡದ ತರ ಇದ್ದ ವ್ಯಕ್ತಿನಾ?+ 25  ಇಲ್ಲ ಅಂದಮೇಲೆ ಬೇರೆ ಯಾರನ್ನ ನೋಡೋಕೆ ಹೋದ್ರಿ? ದುಬಾರಿ ಬಟ್ಟೆ ಹಾಕೊಂಡವನನ್ನ ನೋಡೋಕೆ ಹೋಗಿದ್ರಾ?+ ಇಲ್ಲ. ಅಂಥ ದುಬಾರಿ ಬಟ್ಟೆ ಹಾಕೊಂಡವರು, ಐಶಾರಾಮಿ ಜೀವನ ಮಾಡೋರು ಅರಮನೆಯಲ್ಲಿ ಇರ್ತಾರೆ. 26  ಹಾಗಾದ್ರೆ ಯೋಹಾನ ಯಾರು? ಪ್ರವಾದಿನಾ? ಹೌದು ಪ್ರವಾದಿನೇ. ನಾನು ಹೇಳ್ತೀನಿ ಅವನು ಪ್ರವಾದಿಗಿಂತ ದೊಡ್ಡವನು.+ 27  ಪವಿತ್ರ ಗ್ರಂಥದಲ್ಲಿ ‘ನೋಡು! ನಾನು ನಿನಗಿಂತ ಮುಂಚೆ ಒಬ್ಬ ಸಂದೇಶವಾಹಕನನ್ನ ಕಳಿಸ್ತಿದ್ದೀನಿ. ಅವನು ನಿನ್ನ ದಾರಿ ಸಿದ್ಧಮಾಡ್ತಾನೆ’ ಅಂತ ಬರೆದಿತ್ತು. ಅದು ಇವನ ಬಗ್ಗೆನೇ.+ 28  ನಾನು ನಿಮಗೆ ಹೇಳ್ತೀನಿ, ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನನಿಗಿಂತ ದೊಡ್ಡವನು ಇಲ್ಲಿ ತನಕ ಯಾರೂ ಹುಟ್ಟಿಲ್ಲ. ಆದ್ರೆ ಸ್ವರ್ಗದ ಆಳ್ವಿಕೆಯಲ್ಲಿ ಇರೋ ಚಿಕ್ಕವನು ಸಹ ಯೋಹಾನನಿಗಿಂತ ದೊಡ್ಡವನು.”+ 29  (ಯೋಹಾನನಿಂದ ದೀಕ್ಷಾಸ್ನಾನ ಮಾಡಿಸ್ಕೊಂಡಿದ್ದ ಎಲ್ಲ ಜನ್ರು ಮತ್ತು ತೆರಿಗೆ ವಸೂಲಿಗಾರರು ಇದನ್ನ ಕೇಳಿಸ್ಕೊಂಡಾಗ ದೇವರು ಸತ್ಯವಂತ ಅಂತ ನಂಬಿದ್ರು.+ 30  ಆದ್ರೆ ಅವನಿಂದ ದೀಕ್ಷಾಸ್ನಾನ ಮಾಡಿಸ್ಕೊಳ್ಳದ ಫರಿಸಾಯರು ಮತ್ತು ನಿಯಮ ಪುಸ್ತಕವನ್ನ ಅರಿದು ಕುಡಿದವರು ದೇವರು ಕೊಟ್ಟ ಸಲಹೆಯನ್ನ* ಅಲಕ್ಷಿಸಿದ್ರು.)+ 31  “ಹಾಗಾಗಿ ನಾನು ಈ ಪೀಳಿಗೆಯನ್ನ ಯಾರಿಗೆ ಹೋಲಿಸಲಿ? ಇವರು ಯಾರ ತರ ಇದ್ದಾರೆ?+ 32  ಇವರು ಸಂತೆಯಲ್ಲಿ ಕೂತಿರೋ ಚಿಕ್ಕ ಮಕ್ಕಳ ತರ ಇದ್ದಾರೆ. ಅವರು ಬೇರೆ ಮಕ್ಕಳಿಗೆ ‘ನೀವು ಕುಣಿಬೇಕಂತ ಸಂಗೀತ ನುಡಿಸಿದ್ವಿ, ಆದ್ರೆ ನೀವು ಕುಣಿಲಿಲ್ಲ. ಶೋಕಗೀತೆ ಹಾಡಿದ್ವಿ, ಆದ್ರೆ ನೀವು ಗೋಳಾಡಲಿಲ್ಲ’ ಅಂತ ಹೇಳ್ತಿದ್ರು. 33  ಅದೇ ತರ ಯೋಹಾನ ಬೇರೆಯವರ ತರ ತಿಂತಾ ಕುಡಿತಾ ಇರಲಿಲ್ಲ.+ ಆದ್ರೂ ‘ಇವನಲ್ಲಿ ಕೆಟ್ಟ ದೇವದೂತ ಇದ್ದಾನೆ’ ಅಂತ ಹೇಳ್ತೀರ. 34  ಮನುಷ್ಯಕುಮಾರ ಬೇರೆಯವರ ತರ ತಿಂತಾನೆ ಕುಡಿತಾನೆ. ಅದಕ್ಕೂ ಅವನನ್ನ ‘ಹೊಟ್ಟೆಬಾಕ, ಕುಡುಕ, ಪಾಪಿಗಳ ಗೆಳೆಯ, ತೆರಿಗೆ ವಸೂಲಿ ಮಾಡುವವರ ಸ್ನೇಹಿತ’+ ಅಂತ ಹೇಳ್ತೀರ. 35  ಆದ್ರೆ ಏನೇ ಆಗಲಿ, ಒಬ್ಬನು ಮಾಡೋ ಒಳ್ಳೇ ಕೆಲಸಗಳಿಂದಾನೇ* ಅವನು ಬುದ್ಧಿವಂತ ಅಂತ ಗೊತ್ತಾಗುತ್ತೆ.”+ 36  ಒಬ್ಬ ಫರಿಸಾಯ ಯೇಸುವನ್ನ ಮನೆಗೆ ಊಟಕ್ಕೆ ಕರಿತಾ ಇದ್ದ. ಹಾಗಾಗಿ ಯೇಸು ಊಟಕ್ಕೆ ಹೋದನು. 37  ಆ ಊರಲ್ಲಿ ಕೆಟ್ಟ ಹೆಸ್ರಿದ್ದ ಒಬ್ಬ ಸ್ತ್ರೀಗೆ, ಯೇಸು ಫರಿಸಾಯನ ಮನೆಯಲ್ಲಿ ಊಟಕ್ಕೆ ಬಂದಿದ್ದಾನೆ ಅಂತ ಗೊತ್ತಾಯ್ತು. ಅವಳು ಸುಗಂಧ ತೈಲದ ಬಾಟಲಿ* ತಗೊಂಡು ಬಂದಳು.+ 38  ಹಿಂದೆ ಆತನ ಕಾಲ ಹತ್ರ ಕೂತು ಅಳ್ತಾ ಕಣ್ಣೀರನ್ನ ಆತನ ಪಾದಗಳ ಮೇಲೆ ಸುರಿಸಿ ತಲೆಕೂದಲಿಂದ ಒರಸಿದಳು. ಪಾದಗಳಿಗೆ ಮೃದುವಾಗಿ ಮುದ್ದಿಟ್ಟು ಆ ಸುಗಂಧ ತೈಲ ಸುರಿದಳು. 39  ಊಟಕ್ಕೆ ಕರೆದ ಫರಿಸಾಯ ಇದನ್ನ ನೋಡಿ “ಈ ಮನುಷ್ಯ ನಿಜಕ್ಕೂ ಪ್ರವಾದಿ ಆಗಿದ್ರೆ ಅವನನ್ನ ಮುಟ್ಟಿದವಳು ಯಾರು, ಎಂಥವಳು ಅಂತ ಗೊತ್ತಾಗಬೇಕಿತ್ತು. ಯಾಕಂದ್ರೆ ಅವಳೊಬ್ಬ ಪಾಪಿ”+ ಅಂತ ಮನಸ್ಸಲ್ಲಿ ಅಂದ್ಕೊಂಡ. 40  ಆಗ ಯೇಸು “ಸೀಮೋನ, ನಾನು ನಿನಗೇನೋ ಹೇಳಬೇಕು” ಅಂದನು. ಅವನು “ಗುರು ಏನದು?” ಅಂದ. 41  ಆಗ ಯೇಸು “ಸಾಲಕೊಡ್ತಿದ್ದವನ ಹತ್ರ ಇಬ್ಬರು ಸಾಲ ತಗೊಂಡ್ರು. ಒಬ್ಬ 500 ದಿನಾರು,* ಇನ್ನೊಬ್ಬ 50 ದಿನಾರು. 42  ಆ ಸಾಲ ತೀರಿಸೋಕೆ ಅವ್ರ ಹತ್ರ ಏನೂ ಇಲ್ಲ ಅಂತ ಅವನು ಅವ್ರ ಸಾಲ ಮನ್ನಾ ಮಾಡಿಬಿಟ್ಟ. ಈಗ ಹೇಳು, ಆ ಇಬ್ಬರಲ್ಲಿ ಅವನನ್ನ ಯಾರು ಜಾಸ್ತಿ ಪ್ರೀತಿಸ್ತಾರೆ?” ಅಂತ ಕೇಳಿದನು. 43  ಅದಕ್ಕೆ ಸೀಮೋನ “ನನ್ನ ಪ್ರಕಾರ, ಜಾಸ್ತಿ ಸಾಲ ಇತ್ತಲ್ಲಾ ಅವನೇ ಇರಬೇಕು” ಅಂದ. ಅದಕ್ಕೆ ಯೇಸು “ನೀನು ಸರಿಯಾಗಿ ಹೇಳಿದ್ದೀಯ” ಅಂತ ಹೇಳಿ 44  ಆ ಸ್ತ್ರೀಯನ್ನ ನೋಡ್ತಾ ಸೀಮೋನನಿಗೆ “ಈ ಸ್ತ್ರೀಯನ್ನ ನೋಡ್ತಿದ್ದಿಯಲ್ಲಾ? ನಾನು ನಿನ್ನ ಮನೆಗೆ ಬಂದಾಗ ಕಾಲು ತೊಳಿಯೋಕೆ ನೀನು ನೀರು ಕೊಡಲಿಲ್ಲ. ಆದ್ರೆ ಈ ಸ್ತ್ರೀ ಕಣ್ಣೀರಿಂದ ನನ್ನ ಕಾಲು ತೊಳೆದು ಕೂದಲಿಂದ ಒರಸಿದಳು. 45  ನೀನು ನನಗೆ ಮುದ್ದಿಡಲಿಲ್ಲ. ಆದ್ರೆ ನಾನು ಒಳಗೆ ಬಂದಾಗಿಂದ ಈ ಸ್ತ್ರೀ ನನ್ನ ಪಾದಗಳಿಗೆ ಮುದ್ದಿಡೋದನ್ನ ನಿಲ್ಲಿಸಿಲ್ಲ. 46  ನೀನು ನನ್ನ ತಲೆ ಮೇಲೆ ತೈಲ ಸುರಿಲಿಲ್ಲ. ಆದ್ರೆ ಈ ಸ್ತ್ರೀ ನನ್ನ ಪಾದಗಳ ಮೇಲೆ ಸುಗಂಧ ತೈಲ ಸುರಿದಳು. 47  ಹಾಗಾಗಿ ನಿನಗೆ ಹೇಳ್ತಿದ್ದೀನಿ, ಇವಳು ತುಂಬ* ಪಾಪ ಮಾಡಿದ್ರೂ ಕ್ಷಮೆ ಸಿಕ್ಕಿದೆ.+ ಅದಕ್ಕೇ ಅವಳು ಜಾಸ್ತಿ ಪ್ರೀತಿ ತೋರಿಸ್ತಾ ಇದ್ದಾಳೆ. ಆದ್ರೆ ಕಡಿಮೆ ಪಾಪಗಳಿಗೆ ಕ್ಷಮೆ ಸಿಕ್ಕವರು ಕಡಿಮೆ ಪ್ರೀತಿ ತೋರಿಸ್ತಾರೆ” ಅಂದನು. 48  ಆಮೇಲೆ ಅವಳಿಗೆ “ನಿನ್ನ ಪಾಪಗಳಿಗೆ ಕ್ಷಮೆ ಸಿಕ್ಕಿದೆ”+ ಅಂದನು. 49  ಆಗ ಆತನ ಜೊತೆ ಊಟಕ್ಕೆ ಕೂತವರು “ಪಾಪಗಳನ್ನ ಸಹ ಕ್ಷಮಿಸ್ತಿದ್ದಾನಲ್ಲಾ, ಇವನು ಯಾರು?”+ ಅಂತ ಅಂದ್ಕೊಂಡ್ರು. 50  ಯೇಸು ಆ ಸ್ತ್ರೀಗೆ “ನಿನ್ನ ನಂಬಿಕೆನೇ ನಿನ್ನನ್ನ ರಕ್ಷಿಸಿದೆ.+ ನೆಮ್ಮದಿಯಿಂದ ಹೋಗು” ಅಂದನು.

ಪಾದಟಿಪ್ಪಣಿ

ಅಕ್ಷ. “ಮುದ್ದಿನ ಮಗ.”
ಅಥವಾ “ಮಾರ್ಗದರ್ಶನ.”
ಅಕ್ಷ. “ಮಕ್ಕಳು.”
ಅಥವಾ “ಹಾಲುಗಲ್ಲಿನ ಭರಣಿ.”
ಅಥವಾ “ಮಹಾ.”