ಲೂಕ 20:1-47

  • ಯೇಸುವಿನ ಅಧಿಕಾರವನ್ನ ಪ್ರಶ್ನೆ ಮಾಡ್ತಾರೆ (1-8)

  • ಕೊಲೆಗಾರ ರೈತರ ಉದಾಹರಣೆ (9-19)

  • ದೇವರು ಮತ್ತು ರೋಮಿನ ರಾಜ (20-26)

  • ಸತ್ತವರು ಮತ್ತೆ ಬದುಕೋದ್ರ ಬಗ್ಗೆ ಪ್ರಶ್ನೆ (27-40)

  • ಕ್ರಿಸ್ತ ದಾವೀದನ ಮಗನಾ? (41-44)

  • ಪಂಡಿತರ ಬಗ್ಗೆ ಎಚ್ಚರವಾಗಿರಿ (45-47)

20  ಯೇಸು ಒಂದಿನ ದೇವಾಲಯದಲ್ಲಿ ಜನ್ರಿಗೆ ಕಲಿಸ್ತಿದ್ದಾಗ ಮತ್ತು ಸಿಹಿಸುದ್ದಿ ಬಗ್ಗೆ ಹೇಳ್ತಿದ್ದಾಗ ಮುಖ್ಯ ಪುರೋಹಿತರು, ಪಂಡಿತರು, ಹಿರಿಯರು 2  “ಯಾವ ಅಧಿಕಾರದಿಂದ ಇದೆಲ್ಲ ಮಾಡ್ತಿದ್ದೀಯ? ನಿನಗೆ ಈ ಅಧಿಕಾರ ಯಾರು ಕೊಟ್ರು?” ಅಂತ ಕೇಳಿದ್ರು.+ 3  ಯೇಸು ಅವ್ರಿಗೆ “ನಾನೂ ನಿಮಗೆ ಒಂದು ಪ್ರಶ್ನೆ ಕೇಳ್ತಿನಿ. ಅದಕ್ಕೆ ಉತ್ತರಕೊಡಿ. 4  ದೀಕ್ಷಾಸ್ನಾನ ಮಾಡಿಸೋ ಅಧಿಕಾರ ಯೋಹಾನನಿಗೆ ಯಾರು ಕೊಟ್ರು? ದೇವರಾ? ಮನುಷ್ಯರಾ?” ಅಂತ ಕೇಳಿದ. 5  ಅವರು ಒಬ್ಬರಿಗೊಬ್ರು “‘ದೇವರು’ ಅಂತ ಹೇಳಿದ್ರೆ ‘ಹಾಗಾದ್ರೆ ನೀವ್ಯಾಕೆ ಅವನನ್ನ ನಂಬಲಿಲ್ಲ?’ ಅಂತ ಕೇಳ್ತಾನೆ. 6  ‘ಮನುಷ್ಯರು’ ಅಂತ ಹೇಳಿದ್ರೆ ಜನರೆಲ್ಲ ನಮ್ಮನ್ನ ಕಲ್ಲು ಹೊಡೆದು ಕೊಂದುಬಿಡ್ತಾರೆ. ಯಾಕಂದ್ರೆ ಯೋಹಾನ ಒಬ್ಬ ಪ್ರವಾದಿ ಅಂತ ಅವರು ನಂಬಿದ್ದಾರೆ” ಅಂತ ಮಾತಾಡ್ಕೊಂಡ್ರು.+ 7  ಹಾಗಾಗಿ ಅವರು “ಅವನಿಗೆ ಯಾರು ಅಧಿಕಾರ ಕೊಟ್ರು ಅಂತ ನಮಗೆ ಗೊತ್ತಿಲ್ಲ” ಅಂದ್ರು. 8  ಆಗ ಯೇಸು “ಹಾಗಾದ್ರೆ ಯಾವ ಅಧಿಕಾರದಿಂದ ಇದನ್ನೆಲ್ಲ ಮಾಡ್ತೀನಿ ಅಂತ ನಾನೂ ಹೇಳಲ್ಲ” ಅಂದನು. 9  ಆಮೇಲೆ ಯೇಸು ಜನ್ರಿಗೆ ಈ ಉದಾಹರಣೆ ಹೇಳಿದನು “ಒಬ್ಬ ಯಜಮಾನ ದ್ರಾಕ್ಷಿ ತೋಟ+ ಮಾಡಿದ. ಅದನ್ನ ರೈತರಿಗೆ ಗುತ್ತಿಗೆಗೆ ಕೊಟ್ಟು ವಿದೇಶಕ್ಕೆ ಹೋದ. ಅಲ್ಲೇ ತುಂಬ ಸಮಯದವರೆಗೆ ಇದ್ದ.+ 10  ದ್ರಾಕ್ಷಿಹಣ್ಣು ಕೀಳೋ ಸಮಯ ಬಂದಾಗ ಯಜಮಾನ ತನ್ನ ಪಾಲು ತಗೊಂಡು ಬರೋಕೆ ಸೇವಕನನ್ನ ಆ ರೈತರ ಹತ್ರ ಕಳಿಸಿದ. ರೈತರು ಅವನನ್ನ ಹೊಡೆದು ಬರಿಗೈಯಲ್ಲಿ ಕಳಿಸಿಬಿಟ್ರು.+ 11  ಯಜಮಾನ ಇನ್ನೊಬ್ಬ ಸೇವಕನನ್ನ ಕಳಿಸಿದ. ಅವರು ಅವನಿಗೂ ಹೊಡೆದು ಅವಮಾನಮಾಡಿ ಬರಿಗೈಯಲ್ಲಿ ಕಳಿಸಿಬಿಟ್ರು. 12  ಯಜಮಾನ ಮೂರನೆಯವನನ್ನ ಕಳಿಸಿದ. ಅವನನ್ನೂ ಹೊಡೆದು ಓಡಿಸಿಬಿಟ್ರು. 13  ಆಗ ದ್ರಾಕ್ಷಿ ತೋಟದ ಯಜಮಾನ ‘ನಾನೇನು ಮಾಡಲಿ? ನನ್ನ ಪ್ರೀತಿಯ ಮಗನನ್ನ+ ಕಳಿಸ್ತೀನಿ. ಅವರು ನನ್ನ ಮಗನಿಗೆ ಗೌರವ ಕೊಡಬಹುದು’ ಅಂದ್ಕೊಂಡ. 14  ಆದ್ರೆ ಆ ರೈತರು ಅವನನ್ನ ನೋಡಿ ‘ಇವನೇ ವಾರಸುದಾರ. ಬನ್ನಿ, ಇವನನ್ನ ಕೊಂದು ಹಾಕೋಣ. ಆಗ ಆಸ್ತಿಯೆಲ್ಲಾ ನಮ್ಮದೇ ಆಗುತ್ತೆ’ ಅಂತ ಮಾತಾಡ್ಕೊಂಡ್ರು. 15  ಹಾಗಾಗಿ ಅವನನ್ನ ದ್ರಾಕ್ಷಿ ತೋಟದಿಂದ ಎಳ್ಕೊಂಡು ಹೋಗಿ ಕೊಂದುಬಿಟ್ರು.+ ದ್ರಾಕ್ಷಿ ತೋಟದ ಯಜಮಾನ ಬಂದಾಗ ಆ ರೈತರಿಗೆ ಏನು ಮಾಡ್ತಾನೆ? 16  ಆ ರೈತರನ್ನ ಕೊಂದು ದ್ರಾಕ್ಷಿ ತೋಟವನ್ನ ಬೇರೆಯವ್ರಿಗೆ ಕೊಡ್ತಾನೆ.” ಜನ ಇದನ್ನ ಕೇಳಿಸ್ಕೊಂಡು “ಹೀಗೆ ಯಾವತ್ತೂ ಆಗಬಾರದು” ಅಂದ್ರು. 17  ಆದ್ರೆ ಯೇಸು ಅವ್ರನ್ನೇ ನೋಡ್ತಾ “ಹಾಗಾದ್ರೆ ‘ಕಟ್ಟುವವರು ಬೇಡ ಅಂತ ಬಿಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯ್ತು’*+ ಅಂತ ಪವಿತ್ರ ಗ್ರಂಥದಲ್ಲಿ ಬರೆದಿರೋ ಮಾತಿನ ಅರ್ಥ ಏನು? 18  ಈ ಕಲ್ಲಿನ ಮೇಲೆ ಬೀಳುವವರು ಚೂರುಚೂರು ಆಗ್ತಾರೆ,+ ಈ ಕಲ್ಲು ಯಾರ ಮೇಲೆ ಬೀಳುತ್ತೋ ಅವರು ಪುಡಿಪುಡಿ ಆಗ್ತಾರೆ” ಅಂದನು. 19  ಪಂಡಿತರನ್ನ, ಮುಖ್ಯ ಪುರೋಹಿತರನ್ನ ಮನಸ್ಸಲ್ಲಿ ಇಟ್ಕೊಂಡೇ+ ಯೇಸು ಈ ಉದಾಹರಣೆ ಹೇಳಿದ ಅಂತ ಅವ್ರಿಗೆ ಗೊತ್ತಾಯ್ತು. ಆಗಲೇ ಆತನನ್ನ ಹಿಡಿಬೇಕಂತ ಇದ್ರು. ಆದ್ರೆ ಜನ್ರಿಗೆ ಹೆದ್ರಿ ಸುಮ್ಮನಿದ್ರು. 20  ಅವರು ಆತನ ಮೇಲೆ ನಿಗಾ ಇಟ್ಟು ಆತನ ಮಾತಲ್ಲಿ ತಪ್ಪು ಹುಡುಕೋಕೆ+ ಸಂಚು ಹೂಡಿದ್ರು. ಒಳ್ಳೆಯವರ ತರ ನಟಿಸ್ತಾ ಆತನ ಮಾತಲ್ಲಿ ತಪ್ಪು ಹುಡುಕೋಕೆ ಕೆಲವ್ರಿಗೆ ಗುಟ್ಟಾಗಿ ಹಣ ಕೊಟ್ರು. ಯೇಸುವನ್ನ ಸರಕಾರಕ್ಕೆ, ರಾಜ್ಯಪಾಲನಿಗೆ ಒಪ್ಪಿಸೋದೇ ಅವ್ರ ಉದ್ದೇಶ ಆಗಿತ್ತು. 21  ಆ ಜನ ಯೇಸು ಹತ್ರ ಹೋಗಿ “ಗುರು, ನಮಗೆ ಗೊತ್ತು, ನೀನು ಯಾವಾಗ್ಲೂ ಸತ್ಯನೇ ಹೇಳ್ತಿಯ, ದೇವರ ಮಾರ್ಗದ ಬಗ್ಗೆ ಸತ್ಯವನ್ನೇ ಕಲಿಸ್ತೀಯ. ಯಾರಿಗೂ ಭೇದಭಾವ ಮಾಡಲ್ಲ. 22  ನಾವು ರಾಜನಿಗೆ ತೆರಿಗೆ ಕೊಡೋದು ಸರಿನಾ?”* ಅಂತ ಕೇಳಿದ್ರು. 23  ಯೇಸುಗೆ ಅವ್ರ ಸಂಚು ಗೊತ್ತಾಯ್ತು. ಆತನು 24  “ಒಂದು ದಿನಾರು* ನಾಣ್ಯ ತೋರಿಸಿ. ಇದ್ರ ಮೇಲಿರೋ ಚಿತ್ರ, ಹೆಸ್ರು ಯಾರದು?” ಅಂತ ಕೇಳಿದನು. ಅವರು “ರಾಜಂದು” ಅಂದ್ರು. 25  ಆಗ ಯೇಸು “ಹಾಗಾದ್ರೆ ರಾಜಂದು ರಾಜನಿಗೆ ಕೊಡಿ,+ ಆದ್ರೆ ದೇವರದ್ದನ್ನ ದೇವರಿಗೆ ಕೊಡಿ”+ ಅಂದನು. 26  ಯೇಸು ಈ ರೀತಿ ಉತ್ತರ ಕೊಟ್ಟದ್ರಿಂದ ಜನರ ಮುಂದೆ ಆತನನ್ನ ಹಿಡಿಯಕ್ಕಾಗಲಿಲ್ಲ, ಸುಮ್ಮನಾದ್ರು. ಆದ್ರೆ ಆತನ ಉತ್ತರ ಕೇಳಿ ಆಶ್ಚರ್ಯ ಆಯ್ತು. 27  ಸತ್ತವರು ಮತ್ತೆ ಬದುಕಿ ಬರಲ್ಲ+ ಅಂತ ಹೇಳೋ ಕೆಲವು ಸದ್ದುಕಾಯರು ಬಂದು+ 28  “ಗುರು, ‘ಒಬ್ಬ ವ್ಯಕ್ತಿ ಮಕ್ಕಳಿಲ್ಲದೆ ಸತ್ತರೆ ಅವನ ಹೆಂಡತಿನ ಅವನ ತಮ್ಮ ಮದುವೆ ಮಾಡ್ಕೊಂಡು ಅಣ್ಣನಿಗೋಸ್ಕರ ಮಕ್ಕಳು ಮಾಡ್ಕೋಬೇಕು’ ಅಂತ ಮೋಶೆ ಹೇಳಿದ.+ 29  ನಮ್ಮ ಮನೆ ಹತ್ರ ಏಳು ಅಣ್ಣತಮ್ಮಂದಿರು ಇದ್ರು. ಮೊದಲನೆಯವನು ಮದುವೆಯಾಗಿ ಸತ್ತುಹೋದ. ಅವನಿಗೆ ಮಕ್ಕಳು ಇರಲಿಲ್ಲ. 30  ಎರಡನೆಯವನೂ ಅವಳನ್ನ ಮದುವೆಯಾಗಿ ಸತ್ತುಹೋದ. 31  ಮೂರನೆಯವನೂ ಅವಳನ್ನ ಮದುವೆ ಮಾಡ್ಕೊಂಡ. ಏಳನೆಯವನ ತನಕ ಎಲ್ರಿಗೂ ಹೀಗೇ ಆಯ್ತು. ಆದ್ರೆ ಅವ್ರಲ್ಲಿ ಯಾರಿಗೂ ಮಕ್ಕಳು ಆಗಲಿಲ್ಲ. 32  ಕೊನೆಗೆ ಅವಳೂ ಸತ್ತುಹೋದಳು. 33  ಹಾಗಾದ್ರೆ ಸತ್ತವರೆಲ್ಲ ಮತ್ತೆ ಬದುಕುವಾಗ ಅವಳು ಆ ಏಳು ಜನ್ರಲ್ಲಿ ಯಾರಿಗೆ ಹೆಂಡತಿ ಆಗಿರ್ತಾಳೆ? ಯಾಕಂದ್ರೆ ಏಳೂ ಜನ ಅವಳನ್ನ ಮದುವೆ ಮಾಡ್ಕೊಂಡ್ರಲ್ಲಾ” ಅಂದ್ರು. 34  ಯೇಸು ಅವ್ರಿಗೆ “ಈ ಲೋಕದಲ್ಲಿ ಜನ ಮದುವೆ ಮಾಡ್ಕೊಳ್ತಾರೆ. 35  ಆದ್ರೆ ಸತ್ತರೂ ಬದುಕೋ ಅರ್ಹತೆ ಇರೋರು ಮತ್ತು ಬರೋ ಲೋಕದಲ್ಲಿ ಜೀವವನ್ನ ಪಡೆಯೋ ಅರ್ಹತೆ ಇರೋರು ಮದುವೆ ಮಾಡ್ಕೊಳ್ಳಲ್ಲ.+ 36  ಅವರು ಇನ್ನು ಯಾವತ್ತೂ ಸಾಯಲ್ಲ. ಯಾಕಂದ್ರೆ ಅವರು ದೇವದೂತರ ತರ ಇರ್ತಾರೆ. ಅಷ್ಟೇ ಅಲ್ಲ ಅವರು ಮತ್ತೆ ಜೀವ ಪಡ್ಕೊಂಡ ಮೇಲೆ ದೇವರ ಮಕ್ಕಳಾಗಿ ಇರ್ತಾರೆ. 37  ಸತ್ತವರು ಮತ್ತೆ ಬದುಕೋ ವಿಷ್ಯಕ್ಕೆ ಬಂದ್ರೆ, ಮುಳ್ಳಿನ ಪೊದೆ ಹತ್ರ ಮೋಶೆ ದೇವರ ಬಗ್ಗೆ ಏನು ಹೇಳಿದ? ಯೆಹೋವ* ದೇವರು ‘ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು’+ ಅಂತಲ್ವಾ? 38  ಹಾಗಾದ್ರೆ ಆತನು ಸತ್ತವರಿಗಲ್ಲ, ಬದುಕಿರೋರಿಗೆ ದೇವರಾಗಿದ್ದಾನೆ. ಯಾಕಂದ್ರೆ ಅವ್ರೆಲ್ಲ ಆತನ ದೃಷ್ಟಿಯಲ್ಲಿ* ಇನ್ನೂ ಬದುಕಿದ್ದಾರೆ”+ ಅಂದನು. 39  ಅದಕ್ಕೆ ಕೆಲವು ಪಂಡಿತರು “ಗುರು, ನೀನು ಹೇಳಿದ್ದು ಸರಿ” ಅಂದ್ರು. 40  ಆಮೇಲೆ ಒಂದೇ ಒಂದು ಪ್ರಶ್ನೆ ಕೇಳಕ್ಕೂ ಅವ್ರಿಗೆ ಧೈರ್ಯ ಇರಲಿಲ್ಲ. 41  ಆಗ ಯೇಸು ಅವ್ರಿಗೆ “ಕ್ರಿಸ್ತ ದಾವೀದನ ಮಗ ಅಂತ ಜನ ಯಾಕೆ ಹೇಳ್ತಾರೆ?+ 42  ದಾವೀದ ಕೀರ್ತನೆ ಪುಸ್ತಕದಲ್ಲಿ ‘ಯೆಹೋವ* ನನ್ನ ಒಡೆಯನಿಗೆ “ನಾನು ನಿನ್ನ ಶತ್ರುಗಳನ್ನ ನಿನ್ನ ಪಾದಪೀಠವಾಗಿ ಮಾಡೋ ತನಕ 43  ನನ್ನ ಬಲಗಡೆಯಲ್ಲಿ ಕೂತ್ಕೊ”+ ಅಂತ ಹೇಳಿದ’ ಅಂದಿದ್ದಾನೆ. 44  ಇಲ್ಲಿ ದಾವೀದ ಕ್ರಿಸ್ತನನ್ನ ‘ಒಡೆಯ’ ಅಂತಿದ್ದಾನೆ. ಹಾಗಿದ್ರೆ ಕ್ರಿಸ್ತ ಹೇಗೆ ದಾವೀದನ ಮಗ ಆಗ್ತಾನೆ?” ಅಂತ ಕೇಳಿದನು. 45  ಆಮೇಲೆ ಜನ್ರೆಲ್ಲ ಯೇಸುವಿನ ಮಾತು ಕೇಳಿಸ್ಕೊಳ್ತಾ ಇದ್ದಾಗ ಶಿಷ್ಯರಿಗೆ 46  “ಪಂಡಿತರ ಬಗ್ಗೆ ಎಚ್ಚರವಾಗಿರಿ. ಉದ್ದವಾದ ಬಟ್ಟೆ ಹಾಕೊಂಡು ತಿರುಗಾಡೋದು, ಸಾರ್ವಜನಿಕ ಸ್ಥಳಗಳಲ್ಲಿ ಜನ್ರಿಂದ ನಮಸ್ಕಾರ ಹೊಡಿಸ್ಕೊಳ್ಳೋದು ಅವ್ರಿಗೆ ತುಂಬ ಇಷ್ಟ. ಅವ್ರಿಗೆ ಸಭಾಮಂದಿರಗಳಲ್ಲಿ ಮೊದಲ ಸಾಲು ಬೇಕು. ಔತಣದಲ್ಲಿ ವಿಶೇಷ ಸ್ಥಾನ ಬೇಕು.+ 47  ಅವರು ವಿಧವೆಯರ ಆಸ್ತಿ* ನುಂಗಿಬಿಡ್ತಾರೆ. ಎಲ್ರಿಗೆ ಕಾಣಿಸಬೇಕಂತ* ದೊಡ್ಡದೊಡ್ಡ ಪ್ರಾರ್ಥನೆ ಮಾಡ್ತಾರೆ. ಇದಕ್ಕೆಲ್ಲ ಅವ್ರಿಗೆ ದೊಡ್ಡ ಶಿಕ್ಷೆ ಕಾದಿದೆ” ಅಂದನು.

ಪಾದಟಿಪ್ಪಣಿ

ಅಕ್ಷ. “ಮೂಲೆಯ ತಲೆ ಆಯ್ತು.”
ಅಕ್ಷ. “ನಿಯಮನಾ?”
ಅಕ್ಷ. “ಆತನಿಗೆ.”
ಅಕ್ಷ. “ಮನೆಗಳನ್ನ.”
ಅಥವಾ “ನಾಟಕೀಯವಾಗಿ.”