ಲೂಕ 14:1-35
14 ಯೇಸು ಒಮ್ಮೆ ಸಬ್ಬತ್ ದಿನದಲ್ಲಿ ಫರಿಸಾಯರ ಒಬ್ಬ ನಾಯಕನ ಮನೆಗೆ ಊಟಕ್ಕೆ ಹೋದನು. ಅಲ್ಲಿದ್ದವರು ಆತನನ್ನೇ ಗಮನಿಸ್ತಾ ಇದ್ರು.
2 ಆತನ ಮುಂದೆ ಮೈಯಲ್ಲಿ ನೀರು ತುಂಬಿ* ಕಷ್ಟಪಡ್ತಿದ್ದ ರೋಗಿ ಇದ್ದನು.
3 ಯೇಸು ನಿಯಮ ಪುಸ್ತಕವನ್ನ ಅರಿದು ಕುಡಿದವರಿಗೆ ಮತ್ತು ಫರಿಸಾಯರಿಗೆ “ಸಬ್ಬತ್ ದಿನದಲ್ಲಿ ವಾಸಿಮಾಡೋದು ಸರಿನಾ ತಪ್ಪಾ?”+ ಅಂತ ಕೇಳಿದನು.
4 ಅವರು ಏನೂ ಹೇಳಲಿಲ್ಲ. ಆಗ ಯೇಸು ಆ ವ್ಯಕ್ತಿನ ಮುಟ್ಟಿ ವಾಸಿಮಾಡಿ ಕಳಿಸಿದನು.
5 ಆಮೇಲೆ “ಸಬ್ಬತ್ ದಿನದಲ್ಲಿ+ ನಿಮ್ಮ ಮಗ ಅಥವಾ ಎತ್ತು ಬಾವಿಗೆ+ ಬಿದ್ರೆ ತಕ್ಷಣ ಮೇಲಕ್ಕೆ ಎತ್ತಲ್ವಾ?” ಅಂತ ಕೇಳಿದನು.
6 ಅದಕ್ಕೂ ಅವರೇನೂ ಹೇಳಲಿಲ್ಲ.
7 ಅಲ್ಲಿ ಅತಿಥಿಗಳು ಮುಖ್ಯ ಸ್ಥಾನಗಳನ್ನ ಆರಿಸ್ಕೊಂಡು ಕೂತ್ಕೊಳ್ಳೋದನ್ನ ನೋಡಿ ಯೇಸು ಅವ್ರಿಗೆ+ ಒಂದು ಉದಾಹರಣೆ ಹೇಳಿದನು.
8 “ಯಾರಾದ್ರೂ ನಿಮ್ಮನ್ನ ಮದುವೆ ಊಟಕ್ಕೆ ಕರೆದ್ರೆ ಒಳ್ಳೇ ಸ್ಥಾನ ಹುಡುಕಿ ಕೂತ್ಕೊಬೇಡಿ. ನಿಮಗಿಂತ ದೊಡ್ಡ ಸ್ಥಾನದಲ್ಲಿ+ ಇರೋರನ್ನ ಕೂಡ ಕರೆದಿರಬಹುದು.
9 ಆಗ ನಿಮ್ಮನ್ನ ಕರೆದವರು ನಿಮ್ಮ ಹತ್ರ ‘ಇವ್ರಿಗೆ ಈ ಜಾಗ ಬಿಟ್ಟುಕೊಡಿ’ ಅಂತಾರೆ. ನಿಮಗೆ ಅವಮಾನ ಆಗುತ್ತೆ, ಕೆಳಗೆ ಕೂರಬೇಕಾಗುತ್ತೆ.
10 ಹಾಗಾಗಿ ಯಾರಾದ್ರೂ ಊಟಕ್ಕೆ ಕರೆದ್ರೆ ಹೋಗಿ ಕೆಳಗೆ ಕೂತ್ಕೊಳ್ಳಿ. ಆಗ ನಿಮ್ಮನ್ನ ಕರೆದವರು ಬಂದು ‘ಗೆಳೆಯ, ಮೇಲೆ ಕೂತ್ಕೊ’ ಅಂತಾರೆ. ಎಲ್ಲ ಅತಿಥಿಗಳ ಮುಂದೆ ನಿಮಗೆ ಗೌರವ ಸಿಗುತ್ತೆ.+
11 ಹೆಚ್ಚಿಸ್ಕೊಂಡ್ರೆ ದೇವರು ತಗ್ಗಿಸ್ತಾನೆ. ತಗ್ಗಿಸ್ಕೊಂಡ್ರೆ ದೇವರು ಮೇಲೆ ಎತ್ತುತ್ತಾನೆ.”+
12 ಆಮೇಲೆ ಯೇಸು ಊಟಕ್ಕೆ ಕರಿದಿದ್ದ ವ್ಯಕ್ತಿಗೆ “ಮಧ್ಯಾಹ್ನದ ಊಟಕ್ಕಾಗಲಿ ಸಂಜೆ ಊಟಕ್ಕಾಗಲಿ ಜನ್ರನ್ನ ಕರಿವಾಗ ಸ್ನೇಹಿತರನ್ನ, ಸಹೋದರರನ್ನ, ಸಂಬಂಧಿಕರನ್ನ, ಗೊತ್ತಿರೋ ಶ್ರೀಮಂತರನ್ನ ಕರಿಬೇಡ. ಯಾಕಂದ್ರೆ ಅವರೂ ನಿನ್ನನ್ನ ಊಟಕ್ಕೆ ಕರಿತಾರೆ. ಅತಿಥಿಸತ್ಕಾರ ಮಾಡ್ತಾರೆ.
13 ಹಾಗಾಗಿ ನೀನು ಊಟಕ್ಕೆ ಕರಿವಾಗ ಬಡವರನ್ನ, ಕುಂಟರನ್ನ, ಕುರುಡರನ್ನ ಕರಿ.+
14 ಆಗ ನಿನಗೆ ಸಂತೋಷ ಸಿಗುತ್ತೆ. ಯಾಕಂದ್ರೆ ಅವ್ರ ಹತ್ರ ನಿನಗೆ ಅತಿಥಿಸತ್ಕಾರ ಮಾಡೋಕೆ ಏನೂ ಇರಲ್ಲ. ಆದ್ರೆ ದೇವರು ನೀತಿವಂತರಿಗೆ ಮತ್ತೆ ಜೀವ ಕೊಡುವಾಗ+ ನಿನಗೆ ಆಶೀರ್ವಾದ ಕೊಡ್ತಾನೆ” ಅಂದನು.
15 ಇದನ್ನ ಕೇಳಿಸ್ಕೊಂಡಾಗ ಇನ್ನೊಬ್ಬ ಅತಿಥಿ “ದೇವರ ಆಳ್ವಿಕೆಯಲ್ಲಿ ಊಟ ಮಾಡಿದಾಗಲೇ ಸಂತೋಷ ಸಿಗೋದು” ಅಂದ.
16 ಅದಕ್ಕೆ ಯೇಸು ಹೀಗಂದನು “ಒಬ್ಬ ದೊಡ್ಡ ಔತಣ+ ಮಾಡಿ ತುಂಬ ಜನ್ರನ್ನ ಊಟಕ್ಕೆ ಕರೆದ.
17 ಊಟದ ಸಮಯ ಆದಾಗ ಸೇವಕನನ್ನ ಕರೆದು ನೀನು ಹೋಗಿ ಅತಿಥಿಗಳಿಗೆ ‘ಬನ್ನಿ, ಊಟ ತಯಾರಿದೆ ಅಂತೇಳು’ ಅಂದ.
18 ಅವನು ಹೋಗಿ ಕರೆದಾಗ ಎಲ್ರೂ ಒಂದಲ್ಲ ಒಂದು ನೆಪ ಕೊಡ್ತಾ ಇದ್ರು.+ ಒಬ್ಬ ‘ನಾನೊಂದು ಹೊಲ ತಗೊಂಡಿದ್ದೀನಿ. ಹೋಗಿ ಅದನ್ನ ನೋಡಬೇಕು, ಬರೋಕಾಗಲ್ಲ ಕ್ಷಮಿಸು’ ಅಂದ.
19 ಇನ್ನೊಬ್ಬ ‘ನಾನು ಐದು ಜೊತೆ ಎತ್ತು ತಗೊಂಡಿದ್ದೀನಿ. ಕೆಲಸ ಮಾಡಿಸಿ ನೋಡಬೇಕು, ಬರೋಕಾಗಲ್ಲ ಕ್ಷಮಿಸು’ ಅಂದ.+
20 ಮತ್ತೊಬ್ಬ ‘ನನಗೆ ಮೊನ್ನೆನೇ ಮದುವೆ ಆಗಿದೆ, ನಂಗೆ ಬರೋಕಾಗಲ್ಲ’ ಅಂದ.
21 ಆ ಸೇವಕ ವಾಪಸ್ ಬಂದು ಯಜಮಾನನಿಗೆ ಇದನ್ನೆಲ್ಲ ಹೇಳಿದ. ಆಗ ಯಜಮಾನನಿಗೆ ತುಂಬ ಕೋಪ ಬಂತು. ಅವನು ಆ ಸೇವಕನಿಗೆ ‘ಬೇಗ ಊರಿನ ಮುಖ್ಯ ಬೀದಿಗೆ, ಜನ ಹೆಚ್ಚು ಓಡಾಡೋ ಕಡೆ ಹೋಗಿ ಬಡವರನ್ನ, ಕುಂಟರನ್ನ, ಕುರುಡರನ್ನ ಕರ್ಕೊಂಡು ಬಾ’ ಅಂದ.
22 ಸ್ವಲ್ಪ ಹೊತ್ತಾದ ಮೇಲೆ ಆ ಸೇವಕ ಬಂದು ‘ಯಜಮಾನ, ನೀನು ಹೇಳಿದ ಹಾಗೆ ಮಾಡಿದೆ. ಇನ್ನೂ ಜಾಗ ಖಾಲಿ ಇದೆ’ ಅಂದ.
23 ಆಗ ಯಜಮಾನ ‘ಊರ ಹೊರಗೆ ಇರೋ ರಸ್ತೆ, ಬೀದಿಗಳಿಗೆ ಹೋಗಿ ಅಲ್ಲಿರೋ ಜನ್ರಿಗೆ ಬನ್ನಿ ಅಂತ ಒತ್ತಾಯ ಮಾಡು. ನನ್ನ ಮನೆ ಅತಿಥಿಗಳಿಂದ ತುಂಬಿಹೋಗಬೇಕು.+
24 ಯಾಕಂದ್ರೆ ನಾನು ಮೊದಲು ಕರೆದವ್ರಲ್ಲಿ ಒಬ್ಬನೂ ಔತಣದ ರುಚಿ ನೋಡಲ್ಲ’ ಅಂದ.”+
25 ಒಂದುಸಲ ತುಂಬ ಜನ ಯೇಸು ಜೊತೆನೇ ಹೋಗ್ತಾ ಇದ್ರು. ಆಗ ಆತನು ಅವ್ರಿಗೆ
26 “ನನ್ನ ಹಿಂದೆ ಬರುವವನು ತನ್ನ ಅಪ್ಪ, ಅಮ್ಮ, ಹೆಂಡತಿ, ಮಕ್ಕಳು, ಅಣ್ಣತಮ್ಮ ಅಕ್ಕತಂಗಿಯನ್ನ, ಅಷ್ಟೇ ಅಲ್ಲ ತನ್ನ ಸ್ವಂತ ಪ್ರಾಣವನ್ನ+ ಸಹ ನನಗಿಂತ ಜಾಸ್ತಿ ಪ್ರೀತಿಸಿದ್ರೆ* ಅವನು ನನ್ನ ಶಿಷ್ಯನಾಗಿರೋಕೆ ಲಾಯಕ್ಕಿಲ್ಲ.+
27 ಒಬ್ಬ ವ್ಯಕ್ತಿ ತನ್ನ ಹಿಂಸಾ ಕಂಬವನ್ನ* ಹೊತ್ಕೊಂಡು ನನ್ನ ಹಿಂದೆ ಬಂದಿಲ್ಲಾಂದ್ರೆ ಅವನು ನನ್ನ ಶಿಷ್ಯನಾಗಿ ಇರೋಕಾಗಲ್ಲ.+
28 ಉದಾಹರಣೆಗೆ ನೀವು ಒಂದು ಕಟ್ಟಡ ಕಟ್ಟೋಕೆ ಬಯಸಿದ್ರೆ ಅದನ್ನ ಕಟ್ಟಿಮುಗಿಸೋಕೆ ಬೇಕಾದಷ್ಟು ಹಣ ಇದ್ಯಾ ಇಲ್ವಾ ಅಂತ ಮೊದಲು ಕೂತು ಲೆಕ್ಕ ಹಾಕಲ್ವಾ?
29 ಲೆಕ್ಕ ಹಾಕದೆ ಇದ್ರೆ ಅಡಿಪಾಯ ಏನೋ ಹಾಕಬಹುದು. ಆದ್ರೆ ಅದನ್ನ ಕಟ್ಟಿ ಮುಗಿಸೋಕಾಗಲ್ಲ. ಅವನನ್ನ ನೋಡೋರೆಲ್ಲ ತಮಾಷೆ ಮಾಡ್ತಾ
30 ‘ಏನೋ ದೊಡ್ಡದಾಗಿ ಕಟ್ಟೋಕೆ ಹೋದ ಅರ್ಧಕ್ಕೆ ನಿಲ್ಲಿಸಿಬಿಟ್ಟ’ ಅಂತಾರೆ.
31 ಅದೇ ತರ ಒಬ್ಬ ರಾಜನ ವಿರುದ್ಧ ಇನ್ನೊಬ್ಬ ರಾಜ ಯುದ್ಧಕ್ಕೆ ಬರ್ತಾ ಇದ್ದಾನೆ ಅಂದ್ಕೊಳ್ಳಿ. ಬರ್ತಾ ಇರೋ ರಾಜನ ಹತ್ರ 20,000 ಸೈನಿಕರು ಇದ್ದಾರೆ. ಆಗ ಈ ರಾಜ ತನ್ನ ಹತ್ರ ಇರೋ 10,000 ಸೈನಿಕರಿಂದ ಅವ್ರನ್ನ ಎದುರಿಸೋಕೆ ಆಗುತ್ತಾ ಇಲ್ವಾ ಅಂತ ಮೊದಲು ಬೇರೆಯವ್ರ ಸಲಹೆ ಕೇಳಲ್ವಾ?
32 ಎದುರಿಸೋಕೆ ಆಗಲ್ಲ ಅಂತ ಗೊತ್ತಾದ್ರೆ ಆ ರಾಜ ಇನ್ನೂ ದೂರ ಇರುವಾಗ್ಲೇ ತನ್ನ ರಾಯಭಾರಿಗಳನ್ನ ಕಳಿಸಿ ಅವನ ಜೊತೆ ಶಾಂತಿ ಒಪ್ಪಂದ ಮಾಡ್ಕೊಳ್ತಾನೆ.
33 ಅದೇ ತರ ನಿಮ್ಮಲ್ಲಿ ಯಾರಾದ್ರೂ ಇರೋ ಆಸ್ತಿಪಾಸ್ತಿಯನ್ನ ಬಿಟ್ಕೊಡದಿದ್ರೆ* ನನ್ನ ಶಿಷ್ಯನಾಗೋಕೆ ಆಗೋದೇ ಇಲ್ಲ.+
34 ನಿಜ, ಉಪ್ಪು ತುಂಬ ಒಳ್ಳೇದು. ಆದ್ರೆ ಉಪ್ಪು ರುಚಿ ಕಳ್ಕೊಂಡ್ರೆ ಅದಕ್ಕೆ ಮತ್ತೆ ಉಪ್ಪಿನ ರುಚಿ ಹೇಗೆ ಬರುತ್ತೆ?+
35 ಅದು ಮಣ್ಣಿಗೆ ಗೊಬ್ಬರನೂ ಆಗಲ್ಲ. ಜನ ಅದನ್ನ ಬಿಸಾಕ್ತಾರೆ. ನಾನು ಹೇಳೋದನ್ನ ಗಮನಕೊಟ್ಟು ಕೇಳಿ”+ ಅಂದನು.