ಯೋಹಾನ 21:1-25

  • ಶಿಷ್ಯರಿಗೆ ಯೇಸು ಕಾಣಿಸ್ಕೊಂಡನು (1-14)

  • ಯೇಸು ಮೇಲೆ ಪ್ರೀತಿ ಇದೆ ಅಂತ ಹೇಳಿದ ಪೇತ್ರ (15-19)

    • “ನನ್ನ ಚಿಕ್ಕ ಕುರಿಗಳನ್ನ ಮೇಯಿಸು” (17)

  • ಪ್ರೀತಿಯ ಶಿಷ್ಯರ ಮುಂದಿನ ಭವಿಷ್ಯ (20-23)

  • ಕೊನೇ ಮಾತು (24, 25)

21  ಯೇಸು ತಿಬೇರಿಯ ಸಮುದ್ರದ ಹತ್ರ ಶಿಷ್ಯರಿಗೆ ಮತ್ತೊಮ್ಮೆ ಕಾಣಿಸ್ಕೊಂಡನು. ಆಗ ಏನಾಯ್ತು ಅಂದ್ರೆ 2  ಸೀಮೋನ ಪೇತ್ರ, ಅವಳಿ+ ಅನ್ನೋ ಹೆಸ್ರಿದ್ದ ತೋಮ, ಗಲಿಲಾಯದ ಕಾನಾ ಅನ್ನೋ ಊರಿನ ನತಾನಯೇಲ,+ ಜೆಬೆದಾಯನ ಮಕ್ಕಳು+ ಮತ್ತು ಇನ್ನಿಬ್ರು ಶಿಷ್ಯರು ಒಂದು ಕಡೆ ಇದ್ರು. 3  ಆಗ ಸೀಮೋನ ಪೇತ್ರ ಅವ್ರಿಗೆ “ನಾನು ಮೀನು ಹಿಡಿಯೋಕೆ ಹೋಗ್ತಿದ್ದೀನಿ” ಅಂದ. ಅದಕ್ಕೆ ಉಳಿದವರು “ನಾವೂ ನಿನ್ನ ಜೊತೆ ಬರ್ತಿವಿ” ಅಂದ್ರು. ಎಲ್ರೂ ದೋಣಿ ಹತ್ತಿ ಮೀನು ಹಿಡಿಯೋಕೆ ಹೋದ್ರು. ಆದ್ರೆ ಆ ರಾತ್ರಿ ಅವ್ರಿಗೆ ಏನೂ ಸಿಗಲಿಲ್ಲ.+ 4  ಬೆಳಗಿನ ಜಾವ ಯೇಸು ಸಮುದ್ರ ತೀರದಲ್ಲಿ ನಿಂತಿದ್ದನು. ಆದ್ರೆ ಅದು ಯೇಸು ಅಂತ ಶಿಷ್ಯರಿಗೆ ಗೊತ್ತಾಗಲಿಲ್ಲ.+ 5  ಆಗ ಯೇಸು “ಮಕ್ಕಳೇ, ನಿಮ್ಮ ಹತ್ರ ತಿನ್ನೋಕೇನಾದ್ರೂ* ಇದ್ಯಾ?” ಅಂತ ಕೇಳಿದನು. ಅವರು, “ಇಲ್ಲ!” ಅಂದ್ರು. 6  ಆಗ ಯೇಸು “ದೋಣಿ ಬಲಗಡೆಯಲ್ಲಿ ಬಲೆ ಬೀಸಿ. ನಿಮಗೆ ಸ್ವಲ್ಪ ಮೀನು ಸಿಗುತ್ತೆ” ಅಂದನು. ಬಲೆ ಬೀಸಿದಾಗ ಸಿಕ್ಕಾಪಟ್ಟೆ ಮೀನು ಸಿಕ್ತು. ಬಲೆ ಎಳೆಯೋಕೆ ಆಗಲಿಲ್ಲ.+ 7  ಆಗ ಪೇತ್ರನಿಗೆ ಯೇಸುವಿನ ಪ್ರಿಯ ಶಿಷ್ಯ+ “ಅದು ಪ್ರಭುವೇ” ಅಂದ. ಪ್ರಭು ಅನ್ನೋದನ್ನ ಕೇಳಿಸ್ಕೊಂಡ ತಕ್ಷಣ ಸೀಮೋನ ಪೇತ್ರ ಅರೆಬೆತ್ತಲೆ ಆಗಿದ್ರಿಂದ ಬಟ್ಟೆ ಹಾಕೊಂಡು ನೀರಿಗೆ ಜಿಗಿದ. 8  ಆದ್ರೆ ಉಳಿದ ಶಿಷ್ಯರು ಮೀನು ತುಂಬಿದ್ದ ಬಲೆ ಎಳ್ಕೊಂಡು ಆ ಚಿಕ್ಕ ದೋಣಿಯಲ್ಲಿ ಬಂದ್ರು. ಯಾಕಂದ್ರೆ ಅವರು ತೀರದಿಂದ ಹೆಚ್ಚುಕಡಿಮೆ 90 ಮೀಟರಷ್ಟು* ಹತ್ರದಲ್ಲೇ ಇದ್ರು. 9  ಅವರು ದಡಕ್ಕೆ ಬಂದಾಗ ಕೆಂಡದ ಮೇಲಿದ್ದ ಮೀನನ್ನ, ರೊಟ್ಟಿಯನ್ನ ನೋಡಿದ್ರು. 10  ಯೇಸು “ನೀವು ಈಗತಾನೇ ಹಿಡಿದ ಮೀನಲ್ಲಿ ಸ್ವಲ್ಪ ಮೀನು ತನ್ನಿ” ಅಂದನು. 11  ಸೀಮೋನ ಪೇತ್ರ ದೋಣಿ ಹತ್ತಿ 153 ದೊಡ್ಡ ದೊಡ್ಡ ಮೀನಿದ್ದ ಬಲೆಯನ್ನ ದಡಕ್ಕೆ ಎಳ್ಕೊಂಡು ಬಂದ. ಅಷ್ಟೊಂದು ಮೀನಿದ್ರೂ ಬಲೆ ಹರಿಲಿಲ್ಲ. 12  ಯೇಸು “ಬನ್ನಿ, ಊಟ ಮಾಡಿ” ಅಂದನು. ಆತನೇ ಪ್ರಭು ಅಂತ ಶಿಷ್ಯರಿಗೆ ಗೊತ್ತಾಗಿತ್ತು. ಹಾಗಾಗಿ ಯೇಸುಗೆ “ನೀನ್ಯಾರು?” ಅಂತ ಕೇಳುವಷ್ಟು ಧೈರ್ಯ ಶಿಷ್ಯರಿಗೆ ಇರಲಿಲ್ಲ. 13  ಯೇಸು ರೊಟ್ಟಿ ತಗೊಂಡು ಅವ್ರಿಗೆ ಕೊಟ್ಟನು. ಮೀನನ್ನೂ ಕೊಟ್ಟನು. 14  ಯೇಸುಗೆ ಮತ್ತೆ ಜೀವ ಬಂದಮೇಲೆ ಶಿಷ್ಯರಿಗೆ ಕಾಣಿಸಿಕೊಂಡಿದ್ದು ಇದು ಮೂರನೇ ಸಾರಿ.+ 15  ಅವರು ಊಟ ಮಾಡಿದ ಮೇಲೆ ಯೇಸು ಸೀಮೋನ ಪೇತ್ರನಿಗೆ “ಯೋಹಾನನ ಮಗನಾದ ಸೀಮೋನ, ನೀನು ಇದಕ್ಕಿಂತ ಜಾಸ್ತಿ ನನ್ನನ್ನ ಪ್ರೀತಿಸ್ತೀಯಾ?” ಅಂತ ಕೇಳಿದನು. ಅದಕ್ಕೆ ಪೇತ್ರ “ಹೌದು ಪ್ರಭು, ನಾನು ನಿನ್ನನ್ನ ಎಷ್ಟು ಪ್ರೀತಿಸ್ತೀನಿ ಅಂತ ನಿಂಗೊತ್ತು” ಅಂದ. ಆಗ ಯೇಸು “ನನ್ನ ಕುರಿಮರಿಗಳನ್ನ ಮೇಯಿಸು”+ ಅಂದನು. 16  ಎರಡನೇ ಸಲ ಮತ್ತೆ ಆತನು “ಯೋಹಾನನ ಮಗನಾದ ಸೀಮೋನ, ನೀನು ನನ್ನನ್ನ ಪ್ರೀತಿಸ್ತೀಯಾ?” ಅಂತ ಕೇಳಿದನು. ಅದಕ್ಕೆ ಪೇತ್ರ “ಹೌದು ಪ್ರಭು ನಾನು ನಿನ್ನನ್ನ ಎಷ್ಟು ಪ್ರೀತಿಸ್ತೀನಿ ಅಂತ ನಿಂಗೊತ್ತು” ಅಂದ. ಆಗ ಯೇಸು “ನನ್ನ ಚಿಕ್ಕ ಕುರಿಗಳಿಗೆ ಕುರುಬನಾಗಿರು”+ ಅಂದನು. 17  ಮೂರನೇ ಸಲ ಯೇಸು ಪೇತ್ರನಿಗೆ “ಯೋಹಾನನ ಮಗನಾದ ಸೀಮೋನ, ನೀನು ನನ್ನನ್ನ ಪ್ರೀತಿಸ್ತೀಯಾ?” ಅಂತ ಕೇಳಿದನು. ಯೇಸು ಮೂರನೇ ಸಲ “ನೀನು ನನ್ನನ್ನ ಪ್ರೀತಿಸ್ತೀಯಾ?” ಅಂತ ಕೇಳಿದ್ದಕ್ಕೆ ಪೇತ್ರನಿಗೆ ಬೇಜಾರಾಯ್ತು. ಅವನು “ಪ್ರಭು, ನಿನಗೆಲ್ಲಾ ಗೊತ್ತು. ನಾನು ನಿನ್ನನ್ನ ಎಷ್ಟು ಪ್ರೀತಿಸ್ತೀನಿ ಅಂತನೂ ನಿಂಗೊತ್ತು” ಅಂದ. ಆಗ ಯೇಸು ಅವನಿಗೆ “ನನ್ನ ಚಿಕ್ಕ ಕುರಿಗಳನ್ನ ಮೇಯಿಸು.+ 18  ನಾನು ನಿಜ ಹೇಳ್ತೀನಿ, ನೀನು ಯುವಕನಾಗಿದ್ದಾಗ ನೀನೇ ಬಟ್ಟೆ ಹಾಕೊಂಡು ನಿನಗೆ ಇಷ್ಟ ಇರೋ ಕಡೆ ಹೋಗ್ತಿದ್ದೆ. ಆದ್ರೆ ನೀನು ವಯಸ್ಸಾದಾಗ ನಿನ್ನ ಕೈ ಚಾಚ್ತೀಯ, ಬೇರೆಯವರು ನಿನಗೆ ಬಟ್ಟೆ ಹಾಕಿ ನಿನಗೆ ಇಷ್ಟ ಇಲ್ಲದಿರೋ ಜಾಗಕ್ಕೆ ನಿನ್ನನ್ನ ಕರ್ಕೊಂಡು ಹೋಗ್ತಾರೆ” ಅಂದನು. 19  ಪೇತ್ರ ನಂಬಿಕೆ ಕಾಪಾಡ್ಕೊಳ್ಳೋದ್ರಿಂದ ಅವನಿಗೆ ಎಂಥ ಸಾವು ಬರುತ್ತೆ ಅಂತ ಮತ್ತು ದೇವ್ರಿಗೆ ಅದ್ರಿಂದ ಹೊಗಳಿಕೆ ಸಿಗುತ್ತೆ ಅಂತ ಯೇಸು ಹೇಳ್ತಿದ್ದನು. ಇದನ್ನ ಹೇಳಿದ ಮೇಲೆ ಯೇಸು ಪೇತ್ರನಿಗೆ “ನನ್ನನ್ನ ಹಿಂಬಾಲಿಸ್ತಾ ಇರು”+ ಅಂದನು. 20  ಪೇತ್ರ ಹಿಂದೆ ತಿರುಗಿ ನೋಡಿದಾಗ ಯೇಸುವಿನ ಪ್ರಿಯ ಶಿಷ್ಯ+ ಹಿಂದೆ ಬರೋದನ್ನ ನೋಡಿದ. ಅವನು ರಾತ್ರಿ ಊಟಕ್ಕೆ ಕೂತಾಗ ಯೇಸುವಿನ ಎದೆಗೆ ಒರಗಿ “ಪ್ರಭು ನಿನಗೆ ಮೋಸಮಾಡಿ ಹಿಡಿದುಕೊಡುವವನು ಯಾರು?” ಅಂತ ಕೇಳಿದ್ದ. 21  ಅವನನ್ನ ನೋಡಿ ಪೇತ್ರ ಯೇಸುಗೆ “ಪ್ರಭು ಇವನಿಗೇನು ಆಗುತ್ತೆ?” ಅಂತ ಕೇಳಿದ. 22  ಆಗ ಯೇಸು “ನಾನು ಬರೋ ತನಕ ಇವನು ಇರಬೇಕು ಅನ್ನೋದು ನನ್ನಿಷ್ಟ ಆಗಿದ್ರೆ ನಿನಗೇನು ಸಮಸ್ಯೆ? ನೀನು ನನ್ನನ್ನ ಹಿಂಬಾಲಿಸ್ತಾ ಇರು” ಅಂದನು. 23  ಹಾಗಾಗಿ ಆ ಶಿಷ್ಯ ಸಾಯಲ್ಲ ಅನ್ನೋ ಮಾತು ಸಹೋದರರಲ್ಲಿ ಹಬ್ಬಿತು. ಆದ್ರೆ ಆತನು ಸಾಯಲ್ಲ ಅಂತ ಯೇಸು ಹೇಳಿರಲಿಲ್ಲ. ಬದಲಿಗೆ “ನಾನು ಬರೋ ತನಕ ಅವನು ಇರಬೇಕು ಅನ್ನೋದು ನನ್ನಿಷ್ಟ ಆಗಿದ್ರೆ ನಿನಗೇನು ಸಮಸ್ಯೆ?” ಅಂತ ಮಾತ್ರ ಹೇಳಿದ್ದನು. 24  ಈ ವಿಷ್ಯಗಳನ್ನ ಕಣ್ಣಾರೆ ಕಂಡು ಹೇಳ್ತಿರೋದು, ಬರಿತಿರೋದು ಆ ಶಿಷ್ಯನೇ.+ ಅವನು ಹೇಳೋದೆಲ್ಲ ಸತ್ಯ ಅಂತ ನಮಗೆ ಗೊತ್ತು. 25  ನಿಜ ಹೇಳಬೇಕಂದ್ರೆ, ಯೇಸು ಮಾಡಿದ ವಿಷ್ಯಗಳು ಇನ್ನೂ ತುಂಬಾ ಇದೆ. ಅದ್ರಲ್ಲಿ ಒಂದೊಂದರ ಬಗ್ಗೆ ವಿವರವಾಗಿ ಬರೆದ್ರೆ ಆ ಸುರುಳಿಗಳನ್ನ ಇಡೋಕೆ ಈ ಲೋಕಾನೇ ಸಾಕಾಗಲ್ಲ+ ಅಂತ ನನಗನಿಸುತ್ತೆ.

ಪಾದಟಿಪ್ಪಣಿ

ಅಥವಾ “ತಿನ್ನೋಕೆ ಮೀನು.”
ಅಕ್ಷ. “ಸುಮಾರು 200 ಮೊಳ.” ಪರಿಶಿಷ್ಟ ಬಿ14 ನೋಡಿ.