ಯೋಹಾನ 2:1-25

  • ಕಾನಾದ ಮದುವೆಯಲ್ಲಿ ನೀರು ದ್ರಾಕ್ಷಾಮದ್ಯ (1-12)

  • ಯೇಸು ದೇವಾಲಯ ಶುಚಿ ಮಾಡಿದನು (13-22)

  • ಮನುಷ್ಯರ ಮನಸ್ಸಲ್ಲಿ ಏನಿದೆ ಅಂತ ಯೇಸುಗೆ ಗೊತ್ತು (23-25)

2  ಎರಡು ದಿನ ಆದಮೇಲೆ ಗಲಿಲಾಯದ ಕಾನಾದಲ್ಲಿ ಒಂದು ಮದುವೆ ಊಟ ಇತ್ತು. ಯೇಸುವಿನ ಅಮ್ಮ ಸಹ ಅಲ್ಲಿದ್ದಳು. 2  ಆ ಮದುವೆ ಊಟಕ್ಕೆ ಯೇಸು ಮತ್ತು ಶಿಷ್ಯರನ್ನೂ ಕರೆದಿದ್ರು. 3  ದ್ರಾಕ್ಷಾಮದ್ಯ ಖಾಲಿ ಆಗ್ತಿದ್ದಾಗ ಯೇಸುವಿನ ಅಮ್ಮ ಆತನ ಹತ್ರ “ದ್ರಾಕ್ಷಾಮದ್ಯ ಖಾಲಿ ಆಗಿಬಿಡ್ತು” ಅಂದಳು. 4  ಅದಕ್ಕೆ ಯೇಸು “ಅಮ್ಮಾ,* ಅದ್ರ ಬಗ್ಗೆ ನಾವ್ಯಾಕೆ ಚಿಂತೆ ಮಾಡಬೇಕು? ನಾನು ಅದ್ಭುತ ಮಾಡೋ ಸಮಯ ಇನ್ನೂ ಬಂದಿಲ್ಲ” ಅಂದನು. 5  ಆಗ ಅಮ್ಮ ಅಲ್ಲಿದ್ದ ಕೆಲಸದವ್ರಿಗೆ “ಆತನು ನಿಮಗೆ ಏನೇ ಹೇಳಿದ್ರೂ ಅದನ್ನ ಮಾಡಿ” ಅಂದಳು. 6  ಅಲ್ಲಿ ನೀರು ತುಂಬಿಡೋಕೆ ಕಲ್ಲಿನ ಆರು ಹಂಡೆ ಇತ್ತು. ಯೆಹೂದ್ಯರು ತಮ್ಮನ್ನ ಶುದ್ಧ ಮಾಡ್ಕೊಳ್ಳೋಕೆ ಆ ರೀತಿ ನೀರು ಇಡಬೇಕು ಅನ್ನೋ ನಿಯಮ ಇತ್ತು.+ ಒಂದು ಹಂಡೆಯಲ್ಲಿ ಸುಮಾರು 44ರಿಂದ 66 ಲೀಟರ್‌ ಅಷ್ಟು* ನೀರು ಹಿಡಿತಿತ್ತು. 7  ಯೇಸು ಆ ಕೆಲಸದವ್ರಿಗೆ “ಹಂಡೆಗಳಿಗೆ ನೀರು ತುಂಬಿಸಿ” ಅಂದನು. ಅವರು ಪೂರ್ತಿ ತುಂಬಿಸಿದ್ರು. 8  ಆಮೇಲೆ ಯೇಸು “ಇದ್ರಲ್ಲಿ ಸ್ವಲ್ಪ ತಗೊಂಡು ಮದುವೆ ಊಟದ ನಿರ್ದೇಶಕನಿಗೆ ಕೊಡಿ” ಅಂದನು. ಅವರು ಕೊಟ್ರು. 9  ಆ ನೀರು ದ್ರಾಕ್ಷಾಮದ್ಯವಾಗಿ ಬದಲಾಗಿತ್ತು. ಮದುವೆ ಊಟದ ನಿರ್ದೇಶಕನಿಗೆ ಅದು ಎಲ್ಲಿಂದ ಬಂತು ಅಂತ ಗೊತ್ತಿರಲಿಲ್ಲ. ಅವನು ರುಚಿ ನೋಡಿ (ಆದ್ರೆ ಅದನ್ನ ತಂದು ಕೊಟ್ಟಿದ್ದ ಕೆಲಸದವ್ರಿಗೆ ಅದು ಹೇಗೆ ಬಂತು ಅಂತ ಗೊತ್ತಿತ್ತು.) ಮದುಮಗನನ್ನ ಕರೆದು 10  “ಎಲ್ರೂ ಚೆನ್ನಾಗಿರೋ ದ್ರಾಕ್ಷಾಮದ್ಯ ಮೊದಲು ಕೊಡ್ತಾರೆ. ಜನ್ರಿಗೆ ಮತ್ತೇರಿದ ಮೇಲೆ ಅಷ್ಟೇನೂ ಚೆನ್ನಾಗಿಲ್ಲದ ದ್ರಾಕ್ಷಾಮದ್ಯ ಕೊಡ್ತಾರೆ. ಆದ್ರೆ ನೀನು ಚೆನ್ನಾಗಿರೋ ದ್ರಾಕ್ಷಾಮದ್ಯವನ್ನೇ ಕೊನೆ ತನಕ ಕೊಡ್ತಾ ಇದ್ದೀಯಲ್ಲಾ?” ಅಂದ. 11  ಹೀಗೆ ಗಲಿಲಾಯದ ಕಾನಾದಲ್ಲಿ ಯೇಸು ಮೊದಲನೇ ಅದ್ಭುತ ಮಾಡಿದನು. ಈ ಅದ್ಭುತ ಮಾಡಿ ಯೇಸು ತನ್ನ ಶಕ್ತಿ ತೋರಿಸಿದನು.+ ಶಿಷ್ಯರು ಆತನಲ್ಲಿ ನಂಬಿಕೆ ಇಟ್ರು. 12  ಆಮೇಲೆ ಆತನ ಅಮ್ಮ, ತಮ್ಮಂದಿರು,+ ಶಿಷ್ಯರು ಯೇಸು ಜೊತೆ ಕಪೆರ್ನೌಮಿಗೆ+ ಹೋದ್ರು. ಆದ್ರೆ ಅವರು ಅಲ್ಲಿ ತುಂಬ ದಿನ ಇರಲಿಲ್ಲ. 13  ಯೆಹೂದ್ಯರ ಪಸ್ಕ ಹಬ್ಬ+ ಹತ್ರ ಆಗಿತ್ತು. ಹಾಗಾಗಿ ಯೇಸು ಯೆರೂಸಲೇಮಿಗೆ ಹೋದನು. 14  ದೇವಾಲಯಕ್ಕೆ ಹೋದಾಗ ಜನ ಪಶು, ಕುರಿ, ಪಾರಿವಾಳಗಳನ್ನ+ ಮಾರುತ್ತಾ ಇರೋದನ್ನ, ಹಣ ಬದಲಾಯಿಸ್ತಿದ್ದ ಜನ ಕುರ್ಚಿಗಳಲ್ಲಿ ಕೂತಿರೋದನ್ನ ನೋಡಿದನು. 15  ಆತನು ಹಗ್ಗದಿಂದ ಚಾಟಿ ಮಾಡಿ ಕುರಿ, ಪಶುಗಳನ್ನ ಸೇರಿಸಿ ಜನ್ರನ್ನೆಲ್ಲ ದೇವಾಲಯದಿಂದ ಓಡಿಸಿದನು. ಹಣ ಬದಲಾಯಿಸ್ತಿದ್ದವ್ರ ನಾಣ್ಯಗಳನ್ನ ಚೆಲ್ಲಿ ಅವ್ರ ಮೇಜುಗಳನ್ನ ಬೀಳಿಸಿದನು.+ 16  ಪಾರಿವಾಳ ಮಾರುತ್ತಿದ್ದವ್ರಿಗೆ “ಇದನ್ನೆಲ್ಲ ಇಲ್ಲಿಂದ ತಗೊಂಡು ಹೋಗಿ! ನನ್ನ ತಂದೆಯ ಆಲಯದಲ್ಲಿ ನಿಮ್ಮ ಸಂತೆ* ನಿಲ್ಲಿಸಿ!” ಅಂದನು.+ 17  ಆಗ ಶಿಷ್ಯರಿಗೆ ಪವಿತ್ರ ಗ್ರಂಥದಲ್ಲಿರೋ “ನಿನ್ನ ಆಲಯದ ಕಡೆಗಿರೋ ಹುರುಪು ನನ್ನೊಳಗೆ ಹೊತ್ತಿ ಉರಿತಿದೆ”+ ಅನ್ನೋ ಮಾತು ನೆನಪಾಯ್ತು. 18  ಇದನ್ನ ನೋಡಿ ಯೆಹೂದ್ಯರು ಯೇಸುಗೆ “ಇದನ್ನೆಲ್ಲ ಮಾಡೋ ಅಧಿಕಾರ ನಿನಗಿದೆ ಅಂತ ನಾವು ನಂಬಬೇಕಂದ್ರೆ ಒಂದು ಅದ್ಭುತ ಮಾಡಿ ತೋರಿಸು”+ ಅಂದ್ರು. 19  ಅದಕ್ಕೆ ಯೇಸು “ಈ ಆಲಯವನ್ನ ಕೆಡವಿ ಮೂರೇ ದಿನದಲ್ಲಿ ಎಬ್ಬಿಸ್ತೀನಿ” ಅಂದನು.+ 20  ಆಗ ಯೆಹೂದ್ಯರು “ಈ ಆಲಯ ಕಟ್ಟಕ್ಕೆ 46 ವರ್ಷ ಹಿಡಿತು. ನೀನು ಇದನ್ನ ಮೂರೇ ದಿನದಲ್ಲಿ ಎಬ್ಬಿಸ್ತೀಯಾ?” ಅಂತ ಕೇಳಿದ್ರು. 21  ಯೇಸು ನಿಜವಾದ ಆಲಯದ ಬಗ್ಗೆ ಅಲ್ಲ, ತನ್ನ ದೇಹದ ಬಗ್ಗೆ ಮಾತಾಡ್ತಾ ಇದ್ದನು.+ 22  ಯೇಸು ಹೇಳ್ತಿದ್ದ ಈ ಮಾತು ಆತನು ಸತ್ತು ಬದುಕಿದ ಮೇಲೆ ಶಿಷ್ಯರಿಗೆ ನೆನಪಾಯ್ತು.+ ಅವರು ಪವಿತ್ರ ಗ್ರಂಥವನ್ನ ಮತ್ತು ಆತನ ಮಾತುಗಳನ್ನ ನಂಬಿದ್ರು. 23  ಯೇಸು ಪಸ್ಕ ಹಬ್ಬದ ಸಮಯದಲ್ಲಿ ಯೆರೂಸಲೇಮಲ್ಲಿ ಅದ್ಭುತಗಳನ್ನ ಮಾಡಿದನು. ಅದನ್ನ ನೋಡಿ ತುಂಬ ಜನ ಆತನಲ್ಲಿ ನಂಬಿಕೆ ಇಟ್ರು. 24  ಯೇಸುಗೆ ಜನ್ರ ಬುದ್ಧಿ ಚೆನ್ನಾಗಿ ಗೊತ್ತಿದ್ರಿಂದ ಅವ್ರನ್ನ ಕಣ್ಣುಮುಚ್ಚಿ ನಂಬಲಿಲ್ಲ. 25  ಮನುಷ್ಯರ ಬಗ್ಗೆ ಆತನಿಗೆ ಯಾರೂ ಹೇಳೋ ಅವಶ್ಯಕತೆ ಇರ್ಲಿಲ್ಲ. ಯಾಕಂದ್ರೆ ಮನುಷ್ಯನ ಮನಸ್ಸಲ್ಲಿ ಏನಿದೆ ಅಂತ ಆತನಿಗೆ ಚೆನ್ನಾಗಿ ಗೊತ್ತಿತ್ತು.+

ಪಾದಟಿಪ್ಪಣಿ

ಅಕ್ಷ. “ಸ್ತ್ರೀ.”
ಅಕ್ಷ. “ಎರಡರಿಂದ ಮೂರು ಅಳತೆ ನೀರು.” ಇಲ್ಲಿ ಬತ್‌ ಅಳತೆ ಬಗ್ಗೆ ಮಾತಾಡ್ತಿರಬಹುದು. 1 ಬತ್‌=22 ಲೀ. ಪರಿಶಿಷ್ಟ ಬಿ14 ನೋಡಿ.
ಅಥವಾ “ಮಾರುಕಟ್ಟೆ, ವ್ಯಾಪಾರ.”