ಯೆಹೆಜ್ಕೇಲ 44:1-31

  • ಪೂರ್ವ ಬಾಗಿಲು ಯಾವಾಗ್ಲೂ ಮುಚ್ಚಿರಬೇಕು (1-3)

  • ವಿದೇಶಿಯರ ಬಗ್ಗೆ ನಿಯಮಗಳು (4-9)

  • ಲೇವಿಯರಿಗೆ ಮತ್ತು ಯಾಜಕರಿಗೆ ನಿಯಮಗಳು (10-31)

44  ಅವನು ಮತ್ತೆ ನನ್ನನ್ನ ಆರಾಧನಾ ಸ್ಥಳದ ಹೊರಗಿನ ಬಾಗಿಲಿಗೆ ಅಂದ್ರೆ ಪೂರ್ವಕ್ಕೆ ಮುಖಮಾಡಿದ್ದ ಬಾಗಿಲಿಗೆ ಕರ್ಕೊಂಡು ಹೋದ.+ ಆ ಬಾಗಿಲು ಮುಚ್ಚಿತ್ತು.+ 2  ಆಗ ಯೆಹೋವ ನನಗೆ ಹೀಗಂದನು: “ಈ ಬಾಗಿಲು ಯಾವಾಗ್ಲೂ ಮುಚ್ಚಿರಬೇಕು, ಇದನ್ನ ತೆಗೀಬಾರದು. ಯಾರೂ ಇದ್ರೊಳಗಿಂದ ಬರಬಾರದು. ಯಾಕಂದ್ರೆ ಇಸ್ರಾಯೇಲಿನ ದೇವರಾದ ಯೆಹೋವ ಈ ಬಾಗಿಲಿಂದ ಬಂದಿದ್ದಾನೆ.+ ಹಾಗಾಗಿ ಇದು ಮುಚ್ಚೇ ಇರಬೇಕು. 3  ಆದ್ರೆ ಯೆಹೋವನ ಮುಂದೆ ಆಹಾರ ತಿನ್ನೋಕೆ ಪ್ರಧಾನ ಅಲ್ಲಿ ಕೂತ್ಕೊತಾನೆ.+ ಯಾಕಂದ್ರೆ ಅವನು ಪ್ರಧಾನ. ಅವನು ಆ ಬಾಗಿಲಿನ ಮಂಟಪದ ಒಳಗಿಂದ ಬಂದು ಅಲ್ಲಿಂದಾನೇ ಹೊರಗೆ ಹೋಗ್ತಾನೆ.”+ 4  ಆಮೇಲೆ ಆ ಪುರುಷ ನನ್ನನ್ನ ಉತ್ತರ ಬಾಗಿಲಿಂದ ದೇವಾಲಯದ ಮುಂದೆ ಕರ್ಕೊಂಡು ಬಂದ. ಯೆಹೋವನ ಆಲಯದಲ್ಲೆಲ್ಲ ಯೆಹೋವನ ಮಹಿಮೆ ತುಂಬ್ಕೊಂಡಿತ್ತು.+ ನಾನು ಅದನ್ನ ನೋಡಿ ನೆಲದ ಮೇಲೆ ಅಡ್ಡಬಿದ್ದೆ.+ 5  ಆಗ ಯೆಹೋವ ನನಗೆ ಹೀಗಂದನು: “ಮನುಷ್ಯಕುಮಾರನೇ, ನಾನು ನಿನಗೆ ಯೆಹೋವನ ಆಲಯದ ಶಾಸನಗಳ ಬಗ್ಗೆ ಮತ್ತು ನಿಯಮಗಳ ಬಗ್ಗೆ ಹೇಳೋ ಪ್ರತಿಯೊಂದು ಮಾತಿಗೆ ಗಮನಕೊಡು, ಅದನ್ನ ಚೆನ್ನಾಗಿ ಕೇಳಿಸ್ಕೊ. ನಾನು ತೋರಿಸೋದನ್ನೆಲ್ಲ ಜಾಗ್ರತೆಯಿಂದ ನೋಡು. ದೇವಾಲಯದ ಬಾಗಿಲಿಗೆ ಮತ್ತು ಆರಾಧನಾ ಸ್ಥಳದಿಂದ ಹೊರಗೆ ಹೋಗೋ ಬಾಗಿಲುಗಳಿಗೆ ಜಾಗ್ರತೆಯಿಂದ ಗಮನಕೊಡು.+ 6  ದಂಗೆಕೋರ ಇಸ್ರಾಯೇಲ್ಯರಿಗೆ ನೀನು ಏನು ಹೇಳಬೇಕಂದ್ರೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ: “ಇಸ್ರಾಯೇಲ್ಯರೇ, ನಿಮ್ಮದು ತುಂಬ ಅತಿಯಾಯ್ತು, ತುಂಬ ಅಸಹ್ಯ ಕೆಲಸಗಳನ್ನ ಮಾಡ್ತಿದ್ದೀರ. 7  ಹೃದಯದಲ್ಲೂ ದೇಹದಲ್ಲೂ ಸುನ್ನತಿ ಆಗಿರದ ವಿದೇಶಿಯರನ್ನ ನನ್ನ ಆರಾಧನಾ ಸ್ಥಳದ ಒಳಗೆ ಕರ್ಕೊಂಡು ಬರ್ತಿದ್ದೀರ. ಅವರು ನನ್ನ ಆರಾಧನಾ ಸ್ಥಳವನ್ನ ಅಪವಿತ್ರ ಮಾಡ್ತಿದ್ದಾರೆ. ನೀವು ನನಗೆ ರೊಟ್ಟಿ, ಕೊಬ್ಬು, ರಕ್ತವನ್ನ ಕೊಡ್ತಿದ್ದೀರ. ಅದೇ ಸಮಯದಲ್ಲಿ ಅಸಹ್ಯ ಕೆಲಸಗಳನ್ನ ಮಾಡಿ ನನ್ನ ಒಪ್ಪಂದವನ್ನ ಮುರೀತಾ ಇದ್ದೀರ. 8  ನೀವು ನನ್ನ ಆಲಯದ ಪವಿತ್ರ ವಸ್ತುಗಳನ್ನ ನೋಡ್ಕೊಳ್ಳಿಲ್ಲ.+ ನನ್ನ ಆರಾಧನಾ ಸ್ಥಳದಲ್ಲಿ ನೀವು ಮಾಡಬೇಕಾದ ಕರ್ತವ್ಯಗಳನ್ನ ಬೇರೆಯವ್ರಿಗೆ ಹೇಳ್ತಿದ್ದೀರ.”’ 9  ‘ವಿಶ್ವದ ರಾಜ ಯೆಹೋವ ಹೀಗಂತಾನೆ: “ಇಸ್ರಾಯೇಲಲ್ಲಿ ವಾಸ ಮಾಡ್ತಾ ಹೃದಯದಲ್ಲೂ ದೇಹದಲ್ಲೂ ಸುನ್ನತಿ ಆಗಿರದ ಯಾವ ವಿದೇಶಿನೂ ನನ್ನ ಆರಾಧನಾ ಸ್ಥಳದ ಒಳಗೆ ಬರಬಾರದು.”’ 10  ‘ಇಸ್ರಾಯೇಲ್ಯರು ನನ್ನಿಂದ ದೂರ ಹೋಗಿ ಅಸಹ್ಯ ಮೂರ್ತಿಗಳನ್ನ* ಆರಾಧಿಸಿದಾಗ ನನ್ನನ್ನ ಬಿಟ್ಟು ದೂರ ಹೋದ ಲೇವಿಯರು+ ತಾವು ಮಾಡಿದ ಪಾಪದ ಪರಿಣಾಮಗಳನ್ನ ಅನುಭವಿಸ್ತಾರೆ. 11  ಆಮೇಲೆ ಅವರು ನನ್ನ ಆರಾಧನಾ ಸ್ಥಳದ ಸೇವಕರಾಗಿ ಆಲಯದ ಬಾಗಿಲುಗಳನ್ನ ನೋಡ್ಕೊಳ್ತಾರೆ,+ ಆಲಯದಲ್ಲಿ ಸೇವೆ ಮಾಡ್ತಾರೆ. ಅವರು ಜನ್ರಿಗೋಸ್ಕರ ಸರ್ವಾಂಗಹೋಮ ಬಲಿ ಮತ್ತು ಬೇರೆ ಬಲಿಗಳ ಪ್ರಾಣಿಗಳನ್ನ ಕಡೀತಾರೆ. ಅವರು ಜನ್ರ ಮುಂದೆ ನಿಂತು ಜನ್ರ ಸೇವೆ ಮಾಡ್ತಾರೆ. 12  ಈ ಹಿಂದೆ ಅವರು ಜನ್ರ ಹೊಲಸು ಮೂರ್ತಿಗಳ ಮುಂದೆ ನಿಂತು ಜನ್ರ ಸೇವೆ ಮಾಡಿದ್ರು. ಇಸ್ರಾಯೇಲ್ಯರು ಪಾಪ ಮಾಡಿದ್ರಿಂದ ಆ ಲೇವಿಯರು ಅವ್ರಿಗೆ ಎಡವಿಸೋ ಕಲ್ಲಾದ್ರು.+ ಹಾಗಾಗಿ ನಾನು ಕೈಯೆತ್ತಿ ಅವ್ರ ವಿರುದ್ಧ ಪ್ರಮಾಣ ಮಾಡಿ ಹೇಳ್ತಿದ್ದೀನಿ, ಅವರು ಮಾಡಿದ ಪಾಪದ ಪರಿಣಾಮಗಳನ್ನ ಅನುಭವಿಸ್ತಾರೆ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ. 13  ‘ಅವರು ನನ್ನ ಮುಂದೆ ಬಂದು ನನ್ನ ಪುರೋಹಿತರಾಗಿ ಸೇವೆ ಮಾಡೋಕೆ ಆಗಲ್ಲ. ನನ್ನ ಪವಿತ್ರವಾದ ಮತ್ತು ಅತಿ ಪವಿತ್ರವಾದ ಯಾವ ವಸ್ತುಗಳ ಹತ್ರ ಹೋಗೋಕೂ ಅವ್ರಿಗೆ ಆಗಲ್ಲ. ಅವರು ಅಸಹ್ಯ ಕೆಲಸಗಳನ್ನ ಮಾಡಿದ್ರಿಂದ ನಾಚಿಕೆಪಡಬೇಕಾಗುತ್ತೆ. 14  ಆದ್ರೆ ದೇವಾಲಯದ ಜವಾಬ್ದಾರಿಗಳನ್ನ ಅಂದ್ರೆ ಅಲ್ಲಿ ನಡೀಬೇಕಾದ ಸೇವೆ, ಎಲ್ಲ ಕೆಲಸಗಳನ್ನ ನೋಡ್ಕೊಳ್ಳೋ ಜವಾಬ್ದಾರಿಗಳನ್ನ ನಾನು ಅವ್ರಿಗೆ ಕೊಡ್ತೀನಿ.’+ 15  ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಇಸ್ರಾಯೇಲ್ಯರು ನನ್ನಿಂದ ದೂರ ಹೋಗಿದ್ದಾಗ ಲೇವಿಯರೂ ಚಾದೋಕನ+ ವಂಶದವರೂ ಆದ ಪುರೋಹಿತರು ಹಾಗೆ ಮಾಡದೆ ನನ್ನ ಆರಾಧನಾ ಸ್ಥಳದ ಜವಾಬ್ದಾರಿಗಳನ್ನ ನೋಡ್ಕೊಂಡ್ರು.+ ಹಾಗಾಗಿ ಅವರು ನನ್ನ ಮುಂದೆ ಬಂದು ನನ್ನ ಸೇವೆ ಮಾಡ್ತಾರೆ. ನನ್ನ ಮುಂದೆ ನಿಂತು ನನಗೆ ಕೊಬ್ಬು+ ಮತ್ತು ರಕ್ತವನ್ನ ಕೊಡ್ತಾರೆ.+ 16  ನನ್ನ ಆರಾಧನಾ ಸ್ಥಳದ ಒಳಗೆ ಬರೋರು ಅವ್ರೇ. ಅವರು ನನ್ನ ಮೇಜಿನ* ಹತ್ರ ಬಂದು ನನ್ನ ಸೇವೆ ಮಾಡ್ತಾರೆ.+ ಅವ್ರಿಗೆ ನಾನು ಕೊಟ್ಟ ಜವಾಬ್ದಾರಿಗಳನ್ನ ನೋಡ್ಕೊಳ್ತಾರೆ.+ 17  ಅವರು ಒಳಗಿನ ಅಂಗಳಕ್ಕೆ ಬರುವಾಗ ನಾರಿನ ಬಟ್ಟೆಗಳನ್ನ ಹಾಕೊಬೇಕು.+ ಒಳಗಿನ ಅಂಗಳದಲ್ಲಿ ಅಥವಾ ಅದ್ರ ಬಾಗಿಲಲ್ಲಿ ಸೇವೆಮಾಡುವಾಗ ಅವರು ಯಾವ ಉಣ್ಣೆ ಬಟ್ಟೆಯನ್ನೂ ಹಾಕಿರಬಾರದು. 18  ಅವರು ನಾರುಬಟ್ಟೆಯ ಪೇಟ, ನಾರುಬಟ್ಟೆಯ ಚಡ್ಡಿಯನ್ನ ಹಾಕಿರಬೇಕು.+ ಬೆವರು ಬರಿಸೋ ಯಾವ ಬಟ್ಟೆಯನ್ನೂ ಅವರು ಹಾಕಿರಬಾರದು. 19  ಜನ ಇರೋ ಹೊರಗಿನ ಅಂಗಳಕ್ಕೆ ಹೋಗೋ ಮುಂಚೆ ಆ ಪುರೋಹಿತರು ಬೇರೆ ಬಟ್ಟೆಗಳನ್ನ ಹಾಕೊಬೇಕು. ಒಳಗೆ ಸೇವೆ ಮಾಡುವಾಗ ಹಾಕಿದ್ದ ಬಟ್ಟೆಗಳನ್ನ ಪವಿತ್ರ ಊಟದ ಕೋಣೆಗಳಲ್ಲಿ ತೆಗೆದು ಇಡಬೇಕು.+ ಆ ಬಟ್ಟೆಗಳಿಂದ ಪವಿತ್ರತೆಯನ್ನ ಬೇರೆಯವ್ರಿಗೆ ದಾಟಿಸದೆ ಇರೋಕೆ ಪುರೋಹಿತರು ಹಾಗೆ ಮಾಡಬೇಕು. 20  ಅವರು ತಮ್ಮ ತಲೆ ಬೋಳಿಸಬಾರದು.+ ಅವರು ತಮ್ಮ ತಲೆ ಕೂದಲನ್ನ ಉದ್ದ ಬೆಳೆಸದೆ ನೀಟಾಗಿ ಕತ್ತರಿಸಬೇಕು. 21  ಪುರೋಹಿತರು ಒಳಗಿನ ಅಂಗಳಕ್ಕೆ ಹೋಗುವಾಗ ದ್ರಾಕ್ಷಾಮದ್ಯ ಕುಡಿದಿರಬಾರದು.+ 22  ಅವರು ವಿಧವೆಯನ್ನಾಗಲಿ ವಿಚ್ಛೇದನ ಆಗಿರೋ ಹೆಂಗಸನ್ನಾಗಲಿ ಮದುವೆ ಆಗಬಾರದು.+ ಆದ್ರೆ ಇಸ್ರಾಯೇಲ್ಯರ ಕನ್ಯೆಯನ್ನ ಅಥವಾ ಪುರೋಹಿತನ ಹೆಂಡತಿಯಾಗಿದ್ದು ವಿಧವೆ ಆದವಳನ್ನ ಮದುವೆ ಆಗಬಹುದು.’+ 23  ‘ಅವರು ನನ್ನ ಜನ್ರಿಗೆ ಪವಿತ್ರ ಮತ್ತು ಸಾಮಾನ್ಯ ವಿಷ್ಯಗಳ, ಶುದ್ಧ ಮತ್ತು ಅಶುದ್ಧ ವಿಷ್ಯಗಳ ಮಧ್ಯ ಇರೋ ವ್ಯತ್ಯಾಸವನ್ನ ಕಲಿಸಬೇಕು.+ 24  ಅವರು ನ್ಯಾಯಾಧೀಶರಾಗಿದ್ದು ಮೊಕದ್ದಮೆಯನ್ನ ವಿಚಾರಿಸಬೇಕು.+ ನನ್ನ ತೀರ್ಪುಗಳ ಪ್ರಕಾರ ತೀರ್ಪು ಕೊಡಬೇಕು.+ ನನ್ನ ಎಲ್ಲ ಹಬ್ಬಗಳ ವಿಷ್ಯದಲ್ಲಿ ನಾನು ಕೊಟ್ಟ ನಿಯಮಗಳನ್ನ, ಶಾಸನಗಳನ್ನ ಪಾಲಿಸಬೇಕು.+ ನನ್ನ ಸಬ್ಬತ್‌ಗಳನ್ನ ಪವಿತ್ರವಾಗಿ ನೋಡಬೇಕು. 25  ಯಾವ ಮನುಷ್ಯನ ಶವದ ಹತ್ರಾನೂ ಅವರು ಹೋಗಬಾರದು, ಹೋದ್ರೆ ಅಶುದ್ಧರಾಗ್ತಾರೆ. ಆದ್ರೆ ಅವ್ರ ಅಪ್ಪ, ಅಮ್ಮ, ಮಗ, ಮಗಳು, ಅಣ್ಣ, ತಮ್ಮ ಅಥವಾ ಮದುವೆ ಆಗಿರದ ಅಕ್ಕ, ತಂಗಿ ತೀರಿ ಹೋದ್ರೆ ಅವ್ರ ಶವದ ಹತ್ರ ಹೋಗಬಹುದು, ತಮ್ಮನ್ನ ಅಶುದ್ಧ ಮಾಡ್ಕೊಬಹುದು.+ 26  ಒಬ್ಬ ಪುರೋಹಿತ ಶುದ್ಧ ಆದಮೇಲೆ ಸೇವೆ ಮಾಡೋಕೆ ಏಳು ದಿನ ಕಾಯಬೇಕು. 27  ಅವನು ಸೇವೆ ಮಾಡೋಕೆ ಪವಿತ್ರವಾದ ಸ್ಥಳದ ಒಳಗೆ ಅಂದ್ರೆ ಒಳಗಿನ ಅಂಗಳದ ಒಳಗೆ ಹೋದ ದಿನ ಅವನಿಗಾಗಿ ಪಾಪಪರಿಹಾರಕ ಬಲಿಯನ್ನ ಕೊಡಬೇಕು’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ. 28  ‘ನಾನೇ ಪುರೋಹಿತರ ಆಸ್ತಿ. ನೀವು ಇಸ್ರಾಯೇಲಲ್ಲಿ ಅವ್ರಿಗೆ ಯಾವ ಸೊತ್ತನ್ನೂ ಕೊಡಬಾರದು. ಯಾಕಂದ್ರೆ ನಾನೇ ಅವ್ರ ಸೊತ್ತು.+ 29  ಧಾನ್ಯ ಅರ್ಪಣೆ,+ ಪಾಪಪರಿಹಾರಕ ಬಲಿ ಮತ್ತು ದೋಷಪರಿಹಾರಕ ಬಲಿಯಾಗಿ ಕೊಟ್ಟಿದ್ದನ್ನ ಅವರು ತಿಂತಾರೆ.+ ಅಷ್ಟೇ ಅಲ್ಲ ಇಸ್ರಾಯೇಲಲ್ಲಿ ದೇವರಿಗೆ ಅಂತ ಇಟ್ಟಿರೋದೆಲ್ಲ ಅವ್ರಿಗೆ ಸೇರಬೇಕು.+ 30  ಎಲ್ಲ ಮೊದಲ ಬೆಳೆಗಳಲ್ಲಿ ತುಂಬ ಚೆನ್ನಾಗಿರೋದನ್ನ ಮತ್ತು ನೀವು ಕೊಡೋ ಎಲ್ಲ ತರದ ಕಾಣಿಕೆಗಳು ಪುರೋಹಿತರದ್ದಾಗುತ್ತೆ.+ ನೀವು ದವಸಧಾನ್ಯದ ಮೊದಲ ಬೆಳೆಯಲ್ಲಿ ಸ್ವಲ್ಪವನ್ನ ಕುಟ್ಟಿ ನುಚ್ಚು ಮಾಡಿ ಪುರೋಹಿತನಿಗೆ ಕೊಡಬೇಕು.+ ಇದ್ರಿಂದ ನಿಮ್ಮ ಕುಟುಂಬದವ್ರ ಮೇಲೆ ಆಶೀರ್ವಾದ ಇರುತ್ತೆ.+ 31  ಸತ್ತುಬಿದ್ದ ಮತ್ತು ಬೇರೆ ಪ್ರಾಣಿ ಸೀಳಿಹಾಕಿದ ಯಾವ ಪ್ರಾಣಿಪಕ್ಷಿಯನ್ನೂ ಪುರೋಹಿತರು ತಿನ್ನಬಾರದು.’+

ಪಾದಟಿಪ್ಪಣಿ

ಹೀಬ್ರು ಭಾಷೆಯಲ್ಲಿ ಇಲ್ಲಿ “ಸಗಣಿ” ಅನ್ನೋ ಪದ ಬಳಸಿರಬಹುದು. ತುಂಬ ಅಸಹ್ಯ ಅಂತ ತೋರಿಸೋಕೆ ಆ ಪದ ಬಳಸಲಾಗಿದೆ.
ಅಥವಾ “ಯಜ್ಞವೇದಿ.”