ಯೆಹೆಜ್ಕೇಲ 16:1-63

  • ಯೆರೂಸಲೇಮಿನ ಮೇಲೆ ದೇವರಿಗಿರುವ ಪ್ರೀತಿ (1-63)

    • ಬಿಸಾಡಿದ್ದ ಮಗುವಿನಂತೆ ಅವಳಿದ್ದಳು (1-7)

    • ದೇವರು ಅವಳನ್ನ ಅಲಂಕರಿಸಿ ಮದುವೆ ಒಪ್ಪಂದ ಮಾಡಿದನು (8-14)

    • ಅವಳು ದ್ರೋಹ ಬಗೆದಳು (15-34)

    • ವ್ಯಭಿಚಾರಿಣಿಯಾದ ಕಾರಣ ಅವಳಿಗೆ ಶಿಕ್ಷೆ (35-43)

    • ಸಮಾರ್ಯ ಮತ್ತು ಸೊದೋಮಿಗೆ ಹೋಲಿಸಿದ್ದು (44-58)

    • ದೇವರು ತನ್ನ ಒಪ್ಪಂದ ನೆನಪಿಸ್ಕೊಂಡನು (59-63)

16  ಯೆಹೋವ ಮತ್ತೆ ನನಗೆ ಹೀಗಂದನು: 2  “ಮನುಷ್ಯಕುಮಾರನೇ, ನೀನು ಯೆರೂಸಲೇಮಿಗೆ ಅವಳು ಮಾಡಿರೋ ಅಸಹ್ಯ ಕೆಲಸಗಳ ಬಗ್ಗೆ ಹೇಳು.+ 3  ನೀನು ಹೀಗೆ ಹೇಳಬೇಕು: ‘ವಿಶ್ವದ ರಾಜ ಯೆಹೋವ ಯೆರೂಸಲೇಮ್‌ ಅನ್ನೋಳಿಗೆ ಹೇಳೋದು ಏನಂದ್ರೆ “ನೀನು ಹುಟ್ಟಿದ್ದು ಕಾನಾನ್ಯರ ದೇಶದಲ್ಲಿ. ನಿನ್ನ ಅಪ್ಪ ಅಮೋರಿಯನು,+ ನಿನ್ನ ಅಮ್ಮ ಹಿತ್ತಿಯಳು.+ 4  ನೀನು ಹುಟ್ಟಿದ ದಿನ ಯಾರೂ ನಿನ್ನ ಹೊಕ್ಕಳ ಬಳ್ಳಿಯನ್ನ ಕತ್ತರಿಸಲಿಲ್ಲ. ನಿನ್ನನ್ನ ನೀರಿಂದ ತೊಳಿದು ಶುದ್ಧ ಮಾಡಲಿಲ್ಲ. ನಿನಗೆ ಉಪ್ಪನ್ನ ಸವರಲಿಲ್ಲ. ಬಟ್ಟೆಯಿಂದ ನಿನ್ನನ್ನ ಸುತ್ತಲಿಲ್ಲ. 5  ಇದ್ರಲ್ಲಿ ಒಂದನ್ನೂ ಮಾಡೋ ಕನಿಕರ ಯಾರಿಗೂ ಬರಲಿಲ್ಲ. ನಿನ್ನನ್ನ ನೋಡಿ ಯಾರಿಗೂ ಅಯ್ಯೋ ಪಾಪ ಅನಿಸಲಿಲ್ಲ. ನೀನು ಹುಟ್ಟಿದ ದಿನಾನೇ ಯಾರಿಗೂ ಇಷ್ಟ ಆಗಲಿಲ್ಲ, ಅದಕ್ಕೆ ನಿನ್ನನ್ನ ಬಯಲಲ್ಲಿ ಎಸೆದುಬಿಟ್ರು. 6  ನಾನು ಆ ದಾರಿಯಲ್ಲಿ ಹೋಗ್ತಿದ್ದಾಗ ನಿನ್ನನ್ನ ನೋಡ್ದೆ. ನೀನು ನಿನ್ನ ರಕ್ತದಲ್ಲೇ ಬಿದ್ಕೊಂಡು ಒದ್ದಾಡ್ತಾ ಇದ್ದೆ. ಆಗ, ‘ನೀನು ಬದುಕಿ ಬಾಳು’ ಅಂತ ನಾನು ಹೇಳಿದೆ. ಹೌದು, ನಿನ್ನ ರಕ್ತದಲ್ಲೇ ಬಿದ್ಕೊಂಡಿದ್ದ ನಿನಗೆ ‘ನೀನು ಬದುಕಿ ಬಾಳು’ ಅಂತ ನಾನು ಹೇಳಿದೆ. 7  ಹೊಲದಲ್ಲಿ ಮೊಳಕೆ ಒಡೆಯೋ ಗಿಡಗಳ ತರ ನಾನು ನಿನ್ನ ಸಂಖ್ಯೆಯನ್ನ ಜಾಸ್ತಿ ಮಾಡ್ದೆ. ನೀನು ಬೆಳಿದು ದೊಡ್ಡವಳಾಗಿ ಒಳ್ಳೇ ಆಭರಣಗಳನ್ನ ಹಾಕೊಂಡೆ. ನಿನ್ನ ಸ್ತನಗಳು ಬೆಳೆದ್ವು, ನಿನ್ನ ಕೂದಲು ಉದ್ದ ಆಯ್ತು. ಆದ್ರೂ ನಿನ್ನ ಮೈಮೇಲೆ ಬಟ್ಟೆ ಇರಲಿಲ್ಲ, ನೀನು ಬೆತ್ತಲೆ ಆಗಿದ್ದೆ.”’ 8  ‘ನಾನು ಆ ಕಡೆಯಿಂದ ಹೋಗ್ತಿದ್ದಾಗ ನಿನ್ನನ್ನ ನೋಡ್ದೆ. ನೀನು ಪ್ರೀತಿ ಮಾಡೋ ವಯಸ್ಸಿಗೆ ಬಂದಿದ್ದೀಯ ಅಂತ ನನಗೆ ಗೊತ್ತಾಯ್ತು. ಹಾಗಾಗಿ ನಾನು ನನ್ನ ಬಟ್ಟೆಯನ್ನ ನಿನ್ನ ಮೇಲೆ ಹೊದಿಸಿ+ ನಿನ್ನ ಮೈಮುಚ್ಚಿದೆ. ನಾನು ನಿನಗೆ ಮಾತು ಕೊಟ್ಟು ನಿನ್ನ ಜೊತೆ ಒಂದು ಒಪ್ಪಂದ* ಮಾಡ್ಕೊಂಡೆ. ಆಗ ನೀನು ನನ್ನವಳಾದೆ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ. 9  ‘ಅಷ್ಟೇ ಅಲ್ಲ, ನಾನು ನಿನ್ನನ್ನ ನೀರಲ್ಲಿ ಸ್ನಾನ ಮಾಡಿಸಿ ನಿನ್ನ ಮೇಲಿದ್ದ ರಕ್ತ ತೊಳಿದೆ, ಎಣ್ಣೆ ಹಚ್ಚಿದೆ.+ 10  ಆಮೇಲೆ ಕಸೂತಿ ಮಾಡಿದ ಬಟ್ಟೆ ಹಾಕಿದೆ. ಒಳ್ಳೇ ಚರ್ಮದ* ಚಪ್ಪಲಿಗಳನ್ನ ಕೊಟ್ಟೆ. ಒಳ್ಳೇ ಗುಣಮಟ್ಟದ ನಾರುಬಟ್ಟೆಯನ್ನ ಸುತ್ತಿದೆ. ದುಬಾರಿ ಬಟ್ಟೆಗಳನ್ನ ತೊಡಿಸಿದೆ. 11  ಆಭರಣಗಳಿಂದ ಸಿಂಗಾರ ಮಾಡ್ದೆ. ಕೈಗೆ ಬಳೆ, ಕತ್ತಿಗೆ ಸರ ಹಾಕ್ದೆ. 12  ಮೂಗಿಗೆ ಮೂಗುತಿಯನ್ನ, ಕಿವಿಗೆ ಓಲೆಗಳನ್ನ ತೊಡಿಸಿದೆ. ತಲೆಗೆ ಅಂದದ ಕಿರೀಟ ಇಟ್ಟೆ. 13  ನೀನು ಚಿನ್ನ ಬೆಳ್ಳಿಯ ಒಡವೆಗಳಿಂದ ಅಲಂಕರಿಸ್ಕೊಳ್ತಾ ಇದ್ದೆ. ನಿನ್ನ ಬಟ್ಟೆ ಒಳ್ಳೇ ಗುಣಮಟ್ಟದ ನಾರುಬಟ್ಟೆ, ದುಬಾರಿ ಬಟ್ಟೆ, ಕಸೂತಿ ಮಾಡಿದ ಬಟ್ಟೆ ಆಗಿತ್ತು. ನುಣ್ಣಗಿನ ಹಿಟ್ಟು, ಜೇನುತುಪ್ಪ, ಎಣ್ಣೆನೇ ನಿನ್ನ ಊಟ ಆಗಿತ್ತು. ನೀನು ಬೆಳೆದು ಸುಂದರಿ ಆದೆ,+ ರಾಣಿ ಆಗೋ ಯೋಗ್ಯತೆ ನಿನ್ನಲ್ಲಿತ್ತು.’” 14  “‘ನಾನು ನನ್ನ ವೈಭವವನ್ನ ನಿನಗೆ ಕೊಟ್ಟಿದ್ರಿಂದ ನೀನು ಪರಿಪೂರ್ಣ ಸುಂದರಿಯಾದೆ.+ ನಿನ್ನ ಸೌಂದರ್ಯದಿಂದಾಗಿ ನಿನ್ನ ಕೀರ್ತಿ ಜನಾಂಗಗಳಲ್ಲೆಲ್ಲ ಹಬ್ಬಿತು’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.” 15  “‘ಆದ್ರೆ ನೀನು ನಿನ್ನ ಸೌಂದರ್ಯವನ್ನೇ ನಂಬೋಕೆ ಶುರುಮಾಡ್ದೆ.+ ನಿನ್ನ ಕೀರ್ತಿಯಿಂದಾಗಿ ವೇಶ್ಯೆ ಆದೆ.+ ದಾರಿಯಲ್ಲಿ ಹೋಗಿ ಬರೋ ಒಬ್ಬೊಬ್ಬನ ಜೊತೆನೂ ಸಂಬಂಧ ಇಟ್ಕೊಂಡು ವೇಶ್ಯಾವಾಟಿಕೆ ಮಾಡ್ದೆ+ ಮತ್ತು ನಿನ್ನನ್ನೇ ಅವ್ರಿಗೆ ಒಪ್ಪಿಸ್ಕೊಂಡೆ. 16  ನಿನ್ನ ಬಣ್ಣಬಣ್ಣದ ಕೆಲವು ಬಟ್ಟೆಗಳನ್ನ ತಗೊಂಡು ದೇವಸ್ಥಾನಗಳನ್ನ* ಮಾಡ್ದೆ. ಅಲ್ಲಿ ವೇಶ್ಯಾವಾಟಿಕೆ ನಡಿಸಿದೆ.+ ಅಂಥ ವಿಷ್ಯ ಆಗಬಾರದಾಗಿತ್ತು, ಯಾವತ್ತೂ ನಡಿಬಾರದಾಗಿತ್ತು. 17  ಅಷ್ಟೇ ಅಲ್ಲ ನಾನು ನಿನಗೆ ಕೊಟ್ಟಿದ್ದ ಚಿನ್ನಬೆಳ್ಳಿಯ ಸುಂದರ ಆಭರಣಗಳನ್ನ* ನೀನು ತಗೊಂಡು ನಿನಗಾಗಿ ಗಂಡಸರ ಮೂರ್ತಿಗಳನ್ನ ಮಾಡ್ಕೊಂಡು ಅವುಗಳ ಜೊತೆ ವೇಶ್ಯಾವಾಟಿಕೆ ನಡೆಸಿದೆ.+ 18  ಕಸೂತಿ ಹಾಕಿದ ನಿನ್ನ ಬಟ್ಟೆಗಳನ್ನ ಅವುಗಳಿಗೆ ಹೊದಿಸಿದೆ. ನನ್ನ ಎಣ್ಣೆ ಮತ್ತು ನನ್ನ ಧೂಪವನ್ನ ಅವಕ್ಕೆ ಅರ್ಪಿಸಿದೆ.+ 19  ನಾನು ನಿನ್ನ ಆಹಾರಕ್ಕಾಗಿ ನುಣ್ಣಗಿನ ಹಿಟ್ಟು, ಎಣ್ಣೆ ಮತ್ತು ಜೇನುತುಪ್ಪದಿಂದ ಮಾಡಿದ ರೊಟ್ಟಿಗಳನ್ನ ಕೊಟ್ಟಿದ್ದೆ. ಆದ್ರೆ ನೀನು ಅದನ್ನೂ ಆ ಮೂರ್ತಿಗಳಿಗೆ ಕೊಟ್ಟೆ. ಅವನ್ನ ಖುಷಿಪಡಿಸೋಕೆ* ಆ ಅರ್ಪಣೆಗಳಿಂದ ಸುವಾಸನೆಯ ಹೊಗೆ ಮೇಲೆ ಏರೋ ಹಾಗೆ ಮಾಡಿದೆ.+ ಹೌದು, ನೀನು ಹೀಗೇ ಮಾಡಿದೆ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.” 20  “‘ನೀನು ಇಷ್ಟೆಲ್ಲ ವೇಶ್ಯಾವಾಟಿಕೆ ಮಾಡಿದ್ದು ಸಾಲದು ಅಂತ ನೀನು ಹೆತ್ತ ನನ್ನ ಮಕ್ಕಳನ್ನ+ ಮೂರ್ತಿಗಳಿಗೆ ಬಲಿ ಕೊಟ್ಟೆ.+ 21  ನನ್ನ ಮಕ್ಕಳನ್ನ ಸಾಯಿಸಿ ಬೆಂಕಿಯಲ್ಲಿ ಆಹುತಿ ಕೊಟ್ಟೆ.+ 22  ಮಗುವಾಗಿದ್ದಾಗ ನೀನು ನಿನ್ನ ರಕ್ತದಲ್ಲೇ ಬಿದ್ಕೊಂಡು ಒದ್ದಾಡ್ತಾ ಇದ್ದಿದ್ದನ್ನ, ಮೈಮೇಲೆ ಬಟ್ಟೆಯಿಲ್ಲದೆ ಬೆತ್ತಲೆಯಾಗಿದ್ದ ದಿನಗಳನ್ನ ಮರೆತುಬಿಟ್ಟೆ. ಎಲ್ಲ ತರದ ಅಸಹ್ಯ ಕೆಲಸ ಮತ್ತು ವೇಶ್ಯಾವಾಟಿಕೆಯನ್ನ ಮಾಡ್ತಿರೋವಾಗ ನಿನಗದು ನೆನಪಿಗೇ ಬರಲಿಲ್ಲ. 23  ಅಯ್ಯೋ, ಈ ಎಲ್ಲ ಕೆಟ್ಟ ಕೆಲಸಗಳನ್ನ ಮಾಡಿದ್ರಿಂದ ನಿನಗೆ ಬರೋ ಗತಿಯನ್ನ ಏನಂತ ಹೇಳಲಿ!’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ. 24  ‘ನೀನು ಗುಡ್ಡವನ್ನ ಮಾಡಿದೆ ಮತ್ತು ನಿನಗಾಗಿ ಪಟ್ಟಣದ ಪ್ರತಿಯೊಂದು ಮುಖ್ಯಸ್ಥಳದಲ್ಲಿ* ದೇವಸ್ಥಾನಗಳನ್ನ ಕಟ್ಟಿದೆ. 25  ಪ್ರತಿಯೊಂದು ಬೀದಿಯಲ್ಲಿ ಎಲ್ಲರಿಗೂ ಕಾಣೋ ಜಾಗದಲ್ಲಿ ನೀನು ಅವನ್ನ* ಕಟ್ಟಿದೆ. ದಾರಿಯಲ್ಲಿ ಹೋಗ್ತಾ ಬರ್ತಾ ಇರೋರಿಗೆಲ್ಲ ನಿನ್ನ ದೇಹವನ್ನ ಕೊಡೋ ಮೂಲಕ ನಿನ್ನ ಸೌಂದರ್ಯವನ್ನ ಅಸಹ್ಯವಾಗಿ ಮಾಡ್ಕೊಂಡೆ.+ ನೀನು ವೇಶ್ಯಾವಾಟಿಕೆಯನ್ನ ಇನ್ನೂ ಜಾಸ್ತಿ ಮಾಡಿದೆ.+ 26  ನಿನ್ನ ನೆರೆಯವರಾದ ಈಜಿಪ್ಟಿನ ಕಾಮುಕರ ಜೊತೆ ಸಂಬಂಧ ಇಟ್ಕೊಂಡು ವೇಶ್ಯಾವಾಟಿಕೆ ನಡಿಸಿದೆ.+ ನಿನ್ನ ಮಿತಿಮೀರಿದ ವೇಶ್ಯಾವಾಟಿಕೆ ನನಗೆ ಕೋಪ ಬರಿಸಿದೆ. 27  ಹಾಗಾಗಿ ನಾನು ಕೈಚಾಚಿ ನಿನ್ನನ್ನ ಶಿಕ್ಷಿಸ್ತೀನಿ. ನಿನಗೆ ಬರೋ ಆಹಾರವನ್ನ ಕಮ್ಮಿ ಮಾಡ್ತೀನಿ.+ ನಿನ್ನನ್ನ ದ್ವೇಷಿಸೋ ಸ್ತ್ರೀಯರು ಅಂದ್ರೆ ನಿನ್ನ ಅಶ್ಲೀಲ ನಡತೆಯನ್ನ ನೋಡಿ ದಂಗಾದ+ ಫಿಲಿಷ್ಟಿಯ ಹುಡುಗಿಯರು ಅವ್ರಿಗೆ ಇಷ್ಟ ಬಂದ ಹಾಗೆ ನಿನಗೆ ಮಾಡೋಕೆ ನಿನ್ನನ್ನ ಅವ್ರ ಕೈಗೆ ಕೊಡ್ತೀನಿ.+ 28  ಇಷ್ಟೆಲ್ಲ ವೇಶ್ಯಾವಾಟಿಕೆ ಮಾಡಿದ್ದು ಸಾಲದು ಅಂತ ಅಶ್ಶೂರ್ಯರ ಜೊತೆನೂ ವೇಶ್ಯಾವಾಟಿಕೆ ನಡಿಸಿದೆ.+ ಹೀಗೆ ಮಾಡಿದ ಮೇಲೂ ನಿನ್ನ ಕಾಮದಾಹ ತೀರಲಿಲ್ಲ. 29  ನಿನ್ನ ವೇಶ್ಯಾವಾಟಿಕೆ ಇನ್ನೂ ಜಾಸ್ತಿ ಮಾಡ್ತಾ ವ್ಯಾಪಾರಿಗಳ ದೇಶದಲ್ಲೂ* ಕಸ್ದೀಯರ ಜೊತೆ ಸಂಬಂಧ ಇಟ್ಕೊಂಡೆ.+ ಆಗಲೂ ನಿನಗೆ ತೃಪ್ತಿ ಆಗಲಿಲ್ಲ.’ 30  ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಸ್ವಲ್ಪನೂ ನಾಚಿಕೆ ಇಲ್ಲದ ವೇಶ್ಯೆ ತರ ನಡ್ಕೊಂಡು ನೀನು ಅದನ್ನೆಲ್ಲ ಮಾಡಿದಾಗ ನಿನ್ನ ಹೃದಯಕ್ಕೆ ದೊಡ್ಡ ರೋಗ ಬಂದಿತ್ತು.*+ 31  ಎಲ್ಲ ಬೀದಿಯಲ್ಲಿ ಎಲ್ಲರಿಗೂ ಕಾಣೋ ಜಾಗದಲ್ಲಿ ನೀನು ಗುಡ್ಡ ಮಾಡಿದಾಗ ಮತ್ತು ಪಟ್ಟಣದ ಎಲ್ಲ ಮುಖ್ಯಸ್ಥಳದಲ್ಲಿ ದೇವಸ್ಥಾನಗಳನ್ನ ಕಟ್ಟಿದಾಗ ನೀನು ಬೇರೆ ವೇಶ್ಯೆಯರ ತರ ಇರಲಿಲ್ಲ, ಯಾಕಂದ್ರೆ ನೀನು ನಿನ್ನ ಜೊತೆ ಸಂಬಂಧ ಇಟ್ಕೊಂಡವ್ರಿಂದ ದುಡ್ಡು ತಗೊಳ್ಳಲಿಲ್ಲ. 32  ಗಂಡನನ್ನ ಬಿಟ್ಟು ಪರಿಚಯ ಇಲ್ಲದ ಗಂಡಸರ ಹತ್ರ ಹೋಗೋ ವ್ಯಭಿಚಾರಿಣಿ ನೀನು!+ 33  ಸಾಮಾನ್ಯವಾಗಿ ಎಲ್ಲ ವೇಶ್ಯೆಯರಿಗೆ ಜನ್ರು ಉಡುಗೊರೆ ಕೊಡ್ತಾರೆ,+ ಆದ್ರೆ ಕಾಮಾತುರದಿಂದ ನಿನ್ನ ಹತ್ರ ಬರೋರಿಗೆ ನೀನೇ ಉಡುಗೊರೆ ಕೊಟ್ಟಿದ್ದೀಯ.+ ನಿನ್ನ ಜೊತೆ ಸಂಬಂಧ ಇಟ್ಕೊಳ್ಳೋಕೆ ಎಲ್ಲ ಕಡೆ ಇರೋರನ್ನ ಲಂಚಕೊಟ್ಟು ನಿನ್ನ ಹತ್ರ ಕರೆಸ್ಕೊಳ್ತೀಯ.+ 34  ವೇಶ್ಯಾವಾಟಿಕೆ ನಡೆಸೋ ಬೇರೆ ಹೆಂಗಸರಿಗಿಂತ ನೀನೇ ಬೇರೆ. ನಿನ್ನ ತರ ವೇಶ್ಯಾವಾಟಿಕೆ ಮಾಡೋರು ಯಾರೂ ಇಲ್ಲ. ನಿನ್ನ ಹತ್ರ ಬರೋರು ನಿನಗೇನೂ ಕೊಡಲ್ಲ, ನೀನೇ ಅವ್ರಿಗೆ ಕೊಡ್ತೀಯ. ನಿನ್ನ ದಾರಿನೇ ಬೇರೆ.’ 35  ಹಾಗಾಗಿ ವೇಶ್ಯೆಯೇ,+ ಯೆಹೋವನ ಮಾತನ್ನ ಕೇಳು. 36  ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನಿನ್ನ ಕಾಮಾತುರವನ್ನ ನೀನು ಅತಿರೇಕವಾಗಿ ತೋರಿಸಿದ್ದೀಯ. ನೀನು ಸಂಬಂಧ ಇಟ್ಕೊಂಡಿರೋ ಗಂಡಸರ ಜೊತೆ ಮತ್ತು ನಿನ್ನ ಮಕ್ಕಳನ್ನೂ ಬಿಡದೆ ಅವ್ರ ರಕ್ತವನ್ನ ಬಲಿಯಾಗಿ ಅರ್ಪಿಸಿದ+ ಎಲ್ಲ ಅಸಹ್ಯ ಮೂರ್ತಿಗಳ+ ಜೊತೆ* ವೇಶ್ಯಾವಾಟಿಕೆ ಮಾಡುವಾಗ ನಿನ್ನ ಬರಿಮೈಯನ್ನ ತೋರಿಸಿದ್ದೀಯ. 37  ಹಾಗಾಗಿ ನೀನು ಯಾರಿಗೆಲ್ಲ ಸುಖಕೊಟ್ಟಿಯೋ ಆ ಎಲ್ಲ ಗಂಡಸ್ರನ್ನೂ ನೀನು ಪ್ರೀತಿಸಿದವ್ರನ್ನೂ ದ್ವೇಷಿಸಿದವ್ರನ್ನೂ ಒಟ್ಟುಸೇರಿಸ್ತೀನಿ. ಅವ್ರನ್ನ ಎಲ್ಲ ಕಡೆಯಿಂದ ಒಟ್ಟು ಸೇರಿಸಿ ನಿನ್ನ ವಿರುದ್ಧ ಬರೋ ತರ ಮಾಡ್ತೀನಿ. ನಾನು ಅವ್ರೆಲ್ಲರ ಮುಂದೆ ನಿನ್ನನ್ನ ಬೆತ್ತಲೆ ಮಾಡ್ತೀನಿ. ನೀನು ಪೂರ್ತಿ ಬೆತ್ತಲೆ ಆಗಿರೋದನ್ನ ಅವರು ನೋಡ್ತಾರೆ.+ 38  ವೇಶ್ಯೆಯರಿಗೆ+ ಮತ್ತು ರಕ್ತ ಸುರಿಸೋ ಹೆಂಗಸರಿಗೆ+ ಕೊಡೋ ಶಿಕ್ಷೆಗಳನ್ನೇ ನಾನು ನಿನಗೆ ಕೊಡ್ತೀನಿ. ರೋಷದಿಂದ ಕ್ರೋಧದಿಂದ* ನಾನು ನಿನ್ನ ರಕ್ತ ಸುರಿಸ್ತೀನಿ.+ 39  ನಾನು ನಿನ್ನನ್ನ ಅವ್ರ ಕೈಗೆ ಒಪ್ಪಿಸ್ತೀನಿ. ನೀನು ಮಾಡಿದ ಗುಡ್ಡಗಳನ್ನ ಅವರು ಕೆಡವಿ ಹಾಕ್ತಾರೆ. ನಿನ್ನ ದೇವಸ್ಥಾನಗಳನ್ನ* ನೆಲಸಮ ಮಾಡ್ತಾರೆ.+ ಅವರು ನಿನ್ನ ಬಟ್ಟೆಗಳನ್ನ ಕಿತ್ತು+ ನಿನ್ನ ಸುಂದರ ಒಡವೆಗಳನ್ನ* ತಗೊಳ್ತಾರೆ.+ ನಿನ್ನ ಮೈಮೇಲೆ ಬಟ್ಟೆ ಇಲ್ಲದ ಹಾಗೆ ಮಾಡಿ ನಿನ್ನನ್ನ ಬೆತ್ತಲೆಯಾಗಿ ಬಿಟ್ಟು ಹೋಗ್ತಾರೆ. 40  ನಿನ್ನ ಮೇಲೆ ದಾಳಿ ಮಾಡೋಕೆ ಜನ್ರ ಗುಂಪನ್ನ ಕರ್ಕೊಂಡು ಬರ್ತಾರೆ.+ ಅವರು ನಿನ್ನನ್ನ ಕಲ್ಲು ಹೊಡಿದು ಸಾಯಿಸ್ತಾರೆ,+ ಕತ್ತಿಗಳಿಂದ ಕೊಲ್ತಾರೆ.+ 41  ಅವರು ನಿನ್ನ ಮನೆಗಳನ್ನ ಬೆಂಕಿಯಿಂದ ಸುಟ್ಟುಬಿಡ್ತಾರೆ.+ ತುಂಬ ಹೆಂಗಸರ ಕಣ್ಮುಂದೆನೇ ನಿನ್ನನ್ನ ಶಿಕ್ಷಿಸ್ತಾರೆ. ನಾನು ನಿನ್ನ ವೇಶ್ಯಾವಾಟಿಕೆಯನ್ನ ನಿಲ್ಲಿಸಿಬಿಡ್ತೀನಿ.+ ನೀನು ಇನ್ಮೇಲೆ ಯಾರಿಗೂ ದುಡ್ಡು ಕೊಡೋಕೆ ಆಗಲ್ಲ. 42  ನಾನು ನಿನ್ನ ಮೇಲಿರೋ ಕೋಪವನ್ನ ತೀರಿಸ್ಕೊಳ್ತೀನಿ.+ ಆಗ ನಿನ್ನ ಮೇಲಿರೋ ನನ್ನ ಕ್ರೋಧವು ಹೋಗುತ್ತೆ,+ ನನ್ನ ಕೋಪ ತಣ್ಣಗಾಗುತ್ತೆ. ಇನ್ಮೇಲೆ ನಾನು ಸಿಟ್ಟು ಮಾಡ್ಕೊಳಲ್ಲ.’ 43  ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಮಗು ಆಗಿದ್ದಾಗ ನೀನು ಹೇಗಿದ್ದೆ ಅಂತ ನೆನಪಿಸ್ಕೊಳ್ಳದೆ+ ಈ ಎಲ್ಲ ಕೆಲಸಗಳನ್ನ ಮಾಡಿ ನನಗೆ ಕೋಪ ಬರಿಸಿದ್ದೀಯ. ಹಾಗಾಗಿ ನಿನ್ನ ನಡತೆಯ ಪರಿಣಾಮಗಳನ್ನ ನೀನು ಅನುಭವಿಸೋ ತರ ಮಾಡ್ತೀನಿ. ಆಗ ನೀನು ನಿನ್ನ ಅಶ್ಲೀಲ ನಡತೆ ಮತ್ತು ಎಲ್ಲ ಅಸಹ್ಯ ಕೆಲಸಗಳನ್ನ ಬಿಟ್ಟುಬಿಡ್ತೀಯ. 44  ನೋಡು! ಮಾತಾಡುವಾಗ ಗಾದೆಗಳನ್ನ ಬಳಸೋರು ನಿನ್ನ ಬಗ್ಗೆ “ತಾಯಿಯಂತೆ ಮಗಳು!”+ ಅನ್ನೋ ಗಾದೆ ಹೇಳ್ತಾರೆ. 45  ಗಂಡ ಮತ್ತು ಮಕ್ಕಳನ್ನ ಕೀಳಾಗಿ ನೋಡಿದ ನಿನ್ನ ಅಮ್ಮನ ತರಾನೇ ನೀನಿದ್ದೀಯ. ಗಂಡ ಮತ್ತು ಮಕ್ಕಳನ್ನ ಕೀಳಾಗಿ ನೋಡಿದ ನಿನ್ನ ಅಕ್ಕತಂಗಿಯ ಹಾಗೇ ನೀನಿದ್ದೀಯ. ನಿನ್ನ ಅಮ್ಮ ಹಿತ್ತಿಯಳು, ನಿನ್ನ ಅಪ್ಪ ಅಮೋರಿಯನು.’”+ 46  “‘ನಿನ್ನ ಅಕ್ಕ ಸಮಾರ್ಯ,+ ತನ್ನ ಹೆಣ್ಣುಮಕ್ಕಳ ಜೊತೆ ನಿನ್ನ ಎಡಕ್ಕೆ* ವಾಸಿಸ್ತಿದ್ದಾಳೆ.+ ನಿನ್ನ ತಂಗಿ ಸೊದೋಮ್‌,+ ತನ್ನ ಹೆಣ್ಣುಮಕ್ಕಳ ಜೊತೆ* ನಿನ್ನ ಬಲಕ್ಕೆ* ವಾಸಿಸ್ತಿದ್ದಾಳೆ.+ 47  ಅವ್ರ ತರಾನೇ ನೀನು ಕೆಟ್ಟದಾರಿ ಹಿಡಿದೆ. ಅವರು ಮಾಡಿದ ಅಸಹ್ಯ ಕೆಲಸಗಳನ್ನ ನೀನೂ ಮಾಡಿದೆ. ಅಷ್ಟೇ ಅಲ್ಲ, ನಿನ್ನ ನಡತೆ ಎಷ್ಟು ಕೀಳಾಗಿ ಇತ್ತಂದ್ರೆ ಸ್ವಲ್ಪ ಸಮಯದಲ್ಲೇ ನೀನು ಅವ್ರಿಗಿಂತ ಕಡೆ ಆದೆ.’+ 48  ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನನ್ನಾಣೆ, ನೀನು ಮತ್ತು ನಿನ್ನ ಹೆಣ್ಣುಮಕ್ಕಳು ಎಂಥ ಕೆಲಸಗಳನ್ನ ಮಾಡಿದ್ದೀರ ಅಂದ್ರೆ ಅಂಥದ್ದನ್ನ ನಿನ್ನ ತಂಗಿ ಸೊದೋಮ್‌ ಆಗಲಿ ಅವಳ ಮಕ್ಕಳಾಗಲಿ ಮಾಡಲಿಲ್ಲ. 49  ನೋಡು, ನಿನ್ನ ತಂಗಿ ಸೊದೋಮ್‌ ಮಾಡಿದ ತಪ್ಪು ಏನಂದ್ರೆ, ಅವಳೂ ಅವಳ ಮಕ್ಕಳೂ+ ಜಂಬದಿಂದ ಮೆರೀತಿದ್ರು.+ ಅವ್ರ ಹತ್ರ ಬೇಕಾದಷ್ಟು ಆಹಾರ ಇತ್ತು,+ ಹಾಯಾಗಿದ್ರು,+ ಹಾಗಿದ್ರೂ ಅವರು ಬಡಬಗ್ಗರಿಗೆ, ಕಷ್ಟದಲ್ಲಿ ಇರೋರಿಗೆ ಏನೂ ಸಹಾಯ ಮಾಡಲಿಲ್ಲ.+ 50  ಅವ್ರ ಸೊಕ್ಕು ಇಳೀಲಿಲ್ಲ,+ ನನ್ನ ಕಣ್ಮುಂದೆ ಅಸಹ್ಯ ಕೆಲಸಗಳನ್ನ ಮಾಡ್ತಾ ಹೋದ್ರು.+ ಹಾಗಾಗಿ ನಾನು ಅವ್ರನ್ನ ನಾಶ ಮಾಡ್ಲೇಬೇಕಾಯ್ತು.+ 51  ನೀನು ಮಾಡಿದ ಪಾಪಗಳಲ್ಲಿ ಅರ್ಧದಷ್ಟನ್ನೂ ಸಮಾರ್ಯ+ ಮಾಡಲಿಲ್ಲ. ಅವ್ರಿಗಿಂತ ಜಾಸ್ತಿ ನೀನೇ ಅಸಹ್ಯ ಕೆಲಸಗಳನ್ನ ಮಾಡ್ತಾ ಹೋದೆ. ಅದು ಯಾವ ಹಂತಕ್ಕೆ ಹೋಯ್ತು ಅಂದ್ರೆ ನಿನಗೆ ಹೋಲಿಸಿದ್ರೆ ನಿನ್ನ ಅಕ್ಕ-ತಂಗಿನೇ ನೀತಿವಂತರು ಅಂತ ಹೇಳಬಹುದು.+ 52  ನೀನು ಈ ರೀತಿ ನಡ್ಕೊಂಡು ನಿನ್ನ ಅಕ್ಕ ಮತ್ತು ತಂಗಿ ಮಾಡಿದ್ದು ತಪ್ಪೇ ಅಲ್ಲ ಅನ್ನೋ ತರ ತೋರಿಸ್ಕೊಟ್ಟೆ. ಹಾಗಾಗಿ ನೀನೀಗ ಅವಮಾನ ಅನುಭವಿಸಬೇಕು. ನೀನು ಅವ್ರಿಗಿಂತ ಜಾಸ್ತಿ ಅಸಹ್ಯವಾಗಿ ನಡ್ಕೊಂಡು ಪಾಪಮಾಡಿದ್ರಿಂದ ಅವ್ರೇ ತುಂಬ ನೀತಿವಂತರಾಗಿ ಇದ್ದಾರೆ. ನಿನ್ನ ಅಕ್ಕ ಮತ್ತು ತಂಗಿ ನೀತಿವಂತರು ಅಂತ ನೀನು ತೋರಿಸ್ಕೊಟ್ಟಿದ್ರಿಂದ ನೀನೀಗ ನಾಚಿಕೆಪಡು, ಅವಮಾನ ಅನುಭವಿಸು.’ 53  ‘ನಾನು ಕೈದಿಗಳಾಗಿ ಹೋದ ಜನ್ರನ್ನ ಅಂದ್ರೆ ಸೊದೋಮ್‌, ಸಮಾರ್ಯ ಮತ್ತು ಅವ್ರ ಹೆಣ್ಮಕ್ಕಳನ್ನ ಒಟ್ಟು ಸೇರಿಸ್ತೀನಿ. ಅವ್ರ ಜೊತೆ ಕೈದಿಗಳಾಗಿ ಹೋದ ನಿನ್ನ ಜನ್ರನ್ನೂ ಒಟ್ಟು ಸೇರಿಸ್ತೀನಿ.+ 54  ಆಗ ನಿನಗೆ ಅವಮಾನ ಆಗುತ್ತೆ. ನೀನು ನಿನ್ನ ಕೆಲಸಗಳಿಂದ ಅವ್ರನ್ನ ಸಮಾಧಾನ ಮಾಡಿದ್ರಿಂದ ನೀನು ಅವಮಾನ ಅನುಭವಿಸ್ತೀಯ. 55  ನಿನ್ನ ಅಕ್ಕ ಸಮಾರ್ಯ, ನಿನ್ನ ತಂಗಿ ಸೊದೋಮ್‌ ಮತ್ತು ಅವ್ರಿಬ್ಬರ ಮಕ್ಕಳು ಮುಂಚಿನ ಸ್ಥಿತಿಗೆ ಬರ್ತಾರೆ. ನೀನು ಮತ್ತು ನಿನ್ನ ಮಕ್ಕಳೂ ಮುಂಚಿನ ಸ್ಥಿತಿಗೆ ಬರ್ತಿರ.+ 56  ನೀನು ಜಂಬದಿಂದ ಬೀಗ್ತಿದ್ದಾಗ ನಿನ್ನ ತಂಗಿ ಸೊದೋಮಿನ ಹೆಸ್ರನ್ನ ನಿನ್ನ ಬಾಯಲ್ಲಿ ಹೇಳೋಕ್ಕೂ ಇಷ್ಟಪಡ್ತಿರಲಿಲ್ಲ, ಅಷ್ಟು ಯೋಗ್ಯತೆ ಅವಳಿಗಿಲ್ಲ ಅಂತ ನಿನಗೆ ಅನಿಸ್ತಿತ್ತು. 57  ನಿನ್ನ ಕೆಟ್ಟ ಕೆಲಸಗಳು ಬಯಲಾಗೋ ಮುಂಚೆ+ ನಿನಗೆ ಅಂಥ ಅಭಿಪ್ರಾಯ ಇತ್ತು. ಸಿರಿಯದ ಮಕ್ಕಳು, ಅವಳ ಅಕ್ಕಪಕ್ಕದವರು ಮತ್ತು ಫಿಲಿಷ್ಟಿಯರ ಮಕ್ಕಳು+ ನಿನ್ನನ್ನ ಬೈತಾರೆ. ನಿನ್ನ ಸುತ್ತ ಇರೋರೆಲ್ಲ ನಿನ್ನನ್ನ ಕೀಳಾಗಿ ನೋಡ್ತಾರೆ. 58  ನೀನು ನಿನ್ನ ಅಶ್ಲೀಲ ನಡತೆ ಮತ್ತು ನಿನ್ನ ಅಸಹ್ಯ ಕೆಲಸಗಳ ಪರಿಣಾಮಗಳನ್ನ ಅನುಭವಿಸ್ತೀಯ’ ಅಂತ ಯೆಹೋವ ಹೇಳ್ತಾನೆ.” 59  “ವಿಶ್ವದ ರಾಜ ಯೆಹೋವ ಹೀಗಂತಾನೆ: ‘ನೀನು ಮಾಡಿದ ಕೆಲಸಗಳಿಗೆ ತಕ್ಕ ಹಾಗೆ ನಾನು ನಿನ್ನನ್ನ ಶಿಕ್ಷಿಸ್ತೀನಿ.+ ಯಾಕಂದ್ರೆ ನೀನು ನನ್ನ ಒಪ್ಪಂದ ಮುರಿದೆ, ಹೀಗೆ ನನಗೆ ಕೊಟ್ಟ ಮಾತನ್ನ ಮುರಿದುಬಿಟ್ಟೆ.+ 60  ಆದ್ರೆ ನೀನು ಯುವತಿ ಆಗಿದ್ದಾಗ ನಾನು ನಿನ್ನ ಜೊತೆ ಮಾಡ್ಕೊಂಡಿದ್ದ ಒಪ್ಪಂದವನ್ನ ನೆನಪಿಸ್ಕೊಳ್ತೀನಿ ಮತ್ತು ನಿನ್ನ ಜೊತೆ ಒಂದು ಶಾಶ್ವತ ಒಪ್ಪಂದ ಮಾಡ್ತೀನಿ.+ 61  ನೀನು ನಿನ್ನ ಅಕ್ಕತಂಗಿಯರನ್ನ ಸ್ವಾಗತಿಸುವಾಗ ನಿನ್ನ ನಡತೆಯನ್ನ ನೆನಸ್ಕೊಂಡು ನಿನಗೇ ಅವಮಾನ ಆಗುತ್ತೆ.+ ಅವ್ರನ್ನ ನಾನು ನಿನಗೆ ನಿನ್ನ ಮಕ್ಕಳಾಗಿ ಕೊಡ್ತೀನಿ. ನಾನು ಇದನ್ನ ಮಾಡೋದು ನಿನ್ನ ಜೊತೆ ಮಾಡಿದ ಒಪ್ಪಂದದಿಂದ ಅಲ್ಲ.’ 62  ‘ನಾನು ನಿನ್ನ ಜೊತೆ ಒಪ್ಪಂದ ಮಾಡ್ಕೊತೀನಿ. ಆಗ, ನಾನೇ ಯೆಹೋವ ಅಂತ ನಿನಗೆ ಗೊತ್ತಾಗುತ್ತೆ. 63  ನೀನು ಇಷ್ಟೆಲ್ಲ ಮಾಡಿದ್ರೂ ನಾನು ನಿನ್ನನ್ನ ಕ್ಷಮಿಸ್ತೀನಿ.*+ ಆಗ ಹಿಂದೆ ಮಾಡಿದ್ದೆಲ್ಲ ನಿನ್ನ ನೆನಪಿಗೆ ಬರುತ್ತೆ ಮತ್ತು ನಿನಗೆಷ್ಟು ನಾಚಿಕೆ ಆಗುತ್ತೆ ಅಂದ್ರೆ ನಿನ್ನ ಬಾಯಿಂದ ಒಂದು ಮಾತೂ ಬರಲ್ಲ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”

ಪಾದಟಿಪ್ಪಣಿ

ಅಥವಾ “ಒಡಂಬಡಿಕೆ.”
ಅಥವಾ “ಸೀಲ್‌ ಪ್ರಾಣಿಯ ಚರ್ಮದ.”
ಅಕ್ಷ. “ಎತ್ತರ ಸ್ಥಳಗಳನ್ನ.”
ಅಥವಾ “ಅಲಂಕಾರಿಕ ವಸ್ತುಗಳನ್ನ.”
ಅಥವಾ “ಸಮಾಧಾನ ಮಾಡೋಕೆ.”
ಅಕ್ಷ. “ಎತ್ತರ ಸ್ಥಳಗಳನ್ನ.”
ಅಕ್ಷ. “ಕಾನಾನ್‌ ದೇಶ.”
ಬಹುಶಃ, “ನಿನ್ನ ಮೇಲೆ ನಾನು ಕೋಪದಿಂದ ಕುದಿತಿದ್ದೆ.”
ಹೀಬ್ರು ಭಾಷೆಯಲ್ಲಿ ಇಲ್ಲಿ “ಸಗಣಿ” ಅನ್ನೋ ಪದ ಬಳಸಿರಬಹುದು. ತುಂಬ ಅಸಹ್ಯ ಅಂತ ತೋರಿಸೋಕೆ ಆ ಪದ ಬಳಸಲಾಗಿದೆ.
ತನ್ನನ್ನ ಬಿಟ್ಟು ಬೇರೆ ದೇವರನ್ನ ಆರಾಧಿಸಿದಾಗ ಯೆಹೋವನಿಗೆ ಬರೋ ಕೋಪವನ್ನ ಇದು ಸೂಚಿಸುತ್ತೆ. (ವಿಮೋ 20:5)
ಅಕ್ಷ. “ಎತ್ತರ ಸ್ಥಳಗಳನ್ನ.”
ಅಥವಾ “ಅಲಂಕಾರಿಕ ವಸ್ತುಗಳನ್ನ.”
ಅಥವಾ “ದಕ್ಷಿಣಕ್ಕೆ.”
ಇದು ಸೋದೋಮಿಗೆ ಸೇರಿದ ಊರುಗಳನ್ನ ಸೂಚಿಸುತ್ತಿರಬಹುದು.
ಅಥವಾ “ಉತ್ತರಕ್ಕೆ.”
ಅಕ್ಷ. “ಪ್ರಾಯಶ್ಚಿತ್ತ ಮಾಡ್ತೀನಿ.”