ಯೆಶಾಯ 6:1-13

  • ಯೆಹೋವನ ಆಲಯದಲ್ಲಿ ಆತನ ದರ್ಶನ (1-4)

    • “ಯೆಹೋವ ಪವಿತ್ರನು, ಪವಿತ್ರನು, ಪವಿತ್ರನು” (3)

  • ಯೆಶಾಯನ ತುಟಿಗಳನ್ನ ಶುದ್ಧೀಕರಿಸಲಾಯ್ತು (5-7)

  • ಯೆಶಾಯನನ್ನ ನಿಯೋಜಿಸಲಾಯ್ತು (8-10)

    • “ನಾನಿದ್ದೀನಿ! ನನ್ನನ್ನ ಕಳಿಸು!” (8)

  • “ಯೆಹೋವನೇ, ಎಲ್ಲಿ ತನಕ ಹೀಗಿರುತ್ತೆ?” (11-13)

6  ರಾಜ ಉಜ್ಜೀಯ ತೀರಿಹೋದ ವರ್ಷದಲ್ಲಿ,+ ನಾನು ಒಂದು ದರ್ಶನ ನೋಡಿದೆ. ಅದ್ರಲ್ಲಿ ಯೆಹೋವ ಒಂದು ಉನ್ನತ ಸಿಂಹಾಸನದ ಮೇಲೆ ಕೂತಿದ್ದನು.+ ಆತನು ಧರಿಸಿದ್ದ ಉದ್ದವಾದ ಬಟ್ಟೆ ಆಲಯದಲ್ಲೆಲ್ಲ ತುಂಬಿತ್ತು. 2  ಆತನ ಸನ್ನಿಧಿಯಲ್ಲಿ ಸೆರಾಫಿಯರು ನಿಂತಿದ್ರು. ಅವ್ರಲ್ಲಿ ಪ್ರತಿಯೊಬ್ಬರಿಗೂ ಆರಾರು ರೆಕ್ಕೆಗಳಿದ್ವು. ಅವರು ಎರಡು ರೆಕ್ಕೆಗಳಿಂದ ತಮ್ಮ ಮುಖವನ್ನ, ಎರಡು ರೆಕ್ಕೆಗಳಿಂದ ತಮ್ಮ ಕಾಲುಗಳನ್ನ ಮುಚ್ಚಿಕೊಂಡಿದ್ರು. ಮತ್ತೆರಡು ರೆಕ್ಕೆಗಳಿಂದ ಹಾರುತ್ತಿದ್ರು.  3  ಅವ್ರಲ್ಲಿ ಒಬ್ಬ ಮತ್ತೊಬ್ಬನಿಗೆ ಜೋರಾಗಿ ಹೀಗೆ ಹೇಳಿದ“ಸೈನ್ಯಗಳ ದೇವರಾದ ಯೆಹೋವ ಪವಿತ್ರನು, ಪವಿತ್ರನು, ಪವಿತ್ರನು.+ ಇಡೀ ಭೂಮಿ ಆತನ ಮಹಿಮೆಯಿಂದ ತುಂಬಿದೆ.” 4  ಅವರು ಕೂಗಿದ ಸದ್ದಿಗೆ ಹೊಸ್ತಿಲಿನ ಚೌಕಟ್ಟುಗಳು ನಡುಗಿದ್ವು, ಇಡೀ ಆಲಯ ಹೊಗೆಯಿಂದ ತುಂಬ್ತು.+  5  ಇದನ್ನ ನೋಡಿ ನಾನು ಹೀಗೆ ಹೇಳಿದೆ “ಅಯ್ಯೋ, ನನ್ನ ಗತಿಯನ್ನ ಏನು ಹೇಳಲಿ! ಈಗ ನನ್ನ ಸಾವು ಖಚಿತ,*ಯಾಕಂದ್ರೆ ನಾನೊಬ್ಬ ಪಾಪಿ, ತಪ್ಪಾಗಿ ಮಾತಾಡ್ತೀನಿ,ಕೆಟ್ಟ ಮಾತುಗಳನ್ನ ಆಡೋ ಜನ್ರ ಮಧ್ಯ ವಾಸಿಸ್ತೀನಿ.+ ಅಷ್ಟೇ ಅಲ್ಲ ರಾಜನೂ ಸೈನ್ಯಗಳ ದೇವರೂ ಆದ ಯೆಹೋವನನ್ನ ನಾನು ನನ್ನ ಕಣ್ಣಾರೆ ನೋಡಿದ್ದೀನಿ!” 6  ಆಗ ಸೆರಾಫಿಯರಲ್ಲಿ ಒಬ್ಬ ಹಾರುತ್ತಾ ನನ್ನ ಹತ್ರ ಬಂದ. ಅವನ ಕೈಯಲ್ಲಿ ಕೆಂಡ ಇತ್ತು.+ ಅವನು ಅದನ್ನ ಯಜ್ಞವೇದಿಯಿಂದ ಚಿಮುಟ ಬಳಸಿ ಎತ್ಕೊಂಡು ಬಂದಿದ್ದ.+ 7  ಅವನು ಅದ್ರಿಂದ ನನ್ನ ತುಟಿಗಳನ್ನ ಮುಟ್ಟಿ,“ನೋಡು! ಇದ್ರಿಂದ ನಿನ್ನ ತುಟಿಗಳನ್ನ ಮುಟ್ಟಿದ್ದೀನಿ,ನಿನ್ನ ಅಪರಾಧ ನಿನ್ನಿಂದ ದೂರ ಆಗಿದೆ,ದೇವರು ನಿನ್ನ ಪಾಪಗಳನ್ನ ಕ್ಷಮಿಸಿದ್ದಾನೆ” ಅಂದ. 8  ಆಮೇಲೆ ಯೆಹೋವ ಹೀಗೆ ಹೇಳೋದನ್ನ ಕೇಳಿಸ್ಕೊಂಡೆ “ನಾನು ಯಾರನ್ನ ಕಳಿಸಲಿ? ನಮ್ಮ ಪರವಾಗಿ ಯಾರು ಹೋಗ್ತಾರೆ?”+ ಆಗ ನಾನು “ನಾನಿದ್ದೀನಿ! ನನ್ನನ್ನ ಕಳಿಸು!”+ ಅಂದೆ.  9  ಅದಕ್ಕೆ ಆತನು ಹೀಗೆ ಉತ್ರ ಕೊಟ್ಟ “ಹೋಗು, ಈ ಜನ್ರಿಗೆ ಹೀಗೆ ಹೇಳು: ‘ನೀವು ಮತ್ತೆಮತ್ತೆ ಕೇಳಿಸ್ಕೊಳ್ತೀರ,ಆದ್ರೆ ಅರ್ಥಮಾಡ್ಕೊಳ್ಳಲ್ಲ,ನೀವು ಮತ್ತೆಮತ್ತೆ ನೋಡ್ತೀರ,ಆದ್ರೆ ಏನೂ ಗ್ರಹಿಸಲ್ಲ.’+ 10  ಈ ಜನ ನೋಡಿದ್ರೂ ಕಾಣಿಸದ ಹಾಗೆ,ಕಿವಿಯಾರೆ ಕೇಳಿದ್ರೂ ಗಮನ ಕೊಡದ ಹಾಗೆ,ಹೃದಯದಿಂದ ಅರ್ಥ ಮಾಡ್ಕೊಂಡು,ನನ್ನ ಹತ್ರ ವಾಪಸ್‌ ಬಂದು ವಾಸಿ ಆಗದ ಹಾಗೆ+ಅವ್ರ ಹೃದಯವನ್ನ ಕಲ್ಲಾಗೋ ತರ ಮಾಡು,+ಅವ್ರ ಕಿವಿಗಳನ್ನ ಕೇಳದ ಹಾಗೆ ಮಾಡು,+ಅವ್ರ ಕಣ್ಣುಗಳನ್ನ ಮುಚ್ಚಿಬಿಡು.” 11  ಆಗ ನಾನು “ಯೆಹೋವನೇ, ಎಲ್ಲಿ ತನಕ ಹೀಗಿರುತ್ತೆ?” ಅಂತ ಕೇಳಿದೆ. ಅದಕ್ಕೆ ಆತನು ಹೀಗೆ ಹೇಳಿದನು“ಪಟ್ಟಣಗಳು ಧ್ವಂಸವಾಗಿ ಒಬ್ಬ ನಿವಾಸಿನೂ ಇಲ್ಲದಂತಾಗೋ ತನಕಮನೆಗಳಲ್ಲಿ ಜನ ಇಲ್ಲದಂತಾಗೋ ತನಕದೇಶ ಹಾಳುಬಿದ್ದು ನಿರ್ಜನವಾಗೋ ತನಕ,+ 12  ಯೆಹೋವ ಜನ್ರನ್ನ ದೂರ ಓಡಿಸಿಬಿಡೋ ತನಕ+ದೇಶದ ಹೆಚ್ಚಿನ ಜಾಗಗಳು ನಿರ್ಜನವಾಗೋ ತನಕ ಹೀಗಿರುತ್ತೆ. 13  ಆದ್ರೆ ಇಸ್ರಾಯೇಲ್‌ ಜನ್ರ ಹತ್ತನೇ ಒಂದು ಭಾಗ ಉಳಿಯುತ್ತೆ, ಅದನ್ನ ಮತ್ತೊಮ್ಮೆ ಸುಡಲಾಗುತ್ತೆ. ಇಸ್ರಾಯೇಲ್‌ ಜನ್ರು ಒಂದು ದೊಡ್ಡ ಮರದ ತರ, ಒಂದು ಓಕ್‌ ಮರದ ತರ ಇದ್ದಾರೆ. ಅದನ್ನ ಕಡಿದಾಗ ಮೋಟು ಬುಡ ಉಳಿಯುತ್ತೆ. ಆ ಮೋಟು ಬುಡದಲ್ಲಿ ಒಂದು ಪವಿತ್ರ ಮೊಳಕೆ* ಚಿಗುರು ಒಡೆಯುತ್ತೆ.”

ಪಾದಟಿಪ್ಪಣಿ

ಅಥವಾ “ನಾನು ಸತ್ತವರಿಗೆ ಸಮ.”
ಅಥವಾ “ಸಂತಾನ.” ಅಕ್ಷ. “ಬೀಜ.”