ಯೆರೆಮೀಯ 33:1-26
33 ಯೆರೆಮೀಯ ‘ಕಾವಲುಗಾರರ ಅಂಗಳದಲ್ಲಿ’+ ಇನ್ನೂ ಬಂಧನದಲ್ಲಿದ್ದಾಗ ಯೆಹೋವ ಅವನಿಗೆ ಎರಡನೇ ಸಲ ಹೀಗೆ ಹೇಳಿದನು
2 “ಭೂಮಿಯನ್ನ ಸೃಷ್ಟಿ ಮಾಡಿದ ಯೆಹೋವ, ಅದನ್ನ ರೂಪಿಸಿ ಗಟ್ಟಿಯಾಗಿ ನಿಲ್ಲಿಸಿದ ಯೆಹೋವ, ಯೆಹೋವ ಅನ್ನೋ ಹೆಸ್ರಿರುವಾತ ಹೇಳೋದು ಏನಂದ್ರೆ
3 ‘ನನ್ನನ್ನ ಕರಿ, ನಾನು ನಿನಗೆ ಉತ್ರ ಕೊಡ್ತೀನಿ. ನಾನು ನಿನಗೆ ದೊಡ್ಡ ದೊಡ್ಡ ವಿಷ್ಯಗಳನ್ನ, ನಿನಗೆ ಗೊತ್ತಿಲ್ಲದ, ಅರ್ಥಮಾಡ್ಕೊಳ್ಳೋಕೆ ಆಗದ ವಿಷ್ಯಗಳನ್ನ ಹೇಳೋಕೆ ತಯಾರಿದ್ದೀನಿ.’”+
4 “ಶತ್ರುಗಳು ಇಳಿಜಾರುಗಳನ್ನ ಕಟ್ಟಿ, ಕತ್ತಿಯಿಂದ ದಾಳಿ ಮಾಡಿ ಕೆಡವಿ ಹಾಕಿರೋ ಮನೆಗಳ, ಯೆಹೂದದ ರಾಜರ ಅರಮನೆಗಳ ಬಗ್ಗೆ ಇಸ್ರಾಯೇಲಿನ ದೇವರಾಗಿರೋ ಯೆಹೋವನಾದ ನಾನು ಹೇಳೋ ಮಾತುಗಳು.+
5 ಕಸ್ದೀಯರ ಜೊತೆ ಹೋರಾಡೋಕೆ ಬರ್ತಿರೋರ ಬಗ್ಗೆ, ಕೋಪದಿಂದ ನಾನು ಸಾಯಿಸಿದವರ ಹೆಣಗಳು ತುಂಬಿರೋ ಸ್ಥಳಗಳ ಬಗ್ಗೆ, ಈ ಪಟ್ಟಣವನ್ನ ನಾನು ಬಿಟ್ಟುಬಿಡೋಷ್ಟು* ಕೆಟ್ಟ ಕೆಲಸಗಳನ್ನ ಮಾಡಿದವರ ಬಗ್ಗೆ ನಾನು ಹೇಳೋ ಮಾತುಗಳು.
6 ಅದೇನಂದ್ರೆ ‘ಯೆರೂಸಲೇಮ್ ಅನ್ನೋ ಸ್ತ್ರೀ ಚೇತರಿಸ್ಕೊಳ್ಳೋ ತರ ಮಾಡ್ತೀನಿ. ಅವಳಿಗೆ ಒಳ್ಳೇ ಆರೋಗ್ಯ ಕೊಡ್ತೀನಿ.+ ಅವಳ ಜನ್ರನ್ನ ವಾಸಿ ಮಾಡ್ತೀನಿ. ಅವ್ರಿಗೆ ತುಂಬ ಶಾಂತಿ ಸಮಾಧಾನ ಕೊಡ್ತೀನಿ, ಸಮೃದ್ಧ ಸತ್ಯವನ್ನ ಕಲಿಸ್ತೀನಿ.+
7 ಯೆಹೂದ, ಇಸ್ರಾಯೇಲಿಂದ ಕೈದಿಗಳಾಗಿ ಹೋದ ಜನ್ರನ್ನ ವಾಪಸ್ ಕರ್ಕೊಂಡು ಬರ್ತಿನಿ,+ ಅವ್ರನ್ನ ಆಶೀರ್ವದಿಸಿ ಮುಂಚಿನ ತರ ಮಾಡ್ತೀನಿ.+
8 ಅವರು ನನ್ನ ವಿರುದ್ಧ ಮಾಡಿದ ಎಲ್ಲ ಪಾಪಗಳನ್ನ ತೊಳೆದು ಅವ್ರನ್ನ ಶುದ್ಧ ಮಾಡ್ತೀನಿ.+ ಅವರು ನನ್ನ ವಿರುದ್ಧ ಮಾಡಿದ ಎಲ್ಲ ಪಾಪಗಳನ್ನ, ಅಪರಾಧಗಳನ್ನ ಕ್ಷಮಿಸ್ತೀನಿ.+
9 ಈ ಪಟ್ಟಣದ ಹೆಸ್ರು ನನ್ನನ್ನ ಹಿಗ್ಗೋ ತರ ಮಾಡುತ್ತೆ, ನಾನು ಅವ್ರಿಗೆ ಮಾಡೋ ಎಲ್ಲ ಒಳ್ಳೇ ವಿಷ್ಯಗಳ ಬಗ್ಗೆ ಭೂಮಿಯ ಎಲ್ಲ ಜನ್ರು ಕೇಳಿಸ್ಕೊಳ್ತಾರೆ.+ ಹೀಗೆ ಈ ಪಟ್ಟಣದಿಂದಾಗಿ ಆ ಜನ್ರು ನನ್ನನ್ನ ಹೊಗಳ್ತಾರೆ, ಗೌರವ ಕೊಡ್ತಾರೆ. ಆ ಜನ್ರು ಈ ಪಟ್ಟಣಕ್ಕೆ ಮಾಡೋ ಎಲ್ಲ ಒಳ್ಳೇ ವಿಷ್ಯಗಳನ್ನ, ಕೊಡೋ ಶಾಂತಿಯನ್ನ ನೋಡಿ+ ಭಯದಿಂದ ನಡುಗ್ತಾರೆ.’”+
10 “ಯೆಹೋವ ಹೇಳೋದು ಏನಂದ್ರೆ ‘ಯೆಹೂದದ ಪಟ್ಟಣಗಳನ್ನ, ಯೆರೂಸಲೇಮಿನ ಬೀದಿಗಳನ್ನ ನೀವು ಬಂಜರುಭೂಮಿ, ಯಾರೂ ಇಲ್ಲದ ಜಾಗ, ಮನುಷ್ಯನಾಗಲಿ ಪ್ರಾಣಿಯಾಗಲಿ ಇಲ್ಲದೆ ಬಿಕೋ ಅಂತಿದೆ ಅಂತ ಹೇಳ್ತೀರ. ಆದ್ರೆ ಅಲ್ಲಿ
11 ಸಂತೋಷ ಸಂಭ್ರಮದ ಸದ್ದು+ ಮದುಮಗ ಮದುಮಗಳ ಸ್ವರ ಕೇಳಿಸುತ್ತೆ. ಅಲ್ಲದೆ “ಸೈನ್ಯಗಳ ದೇವರಾದ ಯೆಹೋವನಿಗೆ ಧನ್ಯವಾದ ಸಲ್ಲಿಸಿ. ಯಾಕಂದ್ರೆ ಯೆಹೋವ ಒಳ್ಳೆಯವನು.+ ಆತನ ಪ್ರೀತಿ ಶಾಶ್ವತ!”+ ಅಂತ ಹೇಳ್ತಾರೆ.’
‘ಅವರು ಯೆಹೋವನ ಆಲಯದ ಒಳಗೆ ಕೃತಜ್ಞತಾ ಅರ್ಪಣೆಗಳನ್ನ ತರ್ತಾರೆ.+ ಯಾಕಂದ್ರೆ ಈ ದೇಶದಿಂದ ಕೈದಿಗಳಾಗಿ ಹೋದವ್ರನ್ನ ನಾನು ವಾಪಸ್ ಕರ್ಕೊಂಡು ಬರ್ತಿನಿ, ಅವ್ರನ್ನ ಮುಂಚಿನ ತರ ಮಾಡ್ತೀನಿ’ ಅಂತ ಯೆಹೋವ ಹೇಳ್ತಾನೆ.”
12 “ಸೈನ್ಯಗಳ ದೇವರಾದ ಯೆಹೋವ ಹೇಳೋದು ಏನಂದ್ರೆ ‘ಮನುಷ್ಯರು ಪ್ರಾಣಿಗಳು ಇಲ್ಲದ ಈ ಬಂಜರುಭೂಮಿಯಲ್ಲಿ, ಅದ್ರ ಎಲ್ಲ ಪಟ್ಟಣಗಳಲ್ಲಿ ಮತ್ತೆ ಹುಲ್ಲುಗಾವಲು ಇರುತ್ತೆ. ಅಲ್ಲಿ ಕುರುಬರು ತಮ್ಮ ಕುರಿಗಳನ್ನ ವಿಶ್ರಾಂತಿಗಾಗಿ ಬಿಡ್ತಾರೆ.’+
13 ‘ಬೆಟ್ಟ ಪ್ರದೇಶದ ಪಟ್ಟಣಗಳಲ್ಲಿ, ತಗ್ಗುಪ್ರದೇಶದ ಪಟ್ಟಣಗಳಲ್ಲಿ, ದಕ್ಷಿಣದಲ್ಲಿರೋ ಪಟ್ಟಣಗಳಲ್ಲಿ, ಬೆನ್ಯಾಮೀನ್ ಪ್ರದೇಶದಲ್ಲಿ, ಯೆರೂಸಲೇಮಿನ ಸುತ್ತಾ ಇರೋ ಪ್ರದೇಶಗಳಲ್ಲಿ,+ ಯೆಹೂದದ ಪಟ್ಟಣಗಳಲ್ಲಿ+ ಮತ್ತೆ ಕುರಿಗಳು ಕುರುಬರ ಕೈ ಕೆಳಗೆ ಹಾದುಹೋಗುತ್ತೆ, ಅವರು ಅವುಗಳನ್ನ ಲೆಕ್ಕ ಮಾಡ್ತಾರೆ’ ಅಂತ ಯೆಹೋವ ಹೇಳ್ತಾನೆ.”
14 “ಯೆಹೋವ ಹೇಳೋದು ಏನಂದ್ರೆ ‘ನೋಡು, ನಾನು ಮಾತು ಕೊಟ್ಟ ಹಾಗೆ ಇಸ್ರಾಯೇಲ್ ಜನ್ರಿಗೆ, ಯೆಹೂದದ ಜನ್ರಿಗೆ ಒಳ್ಳೇದು ಮಾಡೋ ದಿನ ಬರುತ್ತೆ.+
15 ಆ ದಿನದಲ್ಲಿ, ಆ ಸಮಯದಲ್ಲಿ ನಾನು ದಾವೀದನ ವಂಶದಿಂದ* ಒಂದು ನೀತಿಯ ಮೊಳಕೆ* ಚಿಗುರೋ ತರ ಮಾಡ್ತೀನಿ.+ ಅವನು ದೇಶದಲ್ಲಿ ನ್ಯಾಯ ನೀತಿ ಇರೋ ತರ ನೋಡ್ಕೊಳ್ತಾನೆ.+
16 ಆ ದಿನಗಳಲ್ಲಿ ಯೆಹೂದವನ್ನ ಕಾಪಾಡ್ತಾನೆ,+ ಯೆರೂಸಲೇಮ್ ಸುರಕ್ಷಿತವಾಗಿ ಇರುತ್ತೆ.+ ಆ ಪಟ್ಟಣವನ್ನ “ನಮ್ಮ ನೀತಿ ಯೆಹೋವನಿಂದಾನೇ ಬರುತ್ತೆ”+ ಅನ್ನೋ ಹೆಸ್ರಿಂದ ಕರಿತಾರೆ.’”
17 “ಯೆಹೋವ ಹೇಳೋದು ಏನಂದ್ರೆ ‘ಇಸ್ರಾಯೇಲಿನ ಸಿಂಹಾಸನದ ಮೇಲೆ ಕೂತ್ಕೊಳ್ಳೋಕೆ ದಾವೀದನ ವಂಶದವ್ರಲ್ಲಿ ಯಾವಾಗ್ಲೂ ಒಬ್ಬ ಇದ್ದೇ ಇರ್ತಾನೆ.+
18 ಸರ್ವಾಂಗಹೋಮ ಬಲಿಗಳನ್ನ ಅರ್ಪಿಸೋಕೆ, ಧಾನ್ಯ ಅರ್ಪಣೆಗಳನ್ನ ಸುಡೋಕೆ, ಬೇರೆ ಬಲಿಗಳನ್ನ ಅರ್ಪಿಸೋಕೆ ಲೇವಿಯರಾದ ಪುರೋಹಿತರಲ್ಲಿ ಒಬ್ಬ ನನ್ನ ಮುಂದೆ ಯಾವಾಗ್ಲೂ ಇದ್ದೇ ಇರ್ತಾನೆ.’”
19 ಯೆಹೋವ ಮತ್ತೆ ಯೆರೆಮೀಯನಿಗೆ ಹೀಗಂದನು
20 “ಯೆಹೋವ ಏನು ಹೇಳ್ತಾನಂದ್ರೆ ‘ಸರಿಯಾದ ಸಮಯಕ್ಕೆ ಹಗಲು, ರಾತ್ರಿ ಆಗಬೇಕಂತ ನಾನು ಮಾಡ್ಕೊಂಡಿರೋ ಒಪ್ಪಂದವನ್ನ ನೀವು ಮುರಿದುಹಾಕೋಕೆ ಹೇಗೆ ಆಗಲ್ವೋ+
21 ಅದೇ ತರ ನನ್ನ ಸೇವಕನಾದ ದಾವೀದನ ಸಿಂಹಾಸನದ ಮೇಲೆ ಅವನ ಮಗ ಕೂತು ರಾಜನಾಗಿ ಆಳ್ತಾನೆ+ ಅಂತ ನಾನು ಅವನ ಜೊತೆ ಮಾಡ್ಕೊಂಡಿರೋ ಒಪ್ಪಂದ ಮುರಿದುಹೋಗೋಕೆ ಸಾಧ್ಯನೇ ಇಲ್ಲ.+ ಅಲ್ಲದೆ ನನ್ನ ಸೇವಕರಾಗಿರೋ ಲೇವಿಯರಾದ ಪುರೋಹಿತರ ಜೊತೆ ನಾನು ಮಾಡ್ಕೊಂಡಿರೋ ಒಪ್ಪಂದ ಸಹ ಮುರಿದುಹೋಗಲ್ಲ.+
22 ಆಕಾಶದ ಸೈನ್ಯವನ್ನ ಲೆಕ್ಕಿಸೋಕೆ, ಸಮುದ್ರದ ಮರಳನ್ನ ಅಳೆಯೋಕೆ ಮನುಷ್ಯನಿಗೆ ಆಗಲ್ಲ ಅನ್ನೋದು ಎಷ್ಟು ಸತ್ಯನೋ ನನ್ನ ಸೇವಕನಾದ ದಾವೀದನ ವಂಶದವರನ್ನ, ನನ್ನ ಸೇವೆ ಮಾಡ್ತಿರೋ ಲೇವಿಯರನ್ನ ನಾನು ತುಂಬ ಹೆಚ್ಚಿಸ್ತೀನಿ ಅನ್ನೋದೂ ಅಷ್ಟೇ ಸತ್ಯ.’”
23 ಯೆಹೋವ ಇನ್ನೊಮ್ಮೆ ಯೆರೆಮೀಯನಿಗೆ ಹೀಗಂದನು
24 ಈ ಜನ್ರು ಹೇಳೋದನ್ನ ನೀನು ಕೇಳಿಸ್ಕೊಂಡ್ಯಾ? ‘ಯೆಹೋವ ತಾನು ಆರಿಸ್ಕೊಂಡ ಎರಡು ಕುಟುಂಬಗಳನ್ನ ತಿರಸ್ಕರಿಸ್ತಾನೆ’ ಅಂತ ಅವರು ಹೇಳ್ತಿದ್ದಾರೆ. ಅವರು ನನ್ನ ಜನ್ರನ್ನ ಕೀಳಾಗಿ ನೋಡ್ತಿದ್ದಾರೆ, ನನ್ನ ಜನ್ರು ಒಂದು ಜನಾಂಗ ಆಗಿದ್ದಾರೆ ಅಂತ ಅವರು ನೋಡ್ತಿಲ್ಲ.
25 “ಯೆಹೋವ ಹೇಳೋದು ಏನಂದ್ರೆ ‘ಹಗಲು ರಾತ್ರಿಗಳ ವಿಷ್ಯದಲ್ಲಿ ನಾನು ಮಾಡಿರೋ ಒಪ್ಪಂದವಾಗಲಿ+ ಆಕಾಶ, ಭೂಮಿಗಾಗಿ ನಾನು ಇಟ್ಟಿರೋ ನಿಯಮಗಳಾಗಲಿ+ ಹೇಗೆ ಬದಲಾಗಲ್ವೋ
26 ಹಾಗೇ ನಾನು ಯಾಕೋಬನ, ನನ್ನ ಸೇವಕನಾದ ದಾವೀದನ ವಂಶದವರನ್ನ ಯಾವತ್ತೂ ತಿರಸ್ಕರಿಸಲ್ಲ ಅಂತ ಹೇಳಿದ ಮಾತು ಬದಲಾಗಲ್ಲ. ದಾವೀದನ ವಂಶದಿಂದ ಬರೋರು ಅಬ್ರಹಾಮ, ಇಸಾಕ, ಯಾಕೋಬನ ವಂಶದವರ ಮೇಲೆ ಸದಾಕಾಲ ರಾಜರಾಗಿ ಇರೋ ತರ ಮಾಡ್ತೀನಿ. ಯಾಕಂದ್ರೆ ಕೈದಿಗಳಾಗಿ ಹೋಗಿರೋ ಅವ್ರ ವಂಶದವರನ್ನ ನಾನು ಒಟ್ಟುಗೂಡಿಸಿ ವಾಪಸ್ ಕರ್ಕೊಂಡು ಬರ್ತಿನಿ.+ ಅವ್ರಿಗೆ ಕನಿಕರ ತೋರಿಸ್ತೀನಿ.’”+
ಪಾದಟಿಪ್ಪಣಿ
^ ಅಕ್ಷ. “ಪಟ್ಟಣದಿಂದ ನನ್ನ ಮುಖವನ್ನ ಮರೆಮಾಡುವಷ್ಟು.”
^ ಅಕ್ಷ. “ದಾವೀದನಿಗೋಸ್ಕರ.”
^ ಅಥವಾ “ವಾರಸುದಾರ.”