ಯೆರೆಮೀಯ 28:1-17

  • ಯೆರೆಮೀಯ ಮತ್ತು ಸುಳ್ಳು ಪ್ರವಾದಿ ಹನನ್ಯ (1-17)

28  ಅದೇ ವರ್ಷದಲ್ಲಿ ಅಂದ್ರೆ ಯೆಹೂದದ ರಾಜನಾದ ಚಿದ್ಕೀಯ+ ಆಳ್ತಿದ್ದ ನಾಲ್ಕನೇ ವರ್ಷದ ಐದನೇ ತಿಂಗಳಲ್ಲಿ ಗಿಬ್ಯೋನಿನವನಾದ+ ಅಜ್ಜೂರನ ಮಗನೂ ಪ್ರವಾದಿಯೂ ಆದ ಹನನ್ಯ ಯೆಹೋವನ ಆಲಯದಲ್ಲಿ ಪುರೋಹಿತರ, ಎಲ್ಲ ಜನ್ರ ಮುಂದೆ ನನಗೆ ಹೀಗೆ ಹೇಳಿದ 2  “ಸೈನ್ಯಗಳ ದೇವರೂ ಇಸ್ರಾಯೇಲಿನ ದೇವರೂ ಆದ ಯೆಹೋವ ಹೇಳೋದು ಏನಂದ್ರೆ ‘ಬಾಬೆಲಿನ ರಾಜ ಹಾಕಿದ ನೊಗವನ್ನ ನಾನು ಮುರಿದು ಬಿಡ್ತೀನಿ.+ 3  ಬಾಬೆಲಿನ ರಾಜ ನೆಬೂಕದ್ನೆಚ್ಚರ ಈ ಜಾಗದಿಂದ ಬಾಬೆಲಿಗೆ ತಗೊಂಡು ಹೋಗಿರೋ ಯೆಹೋವನ ಆಲಯದ ಎಲ್ಲ ಉಪಕರಣಗಳನ್ನ ಇನ್ನೆರಡು ವರ್ಷದ ಒಳಗೆ ವಾಪಸ್‌ ತರ್ತಿನಿ.’”+ 4  “‘ಯೆಹೋಯಾಕೀಮನ+ ಮಗನೂ ಯೆಹೂದದ ರಾಜನೂ ಆದ ಯೆಕೊನ್ಯನನ್ನ+ ಯೆಹೂದದಿಂದ ಬಾಬೆಲಿಗೆ ಹಿಡ್ಕೊಂಡು ಹೋಗಿರೋ ಎಲ್ರನ್ನ+ ನಾನು ವಾಪಸ್‌ ಕರ್ಕೊಂಡು ಬರ್ತಿನಿ. ಯಾಕಂದ್ರೆ ನಾನು ಬಾಬೆಲಿನ ರಾಜ ಹಾಕಿದ ನೊಗವನ್ನ ಮುರಿದು ಹಾಕ್ತೀನಿ’ ಅಂತ ಯೆಹೋವ ಹೇಳ್ತಾನೆ.” 5  ಆಗ ಪ್ರವಾದಿಯಾದ ಯೆರೆಮೀಯ ಯೆಹೋವನ ಆಲಯದಲ್ಲಿ ನಿಂತಿದ್ದ ಪುರೋಹಿತರ, ಎಲ್ಲ ಜನ್ರ ಮುಂದೆ ಪ್ರವಾದಿಯಾದ ಹನನ್ಯನಿಗೆ ಹೀಗಂದ 6  “ಹಾಗೇ ಆಗ್ಲಿ!* ಯೆಹೋವ ಹಾಗೇ ಮಾಡ್ಲಿ! ನೀನು ಭವಿಷ್ಯ ಹೇಳಿದ್ದನ್ನ ಯೆಹೋವ ನಿಜ ಮಾಡಿ ಯೆಹೋವನ ಆಲಯದ ಉಪಕರಣಗಳನ್ನ ಕೈದಿಗಳಾಗಿ ಹೋದ ಜನ್ರನ್ನ ಬಾಬೆಲಿಂದ ಈ ಜಾಗಕ್ಕೆ ವಾಪಸ್‌ ಕರ್ಕೊಂಡು ಬರಲಿ! 7  ಆದ್ರೆ ನಾನು ಈಗ ನಿನಗೂ ಈ ಎಲ್ಲ ಜನ್ರಿಗೂ ಹೇಳೋ ಮಾತುಗಳನ್ನ ದಯವಿಟ್ಟು ಕೇಳಿಸ್ಕೊ. 8  ನನಗೂ ನಿನಗೂ ತುಂಬ ಮುಂಚೆ ಇದ್ದ ಪ್ರವಾದಿಗಳು ಅನೇಕ ದೇಶಗಳ ಬಗ್ಗೆ, ದೊಡ್ಡ ದೊಡ್ಡ ರಾಜ್ಯಗಳ ಬಗ್ಗೆ ಭವಿಷ್ಯ ಹೇಳ್ತಾ ಅವು ಯುದ್ಧ, ಕಷ್ಟ, ಅಂಟುರೋಗಕ್ಕೆ* ತುತ್ತಾಗುತ್ತೆ ಅಂತ ಹೇಳ್ತಿದ್ರು. 9  ಆದ್ರೆ ಒಬ್ಬ ಪ್ರವಾದಿ ಶಾಂತಿ ನೆಮ್ಮದಿ ಬರುತ್ತೆ ಅಂತ ಭವಿಷ್ಯ ಹೇಳಿದ್ರೆ, ಅವನ ಮಾತುಗಳು ನಿಜ ಆದಾಗ ಮಾತ್ರ ಅವನು ಯೆಹೋವನೇ ಕಳಿಸಿದ ಪ್ರವಾದಿ ಅಂತ ಗೊತ್ತಾಗುತ್ತೆ.” 10  ಆಗ ಪ್ರವಾದಿ ಹನನ್ಯ ಪ್ರವಾದಿ ಯೆರೆಮೀಯನ ಕತ್ತು ಮೇಲಿದ್ದ ನೊಗವನ್ನ ತೆಗೆದು ಮುರಿದುಹಾಕಿದ.+ 11  ಆಮೇಲೆ ಎಲ್ಲ ಜನ್ರ ಮುಂದೆ ಹನನ್ಯ “ಯೆಹೋವ ಹೀಗೆ ಹೇಳ್ತಾನೆ ‘ಇದೇ ರೀತಿ ನಾನು ಬಾಬೆಲಿನ ರಾಜ ನೆಬೂಕದ್ನೆಚ್ಚರ ಎಲ್ಲ ದೇಶಗಳವರ ಕತ್ತು ಮೇಲೆ ಹಾಕಿದ ನೊಗವನ್ನ ಎರಡೇ ವರ್ಷದೊಳಗೆ ತೆಗೆದು ಮುರಿದುಹಾಕ್ತೀನಿ”+ ಅಂದ. ಆಮೇಲೆ ಪ್ರವಾದಿ ಯೆರೆಮೀಯ ಅಲ್ಲಿಂದ ಹೋದ. 12  ಪ್ರವಾದಿ ಹನನ್ಯ ಪ್ರವಾದಿ ಯೆರೆಮೀಯನ ಕತ್ತು ಮೇಲಿದ್ದ ನೊಗವನ್ನ ತೆಗೆದು ಮುರಿದುಹಾಕಿದ ಮೇಲೆ ಯೆಹೋವ ಯೆರೆಮೀಯನಿಗೆ ಹೀಗೆ ಹೇಳಿದನು 13  “ನೀನು ಹೋಗಿ ಹನನ್ಯನಿಗೆ ‘“ನೀನು ಮುರಿದದ್ದು ಮರದ ನೊಗಗಳನ್ನ,+ ಆದ್ರೆ ಅವುಗಳ ಬದಲು ನೀನು ಕಬ್ಬಿಣದ ನೊಗಗಳನ್ನ ಮಾಡ್ತೀಯ” ಅಂತ ಯೆಹೋವ ಹೇಳ್ತಾನೆ’ ಅಂತ ತಿಳಿಸು. 14  ಸೈನ್ಯಗಳ ದೇವರೂ ಇಸ್ರಾಯೇಲಿನ ದೇವರೂ ಆದ ಯೆಹೋವ ಹೇಳೋದು ಏನಂದ್ರೆ “ಈ ಎಲ್ಲ ದೇಶಗಳವರು ಬಾಬೆಲಿನ ರಾಜ ನೆಬೂಕದ್ನೆಚ್ಚರನ ಸೇವೆ ಮಾಡೋ ತರ ನಾನು ಅವ್ರ ಕತ್ತು ಮೇಲೆ ಕಬ್ಬಿಣದ ನೊಗ ಹಾಕ್ತೀನಿ. ಅವರು ಅವನ ಸೇವೆ ಮಾಡಲೇಬೇಕಾಗುತ್ತೆ.+ ಕಾಡುಪ್ರಾಣಿಗಳನ್ನ ಸಹ ನಾನು ಅವನ ವಶಕ್ಕೆ ಕೊಡ್ತೀನಿ.”’”+ 15  ಆಮೇಲೆ ಪ್ರವಾದಿ ಯೆರೆಮೀಯ ಪ್ರವಾದಿ ಹನನ್ಯನಿಗೆ+ ಹೀಗೆ ಹೇಳಿದ “ಹನನ್ಯ, ದಯವಿಟ್ಟು ಕೇಳು! ಯೆಹೋವ ನಿನ್ನನ್ನ ಕಳಿಸಲಿಲ್ಲ. ನೀನು ಈ ಜನ್ರಿಗೆ ಸುಳ್ಳು ಹೇಳಿ ಅದನ್ನ ನಂಬೋ ತರ ಮಾಡ್ದೆ.+ 16  ಹಾಗಾಗಿ ಯೆಹೋವ ಹೇಳೋದು ಏನಂದ್ರೆ ‘ನೋಡು! ನೀನು ಭೂಮಿ ಮೇಲೆನೇ ಇಲ್ಲದ ಹಾಗೆ ನಾನು ಮಾಡ್ತೀನಿ. ಈ ಜನ್ರು ಯೆಹೋವನ ವಿರುದ್ಧ ತಿರುಗಿ ಬಿಳೋ ತರ ನೀನು ಮಾಡಿದ್ದೀಯ. ಹಾಗಾಗಿ ಈ ವರ್ಷದಲ್ಲೇ ನೀನು ಸಾಯ್ತೀಯ.’”+ 17  ಅದ್ರ ತರಾನೇ ಪ್ರವಾದಿ ಹನನ್ಯ ಅದೇ ವರ್ಷ ಏಳನೇ ತಿಂಗಳಲ್ಲಿ ಸತ್ತೋದ.

ಪಾದಟಿಪ್ಪಣಿ

ಹೀಬ್ರು ಭಾಷೆಯಲ್ಲಿ “ಆಮೆನ್‌.”
ಅಥವಾ “ಕಾಯಿಲೆಗೆ.”