ಯೆರೆಮೀಯ 22:1-30
22 ಯೆಹೋವ ಹೇಳೋದು ಏನಂದ್ರೆ “ನೀನು ಯೆಹೂದದ ರಾಜನ ಅರಮನೆಗೆ ಹೋಗಿ ಈ ಮಾತನ್ನ ತಿಳಿಸು.
2 ಅದೇನಂದ್ರೆ ‘ದಾವೀದನ ಸಿಂಹಾಸನದಲ್ಲಿ ಕೂತಿರೋ ಯೆಹೂದದ ರಾಜನೇ, ಯೆಹೋವನ ಮಾತು ಕೇಳಿಸ್ಕೊ. ಈ ಬಾಗಿಲುಗಳಿಂದ ಒಳಗೆ ಬರ್ತಿರೋ ನಿನ್ನ ಸೇವಕರು, ನಿನ್ನ ಜನ್ರು ಸಹ ಈ ಮಾತನ್ನ ಕೇಳಿಸ್ಕೊಳ್ಳಲಿ.
3 ಯೆಹೋವ ಹೀಗೆ ಹೇಳ್ತಾನೆ “ನೀತಿನ್ಯಾಯದಿಂದ ನಡ್ಕೊಳ್ಳಿ, ಮೋಸಗಾರನ ಕೈಗೆ ಸಿಕ್ಕಿ ತನ್ನ ಹತ್ರ ಇರೋದನ್ನ ಕಳ್ಕೊಂಡವನನ್ನ ಬಿಡಿಸಿ ಕಾಪಾಡಿ. ವಿದೇಶಿಯರಲ್ಲಿ ಯಾರ ಜೊತೆನೂ ಕೆಟ್ಟದಾಗಿ ನಡ್ಕೊಳ್ಳಬೇಡಿ, ಯಾವ ವಿಧವೆಗೂ ಅನಾಥ* ಮಕ್ಕಳಿಗೂ ಹಾನಿಮಾಡಬೇಡಿ.+ ಈ ಪಟ್ಟಣದಲ್ಲಿ ಅಮಾಯಕರ ರಕ್ತ ಸುರಿಸಬೇಡಿ.+
4 ನೀವು ಈ ಮಾತುಗಳನ್ನ ತಪ್ಪದೆ ಪಾಲಿಸಿದ್ರೆ ದಾವೀದನ ಸಿಂಹಾಸನದಲ್ಲಿ ಕೂತ್ಕೊಳ್ಳೋ ರಾಜರು+ ರಥಗಳಲ್ಲಿ, ಕುದುರೆಗಳ ಮೇಲೆ ಸವಾರಿ ಮಾಡ್ತಾ ತಮ್ಮ ಸೇವಕರ ಜೊತೆ, ತಮ್ಮ ಜನ್ರ ಜೊತೆ ಈ ಅರಮನೆಯ ಬಾಗಿಲುಗಳಿಂದ ಒಳಗೆ ಬರ್ತಾರೆ.”’+
5 ಯೆಹೋವ ಹೇಳೋದು ಏನಂದ್ರೆ ‘ನೀವು ನನ್ನ ಈ ಮಾತುಗಳನ್ನ ಕೇಳದಿದ್ರೆ ಈ ಅರಮನೆ ಹಾಳುಬೀಳುತ್ತೆ ಅಂತ ನನ್ನ ಮೇಲೆ ಆಣೆ ಇಟ್ಟು ಹೇಳ್ತಾ ಇದ್ದೀನಿ.’+
6 ಯೆಹೂದದ ರಾಜನ ಅರಮನೆ ವಿಷ್ಯದಲ್ಲಿ ಯೆಹೋವ ಹೇಳೋದು ಏನಂದ್ರೆ‘ನೀನು ನನಗೆ ಗಿಲ್ಯಾದಿನ ತರಲೆಬನೋನ್ ಬೆಟ್ಟದ ತುದಿ ತರ ಇದ್ದೀಯ.
ಆದ್ರೆ ನಿನ್ನನ್ನ ಕಾಡು ತರ ಮಾಡಿಬಿಡ್ತೀನಿ,ನಿನ್ನ ಪಟ್ಟಣಗಳಲ್ಲಿ ಒಂದ್ರಲ್ಲೂ ಜನ ವಾಸ ಮಾಡಲ್ಲ.+
7 ನಿನ್ನ ಮೇಲೆ ದಾಳಿ ಮಾಡೋಕೆ ನಾಶ ಮಾಡೋರನ್ನ ಇಡ್ತೀನಿ,ಅವ್ರಲ್ಲಿ ಒಬ್ಬೊಬ್ರೂ ಆಯುಧ ಹಿಡ್ಕೊಂಡು ಬರ್ತಾರೆ.+
ನಿನ್ನ ಹತ್ರ ಇರೋ ಅತ್ಯುತ್ತಮ ದೇವದಾರು ಮರಗಳನ್ನ ಕಡಿದು ಬೆಂಕಿಯಲ್ಲಿ ಹಾಕ್ತಾರೆ.+
8 ತುಂಬ ದೇಶದ ಜನ್ರು ಈ ಪಟ್ಟಣ ದಾಟ್ಕೊಂಡು ಹೋಗುವಾಗ ಮಾತಾಡ್ಕೊಳ್ತಾ “ಈ ಸುಂದರ ಪಟ್ಟಣಕ್ಕೆ ಯೆಹೋವ ಯಾಕೆ ಇಂಥ ಗತಿ ತಂದನು?” ಅಂತ ಕೇಳ್ತಾರೆ.+
9 ಅದಕ್ಕೆ ಬೇರೆಯವರು “ಅವ್ರ ದೇವರಾದ ಯೆಹೋವ ಅವ್ರ ಜೊತೆ ಮಾಡ್ಕೊಂಡ ಒಪ್ಪಂದವನ್ನ ಅವರು ಮೀರಿ ನಡೆದ್ರು, ಬೇರೆ ದೇವರುಗಳಿಗೆ ಅಡ್ಡಬಿದ್ದು ಅವುಗಳ ಸೇವೆ ಮಾಡಿದ್ರು. ಅದಕ್ಕೇ ದೇವರು ಅವ್ರಿಗೆ ಈ ಗತಿ ತಂದನು” ಅಂತಾರೆ.’+
10 ಸತ್ತ ರಾಜನಿಗೋಸ್ಕರ ಅಳಬೇಡಿ,ಅವನಿಗಾಗಿ ಎದೆ ಬಡ್ಕೊಳ್ಳಬೇಡಿ.
ಅದ್ರ ಬದಲು ಕೈದಿಯಾಗಿ ಹೋಗುವವನಿಗೋಸ್ಕರ ಬಿಕ್ಕಿ ಬಿಕ್ಕಿ ಅಳಬೇಕು,ಯಾಕಂದ್ರೆ ತಾನು ಹುಟ್ಟಿದ ದೇಶವನ್ನ ಅವನು ಮತ್ತೆ ನೋಡೋದೇ ಇಲ್ಲ.
11 ಯೋಷೀಯನ ಮಗನಾದ ಶಲ್ಲೂಮ*+ ತನ್ನ ತಂದೆ ನಂತ್ರ ಯೆಹೂದವನ್ನ ಆಳಿದವನು.+ ಈ ದೇಶದ ಜನ್ರನ್ನ ಕೈದಿಗಳಾಗಿ ಹಿಡ್ಕೊಂಡು ಹೋಗುವಾಗ ಅವನನ್ನೂ ಹಿಡ್ಕೊಂಡು ಹೋದ್ರು. ಅವನ ಬಗ್ಗೆ ಯೆಹೋವ ಹೇಳೋದು ಏನಂದ್ರೆ ‘ಅವನು ಈ ಜಾಗಕ್ಕೆ ಮತ್ತೆ ವಾಪಸ್ ಬರಲ್ಲ.
12 ಅವನನ್ನ ಎಲ್ಲಿಗೆ ಹಿಡ್ಕೊಂಡು ಹೋದ್ರೋ ಆ ಜಾಗದಲ್ಲೇ ಅವನು ಸಾಯ್ತಾನೆ. ಅವನು ಇನ್ಯಾವತ್ತೂ ಈ ದೇಶ ನೋಡಲ್ಲ.’+
13 ಅನೀತಿಯಿಂದ ತನ್ನ ಅರಮನೆಯನ್ನ,ಅನ್ಯಾಯದಿಂದ ಮಹಡಿ ಕೋಣೆಗಳನ್ನ ಕಟ್ಟುವವನ,ಕೂಲಿಯವರಿಗೆ ಕೂಲಿ ಕೊಡದೆ+ಬಿಟ್ಟಿಯಾಗಿ ಕೆಲಸ ಮಾಡಿಸೋನ ಗತಿಯನ್ನ ಏನಂತ ಹೇಳಲಿ.
14 ‘ನನಗಾಗಿ ಒಂದು ದೊಡ್ಡ ಮನೆಯನ್ನ,ದೊಡ್ಡ ದೊಡ್ಡ ಮಹಡಿ ಕೋಣೆಗಳನ್ನ ಕಟ್ಟಿಸ್ತೀನಿ,ಅದಕ್ಕೆ ಕಿಟಿಕಿಗಳನ್ನ ಇಟ್ಟು ದೇವದಾರು ಹಲಗೆಗಳನ್ನ ಹೊದಿಸಿ,ಗಾಢ ಕೆಂಪು* ಬಣ್ಣ ಹಚ್ಚುತ್ತೀನಿ’ ಅಂತ ಹೇಳುವವನ ಗತಿಯನ್ನ ಏನಂತ ಹೇಳಲಿ.
15 ನೀನು ಎಲ್ರಿಗಿಂತ ಹೆಚ್ಚು ದೇವದಾರು ಮರಗಳನ್ನ ಬಳಸ್ತಿದ್ದೀಯ ಅನ್ನೋ ಕಾರಣಕ್ಕೆ ರಾಜನಾಗಿ ಆಳ್ತಾ ಇರ್ತಿಯ ಅಂದ್ಕೊಂಡಿದ್ದೀಯಾ?
ನಿನ್ನ ತಂದೆ ಸಹ ತಿಂದು ಕುಡಿದ,ಆದ್ರೆ ಅವನು ನ್ಯಾಯವಾಗಿ ನಡಿತಿದ್ದ,+ಹಾಗಾಗಿ ಅವನಿಗೆ ಎಲ್ಲ ಒಳ್ಳೇದೇ ಆಯ್ತು.
16 ಕಷ್ಟದಲ್ಲಿ ಇರೋರಿಗೆ, ಬಡವ್ರಿಗೆ ಅವನು ನ್ಯಾಯ ಕೊಡಿಸ್ತಿದ್ದ,ಅದಕ್ಕೇ ಅವನಿಗೆ ಒಳ್ಳೇದಾಯ್ತು.
‘ಈ ರೀತಿ ಅವನು ನನ್ನನ್ನ ತಿಳ್ಕೊಂಡಿದ್ದಾನೆ ಅಂತ ತೋರಿಸ್ಕೊಟ್ಟ’ ಅಂತ ಯೆಹೋವ ಹೇಳ್ತಾನೆ.
17 ‘ಆದ್ರೆ ನೀನು ನಿನ್ನ ಲಾಭಕ್ಕಾಗಿ ಇನ್ನೊಬ್ರಿಗೆ ಹೇಗೆ ಮೋಸ ಮಾಡೋದು,ಹೇಗೆ ಅಮಾಯಕರ ರಕ್ತ ಸುರಿಸೋದು,ಹೇಗೆ ಸುಲಿಗೆ ಮಾಡೋದುಅಂತ ನೋಡ್ತಾ ಇರ್ತಿಯ, ನಿನ್ನ ತಲೆಯಲ್ಲಿ ಅದೇ ಯೋಚನೆ ಇರುತ್ತೆ.’
18 ಹಾಗಾಗಿ ಯೋಷೀಯನ ಮಗನೂ ಯೆಹೂದದ ರಾಜನೂ ಆದ ಯೆಹೋಯಾಕೀಮನ+ ಬಗ್ಗೆ ಯೆಹೋವ ಹೀಗೆ ಹೇಳ್ತಾನೆ‘ಅವನು ಸತ್ತಾಗ ಜನ,“ಅಯ್ಯೋ, ಅಣ್ಣಾ! ಅಯ್ಯೋ, ಅಕ್ಕಾ!” ಅಂತಾಗ್ಲಿ“ಅಯ್ಯೋ, ಒಡೆಯಾ! ಅಯ್ಯೋ, ನಿನ್ನ ಮಹಿಮೆಯೆಲ್ಲ ಹೋಯ್ತಲ್ಲಾ!” ಅಂತಾಗ್ಲಿ ಕೂಗಿ ಎದೆ ಬಡ್ಕೊಳ್ಳಲ್ಲ.
19 ಸತ್ತ ಕತ್ತೆಗೆ ಬರೋ ಗತಿನೇ ಅವನಿಗೂ ಬರುತ್ತೆ,+ಅವನ ಶವವನ್ನ ಎಳ್ಕೊಂಡು ಹೋಗಿಯೆರೂಸಲೇಮಿನ ಬಾಗಿಲ ಹೊರಗೆ ಬಿಸಾಕ್ತಾರೆ.’+
20 ನೀನು* ಲೆಬನೋನನ್ನ ಹತ್ತಿಹೋಗಿ ಅಳು,ಬಾಷಾನ್‌ನಲ್ಲಿ ಜೋರಾಗಿ ಕೂಗು,ಅಬಾರೀಮಿನಲ್ಲಿ ಗೋಳಾಡು,+ಯಾಕಂದ್ರೆ ನಿನ್ನ ಪ್ರಿಯತಮರನ್ನೆಲ್ಲ ಜಜ್ಜಿ ಹಾಕಿದ್ದಾರೆ.+
21 ನೀನು ನೆಮ್ಮದಿಯಿಂದ ಇದ್ದಾಗ ಬುದ್ಧಿ ಹೇಳ್ದೆ.
ಆದ್ರೆ ನೀನು ‘ನಿನ್ನ ಮಾತು ನಾನು ಕೇಳಲ್ಲ’ ಅಂದೆ.+
ಚಿಕ್ಕ ವಯಸ್ಸಿಂದಾನೂ ಇದೇ ರೀತಿ ಮಾಡ್ತಿದ್ದೆ,ನನ್ನ ಮಾತು ಕೇಳ್ತಾನೇ ಇರಲಿಲ್ಲ.+
22 ಗಾಳಿ ನಿನ್ನ ಎಲ್ಲ ಕುರುಬರನ್ನ ಬಡ್ಕೊಂಡು ಹೋಗುತ್ತೆ,+ನಿನ್ನ ಪ್ರಿಯತಮರು ಕೈದಿಗಳಾಗಿ ಹೋಗ್ತಾರೆ.
ನಿನಗೆ ಬರೋ ಎಲ್ಲ ಕಷ್ಟಗಳಿಂದ ನಿನಗೆ ಅವಮಾನ ಆಗುತ್ತೆ.
23 ಲೆಬನೋನಿನಲ್ಲಿ ವಾಸ ಮಾಡ್ತಿರೋ ಸ್ತ್ರೀಯೇ,+ದೇವದಾರು ಮರಗಳ ಮಧ್ಯ ಬೆಚ್ಚಗೆ ಇರುವವಳೇ,+ನಿನಗೆ ಕಷ್ಟ ಬಂದಾಗ ತುಂಬ ನರಳ್ತೀಯ,ಹೆರಿಗೆ ನೋವಿನ ತರ ತುಂಬ ನೋವು ಅನುಭವಿಸ್ತೀಯ.”+
24 “ಯೆಹೋವ ಹೇಳೋದು ಏನಂದ್ರೆ ‘ಯೆಹೋಯಾಕೀಮನ+ ಮಗನೂ ಯೆಹೂದದ ರಾಜನೂ ಆದ ಕೊನ್ಯನೇ,*+ ನೀನು ನನ್ನ ಬಲಗೈಯಲ್ಲಿ ಮುದ್ರೆ ಉಂಗುರವಾಗಿದ್ರೂ ನನ್ನ ಜೀವದಾಣೆ, ನಿನ್ನನ್ನ ಅಲ್ಲಿಂದ ತೆಗೆದುಬಿಡ್ತಿದ್ದೆ.
25 ನಿನ್ನ ಪ್ರಾಣ ತೆಗಿಯೋಕೆ ಕಾಯ್ತಿರೋರ ಕೈಗೆ, ಯಾರಿಗೆ ಹೆದರ್ತಿಯೋ ಅವ್ರ ಕೈಗೆ, ಬಾಬೆಲಿನ ರಾಜನಾದ ನೆಬೂಕದ್ನೆಚ್ಚರನ* ಕೈಗೆ, ಕಸ್ದೀಯರ ಕೈಗೆ ನಿನ್ನನ್ನ ಕೊಡ್ತೀನಿ.+
26 ನಿನ್ನನ್ನ, ನಿನ್ನ ಹೆತ್ತ ತಾಯಿಯನ್ನ ನೀವು ಹುಟ್ಟದ ದೇಶಕ್ಕೆ ಬೀಸಿ ಎಸಿತೀನಿ, ನೀವು ಅಲ್ಲೇ ಸಾಯ್ತೀರ.
27 ಸ್ವದೇಶಕ್ಕೆ ವಾಪಸ್ ಹೋಗಬೇಕು ಅಂತ ಆಸೆಪಡ್ತೀರ, ಆದ್ರೆ ಯಾವತ್ತೂ ಹೋಗಲ್ಲ.+
28 ಈ ಕೊನ್ಯ ಕೀಳಾದ, ಒಡೆದು ಹೋದ ಮಡಿಕೆನಾ?
ಯಾರಿಗೂ ಬೇಡವಾದ ಪಾತ್ರೆನಾ?
ಅವನನ್ನ ಅವನ ವಂಶದವ್ರನ್ನ ಎಸೆದುಬಿಟ್ಟಿದ್ದಾನಲ್ಲಾ,ಅವ್ರಿಗೆ ಗೊತ್ತಿಲ್ಲದ ದೇಶಕ್ಕೆ ಅವ್ರನ್ನ ಬಿಸಾಕಿದ್ದಾನಲ್ಲಾ.’+
29 ಭೂಮಿಯಲ್ಲಿರೋ ಜನ್ರೇ,* ಯೆಹೋವನ ಮಾತು ಕೇಳಿ.
30 ಯೆಹೋವ ಹೀಗೆ ಹೇಳ್ತಾನೆ‘ಇವನಿಗೆ ಮಕ್ಕಳಿಲ್ಲ,ಇವನು ಜೀವನದಲ್ಲಿ ಉದ್ಧಾರ ಆಗಲ್ಲ* ಅಂತ ಬರಿ.
ಯಾಕಂದ್ರೆ ಇವನ ವಂಶದವರಲ್ಲಿ ಯಾರೂ ಕೂಡ ದಾವೀದನ ಸಿಂಹಾಸನದಲ್ಲಿ ಕೂತ್ಕೊಂಡು ಮತ್ತೆ ಯೆಹೂದವನ್ನ ಆಳಲ್ಲ.’”+
ಪಾದಟಿಪ್ಪಣಿ
^ ಅಥವಾ “ತಂದೆ ಇಲ್ಲದ.”
^ ಇವನ ಇನ್ನೊಂದು ಹೆಸರು ಯೆಹೋವಾಹಾಜ.
^ ಅಥವಾ “ರಸಸಿಂಧೂರ.”
^ ಈ ಅಪ್ಪಣೆಯನ್ನ ಯೆರೂಸಲೇಮಿಗೆ ಕೊಟ್ಟಿರಬಹುದು.
^ ಇವನಿಗಿದ್ದ ಬೇರೆ ಹೆಸರುಗಳು, ಯೆಹೋಯಾಖೀನ ಮತ್ತು ಯೆಕೊನ್ಯ.
^ ಅಕ್ಷ. “ನೆಬೂಕದ್ರೆಚ್ಚರ.” ಆ ಹೆಸ್ರನ್ನ ಹೀಗೂ ಬರಿತಿದ್ರು.
^ ಅಕ್ಷ. “ಭೂಮಿಯೇ, ಭೂಮಿಯೇ, ಭೂಮಿಯೇ.”
^ ಅಥವಾ “ಜೀವಮಾನದಲ್ಲಿ ಯಶಸ್ಸು ಕಾಣಲ್ಲ.”