ಯೂದ ಬರೆದ ಪತ್ರ 1:1-25

  • ವಂದನೆಗಳು (1, 2)

  • ಸುಳ್ಳು ಬೋಧಕರಿಗೆ ಶಿಕ್ಷೆ ಖಂಡಿತ (3-16)

    • ಸೈತಾನನ ಜೊತೆ ಮೀಕಾಯೇಲನ ವಾದವಿವಾದ (9)

    • ಹನೋಕನ ಭವಿಷ್ಯವಾಣಿ (14, 15)

  • ದೇವರು ನಿಮ್ಮನ್ನ ಪ್ರೀತಿಸೋ ತರ ನಡ್ಕೊಳ್ತಾ ಇರಿ (17-23)

  • ದೇವರಿಗೆ ಗೌರವ ಸಿಗಬೇಕು (24, 25)

1  ಇದು ಯೇಸು ಕ್ರಿಸ್ತನ ದಾಸ, ಯಾಕೋಬನ ಸಹೋದರ+ ಆಗಿರೋ ಯೂದ ಬರಿತಿರೋ ಪತ್ರ. ದೇವರು ಆರಿಸ್ಕೊಂಡಿರೋ ಜನ್ರಿಗೆ+ ನಾನು ಈ ಪತ್ರ ಬರಿತಾ ಇದ್ದೀನಿ. ನಮ್ಮ ತಂದೆಯಾದ ದೇವರು ಅವ್ರನ್ನ ಪ್ರೀತಿಸ್ತಾನೆ. ಅವರು ಯೇಸು ಕ್ರಿಸ್ತನ ಜೊತೆ ಇರಬೇಕು ಅಂತ ದೇವರು ಅವ್ರನ್ನ ತುಂಬ ಜೋಪಾನ ಮಾಡಿದ್ದಾನೆ.+ 2  ದೇವರು ನಿಮಗೆ ಇನ್ನೂ ಜಾಸ್ತಿ ಕರುಣೆ, ಶಾಂತಿ, ಪ್ರೀತಿ ತೋರಿಸ್ಲಿ. 3  ಪ್ರೀತಿಯ ಸಹೋದರ ಸಹೋದರಿಯರೇ, ನಮ್ಮೆಲ್ಲರಿಗೂ ಸಿಗೋ ರಕ್ಷಣೆ+ ಬಗ್ಗೆ ಬರಿಬೇಕು ಅಂತ ಮೊದ್ಲು ಅಂದ್ಕೊಂಡೆ. ಆದ್ರೆ ಅದನ್ನ ಹೇಳೋ ಮುಂಚೆ ಇನ್ನೊಂದು ವಿಷ್ಯ ಹೇಳಬೇಕು. ಅದೇನಂದ್ರೆ ನಿಮಗೆ ಸಿಕ್ಕಿರೋ ನಂಬಿಕೆಗೋಸ್ಕರ ನೀವು ತುಂಬ ಕಷ್ಟಪಟ್ಟು ಹೋರಾಟ ಮಾಡ್ತಾ ಇರಿ.+ ಯಾಕಂದ್ರೆ ಆ ನಂಬಿಕೆ ಪವಿತ್ರ ಜನ್ರಿಗೆ ಒಂದೇ ಒಂದು ಸಾರಿ ಸಿಕ್ಕಿದ್ರೂ ಶಾಶ್ವತವಾಗಿ ಉಳಿಯುತ್ತೆ. 4  ನಿಮ್ಮ ಮಧ್ಯ ನಿಮಗೇ ಗೊತ್ತಿಲ್ದೆ ಕೆಲವರು ಸೇರ್ಕೊಂಡಿದ್ದಾರೆ. ಅವ್ರಿಗೆ ದೇವರ ಮೇಲೆ ಸ್ವಲ್ಪನೂ ಗೌರವ ಇಲ್ಲ. ನಮ್ಮ ದೇವರ ಅಪಾರ ಕೃಪೆಯನ್ನ ನೆಪ ಮಾಡ್ಕೊಂಡು ಅವರು ನಾಚಿಕೆ ಬಿಟ್ಟು ಕೆಟ್ಟ ಕೆಲಸಗಳನ್ನ*+ ಮಾಡ್ತಾ ಇದ್ದಾರೆ. ಅಷ್ಟೇ ಅಲ್ಲ, ನಮ್ಮ ಒಬ್ಬನೇ ಯಜಮಾನ, ಒಡೆಯ ಆಗಿರೋ ಯೇಸು ಕ್ರಿಸ್ತನಿಗೆ ಅವರು ನಿಷ್ಠೆ ತೋರಿಸ್ತಿಲ್ಲ.+ ಅವ್ರಿಗೆ ಸಿಗೋ ಶಿಕ್ಷೆ ಬಗ್ಗೆ ಪವಿತ್ರ ಗ್ರಂಥದಲ್ಲಿ ಈ ಮುಂಚೆನೇ ಹೇಳಿತ್ತು. 5  ನಿಮಗೆ ಈ ವಿಷ್ಯಗಳೆಲ್ಲ ಚೆನ್ನಾಗಿ ಗೊತ್ತು. ಆದ್ರೂ ಕೆಲವು ವಿಷ್ಯಗಳನ್ನ ನಿಮ್ಮ ನೆನಪಿಗೆ ತರೋಣ ಅಂತ ಇದನ್ನ ಹೇಳ್ತಾ ಇದ್ದೀನಿ. ಯೆಹೋವ* ಈಜಿಪ್ಟಿಂದ ತನ್ನ ಜನ್ರನ್ನ ಕಾಪಾಡಿದ.+ ಆದ್ರೆ ಆಮೇಲೆ ನಂಬಿಕೆ ಇಲ್ಲದವ್ರನ್ನ ನಾಶಮಾಡಿದ.+ 6  ಅದೇ ರೀತಿ ಸ್ವಲ್ಪ ದೇವದೂತರು ಕೊಟ್ಟ ಕೆಲಸವನ್ನ ಬಿಟ್ಟು ಹೋಗಿದ್ರಿಂದ* ದೇವರು ಅವ್ರನ್ನ ಕತ್ತಲೆ ಜಾಗಕ್ಕೆ ಹಾಕಿ ಯಾವತ್ತೂ ಹೊರಗೆ ಬರಕ್ಕಾಗದ ಹಾಗೆ ಮಾಡಿದ್ದಾನೆ.+ ಆಮೇಲೆ ಅವ್ರಿಗೆ ನ್ಯಾಯ ತೀರಿಸ್ತಾನೆ.+ 7  ಅದೇ ತರ ಸೊದೋಮ್‌, ಗೊಮೋರ ಮತ್ತು ಸುತ್ತಮುತ್ತ ಇದ್ದ ಪಟ್ಟಣಗಳು ಅಸಹ್ಯವಾದ ಲೈಂಗಿಕ ಅನೈತಿಕತೆಯಲ್ಲಿ ಮುಳುಗಿಹೋಗಿದ್ವು. ಸ್ವಾಭಾವಿಕವಾಗಿ ಅಷ್ಟೇ ಅಲ್ಲ ವಿಚಿತ್ರವಾಗಿ ತಮ್ಮ ಆಸೆಗಳನ್ನ ತೀರಿಸ್ಕೊಂಡ್ವು.+ ಹಾಗಾಗಿ ಅವು ಬೆಂಕಿಯಲ್ಲಿ ಶಾಶ್ವತವಾಗಿ ನಾಶ ಆದ್ವು.+ ಹೀಗೆ ಇವುಗಳ ಉದಾಹರಣೆ ನಮಗೊಂದು ಎಚ್ಚರಿಕೆ ಆಗಿದೆ. 8  ಇಷ್ಟೆಲ್ಲ ಉದಾಹರಣೆ ಇದ್ರೂ ನಿಮ್ಮ ಮಧ್ಯ ಸೇರ್ಕೊಂಡಿರೋ ಜನ ಯಾವಾಗ್ಲೂ ಕೆಟ್ಟದ್ದನ್ನೇ ಯೋಚಿಸ್ತಾ ಇರ್ತಾರೆ. ಅವ್ರ ನಡತೆಯಿಂದ ದೇಹವನ್ನ ಅಶುದ್ಧ ಮಾಡ್ಕೊಳ್ತಾ ಇದ್ದಾರೆ. ಅಧಿಕಾರದ ಸ್ಥಾನದಲ್ಲಿ ಇರುವವ್ರನ್ನ ಕಂಡ್ರೆ ಅವ್ರಿಗೆ ಆಗಲ್ಲ. ದೇವರನ್ನ ಗೌರವಿಸೋ ಜನ್ರ ಬಗ್ಗೆ ತಪ್ಪುತಪ್ಪಾಗಿ ಮಾತಾಡ್ತಾರೆ.+ 9  ಒಂದು ಸಾರಿ ಪ್ರಧಾನ ದೇವದೂತ+ ಮೀಕಾಯೇಲನಿಗೆ+ ಸೈತಾನನ ಜೊತೆ ಮೋಶೆಯ ಶವದ+ ವಿಷ್ಯದಲ್ಲಿ ವಾದ-ವಿವಾದ ಆಯ್ತು. ಆಗ ಮೀಕಾಯೇಲ ಸೈತಾನನ ವಿರುದ್ಧ ಕೆಟ್ಟದಾಗಿ ಮಾತಾಡಿ ತೀರ್ಪು ಮಾಡೋ ಸಾಹಸಕ್ಕೆ ಕೈಹಾಕಲಿಲ್ಲ.+ ಬದಲಿಗೆ “ಯೆಹೋವನೇ* ನಿನಗೆ ತೀರ್ಪು ಮಾಡ್ಲಿ”+ ಅಂತ ಹೇಳಿದನು. 10  ಆದ್ರೆ ಈ ಜನ ತಮಗೆ ಸ್ವಲ್ಪನೂ ಅರ್ಥ ಆಗದಿರೋ ವಿಷ್ಯಗಳ ಬಗ್ಗೆ ತಪ್ಪುತಪ್ಪಾಗಿ ಮಾತಾಡ್ತಿದ್ದಾರೆ.+ ಇವರು ಬುದ್ಧಿ ಇಲ್ಲದಿರೋ ಪ್ರಾಣಿಗಳ ತರ ಇದ್ದಾರೆ.+ ಹುಟ್ಟುಗುಣದ ಪ್ರಕಾರ ನಡೀತಾ ಅವ್ರನ್ನ ಅವ್ರೇ ಹಾಳು ಮಾಡ್ಕೊಳ್ತಾ ಇದ್ದಾರೆ. 11  ಇವ್ರಿಗೆ ನಾಶ ತಪ್ಪಿದ್ದಲ್ಲ. ಯಾಕಂದ್ರೆ ಇವರು ಕಾಯಿನನ+ ದಾರಿ ಹಿಡಿದಿದ್ದಾರೆ. ಬಹುಮಾನಕ್ಕಾಗಿ ಬಿಳಾಮನ+ ತರ ತಪ್ಪು ದಾರಿಯಲ್ಲಿ ಓಡ್ತಾ ಇದ್ದಾರೆ. ಕೋರಹನ+ ತರ ಎದುರು ಮಾತಾಡಿ+ ನಾಶವನ್ನ ಮೈಮೇಲೆ ಎಳ್ಕೊಂಡಿದ್ದಾರೆ! 12  ಇವರು ಸ್ನೇಹಿತರ ಹಾಗೆ ನಿಮ್ಮ ಜೊತೆ ಕೂತು ಊಟ ಮಾಡ್ತಾರೆ.+ ಆದ್ರೆ ಅವರು ನೀರಿನ ಒಳಗೆ ಕಾಣಿಸ್ದೇ ಇರೋ ಬಂಡೆಗಳು. ತಮ್ಮ ಹೊಟ್ಟೆ ತುಂಬಿದ್ರೆ ಸಾಕು ಅಂದ್ಕೊಳ್ಳೋ ನಾಚಿಕೆ ಇಲ್ಲದ ಕುರುಬರು.+ ಗಾಳಿಗೆ ಆಕಡೆ ಈಕಡೆ ತೇಲಿಹೋಗೋ ನೀರಿಲ್ಲದ ಮೋಡಗಳು.+ ಹಣ್ಣುಬಿಡೋ ಕಾಲದಲ್ಲಿ ಹಣ್ಣುಬಿಡದೆ ಪೂರ್ತಿ ಸತ್ತು ಬೇರುಸಮೇತ ಬಿದ್ದುಹೋಗಿರೋ ಮರಗಳು. 13  ಅವಮಾನ ಅನ್ನೋ ನೊರೆಯನ್ನ ಕಕ್ಕೋ ಹುಚ್ಚು ಅಲೆಗಳು.+ ಕತ್ತಲೆಯಲ್ಲಿ ದಾರಿತಪ್ಪಿದ ನಕ್ಷತ್ರಗಳು.+ 14  ಇವ್ರ ಬಗ್ಗೆ ಆದಾಮನ ಏಳನೇ ಪೀಳಿಗೆಯವನಾದ ಹನೋಕನೂ+ ಹೀಗೆ ಭವಿಷ್ಯ ಹೇಳಿದ್ದ: “ನೋಡಿ, ಯೆಹೋವ* ಲಕ್ಷಗಟ್ಟಲೆ ಪವಿತ್ರ ದೂತರ+ ಜೊತೆ ಬಂದಿದ್ದಾನೆ. 15  ಆತನು ಅವ್ರಿಗೆಲ್ಲ ತೀರ್ಪು ಮಾಡ್ತಾನೆ.+ ಅವ್ರಿಗೆ ದೇವರ ಮೇಲೆ ಭಯ ಇಲ್ಲ, ಅವರು ದೇವರಿಗೆ ಗೌರವ ಕೊಡಲ್ಲ. ಆ ಕೆಟ್ಟವರು ತಪ್ಪುಗಳನ್ನ ಮಾಡಿದ್ರಿಂದ, ದೇವರ ವಿರುದ್ಧ ಕೆಟ್ಟದಾಗಿ ಮಾತಾಡಿದ್ರಿಂದ ಅವ್ರಿಗೆ ತಕ್ಕ ಶಿಕ್ಷೆ ಸಿಗುತ್ತೆ.”+ 16  ಇವರು ತಮ್ಮ ಪರಿಸ್ಥಿತಿ ಬಗ್ಗೆ ಗೊಣಗ್ತಾ ದೂರುತ್ತಾ,+ ತಮ್ಮ ಆಸೆಗಳ ಪ್ರಕಾರ ನಡ್ಕೊಳ್ತಾ,+ ದೊಡ್ಡದಾಗಿ ಕೊಚ್ಕೊಳ್ತಾ, ತಮ್ಮ ಲಾಭಕ್ಕಾಗಿ ಬೇರೆಯವ್ರನ್ನ ಅಟ್ಟಕ್ಕೇರಿಸ್ತಾ ಇರ್ತಾರೆ.+ 17  ಆದ್ರೆ ಪ್ರೀತಿಯ ಸಹೋದರರೇ, ನಮ್ಮ ಒಡೆಯ ಯೇಸು ಕ್ರಿಸ್ತನ ಅಪೊಸ್ತಲರು ಈ ಮುಂಚೆ ಹೇಳಿದ ವಿಷ್ಯಗಳನ್ನ ನೆನಪು ಮಾಡ್ಕೊಳ್ಳಿ. 18  “ಕೊನೇ ಕಾಲದಲ್ಲಿ ತಮಾಷೆ ಮಾಡುವವರು ಇರ್ತಾರೆ. ಅವರು ತಮ್ಮ ಕೆಟ್ಟ ಆಸೆಗಳ ಹಿಂದೇನೇ ಹೋಗ್ತಾರೆ”+ ಅಂತ ಅಪೊಸ್ತಲರು ನಿಮಗೆ ತುಂಬ ಸಲ ಹೇಳಿದ್ರಲ್ವಾ. 19  ಇವರು ಸಭೆಯಲ್ಲಿ ಒಡಕುಗಳನ್ನ ತರ್ತಾರೆ,+ ಪ್ರಾಣಿಗಳ ತರ ನಡ್ಕೊಳ್ತಾರೆ, ದೇವರ ಪವಿತ್ರಶಕ್ತಿ ಕೊಡೋ ಮಾರ್ಗದರ್ಶನದ ಪ್ರಕಾರ ನಡಿಯಲ್ಲ. 20  ಆದ್ರೆ ಪ್ರೀತಿಯ ಸಹೋದರರೇ, ಅತಿ ಪವಿತ್ರವಾದ ನಿಮ್ಮ ನಂಬಿಕೆಯನ್ನ ಇನ್ನೂ ಜಾಸ್ತಿ ಮಾಡ್ಕೊಳ್ಳಿ. ಪವಿತ್ರಶಕ್ತಿಯ ಮಾರ್ಗದರ್ಶನಕ್ಕೆ ತಕ್ಕ ಹಾಗೆ ಪ್ರಾರ್ಥನೆ ಮಾಡಿ.+ 21  ಹಾಗೆ ಮಾಡಿದ್ರೆ ನಮ್ಮ ಒಡೆಯ ಯೇಸು ಕ್ರಿಸ್ತನ ಕರುಣೆಗಾಗಿ ಕಾಯ್ತಾ ಇರೋ ನಿಮಗೆ ಶಾಶ್ವತಜೀವ ಸಿಗುತ್ತೆ.+ ದೇವರು ನಿಮ್ಮನ್ನ ಪ್ರೀತಿಸೋ ತರ ನಡ್ಕೊಳ್ತೀರ.+ 22  ಅಷ್ಟೇ ಅಲ್ಲ, ಸಂಶಯ+ ಇರುವವ್ರಿಗೆ ಕರುಣೆ+ ತೋರಿಸ್ತಾ ಇರಿ. 23  ಬೆಂಕಿಯಿಂದ ಅವ್ರನ್ನ ಹೊರಗೆ ಎಳೆದು ಕಾಪಾಡಿ.+ ಕೆಟ್ಟ ಕೆಲಸ ಮಾಡಿ ತಮ್ಮ ಬಟ್ಟೆ ಗಲೀಜು ಮಾಡ್ಕೊಂಡಿರೋ ಜನ್ರಿಗೆ ಕರುಣೆ ತೋರಿಸಿ. ಆದ್ರೆ ಜಾಗ್ರತೆ, ಅವ್ರ ಬಟ್ಟೆಯ ಗಲೀಜು ನಿಮಗೆ ಅಂಟ್ಕೊಳ್ಳದ ಹಾಗೆ ನೋಡ್ಕೊಳ್ಳಿ.+ 24  ಬೀಳದ ಹಾಗೆ ದೇವರು ನಿಮ್ಮನ್ನ ಕಾಪಾಡ್ತಾನೆ. ಮಹಿಮೆಯಿಂದ ತುಂಬಿರೋ ಆತನ ಸನ್ನಿಧಿಯಲ್ಲಿ ಕಳಂಕ ಇಲ್ಲದೆ+ ನಿಮ್ಮನ್ನ ನಿಲ್ಲಿಸ್ತಾನೆ. ತನ್ನ ಮಹಾ ಆನಂದವನ್ನ ನಿಮ್ಮಲ್ಲಿ ತುಂಬಿಸ್ತಾನೆ. 25  ನಮ್ಮ ಒಡೆಯ ಯೇಸು ಕ್ರಿಸ್ತನ ಮೂಲಕ ನಮ್ಮ ರಕ್ಷಕನಾದ ಒಬ್ಬನೇ ದೇವರಿಗೆ ಗೌರವ, ವೈಭವ, ಶಕ್ತಿ, ಅಧಿಕಾರ ಈ ಮುಂಚೆ ಇದ್ದ ತರ ಈಗ್ಲೂ ಯಾವಾಗ್ಲೂ ಸಿಗ್ಲಿ. ಆಮೆನ್‌.

ಪಾದಟಿಪ್ಪಣಿ

ಅಕ್ಷ. “ನಾಚಿಕೆಗೆಟ್ಟ ನಡತೆಯನ್ನ.” ಗ್ರೀಕಿನಲ್ಲಿ ಅಸೆಲ್ಜಿಯ. ಪದವಿವರಣೆ ನೋಡಿ.
ಅದು, ಸ್ವರ್ಗದಲ್ಲಿ ಅವ್ರಿಗಿದ್ದ ಸ್ಥಳ ಅಥವಾ ಸ್ಥಾನ.