ಯಾಕೋಬನ ಪತ್ರ 3:1-18

  • ನಾಲಿಗೆಯನ್ನ ಪಳಗಿಸೋದು (1-12)

    • ಎಲ್ರೂ ಬೋಧಕರು ಆಗಬಾರದು (1)

  • ಸ್ವರ್ಗದಿಂದ ಬರೋ ವಿವೇಕ (13-18)

3  ಸಹೋದರರೇ, ನಿಮ್ಮಲ್ಲಿ ಎಲ್ರೂ ಬೋಧಕರು ಆಗಬಾರದು. ಯಾಕಂದ್ರೆ ಒಂದು ವಿಷ್ಯ ಮನಸ್ಸಲ್ಲಿಡಿ, ದೇವರು ಬೇರೆಯವ್ರಿಗಿಂತ ಜಾಸ್ತಿ ಕಲಿಸೋ ನಮಗೇ ಶಿಕ್ಷೆ ಕೊಡ್ತಾನೆ.+ 2  ನಾವೆಲ್ಲ ತುಂಬ ಸಲ ತಪ್ಪು ಮಾಡ್ತೀವಿ.+ ನಾವು ಮಾತಾಡುವಾಗ ತಪ್ಪೇ ಮಾಡಿಲ್ಲ ಅಂದ್ರೆ ಪರಿಪೂರ್ಣರಾಗಿ ಬಿಡ್ತೀವಿ. ಅಷ್ಟೇ ಅಲ್ಲ, ನಮ್ಮ ಇಡೀ ದೇಹ ನಮ್ಮ ಹತೋಟಿಯಲ್ಲಿ ಇರುತ್ತೆ. 3  ಕುದುರೆ ನಾವು ಹೇಳಿದ ಹಾಗೆ ಕೇಳಬೇಕು ಅಂತ ಅದ್ರ ಬಾಯಿಗೆ ಲಗಾಮ್‌ ಹಾಕ್ತೀವಿ. ಆ ಲಗಾಮಿಂದ ಕುದುರೆ ನಮ್ಮ ಹತೋಟಿಯಲ್ಲಿ ಇರುತ್ತೆ. 4  ಹಡಗಿನ ಬಗ್ಗೆ ಯೋಚ್ನೆ ಮಾಡಿ. ಹಡಗು ತುಂಬ ದೊಡ್ಡದಾಗಿದ್ರೂ ಜೋರಾಗಿ ಗಾಳಿ ಬೀಸಿದ್ರೆ ತೇಲಿಹೋಗುತ್ತೆ. ಆದ್ರೆ ಹಡಗನ್ನ ಓಡಿಸುವವನು ಒಂದು ಚಿಕ್ಕ ಚುಕ್ಕಾಣಿ ಹಾಕಿ ಹಡಗನ್ನ ಯಾವ ಕಡೆ ಬೇಕೋ ಆ ಕಡೆ ತಿರಿಗಿಸ್ತಾನೆ. 5  ಅದೇ ತರ, ದೇಹದಲ್ಲಿ ನಮ್ಮ ನಾಲಿಗೆನೂ ಒಂದು ಚಿಕ್ಕ ಅಂಗ. ಆದ್ರೆ ಅದು ದೊಡ್ಡದಾಗಿ ಕೊಚ್ಕೊಳ್ಳುತ್ತೆ. ದೊಡ್ಡ ಕಾಡನ್ನ ಸುಟ್ಟು ಬೂದಿ ಮಾಡೋಕೆ ಬೆಂಕಿ ಕಿಡಿ ಸಾಕಲ್ವಾ? 6  ನಾಲಿಗೆನೂ ಬೆಂಕಿ ತರಾನೇ.+ ಇಡೀ ದೇಹದಲ್ಲಿ ನಾಲಿಗೆ ಬರೀ ಒಂದು ಅಂಗ ಅಷ್ಟೆ. ಆದ್ರೆ ಅದು ಕೆಟ್ಟದನ್ನ ಮಾಡಿ ಇಡೀ ದೇಹಾನೇ ಹಾಳು ಮಾಡುತ್ತೆ.+ ಅಷ್ಟೇ ಅಲ್ಲ, ಇಡೀ ಜೀವನಕ್ಕೆ ಬೆಂಕಿ ಹಚ್ಚುತ್ತೆ. ನಾವು ಸಂಪೂರ್ಣ ನಾಶ* ಆದ್ರೆ ಎಷ್ಟು ನಷ್ಟ ಆಗುತ್ತೋ ಅಷ್ಟೇ ನಷ್ಟ ಆಗುತ್ತೆ. 7  ಎಲ್ಲ ಜಾತಿಯ ಕ್ರೂರ ಪ್ರಾಣಿ, ಪಕ್ಷಿ, ಹರಿದಾಡೋ ಜೀವಿ, ನೀರಲ್ಲಿರೋ ಜೀವಿಗಳನ್ನ ಪಳಗಿಸೋಕೆ ಆಗುತ್ತೆ. ಮನುಷ್ಯರು ಈಗಾಗ್ಲೇ ಪಳಗಿಸಿದ್ದಾರೆ. 8  ಆದ್ರೆ ನಾಲಿಗೆಯನ್ನ ಯಾವ ಮನುಷ್ಯನಿಂದಾನೂ ಪಳಗಿಸೋಕೆ ಆಗಲ್ಲ. ಅದಕ್ಕೆ ಲಂಗುಲಗಾಮು ಹಾಕೋಕೆ ಆಗಲ್ಲ. ಅದು ತುಂಬ ಹಾನಿ ಮಾಡುತ್ತೆ. ಜೀವ ತೆಗಿಯೋ ವಿಷ+ ಅದ್ರಲ್ಲಿ ತುಂಬಿದೆ. 9  ಅದ್ರಿಂದಾನೇ ನಮ್ಮ ತಂದೆ ಯೆಹೋವನನ್ನ* ಹೊಗಳ್ತೀವಿ. ಅದ್ರಿಂದಾನೇ “ದೇವರ ಸ್ವರೂಪದಲ್ಲಿ”+ ಇರೋ ಮನುಷ್ಯರನ್ನ ಬೈತೀವಿ. 10  ಅದೇ ಬಾಯಿಂದ ಹೊಗಳ್ತೀವಿ, ಅದೇ ಬಾಯಿಂದ ಬೈತೀವಿ. ಸಹೋದರರೇ, ಅದು ಒಳ್ಳೇದಲ್ಲ.+ 11  ಒಂದೇ ಬಾವಿಯಿಂದ ಸಿಹಿನೀರೂ ಉಪ್ಪುನೀರೂ ಎರಡೂ ಬರುತ್ತಾ? ಇಲ್ಲ. 12  ಸಹೋದರರೇ, ಅಂಜೂರ ಮರ ಆಲೀವ್‌ ಹಣ್ಣು ಕೊಡುತ್ತಾ?+ ದ್ರಾಕ್ಷಿಬಳ್ಳಿಯಲ್ಲಿ ಅಂಜೂರ ಹಣ್ಣು ಸಿಗುತ್ತಾ? ಇಲ್ಲ. ಅದೇ ತರ ಉಪ್ಪುನೀರಿನ ಬಾವಿಯಲ್ಲಿ ಸಿಹಿನೀರು ಬರಲ್ಲ. 13  ನಿಮ್ಮಲ್ಲಿ ಬುದ್ಧಿ, ಅರ್ಥ ಮಾಡ್ಕೊಳ್ಳೋ ಶಕ್ತಿ ಯಾರಿಗಿದೆ? ಅವರು ಒಳ್ಳೇ ನಡತೆಯಿಂದ, ಒಳ್ಳೇ ಕೆಲಸಗಳನ್ನ ಮಾಡಿ ಅದನ್ನ ತೋರಿಸಬೇಕು. ವಿವೇಕದಿಂದ ಹುಟ್ಟೋ ಮೃದುಸ್ವಭಾವವನ್ನ ತೋರಿಸಬೇಕು. 14  ಆದ್ರೆ ನಿಮ್ಮ ಮನಸ್ಸು ತುಂಬ ಹೊಟ್ಟೆಕಿಚ್ಚು+ ಇದ್ರೆ, ಜಗಳ ಮಾಡೋ ಸ್ವಭಾವ+ ಇದ್ರೆ ನಿಮಗಿರೋ ವಿವೇಕದ ಬಗ್ಗೆ ಜಂಬ ಕೊಚ್ಕೊಬೇಡಿ.+ ಆ ತರ ಮಾಡಿದ್ರೆ ನೀವು ಸುಳ್ಳು ಹೇಳಿದ ಹಾಗೆ. 15  ಆ ವಿವೇಕ ಸ್ವರ್ಗದಿಂದ ಬರಲ್ಲ. ಲೋಕದಿಂದ,+ ಮನುಷ್ಯರಿಂದ, ಕೆಟ್ಟ ದೇವದೂತರಿಂದ ಬರುತ್ತೆ. 16  ಹೊಟ್ಟೆಕಿಚ್ಚು, ಜಗಳ ಇರೋ ಕಡೆ ಗಲಿಬಿಲಿ, ಎಲ್ಲಾ ತರದ ಕೆಟ್ಟ ವಿಷ್ಯಗಳೂ ಇರುತ್ತೆ.+ 17  ಆದ್ರೆ ಸ್ವರ್ಗದಿಂದ ಬರೋ ವಿವೇಕ ಮೊದ್ಲು ಒಬ್ಬ ವ್ಯಕ್ತಿಗೆ ಶುದ್ಧ ಮನಸ್ಸನ್ನ+ ಕೊಡುತ್ತೆ. ಆಮೇಲೆ ಸಮಾಧಾನವಾಗಿ ಇರೋಕೆ+ ಕಲಿಸುತ್ತೆ, ನಾನು ಹೇಳಿದ್ದೇ ನಡಿಬೇಕು+ ಅನ್ನೋ ಸ್ವಭಾವವನ್ನ ತೆಗೆದುಹಾಕುತ್ತೆ, ಮಾತು ಕೇಳೋ ಮನಸ್ಸನ್ನ ಕೊಡುತ್ತೆ, ಯಾವಾಗ್ಲೂ ಕರುಣೆ ತೋರಿಸೋಕೆ ಮತ್ತು ಒಳ್ಳೇ ಕೆಲಸ ಮಾಡೋಕೆ+ ಸ್ಫೂರ್ತಿ ತುಂಬುತ್ತೆ. ಅಂಥ ವ್ಯಕ್ತಿ ಭೇದಭಾವ+ ಮಾಡಲ್ಲ, ಮುಖವಾಡ ಹಾಕಲ್ಲ.+ 18  ಎಲ್ರ ಜೊತೆ ಸಮಾಧಾನವಾಗಿ ಇರುವವರು ಶಾಂತಿ ಕಾಪಾಡ್ಕೊಳ್ತಾರೆ.+ ಇದ್ರಿಂದ ಅವರು ಮಾಡೋ ಕೆಲಸಗಳೆಲ್ಲ ಸರಿಯಾಗಿ ಇರುತ್ತೆ.+

ಪಾದಟಿಪ್ಪಣಿ

ಅಕ್ಷ. “ಗೆಹೆನ್ನ.” ಪದವಿವರಣೆ ನೋಡಿ.