ಯೋಹಾನನಿಗೆ ಕೊಟ್ಟ ಪ್ರಕಟನೆ 5:1-14
5 ಆಮೇಲೆ ನಾನು ಸಿಂಹಾಸನದಲ್ಲಿ+ ಕೂತಿದ್ದ ದೇವರ ಬಲಗೈಯಲ್ಲಿ ಒಂದು ಪುಸ್ತಕದ ಸುರುಳಿಯನ್ನ ನೋಡ್ದೆ. ಆ ಸುರುಳಿಯ ಎರಡೂ ಕಡೆ* ಬರೆದಿತ್ತು ಮತ್ತು ಅದ್ರ ಮೇಲೆ ಗಟ್ಟಿಯಾಗಿ ಏಳು ಮುದ್ರೆ ಹಾಕಿತ್ತು.
2 ಅಷ್ಟೇ ಅಲ್ಲ ಒಬ್ಬ ಬಲಿಷ್ಠ ದೇವದೂತನನ್ನ ನಾನು ನೋಡ್ದೆ. ಅವನು ಜೋರಾಗಿ “ಈ ಪುಸ್ತಕದ ಮೇಲೆ ಇರೋ ಮುದ್ರೆಗಳನ್ನ ತೆಗಿಯೋಕೆ ಯಾರು ಯೋಗ್ಯರು?” ಅಂತ ಕೇಳಿದ.
3 ಆದ್ರೆ ಸ್ವರ್ಗದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿ ಕೆಳಗಾಗಲಿ ಯಾರಿಗೂ ಆ ಪುಸ್ತಕದ ಸುರುಳಿಯನ್ನ ತೆಗಿಯೋಕೆ ಆಗಲಿಲ್ಲ. ಅದ್ರಲ್ಲಿ ಏನಿದೆ ಅಂತ ನೋಡೋಕಾಗಲಿಲ್ಲ.
4 ಆ ಪುಸ್ತಕದ ಸುರುಳಿಯನ್ನ ತೆಗಿಯೋಕೆ, ಅದ್ರಲ್ಲಿ ಇರೋದನ್ನ ನೋಡೋಕೆ ಯೋಗ್ಯರು ಯಾರೂ ಸಿಗ್ದೇ ಇದ್ದಾಗ ನಾನು ತುಂಬ ಅತ್ತೆ.
5 ಆದ್ರೆ ಆ ಹಿರಿಯರಲ್ಲಿ ಒಬ್ಬ ನನಗೆ “ಅಳಬೇಡ. ನೋಡು! ಯೆಹೂದ ಕುಲದ ಸಿಂಹ+ ದಾವೀದನ+ ಕುಡಿ+ ಗೆದ್ದಿದ್ದಾನೆ.+ ಹಾಗಾಗಿ ಈ ಸುರುಳಿಯ ಮುದ್ರೆಯನ್ನ ತೆಗಿಯೋಕೆ ಅವನಿಗೆ ಯೋಗ್ಯತೆ ಇದೆ” ಅಂದ.
6 ಸಿಂಹಾಸನದ ಹತ್ರ ನಾಲ್ಕು ಜೀವಿಗಳ ಮಧ್ಯ, ಆ ಹಿರಿಯರ+ ಮಧ್ಯ ಒಂದು ಕುರಿಮರಿಯನ್ನ+ ನಾನು ನೋಡ್ದೆ. ಅದನ್ನ ಬಲಿಕೊಟ್ಟ+ ಹಾಗೆ ಕಾಣ್ತಿತ್ತು. ಅದಕ್ಕೆ ಏಳು ಕೊಂಬು, ಏಳು ಕಣ್ಣು ಇತ್ತು. ಆ ಏಳು ಕಣ್ಣು ಭೂಮಿಗೆ ಕಳಿಸಿರೋ ದೇವರ ಏಳು ಪವಿತ್ರಶಕ್ತಿಗಳನ್ನ+ ಸೂಚಿಸುತ್ತೆ.
7 ಆ ಕುರಿಮರಿ ತಕ್ಷಣ ಮುಂದೆ ಬಂದು ಸಿಂಹಾಸನದ ಮೇಲೆ ಕೂತಿರೋ ದೇವರ ಬಲಗೈಯಲ್ಲಿದ್ದ ಆ ಪುಸ್ತಕದ ಸುರುಳಿ ತಗೊಳ್ತು.+
8 ಆ ಕುರಿಮರಿ ಪುಸ್ತಕದ ಸುರುಳಿ ತಗೊಂಡಾಗ, ನಾಲ್ಕು ಜೀವಿಗಳು ಮತ್ತು 24 ಹಿರಿಯರು+ ಆ ಕುರಿಮರಿ ಮುಂದೆ ಮಂಡಿಯೂರಿದ್ರು. ಆ ಹಿರಿಯರಲ್ಲಿ ಒಬ್ಬೊಬ್ರ ಹತ್ರನೂ ಒಂದು ತಂತಿವಾದ್ಯ ಮತ್ತು ಧೂಪ ತುಂಬಿರೋ ಚಿನ್ನದ ಬಟ್ಟಲು ಇತ್ತು. ಆ ಧೂಪ ಪವಿತ್ರ ಜನ್ರ ಪ್ರಾರ್ಥನೆಯನ್ನ ಸೂಚಿಸ್ತಿತ್ತು.+
9 ಅವರು ಒಂದು ಹೊಸ ಹಾಡನ್ನ+ ಹಾಡಿದ್ರು: “ಪುಸ್ತಕದ ಸುರುಳಿಯನ್ನ ತಗೊಂಡು ಅದ್ರ ಮುದ್ರೆಗಳನ್ನ ತೆಗಿಯೋಕೆ ನಿನಗೆ ಯೋಗ್ಯತೆ ಇದೆ. ಯಾಕಂದ್ರೆ ನೀನು ನಿನ್ನನ್ನೇ ಬಲಿ ಕೊಟ್ಟೆ. ನಿನ್ನ ರಕ್ತದಿಂದ ಎಲ್ಲ ಭಾಷೆ, ಜಾತಿ, ದೇಶದಿಂದ ದೇವರಿಗೋಸ್ಕರ+ ಜನ್ರನ್ನ ಕೊಂಡ್ಕೊಂಡೆ.+
10 ನಮ್ಮ ದೇವರನ್ನ ಆರಾಧಿಸೋಕೆ ಅವ್ರನ್ನ ರಾಜರಾಗಿ+ ಪುರೋಹಿತರಾಗಿ+ ಮಾಡ್ದೆ. ಅವರು ರಾಜರಾಗಿ+ ಈ ಭೂಮಿಯನ್ನ ಆಳ್ತಾರೆ.”
11 ನಾನು ಸಿಂಹಾಸನದ ಸುತ್ತ, ಆ ಜೀವಿಗಳ ಸುತ್ತ, ಹಿರಿಯರ ಸುತ್ತ ತುಂಬ ದೇವದೂತರನ್ನ ನೋಡ್ದೆ. ಅವ್ರ ಧ್ವನಿಯನ್ನ ಕೇಳಿಸ್ಕೊಂಡೆ. ಆ ದೇವದೂತರ ಸಂಖ್ಯೆ ಲಕ್ಷಗಳಲ್ಲಿ ಕೋಟಿಗಳಲ್ಲಿ* ಇತ್ತು.+
12 ಅವರು ಗಟ್ಟಿಯಾಗಿ “ಅಧಿಕಾರ, ಐಶ್ವರ್ಯ, ವಿವೇಕ, ಬಲ, ಗೌರವ, ಮಹಿಮೆ ಮತ್ತು ಆಶೀರ್ವಾದ ಪಡಿಯೋಕೆ ಬಲಿಯಾಗಿರೋ+ ಕುರಿಮರಿಗೆ ಯೋಗ್ಯತೆ ಇದೆ”+ ಅಂತಿದ್ರು.
13 ಸ್ವರ್ಗದಲ್ಲಿ, ಭೂಮಿ ಮೇಲೆ, ಭೂಮಿ ಕೆಳಗೆ,+ ಸಮುದ್ರದಲ್ಲಿ ಇರೋ ಪ್ರತಿಯೊಂದು ಪ್ರಾಣಿನೂ ಅದ್ರಲ್ಲಿದ್ದ ಎಲ್ಲಾನೂ “ಸಿಂಹಾಸನದ ಮೇಲೆ ಕೂತಿದ್ದ ದೇವರಿಗೆ+ ಮತ್ತು ಕುರಿಮರಿಗೆ+ ಶಾಶ್ವತವಾಗಿ ಸ್ತುತಿ, ಗೌರವ,+ ಮಹಿಮೆ ಮತ್ತು ಶಕ್ತಿ ಸಿಗ್ತಾ ಇರಲಿ”+ ಅಂತ ಹೇಳೋದನ್ನ ನಾನು ಕೇಳಿಸ್ಕೊಂಡೆ.
14 ಆ ನಾಲ್ಕು ಜೀವಿಗಳು “ಆಮೆನ್!” ಅಂದಾಗ ಆ ಹಿರಿಯರು ಮಂಡಿಯೂರಿ ದೇವರನ್ನ ಆರಾಧಿಸಿದ್ರು.