ಧರ್ಮೋಪದೇಶಕಾಂಡ 20:1-20

  • ಯುದ್ಧದ ನಿಯಮಗಳು (1-20)

    • ಮನೆಗೆ ವಾಪಸ್‌ ಹೋಗಬಹುದಾದ ಸೈನಿಕರು (5-9)

20  ನಿಮ್ಮ ಶತ್ರುಗಳ ವಿರುದ್ಧ ಯುದ್ಧ ಮಾಡೋಕೆ ಹೋದಾಗ ನಿಮ್ಮ ಹತ್ರ ಇರೋದಕ್ಕಿಂತ ಅವ್ರ ಹತ್ರ ಜಾಸ್ತಿ ಕುದುರೆ, ರಥ, ಸೈನಿಕರು ಇರೋದನ್ನ ನೋಡಿ ಹೆದರಬಾರದು. ಯಾಕಂದ್ರೆ ನಿಮ್ಮನ್ನ ಈಜಿಪ್ಟಿಂದ ಬಿಡಿಸ್ಕೊಂಡು ಬಂದ ನಿಮ್ಮ ದೇವರಾದ ಯೆಹೋವ ನಿಮ್ಮ ಜೊತೆ ಇರ್ತಾನೆ.+ 2  ನೀವು ಯುದ್ಧಕ್ಕೆ ಹೋಗುವಾಗ ಪುರೋಹಿತ ಸೈನ್ಯದ ಮುಂದೆ ಬಂದು ಅವ್ರಿಗೆ+ 3  ‘ಇಸ್ರಾಯೇಲ್ಯರೇ ಕೇಳಿ, ನೀವು ಇನ್ನೇನು ನಿಮ್ಮ ಶತ್ರುಗಳ ವಿರುದ್ಧ ಯುದ್ಧಕ್ಕೆ ಹೋಗ್ತೀರ. ಧೈರ್ಯವಾಗಿರಿ! ಅವ್ರನ್ನ ನೋಡಿ ಭಯಪಡಬೇಡಿ, ಹೆದರಿ ನಡುಗಬೇಡಿ. 4  ಯಾಕಂದ್ರೆ ನಿಮ್ಮ ದೇವರಾದ ಯೆಹೋವನೇ ನಿಮ್ಮ ಜೊತೆ ಬರ್ತಿದ್ದಾನೆ. ಆತನೇ ನಿಮ್ಮ ಶತ್ರುಗಳ ವಿರುದ್ಧ ಹೋರಾಡಿ ನಿಮ್ಮನ್ನ ರಕ್ಷಿಸ್ತಾನೆ’ + ಅಂತ ಹೇಳಬೇಕು. 5  ಅಧಿಕಾರಿಗಳು ಸೈನಿಕರಿಗೆ ‘ನಿಮ್ಮಲ್ಲಿ ಯಾರಾದ್ರೂ ಹೊಸ ಮನೆ ಕಟ್ಟಿ ಅದ್ರಲ್ಲಿ ಇನ್ನೂ ಇರೋಕೆ ಶುರುಮಾಡಿಲ್ಲ ಅಂದ್ರೆ ಅವನು ಮನೆಗೆ ಹೋಗ್ಲಿ. ಯಾಕಂದ್ರೆ ಅವನು ಯುದ್ಧದಲ್ಲಿ ಸತ್ರೆ ಆ ಮನೆಗೆ ಬೇರೆಯವನು ಬರ್ತಾನೆ. 6  ನಿಮ್ಮಲ್ಲಿ ಯಾರಾದ್ರೂ ದ್ರಾಕ್ಷಿತೋಟ ಮಾಡಿ ಅದ್ರ ಹಣ್ಣು ತಿಂದಿಲ್ಲಾಂದ್ರೆ ಮನೆಗೆ ವಾಪಸ್‌ ಹೋಗ್ಲಿ. ಯಾಕಂದ್ರೆ ಅವನು ಯುದ್ಧದಲ್ಲಿ ಸತ್ರೆ ಆ ಹಣ್ಣನ್ನ ಇನ್ನೊಬ್ಬ ತಿಂತಾನೆ. 7  ನಿಮ್ಮಲ್ಲಿ ಯಾರಿಗಾದ್ರೂ ಮದುವೆ ನಿಶ್ಚಯವಾಗಿ ಇನ್ನೂ ಮದುವೆ ಆಗಿಲ್ಲಾಂದ್ರೆ ಅವನೂ ಮನೆಗೆ ಹೋಗ್ಲಿ.+ ಯಾಕಂದ್ರೆ ಅವನು ಯುದ್ಧದಲ್ಲಿ ಸತ್ರೆ ಅವ್ನಿಗೆ ನಿಶ್ಚಯವಾಗಿದ್ದ ಹುಡುಗಿಯನ್ನ ಇನ್ನೊಬ್ಬ ಮದುವೆ ಆಗ್ತಾನೆ’ ಅಂತ ಹೇಳಬೇಕು. 8  ಅಷ್ಟೇ ಅಲ್ಲ ಅಧಿಕಾರಿಗಳು ಸೈನಿಕರಿಗೆ ‘ನಿಮ್ಮಲ್ಲಿ ಯಾರಿಗಾದ್ರೂ ಯುದ್ಧಕ್ಕೆ ಹೋಗೋಕೆ ಭಯ ಆಗ್ತಿದ್ರೆ,+ ಧೈರ್ಯ ಇಲ್ಲದಿದ್ರೆ ಅವನೂ ಮನೆಗೆ ಹೋಗ್ಲಿ. ಯಾಕಂದ್ರೆ ಅವನು ಹೆದರೋದು ಅಲ್ದೆ ಅವನು ಬೇರೆಯವರನ್ನೂ ಹೆದರೋ ತರ ಮಾಡ್ತಾನೆ. ಹಾಗೆ ಆಗೋದು ಬೇಡ’ ಅಂತ ಹೇಳಬೇಕು.+ 9  ಅಧಿಕಾರಿಗಳು ಹೀಗೆ ಹೇಳಿದ ಮೇಲೆ ಸೈನ್ಯ ಮುನ್ನಡೆಸೋಕೆ ಸೇನಾಪತಿಗಳನ್ನ ನೇಮಿಸಬೇಕು. 10  ನೀವು ಒಂದು ಪಟ್ಟಣವನ್ನ ವಶ ಮಾಡ್ಕೊಳ್ಳೋಕೆ ಹೋದಾಗ ಮೊದ್ಲು ಅಲ್ಲಿ ಇರೋರನ್ನ ಶಾಂತಿ ಒಪ್ಪಂದ ಮಾಡ್ಕೊಳ್ಳೋಕೆ ಕರೀಬೇಕು.+ 11  ಅವರು ಅದಕ್ಕೆ ಒಪ್ಪಿ ತಮ್ಮ ಪಟ್ಟಣದ ಬಾಗಿಲನ್ನ ತೆರೆದ್ರೆ ಅಲ್ಲಿನ ಜನ್ರೆಲ್ಲ ನಿಮ್ಮ ಗುಲಾಮರಾಗ್ತಾರೆ, ನಿಮ್ಮ ಸೇವೆ ಮಾಡ್ತಾರೆ.+ 12  ಆದ್ರೆ ಅವರು ನಿಮ್ಮ ಜೊತೆ ಶಾಂತಿ ಒಪ್ಪಂದ ಮಾಡ್ಕೊಳ್ಳೋಕೆ ಒಪ್ಪದೆ ಯುದ್ಧಕ್ಕೆ ಬಂದ್ರೆ ನೀವು ಆ ಪಟ್ಟಣಕ್ಕೆ ಮುತ್ತಿಗೆ ಹಾಕಬೇಕು. 13  ನಿಮ್ಮ ದೇವರಾದ ಯೆಹೋವ ನಿಮಗೆ ಖಂಡಿತ ಆ ಪಟ್ಟಣ ಕೊಡ್ತಾನೆ. ಆಗ ನೀವು ಅಲ್ಲಿರೋ ಎಲ್ಲ ಗಂಡಸ್ರನ್ನ ಕತ್ತಿಯಿಂದ ಸಾಯಿಸಬೇಕು. 14  ಆದ್ರೆ ಅಲ್ಲಿರೋ ಸ್ತ್ರೀಯರನ್ನ, ಮಕ್ಕಳನ್ನ, ಪ್ರಾಣಿಗಳನ್ನ, ಎಲ್ಲ ಆಸ್ತಿಯನ್ನ ತಗೊಳ್ಳಬಹುದು.+ ನಿಮ್ಮ ದೇವರಾದ ಯೆಹೋವ ನಿಮ್ಮ ಕೈಗೆ ಕೊಟ್ಟ ಶತ್ರುಗಳ ಕೊಳ್ಳೆಯನ್ನ ನೀವು ತಗೊಂಡು ಬಳಸಬಹುದು.+ 15  ತುಂಬ ದೂರದಲ್ಲಿರೋ ಯಾವುದೇ ಪಟ್ಟಣವನ್ನ ವಶ ಮಾಡ್ಕೊಳ್ಳುವಾಗ ನೀವು ಹೀಗೇ ಮಾಡಬೇಕು. ಆದ್ರೆ ಹತ್ರ ಇರೋ ಈ ಪಟ್ಟಣಗಳ ವಿಷ್ಯದಲ್ಲಿ ಹಾಗಲ್ಲ. 16  ನಿಮ್ಮ ದೇವರಾದ ಯೆಹೋವ ನಿಮಗೆ ಆಸ್ತಿಯಾಗಿ ಕೊಡೋ ಈ ದೇಶದ ಪಟ್ಟಣಗಳಲ್ಲಿ ನೀವು ಒಬ್ರನ್ನೂ* ಜೀವಂತ ಉಳಿಸಬಾರದು.+ 17  ನಿಮ್ಮ ದೇವರಾದ ಯೆಹೋವ ನಿಮಗೆ ಆಜ್ಞೆ ಕೊಟ್ಟ ಹಾಗೇ ಅಲ್ಲಿರೋ ಹಿತ್ತಿಯರನ್ನ, ಅಮೋರಿಯರನ್ನ, ಕಾನಾನ್ಯರನ್ನ, ಪೆರಿಜೀಯರನ್ನ, ಹಿವ್ವಿಯರನ್ನ, ಯೆಬೂಸಿಯರನ್ನ+ ಪೂರ್ತಿ ನಾಶಮಾಡಬೇಕು. 18  ಇಲ್ಲಾಂದ್ರೆ ತಮ್ಮ ದೇವರುಗಳನ್ನ ಆರಾಧನೆ ಮಾಡುವಾಗ ಅವರು ಮಾಡೋ ಎಲ್ಲ ಅಸಹ್ಯ ಕೆಲಸಗಳನ್ನ ನಿಮಗೂ ಕಲಿಸಿ ನೀವು ನಿಮ್ಮ ದೇವರಾದ ಯೆಹೋವನ ವಿರುದ್ಧ ಪಾಪ ಮಾಡೋ ತರ ಮಾಡಿಬಿಡ್ತಾರೆ.+ 19  ನೀವು ಒಂದು ಪಟ್ಟಣವನ್ನ ವಶ ಮಾಡ್ಕೊಳ್ಳೋಕೆ ಅದಕ್ಕೆ ಮುತ್ತಿಗೆ ಹಾಕುವಾಗ ಮತ್ತು ತುಂಬ ದಿನ ಅಲ್ಲಿ ಯುದ್ಧ ಮಾಡುವಾಗ ಅಲ್ಲಿರೋ ಮರಗಳನ್ನ ಕಡೀಬಾರದು. ನೀವು ಆ ಮರದ ಹಣ್ಣುಗಳನ್ನ ತಿನ್ನಬಹುದು, ಆದ್ರೆ ಆ ಮರಗಳನ್ನ ನಾಶ ಮಾಡಬಾರದು.+ ಆ ಮರಗಳು ನಿಮ್ಮ ಶತ್ರುಗಳಲ್ಲ ಅಲ್ವಾ! ಹಾಗಾಗಿ ಅವನ್ನ ನಾಶ ಮಾಡೋದು ಸರಿಯಲ್ಲ. 20  ಯಾವ ಮರದ ಹಣ್ಣನ್ನ ತಿನ್ನೋಕೆ ಆಗಲ್ವೋ ಅಂಥ ಮರವನ್ನ ಮಾತ್ರ ನೀವು ಕಡಿಬಹುದು. ಆ ಪಟ್ಟಣ ನಿಮ್ಮ ವಶಕ್ಕೆ ಬರೋ ತನಕ ಅದಕ್ಕೆ ಮುತ್ತಿಗೆ ಹಾಕೋಕೆ ಆ ಮರಗಳನ್ನ ಬಳಸಬಹುದು.

ಪಾದಟಿಪ್ಪಣಿ

ಅಥವಾ “ಉಸಿರಿರೋ ಯಾವುದನ್ನೂ.”