ದಾನಿಯೇಲ 3:1-30

  • ರಾಜ ನೆಬೂಕದ್ನೆಚ್ಚರನ ಚಿನ್ನದ ಮೂರ್ತಿ (1-7)

    • ಆ ಮೂರ್ತಿಯನ್ನ ಆರಾಧಿಸೋಕೆ ಒತ್ತಾಯ (4-6)

  • ಮೂವರು ಇಬ್ರಿಯರು ವಿಧೇಯತೆ ತೋರಿಸ್ತಿಲ್ಲ ಅನ್ನೋ ಆರೋಪ (8-18)

    • “ನಾವು ನಿನ್ನ ದೇವರುಗಳನ್ನ ಆರಾಧಿಸಲ್ಲ” (18)

  • ಬೆಂಕಿ ಕುಲುಮೆಗೆ ಅವ್ರನ್ನ ಎಸೆದ್ರು (19-23)

  • ಬೆಂಕಿಯಿಂದ ಅದ್ಭುತವಾಗಿ ಪಾರಾದ್ರು (24-27)

  • ರಾಜ ಇಬ್ರಿಯರ ದೇವರನ್ನ ಗೌರವಿಸಿದ (28-30)

3  ರಾಜ ನೆಬೂಕದ್ನೆಚ್ಚರ ಚಿನ್ನದ ಒಂದು ಮೂರ್ತಿಯನ್ನ ಮಾಡಿಸಿದ. ಅದು 60 ಮೊಳ* ಎತ್ತರ, 6 ಮೊಳ* ಅಗಲ ಇತ್ತು. ಅದನ್ನ ಅವನು ಬಾಬೆಲಿನ ಪ್ರಾಂತ್ಯದ ದೂರಾ ಅನ್ನೋ ಬಯಲಲ್ಲಿ ನಿಲ್ಲಿಸಿದ. 2  ಆಮೇಲೆ ರಾಜ ನೆಬೂಕದ್ನೆಚ್ಚರ ದೇಶಾಧಿಪತಿಗಳಿಗೆ, ಮುಖ್ಯಸ್ಥರಿಗೆ, ರಾಜ್ಯಪಾಲರಿಗೆ, ಸಲಹೆಗಾರರಿಗೆ, ಖಜಾಂಚಿಗಳಿಗೆ, ನ್ಯಾಯಾಧೀಶರಿಗೆ, ಎಲ್ಲ ಪ್ರಾಂತ್ಯಗಳ ಕಾರ್ಯನಿರ್ವಾಹಕರಿಗೆ ತಾನು ನಿಲ್ಲಿಸಿದ ಮೂರ್ತಿಯ ಉದ್ಘಾಟನೆಗೆ ಬರೋಕೆ ಹೇಳಿ ಕಳಿಸಿದ. 3  ದೇಶಾಧಿಪತಿಗಳು, ಮುಖ್ಯಸ್ಥರು, ರಾಜ್ಯಪಾಲರು, ಸಲಹೆಗಾರರು, ಖಜಾಂಚಿಗಳು, ನ್ಯಾಯಾಧೀಶರು, ಎಲ್ಲ ಪ್ರಾಂತ್ಯಗಳ ಕಾರ್ಯನಿರ್ವಾಹಕರು ರಾಜ ನೆಬೂಕದ್ನೆಚ್ಚರ ನಿಲ್ಲಿಸಿದ ಮೂರ್ತಿಯ ಉದ್ಘಾಟನೆಗೆ ಬಂದು, ಆ ಮೂರ್ತಿ ಮುಂದೆ ನಿಂತ್ರು. 4  ಆಗ ಪ್ರಕಟಣೆ ಮಾಡುವವನು ಗಟ್ಟಿಯಾಗಿ “ಬೇರೆ ಬೇರೆ ದೇಶದ ಜನ್ರೇ, ಬೇರೆ ಬೇರೆ ಭಾಷೆಯ ಜನ್ರೇ ನೀವೆಲ್ರು ಏನ್‌ ಮಾಡಬೇಕಂದ್ರೆ: 5  ನೀವು ಕೊಂಬು, ಕೊಳಲು, ತಿದಿಗೊಳಲು, ವೀಣೆ,* ತಂತಿವಾದ್ಯ, ತ್ರಿಕೋನಾಕಾರದ ತಂತಿವಾದ್ಯ, ಬೇರೆ ಎಲ್ಲ ಸಂಗೀತ ಉಪಕರಣಗಳ ಶಬ್ದ ಕೇಳಿದಾಗ ರಾಜ ನೆಬೂಕದ್ನೆಚ್ಚರ ನಿಲ್ಲಿಸಿದ ಚಿನ್ನದ ಮೂರ್ತಿಗೆ ಅಡ್ಡಬಿದ್ದು ಆರಾಧಿಸಬೇಕು. 6  ಯಾರಾದ್ರೂ ಅದಕ್ಕೆ ಅಡ್ಡಬೀಳದಿದ್ರೆ, ಅದನ್ನ ಆರಾಧಿಸದಿದ್ರೆ ಅವ್ರನ್ನ ಕೂಡ್ಲೇ ಹೊತ್ತಿ ಉರಿಯೋ ದೊಡ್ಡ ಕುಲುಮೆಗೆ ಹಾಕಲಾಗುತ್ತೆ” ಅಂದ.+ 7  ಹಾಗಾಗಿ ಕೊಂಬು, ಕೊಳಲು, ತಿದಿಗೊಳಲು, ವೀಣೆ,* ತಂತಿವಾದ್ಯ, ತ್ರಿಕೋನಾಕಾರದ ತಂತಿವಾದ್ಯ, ಬೇರೆ ಎಲ್ಲ ಸಂಗೀತ ಉಪಕರಣಗಳ ಶಬ್ದ ಕೇಳಿದಾಗ ಎಲ್ಲ ಜನ್ರು, ಬೇರೆಬೇರೆ ದೇಶ-ಭಾಷೆಗಳ ಜನ್ರ ಗುಂಪುಗಳು ರಾಜ ನೆಬೂಕದ್ನೆಚ್ಚರ ನಿಲ್ಲಿಸಿದ ಚಿನ್ನದ ಮೂರ್ತಿಗೆ ಅಡ್ಡಬಿದ್ದು ಆರಾಧಿಸಿದ್ರು. 8  ಆ ಸಮಯದಲ್ಲಿ ಕೆಲವು ಕಸ್ದೀಯರು ರಾಜನ ಹತ್ರ ಬಂದು ಯೆಹೂದ್ಯರ ಮೇಲೆ ಆಪಾದನೆ ಹೊರಿಸಿದ್ರು.* 9  ಅವರು ರಾಜ ನೆಬೂಕದ್ನೆಚ್ಚರನಿಗೆ “ರಾಜ, ಚಿರಂಜೀವಿಯಾಗಿರು. 10  ಕೊಂಬು, ಕೊಳಲು, ತಿದಿಗೊಳಲು, ವೀಣೆ,* ತಂತಿವಾದ್ಯ, ತ್ರಿಕೋನಾಕಾರದ ತಂತಿವಾದ್ಯ, ಬೇರೆ ಎಲ್ಲ ಸಂಗೀತ ಉಪಕರಣಗಳ ಶಬ್ದ ಕೇಳಿದಾಗ ಪ್ರತಿಯೊಬ್ಬನು ಚಿನ್ನದ ಮೂರ್ತಿಗೆ ಅಡ್ಡಬೀಳಬೇಕು, ಅದನ್ನ ಆರಾಧಿಸಬೇಕು. 11  ಹಾಗೇ ಮಾಡದವ್ರನ್ನ ಹೊತ್ತಿ ಉರಿಯೋ ದೊಡ್ಡ ಕುಲುಮೆಗೆ ಹಾಕಿಸ್ತೀನಿ ಅಂತ ನೀನು ಆಜ್ಞೆ ಕೊಟ್ಟೆ.+ 12  ಆದ್ರೆ ರಾಜ, ಬಾಬೆಲಿನ ಪ್ರಾಂತ್ಯದಲ್ಲಿ ಕಾರ್ಯನಿರ್ವಹಿಸೋಕೆ ನೀನು ನೇಮಿಸಿರೋ ಶದ್ರಕ್‌, ಮೇಶಕ್‌, ಅಬೇದ್‌ನೆಗೋ+ ಅನ್ನೋ ಕೆಲವು ಯೆಹೂದ್ಯರು ನಿನ್ನ ಮಾತಿಗೆ ಗೌರವ ಕೊಡಲಿಲ್ಲ. ಅವರು ನಿನ್ನ ದೇವರುಗಳನ್ನ ಆರಾಧಿಸ್ತಿಲ್ಲ, ನೀನು ನಿಲ್ಲಿಸಿದ ಚಿನ್ನದ ಮೂರ್ತಿಯನ್ನ ಆರಾಧಿಸೋಕೆ ನಿರಾಕರಿಸಿದ್ದಾರೆ” ಅಂದ್ರು. 13  ಇದನ್ನ ಕೇಳಿ ನೆಬೂಕದ್ನೆಚ್ಚರನಿಗೆ ಕೋಪ ಬಂತು. ಶದ್ರಕ್‌, ಮೇಶಕ್‌, ಅಬೇದ್‌ನೆಗೋರನ್ನ ಕರ್ಕೊಂಡು ಬರೋಕೆ ಹೇಳಿದ. ಆಗ ಅವ್ರನ್ನ ರಾಜನ ಮುಂದೆ ಕರ್ಕೊಂಡು ಬಂದ್ರು. 14  ನೆಬೂಕದ್ನೆಚ್ಚರ ಅವ್ರಿಗೆ “ಶದ್ರಕ್‌, ಮೇಶಕ್‌, ಅಬೇದ್‌ನೆಗೋ, ನೀವು ನನ್ನ ದೇವರುಗಳನ್ನ ಆರಾಧಿಸ್ತಿಲ್ಲ,+ ನಾನು ನಿಲ್ಲಿಸಿದ ಚಿನ್ನದ ಮೂರ್ತಿಯನ್ನ ಆರಾಧಿಸಿಲ್ಲ ಅಂತ ನಾನು ಕೇಳಿಸ್ಕೊಂಡೆ ನಿಜನಾ? 15  ಈಗಲಾದ್ರೂ ನೀವು ಕೊಂಬು, ಕೊಳಲು, ತಿದಿಗೊಳಲು, ವೀಣೆ,* ತಂತಿವಾದ್ಯ, ತ್ರಿಕೋನಾಕಾರದ ತಂತಿವಾದ್ಯ, ಬೇರೆ ಎಲ್ಲ ಸಂಗೀತ ಉಪಕರಣಗಳ ಶಬ್ದ ಕೇಳಿದಾಗ ನಾನು ಮಾಡಿಸಿದ ಮೂರ್ತಿಗೆ ಅಡ್ಡಬಿದ್ದು, ಅದನ್ನ ಆರಾಧಿಸಿದ್ರೆ ನಿಮಗೇ ಒಳ್ಳೇದು. ಇಲ್ಲದಿದ್ರೆ ಉರಿಯೋ ಕುಲುಮೆಗೆ ಹಾಕಿಬಿಡ್ತಾರೆ. ಯಾವ ದೇವರಿಗೆ ನಿಮ್ಮನ್ನ ನನ್ನ ಕೈಯಿಂದ ಬಿಡಿಸೋಕೆ ಆಗುತ್ತೆ?” ಅಂದ.+ 16  ಆಗ ಶದ್ರಕ್‌, ಮೇಶಕ್‌, ಅಬೇದ್‌ನೆಗೋ ರಾಜನಿಗೆ “⁠ನೆಬೂಕದ್ನೆಚ್ಚರನೇ, ಈ ವಿಷ್ಯದ ಬಗ್ಗೆ ನಾವೇನು ಜಾಸ್ತಿ ಹೇಳಲ್ಲ. 17  ನಮ್ಮನ್ನ ಹೊತ್ತಿ ಉರಿಯೋ ದೊಡ್ಡ ಕುಲುಮೆಗೆ ಹಾಕಿದ್ರೂ ಆ ಕುಲುಮೆಯಿಂದ, ನಿನ್ನ ಕೈಯಿಂದ ನಮ್ಮನ್ನ ಕಾಪಾಡೋ ಶಕ್ತಿ ನಾವು ಆರಾಧಿಸೋ ದೇವರಿಗಿದೆ.+ 18  ದೇವರು ನಮ್ಮನ್ನ ಕಾಪಾಡದಿದ್ರೂ ಒಂದು ವಿಷ್ಯ ತಿಳ್ಕೊ, ನಾವು ನಿನ್ನ ದೇವರುಗಳನ್ನ ಆರಾಧಿಸಲ್ಲ. ನೀನು ನಿಲ್ಲಿಸಿದ ಚಿನ್ನದ ಮೂರ್ತಿಯನ್ನ ಆರಾಧಿಸಲ್ಲ” ಅಂದ್ರು.+ 19  ಆಗ ನೆಬೂಕದ್ನೆಚ್ಚರನಿಗೆ ಶದ್ರಕ್‌, ಮೇಶಕ್‌, ಅಬೇದ್‌ನೆಗೋ ಮೇಲೆ ತುಂಬ ಕೋಪ ಬಂತು, ಅವನ ನಡವಳಿಕೆ ಸಂಪೂರ್ಣ ಬದಲಾಯ್ತು.* ಅವನು ಆ ಕುಲುಮೆಯನ್ನ ಸಾಮಾನ್ಯಕ್ಕಿಂತ ಏಳುಪಟ್ಟು ಹೆಚ್ಚಾಗಿ ಉರಿಸೋಕೆ ಹೇಳಿದ. 20  ತನ್ನ ಸೈನ್ಯದಿಂದ ಕೆಲವು ಬಲಶಾಲಿಗಳನ್ನ ಕರೆದು ಶದ್ರಕ್‌, ಮೇಶಕ್‌, ಅಬೇದ್‌ನೆಗೋರನ್ನ ಕಟ್ಟಿ ಉರಿಯೋ ಕುಲುಮೆಗೆ ಹಾಕಿ ಅಂತ ಅಪ್ಪಣೆಕೊಟ್ಟ. 21  ಆಗ ಆ ಮೂವರನ್ನ ಅವ್ರ ಮೇಲಂಗಿಗಳ, ಉಡುಪುಗಳ, ಟೋಪಿಗಳ, ಅವ್ರ ಬೇರೆ ಬಟ್ಟೆಗಳ ಸಮೇತ ಕಟ್ಟಿ ಉರಿತಿರೋ ಕುಲುಮೆಗೆ ಹಾಕಿದ್ರು. 22  ರಾಜನ ಅಪ್ಪಣೆ ಎಷ್ಟು ಕಠಿಣವಾಗಿತ್ತು ಅಂದ್ರೆ, ಕುಲುಮೆ ಎಷ್ಟು ಜೋರಾಗಿ ಉರಿತಿತ್ತೆಂದ್ರೆ ಶದ್ರಕ್‌, ಮೇಶಕ್‌, ಅಬೇದ್‌ನೆಗೋರನ್ನ ಕುಲುಮೆಗೆ ಹಾಕೋಕೆ ಕರ್ಕೊಂಡು ಹೋದವ್ರೇ ಅಗ್ನಿ ಜ್ವಾಲೆಯಿಂದ ಸತ್ತು ಹೋದ್ರು. 23  ಕಟ್ಟಿ ಹಾಕಿದ್ದ ಈ ಮೂರು ಗಂಡಸರು ಅಂದ್ರೆ ಶದ್ರಕ್‌, ಮೇಶಕ್‌, ಅಬೇದ್‌ನೆಗೋ ಹೊತ್ತಿ ಉರಿಯೋ ಕುಲುಮೆಗೆ ಬಿದ್ರು. 24  ಆಗ ರಾಜ ನೆಬೂಕದ್ನೆಚ್ಚರ ಬೆಚ್ಚಿಬಿದ್ದು ತಕ್ಷಣ ಎದ್ದು ತನ್ನ ಉನ್ನತ ಅಧಿಕಾರಿಗಳಿಗೆ “ನಾವು ಬೆಂಕಿಗೆ ಹಾಕಿದ್ದು ಮೂರು ಜನ್ರನ್ನಲ್ವಾ?” ಅಂತ ಕೇಳಿದ. ಅದಕ್ಕೆ ಅವರು “ಹೌದು ರಾಜ” ಅಂದ್ರು. 25  ಆಗ ರಾಜ ಅವ್ರಿಗೆ “ಅಲ್ಲಿ ನೋಡಿ! ಉರಿತಿರೋ ಬೆಂಕಿ ಮಧ್ಯ ನಾಲ್ಕು ಜನ ಆರಾಮವಾಗಿ ನಡಿತಿದ್ದಾರೆ. ಅವ್ರಿಗೆ ಏನೂ ಆಗಿಲ್ಲ. ಆ ನಾಲ್ಕನೆಯವನು ನೋಡೋಕೆ ದೇವದೂತನ ತರ ಕಾಣ್ತಿದ್ದಾನೆ” ಅಂದ. 26  ಆಮೇಲೆ ನೆಬೂಕದ್ನೆಚ್ಚರ ಹೊತ್ತಿ ಉರಿತಿರೋ ಕುಲುಮೆ ಬಾಗಿಲ ಹತ್ರ ಬಂದು “ಸರ್ವೋನ್ನತ ದೇವರ+ ಸೇವಕರಾಗಿರೋ ಶದ್ರಕ್‌, ಮೇಶಕ್‌, ಅಬೇದ್‌ನೆಗೋ ಹೊರಗೆ ಬನ್ನಿ!” ಅಂತ ಕರೆದ. ಆಗ ಶದ್ರಕ್‌, ಮೇಶಕ್‌, ಅಬೇದ್‌ನೆಗೋ ಬೆಂಕಿಯಿಂದ ಹೊರಗೆ ಬಂದ್ರು. 27  ಅಲ್ಲಿ ಇದ್ದ ದೇಶಾಧಿಪತಿಗಳು, ಮುಖ್ಯಸ್ಥರು, ರಾಜ್ಯಪಾಲರು, ರಾಜನ ಉನ್ನತ ಅಧಿಕಾರಿಗಳು+ ಈ ಮೂರು ಗಂಡಸ್ರಿಗೆ ಬೆಂಕಿಯಿಂದ ಒಂಚೂರೂ ಹಾನಿ ಆಗದೆ ಇರೋದನ್ನ+ ನೋಡಿದ್ರು. ಅವ್ರ ಒಂದು ಕೂದಲು ಸಹ ಬೆಂಕಿಯಿಂದ ಸುಟ್ಟು ಹೋಗಿರಲಿಲ್ಲ. ಅವ್ರ ಬಟ್ಟೆ ಸುಟ್ಟು ಹೋಗಿರಲಿಲ್ಲ, ಅವ್ರಿಂದ ಸುಟ್ಟ ವಾಸನೆನೂ ಬರ್ತಿರಲಿಲ್ಲ. 28  ಆಗ ನೆಬೂಕದ್ನೆಚ್ಚರ ಎಲ್ಲರಿಗೂ ಹೀಗೆ ಹೇಳಿದ: “ಶದ್ರಕ್‌, ಮೇಶಕ್‌, ಅಬೇದ್‌ನೆಗೋ+ ಆರಾಧಿಸೋ ದೇವರ ಗುಣಗಾನ ಮಾಡಿ. ಆತನು ತನ್ನ ದೂತನನ್ನ ಕಳಿಸಿ ತನ್ನ ಸೇವಕರನ್ನ ಕಾಪಾಡಿದ್ದಾನೆ. ಅವರು ಆತನಲ್ಲಿ ನಂಬಿಕೆ ಇಟ್ಟು ರಾಜನಾದ ನನ್ನ ಆಜ್ಞೆ ವಿರುದ್ಧ ಹೋಗಿ ಸಾಯೋಕೆ ಸಿದ್ಧರಿದ್ದರೇ ಹೊರತು ತಮ್ಮ ಸ್ವಂತ ದೇವರನ್ನ ಬಿಟ್ಟು ಬೇರೆ ಯಾವ ದೇವರಿಗೂ ತಮ್ಮ ಆರಾಧನೆ ಸಲ್ಲಿಸೋಕೆ ಸಿದ್ಧರಿರಲಿಲ್ಲ.+ 29  ಹಾಗಾಗಿ ಈಗ ನಾನು ಒಂದು ಆಜ್ಞೆ ಕೊಡ್ತೀನಿ. ಅದೇನಂದ್ರೆ, ಯಾವ ಜನ್ರಾಗಲಿ, ದೇಶದವರಾಗಲಿ, ಬೇರೆಬೇರೆ ಭಾಷೆ ಮಾತಾಡೋ ಜನ್ರಾಗಲಿ ಶದ್ರಕ್‌, ಮೇಶಕ್‌, ಅಬೇದ್‌ನೆಗೋ ಆರಾಧಿಸೋ ದೇವರ ವಿರುದ್ಧ ಏನಾದ್ರೂ ಮಾತಾಡಿದ್ರೆ ತುಂಡುತುಂಡು ಆಗ್ತಾರೆ. ಅವ್ರ ಮನೆಗಳು ಸಾರ್ವಜನಿಕ ಶೌಚಾಲಯ* ಆಗುತ್ತೆ. ಯಾಕಂದ್ರೆ ಈ ರೀತಿ ಬೇರೆ ಯಾವ ದೇವರಿಂದಾನೂ ಕಾಪಾಡೋಕೆ ಆಗಲ್ಲ.”+ 30  ಆಮೇಲೆ ರಾಜ ಶದ್ರಕ್‌, ಮೇಶಕ್‌, ಅಬೇದ್‌ನೆಗೋರಿಗೆ ಬಾಬೆಲಿನ ಪ್ರಾಂತ್ಯದಲ್ಲಿ ದೊಡ್ಡ ಹುದ್ದೆ ಕೊಟ್ಟ.*+

ಪಾದಟಿಪ್ಪಣಿ

ಸುಮಾರು 27 ಮೀ. (88 ಅಡಿ) ಪರಿಶಿಷ್ಟ ಬಿ14 ನೋಡಿ.
ಸುಮಾರು 2.7 ಮೀ. (8.8 ಅಡಿ) ಪರಿಶಿಷ್ಟ ಬಿ14 ನೋಡಿ.
ಅಥವಾ “ಝಿದರ್‌.” ಒಂದು ಬಗೆಯ ಸಿತಾರ್‌. ಇದು ಪ್ರಾಚೀನ ಕಾಲದ ತಂತಿವಾದ್ಯ.
ಅಥವಾ “ಝಿದರ್‌.” ಒಂದು ಬಗೆಯ ಸಿತಾರ್‌. ಇದು ಪ್ರಾಚೀನ ಕಾಲದ ತಂತಿವಾದ್ಯ.
ಅಥವಾ “ಚಾಡಿ ಹೇಳಿದ್ರು.”
ಅಥವಾ “ಝಿದರ್‌.” ಒಂದು ಬಗೆಯ ಸಿತಾರ್‌. ಇದು ಪ್ರಾಚೀನ ಕಾಲದ ತಂತಿವಾದ್ಯ.
ಅಥವಾ “ಝಿದರ್‌.” ಒಂದು ಬಗೆಯ ಸಿತಾರ್‌. ಇದು ಪ್ರಾಚೀನ ಕಾಲದ ತಂತಿವಾದ್ಯ.
ಅಥವಾ “ಅವನ ಮುಖ ಬದಲಾಯ್ತು.”
ಬಹುಶಃ, “ತಿಪ್ಪೆ ಗುಂಡಿ, ಸಗಣಿಯ ಗುಡ್ಡೆ.”
ಅಕ್ಷ. “ಏಳಿಗೆ ಆಗೋ ಹಾಗೆ ಮಾಡಿದ.”