ಕೀರ್ತನೆ 73:1-28

  • ದೇವರ ಸೇವಕ ಸರಿಯಾಗಿ ಯೋಚಿಸಿ ತನ್ನ ಭಾವನೆ ಸರಿಮಾಡ್ಕೊಂಡ

    • “ನನ್ನ ಕಾಲು ಇನ್ನೇನು ದಾರಿ ತಪ್ತಿತ್ತು” (2)

    • “ಇಡೀ ದಿನ ನಾನು ಕಷ್ಟಪಡ್ತಿದ್ದೆ” (14)

    • ‘ದೇವರ ಆರಾಧನಾ ಸ್ಥಳಕ್ಕೆ ಬರೋ ತನಕ’ (17)

    • ದುಷ್ಟರನ್ನ ಜಾರಿ ಬೀಳೋ ದಾರಿಯಲ್ಲಿ ನಿಲ್ಲಿಸ್ತೀಯ (18)

    • ದೇವರಿಗೆ ಹತ್ರ ಆಗೋದೇ ಒಳ್ಳೇದು (28)

ಆಸಾಫನ ಮಧುರ ಗೀತೆ.+ 73  ಶುದ್ಧ ಮನಸ್ಸಿರೋ ಇಸ್ರಾಯೇಲ್ಯರಿಗೆ ದೇವರು ನಿಜವಾಗ್ಲೂ ಒಳ್ಳೇದನ್ನೇ ಮಾಡ್ತಾನೆ.+  2  ಆದ್ರೆ ನನ್ನ ಕಾಲು ಇನ್ನೇನು ದಾರಿ ತಪ್ಪಿ ಹೋಗ್ತಿತ್ತು,ನನ್ನ ಪಾದ ಜಾರಿ ಇನ್ನೇನು ಬೀಳ್ತಿದ್ದೆ.+  3  ಯಾಕಂದ್ರೆ ಕೆಟ್ಟವರು ಆರಾಮಾಗಿ ಜೀವಿಸ್ತಾ ಇರೋದನ್ನ ನೋಡಿ,ಆ ಗರ್ವಿಷ್ಠರ* ಮೇಲೆ ನನಗೆ ಹೊಟ್ಟೆಕಿಚ್ಚಾಯ್ತು.+  4  ಅವರು ಗಟ್ಟಿಮುಟ್ಟಾಗಿದ್ದಾರೆ.* ಸಾವಿನಲ್ಲೂ ಅವ್ರಿಗೆ ನೋವು ಇಲ್ಲ.+  5  ಬೇರೆಯವ್ರಿಗೆ ಇರೋ ತೊಂದರೆಗಳು ಅವ್ರಿಗಿಲ್ಲ,+ಬೇರೆಯವ್ರ ತರ ಅವರು ಕಷ್ಟಪಡಲ್ಲ.+  6  ಹಾಗಾಗಿ ಅಹಂಕಾರನೇ ಅವ್ರ ಕತ್ತಿನ ಸರ,+ಹಿಂಸೆನೇ ಅವ್ರ ಬಟ್ಟೆ.  7  ಅವ್ರ ಸಮೃದ್ಧಿಯಿಂದ* ಅವ್ರ ಕಣ್ಣು ಉಬ್ಬಿಕೊಂಡಿದೆ,ಅವರು ಮನಸ್ಸಲ್ಲಿ ನೆನಸಿದ್ದಕ್ಕಿಂತ ಹೆಚ್ಚು ಯಶಸ್ಸನ್ನ ಪಡ್ಕೊಂಡಿದ್ದಾರೆ.  8  ಅವರು ಬೇರೆಯವ್ರನ್ನ ಕೀಳಾಗಿ ನೋಡ್ತಾ, ಕೆಟ್ಟಕೆಟ್ಟ ಮಾತು ಆಡ್ತಾರೆ,+ಜನ್ರನ್ನ ಹೆದರಿಸಿ ಬೆದರಿಸಿ ಜಂಬದಿಂದ ಅವ್ರ ಮೇಲೆ ದಬ್ಬಾಳಿಕೆ ಮಾಡ್ತಾರೆ.+  9  ಅವರು ಕೊಚ್ಚಿಕೊಳ್ಳೋ ಮಾತುಗಳು ಆಕಾಶ ಮುಟ್ಟುತ್ತೆ,ಅವರು ಇಷ್ಟಬಂದ ಹಾಗೆ ಮಾತಾಡ್ತಾ ಭೂಮಿಯಲ್ಲೆಲ್ಲ ತಿರುಗ್ತಾರೆ. 10  ಹಾಗಾಗಿ ದೇವ್ರ ಜನ್ರು ಅವ್ರ ಕಡೆ ವಾಲ್ತಾರೆ,ಉಕ್ಕಿ ಹರೀತಿರೋ ಅವ್ರ ನೀರನ್ನ ಕುಡಿತಾರೆ. 11  “ದೇವರಿಗೆ ಇದೆಲ್ಲಾ ಹೇಗೆ ಗೊತ್ತಾಗುತ್ತೆ?+ ಸರ್ವೋನ್ನತನಿಗೆ ನಿಜವಾಗ್ಲೂ ಇದ್ರ ಬಗ್ಗೆ ಗೊತ್ತಾ?” ಅಂತ ಅವರು ಕೇಳ್ತಾರೆ. 12  ಹೌದು, ಈ ಕೆಟ್ಟವರಿಗೆ ಜೀವನ ಯಾವಾಗ್ಲೂ ಆರಾಮಾಗಿ ಇರುತ್ತೆ.+ ಅವ್ರ ಆಸ್ತಿ ಜಾಸ್ತಿ ಆಗ್ತಾನೇ ಇರುತ್ತೆ.+ 13  ನಾನು ನನ್ನ ಹೃದಯನ ಶುದ್ಧವಾಗಿ ಇಟ್ಕೊಂಡು,ನಾನು ನನ್ನನ್ನೇ ನಿರಪರಾಧಿ ಅಂತ ಸಾಬೀತು ಮಾಡಿದ್ದು ಎಲ್ಲ ವ್ಯರ್ಥ ಆಯ್ತು.+ 14  ಇಡೀ ದಿನ ನಾನು ಕಷ್ಟಪಡ್ತಿದ್ದೆ,+ದಿನಾ ಬೆಳಿಗ್ಗೆ ದೇವರು ನನಗೆ ಶಿಕ್ಷೆ ಕೊಡ್ತಿದ್ದ.+ 15  ಆದ್ರೆ ಈ ವಿಷ್ಯಗಳನ್ನ ನಾನು ಹೇಳ್ಕೊಂಡಿದ್ರೆ,ನಾನು ನಿನ್ನ ಜನ್ರಿಗೆ ದ್ರೋಹಮಾಡಿದ ಹಾಗೆ ಆಗ್ತಿತ್ತು. 16  ನಾನದನ್ನ ಅರ್ಥಮಾಡಿಕೊಳ್ಳೋಕೆ ಪ್ರಯತ್ನಿಸಿದಾಗ,ಅದ್ರಿಂದ ನನಗೆ ನೋವಾಗ್ತಿತ್ತು. 17  ದೇವರ ಆರಾಧನಾ ಸ್ಥಳಕ್ಕೆ ಹೋಗಿಕೆಟ್ಟವರ ಭವಿಷ್ಯದ ಬಗ್ಗೆ ಯೋಚಿಸಿದ ಮೇಲೆನೇ ನನಗೆ ಆ ನೋವು ಕಮ್ಮಿ ಆಯ್ತು. 18  ನೀನು ಖಂಡಿತ ಅವ್ರನ್ನ ಜಾರಿ ಬೀಳೋ ದಾರಿಯಲ್ಲಿ ನಿಲ್ಲಿಸ್ತೀಯ.+ ಹಾಗಾಗಿ ಅವರು ಬಿದ್ದು ನಾಶ ಆಗ್ತಾರೆ.+ 19  ಎಷ್ಟು ಬೇಗ ಅವರು ಹಾಳಾಗಿ ಹೋದ್ರು!+ ಇದ್ದಕ್ಕಿದ್ದ ಹಾಗೆ ವಿಪತ್ತು ಬಂದು ಅವರು ಭಯಂಕರ ಅಂತ್ಯ ಕಂಡ್ರು! 20  ಯೆಹೋವನೇ, ಒಬ್ಬ ವ್ಯಕ್ತಿ ನಿದ್ದೆಯಿಂದ ಎದ್ದಾಗ ಕನಸನ್ನ ಮರಿಯೋ ತರ,ನೀನು ಎದ್ದಾಗ, ಅವ್ರನ್ನ ಮರೆತುಬಿಡ್ತೀಯ. 21  ಆದ್ರೆ ನನ್ನ ಹೃದಯ ನೊಂದುಹೋಗಿತ್ತು,+ನನ್ನ ಅಂತರಾಳದಲ್ಲಿ* ತುಂಬ ನೋವಿತ್ತು. 22  ನಾನು ಮೂರ್ಖನಾಗಿದ್ದೆ, ನನಗೆ ತಿಳುವಳಿಕೆ ಇರಲಿಲ್ಲ,ಬುದ್ಧಿಯಿಲ್ಲದ ಮೃಗದ ತರ ಇದ್ದೆ. 23  ಆದ್ರೆ ಈಗ ನಾನು ಯಾವಾಗ್ಲೂ ನಿನ್ನ ಜೊತೆ ಇರ್ತಿನಿ,ನೀನು ನನ್ನ ಬಲಗೈಯನ್ನ ಹಿಡ್ಕೊಂಡು ಇರ್ತಿಯ.+ 24  ನೀನು ಸಲಹೆ ಕೊಟ್ಟು ನನಗೆ ದಾರಿ ತೋರಿಸ್ತೀಯ,+ಆಮೇಲೆ ನೀನು ನನಗೆ ಸನ್ಮಾನ ಮಾಡಿಸ್ತೀಯ.+ 25  ಸ್ವರ್ಗದಲ್ಲಿ ನಿನ್ನನ್ನ ಬಿಟ್ರೆ ನನಗೆ ಬೇರೆ ಯಾರಿದ್ದಾರೆ? ನೀನು ನನ್ನ ಜೊತೆ ಇದ್ರೆ ಭೂಮಿ ಮೇಲಿರೋ ಯಾರೂ ನನಗೆ ಬೇಕಾಗಿಲ್ಲ.+ 26  ನನ್ನ ದೇಹ, ನನ್ನ ಮನಸ್ಸು ಸುಸ್ತಾಗಿ ಹೋದ್ರೂ,ದೇವರು ನನ್ನ ಹೃದಯವನ್ನ ಕಾಪಾಡ್ತಾನೆ, ಆತನೇ ನನ್ನ ಬಂಡೆ. ಯಾವಾಗ್ಲೂ ಆತನೇ ನನ್ನ ಪಾಲು.+ 27  ನಿನ್ನಿಂದ ದೂರ ಇರೋರು ನಿಜವಾಗ್ಲೂ ನಾಶವಾಗಿ ಹೋಗ್ತಾರೆ. ನಂಬಿಕೆದ್ರೋಹ ಮಾಡಿ* ನಿನ್ನನ್ನ ಬಿಟ್ಟು ಹೋಗೋರ ಮೇಲೆ ನೀನು ಅಂತ್ಯ ತರ್ತಿಯ.*+ 28  ಆದ್ರೆ ನನ್ನ ಪ್ರಕಾರ, ದೇವರಿಗೆ ಹತ್ತಿರ ಆಗೋದೇ ಒಳ್ಳೇದು.+ ವಿಶ್ವದ ರಾಜ ಯೆಹೋವನ ಕೈಕೆಲಸಗಳನ್ನೆಲ್ಲ ಹೇಳೋಕೆ ಆತನನ್ನ ಆಶ್ರಯ ಮಾಡ್ಕೊಂಡಿದ್ದೀನಿ.+

ಪಾದಟಿಪ್ಪಣಿ

ಅಥವಾ “ಕೊಚ್ಚಿಕೊಳ್ಳೋರ.”
ಅಥವಾ “ಅವರಿಗೆ ದೊಡ್ಡ ಹೊಟ್ಟೆ ಇದೆ.”
ಅಕ್ಷ. “ಕೊಬ್ಬಿಂದ.”
ಅಕ್ಷ. “ನನ್ನ ಮೂತ್ರಪಿಂಡದಲ್ಲಿ.”
ಅಕ್ಷ. “ವೇಶ್ಯೆರ ತರ ನಡ್ಕೊಂಡು.”
ಅಕ್ಷ. “ನಿಶಬ್ದ ಮಾಡ್ತೀಯ.”