ಕೀರ್ತನೆ 36:1-12

  • ದೇವರ ಶಾಶ್ವತ ಪ್ರೀತಿ ಅಮೂಲ್ಯ

    • ಕೆಟ್ಟವನು ದೇವರಿಗೆ ಭಯಪಡಲ್ಲ (1)

    • ದೇವರು ಜೀವದ ಮೂಲ (9)

    • “ನಿನ್ನ ಬೆಳಕಿನಿಂದಾನೇ ನಾವು ಬೆಳಕನ್ನ ನೋಡ್ತೀವಿ” (9)

ಗಾಯಕರ ನಿರ್ದೇಶಕನಿಗೆ ಸೂಚನೆ: ಯೆಹೋವನ ಸೇವಕ ದಾವೀದನ ಕೀರ್ತನೆ. 36  ಕೆಟ್ಟವನ ಹೃದಯದಲ್ಲಿ ಅಪರಾಧ ಅವನ ಜೊತೆ ಮಾತಾಡುತ್ತೆ,ಅವನ ಕಣ್ಣಲ್ಲಿ ದೇವರ ಭಯ ಸ್ವಲ್ಪನೂ ಇಲ್ಲ.+  2  ಅವನು ತನ್ನ ಬಗ್ಗೆನೇ ಕೊಚ್ಕೊಳ್ತಾನೆ ಅಂದ್ರೆ,ಅವನಿಗೆ ಅವನ ತಪ್ಪು ಕಾಣೋದೇ ಇಲ್ಲ, ಅದನ್ನ ಅವನು ದ್ವೇಷಿಸೋದೇ ಇಲ್ಲ.+  3  ಅವನ ಬಾಯಲ್ಲಿ ಬರೋ ಮಾತು ಹಾನಿಕರ, ಮೋಸಕರ,ಒಳ್ಳೇದನ್ನ ಮಾಡೋಕೆ ಅವನಲ್ಲಿ ಸ್ವಲ್ಪನೂ ಬುದ್ಧಿ ಇಲ್ಲ.  4  ಹಾಸಿಗೆ ಮೇಲೆ ಇರೋವಾಗ್ಲೂ ಅವನು ಸಂಚು ಮಾಡ್ತಾನೆ. ಅವನು ಹೋಗ್ತಿರೋ ದಾರಿ ಒಳ್ಳೇದಲ್ಲ,ಅವನು ಕೆಟ್ಟದ್ದನ್ನ ಬಿಡೋದೇ ಇಲ್ಲ.  5  ಯೆಹೋವನೇ, ನಿನ್ನ ಶಾಶ್ವತ ಪ್ರೀತಿ ಆಕಾಶವನ್ನ,+ನಿನ್ನ ನಂಬಿಗಸ್ತಿಕೆ ಮೋಡಗಳನ್ನ ಮುಟ್ಟುತ್ತೆ.  6  ನಿನ್ನ ನೀತಿ ವೈಭವದಿಂದ ತುಂಬಿರೋ ಬೆಟ್ಟದ ತರ ಇದೆ,*+ನಿನ್ನ ತೀರ್ಪುಗಳು ವಿಶಾಲವಾದ ಆಳ ಸಾಗರದ ತರ ಇದೆ.+ ಯೆಹೋವನೇ, ನೀನು ಮನುಷ್ಯನನ್ನೂ ಮೃಗಗಳನ್ನೂ ಕಾಪಾಡ್ತೀಯ.+  7  ದೇವರೇ, ನಿನ್ನ ಶಾಶ್ವತ ಪ್ರೀತಿ ಎಷ್ಟೋ ಅಮೂಲ್ಯ!+ ನಿನ್ನ ರೆಕ್ಕೆಯ ನೆರಳಲ್ಲಿ, ಮನುಷ್ಯರು ಆಶ್ರಯ ಪಡ್ಕೊತಾರೆ.+  8  ಅವರು ನಿನ್ನ ಆಲಯದಲ್ಲಿರೋ ಒಳ್ಳೇದನ್ನ* ತೃಪ್ತಿಯಾಗೋ ತನಕ ಕುಡಿತಾರೆ.+ ನೀನು ನಿನ್ನ ಒಳ್ಳೇತನದ ನದಿಯ ನೀರನ್ನ ಅವರಿಗೆ ಕುಡಿಸ್ತೀಯ.+  9  ಜೀವದ ಮೂಲ* ನೀನೇ,+ನಿನ್ನ ಬೆಳಕಿಂದಾನೇ ನಾವು ಬೆಳಕನ್ನ ನೋಡ್ತೀವಿ.+ 10  ನಿನ್ನ ಬಗ್ಗೆ ತಿಳ್ಕೊಂಡಿರೋರಿಗೆ ನಿನ್ನ ಶಾಶ್ವತ ಪ್ರೀತಿಯನ್ನ,+ಪ್ರಾಮಾಣಿಕ ಹೃದಯದವರಿಗೆ ನಿನ್ನ ನೀತಿಯನ್ನ ತೋರಿಸ್ತಾ ಇರು.+ 11  ದುರಹಂಕಾರಿಯ ಕಾಲು ನನ್ನನ್ನ ತುಳಿಯೋಕೆ ಬಿಡಬೇಡ,ಕೆಟ್ಟವನ ಕೈ ನನ್ನನ್ನ ಓಡಿಸದ ಹಾಗೆ ನೋಡ್ಕೊ. 12  ನೋಡು! ಅಪರಾಧಿಗಳು ಬಿದ್ದುಹೋಗಿದ್ದಾರೆ,ಅವರಿಗೆ ಮೇಲೆ ಎದ್ದೇಳೋಕೆ ಆಗಲ್ಲ.+

ಪಾದಟಿಪ್ಪಣಿ

ಅಕ್ಷ. “ದೇವರ ಬೆಟ್ಟದಂತಿದೆ.”
ಅಕ್ಷ. “ಕೊಬ್ಬನ್ನ.”
ಅಥವಾ “ಬುಗ್ಗೆ.”