ಕೀರ್ತನೆ 33:1-22
33 ನೀತಿವಂತರೇ, ಯೆಹೋವ ಮಾಡಿದ ಒಳ್ಳೇ ಕೆಲಸಗಳಿಗೆ ಖುಷಿಯಾಗಿ ಜೈಕಾರ ಹಾಕಿ.+
ನೀತಿವಂತರು ಆತನನ್ನ ಹೊಗಳಲೇಬೇಕು.
2 ತಂತಿವಾದ್ಯಗಳನ್ನ ನುಡಿಸಿ ಯೆಹೋವನಿಗೆ ಧನ್ಯವಾದ ಹೇಳಿ,ಹತ್ತು ತಂತಿಗಳ ವಾದ್ಯ ನುಡಿಸ್ತಾ ಆತನನ್ನ ಹಾಡಿ ಹೊಗಳಿ.*
3 ಆತನಿಗಾಗಿ ಹೊಸ ಹಾಡನ್ನ ಹಾಡಿ,+ಸಂತೋಷದಿಂದ ಜೈಕಾರ ಹಾಕ್ತಾ ತಂತಿವಾದ್ಯಗಳನ್ನ ಚೆನ್ನಾಗಿ ನುಡಿಸಿ.
4 ಯಾಕಂದ್ರೆ ಯೆಹೋವನ ಮಾತು ಸತ್ಯ,+ಆತನು ಮಾಡೋದೆಲ್ಲ ನಂಬೋಕೆ ಯೋಗ್ಯ.
5 ಆತನು ನೀತಿ ನ್ಯಾಯವನ್ನ ಪ್ರೀತಿಸ್ತಾನೆ.+
ಭೂಮಿ ಯೆಹೋವನ ಶಾಶ್ವತ ಪ್ರೀತಿಯಿಂದ ತುಂಬಿಹೋಗಿದೆ.+
6 ಯೆಹೋವನ ಮಾತಿಂದ ಆಕಾಶ ಸೃಷ್ಟಿ ಆಯ್ತು,+ಅದ್ರಲ್ಲಿರೋ ಎಲ್ಲ* ಆತನ ಬಾಯಿಯ ಉಸಿರಿಂದ ಬಂತು.
7 ಅಣೆಕಟ್ಟಿನ ನೀರಿನ ಹಾಗೆ ಆತನು ಸಮುದ್ರದ ನೀರನ್ನ ಕೂಡಿಸ್ತಾನೆ,+ಉಕ್ಕೇರೋ ಜಲರಾಶಿನ ಆತನು ಕಣಜದಲ್ಲಿ ಸಂಗ್ರಹಿಸ್ತಾನೆ.
8 ಇಡೀ ಭೂಮಿ ಯೆಹೋವನಿಗೆ ಭಯಪಡಲಿ.+
ಭೂಮಿಯಲ್ಲಿ ಇರೋರೆಲ್ಲ ಆತನನ್ನ ನೋಡಿ ಆಶ್ಚರ್ಯಪಡಲಿ.
9 ಯಾಕಂದ್ರೆ ಆತನು ಹೇಳಿದ ಹಾಗೇ ಭೂಮಿ ಅಸ್ತಿತ್ವಕ್ಕೆ ಬಂತು,+ಆತನು ಆಜ್ಞೆ ಕೊಟ್ಟ ಹಾಗೇ ಅದು ನಿಂತುಕೊಳ್ತು.+
10 ಯೆಹೋವ ಜನ್ರ ಯೋಜನೆಗಳನ್ನ ಮಣ್ಣುಪಾಲು ಮಾಡಿದ,+ಆತನು ಅವ್ರ ಉಪಾಯಗಳನ್ನ* ಕೆಡಿಸಿದ.+
11 ಆದ್ರೆ ಯೆಹೋವನ ನಿರ್ಣಯಗಳು* ಯಾವಾಗ್ಲೂ ಇರುತ್ತೆ,+ಆತನ ಹೃದಯದ ಆಲೋಚನೆಗಳು ಶಾಶ್ವತವಾಗಿ ಇರುತ್ತೆ.
12 ಯಾವ ಜನಾಂಗದ ಜನ್ರಿಗೆ ಯೆಹೋವ ದೇವರಾಗಿ ಇರ್ತಾನೋ,+ಯಾವ ಜನ್ರನ್ನ ಆತನು ತನ್ನ ಆಸ್ತಿಯಾಗಿ ಆರಿಸ್ಕೊಂಡಿದ್ದಾನೋ ಅವರು ಭಾಗ್ಯವಂತರು.+
13 ಯೆಹೋವ ಸ್ವರ್ಗದಿಂದ ಕೆಳಗೆ ನೋಡ್ತಾನೆ,ಆತನ ಕಣ್ಣು ಎಲ್ಲ ಜನ್ರ ಮೇಲಿರುತ್ತೆ.+
14 ಆತನು ತನ್ನ ಸ್ವರ್ಗದಿಂದ,ಜನ್ರನ್ನ ದಿಟ್ಟಿಸಿ ನೋಡ್ತಾನೆ.
15 ಎಲ್ರ ಹೃದಯಗಳನ್ನ ರೂಪಿಸಿದವನು ಆತನೇ,ಅವ್ರ ಕೆಲಸಗಳನ್ನೆಲ್ಲ ಪರೀಕ್ಷಿಸುವವನೂ ಆತನೇ.+
16 ಯಾವ ರಾಜನಿಗೂ ದೊಡ್ಡ ಸೈನ್ಯದಿಂದ ರಕ್ಷಣೆ ಸಿಗಲ್ಲ.+
ಒಬ್ಬ ವ್ಯಕ್ತಿ ಎಷ್ಟೇ ಶಕ್ತಿಶಾಲಿ ಆಗಿದ್ರೂ ಅವನ ಶಕ್ತಿ ಅವನನ್ನ ಕಾಪಾಡಲ್ಲ.+
17 ಕುದುರೆಯಿಂದ ರಕ್ಷಣೆ* ಸಿಗುತ್ತೆ ಅನ್ನೋದು ಸುಳ್ಳು.+
ಅದಕ್ಕೆ ತುಂಬ ಶಕ್ತಿ ಇದ್ರೂ ಅದು ಕಾಪಾಡಕ್ಕಾಗಲ್ಲ.
18 ನೋಡಿ! ಯೆಹೋವನ ಕಣ್ಣು ಆತನಿಗೆ ಭಯಪಡೋರ ಮೇಲಿದೆ,+ಆತನ ಶಾಶ್ವತ ಪ್ರೀತಿ ಮೇಲೆ ನಿರೀಕ್ಷೆ ಇಡೋರ ಮೇಲಿದೆ.
19 ಅವ್ರನ್ನ ಸಾವಿಂದ ಕಾಪಾಡೋಕೆ,ಬರಗಾಲದ ಸಮಯದಲ್ಲಿ ಅವರು ಜೀವಂತವಾಗಿ ಇರೋಕೆ,ಆತನು ಹೀಗೆ ಮಾಡ್ತಾನೆ.+
20 ನಾವು ಯೆಹೋವನಿಗಾಗಿ ಕಾಯ್ತಾ ಇರ್ತಿವಿ.
ಆತನೇ ನಮ್ಮ ಸಹಾಯಕ, ಆತನೇ ನಮ್ಮ ಗುರಾಣಿ.+
21 ನಮ್ಮ ಹೃದಯಗಳು ಆತನಲ್ಲಿ ಖುಷಿಪಡುತ್ತೆ,ಯಾಕಂದ್ರೆ ಆತನ ಪವಿತ್ರ ಹೆಸ್ರಿನ ಮೇಲೆ ನಮಗೆ ಭರವಸೆ ಇದೆ.+
22 ಯೆಹೋವನೇ, ನಾವು ನಿನಗಾಗಿ ಕಾಯ್ತಾ ಇರುವಾಗ್ಲೇ,+ನಿನ್ನ ಶಾಶ್ವತ ಪ್ರೀತಿ ನಮ್ಮ ಮೇಲಿರಲಿ.+
ಪಾದಟಿಪ್ಪಣಿ
^ ಅಥವಾ “ಸಂಗೀತ ರಚಿಸಿ.”
^ ಅಕ್ಷ. “ಅದರ ಸೈನ್ಯವೆಲ್ಲ.”
^ ಅಥವಾ “ಆಲೋಚನೆಗಳನ್ನ.”
^ ಅಥವಾ “ಸಲಹೆಗಳು.”
^ ಅಥವಾ “ಜಯ.”