ಎಸ್ತೇರ್‌ 5:1-14

  • ಎಸ್ತೇರ್‌ ರಾಜನ ಮುಂದೆ ಹೋದಳು (1-8)

  • ಹಾಮಾನನ ಕೋಪ ಮತ್ತು ಅಹಂಕಾರ (9-14)

5  ಮೂರನೇ ದಿನ+ ಎಸ್ತೇರ್‌ ತನ್ನ ರಾಜವಸ್ತ್ರಗಳನ್ನ ಹಾಕೊಂಡು ಅರಮನೆಯ ಒಳಗಿನ ಅಂಗಳಕ್ಕೆ ಬಂದು ರಾಜಭವನದ ಮುಂದೆ ನಿಂತಳು. ಅದೇ ಸಮಯದಲ್ಲಿ ರಾಜ ರಾಜಭವನದ ಬಾಗಿಲ ಮುಂದೆ ಇದ್ದ ತನ್ನ ಸಿಂಹಾಸನದಲ್ಲಿ ಕೂತಿದ್ದ. 2  ಆಗ ರಾಜನ ಕಣ್ಣು ಅಂಗಳದಲ್ಲಿ ನಿಂತಿದ್ದ ರಾಣಿ ಎಸ್ತೇರ್‌ ಮೇಲೆ ಬಿತ್ತು. ಅವಳನ್ನ ನೋಡ್ತಾ ರಾಜನಿಗೆ ಖುಷಿಯಾಗಿ ಅವನು ತನ್ನ ಸುವರ್ಣದಂಡವನ್ನ ಅವಳ ಕಡೆ ಚಾಚಿದ.+ ಆಗ ಎಸ್ತೇರ್‌ ರಾಜನ ಹತ್ರ ಬಂದು ಸುವರ್ಣದಂಡದ ತುದಿ ಮುಟ್ಟಿದಳು. 3  ಆಗ ರಾಜ “ರಾಣಿ ಎಸ್ತೇರ್‌ ಏನು ವಿಷ್ಯ? ಏನು ಬೇಕು? ನನ್ನ ರಾಜ್ಯದಲ್ಲಿ ಅರ್ಧ ರಾಜ್ಯ ಬೇಕಾದ್ರೂ ಕೇಳು, ಕೊಡ್ತೀನಿ. ಹೇಳು!” ಅಂದ. 4  ಆಗ ಎಸ್ತೇರ್‌ “ರಾಜನಿಗೆ ಒಪ್ಪಿಗೆ ಇದ್ರೆ ಇವತ್ತು ನಾನು ಏರ್ಪಡಿಸಿರೋ ಔತಣಕ್ಕೆ ಹಾಮಾನನ+ ಜೊತೆ ಬರಬೇಕು” ಅಂದಳು. 5  ಆಗ ರಾಜ ತನ್ನ ಸೇವಕರಿಗೆ “ಎಸ್ತೇರ್‌ ಕೇಳ್ಕೊಂಡ ಹಾಗೇ ಆಗ್ಲಿ. ತಕ್ಷಣ ಹಾಮಾನನನ್ನ ಬರೋಕೆ ಹೇಳಿ” ಅಂದ. ಹೀಗೆ ಎಸ್ತೇರ್‌ ಏರ್ಪಡಿಸಿದ ಔತಣಕ್ಕೆ ಹಾಮಾನನ ಜೊತೆ ರಾಜ ಹೋದ. 6  ಔತಣದ ಕೊನೇಲಿ ದ್ರಾಕ್ಷಾಮದ್ಯ ಕುಡಿತಿದ್ದಾಗ ರಾಜನು ಎಸ್ತೇರ್‌ಗೆ “ನಿನ್ನ ಕೋರಿಕೆ ಏನಂತ ಹೇಳು, ನಾನು ಇಲ್ಲ ಅನ್ನಲ್ಲ. ಏನು ಬೇಕಾದ್ರೂ ಕೇಳು. ನನ್ನ ರಾಜ್ಯದಲ್ಲಿ ಅರ್ಧ ರಾಜ್ಯ ಕೇಳಿದ್ರೂ ಕೊಡ್ತೀನಿ!”+ ಅಂದ. 7  ಆಗ ಎಸ್ತೇರ್‌ “ನನ್ನ ಕೋರಿಕೆ ಏನಂದ್ರೆ 8  ನಾನು ನಿಜವಾಗ್ಲೂ ರಾಜನ ಮೆಚ್ಚುಗೆ ಪಡೆದಿರೋದಾದ್ರೆ, ರಾಜ ನನ್ನ ಕೋರಿಕೆ ಕೇಳಿ ನಿಜವಾಗ್ಲೂ ನೆರವೇರಿಸಬೇಕು ಅಂತಿದ್ರೆ ನಾಳೆ ನಾನು ಏರ್ಪಡಿಸೋ ಔತಣಕ್ಕೆ ನೀವು ಹಾಮಾನನ ಜೊತೆ ಬರಬೇಕು. ಆಗ ರಾಜನಿಗೆ ನನ್ನ ಕೋರಿಕೆ ಏನಂತ ಹೇಳ್ತೀನಿ” ಅಂದಳು. 9  ಅವತ್ತು ಔತಣ ಮುಗಿಸಿ ಹೋಗುವಾಗ ಹಾಮಾನನಿಗೆ ತುಂಬ ಸಂತೋಷ ಆಗಿತ್ತು. ಅವನು ಗಾಳಿಯಲ್ಲಿ ತೇಲ್ತಿದ್ದ. ಆದ್ರೆ ಅರಮನೆಯ ಹೆಬ್ಬಾಗಿಲ ಹತ್ರ ಬಂದಾಗ ಅಲ್ಲಿ ಕೂತಿದ್ದ ಮೊರ್ದೆಕೈಯನ್ನ ನೋಡಿ ತುಂಬ ಕೋಪ ಬಂತು.+ ಯಾಕಂದ್ರೆ ಮೊರ್ದೆಕೈ ಅವನನ್ನ ನೋಡಿ ಎದ್ದು ನಿಲ್ಲಲೂ ಇಲ್ಲ, ಭಯದಿಂದ ನಡುಗ್ಲೂ ಇಲ್ಲ. 10  ಹಾಗಿದ್ರೂ ಹಾಮಾನ ತನ್ನ ಕೋಪವನ್ನ ನುಂಗಿ ಮನೆ ಕಡೆ ನಡೆದ. ಅವನು ತನ್ನ ಹೆಂಡತಿ ಜೆರೆಷಳನ್ನ+ ಮತ್ತು ತನ್ನ ಸ್ನೇಹಿತರನ್ನ ಕರೆಸಿದ. 11  ಅವನು ತನ್ನಲ್ಲಿದ್ದ ಅಪಾರ ಆಸ್ತಿ ಬಗ್ಗೆ, ತನಗಿದ್ದ ಅನೇಕ ಗಂಡು ಮಕ್ಕಳ+ ಬಗ್ಗೆ, ರಾಜ ತನಗೆ ದೊಡ್ಡ ಪದವಿ ಕೊಟ್ಟು ರಾಜನ ಅಧಿಕಾರಿಗಳಿಗಿಂತ, ಸೇವಕರಿಗಿಂತ ತನಗೆ ಜಾಸ್ತಿ ಗೌರವ ಸಿಗೋ ಹಾಗೆ ಮಾಡಿದ್ರ+ ಬಗ್ಗೆ ಜಂಬ ಕೊಚ್ಕೊಂಡ. 12  ಅಷ್ಟೇ ಅಲ್ಲ ಹಾಮಾನ “ಔತಣಕ್ಕೆ ರಾಜನ ಜೊತೆ ನನ್ನನ್ನ ಬಿಟ್ಟು ಬೇರೆ ಯಾರನ್ನೂ ಎಸ್ತೇರ್‌ ಕರೆದಿಲ್ಲ.+ ಇದಕ್ಕಿಂತ ಇನ್ನೇನು ಬೇಕು! ನಾಳೆನೂ ಔತಣಕ್ಕೆ ರಾಜನ ಜೊತೆ ನನ್ನನ್ನ ಕರೆದಿದ್ದಾಳೆ.+ 13  ಆದ್ರೆ ಆ ಯೆಹೂದಿ ಮೊರ್ದೆಕೈ ಅರಮನೆಯ ಹೆಬ್ಬಾಗಿಲಲ್ಲಿ ಕೂತಿರೋ ತನಕ ಇದ್ಯಾವುದೂ ನಂಗೆ ಖುಷಿ ಕೊಡಲ್ಲ” ಅಂದ. 14  ಆಗ ಅವನ ಹೆಂಡತಿ ಜೆರೆಷ ಮತ್ತು ಅವನ ಸ್ನೇಹಿತರು “50 ಮೊಳ* ಉದ್ದದ ಕಂಬ ನಿಲ್ಲಿಸು. ಮೊರ್ದೆಕೈಯನ್ನ ಆ ಕಂಬಕ್ಕೆ ನೇತುಹಾಕೋಕೆ ಬೆಳಿಗ್ಗೆ ಹೋಗಿ ರಾಜನಿಗೆ ಹೇಳು.+ ರಾಜನ ಜೊತೆ ಹೋಗಿ ಔತಣ ಆನಂದಿಸು” ಅಂದ್ರು. ಈ ಸಲಹೆ ಹಾಮಾನನಿಗೆ ಇಷ್ಟ ಆಯ್ತು. ಹಾಗಾಗಿ ಅವನು ಕಂಬವನ್ನ ನಿಲ್ಲಿಸಿದ.

ಪಾದಟಿಪ್ಪಣಿ

ಸುಮಾರು 22.3 ಮೀ. (73 ಅಡಿ). ಪರಿಶಿಷ್ಟ ಬಿ14 ನೋಡಿ.