ಎಫೆಸದವರಿಗೆ ಬರೆದ ಪತ್ರ 3:1-21

  • ಬೇರೆ ಜನಾಂಗದವರೂ ಪಾಲುಗಾರರಾಗುವ ಬಗ್ಗೆ ಪವಿತ್ರ ರಹಸ್ಯ (1-13)

    • ಬೇರೆ ಜನಾಂಗಗಳ ಜನ್ರು ಕ್ರಿಸ್ತನ ಜೊತೆ ವಾರಸುದಾರರು (6)

    • ದೇವರ ಶಾಶ್ವತ ಉದ್ದೇಶ (11)

  • ಎಫೆಸದವರು ತಿಳುವಳಿಕೆ ಪಡೆಯುವಂತೆ ಪ್ರಾರ್ಥನೆ (14-21)

3  ಪೌಲನಾದ ನಾನು ಕ್ರಿಸ್ತ ಯೇಸುಗೋಸ್ಕರ ಮತ್ತು ಬೇರೆ ಜನಾಂಗದವ್ರಾದ ನಿಮ್ಮ ಪ್ರಯೋಜನಕ್ಕೋಸ್ಕರ ಜೈಲಲ್ಲಿದ್ದೀನಿ.+ 2  ನೀವು ದೇವರ ಅಪಾರ ಕೃಪೆಯಿಂದ ಪ್ರಯೋಜನ ಪಡಿಯೋಕೆ ನಿಮಗೆ ಸಹಾಯ ಮಾಡೋ ಜವಾಬ್ದಾರಿಯನ್ನ ನನಗೆ ಕೊಡಲಾಗಿದೆ+ ಮತ್ತು 3  ಪವಿತ್ರ ರಹಸ್ಯವನ್ನ ನನಗೆ ಹೇಳಲಾಗಿದೆ ಅಂತ ನೀವು ನಿಜವಾಗ್ಲೂ ಕೇಳಿಸ್ಕೊಂಡಿದ್ದೀರ. ಅದ್ರ ಬಗ್ಗೆ ಈಗಾಗ್ಲೇ ಸ್ವಲ್ಪ ಬರೆದಿದ್ದೀನಿ. 4  ಅದನ್ನ ನೀವು ಓದಿದಾಗ ಕ್ರಿಸ್ತನ ಬಗ್ಗೆ ಪವಿತ್ರ ರಹಸ್ಯವನ್ನ+ ನಾನು ಅರ್ಥ ಮಾಡ್ಕೊಂಡಿದ್ದೀನಿ ಅಂತ ನಿಮಗೆ ಗೊತ್ತಾಗುತ್ತೆ. 5  ಈ ರಹಸ್ಯವನ್ನ ಪವಿತ್ರ ಅಪೊಸ್ತಲರಿಗೂ ಪ್ರವಾದಿಗಳಿಗೂ ಪವಿತ್ರಶಕ್ತಿಯಿಂದ ಈಗ ಹೇಳಿರುವಷ್ಟರ ಮಟ್ಟಿಗೆ ಹಿಂದಿನ ತಲೆಮಾರುಗಳಲ್ಲಿ ಯಾರಿಗೂ ಹೇಳಿರಲಿಲ್ಲ.+ 6  ಆ ರಹಸ್ಯ ಏನಂದ್ರೆ, ಬೇರೆ ಜನಾಂಗಗಳ ಜನ್ರು ಸಿಹಿಸುದ್ದಿಯನ್ನ ಕೇಳಿ ಕ್ರಿಸ್ತ ಯೇಸು ಜೊತೆ ಒಂದಾಗಿದ್ದು ಆತನ ಜೊತೆ ವಾರಸುದಾರರಾಗಬೇಕು, ಒಂದೇ ದೇಹದ ಅಂಗಗಳಾಗಬೇಕು+ ಮತ್ತು ದೇವರು ಕೊಟ್ಟ ಮಾತಲ್ಲಿ ನಮ್ಮ ಜೊತೆ ಪಾಲುಗಾರರಾಗಬೇಕು ಅನ್ನೋದೇ. 7  ದೇವರ ಅಪಾರ ಕೃಪೆ ಅನ್ನೋ ಉಚಿತ ಉಡುಗೊರೆಯಿಂದಾಗಿ ನಾನು ಆ ಪವಿತ್ರ ರಹಸ್ಯವನ್ನ ಹೇಳೋ ಸೇವಕನಾದೆ. ಆ ಉಡುಗೊರೆಯನ್ನ ಆತನು ತನ್ನ ಶಕ್ತಿ ಮೂಲಕ ನನಗೆ ಕೊಟ್ಟನು.+ 8  ನಾನಂತೂ ಎಲ್ಲ ಪವಿತ್ರ ಜನ್ರಲ್ಲಿ ಲೆಕ್ಕಕ್ಕಿಲ್ಲದ ವ್ಯಕ್ತಿ.+ ಆದ್ರೂ ಕ್ರಿಸ್ತನ ಅಪಾರ ಆಶೀರ್ವಾದಗಳ* ಬಗ್ಗೆ ಸಿಹಿಸುದ್ದಿಯನ್ನ ಬೇರೆ ಜನಾಂಗಗಳಿಗೆ ಸಾರಬೇಕಂತ ನನಗೆ ದೇವರು ಅಪಾರ ಕೃಪೆ ತೋರಿಸಿದನು.+ 9  ಎಲ್ಲವನ್ನ ಸೃಷ್ಟಿಸಿದ ದೇವರು ಎಷ್ಟೋ ಕಾಲದಿಂದ ಬಚ್ಚಿಟ್ಟಿದ್ದ ಪವಿತ್ರ ರಹಸ್ಯವನ್ನ+ ಹೇಗೆ ಬಯಲು ಮಾಡ್ತಾನೆ ಅಂತ ನಾನು ಪ್ರತಿಯೊಬ್ರಿಗೂ ಅರ್ಥ ಮಾಡಿಸಬೇಕಂತನೂ ನನಗೆ ಅಪಾರ ಕೃಪೆ ತೋರಿಸಿದನು. 10  ಬೇರೆಬೇರೆ ರೀತಿಯಲ್ಲಿ ಕಾಣೋ ದೇವರ ವಿವೇಕವನ್ನ ಈಗ ಸಭೆ ಮೂಲಕ+ ಸ್ವರ್ಗದಲ್ಲಿರೋ ಸರ್ಕಾರಗಳಿಗೂ ಅಧಿಕಾರಿಗಳಿಗೂ ಅರ್ಥ ಮಾಡಿಸೋಕೆ ದೇವರು ಹೀಗೆ ಮಾಡಿದನು.+ 11  ಇದು, ಕ್ರಿಸ್ತನಾದ ನಮ್ಮ ಪ್ರಭು ಯೇಸುಗೆ ಸಂಬಂಧಿಸಿ ದೇವರು ಅಂದ್ಕೊಂಡ ಶಾಶ್ವತ ಉದ್ದೇಶಕ್ಕೆ ತಕ್ಕ ಹಾಗೆ ಇದೆ.+ 12  ಕ್ರಿಸ್ತನ ಮೇಲೆ ನಾವು ನಂಬಿಕೆ ಇಟ್ಟಿರೋದ್ರಿಂದ ಧೈರ್ಯದಿಂದ ಮಾತಾಡೋಕೆ ಮತ್ತು ಭರವಸೆಯಿಂದ ದೇವರಲ್ಲಿ ಪ್ರಾರ್ಥಿಸೋಕೆ ಆಗುತ್ತೆ.+ 13  ಅದಕ್ಕೇ ನಿಮಗಾಗಿ ನಾನು ಅನುಭವಿಸ್ತಿರೋ ಕಷ್ಟಗಳನ್ನ ನೋಡಿ ನೀವು ಕುಗ್ಗಿಹೋಗಬೇಡಿ ಅಂತ ಕೇಳ್ಕೊಳ್ತೀನಿ. ಇವುಗಳಿಂದ ನಿಮಗೆ ಗೌರವ ಸಿಗುತ್ತೆ.+ 14  ಹಾಗಾಗಿ ನಾನು ತಂದೆಯಾದ ದೇವರ ಮುಂದೆ ಮಂಡಿ ಹಾಕ್ತೀನಿ. 15  ಸ್ವರ್ಗ ಮತ್ತು ಭೂಮಿಯಲ್ಲಿ ಇರೋ ಪ್ರತಿಯೊಂದು ಕುಟುಂಬ ಆ ತಂದೆಯಿಂದಾನೇ ಬಂದಿದೆ.* 16  ಮಹಿಮೆಯಿಂದ ತುಂಬಿರೋ ದೇವರು ತನ್ನ ಪವಿತ್ರಶಕ್ತಿಯ ಬಲದಿಂದ ನಿಮ್ಮ ಹೃದಮನಗಳನ್ನ ಬಲಪಡಿಸ್ಲಿ,+ 17  ನಿಮಗೆ ನಂಬಿಕೆ ಇರೋದ್ರಿಂದ ನಿಮ್ಮ ಹೃದಯದಲ್ಲಿರೋ ಪ್ರೀತಿಯ ಜೊತೆ ಕ್ರಿಸ್ತನು ವಾಸಿಸಲಿ+ ಅಂತ ನಾನು ಪ್ರಾರ್ಥಿಸ್ತೀನಿ. ನೀವು ನಂಬಿಕೆಯಲ್ಲಿ ಬಲವಾಗಿ ಬೇರೂರಿರಬೇಕು+ ಮತ್ತು ನಂಬಿಕೆ ಅನ್ನೋ ಅಡಿಪಾಯದ ಮೇಲೆ ಸ್ಥಿರವಾಗಿ ನಿಲ್ಲಬೇಕು.+ 18  ಆಗ ಎಲ್ಲ ಪವಿತ್ರ ಜನ್ರ ಜೊತೆ ನೀವೂ ಸತ್ಯದ ಉದ್ದ ಅಗಲ ಎತ್ತರ ಆಳ ಎಷ್ಟಂತ ಸಂಪೂರ್ಣವಾಗಿ ಅರ್ಥ ಮಾಡ್ಕೊಳ್ತೀರ. 19  ಅಷ್ಟೇ ಅಲ್ಲ, ಜ್ಞಾನಕ್ಕಿಂತ ಶ್ರೇಷ್ಠವಾದ ಕ್ರಿಸ್ತನ ಪ್ರೀತಿಯನ್ನ+ ತಿಳ್ಕೊಳ್ತೀರ. ಅದ್ರಿಂದ ನೀವು ದೇವರ ಗುಣಗಳನ್ನ ಸಂಪೂರ್ಣವಾಗಿ ಪಡ್ಕೊಳ್ಳೋಕೆ ಆಗುತ್ತೆ. 20  ದೇವರ ಶಕ್ತಿ ನಮ್ಮಲ್ಲಿ ಕೆಲಸ ಮಾಡ್ತಿದೆ.+ ಹಾಗಾಗಿ ನಾವು ಕೇಳೋದಕ್ಕಿಂತ, ಯೋಚ್ನೆ ಮಾಡಿದ್ದಕ್ಕಿಂತ ಎಷ್ಟೋ ಹೆಚ್ಚಾಗಿ ಮಾಡೋ ಶಕ್ತಿ ದೇವರಿಗಿದೆ.+ 21  ಸಭೆ ಮೂಲಕ, ಕ್ರಿಸ್ತ ಯೇಸು ಮೂಲಕ ಎಲ್ಲ ತಲೆಮಾರುಗಳ ತನಕ ಯಾವಾಗ್ಲೂ ಆತನಿಗೆ ಗೌರವ ಸಿಗ್ಲಿ. ಆಮೆನ್‌.

ಪಾದಟಿಪ್ಪಣಿ

ಅಕ್ಷ. “ಐಶ್ವರ್ಯದ.”
ಅಕ್ಷ. “ಕುಟುಂಬಕ್ಕೆ ಹೆಸ್ರು ಸಿಕ್ಕಿದೆ.”