ಆದಿಕಾಂಡ 50:1-26

  • ಕಾನಾನಿನಲ್ಲಿ ಯಾಕೋಬನ ಸಮಾಧಿ (1-14)

  • ಕ್ಷಮಿಸಿದ್ದೀನಿ ಅಂತ ಯೋಸೇಫನ ಭರವಸೆ (15-21)

  • ಯೋಸೇಫನ ಕೊನೇ ದಿನಗಳು ಮತ್ತು ಮರಣ (22-26)

    • ಯೋಸೇಫ ತನ್ನ ಎಲುಬುಗಳ ಬಗ್ಗೆ ಕೊಟ್ಟ ಆಜ್ಞೆ (25)

50  ಆಗ ಯೋಸೇಫ ತನ್ನ ತಂದೆ ಮುಖದ ಕಡೆ ಬಗ್ಗಿ+ ಅವನನ್ನ ಅಪ್ಕೊಂಡು ತುಂಬ ಕಣ್ಣೀರು ಸುರಿಸ್ತಾ ಮುತ್ತಿಟ್ಟ.  ಆಮೇಲೆ ಯೋಸೇಫ ತಂದೆ ಶವಕ್ಕೆ ಸುಗಂಧದ್ರವ್ಯಗಳನ್ನ ಹಾಕಿ ಅಂತ*+ ತನ್ನ ಸೇವಕರಾದ ವೈದ್ಯರಿಗೆ ಆಜ್ಞೆ ಕೊಟ್ಟ. ಅವನು ಹೇಳಿದ ಹಾಗೆ ವೈದ್ಯರು ಇಸ್ರಾಯೇಲನ ದೇಹಕ್ಕೆ ಸುಗಂಧದ್ರವ್ಯಗಳನ್ನ ಹಾಕಿದ್ರು.  ಇದಕ್ಕೆ 40 ದಿನ ತಗೊಂಡ್ರು. ಯಾಕಂದ್ರೆ ಶವಕ್ಕೆ ಸುಗಂಧದ್ರವ್ಯಗಳನ್ನ ಹಾಕೋಕೆ ಅಷ್ಟು ದಿನ ಹಿಡಿತಿತ್ತು. ಈಜಿಪ್ಟಿನವರು ಅವನಿಗಾಗಿ 70 ದಿನ ಕಣ್ಣೀರು ಸುರಿಸಿದ್ರು.  ಶೋಕದ ದಿನಗಳು ಮುಗಿದ ಮೇಲೆ ಯೋಸೇಫ ಫರೋಹನ ಅಧಿಕಾರಿಗಳಿಗೆ* “ದಯವಿಟ್ಟು ನನಗೆ ಒಂದು ಸಹಾಯ ಮಾಡಿ. ನನ್ನ ಈ ಮಾತನ್ನ ಫರೋಹನಿಗೆ ಹೇಳಿ:  ‘ನನ್ನ ತಂದೆ ನನಗೆ “ಇನ್ನು ತುಂಬ ದಿನ ನಾನು ಬದುಕಲ್ಲ.+ ನಾನು ಕಾನಾನ್‌ ದೇಶದಲ್ಲಿ ನನಗಾಗಿ ಸಿದ್ಧಮಾಡಿ ಇಟ್ಟಿರೋ ಸಮಾಧಿಯಲ್ಲೇ+ ನೀನು ನನ್ನನ್ನ ಸಮಾಧಿ ಮಾಡಬೇಕು”+ ಅಂತ ಹೇಳಿ ನನ್ನಿಂದ ಮಾತು ತಗೊಂಡಿದ್ದ.+ ಹಾಗಾಗಿ ಕಾನಾನಿಗೆ ಹೋಗೋಕೆ ನನಗೆ ದಯವಿಟ್ಟು ಅನುಮತಿಕೊಡು. ನನ್ನ ತಂದೆ ಸಮಾಧಿ ಮಾಡಿ ಬರ್ತಿನಿ’ ” ಅಂದ.  ಅದಕ್ಕೆ ಫರೋಹ “ನಿನ್ನ ತಂದೆಗೆ ನೀನು ಮಾತು ಕೊಟ್ಟ ಹಾಗೆ ನೀನು ಹೋಗಿ ಅವನನ್ನ ಸಮಾಧಿ ಮಾಡು”+ ಅಂದ.  ಹಾಗಾಗಿ ಯೋಸೇಫ ತಂದೆಯನ್ನ ಸಮಾಧಿ ಮಾಡೋಕೆ ಹೊರಟ. ಅವನ ಜೊತೆ ಫರೋಹನ ಎಲ್ಲ ಸೇವಕರು, ಆಸ್ಥಾನದ ದೊಡ್ಡ ದೊಡ್ಡ ಅಧಿಕಾರಿಗಳು,*+ ಈಜಿಪ್ಟ್‌ ದೇಶದ ಎಲ್ಲ ಮುಖ್ಯಸ್ಥರು,  ಯೋಸೇಫನ ಕುಟುಂಬದವರೆಲ್ಲರು, ಅವನ ಅಣ್ಣತಮ್ಮಂದಿರು, ಅವನ ತಂದೆ ಕುಟುಂಬದವರು ಹೋದ್ರು.+ ಅವರ ಚಿಕ್ಕಮಕ್ಕಳನ್ನ, ಪ್ರಾಣಿಗಳ ಹಿಂಡುಗಳನ್ನ ಮಾತ್ರ ಗೋಷೆನ್‌ ಪ್ರದೇಶದಲ್ಲಿ ಬಿಟ್ಟು ಹೋದ್ರು.  ಸಾರಥಿಗಳು,+ ಕುದುರೆ ಸವಾರರು ಕೂಡ ಯೋಸೇಫನ ಜೊತೆ ಹೋದ್ರು. ಹೀಗೆ ಜನ್ರ ದೊಡ್ಡ ಗುಂಪೇ ಕಾನಾನಿಗೆ ಹೋಯ್ತು. 10  ಅವರು ಯೋರ್ದನಿನ ಪ್ರದೇಶದಲ್ಲಿರೋ ಆಟಾದ್‌ ಕಣಕ್ಕೆ ಬಂದು ಅಲ್ಲಿ ಇಸ್ರಾಯೇಲನಿಗಾಗಿ ತುಂಬ ಜೋರಾಗಿ ಅತ್ತು ಗೋಳಾಡಿದ್ರು. ಯೋಸೇಫ ತನ್ನ ತಂದೆಗಾಗಿ ಏಳು ದಿನ ತನಕ ಶೋಕಿಸ್ತಾ ಇದ್ದ. 11  ಆಟಾದ್‌ ಕಣದಲ್ಲಿ ಜನ್ರು ತುಂಬ ಗೋಳಾಡೋದನ್ನ ಆ ದೇಶದಲ್ಲಿದ್ದ ಕಾನಾನ್ಯರು ನೋಡಿ ಆಶ್ಚರ್ಯದಿಂದ “ಈಜಿಪ್ಟಿನವರು ತುಂಬ ಗೋಳಾಡ್ತಾ ಇದ್ದಾರೆ!” ಅಂದ್ರು. ಹಾಗಾಗಿ ಯೋರ್ದನಿನ ಪ್ರದೇಶದಲ್ಲಿ ಇರೋ ಆ ಜಾಗಕ್ಕೆ ಆಬೇಲ್‌-ಮಿಚ್ರಯೀಮ್‌* ಅನ್ನೋ ಹೆಸ್ರು ಬಂತು. 12  ಯಾಕೋಬ ಹೇಳಿದ ಹಾಗೇ ಅವನ ಗಂಡುಮಕ್ಕಳು ಮಾಡಿದ್ರು.+ 13  ಅವರು ಯಾಕೋಬನ ಶವವನ್ನ ಕಾನಾನ್‌ ದೇಶಕ್ಕೆ ತಗೊಂಡು ಹೋಗಿ ಮಮ್ರೆಗೆ ಹತ್ರ ಇದ್ದ ಮಕ್ಪೇಲದ ಜಮೀನಿನ ಗವಿಯಲ್ಲಿ ಸಮಾಧಿ ಮಾಡಿದ್ರು. ಸಮಾಧಿ ಮಾಡೋಕೆ ಆ ಜಮೀನನ್ನ ಅಬ್ರಹಾಮ ಹಿತ್ತಿಯನಾದ ಎಫ್ರೋನನಿಂದ ಖರೀದಿಸಿದ್ದ.+ 14  ಯೋಸೇಫ ತಂದೆಯನ್ನ ಸಮಾಧಿ ಮಾಡಿದ ಮೇಲೆ ಅವನ ಅಣ್ಣತಮ್ಮಂದಿರ ಜೊತೆ, ಬೇರೆಯವರ ಜೊತೆ ಈಜಿಪ್ಟಿಗೆ ವಾಪಾಸ್‌ ಹೋದ. 15  ಯೋಸೇಫನ ಸಹೋದರರು ತಮ್ಮ ತಂದೆ ತೀರಿಹೋದ ಮೇಲೆ “ಯೋಸೇಫ ನಮ್ಮ ಮೇಲೆ ದ್ವೇಷ ಇಟ್ಕೊಂಡಿರಬಹುದು. ನಾವು ಅವನಿಗೆ ಮಾಡಿದ ಎಲ್ಲ ಕೇಡಿಗೆ ಈಗ ಅವನು ನಮ್ಮ ಮೇಲೆ ಸೇಡು ತೀರಿಸಬಹುದು”+ ಅಂತ ಮಾತಾಡ್ಕೊಂಡ್ರು. 16  ಹಾಗಾಗಿ ಅವರು ಯೋಸೇಫನಿಗೆ “ನಿನ್ನ ತಂದೆ ಸಾಯೋದಕ್ಕೆ ಮುಂಚೆ ನಮಗೆ ಒಂದು ಆಜ್ಞೆ ಕೊಟ್ಟ. ಏನಂದ್ರೆ 17  ‘ನೀವು ಯೋಸೇಫನ ಹತ್ರ ಹೋಗಿ ನಾನು ಹೀಗಂದೆ ಅಂತೇಳಿ: “ನಿನ್ನ ಸಹೋದರರು ನಿನಗೆ ಬಹಳಷ್ಟು ಹಾನಿಮಾಡಿ ನಿನ್ನ ವಿರುದ್ಧ ಮಾಡಿದ ಅಪರಾಧ, ಪಾಪವನ್ನ ದಯವಿಟ್ಟು ಕ್ಷಮಿಸು ಅಂತ ಬೇಡ್ಕೊಳ್ತೀನಿ.”’ ಈಗ ನಿನ್ನ ತಂದೆಯ ದೇವರ ಸೇವಕರಾದ ನಾವು ಸಹ ನಮ್ಮ ಅಪರಾಧವನ್ನ ಕ್ಷಮಿಸು ಅಂತ ಬೇಡ್ಕೊಳ್ತೀವಿ” ಅಂತ ಹೇಳಿ ಕಳಿಸಿದ್ರು. ಅವರ ಈ ಮಾತು ಕೇಳಿ ಯೋಸೇಫ ಅತ್ತುಬಿಟ್ಟ. 18  ಅವನ ಸಹೋದರರೇ ಅವನ ಹತ್ರ ಬಂದು ಅಡ್ಡಬಿದ್ದು “ನೀನು ನಮಗೆ ಏನು ಬೇಕಾದ್ರೂ ಮಾಡು, ನಾವು ನಿನ್ನ ದಾಸರು!”+ ಅಂದ್ರು. 19  ಯೋಸೇಫ ಅವರಿಗೆ “ಹೆದರಬೇಡಿ. ನಿಮಗೆ ಶಿಕ್ಷೆ ವಿಧಿಸೋಕೆ ನಾನೇನು ದೇವರಾ? 20  ನೀವು ನನಗೆ ಹಾನಿ ಮಾಡೋಕೆ ಯೋಚಿಸಿದ್ರೂ+ ಅದ್ರಿಂದ ಒಳ್ಳೇದೇ ಆಗೋ ತರ ದೇವರು ಮಾಡಿದನು. ಇದ್ರಿಂದ ಅನೇಕರ ಜೀವ ಉಳಿಸಿದನು. ನೀವೇ ಕಣ್ಣಾರೆ ನೋಡ್ತಾ ಇದ್ದೀರಲ್ಲಾ?+ 21  ಹಾಗಾಗಿ ಭಯಪಡಬೇಡಿ. ನಿಮಗೆ, ನಿಮ್ಮ ಚಿಕ್ಕ ಮಕ್ಕಳಿಗೆ ಬೇಕಾದ ಆಹಾರ ನಾನು ಕೊಡ್ತೀನಿ”+ ಅಂದ. ಹೀಗೆ ಸಮಾಧಾನ ಮಾಡಿ ಅವರಲ್ಲಿ ಭರವಸೆ ತುಂಬಿದ. 22  ಯೋಸೇಫ ಮತ್ತು ಅವನ ತಂದೆ ಕುಟುಂಬದವರು ಈಜಿಪ್ಟಲ್ಲೇ ವಾಸಿಸಿದ್ರು. ಯೋಸೇಫ 110 ವರ್ಷ ಬದುಕಿದ. 23  ಅವನು ಎಫ್ರಾಯೀಮನ ಮೊಮ್ಮಕ್ಕಳನ್ನ+ ನೋಡಿದ. ಅಲ್ಲದೆ ಮನಸ್ಸೆಯ ಮಗ ಮಾಕೀರನ ಗಂಡುಮಕ್ಕಳನ್ನ+ ಸಹ ನೋಡಿದ. ಅವರು ಯೋಸೇಫನಿಗೆ ಸ್ವಂತ ಮಕ್ಕಳ ತರ ಇದ್ರು. 24  ತುಂಬ ಸಮಯ ಆದ್ಮೇಲೆ ಯೋಸೇಫ ತನ್ನ ಸಹೋದರರಿಗೆ “ನಾನು ಇನ್ನು ತುಂಬ ದಿನ ಬದುಕಲ್ಲ. ಆದ್ರೆ ದೇವರು ನಿಮಗೆ ಖಂಡಿತ ಸಹಾಯ ಮಾಡ್ತಾನೆ.*+ ನಿಮ್ಮನ್ನ ಈ ದೇಶದಿಂದ ಹೊರಗೆ ಕರ್ಕೊಂಡು ಹೋಗಿ ಅಬ್ರಹಾಮ, ಇಸಾಕ, ಯಾಕೋಬನಿಗೆ ಕೊಡ್ತೀನಿ ಅಂತ ಹೇಳಿದ ದೇಶಕ್ಕೆ ಖಂಡಿತ ಸೇರಿಸ್ತಾನೆ”+ ಅಂದ. 25  ಯೋಸೇಫ ಇಸ್ರಾಯೇಲನ ಮಕ್ಕಳಿಗೆ “ದೇವರು ನಿಮಗೆ ಖಂಡಿತ ಸಹಾಯ ಮಾಡ್ತಾನೆ.* ನಾನು ಸತ್ತ ಮೇಲೆ ನನ್ನ ಮೂಳೆಗಳನ್ನ ಇಲ್ಲಿಂದ ತಗೊಂಡು ಹೋಗ್ತಿರ ಅಂತ ನನಗೆ ಮಾತುಕೊಡಿ”+ ಅಂತ ಆಣೆ ಮಾಡಿಸಿದ. 26  ಯೋಸೇಫ 110ನೇ ವರ್ಷದಲ್ಲಿ ತೀರಿಹೋದ. ಅವನ ದೇಹಕ್ಕೆ ಸುಗಂಧದ್ರವ್ಯ ಹಾಕಿ+ ಅದನ್ನ ಈಜಿಪ್ಟಲ್ಲೇ ಪೆಟ್ಟಿಗೆಯಲ್ಲಿ ಇಟ್ರು.

ಪಾದಟಿಪ್ಪಣಿ

ಇದು, ಸುಗಂಧತೈಲದಂಥ ವಸ್ತುಗಳನ್ನ ಬಳಸಿ ಶವ ಕೊಳೆಯದೆ ಇರೋ ಹಾಗೆ ನೋಡ್ಕೊಳ್ಳೋ ವಿಧಾನ.
ಅಥವಾ “ಮನೆಯವರಿಗೆ.”
ಅಥವಾ “ಆಸ್ಥಾನದ ಹಿರಿಯರು.”
ಅರ್ಥ “ಈಜಿಪ್ಟಿನವರ ಶೋಕ.”
ಅಕ್ಷ. “ಗಮನ ಕೊಡ್ತಾನೆ.”
ಅಕ್ಷ. “ಗಮನ ಕೊಡ್ತಾನೆ.”