ಆದಿಕಾಂಡ 40:1-23

  • ಯೋಸೇಫ ಕೈದಿಗಳ ಕನಸುಗಳ ಅರ್ಥ ತಿಳಿಸಿದ (1-19)

    • “ಕನಸುಗಳ ಅರ್ಥ ಹೇಳೋಕೆ ದೇವರಿಗೆ ಆಗುತ್ತೆ” (8)

  • ಫರೋಹನ ಹುಟ್ಟುಹಬ್ಬದ ಔತಣ (20-23)

40  ಸ್ವಲ್ಪ ಸಮಯ ಆದ್ಮೇಲೆ ಈಜಿಪ್ಟಿನ ರಾಜನ ಮುಖ್ಯ ಪಾನದಾಯಕ+ ಮತ್ತು ಮುಖ್ಯ ಅಡುಗೆಗಾರ* ತಮ್ಮ ಒಡೆಯನಾದ ರಾಜನ ವಿರುದ್ಧ ಅಪರಾಧ ಮಾಡಿದ್ರು.  ಅದಕ್ಕೆ ಫರೋಹ ತನ್ನ ಕೈಕೆಳಗಿದ್ದ ಆ ಇಬ್ರು ಅಧಿಕಾರಿಗಳ+ ಮೇಲೆ ತುಂಬ ಸಿಟ್ಟು ಬಂದು  ಅವರನ್ನ ಜೈಲಿಗೆ ಹಾಕಿಸಿದ. ಕಾವಲುಗಾರರ ಮುಖ್ಯಸ್ಥನ+ ಉಸ್ತುವಾರಿಯಲ್ಲಿ ಆ ಜೈಲು ಇತ್ತು. ಅಲ್ಲೇ ಯೋಸೇಫ ಕೂಡ ಕೈದಿಯಾಗಿದ್ದ.+  ಆ ಮುಖ್ಯ ಪಾನದಾಯಕನ ಮತ್ತು ಮುಖ್ಯ ಅಡುಗೆಗಾರನ ಜೊತೆಯಲ್ಲಿದ್ದು ಸೇವೆಮಾಡೋಕೆ ಕಾವಲುಗಾರರ ಮುಖ್ಯಸ್ಥ ಯೋಸೇಫನನ್ನ ನೇಮಿಸಿದ.+ ಆ ಅಧಿಕಾರಿಗಳು ತುಂಬ ದಿನ ಜೈಲಲ್ಲೇ ಇದ್ರು.  ಈಜಿಪ್ಟಿನ ರಾಜ ಜೈಲಿಗೆ ಹಾಕಿಸಿದ್ದ ಆ ಇಬ್ರು ಅಧಿಕಾರಿಗಳಿಗೆ ಒಂದೇ ರಾತ್ರಿ ಕನಸು ಬಿತ್ತು. ಅವರಿಬ್ಬರ ಕನಸುಗಳಿಗೆ ಬೇರೆಬೇರೆ ಅರ್ಥ ಇತ್ತು.  ಬೆಳಿಗ್ಗೆ ಯೋಸೇಫ ಅವರ ಹತ್ರ ಬಂದಾಗ ಅವರು ತುಂಬ ಚಿಂತೆಯಲ್ಲಿ ಇರೋದನ್ನ ನೋಡಿ  “ಇವತ್ತು ನಿಮ್ಮ ಮುಖ ಬಾಡಿದೆ ಯಾಕೆ?” ಅಂತ ಕೇಳಿದ.  ಅದಕ್ಕೆ ಅವರು “ನಮ್ಮಿಬ್ಬರಿಗೂ ಒಂದೊಂದು ಕನಸು ಬಿತ್ತು. ಆದ್ರೆ ಅದ್ರ ಅರ್ಥ ಹೇಳೋರು ಇಲ್ಲಿ ಯಾರೂ ಇಲ್ಲ” ಅಂದ್ರು. ಆಗ ಅವನು “ಕನಸುಗಳ ಅರ್ಥ ಹೇಳೋಕೆ ದೇವರಿಗೆ ಆಗುತ್ತೆ ಅಲ್ವಾ?+ ದಯವಿಟ್ಟು ನಿಮ್ಮ ಕನಸನ್ನ ನನಗೆ ಹೇಳಿ” ಅಂದ.  ಆಗ ಮುಖ್ಯ ಪಾನದಾಯಕ ಯೋಸೇಫನಿಗೆ “ಕನಸಲ್ಲಿ ನನ್ನ ಮುಂದೆ ಒಂದು ದ್ರಾಕ್ಷಿ ಬಳ್ಳಿ ಇತ್ತು. 10  ಆ ದ್ರಾಕ್ಷಿ ಬಳ್ಳಿಗೆ ಮೂರು ಕೊಂಬೆಗಳು ಇತ್ತು. ಅವು ಚಿಗುರಿ ಹೂವು ಬಿಡ್ತು. ಆ ಹೂವುಗಳು ದ್ರಾಕ್ಷಿ ಗೊಂಚಲುಗಳಾಗಿ ಹಣ್ಣಾದವು. 11  ನನ್ನ ಕೈಯಲ್ಲಿ ಫರೋಹನ ಲೋಟ ಇತ್ತು. ನಾನು ದ್ರಾಕ್ಷಿಹಣ್ಣುಗಳನ್ನ ಕಿತ್ತು ಫರೋಹನ ಲೋಟದಲ್ಲಿ ಅವುಗಳನ್ನ ಹಿಂಡಿದೆ. ಆಮೇಲೆ ಫರೋಹನ ಕೈಗೆ ಆ ಲೋಟ ಕೊಟ್ಟೆ” ಅಂದ. 12  ಆಗ ಯೋಸೇಫ “ನಿನ್ನ ಕನಸಿನ ಅರ್ಥ ಏನಂದ್ರೆ ಆ ಮೂರು ಕೊಂಬೆ ಅಂದ್ರೆ ಮೂರು ದಿನ. 13  ಇನ್ನು ಮೂರು ದಿನದಲ್ಲಿ ಫರೋಹ ನಿನ್ನನ್ನ ಬಿಡುಗಡೆ ಮಾಡಿ ಮತ್ತೆ ಕೆಲಸಕ್ಕೆ ಸೇರಿಸ್ಕೊಳ್ತಾನೆ.+ ನೀನು ಮುಂಚೆ ಫರೋಹನ ಪಾನದಾಯಕನಾಗಿ ಇದ್ದಾಗ ಅವನ ಕೈಗೆ ಲೋಟ ಕೊಡ್ತಿದ್ದ ಹಾಗೆ ಮುಂದೆನೂ ಕೊಡ್ತೀಯ.+ 14  ನಿನಗೆ ಒಳ್ಳೇದಾಗುವಾಗ ನನ್ನನ್ನ ನೆನಪು ಮಾಡ್ಕೊ. ದಯವಿಟ್ಟು ನನಗೆ ಶಾಶ್ವತ ಪ್ರೀತಿ ತೋರಿಸು. ನನ್ನ ಬಗ್ಗೆ ಫರೋಹನಿಗೆ ತಿಳಿಸಿ ನನ್ನನ್ನ ಈ ಜೈಲಿಂದ ಬಿಡಿಸು. 15  ನನ್ನನ್ನ ಇಬ್ರಿಯರ ದೇಶದಿಂದ ಅಪಹರಿಸಿ ಇಲ್ಲಿಗೆ ತಂದ್ರು.+ ಇಲ್ಲಿ ನಾನೇನೂ ತಪ್ಪು ಮಾಡದಿದ್ರೂ ನನ್ನನ್ನ ಜೈಲಿಗೆ* ಹಾಕಿದ್ರು” ಅಂದ.+ 16  ಯೋಸೇಫ ಹೇಳಿದ ಕನಸಿನ ಅರ್ಥ ಒಳ್ಳೇದಾಗಿರೋದನ್ನ ಮುಖ್ಯ ಅಡುಗೆಗಾರ ನೋಡಿ ಅವನಿಗೆ “ನನಗೂ ಒಂದು ಕನಸು ಬಿತ್ತು. ಆ ಕನಸಲ್ಲಿ ನನ್ನ ತಲೆ ಮೇಲೆ ಮೂರು ಬುಟ್ಟಿ ಇತ್ತು. ಅವುಗಳಲ್ಲಿ ಒಳ್ಳೊಳ್ಳೇ ರೊಟ್ಟಿಗಳು ಇದ್ದವು. 17  ಮೇಲಿನ ಬುಟ್ಟಿಯಲ್ಲಿ ಫರೋಹನಿಗಾಗಿ ವಿಧವಿಧವಾದ ರೊಟ್ಟಿಗಳು ಇದ್ದವು. ಹಕ್ಕಿಗಳು ಬಂದು ನನ್ನ ತಲೆ ಮೇಲಿದ್ದ ಬುಟ್ಟಿಯಿಂದ ರೊಟ್ಟಿ ತಿಂತಾ ಇದ್ದವು” ಅಂದ. 18  ಆಗ ಯೋಸೇಫ “ನಿನ್ನ ಕನಸಿನ ಅರ್ಥ ಏನಂದ್ರೆ ಆ ಮೂರು ಬುಟ್ಟಿ ಅಂದ್ರೆ ಮೂರು ದಿನ. 19  ಇನ್ನು ಮೂರು ದಿನದಲ್ಲಿ ಫರೋಹ ನಿನ್ನ ತಲೆ ಕಡಿದು ನಿನ್ನನ್ನ ಮರದ ಕಂಬಕ್ಕೆ ತೂಗುಹಾಕ್ತಾನೆ. ಹಕ್ಕಿಗಳು ಬಂದು ನಿನ್ನ ಮಾಂಸ ತಿನ್ನುತ್ತೆ” ಅಂದ.+ 20  ಮೂರನೇ ದಿನ ಫರೋಹನ ಹುಟ್ಟಿದ ದಿನವಾಗಿತ್ತು.+ ಹಾಗಾಗಿ ಅವನು ತನ್ನ ಎಲ್ಲ ಸೇವಕರಿಗಾಗಿ ಔತಣ ಮಾಡಿಸಿದ. ಆಗ ಅವನು ತನ್ನ ಸೇವಕರ ಮುಂದೆ ಮುಖ್ಯ ಪಾನದಾಯಕನನ್ನ ಮತ್ತು ಮುಖ್ಯ ಅಡುಗೆಗಾರನನ್ನ ಕರೆಸಿ ನಿಲ್ಲಿಸಿದ. 21  ಮುಖ್ಯ ಪಾನದಾಯಕನನ್ನ ಅವನ ಕೆಲಸಕ್ಕೆ ನೇಮಿಸಿದ. ಅವನು ಮತ್ತೆ ಫರೋಹನಿಗೆ ಪಾನ ಕೊಡೋ ಕೆಲಸ ಶುರುಮಾಡಿದ. 22  ಆದ್ರೆ ಫರೋಹ ಮುಖ್ಯ ಅಡುಗೆಗಾರನನ್ನ ಮರದ ಕಂಬಕ್ಕೆ ತೂಗುಹಾಕಿದ. ಹೀಗೆ ಯೋಸೇಫ ಹೇಳಿದ ತರಾನೇ ಆಯ್ತು.+ 23  ಆದ್ರೂ ಮುಖ್ಯ ಪಾನದಾಯಕನಿಗೆ ಯೋಸೇಫನ ನೆನಪು ಬರಲೇ ಇಲ್ಲ ಅವನನ್ನ ಮರೆತುಬಿಟ್ಟ.+

ಪಾದಟಿಪ್ಪಣಿ

ಈ ಅಡುಗೆಗಾರ ಬ್ರೆಡ್‌, ಕೇಕ್‌ ಮುಂತಾದವುಗಳನ್ನ ಮಾಡೋನು.
ಅಕ್ಷ. “ಗುಂಡಿ.”