ಅಪೊಸ್ತಲರ ಕಾರ್ಯ 12:1-25

  • ಯಾಕೋಬನನ್ನ ಕೊಂದ್ರು; ಪೇತ್ರನನ್ನ ಜೈಲಿಗೆ ಹಾಕಿದ್ರು (1-5)

  • ಪೇತ್ರನ ಅದ್ಭುತ ಬಿಡುಗಡೆ (6-19)

  • ದೇವದೂತನ ಕೈಯಲ್ಲಿ ಸತ್ತ ಹೆರೋದ (20-25)

12  ಅದೇ ಸಮಯದಲ್ಲಿ ರಾಜ ಹೆರೋದ ಕ್ರೈಸ್ತ ಸಭೆಯ ಕೆಲವ್ರಿಗೆ ಹಿಂಸೆ ಕೊಡೋಕೆ ಶುರುಮಾಡಿದ.+ 2  ಯೋಹಾನನ ಅಣ್ಣ ಯಾಕೋಬನ+ ತಲೆ ಕತ್ತರಿಸಿದ.+ 3  ಇದ್ರಿಂದ ಯೆಹೂದ್ಯರಿಗೆ ಸಂತೋಷ ಆಯ್ತು. ಹಾಗಾಗಿ ಹೆರೋದ ಪೇತ್ರನನ್ನ ಸಹ ಬಂಧಿಸೋಕೆ ಪ್ರಯತ್ನ ಮಾಡಿದ. (ಅದು ಹುಳಿಯಿಲ್ಲದ ರೊಟ್ಟಿ ಹಬ್ಬದ ಸಮಯ ಆಗಿತ್ತು.)+ 4  ಅವನು ಪೇತ್ರನನ್ನ ಹಿಡಿದು ಜೈಲಿಗೆ ಹಾಕಿಸಿದ.+ ನಾಲ್ಕು ಸೈನಿಕರಿದ್ದ ನಾಲ್ಕು ಗುಂಪುಗಳು ಒಂದಾದ ಮೇಲೆ ಒಂದರಂತೆ ಅವನನ್ನ ಕಾವಲು ಕಾಯೋಕೆ ನೇಮಿಸಿದ. ಪಸ್ಕಹಬ್ಬ ಮುಗಿದ ಮೇಲೆ ಎಲ್ಲಾ ಜನ್ರ ಮುಂದೆ ಅವನನ್ನ ಕರ್ಕೊಂಡು ಬಂದು ವಿಚಾರಣೆ ಮಾಡಬೇಕಂತ ಅವನು ಯೋಚನೆ ಮಾಡಿದ್ದ. 5  ಹೀಗೆ ಪೇತ್ರ ಜೈಲಲ್ಲಿ ಇರುವಾಗ ಸಭೆಯವರು ಅವನಿಗೋಸ್ಕರ ದೇವ್ರ ಹತ್ರ ತುಂಬ ಪ್ರಾರ್ಥನೆ ಮಾಡ್ತಾ ಇದ್ರು.+ 6  ಹೆರೋದ ಪೇತ್ರನನ್ನ ಜನ್ರ ಮುಂದೆ ತಂದು ವಿಚಾರಣೆ ಮಾಡೋ ದಿನ ಬಂತು. ಅದ್ರ ಹಿಂದಿನ ರಾತ್ರಿ ಎರಡು ಸರಪಳಿಗಳಿಂದ ಅವನನ್ನ ಕಟ್ಟಿಹಾಕಿದ್ರು. ಅವನ ಅಕ್ಕಪಕ್ಕ ಸೈನಿಕರಿದ್ರು. ಪೇತ್ರ ನಿದ್ದೆ ಮಾಡ್ತಿದ್ದ. ಜೈಲಿನ ಬಾಗಿಲ ಮುಂದೆನೂ ಕಾವಲು ಕಾಯ್ತಿದ್ರು. 7  ಆಗ ಯೆಹೋವನ* ದೂತನೊಬ್ಬ ಪೇತ್ರನ ಹತ್ರ ಬಂದು ನಿಂತ್ಕೊಂಡ.+ ಜೈಲಿನ ಆ ಕೋಣೆಯಲ್ಲಿ ತುಂಬ ಬೆಳಕು ಬಂತು. ಆ ದೇವದೂತ ಪೇತ್ರನ ಬೆನ್ನು ತಟ್ಟಿ ಎಬ್ಬಿಸಿ “ಬೇಗ ಎದ್ದೇಳು!” ಅಂದ. ಆಗ ಅವನ ಕೈಗೆ ಹಾಕಿದ್ದ ಸರಪಳಿ ಕೆಳಗೆ ಬಿತ್ತು.+ 8  ಆಮೇಲೆ ದೇವದೂತ ಪೇತ್ರನಿಗೆ “ಬಟ್ಟೆ, ಚಪ್ಪಲಿ ಹಾಕು” ಅಂದ. ಪೇತ್ರ ಹಾಗೇ ಮಾಡಿದ. ಕೊನೆಯಲ್ಲಿ ದೇವದೂತ “ಮೇಲೆ ಹಾಕೋ ಬಟ್ಟೆನೂ ಹಾಕಿ ನನ್ನ ಹಿಂದೆನೇ ಬಾ” ಅಂದ. 9  ಪೇತ್ರ ಆ ಜೈಲಿನ ಕೋಣೆಯಿಂದ ಹೊರಗೆ ಬಂದ. ದೇವದೂತನ ಹಿಂದೆನೇ ಹೋದ. ಆದ್ರೆ ದೇವದೂತ ಮಾಡ್ತಾ ಇರೋದೆಲ್ಲ ನಿಜ ಅಂತ ಪೇತ್ರನಿಗೆ ಗೊತ್ತಾಗಲಿಲ್ಲ. ತಾನು ದರ್ಶನ ನೋಡ್ತಾ ಇದ್ದೀನಿ ಅಂತ ಅವನು ಅಂದ್ಕೊಂಡ. 10  ಅವರು ಕಾವಲುಗಾರರಿದ್ದ ಎರಡು ಜಾಗಗಳನ್ನ ದಾಟಿ ಪಟ್ಟಣಕ್ಕೆ ಹೋಗೋ ಕಬ್ಬಿಣದ ಬಾಗಿಲ ಹತ್ರ ಬಂದ್ರು. ಆ ಬಾಗಿಲು ತಾನಾಗಿಯೇ ತೆರಿತು. ಅವರು ಹೊರಗೆ ಹೋದ್ರು. ಇಬ್ರೂ ಕೆಳಗಿಳಿದು ಒಂದು ರಸ್ತೆಗೆ ಹೋದ ತಕ್ಷಣ ದೇವದೂತ ಪೇತ್ರನನ್ನ ಬಿಟ್ಟುಹೋದ. 11  ಆಗ ಪೇತ್ರನಿಗೆ ಇದು ದರ್ಶನ ಅಲ್ಲ ನಿಜ ಅಂತ ಅರ್ಥ ಆಯ್ತು. ಆಗ ಅವನು “ಯೆಹೋವ* ತನ್ನ ದೂತನನ್ನ ಕಳಿಸಿ ಹೆರೋದನ ಕೈಯಿಂದ ನನ್ನನ್ನ ಕಾಪಾಡಿದ್ದಾನೆ. ನನಗೆ ಏನಾದ್ರೂ ಕೆಟ್ಟದಾಗುತ್ತೆ ಅಂತ ಯೆಹೂದ್ಯರು ಕಾಯ್ತಾ ಇದ್ರು. ಆದ್ರೆ ಹಾಗೆ ಆಗೋ ತರ ದೇವರು ಬಿಡಲಿಲ್ಲ”+ ಅಂತ ಅಂದ್ಕೊಂಡ. 12  ಪೇತ್ರ ಹೀಗೆ ಯೋಚಿಸಿದ ಮೇಲೆ ಯೋಹಾನನ ಅಮ್ಮ ಮರಿಯಳ ಮನೆಗೆ ಹೋದ. ಯೋಹಾನನನ್ನ ಮಾರ್ಕ ಅಂತಾನೂ ಕರಿತಿದ್ರು.+ ಮರಿಯಳ ಮನೆಯಲ್ಲಿ ತುಂಬ ಜನ ಸೇರಿ ಪ್ರಾರ್ಥನೆ ಮಾಡ್ತಾ ಇದ್ರು. 13  ಪೇತ್ರ ಬಾಗಿಲು ತಟ್ಟಿದಾಗ ರೋದೆ ಅನ್ನೋ ಹೆಸ್ರಿನ ಸೇವಕಿ ಯಾರು ಬಂದಿದ್ದಾರೆ ಅಂತ ನೋಡೋಕೆ ಬಂದಳು. 14  ಅದು ಪೇತ್ರನೇ ಅಂತ ಸ್ವರದಿಂದ ಕಂಡುಹಿಡಿದಳು. ಆಮೇಲೆ ಖುಷಿಯಿಂದ ಬಾಗಿಲು ತೆರೆಯದೆ ವಾಪಸ್‌ ಓಡಿಹೋಗಿ ಪೇತ್ರ ಹೊರಗೆ ನಿಂತಿದ್ದಾನೆ ಅಂತ ಮನೆಯಲ್ಲಿದ್ದವ್ರಿಗೆ ಹೇಳಿದಳು. 15  ಅವರು ಅವಳಿಗೆ “ನಿನಗೆ ಹುಚ್ಚುಹಿಡಿದಿದೆ” ಅಂದ್ರು. ಆದ್ರೆ ತಾನು ನಿಜ ಹೇಳ್ತಾ ಇದ್ದೀನಿ ಅಂತ ಅವಳು ಹೇಳ್ತಾ ಇದ್ದಳು. ಅದಕ್ಕೆ ಅವರು “ಅವನು ದೇವದೂತ”* ಅಂದ್ರು. 16  ಆದ್ರೆ ಪೇತ್ರ ಬಾಗಿಲು ತಟ್ತಾನೇ ಇದ್ದ. ಬಾಗಿಲು ತೆರೆದಾಗ ಅವನನ್ನ ನೋಡಿ ಅವರು ಬೆಚ್ಚಿಬಿದ್ರು. 17  ಆಗ ಪೇತ್ರ ಅವ್ರಿಗೆ ಸುಮ್ಮನಿರಿ ಅಂತ ಕೈ ಸನ್ನೆ ಮಾಡಿದ. ಆಮೇಲೆ ತನ್ನನ್ನ ಜೈಲಿಂದ ಯೆಹೋವ* ಹೇಗೆ ಹೊರಗೆ ಕರ್ಕೊಂಡು ಬಂದನು ಅಂತ ವಿವರಿಸಿದ. “ಈ ವಿಷ್ಯಗಳನ್ನ ಯಾಕೋಬನಿಗೆ+ ಮತ್ತು ಬೇರೆ ಸಹೋದರರಿಗೆ ಹೇಳಿ” ಅಂತನೂ ಹೇಳಿದ. ಆಮೇಲೆ ಪೇತ್ರ ಅಲ್ಲಿಂದ ಹೊರಗೆ ಬಂದು ಬೇರೊಂದು ಜಾಗಕ್ಕೆ ಹೋದ. 18  ಬೆಳಗಾದಾಗ, ಪೇತ್ರ ಎಲ್ಲಿ ಹೋದ ಅಂತ ಸೈನಿಕರ ಮಧ್ಯ ಕಿತ್ತಾಟ ಶುರುವಾಯ್ತು. 19  ಹೆರೋದ ಪೇತ್ರನನ್ನ ತುಂಬ ಹುಡುಕಿಸಿದ. ಅವನು ಸಿಗದೇ ಹೋದಾಗ ಕಾವಲುಗಾರರನ್ನ ವಿಚಾರಿಸಿ ಅವ್ರಿಗೆ ಶಿಕ್ಷೆ ಕೊಡೋಕೆ ಕರ್ಕೊಂಡು ಹೋಗೋಕೆ ಹೇಳಿದ.+ ಆಮೇಲೆ ಹೆರೋದ ಯೂದಾಯದಿಂದ ಕೈಸರೈಯಕ್ಕೆ ಹೋಗಿ ಅಲ್ಲಿ ಸ್ವಲ್ಪಕಾಲ ಇದ್ದ. 20  ಹೆರೋದ ರಾಜನಿಗೆ ತೂರ್‌ ಮತ್ತು ಸೀದೋನ್‌ ಪಟ್ಟಣಗಳ ಜನ್ರ ಮೇಲೆ ತುಂಬ ಕೋಪ ಇತ್ತು. ಇದ್ರಿಂದಾಗಿ ಆ ಜನ್ರಿಗೆ ತುಂಬ ಕಷ್ಟ ಆಯ್ತು. ಯಾಕಂದ್ರೆ ರಾಜನಿಂದಾನೇ ಅವ್ರಿಗೆ ಆಹಾರ ಸಿಕ್ತಾ ಇತ್ತು. ಹಾಗಾಗಿ ಆ ಜನ್ರೆಲ್ಲ ಒಟ್ಟಾಗಿ ರಾಜನ ಜೊತೆ ಸಮಾಧಾನ ಮಾಡ್ಕೊಳ್ಳೋಕೆ ಬ್ಲಾಸ್ತನ ಹತ್ರ ಬಂದ್ರು. ಅವನು ಹೆರೋದನ ಮನೆಯ ಮೇಲ್ವಿಚಾರಕನಾಗಿದ್ದ. ಅವನನ್ನ ಒಪ್ಪಿಸಿ ರಾಜನನ್ನ ಭೇಟಿ ಮಾಡಿ ಮತ್ತೆ ತಮ್ಮ ಜೊತೆ ಚೆನ್ನಾಗಿರೋಕೆ ಕೇಳ್ಕೊಂಡ್ರು. 21  ಆಮೇಲೆ ಒಂದು ವಿಶೇಷ ದಿನ ಬಂತು. ಆಗ ಹೆರೋದ ತನ್ನ ಹಬ್ಬದ ಬಟ್ಟೆ ಹಾಕೊಂಡು ತೀರ್ಪು ಕೊಡುವಾಗ ಕೂತ್ಕೊಳ್ಳೋ ಸಿಂಹಾಸನದಲ್ಲಿ ಕೂತ್ಕೊಂಡ. ಅಲ್ಲಿಂದ ಜನ್ರಿಗೆ ಭಾಷಣ ಕೊಡೋಕೆ ಶುರುಮಾಡಿದ. 22  ಆಗ ಅಲ್ಲಿ ಸೇರಿಬಂದಿದ್ದ ಜನ “ಇದು ಮನುಷ್ಯನ ಧ್ವನಿ ಅಲ್ಲ, ದೇವ್ರ ಧ್ವನಿ!” ಅಂತ ಕೂಗಿದ್ರು. 23  ತಕ್ಷಣ ಯೆಹೋವನ* ದೂತ ಅವನಿಗೆ ಕಾಯಿಲೆ ಬರೋ ತರ ಮಾಡಿದ. ಯಾಕಂದ್ರೆ ದೇವ್ರಿಗೆ ಸಿಗಬೇಕಾದ ಹೊಗಳಿಕೆ ಅವನು ತಗೊಂಡ. ಅವನು ಅಲ್ಲೇ ಹುಳಬಿದ್ದು ಸತ್ತ. 24  ಆದ್ರೆ ಯೆಹೋವನ* ಸಂದೇಶ ಎಲ್ಲ ಕಡೆ ಹಬ್ತಾ ಇತ್ತು. ತುಂಬ ಜನ ಶಿಷ್ಯರಾಗ್ತಾ ಇದ್ರು.+ 25  ಬಾರ್ನಬ+ ಮತ್ತು ಸೌಲ ಯೆರೂಸಲೇಮಲ್ಲಿ ಶಿಷ್ಯರಿಗೆ ಸಹಾಯ ಮಾಡಿದ+ ಮೇಲೆ ಅಂತಿಯೋಕ್ಯಕ್ಕೆ ವಾಪಸ್‌ ಹೋದ್ರು. ಹೋಗುವಾಗ ಯೋಹಾನನನ್ನ ತಮ್ಮ ಜೊತೆ ಕರ್ಕೊಂಡು ಹೋದ್ರು.+ ಅವನಿಗೆ ಮಾರ್ಕ ಅನ್ನೋ ಹೆಸ್ರೂ ಇತ್ತು.

ಪಾದಟಿಪ್ಪಣಿ

ಅಕ್ಷ. “ಅವನ ದೇವದೂತ.”