ಅರಣ್ಯಕಾಂಡ 20:1-29

  • ಕಾದೇಶಲ್ಲಿ ಮಿರ್ಯಾಮಳ ಮರಣ (1)

  • ಮೋಶೆ ಬಂಡೆಗೆ ಹೊಡೆದು ಮಾಡಿದ ಪಾಪ (2-13)

  • ಎದೋಮ್ಯರು ಇಸ್ರಾಯೇಲ್ಯರಿಗೆ ದಾಟೋಕೆ ಬಿಡಲಿಲ್ಲ (14-21)

  • ಆರೋನನ ಮರಣ (22-29)

20  ಮೊದಲನೇ ತಿಂಗಳಲ್ಲಿ ಎಲ್ಲ ಇಸ್ರಾಯೇಲ್ಯರು ಚಿನ್‌ ಕಾಡಿಗೆ ಬಂದು ಕಾದೇಶಲ್ಲಿ ಇದ್ರು.+ ಅಲ್ಲಿ ಮಿರ್ಯಾಮ+ ತೀರಿಹೋದಳು. ಅವಳನ್ನ ಸಮಾಧಿ ಮಾಡಿದ್ರು.  ಅಲ್ಲಿ ಇಸ್ರಾಯೇಲ್ಯರಿಗೆ ಕುಡಿಯೋಕೆ ನೀರು ಇರಲಿಲ್ಲ.+ ಹಾಗಾಗಿ ಅವರೆಲ್ಲ ಮೋಶೆ ಆರೋನನ ವಿರುದ್ಧ ಸೇರಿ ಬಂದ್ರು.  ಅವರು ಮೋಶೆ ಜೊತೆ ಜಗಳ ಮಾಡ್ತಾ+ “ನಾವೂ ನಮ್ಮ ಸಹೋದರರ ಜೊತೆ ಯೆಹೋವನ ಮುಂದೆ ಸತ್ತಿದ್ರೆ ತುಂಬ ಚೆನ್ನಾಗಿ ಇರ್ತಿತ್ತು!  ನೀವು ಯೆಹೋವನ ಜನರಾದ ನಮ್ಮನ್ನ ನಮ್ಮ ಪ್ರಾಣಿಗಳನ್ನ ಈ ಕಾಡಿಗೆ ತಂದು ಯಾಕೆ ಸಾಯಿಸ್ತಾ ಇದ್ದೀರ?+  ನಮ್ಮನ್ನ ಈಜಿಪ್ಟಿಂದ ಈ ಹಾಳಾದ ಜಾಗಕ್ಕೆ ಯಾಕೆ ಕರ್ಕೊಂಡು ಬಂದ್ರಿ?+ ಇಲ್ಲಿ ಬಿತ್ತನೆ ಮಾಡೋಕೆ ಆಗಲ್ಲ. ಅಂಜೂರ, ದ್ರಾಕ್ಷಿ, ದಾಳಿಂಬೆ ಬೆಳೆಸೋಕೆ ಆಗಲ್ಲ. ಹೋಗ್ಲಿ, ಕುಡಿಯೋಕೆ ನೀರಾದ್ರೂ ಇದ್ಯಾ? ಅದೂ ಇಲ್ಲ!”+ ಅಂತ ಹೇಳ್ತಾ ಇದ್ರು.  ಆಗ ಆ ಸಭೆ ಮುಂದೆ ಇದ್ದ ಮೋಶೆ ಆರೋನ ದೇವದರ್ಶನ ಡೇರೆಯ ಬಾಗಿಲ ಹತ್ರ ಬಂದು ಮಂಡಿಯೂರಿ ನೆಲದ ತನಕ ಬಗ್ಗಿದ್ರು. ಆಗ ಯೆಹೋವನ ಮಹಿಮೆ ಅವರಿಗೆ ಕಾಣಿಸ್ತು.+  ಆಗ ಯೆಹೋವ ಮೋಶೆಗೆ  “ನೀನು ಕೋಲನ್ನ ತಗೊಂಡು ಆರೋನನನ್ನ ಕರ್ಕೊಂಡು ಕಡಿದಾದ ಬಂಡೆಯ ಮುಂದೆ ಎಲ್ರನ್ನ ಸೇರಿಸು. ಆಮೇಲೆ ಅವ್ರ ಕಣ್ಮುಂದೆ ಆ ಬಂಡೆಗೆ ನೀರು ಕೊಡೋಕೆ ಹೇಳು. ಆಗ ಬಂಡೆಯಿಂದ ನೀರು ಬರುತ್ತೆ. ಆ ನೀರನ್ನ ಎಲ್ಲ ಜನ್ರಿಗೂ ಪ್ರಾಣಿಗಳಿಗೂ ಕುಡಿಯೋಕೆ ಕೊಡು”+ ಅಂದನು.  ಈ ಆಜ್ಞೆ ತರಾನೇ ಮೋಶೆ ಯೆಹೋವನ ಮುಂದಿದ್ದ ಕೋಲನ್ನ ತಗೊಂಡ.+ 10  ಆಮೇಲೆ ಮೋಶೆ ಮತ್ತು ಆರೋನ ಕಡಿದಾದ ಬಂಡೆ ಮುಂದೆ ಎಲ್ಲ ಇಸ್ರಾಯೇಲ್ಯರನ್ನ ಸೇರಿಸಿದ್ರು. ಮೋಶೆ ಅವರಿಗೆ “ದಂಗೆಕೋರರೇ ಕೇಳಿಸ್ಕೊಳ್ಳಿ, ನಿಮಗೋಸ್ಕರ ನಾವು ಈ ಬಂಡೆಯಿಂದ ನೀರು ಬರೋ ತರ ಮಾಡಬೇಕಾ?”+ ಅಂದ. 11  ಹಾಗೆ ಹೇಳಿ ಮೋಶೆ ಕೈ ಎತ್ತಿ ಕೋಲಿಂದ ಆ ಬಂಡೆಗೆ ಎರಡು ಸಲ ಹೊಡೆದ. ಆಗ ಬಂಡೆಯಿಂದ ನೀರು ರಭಸವಾಗಿ ಹೊರಗೆ ಬಂತು. ಎಲ್ಲ ಜನ ನೀರನ್ನ ಕುಡಿದ್ರು, ಪ್ರಾಣಿಗಳಿಗೂ ಕುಡಿಸಿದ್ರು.+ 12  ಆಮೇಲೆ ಯೆಹೋವ ಮೋಶೆ ಆರೋನಗೆ “ನೀವು ಇಸ್ರಾಯೇಲ್ಯರ ಮುಂದೆ ನನ್ನ ಮೇಲೆ ನಂಬಿಕೆ ಇಡಲಿಲ್ಲ, ನನಗೆ ಗೌರವ ಕೊಡಲಿಲ್ಲ. ಅದಕ್ಕೆ ನಾನು ಈ ಜನ್ರಿಗೆ ಕೊಡೋ ದೇಶಕ್ಕೆ ನೀವು ಅವರನ್ನ ಕರ್ಕೊಂಡು ಹೋಗಲ್ಲ”+ ಅಂದನು. 13  ಆ ನೀರಿಗೆ ಮೆರೀಬಾದ* ನೀರು+ ಅನ್ನೋ ಹೆಸ್ರು ಬಂತು. ಯಾಕಂದ್ರೆ ಇಸ್ರಾಯೇಲ್ಯರು ಅಲ್ಲಿ ಯೆಹೋವನ ಜೊತೆ ಜಗಳ ಮಾಡಿದ್ರು. ಆಗ ಆತನು ಪವಿತ್ರನು ಅಂತ ತೋರಿಸ್ಕೊಟ್ಟನು. 14  ಆಮೇಲೆ ಮೋಶೆ ಕಾದೇಶಿಂದ ಎದೋಮಿನ ರಾಜನಿಗೆ+ ಈ ಸಂದೇಶ ಕಳಿಸಿದ: “ನಿನ್ನ ಸಹೋದರರಾದ ಇಸ್ರಾಯೇಲ್ಯರು+ ಕಳಿಸಿರೋ ಸುದ್ದಿ ಏನಂದ್ರೆ ‘ನಾವು ಏನೆಲ್ಲ ಕಷ್ಟ ಪಟ್ಟಿದ್ದೀವಿ ಅಂತ ನಿನಗೆ ಗೊತ್ತು. 15  ನಮ್ಮ ಪೂರ್ವಜರು ಈಜಿಪ್ಟ್‌ ದೇಶಕ್ಕೆ ಹೋಗಿದ್ರಿಂದ+ ನಾವು ತುಂಬ ವರ್ಷ ಅಲ್ಲೇ ಇದ್ವಿ.+ ಈಜಿಪ್ಟಿನವರು ನಮ್ಮ ಪೂರ್ವಜರಿಗೂ ನಮಗೂ ತುಂಬ ಕಷ್ಟ ಕೊಟ್ರು.+ 16  ನಾವು ಯೆಹೋವನಿಗೆ ಪ್ರಾರ್ಥಿಸಿದಾಗ+ ಆತನು ನಮ್ಮ ಪ್ರಾರ್ಥನೆ ಕೇಳಿ ಒಬ್ಬ ದೇವದೂತನನ್ನ ಕಳಿಸಿ+ ನಮ್ಮನ್ನ ಈಜಿಪ್ಟಿಂದ ಬಿಡಿಸಿ ಕರ್ಕೊಂಡು ಬಂದನು. ನಾವೀಗ ನಿನ್ನ ಪ್ರದೇಶದ ಗಡಿಯಲ್ಲಿರೋ ಕಾದೇಶ್‌ ಪಟ್ಟಣದಲ್ಲಿ ಇದ್ದೀವಿ. 17  ನಮಗೆ ನಿನ್ನ ದೇಶ ದಾಟಿ ಹೋಗೋಕೆ ದಯವಿಟ್ಟು ಅನುಮತಿ ಕೊಡು. ನಾವು ಹೊಲಗದ್ದೆ, ದಾಕ್ಷಿತೋಟದ ಮಧ್ಯ ಹೋಗಲ್ಲ. ಬಾವಿ ನೀರು ಕುಡಿಯಲ್ಲ. ನಾವು ರಾಜಮಾರ್ಗದಲ್ಲಿ ನಡೆದು ನಿನ್ನ ಪ್ರದೇಶ ದಾಟಿ ಹೋಗ್ತೀವಿ, ಬಲಕ್ಕಾಗ್ಲಿ ಎಡಕ್ಕಾಗ್ಲಿ ತಿರುಗಲ್ಲ.’”+ 18  ಆದ್ರೆ ಎದೋಮಿನ ರಾಜ ಮೋಶೆಗೆ “ನೀವು ನಮ್ಮ ಪ್ರದೇಶ ದಾಟಿ ಹೋಗಬಾರದು. ಹೋಗೋಕೆ ಪ್ರಯತ್ನ ಮಾಡಿದ್ರೆ ನಿಮ್ಮ ವಿರುದ್ಧ ಯುದ್ಧಕ್ಕೆ ಬರ್ತಿನಿ” ಅಂದ. 19  ಆಗ ಇಸ್ರಾಯೇಲ್ಯರು ರಾಜನಿಗೆ “ನಮಗೆ ಹೆದ್ದಾರಿಯಲ್ಲಿ ಹೋಗೋಕ್ಕಷ್ಟೇ ಅನುಮತಿ ಕೊಡು. ನಾವಾಗ್ಲಿ ನಮ್ಮ ಪ್ರಾಣಿಗಳಾಗ್ಲಿ ನಿನ್ನ ಪ್ರದೇಶದಲ್ಲಿ ನೀರು ಕುಡಿದ್ರೆ ಅದ್ರ ಬೆಲೆ ಕೊಡ್ತೀವಿ.+ ನಾವು ನಡ್ಕೊಂಡು ನಿನ್ನ ಪ್ರದೇಶ ದಾಟಿ ಹೋಗೋಕೆ ಬಿಟ್ರೆ ಅಷ್ಟೇ ಸಾಕು,+ ನಮಗೆ ಬೇರೆ ಏನೂ ಬೇಡ” ಅಂದ್ರು. 20  ಅವನು ಒಪ್ಪದೆ “ನೀವು ನನ್ನ ಪ್ರದೇಶ ದಾಟಿ ಹೋಗ್ಲೇಬಾರದು”+ ಅಂದ. ಅಷ್ಟೇ ಅಲ್ಲ ಇಸ್ರಾಯೇಲ್ಯರನ್ನ ತಡಿಯೋಕೆ ತುಂಬ ಜನ್ರನ್ನ ಬಲಿಷ್ಠ ಸೈನ್ಯವನ್ನ ಕರ್ಕೊಂಡು ಬಂದ. 21  ಹೀಗೆ ಎದೋಮಿನ ರಾಜ ಇಸ್ರಾಯೇಲ್ಯರಿಗೆ ತನ್ನ ಪ್ರದೇಶ ದಾಟಿ ಹೋಗೋಕೆ ಬಿಡಲಿಲ್ಲ. ಹಾಗಾಗಿ ಅವರು ಬೇರೆ ದಾರಿ ಹಿಡಿದ್ರು.+ 22  ಎಲ್ಲ ಇಸ್ರಾಯೇಲ್ಯರು ಕಾದೇಶಿಂದ ಹೊರಟು ಹೋರ್‌ ಬೆಟ್ಟ ಹತ್ರ ಬಂದ್ರು.+ 23  ಈ ಹೋರ್‌ ಬೆಟ್ಟ ಎದೋಮ್ಯರ ದೇಶದ ಗಡಿ ಹತ್ರ ಇತ್ತು. ಅಲ್ಲಿ ಯೆಹೋವ ಮೋಶೆ ಮತ್ತು ಆರೋನನ ಜೊತೆ ಮಾತಾಡ್ತಾ 24  “ಆರೋನ ಸಾಯ್ತಾನೆ. ಅವನ ಪೂರ್ವಜರ ತರ ಅವನಿಗೂ ಸಮಾಧಿ ಆಗುತ್ತೆ.+ ನಾನು ಇಸ್ರಾಯೇಲ್ಯರಿಗೆ ಕೊಡೋ ದೇಶಕ್ಕೆ ಅವನು ಹೋಗಲ್ಲ. ಯಾಕಂದ್ರೆ ನೀವಿಬ್ರೂ ಮೆರೀಬಾದ ನೀರಿನ ವಿಷ್ಯದಲ್ಲಿ ಕೊಟ್ಟ ಅಪ್ಪಣೆ ಪಾಲಿಸಲಿಲ್ಲ.+ 25  ನೀನು ಆರೋನನನ್ನ ಅವನ ಮಗ ಎಲ್ಲಾಜಾರನನ್ನ ಕರ್ಕೊಂಡು ಹೋರ್‌ ಬೆಟ್ಟದ ಮೇಲೆ ಬಾ. 26  ಆರೋನನ ಪುರೋಹಿತ ಬಟ್ಟೆಗಳನ್ನ+ ತೆಗೆದು ಅವನ ಮಗನಾದ ಎಲ್ಲಾಜಾರನಿಗೆ+ ಹಾಕು. ಆರೋನ ಅಲ್ಲೇ ಸಾಯ್ತಾನೆ” ಅಂದನು. 27  ಯೆಹೋವ ಆಜ್ಞೆ ಕೊಟ್ಟ ಪ್ರಕಾರನೇ ಮೋಶೆ ಮಾಡಿದ. ಎಲ್ಲ ಇಸ್ರಾಯೇಲ್ಯರ ಕಣ್ಮುಂದೆ ಮೂರೂ ಜನ ಬೆಟ್ಟ ಹತ್ತಿದ್ರು. 28  ಆಮೇಲೆ ಮೋಶೆ ಆರೋನನ ಪುರೋಹಿತ ಬಟ್ಟೆಗಳನ್ನ ತೆಗೆದು ಮಗ ಎಲ್ಲಾಜಾರನಿಗೆ ಹಾಕಿದ. ಆಮೇಲೆ ಆ ಬೆಟ್ಟದ ತುದಿಯಲ್ಲಿ ಆರೋನ ಸತ್ತನು.+ ಮೋಶೆ ಮತ್ತೆ ಎಲ್ಲಾಜಾರ ಬೆಟ್ಟದಿಂದ ಇಳಿದು ಬಂದ್ರು. 29  ಆರೋನ ಸತ್ತುಹೋದ ಅಂತ ಎಲ್ಲ ಇಸ್ರಾಯೇಲ್ಯರಿಗೆ ಗೊತ್ತಾದಾಗ ಅವರೆಲ್ಲ ಆರೋನನಿಗಾಗಿ 30 ದಿನ ಅತ್ರು.+

ಪಾದಟಿಪ್ಪಣಿ

ಅರ್ಥ “ಜಗಳ.”