ಅರಣ್ಯಕಾಂಡ 10:1-36
10 ಯೆಹೋವ ಮೋಶೆಗೆ ಹೀಗಂದನು:
2 “ನೀನು ಬೆಳ್ಳಿಯನ್ನ ಸುತ್ತಿಗೆಯಿಂದ ಬಡಿದು ಎರಡು ತುತ್ತೂರಿಗಳನ್ನ ಮಾಡು.+ ಇಸ್ರಾಯೇಲ್ಯರೆಲ್ಲ ಒಂದು ಕಡೆ ಸೇರಿ ಬರಬೇಕಂತ ಅಥವಾ ಡೇರೆಯನ್ನ ಕಿತ್ತು ಹೋಗಬೇಕಂತ ಸೂಚನೆ ಕೊಡೋಕೆ ಈ ತುತ್ತೂರಿಗಳನ್ನ ಊದಬೇಕು.
3 ಆ ಎರಡು ತುತ್ತೂರಿ ಊದಿದಾಗ ಇಸ್ರಾಯೇಲ್ಯರೆಲ್ಲ ದೇವದರ್ಶನ ಡೇರೆಯ ಬಾಗಿಲ ಹತ್ರ ನಿನ್ನ ಮುಂದೆ ಸೇರಿ ಬರಬೇಕು.+
4 ಒಂದು ತುತ್ತೂರಿ ಊದಿದಾಗ ಇಸ್ರಾಯೇಲ್ಯರ ಮುಖ್ಯಸ್ಥರು ಅಂದ್ರೆ ಸಾವಿರ ಜನ್ರ ಮೇಲಿರೋ ದಳದ ಪ್ರಧಾನರು ಮಾತ್ರ ನಿನ್ನ ಹತ್ರ ಸೇರಿ ಬರಬೇಕು.+
5 ಒಂದು ತುತ್ತೂರಿಯನ್ನ ಏರಿಳಿತದ ಧ್ವನಿಯಲ್ಲಿ ಊದಿದಾಗ ಪೂರ್ವ ದಿಕ್ಕಲ್ಲಿ ಡೇರೆಗಳನ್ನ ಹಾಕೊಂಡಿರೋ ಕುಲಗಳ ದಳ+ ಹೋಗಬೇಕು.
6 ಎರಡನೇ ಸಲ ತುತ್ತೂರಿಯನ್ನ ಏರಿಳಿತದ ಧ್ವನಿಯಲ್ಲಿ ಊದಿದಾಗ ದಕ್ಷಿಣ ದಿಕ್ಕಲ್ಲಿ ಡೇರೆಗಳನ್ನ ಹಾಕಿರೋ ಕುಲಗಳ ದಳ+ ಹೋಗಬೇಕು. ಪ್ರತಿಯೊಂದು ದಳ ಹೋಗಬೇಕಂತ ಸೂಚಿಸೋಕೆ ಹೀಗೆ ತುತ್ತೂರಿ ಊದಬೇಕು.
7 ಇಸ್ರಾಯೇಲ್ ಸಭೆಯವರೆಲ್ಲ ಒಂದು ಕಡೆ ಬರಬೇಕಂತ ಸೂಚಿಸುವಾಗ ಎರಡೂ ತುತ್ತೂರಿಗಳನ್ನ ಊದಬೇಕು.+ ಆದ್ರೆ ಆಗ ಏರಿಳಿತದ ಧ್ವನಿಯಲ್ಲಿ ಊದಬಾರದು.
8 ಪುರೋಹಿತರಾದ ಆರೋನನ ಮಕ್ಕಳು ತುತ್ತೂರಿಗಳನ್ನ ಊದಬೇಕು.+ ಈ ನಿಯಮವನ್ನ ಎಲ್ಲ ತಲೆಮಾರುಗಳು ಪಾಲಿಸಬೇಕು.
9 ನಿಮ್ಮನ್ನ ಪೀಡಿಸಿ ನಿಮ್ಮ ಮೇಲೆ ದಬ್ಬಾಳಿಕೆ ಮಾಡೋರ ವಿರುದ್ಧ ಯುದ್ಧ ಮಾಡಬೇಕಾಗಿ ಬಂದ್ರೆ ತುತ್ತೂರಿಗಳನ್ನ ಊದಿ ಯುದ್ಧದ ಪ್ರಕಟಣೆ ಮಾಡಬೇಕು.+ ಆಗ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ನೆನಪಿಸ್ಕೊಂಡು ಶತ್ರುಗಳ ಕೈಯಿಂದ ಕಾಪಾಡ್ತಾನೆ.
10 ಸಂತೋಷ ಸಂಭ್ರಮದ ಸಂದರ್ಭಗಳಲ್ಲಿ+ ಅಂದ್ರೆ ಹಬ್ಬಗಳಲ್ಲಿ+ ಮತ್ತು ಪ್ರತಿ ತಿಂಗಳ ಆರಂಭದಲ್ಲಿ ನೀವು ಸರ್ವಾಂಗಹೋಮ ಬಲಿಗಳನ್ನ,+ ಸಮಾಧಾನ ಬಲಿಗಳನ್ನ+ ಅರ್ಪಿಸುವಾಗ ತುತ್ತೂರಿಗಳನ್ನ ಊದಬೇಕು. ಇದ್ರಿಂದ ನಿಮ್ಮ ದೇವರು ನಿಮ್ಮನ್ನ ನೆನಪಿಸ್ಕೊಳ್ತಾನೆ. ನಾನು ನಿಮ್ಮ ದೇವರಾದ ಯೆಹೋವ.”+
11 ಎರಡನೇ ವರ್ಷದ ಎರಡನೇ ತಿಂಗಳ 20ನೇ ದಿನ+ ಸಾಕ್ಷಿ ಮಂಜೂಷ ಇರೋ ಪವಿತ್ರ ಡೇರೆಯನ್ನ ಆವರಿಸಿದ್ದ ಮೋಡ ಮೇಲೆ ಏಳ್ತು.+
12 ಆಗ ಇಸ್ರಾಯೇಲ್ಯರು ಸಿನಾಯಿ ಕಾಡಿಂದ ಡೇರೆಗಳನ್ನ ಕಿತ್ತು ಹೋದ್ರು. ಅವ್ರಿಗೆ ಯಾವ ಕ್ರಮದಲ್ಲಿ ಹೋಗಬೇಕಂತ ಹೇಳಿತ್ತೊ ಅದೇ ಕ್ರಮದಲ್ಲಿ ಹೋದ್ರು.+ ಮೋಡ ಪಾರಾನ್ ಕಾಡಲ್ಲಿ ನಿಲ್ತು.+
13 ಯೆಹೋವ ಮೋಶೆ ಮೂಲಕ ಅಪ್ಪಣೆ ಕೊಟ್ಟ ಹಾಗೆ ಅವರು ಪ್ರಯಾಣ ಮಾಡಿದ್ದು ಇದೇ ಮೊದ್ಲ ಸಲ.+
14 ಯೆಹೂದ ಕುಲ ತನ್ನ ಮೂರು ಕುಲಗಳ ದಳದ* ಜೊತೆ ಮೊದ್ಲು ಹೋಯ್ತು. ಈ ದಳದ ಮೇಲ್ವಿಚಾರಣೆಯನ್ನ ಅಮ್ಮೀನಾದಾಬನ ಮಗ ನಹಶೋನ+ ಮಾಡ್ತಿದ್ದ.
15 ಇಸ್ಸಾಕಾರ್ ಕುಲದ ಮೇಲ್ವಿಚಾರಣೆಯನ್ನ ಚೂವಾರನ ಮಗ ನೆತನೇಲ+ ಮಾಡ್ತಿದ್ದ.
16 ಜೆಬುಲೂನ್ ಕುಲದ ಮೇಲ್ವಿಚಾರಣೆಯನ್ನ ಹೇಲೋನನ ಮಗ ಎಲೀಯಾಬ+ ಮಾಡ್ತಿದ್ದ.
17 ಪವಿತ್ರ ಡೇರೆಯ ಭಾಗಗಳನ್ನ ಬಿಡಿಸಿದ ಮೇಲೆ+ ಗೇರ್ಷೋನ್ಯರು+ ಮತ್ತು ಮೆರಾರೀಯರು+ ಅವುಗಳನ್ನ ತಗೊಂಡು ಹೋದ್ರು.
18 ಆಮೇಲೆ ರೂಬೇನ್ ಕುಲ ತನ್ನ ಮೂರು ಕುಲಗಳ ದಳದ* ಜೊತೆ ಹೋಯ್ತು. ಈ ದಳದ ಮೇಲ್ವಿಚಾರಣೆಯನ್ನ ಶೆದೇಯೂರನ ಮಗ ಎಲೀಚೂರ+ ಮಾಡ್ತಿದ್ದ.
19 ಸಿಮೆಯೋನ್ ಕುಲದ ಮೇಲ್ವಿಚಾರಣೆಯನ್ನ ಚೂರೀಷದೈಯ ಮಗ ಶೆಲುಮೀಯೇಲ+ ಮಾಡ್ತಿದ್ದ.
20 ಗಾದ್ ಕುಲದ ಮೇಲ್ವಿಚಾರಣೆಯನ್ನ ದೆಗೂವೇಲನ ಮಗ ಎಲ್ಯಾಸಾಫ+ ಮಾಡ್ತಿದ್ದ.
21 ಆಮೇಲೆ ಕೆಹಾತ್ಯರು ಆರಾಧನಾ ಸ್ಥಳದ ಸಾಮಾಗ್ರಿಗಳನ್ನ ಹೊತ್ಕೊಂಡು ಹೋದ್ರು.+ ಅವರು ತಲುಪುವಷ್ಟರಲ್ಲಿ ಅವರಿಗಿಂತ ಮುಂಚೆ ಹೋಗಿದ್ದ ಗೇರ್ಷೋನ್ಯರು ಮತ್ತೆ ಮೆರಾರೀಯರು ಪವಿತ್ರ ಡೇರೆಯನ್ನ ಜೋಡಿಸಬೇಕಿತ್ತು.
22 ಎಫ್ರಾಯೀಮ್ ಕುಲ ತನ್ನ ಮೂರು ಕುಲಗಳ ದಳದ* ಜೊತೆ ಹೋಯ್ತು. ಈ ದಳದ ಮೇಲ್ವಿಚಾರಣೆಯನ್ನ ಅಮ್ಮೀಹೂದನ ಮಗ ಎಲೀಷಾಮ+ ಮಾಡ್ತಿದ್ದ.
23 ಮನಸ್ಸೆ ಕುಲದ ಮೇಲ್ವಿಚಾರಣೆಯನ್ನ ಪೆದಾಚೂರನ ಮಗ ಗಮ್ಲೀಯೇಲ+ ಮಾಡ್ತಿದ್ದ.
24 ಬೆನ್ಯಾಮೀನ್ ಕುಲದ ಮೇಲ್ವಿಚಾರಣೆಯನ್ನ ಗಿದ್ಯೋನಿಯ ಮಗ ಅಬೀದಾನ+ ಮಾಡ್ತಿದ್ದ.
25 ಆಮೇಲೆ ದಾನ್ ಕುಲ ತನ್ನ ಮೂರು ಕುಲಗಳ ದಳದ* ಜೊತೆ ಹೋಯ್ತು. ಈ ದಳ ಎಲ್ಲ ದಳಗಳಿಗೆ ಸಂರಕ್ಷಣೆ ಕೊಡೋಕೆ ಎಲ್ರಿಗಿಂತ ಹಿಂದೆ ಹೋಗ್ತಿತ್ತು. ಈ ದಳದ ಮೇಲ್ವಿಚಾರಣೆಯನ್ನ ಅಮ್ಮೀಷದೈಯ ಮಗ ಅಹೀಗೆಜೆರ+ ಮಾಡ್ತಿದ್ದ.
26 ಅಶೇರ್ ಕುಲದ ಮೇಲ್ವಿಚಾರಣೆಯನ್ನ ಓಕ್ರಾನನ ಮಗ ಪಗೀಯೇಲ+ ಮಾಡ್ತಿದ್ದ.
27 ನಫ್ತಾಲಿ ಕುಲದ ಮೇಲ್ವಿಚಾರಣೆಯನ್ನ ಏನಾನನ ಮಗ ಅಹೀರ+ ಮಾಡ್ತಿದ್ದ.
28 ಇಸ್ರಾಯೇಲ್ಯರು ಮತ್ತು ಅವರ ದಳಗಳು* ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವಾಗ ಇದೇ ಕ್ರಮದಲ್ಲಿ ಹೋಗ್ತಿದ್ವು.+
29 ಆಮೇಲೆ ಮೋಶೆ ತನ್ನ ಮಾವನ ಮಗನಿಗೆ ಅಂದ್ರೆ ಮಿದ್ಯಾನಿನ ರೆಗೂವೇಲನ*+ ಮಗ ಹೋಬಾಬನಿಗೆ “ಯೆಹೋವ ನಮಗೆ ಕೊಡ್ತೀನಂತ ಹೇಳಿದ ದೇಶಕ್ಕೆ+ ಹೋಗ್ತಾ ಇದ್ದೀವಿ. ಯೆಹೋವ ಇಸ್ರಾಯೇಲ್ಯರಿಗೆ ತುಂಬ ಆಶೀರ್ವಾದಗಳನ್ನ ಕೊಡ್ತೀನಂತ ಮಾತು ಕೊಟ್ಟಿದ್ದಾನೆ.+ ನೀನೂ ನಮ್ಮ ಜೊತೆ ಬಾ.+ ನಿನ್ನನ್ನ ಚೆನ್ನಾಗಿ ನೋಡ್ಕೊಳ್ತೀವಿ” ಅಂದ.
30 ಅವನು “ನಾನು ಬರಲ್ಲ. ನನ್ನ ಸಂಬಂಧಿಕರು ಇರೋ ನನ್ನ ದೇಶಕ್ಕೆ ಹೋಗ್ತೀನಿ” ಅಂದ.
31 ಆಗ ಮೋಶೆ “ದಯವಿಟ್ಟು ನಮ್ಮನ್ನ ಬಿಟ್ಟು ಹೋಗಬೇಡ. ಕಾಡಲ್ಲಿ ಎಲ್ಲೆಲ್ಲಿ ಡೇರೆಗಳನ್ನ ಹಾಕಬೇಕಂತ ನಿನಗೆ ಚೆನ್ನಾಗಿ ಗೊತ್ತು. ಹಾಗಾಗಿ ನೀನು ಮುಂದೆ ಮುಂದೆ ಹೋಗಿ ನಮಗೆ ದಾರಿ ತೋರಿಸು.
32 ನೀನು ನಮ್ಮ ಜೊತೆ ಬಂದ್ರೆ+ ಯೆಹೋವ ನಮಗೆ ಒಳ್ಳೇದು ಮಾಡುವಾಗ ನಾವು ನಿನಗೂ ಒಳ್ಳೇದು ಮಾಡ್ತೀವಿ” ಅಂದ.
33 ಇಸ್ರಾಯೇಲ್ಯರು ಯೆಹೋವನ ಬೆಟ್ಟದಿಂದ+ ಹೋಗಿ ಮೂರು ದಿನ ಪ್ರಯಾಣ ಮಾಡಿದ್ರು. ಪ್ರಯಾಣ ಮಾಡುವಾಗ ಯೆಹೋವನ ಒಪ್ಪಂದದ* ಮಂಜೂಷ+ ಇಸ್ರಾಯೇಲ್ಯರ ಮುಂದೆನೇ ಇತ್ತು. ಈ ಮೂರು ದಿನಗಳ ಪ್ರಯಾಣದ ಸಮಯದಲ್ಲಿ ಇಸ್ರಾಯೇಲ್ಯರಿಗೆ ವಿಶ್ರಮಿಸೋಕೆ ಸ್ಥಳ ಹುಡುಕಿದ್ರು.+
34 ಇಸ್ರಾಯೇಲ್ಯರು ಡೇರೆ ಕಿತ್ತು ಹೋದಾಗಿಂದ ಹಗಲಲ್ಲಿ ಯೆಹೋವನ ಮೋಡ+ ಅವರಿಗೆ ದಾರಿ ತೋರಿಸ್ತಾ ಇತ್ತು.
35 ಮಂಜೂಷ ಎತ್ಕೊಂಡು ಹೋದಾಗೆಲ್ಲ ಮೋಶೆ “ಯೆಹೋವನೇ, ಎದ್ದು+ ನಿನ್ನ ಶತ್ರುಗಳನ್ನ ಚೆದರಿಸಿಬಿಡು. ನಿನ್ನನ್ನ ದ್ವೇಷಿಸೋ ಜನ್ರನ್ನ ನಿನ್ನ ಮುಂದಿಂದ ಓಡಿಸಿಬಿಡು” ಅಂತಿದ್ದ.
36 ಮಂಜೂಷ ಕೆಳಗಿಟ್ಟಾಗೆಲ್ಲ “ಯೆಹೋವನೇ, ಲಕ್ಷ ಲಕ್ಷ ಇಸ್ರಾಯೇಲ್ಯರ+ ಹತ್ರ ವಾಪಸ್ ಬಾ” ಅಂತಿದ್ದ.
ಪಾದಟಿಪ್ಪಣಿ
^ ಅಕ್ಷ. “ಸೈನ್ಯಸೈನ್ಯವಾಗಿ.”
^ ಅಕ್ಷ. “ಸೈನ್ಯಸೈನ್ಯವಾಗಿ.”
^ ಅಕ್ಷ. “ಸೈನ್ಯಸೈನ್ಯವಾಗಿ.”
^ ಅಕ್ಷ. “ಸೈನ್ಯಸೈನ್ಯವಾಗಿ.”
^ ಅಕ್ಷ. “ಸೈನ್ಯಸೈನ್ಯವಾಗಿ.”
^ ಇವನು ಇತ್ರೋ.
^ ಅಥವಾ “ಒಡಂಬಡಿಕೆಯ.”