ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 8

ಪುನಸ್ಸ್ಥಾಪಿಸುವ ಶಕ್ತಿ​—ಯೆಹೋವನು ‘ಎಲ್ಲವನ್ನು ಹೊಸದು ಮಾಡುತ್ತಾನೆ’

ಪುನಸ್ಸ್ಥಾಪಿಸುವ ಶಕ್ತಿ​—ಯೆಹೋವನು ‘ಎಲ್ಲವನ್ನು ಹೊಸದು ಮಾಡುತ್ತಾನೆ’

1, 2. ಮಾನವ ಕುಟುಂಬವನ್ನು ಇಂದು ಯಾವ ನಷ್ಟಗಳು ಬಾಧಿಸುತ್ತಿವೆ, ಮತ್ತು ಇವು ನಮ್ಮನ್ನು ಹೇಗೆ ಪ್ರಭಾವಿಸುತ್ತವೆ?

 ಒಂದು ಮಗು ತನ್ನ ಅಚ್ಚುಮೆಚ್ಚಿನ ಆಟಿಕೆಯನ್ನು ಕಳೆದುಕೊಳ್ಳುತ್ತದೆ ಅಥವಾ ಮುರಿಯುತ್ತದೆ ಮತ್ತು ಜೋರಾಗಿ ಅಳಲು ಶುರುಮಾಡುತ್ತದೆ. ಆ ಗೋಳುಕರೆಯು ಹೃದಯಹಿಂಡುವಂಥದ್ದು! ಆದರೆ ಕಳೆದುಹೋದ ಆ ಆಟಿಕೆಯನ್ನು ಹೆತ್ತವರು ತಂದುಕೊಡುವಾಗ ಮಗುವಿನ ಮುಖವು ಆನಂದದಿಂದ ಅರಳುವುದನ್ನು ನೀವೆಂದಾದರೂ ನೋಡಿದ್ದೀರೊ? ಆ ಆಟಿಕೆಯನ್ನು ಹುಡುಕಿ ತರುವುದು ಅಥವಾ ಅದನ್ನು ಸರಿಮಾಡುವುದು ಆ ಹೆತ್ತವರಿಗೆ ಅಲ್ಪ ವಿಷಯವಾಗಿರಬಹುದು. ಆದರೆ ಮಗುವಾದರೋ ಸಂತಸದಿಂದ ನಗುತ್ತಾ ಆಶ್ಚರ್ಯವನ್ನು ವ್ಯಕ್ತಪಡಿಸುತ್ತದೆ. ಇನ್ನೆಂದೂ ಸಿಗದೆಂದು ನೆನಸಲಾಗಿದ್ದ ವಸ್ತು ಪುನಃ ಕೈಸೇರಿತು!

2 ಪರಮಪಿತನಾದ ಯೆಹೋವ ದೇವರಿಗೆ, ತನ್ನ ಭೂಮಕ್ಕಳು ಯಾವುದನ್ನು ನಿರಂತರಕ್ಕಾಗಿ ಕಳೆದುಕೊಂಡಿದ್ದಾರೆಂದು ಭಾವಿಸುತ್ತಾರೊ ಅದನ್ನು ಪುನಸ್ಸ್ಥಾಪಿಸಿಕೊಡುವ ಶಕ್ತಿಯಿದೆ. ನಾವು ಆಟಿಕೆಗಳಿಗೆ ಸೂಚಿಸುತ್ತಿಲ್ಲ ನಿಶ್ಚಯ. ಇದಕ್ಕಿಂತಲೂ ಎಷ್ಟೋ ಅಧಿಕ ಗಂಭೀರತರದ ನಷ್ಟಗಳನ್ನು, ವ್ಯವಹರಿಸಲು ಕಷ್ಟಕರವಾದ ಈ ‘ಕಠಿನಕಾಲಗಳಲ್ಲಿ’ ನಾವು ಎದುರಿಸಬೇಕಾಗಿರುತ್ತದೆ. (2 ತಿಮೊಥೆಯ 3:1-5) ಯಾವುದನ್ನು ಜನರು ಬಹುಮೂಲ್ಯವೆಂದೆಣಿಸುತ್ತಾರೊ ಅದರಲ್ಲಿ ಹೆಚ್ಚಿನದ್ದು​—ಮನೆ, ಸೊತ್ತುಗಳು, ಉದ್ಯೋಗ, ಮತ್ತು ಆರೋಗ್ಯವು ಸಹ​—ಸದಾ ಅಪಾಯಕ್ಕೆ ಈಡಾಗಿರುವಂತೆ ತೋರುತ್ತದೆ. ಪರಿಸರ ನಾಶ ಮತ್ತು ಪರಿಣಾಮವಾಗಿ ಅನೇಕ ಜೀವಜಾತಿಗಳ ನಿರ್ಮೂಲನದಿಂದ ಉಂಟಾಗುವ ನಷ್ಟಸಂಭವವೇ ಮುಂತಾದವನ್ನು ನೋಡುವಾಗಲೂ ನಮಗೆ ವ್ಯಥೆಯಾಗುತ್ತದೆ. ಆದರೆ ನಾವು ಪ್ರೀತಿಸುವ ಪ್ರಿಯರೊಬ್ಬರನ್ನು ಮರಣದಲ್ಲಿ ಕಳಕೊಳ್ಳುವಾಗಲಂತೂ, ನಮ್ಮನ್ನು ಬಾಧಿಸುವಷ್ಟು ತೀವ್ರ ಬೇನೆಯು ಬೇರೊಂದಿಲ್ಲ. ಅಗಲಿಕೆ ಮತ್ತು ಸಹಾಯಶೂನ್ಯ ಭಾವನೆಗಳಲ್ಲಿ ನಾವು ಹೂತುಹೋಗುತ್ತೇವೆ.​—2 ಸಮುವೇಲ 18:33.

3. ಆದರಣೆ ನೀಡುವ ಯಾವ ಪ್ರತೀಕ್ಷೆಯು ಅಪೊಸ್ತಲರ ಕೃತ್ಯಗಳು 3:21 ರಲ್ಲಿ ತೋರಿಸಲ್ಪಟ್ಟಿದೆ, ಮತ್ತು ಯಾವುದರ ಮೂಲಕ ಯೆಹೋವನು ಅದನ್ನು ಕೈಗೂಡಿಸುವನು?

3 ಆದುದರಿಂದ ಯೆಹೋವನ ಪುನಸ್ಸ್ಥಾಪನೆಯ ಶಕ್ತಿಯ ಕುರಿತಾಗಿ ತಿಳಿಯುವದು ಅದೆಷ್ಟು ಆದರಣೆಯ ಸಂಗತಿ! ನಾವು ನೋಡಲಿರುವಂತೆ, ತನ್ನ ಭೂಮಕ್ಕಳಿಗೆ ದೇವರು ಪುನಸ್ಸ್ಥಾಪಿಸಿಕೊಡಬಲ್ಲ ಮತ್ತು ಕೊಡಲಿರುವ ಎಷ್ಟೋ ಅಚ್ಚರಿಯ ವಿಷಯಗಳು ಇವೆ. ವಾಸ್ತವದಲ್ಲಿ, “ಎಲ್ಲವನ್ನು ಮತ್ತೆ ಸರಿಪಡಿಸುವ” ಉದ್ದೇಶವು ಯೆಹೋವನಿಗಿದೆಯೆಂದು ಬೈಬಲು ತೋರಿಸುತ್ತದೆ. (ಓರೆ ಅಕ್ಷರಗಳು ನಮ್ಮವು.) (ಅ. ಕೃತ್ಯಗಳು 3:​21, ಪರಿಶುದ್ಧ ಬೈಬಲ್‌) ಇದನ್ನು ಕೈಗೂಡಿಸಲಿಕ್ಕಾಗಿ, ಯೆಹೋವನು ಮೆಸ್ಸೀಯ ರಾಜ್ಯವನ್ನು ಉಪಯೋಗಿಸುವನು; ಅದು ಆತನ ಕುಮಾರನಾದ ಯೇಸು ಕ್ರಿಸ್ತನಿಂದ ಆಳಲ್ಪಡುವ ರಾಜ್ಯವು. ಈ ರಾಜ್ಯವು 1914ರಿಂದ ಸ್ವರ್ಗದಿಂದ ಆಳಲು ತೊಡಗಿತೆಂದು ಬಾಹ್ಯ ಸೂಚನೆಗಳು ತೋರಿಸುತ್ತವೆ. a (ಮತ್ತಾಯ 24:3-14) ಏನೆಲ್ಲಾ ಪುನಸ್ಸ್ಥಾಪಿಸಲ್ಪಡುವುದು? ಯೆಹೋವನ ಪುನಸ್ಸ್ಥಾಪನೆಯ ಕೆಲವು ಮಹಾನ್‌ ಕೃತ್ಯಗಳನ್ನು ನಾವೀಗ ಚರ್ಚಿಸೋಣ. ಅವುಗಳಲ್ಲೊಂದನ್ನು ನಾವು ಈವಾಗಲೇ ನೋಡಬಲ್ಲೆವು ಮತ್ತು ಅನುಭವಿಸಬಲ್ಲೆವು. ಬೇರೆಯವುಗಳು ಭವಿಷ್ಯದಲ್ಲಿ ಒಂದು ವ್ಯಾಪಕವಾದ ಪ್ರಮಾಣದಲ್ಲಿ ಸಂಭವಿಸಲಿರುವವು.

ಶುದ್ಧಾರಾಧನೆಯ ಪುನಸ್ಸ್ಥಾಪನೆ

4, 5. ಸಾ.ಶ.ಪೂ. 607ರಲ್ಲಿ ದೇವಜನರಿಗೆ ಏನು ಸಂಭವಿಸಿತು, ಮತ್ತು ಯೆಹೋವನು ಅವರಿಗೆ ಯಾವ ನಿರೀಕ್ಷೆಯನ್ನು ಕೊಟ್ಟನು?

4 ಯೆಹೋವನು ಈಗಾಗಲೇ ಪುನಸ್ಸ್ಥಾಪಿಸಿರುವ ಒಂದು ವಿಷಯವು ಶುದ್ಧಾರಾಧನೆಯಾಗಿದೆ. ಇದರ ಅರ್ಥವೇನೆಂದು ತಿಳಿದುಕೊಳ್ಳಲಿಕ್ಕಾಗಿ, ಯೆಹೂದ ರಾಜ್ಯದ ಇತಿಹಾಸವನ್ನು ನಾವು ತುಸು ಪರೀಕ್ಷಿಸೋಣ. ಹಾಗೆ ಮಾಡುವುದರಿಂದ ಯೆಹೋವನ ಪುನಸ್ಸ್ಥಾಪಕ ಶಕ್ತಿಯ ರೋಮಾಂಚಕ ಒಳನೋಟವು ನಮಗೆ ದೊರೆಯುವುದು.​—ರೋಮಾಪುರ 15:4.

5 ಯೆರೂಸಲೇಮ್‌ ಪಟ್ಟಣವು ಸಾ.ಶ.ಪೂ. 607ರಲ್ಲಿ ನಾಶವಾದಾಗ ನಂಬಿಗಸ್ತ ಯೆಹೂದ್ಯರಿಗೆ ಹೇಗನಿಸಿದ್ದಿರಬಹುದೆಂದು ತುಸು ಊಹಿಸಿರಿ. ಅವರ ಪ್ರಿಯ ಪಟ್ಟಣವು ಧ್ವಂಸಗೊಂಡಿತ್ತು, ಅದರ ಗೋಡೆಗಳು ಕೆಡವಲ್ಪಟ್ಟಿದ್ದವು. ಇನ್ನೂ ಕೆಟ್ಟ ಸಂಗತಿಯೇನೆಂದರೆ, ಸೊಲೊಮೋನನು ಕಟ್ಟಿದ್ದ ಆ ವೈಭವಯುತ ಆಲಯವು, ಭೂಮಿಯಲ್ಲೆಲ್ಲಾ ಯೆಹೋವನ ಶುದ್ಧಾರಾಧನೆಯ ಒಂದೇ ಒಂದು ಕೇಂದ್ರಸ್ಥಾನವಾಗಿದ್ದ ಆ ಆಲಯವು ಹಾಳುಗೆಡವಲ್ಪಟ್ಟಿತ್ತು. (ಕೀರ್ತನೆ 79:1) ಪಾರಾಗಿ ಉಳಿದವರನ್ನು ಬಾಬೆಲಿಗೆ ಬಂದಿಗಳಾಗಿ ಒಯ್ಯಲಾಯಿತು, ಮತ್ತು ಅವರ ಸ್ವದೇಶವು ಕಾಡುಮೃಗಗಳ ವಾಸಸ್ಥಾನವಾದ ನಿರ್ಜನ ಪ್ರದೇಶವಾಗಿ ಪರಿಣಮಿಸಿತು. (ಯೆರೆಮೀಯ 9:11) ಒಂದು ಮಾನುಷ ದೃಷ್ಟಿಕೋನದಿಂದ ಎಲ್ಲವೂ ನಷ್ಟವಾಗಿ ಹೋದಂತೆ ತೋರುತ್ತಿತ್ತು. (ಕೀರ್ತನೆ 137:1) ಆದರೆ ಈ ನಾಶನವನ್ನು ಬಹಳ ಸಮಯದ ಹಿಂದೆಯೇ ಮುಂತಿಳಿಸಿದ್ದ ಯೆಹೋವನು, ಪುನಸ್ಸ್ಥಾಪನೆಯ ಸಮಯವು ಮುಂದಿದೆಯೆಂಬ ನಿರೀಕ್ಷೆಯನ್ನು ಕೊಟ್ಟನು.

6-8. (ಎ) ಹೀಬ್ರು ಪ್ರವಾದಿಗಳ ಬರಹಗಳಲ್ಲಿ ಪದೇಪದೇ ತಿಳಿಸಲಾದ ಒಂದು ಮುಖ್ಯ ವಿಷಯವು ಯಾವುದು, ಮತ್ತು ಅಂಥ ಪ್ರವಾದನೆಗಳು ಒಂದು ಆರಂಭಿಕ ನೆರವೇರಿಕೆಯನ್ನು ಹೇಗೆ ಪಡೆದವು? (ಬಿ) ಪುನಸ್ಸ್ಥಾಪನಾ ಪ್ರವಾದನೆಗಳ ನೆರವೇರಿಕೆಯನ್ನು ಆಧುನಿಕ ಕಾಲಗಳಲ್ಲಿ ದೇವಜನರು ಹೇಗೆ ಅನುಭವಿಸಿದ್ದಾರೆ?

6 ವಾಸ್ತವದಲ್ಲಿ ಈ ಪುನಸ್ಸ್ಥಾಪನೆಯು, ಹೀಬ್ರು ಪ್ರವಾದಿಗಳ ಬರಹಗಳಲ್ಲಿ ಪದೇಪದೇ ತಿಳಿಸಲಾದ ಒಂದು ಮುಖ್ಯ ವಿಷಯವಾಗಿತ್ತು. b ಅವುಗಳ ಮೂಲಕ ಯೆಹೋವನು, ಒಂದು ಪುನಸ್ಸ್ಥಾಪಿತ ಮತ್ತು ಜನನಿವಾಸಿತ, ಫಲವತ್ತಾದ ಹಾಗೂ ವನ್ಯಮೃಗಗಳು ಮತ್ತು ಶತ್ರುಗಳ ಆಕ್ರಮಣದಿಂದ ಸಂರಕ್ಷಿಸಲ್ಪಟ್ಟಿರುವ ದೇಶವೊಂದನ್ನು ವಾಗ್ದಾನಿಸಿದ್ದನು. ಅವರ ಪುನಸ್ಸ್ಥಾಪಿತ ದೇಶವನ್ನು ಆತನು ಸಾಕ್ಷಾತ್‌ ಪರದೈಸಾಗಿಯೇ ವರ್ಣಿಸಿದ್ದನು! (ಯೆಶಾಯ 65:25; ಯೆಹೆಜ್ಕೇಲ 34:25; 36:35) ಎಲ್ಲದಕ್ಕಿಂತ ಹೆಚ್ಚಾಗಿ, ಶುದ್ಧಾರಾಧನೆಯ ಪುನಸ್ಸ್ಥಾಪನೆ ಮತ್ತು ಆಲಯದ ಪುನರ್‌ನಿರ್ಮಾಣ ಆಗಲಿಕ್ಕಿತ್ತು. (ಮೀಕ 4:1-5) ಈ ಪ್ರವಾದನೆಗಳು ಬಂದಿವಾಸಿಗಳಾಗಿದ್ದ ಯೆಹೂದ್ಯರಿಗೆ ನಿರೀಕ್ಷೆಯನ್ನಿತ್ತು, ಬಾಬೆಲಿನಲ್ಲಿ ಅವರ 70 ವರ್ಷಗಳ ಬಂದಿವಾಸವನ್ನು ತಾಳಿಕೊಳ್ಳುವಂತೆ ಸಹಾಯಮಾಡಿದವು.

7 ಕಟ್ಟಕಡೆಗೆ, ಪುನಸ್ಸ್ಥಾಪನೆಯ ಸಮಯವು ಬಂತು. ಬಾಬೆಲಿನಿಂದ ಮುಕ್ತಗೊಳಿಸಲ್ಪಟ್ಟ ಯೆಹೂದ್ಯರು ಯೆರೂಸಲೇಮಿಗೆ ಹಿಂತಿರುಗಿ ಬಂದು ಅಲ್ಲಿ ಯೆಹೋವನಾಲಯವನ್ನು ಪುನಃ ಕಟ್ಟಿದರು. (ಎಜ್ರ 1:1, 2) ಎಷ್ಟರ ತನಕ ಅವರು ಶುದ್ಧಾರಾಧನೆಯನ್ನು ಅನುಸರಿಸಿದರೋ ಅಷ್ಟರ ತನಕ ಯೆಹೋವನು ಅವರನ್ನು ಆಶೀರ್ವದಿಸುತ್ತಾ ಬಂದನು, ಮತ್ತು ಅವರ ದೇಶವನ್ನು ಫಲವತ್ತಾಗಿಯೂ ಸಮೃದ್ಧವಾಗಿಯೂ ಮಾಡಿದನು. ಆತನು ಅವರ ಶತ್ರುಗಳಿಂದ ಅವರನ್ನು ಕಾಪಾಡಿದನು ಮತ್ತು ಹಲವಾರು ದಶಕಗಳಿಂದ ಅವರ ದೇಶವನ್ನು ವಶಮಾಡಿಕೊಂಡಿದ್ದ ಕಾಡುಮೃಗಗಳಿಂದ ರಕ್ಷಿಸಿದನು. ಯೆಹೋವನ ಈ ಪುನಸ್ಸ್ಥಾಪಕ ಶಕ್ತಿಗಾಗಿ ಅವರೆಷ್ಟು ಹರ್ಷೋಲ್ಲಾಸಪಟ್ಟಿದ್ದಿರಬೇಕು! ಆದರೆ ಆ ಘಟನೆಗಳು, ಪುನಸ್ಸ್ಥಾಪನೆಯ ಪ್ರವಾದನೆಗಳ ಕೇವಲ ಒಂದು ಆರಂಭಿಕ, ಸೀಮಿತ ನೆರವೇರಿಕೆಯನ್ನು ಪ್ರತಿನಿಧಿಸಿದ್ದವು. ಒಂದು ಮಹಾ ನೆರವೇರಿಕೆಯು, “ಅಂತ್ಯಕಾಲದಲ್ಲಿ,” ನಮ್ಮ ಸ್ವಂತ ಸಮಯದಲ್ಲಿ ರಾಜ ದಾವೀದನ ದೀರ್ಘವಾಗ್ದತ್ತ ಉತ್ತರಾಧಿಕಾರಿಯು ಸಿಂಹಾಸನಾರೂಢನಾಗುವಾಗ ಸಂಭವಿಸಲಿಕ್ಕಿತ್ತು.​—ಯೆಶಾಯ 2:2-4; 9:6, 7.

8 ಇಸವಿ 1914ರಲ್ಲಿ ಯೇಸು ಸ್ವರ್ಗೀಯ ರಾಜ್ಯದಲ್ಲಿ ಸಿಂಹಾಸನವನ್ನೇರಿದ ತುಸು ಸಮಯದ ಬಳಿಕ, ಭೂಮಿಯಲ್ಲಿನ ನಂಬಿಗಸ್ತ ದೇವಜನರ ಆಧ್ಯಾತ್ಮಿಕ ಅಗತ್ಯಗಳ ಕಡೆಗೆ ಗಮನಕೊಟ್ಟನು. ಪಾರಸೀಯ ರಾಜ ವಿಜೇತ ಕೋರೆಷನು ಹೇಗೆ ಸಾ.ಶ.ಪೂ. 537ರಲ್ಲಿ ಯೆಹೂದಿ ಉಳಿಕೆಯವರನ್ನು ಬಾಬೆಲಿನಿಂದ ಬಿಡುಗಡೆ ಮಾಡಿದ್ದನೊ ಹಾಗೆಯೇ ಯೇಸು, ತನ್ನ ಹೆಜ್ಜೆಜಾಡಿನಲ್ಲಿ ನಡೆಯುವ ಹಿಂಬಾಲಕರನ್ನು ಅಂದರೆ ಆಧ್ಯಾತ್ಮಿಕ ಯೆಹೂದ್ಯರಲ್ಲಿ ಉಳಿಕೆಯವರನ್ನು ಆಧುನಿಕ ದಿನದ ಬಾಬೆಲಿನ ಪ್ರಭಾವದೊಳಗಿಂದ​—ಸುಳ್ಳುಧರ್ಮದ ಲೋಕ ಸಾಮ್ರಾಜ್ಯದೊಳಗಿಂದ​—ಬಿಡಿಸಿ ಹೊರತಂದನು. (ರೋಮಾಪುರ 2:29; ಪ್ರಕಟನೆ 18:1-5) ಹೀಗೆ 1919ರಿಂದ ತೊಡಗಿ, ನಿಜ ಕ್ರೈಸ್ತರ ಜೀವಿತದಲ್ಲಿ ಸತ್ಯಾರಾಧನೆಯು ಅದರ ಯೋಗ್ಯ ಸ್ಥಾನಕ್ಕೆ ಪುನಸ್ಸ್ಥಾಪಿಸಲ್ಪಟ್ಟಿತು. (ಮಲಾಕಿಯ 3:1-5) ಅಂದಿನಿಂದ ಹಿಡಿದು ಯೆಹೋವನ ಜನರು ಆತನ ಆಧ್ಯಾತ್ಮಿಕ ಆಲಯದಲ್ಲಿ, ಅಂದರೆ ಶುದ್ಧಾರಾಧನೆಗಾಗಿರುವ ಯೆಹೋವನ ಏರ್ಪಾಡಿನೊಳಗೆ ಆತನನ್ನು ಆರಾಧಿಸುತ್ತಿದ್ದಾರೆ. ಇದು ನಮಗೆ ಇಂದು ಪ್ರಾಮುಖ್ಯವಾಗಿರುವುದೇಕೆ?

ಆಧ್ಯಾತ್ಮಿಕ ಪುನಸ್ಸ್ಥಾಪನೆ​—ಯಾಕೆ ಪ್ರಾಮುಖ್ಯ?

9. ಅಪೊಸ್ತಲರ ಯುಗದ ಅನಂತರ, ಕ್ರೈಸ್ತಪ್ರಪಂಚದ ಚರ್ಚುಗಳು ದೇವರ ಆರಾಧನೆಗೆ ಏನು ಮಾಡಿದವು, ಆದರೆ ಯೆಹೋವನು ನಮ್ಮ ದಿನದಲ್ಲಿ ಏನು ಮಾಡಿದ್ದಾನೆ?

9 ಐತಿಹಾಸಿಕ ಅಂಶವನ್ನು ಪರಿಗಣಿಸಿರಿ. ಆರಂಭದ ಶತಮಾನದಲ್ಲಿದ್ದ ಕ್ರೈಸ್ತರು ಅನೇಕಾನೇಕ ಆಧ್ಯಾತ್ಮಿಕ ಆಶೀರ್ವಾದಗಳನ್ನು ಆನಂದಿಸಿದ್ದರು. ಆದರೆ ಸತ್ಯಾರಾಧನೆಯು ಭ್ರಷ್ಟಗೊಂಡು ನಷ್ಟವಾಗಿ ಹೋಗುವುದೆಂದು ಯೇಸು ಮತ್ತು ಅವನ ಅಪೊಸ್ತಲರು ಮುಂತಿಳಿಸಿದ್ದರು. (ಮತ್ತಾಯ 13:24-30; ಅ. ಕೃತ್ಯಗಳು 20:29, 30) ಅಪೊಸ್ತಲರ ಯುಗದ ಅನಂತರ, ಕ್ರೈಸ್ತಪ್ರಪಂಚವು ಉದಯಿಸಿತು. ಅದರ ಪಾದ್ರಿವರ್ಗವು ವಿಧರ್ಮಿ ಬೋಧನೆಗಳನ್ನೂ ಆಚಾರಗಳನ್ನೂ ಸ್ವೀಕಾರ ಮಾಡಿತು. ದೇವರ ಬಳಿಸಾರುವುದನ್ನು ಅವರು ಬಹುಮಟ್ಟಿಗೆ ಅಸಾಧ್ಯವಾದುದನ್ನಾಗಿಯೆ ಮಾಡಿದರು. ಹೇಗಂದರೆ ಆತನನ್ನು ಗ್ರಹಿಸಲಸಾಧ್ಯವಾದ ತ್ರಯೈಕ್ಯವನ್ನಾಗಿ ಚಿತ್ರಿಸಿಯೆ. ಹಾಗೆಯೆ ಜನರು ಪಾದ್ರಿಗಳಿಗೆ ತಮ್ಮ ಪಾಪಗಳನ್ನು ಅರಿಕೆಮಾಡಬೇಕು ಮತ್ತು ಯೆಹೋವನ ಬದಲಿಗೆ ಮರಿಯಳಿಗೆ ಮತ್ತು ವಿವಿಧ “ಸಂತರಿಗೆ” ಪ್ರಾರ್ಥನೆ ಮಾಡಬೇಕೆಂದೂ ಅವರು ಕಲಿಸಿದರು. ಈಗ, ಅಂಥ ಭ್ರಷ್ಟತೆಯುಂಟಾಗಿ ಅನೇಕ ಶತಕಗಳು ಕಳೆದಾದ ನಂತರ, ಯೆಹೋವನು ಏನು ಮಾಡಿದ್ದಾನೆ? ಧಾರ್ಮಿಕ ಮಿಥ್ಯೆಯಿಂದ ತುಂಬಿಹೋಗಿರುವ ಹಾಗೂ ಭಕ್ತಿಹೀನ ಪದ್ಧತಿಗಳಿಂದ ಮಲಿನಗೊಂಡಿರುವ ಇಂದಿನ ಲೋಕದ ಮಧ್ಯೆ ಆತನು ಕಾಲಿರಿಸಿ ಸತ್ಯಾರಾಧನೆಯನ್ನು ಪುನಸ್ಸ್ಥಾಪಿಸಿದ್ದಾನೆ! ಈ ಪುನಸ್ಸ್ಥಾಪನೆಯು ಆಧುನಿಕ ಕಾಲಗಳಲ್ಲಿ ಅತ್ಯಂತ ಮಹತ್ವಪೂರ್ಣ ಘಟನೆಗಳಲ್ಲಿ ಒಂದೆಂದು ನಾವು ಹೇಳುವುದು ಅತಿಶಯೋಕ್ತಿಯಲ್ಲ.

10, 11. (ಎ) ಆಧ್ಯಾತ್ಮಿಕ ಪರದೈಸಿನಲ್ಲಿ ಯಾವ ಎರಡು ಘಟಕಾಂಶಗಳು ಒಳಗೂಡಿರುತ್ತವೆ, ಮತ್ತು ಅವು ನಿಮ್ಮನ್ನು ಹೇಗೆ ಪ್ರಭಾವಿಸಿರುತ್ತವೆ? (ಬಿ) ಯಾವ ರೀತಿಯ ಜನರನ್ನು ಯೆಹೋವನು ಆಧ್ಯಾತ್ಮಿಕ ಪರದೈಸಿನೊಳಗೆ ಒಟ್ಟುಗೂಡಿಸಿರುತ್ತಾನೆ, ಮತ್ತು ಏನನ್ನು ಕಣ್ಣಾರೆ ಕಾಣುವ ಸುಸಂದರ್ಭವು ಅವರಿಗಿರುವುದು?

10 ಆದುದರಿಂದ ಇಂದು ಸತ್ಯ ಕ್ರೈಸ್ತರು ಒಂದು ಆಧ್ಯಾತ್ಮಿಕ ಪರದೈಸಿನಲ್ಲಿ ಆನಂದಿಸುತ್ತಿದ್ದಾರೆ. ಈ ಪರದೈಸಿನಲ್ಲಿ ಏನೆಲ್ಲಾ ಒಳಗೂಡಿರುತ್ತದೆ? ಪ್ರಾಮುಖ್ಯವಾಗಿ ಎರಡು ಘಟಕಾಂಶಗಳು. ಒಂದನೆಯದು, ಸತ್ಯ ದೇವರಾದ ಯೆಹೋವನ ಶುದ್ಧಾರಾಧನೆ. ಸುಳ್ಳುಗಳು ಮತ್ತು ವಿಕೃತ ಬೋಧನೆಗಳಿಂದ ಮುಕ್ತವಾಗಿರುವ ಒಂದು ಆರಾಧನಾ ರೀತಿಯನ್ನು ಕೊಟ್ಟು ಆತನು ನಮ್ಮನ್ನು ಆಶೀರ್ವದಿಸಿದ್ದಾನೆ. ಆತನು ನಮಗೆ ಆಧ್ಯಾತ್ಮಿಕ ಆಹಾರವನ್ನು ಒದಗಿಸಿಕೊಟ್ಟಿದ್ದಾನೆ. ಇದು ನಮ್ಮ ಸ್ವರ್ಗೀಯ ತಂದೆಯ ಕುರಿತು ಕಲಿಯುವಂತೆ, ಆತನನ್ನು ಮೆಚ್ಚಿಸುವಂತೆ, ಮತ್ತು ಆತನ ಸಮೀಪಕ್ಕೆ ಬರುವಂತೆ ನಮ್ಮನ್ನು ಶಕ್ತರನ್ನಾಗಿ ಮಾಡಿರುತ್ತದೆ. (ಯೋಹಾನ 4:24) ಆಧ್ಯಾತ್ಮಿಕ ಪರದೈಸಿನ ಎರಡನೆಯ ಘಟಕಾಂಶವು ಜನರನ್ನು ಒಳಗೂಡಿರುತ್ತದೆ. ಯೆಶಾಯನು ಮುಂತಿಳಿಸಿದಂತೆಯೆ, “ಅಂತ್ಯಕಾಲದಲ್ಲಿ” ಯೆಹೋವನು ತನ್ನ ಆರಾಧಕರಿಗೆ ಶಾಂತಿಶೀಲ ಮಾರ್ಗಗಳನ್ನು ಕಲಿಸಿದ್ದಾನೆ. ನಮ್ಮ ನಡುವೆ ಹೋರಾಟವನ್ನು ಆತನು ನಿರ್ಮೂಲಗೊಳಿಸಿರುವನು. ನಮ್ಮ ಅಪರಿಪೂರ್ಣತೆಗಳ ಮಧ್ಯೆಯೂ “ಹೊಸ ವ್ಯಕ್ತಿತ್ವ”ವನ್ನು ಹಾಕಿಕೊಳ್ಳಲು ಆತನು ನಮಗೆ ಸಹಾಯಮಾಡುತ್ತಾನೆ. ತನ್ನ ಪವಿತ್ರಾತ್ಮದ ಮೂಲಕ ಆತನು ನಮ್ಮ ಪ್ರಯತ್ನಗಳನ್ನು ಆಶೀರ್ವದಿಸುತ್ತಾನೆ, ಯಾಕಂದರೆ ಆ ಆತ್ಮವು ನಮ್ಮಲ್ಲಿ ಅತ್ಯುತ್ತಮವಾದ ಗುಣಗಳನ್ನು ಉತ್ಪಾದಿಸುತ್ತದೆ. (ಎಫೆಸ 4:22-24; ಗಲಾತ್ಯ 5:22, 23) ದೇವರ ಆತ್ಮದೊಂದಿಗೆ ಹೊಂದಿಕೆಯಲ್ಲಿ ನೀವು ಕಾರ್ಯನಡಿಸುವಾಗ, ನೀವು ನಿಜವಾಗಿಯೂ ಆ ಆಧ್ಯಾತ್ಮಿಕ ಪರದೈಸಿನ ಭಾಗವಾಗಿರುತ್ತೀರಿ.

11 ಈ ಆಧ್ಯಾತ್ಮಿಕ ಪರದೈಸಿನೊಳಗೆ ತಾನು ಪ್ರೀತಿಸುವಂಥ ಜನರನ್ನು​—ತನ್ನನ್ನು ಪ್ರೀತಿಸುವ, ಶಾಂತಿಯನ್ನು ಪ್ರೀತಿಸುವ, ಮತ್ತು “ತಮ್ಮ ಆಧ್ಯಾತ್ಮಿಕ ಅವಶ್ಯಕತೆಯ ಪ್ರಜ್ಞೆಯುಳ್ಳ” ಜನರನ್ನು ಯೆಹೋವನು ಒಟ್ಟುಗೂಡಿಸಿರುತ್ತಾನೆ. (ಮತ್ತಾಯ 5:​3, NW) ಅಂತಹ ಜನರಿಗೆ ಇನ್ನೂ ಹೆಚ್ಚು ವಿಸ್ಮಯಕರವಾದ ಇನ್ನೊಂದು ಪುನಸ್ಸ್ಥಾಪನೆಯನ್ನು ಕಣ್ಣಾರೆ ಕಾಣುವ ಸುಸಂದರ್ಭವನ್ನು ಆತನು ಕೊಡಲಿರುವನು.

“ಇಗೋ, ಎಲ್ಲವನ್ನು ಹೊಸದುಮಾಡುತ್ತೇನೆ”

12, 13. (ಎ) ಪುನಸ್ಸ್ಥಾಪನೆಯ ಪ್ರವಾದನೆಗಳು ಯಾಕೆ ಇನ್ನೊಂದು ನೆರವೇರಿಕೆಯನ್ನು ಇನ್ನೂ ನೋಡಬೇಕು? (ಬಿ) ಏದೆನಿನಲ್ಲಿ ತಿಳಿಸಲ್ಪಟ್ಟ ಪ್ರಕಾರ, ಭೂಮಿಗಾಗಿ ಯೆಹೋವನಿಗಿರುವ ಉದ್ದೇಶವೇನು, ಮತ್ತು ಇದು ನಮಗೆ ಭವಿಷ್ಯತ್ತಿಗಾಗಿ ನಿರೀಕ್ಷೆಯನ್ನು ಕೊಡುತ್ತದೆ ಏಕೆ?

12 ಅನೇಕ ಪುನಸ್ಸ್ಥಾಪನೆಯ ಪ್ರವಾದನೆಗಳು ಬರಿಯ ಆಧ್ಯಾತ್ಮಿಕ ಪುನಸ್ಸ್ಥಾಪನೆಗಿಂತ ಹೆಚ್ಚಿನದಕ್ಕೆ ನಿರ್ದೇಶಿಸುವಂತೆ ತೋರುತ್ತವೆ. ದೃಷ್ಟಾಂತಕ್ಕಾಗಿ ರೋಗಿಗಳು, ಕುಂಟರು, ಕುರುಡರು, ಹಾಗೂ ಕಿವುಡರು ವಾಸಿಯಾಗುವ ಮತ್ತು ಮರಣವು ಕೂಡ ಶಾಶ್ವತವಾಗಿ ನಿರ್ನಾಮವಾಗುವಂಥ ಒಂದು ಸಮಯದ ಕುರಿತು ಯೆಶಾಯನು ಬರೆದಿದ್ದಾನೆ. (ಯೆಶಾಯ 25:8; 35:1-7) ಅಂಥ ವಾಗ್ದಾನಗಳು ಪುರಾತನ ಇಸ್ರಾಯೇಲಿನಲ್ಲಿ ಅಕ್ಷರಾರ್ಥವಾದ ನೆರವೇರಿಕೆಯನ್ನು ಪಡೆಯಲಿಲ್ಲ. ಮತ್ತು ಈ ವಾಗ್ದಾನಗಳ ಆಧ್ಯಾತ್ಮಿಕ ನೆರವೇರಿಕೆಯನ್ನು ನಮ್ಮ ದಿನಗಳಲ್ಲಿ ನಾವು ಕಂಡಿರುವುದಾದರೂ, ಭವಿಷ್ಯತ್ತಿನಲ್ಲಿ ಒಂದು ಪೂರ್ಣಪ್ರಮಾಣದ ಅಕ್ಷರಾರ್ಥ ನೆರವೇರಿಕೆಯು ಇರುವುದೆಂದು ನಂಬಲು ದೃಢವಾದ ಆಧಾರವಿದೆ. ನಮಗದು ತಿಳಿದಿರುವುದು ಹೇಗೆ?

13 ಹಿಂದೆ ಏದೆನ್‌ ತೋಟದಲ್ಲಿ, ಯೆಹೋವನು ಭೂಮಿಗಾಗಿ ತನ್ನ ಉದ್ದೇಶವನ್ನು ಸ್ಪಷ್ಟವಾಗಿ ತಿಳಿಸಿದ್ದನು: ಸಂತೋಷಕರವಾಗಿಯೂ ಆರೋಗ್ಯಕರವಾಗಿಯೂ ಐಕ್ಯವಾಗಿಯೂ ಇರುವಂಥ ಮಾನವ ಕುಟುಂಬದಿಂದ ಅದು ನಿವಾಸಿಸಲ್ಪಡಬೇಕಿತ್ತು. ಪ್ರಥಮ ಪುರುಷ ಮತ್ತು ಸ್ತ್ರೀಯು ಭೂಮಿ ಹಾಗೂ ಅದರಲ್ಲಿರುವ ಸಕಲ ಜೀವಿಗಳ ಪರಾಮರಿಕೆಯನ್ನು ಮಾಡಿ, ಇಡೀ ಭೂಮಿಯನ್ನು ಪರದೈಸಾಗಿ ಮಾರ್ಪಡಿಸಬೇಕಾಗಿತ್ತು. (ಆದಿಕಾಂಡ 1:28) ಆದರೆ ಸದ್ಯದ ಕಾರ್ಯವಿಧಿಗಳ ಸನ್ನಿವೇಶವು ಅದಕ್ಕಿಂತ ತೀರ ಭಿನ್ನವಾಗಿರುತ್ತದೆ. ಹಾಗಿದ್ದರೂ ಯೆಹೋವನ ಉದ್ದೇಶಗಳು ಎಂದಿಗೂ ಭಂಗಗೊಳ್ಳವು ಎಂಬ ವಿಷಯದಲ್ಲಿ ನಾವು ಭರವಸೆಯಿಂದಿರಬಲ್ಲೆವು. (ಯೆಶಾಯ 55:10, 11) ಯೆಹೋವನಿಂದ ನೇಮಿಸಲ್ಪಟ್ಟ ಮೆಸ್ಸೀಯ ಸಂಬಂಧಿತ ರಾಜನೋಪಾದಿ ಯೇಸು, ಈ ಭೌಗೋಳಿಕ ಪರದೈಸನ್ನು ತರಲಿದ್ದಾನೆ.​—ಲೂಕ 23:43.

14, 15. (ಎ) ಯೆಹೋವನು ಹೇಗೆ “ಎಲ್ಲವನ್ನು ಹೊಸದು” ಮಾಡುವನು? (ಬಿ) ಪರದೈಸಿನಲ್ಲಿ ಜೀವನವು ಹೇಗಿರುವದು, ಮತ್ತು ಅದರ ಯಾವ ಅಂಶವು ನಿಮಗೆ ಅತಿ ಇಷ್ಟಕರ?

14 ಇಡೀ ಭೂಮಿಯು ಪರದೈಸಾಗಿ ಮಾರ್ಪಡುವುದನ್ನು ನೋಡುವುದು ಹೇಗಿರುವುದೆಂದು ಊಹಿಸಿಕೊಳ್ಳಿರಿ! “ಇಗೋ, ಎಲ್ಲವನ್ನು ಹೊಸದುಮಾಡುತ್ತೇನೆ” ಎಂದು ಯೆಹೋವನು ಆ ಸಮಯದ ಕುರಿತು ತಿಳಿಸುತ್ತಾನೆ. (ಪ್ರಕಟನೆ 21:5) ಅದರ ಅರ್ಥವೇನಾಗಿರುವುದೆಂದು ಪರಿಗಣಿಸಿರಿ. ಈ ದುಷ್ಟ ಹಳೇ ವ್ಯವಸ್ಥೆಯ ವಿರುದ್ಧವಾಗಿ ತನ್ನ ನಾಶಕಾರಕ ಶಕ್ತಿಯನ್ನು ಯೆಹೋವನು ಪ್ರಯೋಗಿಸಿಯಾದ ನಂತರ, ‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲವು’ ಉಳಿಯುವುದು. ಇದರ ಅರ್ಥವು, ಯೆಹೋವನನ್ನು ಪ್ರೀತಿಸುವ ಮತ್ತು ಆತನ ಚಿತ್ತವನ್ನು ಮಾಡುವ ಜನರಿಂದ ರಚಿತವಾದ ಒಂದು ಹೊಸ ಮಾನವ ಸಮಾಜದ ಮೇಲೆ ಒಂದು ಹೊಸ ಸರಕಾರವು ಪರಲೋಕದಿಂದ ಆಳುವುದು ಎಂಬದೇ. (2 ಪೇತ್ರ 3:13) ಸೈತಾನನು ತನ್ನ ದೆವ್ವಗಳೊಂದಿಗೆ ಚಟುವಟಿಕೆಹೀನನಾಗಿ ಮಾಡಲ್ಪಟ್ಟು ಅಧೋಲೋಕಕ್ಕೆ ಹಾಕಲ್ಪಡುವನು. (ಪ್ರಕಟನೆ 20:3) ಸಾವಿರಾರು ವರ್ಷಗಳಲ್ಲಿ ಮೊತ್ತಮೊದಲ ಬಾರಿ ಮಾನವರು, ಈ ಭ್ರಷ್ಟ, ದ್ವೇಷಭರಿತ, ಮತ್ತು ಹಾನಿಕರವೂ ಆದ ಪ್ರಭಾವದಿಂದ ಮುಕ್ತರಾಗುವರು. ಆ ಉಪಶಮನದ ಪ್ರಜ್ಞೆಯು ಪರವಶಗೊಳಿಸುವಂಥದ್ದಾಗಿರುವುದು ಎಂಬುದರಲ್ಲಿ ಸಂದೇಹವಿಲ್ಲ.

15 ಕಟ್ಟಕಡೆಗೆ, ನಾವು ಆರಂಭದಲ್ಲಿ ಮಾಡಲಿಕ್ಕಿದ್ದಂತೆಯೇ, ಈ ಸುಂದರವಾದ ಭೂಗ್ರಹದ ಪರಾಮರಿಕೆಯನ್ನು ಮಾಡಶಕ್ತರಾಗುವೆವು. ಭೂಮಿಗೆ ಅದರ ನೈಸರ್ಗಿಕ ಪುನಸ್ಸ್ಥಾಪಕ ಶಕ್ತಿಗಳಿವೆ. ಮಲಿನಗೊಂಡಿರುವ ಸರೋವರಗಳು ಹಾಗೂ ನದಿಗಳ ಮಾಲಿನ್ಯದ ಮೂಲವು ತೆಗೆದುಹಾಕಲ್ಪಡುವಲ್ಲಿ, ಅವು ತಮ್ಮನ್ನೇ ಶುದ್ಧೀಕರಿಸಿಕೊಳ್ಳಬಲ್ಲವು. ಯುದ್ಧಗಳು ನಿಲ್ಲಿಸಲ್ಪಟ್ಟಲ್ಲಿ, ಯುದ್ಧದಿಂದಾಗಿ ಜರ್ಜರಿತವಾದ ಸುಂದರ ಭೂದೃಶ್ಯಗಳು ಚೇತರಿಸಿಕೊಳ್ಳುವವು. ಭೂಮಿಯ ನೈಸರ್ಗಿಕ ನಿಯಮಗಳು ಮತ್ತು ವ್ಯವಸ್ಥೆಗಳಿಗೆ ಹೊಂದಿಕೆಯಲ್ಲಿ ಕೆಲಸಮಾಡುತ್ತಾ, ಅದನ್ನು ಉದ್ಯಾನವನವಾಗಿ, ಎಣೆಯಿಲ್ಲದ ವೈವಿಧ್ಯವುಳ್ಳ ಸಸ್ಯ ಮತ್ತು ಪ್ರಾಣಿ ಜೀವಿಗಳುಳ್ಳ ಭೌಗೋಳಿಕ ಏದೆನ್‌ ತೋಟವಾಗಿ ಮಾರ್ಪಡಿಸುವುದು ಅದೆಷ್ಟು ಹರ್ಷೋಲ್ಲಾಸಕರವಾಗಿರುವುದು! ಪ್ರಾಣಿ ಮತ್ತು ಸಸ್ಯಜೀವಿಗಳನ್ನು ಸಿಕ್ಕಾಬಟ್ಟೆ ನಾಶಗೊಳಿಸುವ ಬದಲಿಗೆ, ಮನುಷ್ಯನು ಭೂಮಿಯ ಮೇಲೆ ಸಕಲ ಸೃಷ್ಟಿಯೊಂದಿಗೆ ಶಾಂತಿಯಿಂದಿರುವನು. ಚಿಕ್ಕಮಕ್ಕಳು ಸಹ ವನ್ಯ ಪ್ರಾಣಿಗಳ ವಿಷಯದಲ್ಲಿ ಭಯಪಡಬೇಕಾಗಿಲ್ಲ.​—ಯೆಶಾಯ 9:6, 7; 11:1-9.

16. ಪರದೈಸಿನಲ್ಲಿ ಯಾವ ಪುನಸ್ಸ್ಥಾಪನೆಯು ಪ್ರತಿಯೊಬ್ಬ ನಂಬಿಗಸ್ತ ವ್ಯಕ್ತಿಯನ್ನು ಪ್ರಭಾವಿಸುವುದು?

16 ವೈಯಕ್ತಿಕ ಮಟ್ಟದಲ್ಲೂ ನಾವು ಪುನಸ್ಸ್ಥಾಪನೆಯನ್ನು ಅನುಭವಿಸಲಿರುವೆವು. ಹರ್ಮಗೆದ್ದೋನಿನ ನಂತರ, ಪಾರಾಗಿ ಉಳಿದವರು ಅದ್ಭುತಕರವಾದ ವಾಸಿಮಾಡುವಿಕೆಗಳನ್ನು ಭೌಗೋಳಿಕ ಪ್ರಮಾಣದಲ್ಲಿ ನೋಡಲಿದ್ದಾರೆ. ಯೇಸು ಭೂಮಿಯಲ್ಲಿದ್ದಾಗ ಮಾಡಿದಂತೆಯೇ ಆಗಲೂ ತನ್ನ ದೇವದತ್ತ ಶಕ್ತಿಯನ್ನುಪಯೋಗಿಸಿ, ಕುರುಡರಿಗೆ ಕಣ್ಣುಗಳನ್ನೂ, ಕಿವುಡರಿಗೆ ಕೇಳುವ ಕಿವಿಗಳನ್ನೂ, ಕುಂಟರೂ ನಿರ್ಬಲರೂ ಆದವರಿಗೆ ಸುದೃಢ ಶರೀರವನ್ನೂ ತಿರುಗಿ ದಯಪಾಲಿಸುವನು. (ಮತ್ತಾಯ 15:30) ವೃದ್ಧರು ಹೊಸದಾಗಿ ಪಡೆಯುವಂಥ ಯೌವನಭರಿತ ಶಕ್ತಿ, ಆರೋಗ್ಯ, ಮತ್ತು ಚೈತನ್ಯದಲ್ಲಿ ಉಲ್ಲಾಸಿಸುವರು. (ಯೋಬ 33:25) ಚರ್ಮದ ಸುಕ್ಕುಗಳು ಮಾಯವಾಗುವವು, ಬಾಗಿರುವ ಕೈಕಾಲುಗಳು ನೆಟ್ಟಗಾಗುವವು, ಮತ್ತು ಸ್ನಾಯುಗಳು ಹೊಸ ಶಕ್ತಿಯಿಂದ ಬಿರಿಯುವವು. ಪಾಪ ಮತ್ತು ಅಪರಿಪೂರ್ಣತೆಯ ಪರಿಣಾಮಗಳು ನಿಧಾನವಾಗಿ ಇಳಿಮುಖವಾಗುತ್ತಾ ಮಾಯವಾಗಿ ಹೋಗುವುದನ್ನು ನಂಬಿಗಸ್ತ ಜನರೆಲ್ಲರು ವೈಯಕ್ತಿಕವಾಗಿ ಅನುಭವಿಸುವರು. ಆತನ ವಿಸ್ಮಯಕರವಾದ ಪುನಸ್ಸ್ಥಾಪನೆಯ ಶಕ್ತಿಗಾಗಿ ಯೆಹೋವ ದೇವರಿಗೆ ನಾವೆಷ್ಟು ಕೃತಜ್ಞತೆ ಹೇಳುವೆವು! ನಾವೀಗ ಈ ರೋಮಾಂಚಕ ಪುನಸ್ಸ್ಥಾಪನೆಯ ಸಮಯದ ವಿಶೇಷವಾಗಿ ಹೃದಯೋಲ್ಲಾಸಕರವಾದ ಒಂದು ವಿಷಯದ ಮೇಲೆ ನಮ್ಮ ಮನಸ್ಸನ್ನು ಕೇಂದ್ರೀಕರಿಸೋಣ.

ಮೃತರಿಗೆ ಜೀವವನ್ನು ಪುನಃ ಕೊಡುವುದು

17, 18. (ಎ) ಯೇಸು ಸದ್ದುಕಾಯರನ್ನು ಖಂಡಿಸಿದ್ದೇಕೆ? (ಬಿ) ಯೆಹೋವನು ಒಂದು ಪುನರುತ್ಥಾನವನ್ನು ಮಾಡುವಂತೆ ವಿನಂತಿಸಲು ಯಾವ ಸನ್ನಿವೇಶಗಳು ಎಲೀಯನನ್ನು ನಡಿಸಿದವು?

17 ಸಾ.ಶ. ಒಂದನೆಯ ಶತಮಾನದಲ್ಲಿ, ಸದ್ದುಕಾಯರೆಂದು ಕರೆಯಲ್ಪಟ್ಟ ಕೆಲವು ಧಾರ್ಮಿಕ ಮುಖಂಡರು, ಪುನರುತ್ಥಾನದಲ್ಲಿ ನಂಬಿಕೆಯಿಡುತ್ತಿರಲಿಲ್ಲ. ಯೇಸು ಅವರನ್ನು ಈ ಮಾತುಗಳಿಂದ ಖಂಡಿಸಿದನು: “ನೀವು ಶಾಸ್ತ್ರವನ್ನಾದರೂ ದೇವರ ಶಕ್ತಿಯನ್ನಾದರೂ ತಿಳಿಯದೆ ತಪ್ಪುವವರಾಗಿದ್ದೀರಿ.” (ಮತ್ತಾಯ 22:29) ಹೌದು, ಯೆಹೋವನ ಬಳಿ ಆ ರೀತಿಯ ಪುನಸ್ಸ್ಥಾಪಿಸುವ ಶಕ್ತಿಯು ಇದೆಯೆಂದು ಶಾಸ್ತ್ರಗಳು ತಿಳಿಸುತ್ತವೆ. ಅದು ಹೇಗೆ?

18 ಎಲೀಯನ ದಿನಗಳಲ್ಲಿ ಏನಾಯಿತೆಂಬುದನ್ನು ಚಿತ್ರಿಸಿಕೊಳ್ಳಿರಿ. ವಿಧವೆಯೊಬ್ಬಳು ತನ್ನ ಒಬ್ಬನೇ ಮಗನ ನಿಸ್ತೇಜ ದೇಹವನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿದ್ದಳು. ಆ ಹುಡುಗನ ಜೀವಹೋಗಿತ್ತು. ಆ ವಿಧವೆಯ ಮನೆಯಲ್ಲಿ ಕೆಲವು ಸಮಯದಿಂದ ಅತಿಥಿಯಾಗಿದ್ದ ಪ್ರವಾದಿ ಎಲೀಯನಿಗೆ ಇದನ್ನು ಕಂಡು ಧಕ್ಕೆತಗಲಿದ್ದಿರಬೇಕು. ಈ ಮೊದಲು ಎಲೀಯನು ಆ ಹುಡುಗನನ್ನು ಹೊಟ್ಟೆಗಿಲ್ಲದೆ ಸಾಯುವುದರಿಂದ ಬದುಕಿಸಿದ್ದನು. ಬಹುಶಃ ಆ ಪುಟ್ಟ ಹುಡುಗನ ಮೇಲೆ ಎಲೀಯನಿಗೆ ವಾತ್ಸಲ್ಯ ಮೂಡಿದ್ದಿರಬಹುದು. ಆದರೆ ಈಗ ತಾಯಿಯಾದರೊ ಎದೆಯೊಡೆದವಳಾಗಿದ್ದಳು. ಈ ಹುಡುಗನು ಆಕೆಯ ಮೃತ ಗಂಡನ ನೆನಪಿಗಾಗಿದ್ದ ಏಕಮಾತ್ರ ಸಜೀವ ಕುರುಹು ಆಗಿದ್ದನು. ತನ್ನ ವೃದ್ಧಾಪ್ಯದಲ್ಲಿ ಈ ಮಗನು ಆಸರೆಯಾಗಿರುವನೆಂದು ಅವಳು ಆಸೆ ಇಟ್ಟಿದ್ದಿರಬಹುದು. ದಿಕ್ಕುಕಾಣದವಳಾಗಿ, ತಾನು ಹಿಂದೆ ಮಾಡಿದ ಯಾವುದೊ ತಪ್ಪಿಗಾಗಿ ಈ ಶಿಕ್ಷೆ ಸಿಕ್ಕಿದೆಯೆಂದು ಆ ವಿಧವೆ ಹೆದರಿದಳು. ನಡೆದಿರುವ ದುರಂತವು ಈ ರೀತಿಯಲ್ಲಿ ಉಲ್ಬಣಿಸುವುದನ್ನು ಕಂಡು ಎಲೀಯನಿಗೆ ತಡೆದುಕೊಳ್ಳಲಾಗಲಿಲ್ಲ. ಅವನು ಮೆಲ್ಲನೆ ಮಗುವಿನ ಶವವನ್ನು ತಾಯಿಯ ಮಡಿಲಿನಿಂದ ಎತ್ತಿ, ತನ್ನ ಮೇಲಣ ಕೋಣೆಗೆ ಒಯ್ದು, ಅದರ ಪ್ರಾಣವನ್ನು ತಿರುಗಿ ಕೊಡುವಂತೆ ಯೆಹೋವ ದೇವರಿಗೆ ಮೊರೆಯಿಟ್ಟನು.​—1 ಅರಸುಗಳು 17:8-21.

19, 20. (ಎ) ಯೆಹೋವನ ಪುನಸ್ಸ್ಥಾಪಿಸುವ ಶಕ್ತಿಯಲ್ಲಿ ತನಗೆ ನಂಬಿಕೆಯಿತ್ತೆಂದು ಅಬ್ರಹಾಮನು ತೋರಿಸಿದ್ದು ಹೇಗೆ, ಮತ್ತು ಆ ನಂಬಿಕೆಗೆ ಅಧಾರವೇನಿತ್ತು? (ಬಿ) ಎಲೀಯನ ನಂಬಿಕೆಗೆ ಯೆಹೋವನು ಪ್ರತಿಫಲವನ್ನು ಕೊಟ್ಟದ್ದು ಹೇಗೆ?

19 ಪುನರುತ್ಥಾನದಲ್ಲಿ ನಂಬಿಕೆಯಿಟ್ಟವರಲ್ಲಿ ಎಲೀಯನು ಮೊದಲನೆಯವನಲ್ಲ. ಆ ರೀತಿಯ ಪುನಸ್ಸ್ಥಾಪಿಸುವ ಶಕ್ತಿಯು ಯೆಹೋವನಿಗಿದೆ ಎಂಬುದನ್ನು ಶತಮಾನಗಳ ಹಿಂದೆ ಅಬ್ರಹಾಮನು ನಂಬಿದ್ದನು​—ಹಾಗೆ ನಂಬಲು ಅವನಿಗೆ ಸಕಾರಣವಿತ್ತು. ಅಬ್ರಹಾಮನು 100 ವರ್ಷದವನೂ ಸಾರಳು 90 ವರ್ಷ ವಯಸ್ಸಿನವಳೂ ಆಗಿದ್ದಾಗ, ಸತ್ತುಹೋಗಿದ್ದ ಅವರ ಸಂತಾನೋತ್ಪತ್ತಿಯ ಶಕ್ತಿಯನ್ನು ಯೆಹೋವನು ಪುನಸ್ಸ್ಥಾಪಿಸಿದನು. ಹೀಗೆ ಅದ್ಭುತಕರವಾಗಿ ಸಾರಳು ಒಬ್ಬ ಮಗನನ್ನು ಹೆರಲು ಶಕ್ತಳಾದಳು. (ಆದಿಕಾಂಡ 17:17; 21:​2-4) ತದನಂತರ, ಆ ಮಗನು ಪೂರ್ತಿಬೆಳೆದಾಗ, ಅವನನ್ನು ಯಜ್ಞವಾಗಿ ಅರ್ಪಿಸುವಂತೆ ಯೆಹೋವನು ಅಬ್ರಹಾಮನನ್ನು ಕೇಳಿದನು. ಅಬ್ರಹಾಮನಾದರೊ, ಯೆಹೋವನು ತನ್ನ ಪ್ರಿಯ ಪುತ್ರನಾದ ಇಸಾಕನನ್ನು ಪುನರುಜ್ಜೀವಿಸಶಕ್ತನೆಂದು ಭರವಸೆಯಿಟ್ಟವನಾಗಿ, ನಂಬಿಕೆಯನ್ನು ತೋರಿಸಿದನು. (ಇಬ್ರಿಯ 11:17-19) ಅಂಥ ಗಾಢವಾದ ನಂಬಿಕೆಯ ಕಾರಣದಿಂದಲೇ ಅಬ್ರಹಾಮನು ತನ್ನ ಮಗನನ್ನು ಅರ್ಪಿಸಲಿಕ್ಕಾಗಿ ಬೆಟ್ಟವನ್ನೇರುವ ಮೊದಲು ತನ್ನ ಸೇವಕರಿಗೆ ತಾನೂ ಇಸಾಕನೂ ಒಟ್ಟಿಗೆ ಅವರ ಬಳಿಗೆ ತಿರುಗಿ ಬರುತ್ತೇವೆಂದು ಹೇಳಿರಬಹುದು.​—ಆದಿಕಾಂಡ 22:5.

“ಇಗೋ, ನೋಡು; ನಿನ್ನ ಮಗನು ಜೀವಿಸುತ್ತಾನೆ”!

20 ಯೆಹೋವನು ಇಸಾಕನನ್ನು ಯಜ್ಞವಾಗಿ ಅರ್ಪಿಸಲ್ಪಡುವುದರಿಂದ ಉಳಿಸಿದನು, ಆದುದರಿಂದ ಆ ಸಮಯದಲ್ಲಿ ಒಂದು ಪುನರುತ್ಥಾನದ ಅಗತ್ಯವು ಇರಲಿಲ್ಲ. ಎಲೀಯನ ವಿಷಯದಲ್ಲಾದರೊ, ಆ ವಿಧವೆಯ ಮಗನು ಆಗಲೇ ಸತ್ತಿದ್ದನು​—ಆದರೆ ಸತ್ತು ಹೆಚ್ಚು ಸಮಯವಾಗಿರಲಿಲ್ಲ. ಆ ಮಗುವನ್ನು ಪುನರುತ್ಥಾನಗೊಳಿಸುವ ಮೂಲಕ ಯೆಹೋವನು ಪ್ರವಾದಿಯ ನಂಬಿಕೆಗೆ ಪ್ರತಿಫಲವನ್ನಿತ್ತನು! ಆ ಮೇಲೆ ಎಲೀಯನು, ಆ ಹುಡುಗನನ್ನು ಅವನ ತಾಯಿಗೆ ಒಪ್ಪಿಸುತ್ತಾ, ಈ ಅವಿಸ್ಮರಣೀಯ ಮಾತುಗಳನ್ನಾಡಿದನು: “ಇಗೋ, ನೋಡು; ನಿನ್ನ ಮಗನು ಜೀವಿಸುತ್ತಾನೆ”!​—1 ಅರಸುಗಳು 17:22-24.

21, 22. (ಎ) ಪುನರುತ್ಥಾನಗಳು ಶಾಸ್ತ್ರಗಳಲ್ಲಿ ದಾಖಲಿಸಲ್ಪಟ್ಟಿರುವುದರ ಉದ್ದೇಶವೇನಾಗಿತ್ತು? (ಬಿ) ಪರದೈಸಿನಲ್ಲಿ ಪುನರುತ್ಥಾನವು ಎಷ್ಟು ವ್ಯಾಪಕವಾಗಿರುವುದು, ಮತ್ತು ಯಾರು ಅದನ್ನು ನಡೆಸುವನು?

21 ಹೀಗೆ ಬೈಬಲಿನ ದಾಖಲೆಯಲ್ಲಿ ಮೊತ್ತಮೊದಲ ಬಾರಿ, ಮಾನವ ಜೀವವನ್ನು ಪುನಸ್ಸ್ಥಾಪಿಸಲು ಯೆಹೋವನು ತನ್ನ ಶಕ್ತಿಯನ್ನುಪಯೋಗಿಸುವುದನ್ನು ನಾವು ಕಾಣುತ್ತೇವೆ. ತದನಂತರ, ಮೃತರನ್ನು ಜೀವಕ್ಕೆ ಪುನಸ್ಸ್ಥಾಪಿಸುವ ಶಕ್ತಿಯನ್ನು ಯೆಹೋವನು ಎಲೀಷ, ಯೇಸು, ಪೌಲ, ಮತ್ತು ಪೇತ್ರರಿಗೆ ಸಹ ಕೊಟ್ಟನು. ಹಾಗೆ ಪುನರುತ್ಥಾನಗೊಂಡವರು ಕಟ್ಟಕಡೆಗೆ ಪುನಃ ಸತ್ತರೆಂಬುದು ನಿಜ. ಆದರೂ ಅಂಥ ಬೈಬಲ್‌ ವೃತ್ತಾಂತಗಳು ಭವಿಷ್ಯತ್ತಿನಲ್ಲಿ ಬರಲಿರುವ ಆಶ್ಚರ್ಯಕರವಾದ ಸಂಗತಿಗಳ ಮುನ್ನೋಟವನ್ನು ನಮಗೆ ಕೊಡುತ್ತವೆ.

22 “ಪುನರುತ್ಥಾನವೂ ಜೀವವೂ” ಆಗಿ ತನ್ನ ಪಾತ್ರವನ್ನು ಯೇಸು ಪರದೈಸಿನಲ್ಲಿ ಪೂರ್ಣವಾಗಿ ನೆರವೇರಿಸುವನು. (ಯೋಹಾನ 11:25) ಆತನು ಲಕ್ಷಾಂತರ ಜನರನ್ನು ಪುನರುತ್ಥಾನಗೊಳಿಸಿ, ಪರದೈಸ್‌ ಭೂಮಿಯಲ್ಲಿ ಸದಾಕಾಲ ಜೀವಿಸುವ ಸಂದರ್ಭವನ್ನು ಅವರಿಗೆ ಕೊಡುವನು. (ಯೋಹಾನ 5:28, 29) ಬಹಳ ಸಮಯದಿಂದ ಮರಣದಲ್ಲಿ ಅಗಲಿಸಲ್ಪಟ್ಟ ಪ್ರಿಯ ಮಿತ್ರರು ಮತ್ತು ಸಂಬಂಧಿಕರು, ಪರಮಾನಂದದಿಂದ ಒಬ್ಬರನ್ನೊಬ್ಬರು ಆಲಿಂಗಿಸುವ ಆ ಪುನರ್ಮಿಲನಗಳನ್ನು ಮನಸ್ಸಲ್ಲೇ ಚಿತ್ರಿಸಿಕೊಳ್ಳಿರಿ! ಯೆಹೋವನ ಪುನಸ್ಸ್ಥಾಪಿಸುವ ಶಕ್ತಿಗಾಗಿ ಸಕಲ ಮಾನವಕುಲವು ಆತನನ್ನು ಸ್ತುತಿಸುವುದು.

23. ಯೆಹೋವನ ಶಕ್ತಿಯ ಎಲ್ಲಾ ಪ್ರದರ್ಶನಗಳಲ್ಲಿ ಅತ್ಯಂತ ಮಹಾನ್‌ ಪ್ರದರ್ಶನವು ಯಾವುದು, ಮತ್ತು ಇದು ಭವಿಷ್ಯತ್ತಿಗಾಗಿರುವ ನಮ್ಮ ನಿರೀಕ್ಷೆಗೆ ಹೇಗೆ ಖಾತರಿಕೊಡುತ್ತದೆ?

23 ಅಂಥ ನಿರೀಕ್ಷೆಗಳು ಸುದೃಢವಾಗಿವೆಯೆಂಬುದಕ್ಕೆ ಯೆಹೋವನು ನಿಶ್ಚಂಚಲವಾದ ಖಾತರಿಯನ್ನು ಒದಗಿಸಿರುತ್ತಾನೆ. ತನ್ನ ಶಕ್ತಿಯ ಸಕಲ ಪ್ರದರ್ಶನಗಳಲ್ಲೇ ಅತ್ಯಂತ ಮಹಾನ್‌ ಪ್ರದರ್ಶನದಲ್ಲಿ, ಆತನು ತನ್ನ ಮಗನಾದ ಯೇಸುವನ್ನು ಒಬ್ಬ ಪರಾಕ್ರಮಿ ಆತ್ಮಜೀವಿಯಾಗಿ ಪುನರುತ್ಥಾನಗೊಳಿಸಿ, ತನ್ನ ನಂತರದ ದ್ವಿತೀಯ ಸ್ಥಾನದಲ್ಲಿರಿಸಿದನು. ಪುನರುತ್ಥಾನಗೊಂಡ ಯೇಸು, ನೂರಾರು ಮಂದಿ ಪ್ರತ್ಯಕ್ಷಸಾಕ್ಷಿಗಳಿಗೆ ಗೋಚರವಾದನು. (1 ಕೊರಿಂಥ 15:5, 6) ಇಂಥ ಸಾಕ್ಷ್ಯವು ಸಂದೇಹವಾದಿಗಳೂ ಅದನ್ನು ನಂಬುವಂತೆ ಮಾಡಲು ಸಾಕು. ಜೀವವನ್ನು ಪುನಸ್ಸ್ಥಾಪಿಸುವ ಶಕ್ತಿಯು ಯೆಹೋವನಿಗಿದೆ.

24. ಯೆಹೋವನು ಸತ್ತವರ ಪುನರುತ್ಥಾನಮಾಡುವನು ಎಂದು ನಾವೇಕೆ ಭರವಸೆಯಿಂದಿರಬಹುದು, ಮತ್ತು ನಮ್ಮಲ್ಲಿ ಪ್ರತಿಯೊಬ್ಬರು ಯಾವ ನಿರೀಕ್ಷೆಯನ್ನು ಹೃದಯದಲ್ಲಿರಿಸಿಕೊಳ್ಳಬಹುದು?

24 ಯೆಹೋವನ ಬಳಿ ಮೃತರನ್ನು ಪುನಃ ಉಜ್ಜೀವಿಸುವ ಶಕ್ತಿಯು ಮಾತ್ರವಲ್ಲ ಅದನ್ನು ಮಾಡುವ ಅಪೇಕ್ಷೆಯೂ ಇದೆ. ಸತ್ತವರನ್ನು ಪುನಃ ಜೀವಿತರನ್ನಾಗಿ ಮಾಡಲು ಯೆಹೋವನು ಸಾಕ್ಷಾತ್‌ ಹಂಬಲಿಸುತ್ತಾನೆ ಎಂದು ಹೇಳಲು ನಂಬಿಗಸ್ತ ಮನುಷ್ಯನಾದ ಯೋಬನು ಪ್ರೇರೇಪಿಸಲ್ಪಟ್ಟನು. (ಯೋಬ 14:15) ತನ್ನ ಪುನಸ್ಸ್ಥಾಪಿಸುವ ಶಕ್ತಿಯನ್ನು ಅಂಥ ಪ್ರೀತಿಯುಳ್ಳ ವಿಧದಲ್ಲಿ ಉಪಯೋಗಿಸಲು ಆತುರದಿಂದಿರುವ ನಮ್ಮ ದೇವರ ಕಡೆಗೆ ನೀವು ಆಕರ್ಷಿತರಾಗುವುದಿಲ್ಲವೇ? ಆದರೂ, ಮುಂದಿರುವ ಯೆಹೋವನ ಮಹಾ ಪುನಸ್ಸ್ಥಾಪನಾ ಕೆಲಸದಲ್ಲಿ ಪುನರುತ್ಥಾನವು ಕೇವಲ ಒಂದು ಅಂಶವೆಂಬುದನ್ನು ನೆನಪಿನಲ್ಲಿಡಿರಿ. ನೀವಾತನಿಗೆ ಸದಾ ಸಮೀಪ ಬರುತ್ತಾ ಇರುವಾಗ, ಯೆಹೋವನು “ಎಲ್ಲವನ್ನು ಹೊಸದುಮಾಡು”ವುದನ್ನು ಕಾಣಲು ನೀವಲ್ಲಿ ಇರಬಲ್ಲಿರೆಂಬ ಅಮೂಲ್ಯವಾದ ನಿರೀಕ್ಷೆಯನ್ನು ಯಾವಾಗಲೂ ಹೃದಯದಲ್ಲಿರಿಸಿಕೊಳ್ಳಿ.​—ಪ್ರಕಟನೆ 21:5.

a ನಂಬಿಗಸ್ತನಾದ ರಾಜ ದಾವೀದನ ಉತ್ತರಾಧಿಕಾರಿಯೊಬ್ಬನು ಸಿಂಹಾಸನವನ್ನೇರಿ ಮೆಸ್ಸೀಯ ಸಂಬಂಧಿತ ರಾಜ್ಯವು ಸ್ಥಾಪನೆಗೊಂಡಾಗ, ಈ “ಎಲ್ಲವನ್ನು ಮತ್ತೆ ಸರಿಪಡಿಸುವ ಕಾಲ”ವು ಆರಂಭವಾಯಿತು. ದಾವೀದನ ವಂಶಜನೊಬ್ಬನು ಸದಾಕಾಲ ಆಳುವನೆಂದು ಅವನಿಗೆ ಯೆಹೋವನು ವಾಗ್ದಾನಿಸಿದ್ದನು. (ಕೀರ್ತನೆ 89:35-37) ಆದರೆ ಸಾ.ಶ.ಪೂ. 607ರಲ್ಲಿ ಬಾಬೆಲು ಯೆರೂಸಲೇಮನ್ನು ನಾಶಗೊಳಿಸಿದ ನಂತರ, ದಾವೀದನ ಯಾವ ಮಾನವ ವಂಶಜನೂ ದೇವರ ಸಿಂಹಾಸನದಲ್ಲಿ ಕುಳಿತುಕೊಳ್ಳಲಿಲ್ಲ. ದಾವೀದನ ವಂಶಜನಾಗಿ ಭೂಮಿಯಲ್ಲಿ ಜನಿಸಿದ ಯೇಸು, ಪರಲೋಕದಲ್ಲಿ ಸಿಂಹಾಸನಾರೂಢನಾದಾಗ ಆ ದೀರ್ಘವಾಗ್ದಾನಿತ ರಾಜನಾಗಿ ಪರಿಣಮಿಸಿದನು.

b ಉದಾಹರಣೆಗಾಗಿ ಮೋಶೆ, ಯೆಶಾಯ, ಯೆರೆಮೀಯ, ಯೆಹೆಜ್ಕೇಲ, ಹೋಶೇಯ, ಯೋವೇಲ, ಆಮೋಸ, ಓಬದ್ಯ, ಮೀಕ, ಮತ್ತು ಚೆಫನ್ಯ​—ಇವರೆಲ್ಲರು ಈ ಮುಖ್ಯ ವಿಷಯವನ್ನು ವಿಕಸಿಸಿದ್ದರು.