ಅಧ್ಯಾಯ 1
“ಆಹಾ, ಈತನೇ ನಮ್ಮ ದೇವರು”
1, 2. (ಎ) ದೇವರಿಗೆ ಯಾವ ಪ್ರಶ್ನೆಗಳನ್ನು ಹಾಕಲು ನೀವು ಬಯಸುತ್ತೀರಿ? (ಬಿ) ಮೋಶೆಯು ದೇವರಿಗೆ ಯಾವ ಪ್ರಶ್ನೆಯನ್ನು ಕೇಳಿದನು?
ದೇವರೊಂದಿಗೆ ನೀವು ಸಂಭಾಷಣೆ ಮಾಡುತ್ತಿದ್ದೀರೆಂಬುದನ್ನು ಊಹಿಸಿಕೊಳ್ಳಬಲ್ಲಿರೊ? ಇಡೀ ವಿಶ್ವದ ಪರಮಾಧಿಕಾರಿಯು ನಿಮ್ಮೊಂದಿಗೆ ಮಾತನಾಡುತ್ತಿದ್ದಾನೆ—ಈ ವಿಚಾರವೇ ನಿಮ್ಮಲ್ಲಿ ಭಯವಿಸ್ಮಯವನ್ನು ತುಂಬಿಸುವುದು! ಮೊದಮೊದಲು ನಿಮಗೆ ತುಸು ಅಂಜಿಕೆಯಾದರೂ ಹೇಗೊ ನಿಮ್ಮ ನಾಲಗೆ ಹೊರಳುತ್ತದೆ. ಆತನು ಕಿವಿಗೊಡುತ್ತಾನೆ, ಪ್ರತಿಕ್ರಿಯಿಸುತ್ತಾನೆ ಮತ್ತು ನಿಮ್ಮಲ್ಲಿ ನಿರಾಳಭಾವನೆಯನ್ನು ಹುಟ್ಟಿಸಿ, ನೀವು ಅಳುಕಿಲ್ಲದೆ ನಿಮ್ಮ ಮನಸ್ಸಿನಲ್ಲಿರುವ ಯಾವುದೇ ಪ್ರಶ್ನೆಯನ್ನು ಕೇಳುವಂತೆ ಮಾಡುತ್ತಾನೆ. ಈಗ, ನೀವು ಯಾವ ಪ್ರಶ್ನೆಯನ್ನು ಕೇಳುವಿರಿ?
2 ಬಹಳ ಸಮಯದ ಹಿಂದೆ ಒಬ್ಬ ಮನುಷ್ಯನು ಇಂಥದ್ದೇ ಒಂದು ಸನ್ನಿವೇಶದಲ್ಲಿದ್ದನು. ಅವನ ಹೆಸರು ಮೋಶೆ. ಅವನು ದೇವರಿಗೆ ಕೇಳಲು ಆರಿಸಿಕೊಂಡ ಪ್ರಶ್ನೆಯಾದರೊ ನಿಮ್ಮನ್ನು ಆಶ್ಚರ್ಯಗೊಳಿಸೀತು. ಅವನು ತನ್ನ ಕುರಿತಾಗಲಿ, ತನ್ನ ಭವಿಷ್ಯತ್ತಿನ ಕುರಿತಾಗಲಿ, ಇಲ್ಲವೆ ಮಾನವಕುಲದ ದುರವಸ್ಥೆಯ ಕುರಿತಾಗಲಿ ಪ್ರಶ್ನೆ ಕೇಳಲಿಲ್ಲ. ಬದಲಾಗಿ, ಅವನು ದೇವರ ಹೆಸರೇನೆಂದು ಕೇಳಿದನು. ಇದು ನಿಮಗೆ ತುಸು ವಿಚಿತ್ರವಾಗಿ ಕಂಡೀತು, ಯಾಕಂದರೆ ದೇವರ ವೈಯಕ್ತಿಕ ಹೆಸರು ಮೋಶೆಗೆ ಈ ಮೊದಲೇ ತಿಳಿದಿತ್ತು. ಹೀಗಿರಲಾಗಿ, ಅವನ ಪ್ರಶ್ನೆಯಲ್ಲಿ ಆಳವಾದ ಅರ್ಥವು ಹುದುಗಿದ್ದಿರಬೇಕು. ವಾಸ್ತವದಲ್ಲಿ ಮೋಶೆಯು ಕೇಳಬಹುದಾಗಿದ್ದ ಅತ್ಯಂತ ಪ್ರಾಮುಖ್ಯ ಪ್ರಶ್ನೆಯು ಅದಾಗಿತ್ತು, ಮತ್ತು ಅದಕ್ಕೆ ಸಿಕ್ಕಿದಂಥ ಉತ್ತರವು ನಮ್ಮೆಲ್ಲರನ್ನು ಪ್ರಭಾವಿಸುತ್ತದೆ. ದೇವರ ಸಮೀಪಕ್ಕೆ ಬರುವುದರಲ್ಲಿ ಒಂದು ಪ್ರಾಮುಖ್ಯ ಹೆಜ್ಜೆಯನ್ನಿಡಲು ಅದು ನಿಮಗೆ ಸಹಾಯಮಾಡಬಲ್ಲದು. ಅದು ಹೇಗೆ? ಆ ಗಮನಾರ್ಹ ಸಂಭಾಷಣೆಯ ಕಡೆಗೆ ನಮ್ಮ ಗಮನವನ್ನು ತಿರುಗಿಸೋಣ.
3, 4. ದೇವರೊಂದಿಗೆ ಮೋಶೆಯು ಸಂಭಾಷಿಸುವಂತೆ ನಡಿಸಿದ ಘಟನೆಗಳು ಯಾವುವು, ಮತ್ತು ಅವರ ನಡುವೆ ನಡೆದ ಆ ಸಂಭಾಷಣೆಯ ಸಾರಾಂಶವೇನು?
3 ಮೋಶೆಗೆ ಆಗ 80 ವರ್ಷ ಪ್ರಾಯ. ಐಗುಪ್ತದಲ್ಲಿ ದಾಸರಾಗಿದ್ದ ಅವನ ಸ್ವಜನರಾದ ಇಸ್ರಾಯೇಲ್ಯರಿಂದ ಅವನು ದೂರವಾಗಿ ಈಗ ನಾಲ್ಕು ದಶಕಗಳು ಕಳೆದಿದ್ದವು. ಒಂದು ದಿನ ಅವನು ತನ್ನ ಮಾವನ ಕುರಿಮಂದೆಯನ್ನು ಮೇಯಿಸುತ್ತಿದ್ದಾಗ, ಒಂದು ವಿಚಿತ್ರವಾದ ಸಂಗತಿಯನ್ನು ಕಂಡನು. ಮುಳ್ಳಿನ ಪೊದೆಯೊಂದು ಬೆಂಕಿಯಿಂದ ಉರಿಯುತ್ತಿತ್ತು, ಆದರೂ ಅದು ಸುಟ್ಟುಹೋಗದೆ ಇತ್ತು. ಅದು ಬೆಟ್ಟದ ಮೇಲೆ ಬೆಳಗುತ್ತಿರುವ ಒಂದು ಸಂಜ್ಞಾ ಜ್ಯೋತಿಯಂತೆ ಉರಿಯುತ್ತಲೇ ಇತ್ತು. ಇದೇನು ನೋಡೋಣ ಎಂದು ಮೋಶೆ ಅದರ ಹತ್ತಿರ ಹೋದನು. ಆಗ ಬೆಂಕಿಯೊಳಗಿಂದ ಒಂದು ಸ್ವರವು ಅವನ ಹೆಸರೆತ್ತಿ ಕರೆದಾಗ, ಅವನೆಷ್ಟು ಬೆಚ್ಚಿಬಿದ್ದಿರಬೇಕು! ತದನಂತರ, ದೇವದೂತ ಪ್ರತಿನಿಧಿಯೊಬ್ಬನ ಮುಖಾಂತರ, ಮೋಶೆಯೂ ದೇವರೂ ಬಹಳ ಹೊತ್ತಿನ ತನಕ ಪರಸ್ಪರ ಸಂಭಾಷಿಸಿದರು. ಅಲ್ಲಿಯೇ ದೇವರು ಆ ಅರೆಮನಸ್ಸಿನ ಮೋಶೆಗೆ, ಅವನು ತನ್ನ ನೆಮ್ಮದಿಯ ಜೀವನವನ್ನು ಬಿಟ್ಟುಕೊಟ್ಟು, ದಾಸ್ಯದಲ್ಲಿದ್ದ ಇಸ್ರಾಯೇಲ್ಯರನ್ನು ಬಿಡಿಸಲು ಐಗುಪ್ತಕ್ಕೆ ಹಿಂದಿರುಗುವಂತೆ ಆಜ್ಞಾಪಿಸಿದನೆಂಬುದು ನಿಮಗೆ ತಿಳಿದಿರಬಹುದು.—ವಿಮೋಚನಕಾಂಡ 3:1-12.
4 ಆ ಸಂದರ್ಭದಲ್ಲಿ ಮೋಶೆಯು ದೇವರಿಗೆ ಯಾವುದೇ ಪ್ರಶ್ನೆಯನ್ನು ಕೇಳಬಹುದಿತ್ತು. ಆದರೂ ಅವನು ಕೇಳಲು ಆಯ್ಕೆಮಾಡಿದ ಪ್ರಶ್ನೆಯನ್ನು ಗಮನಿಸಿರಿ: “ನಾನು ಇಸ್ರಾಯೇಲ್ಯರ ಬಳಿಗೆ ಬಂದು ನಿಮ್ಮ ಪಿತೃಗಳ ದೇವರು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆಂದು ಹೇಳಿದಾಗ ಒಂದು ವೇಳೆ ಅವರು—ಆತನ ಹೆಸರೇನೆಂದು ನನ್ನನ್ನು ಕೇಳಿದರೆ ನಾನೇನು ಉತ್ತರಕೊಡಬೇಕು”?—ವಿಮೋಚನಕಾಂಡ 3:13.
5, 6. (ಎ) ಮೋಶೆಯ ಪ್ರಶ್ನೆಯು ಯಾವ ಸರಳವಾದ ಪ್ರಾಮುಖ್ಯ ಸತ್ಯವನ್ನು ನಮಗೆ ಕಲಿಸುತ್ತದೆ? (ಬಿ) ದೇವರ ವೈಯಕ್ತಿಕ ಹೆಸರಿನೊಂದಿಗೆ ಯಾವ ಖಂಡನೀಯ ಕೆಲಸವು ಮಾಡಲ್ಪಟ್ಟಿದೆ? (ಸಿ) ದೇವರು ತನ್ನ ಹೆಸರನ್ನು ಮಾನವಕುಲಕ್ಕೆ ಪ್ರಕಟಪಡಿಸಿರುವುದು ತುಂಬ ಗಮನಾರ್ಹವೇಕೆ?
5 ಆ ಪ್ರಶ್ನೆಯು ಮೊತ್ತಮೊದಲಾಗಿ, ದೇವರಿಗೊಂದು ಹೆಸರಿದೆ ಎಂಬುದನ್ನು ನಮಗೆ ಕಲಿಸುತ್ತದೆ. ಈ ಸರಳ ಸತ್ಯವನ್ನು ನಾವು ಹಗುರವಾದದ್ದಾಗಿ ಎಣಿಸಬಾರದು. ಆದರೂ ಅನೇಕರು ಹಾಗೆ ಮಾಡುತ್ತಾರೆ. ಅಸಂಖ್ಯಾತ ಬೈಬಲ್ ಭಾಷಾಂತರಗಳಿಂದ ದೇವರ ವೈಯಕ್ತಿಕ ಹೆಸರನ್ನು ತೆಗೆದು, ಅದರ ಸ್ಥಳದಲ್ಲಿ “ಕರ್ತನು” ಮತ್ತು “ದೇವರು” ಎಂಬಂಥ ಬಿರುದುಗಳನ್ನು ಹಾಕಲಾಗಿದೆ. ಧರ್ಮದ ಹೆಸರಿನಲ್ಲಿ ಮಾಡಲ್ಪಟ್ಟಿರುವ ಅತ್ಯಂತ ಶೋಚನೀಯ ಹಾಗೂ ಅತ್ಯಂತ ಖಂಡನೀಯ ಕೆಲಸಗಳಲ್ಲಿ ಇದು ಒಂದಾಗಿದೆ. ಯಾಕಂದರೆ, ಯಾರನ್ನಾದರೂ ನೀವು ಮೊದಲ ಬಾರಿ ಭೇಟಿಯಾಗುವಾಗ ನೀವು ಮೊತ್ತಮೊದಲು ಏನು ಕೇಳುತ್ತೀರಿ? ಅವರ ಹೆಸರೇನೆಂದು ಕೇಳುತ್ತೀರಲ್ಲವೆ? ದೇವರನ್ನು ತಿಳಿದುಕೊಳ್ಳುವ ವಿಷಯದಲ್ಲೂ ಹೀಗೆಯೆ ಇದೆ. ಆತನೇನೂ ಹೆಸರಿಲ್ಲದವನಲ್ಲ, ಪರಿಚಯಮಾಡಲಾಗದ ಅಥವಾ ತಿಳಿವಳಿಕೆಗೆ ಮೀರಿದ ನಿಗೂಢ ಜೀವಿಯಲ್ಲ. ಅದೃಶ್ಯನು ಹೌದು, ಆದರೆ ಆತನು ಒಬ್ಬ ವ್ಯಕ್ತಿಯಾಗಿದ್ದಾನೆ, ಮತ್ತು ಅವನಿಗೊಂದು ಹೆಸರೂ ಇದೆ. ಯೆಹೋವ ಎಂಬುದೇ ಆ ಹೆಸರು.
6 ಅಷ್ಟುಮಾತ್ರವಲ್ಲದೆ, ದೇವರು ತನ್ನ ವೈಯಕ್ತಿಕ ಹೆಸರನ್ನು ಪ್ರಕಟಪಡಿಸುವಾಗ, ಯಾವುದೊ ಒಂದು ಗಮನಾರ್ಹವಾದ ಹಾಗೂ ರೋಮಾಂಚಕವಾದ ವಿಷಯವು ಗೋಚರವಾಗುತ್ತದೆ. ನಾವು ಆತನನ್ನು ತಿಳಿದುಕೊಳ್ಳುವಂತೆ ಆತನು ನಮ್ಮನ್ನು ಆಮಂತ್ರಿಸುತ್ತಿದ್ದಾನೆ. ಜೀವಿತದಲ್ಲಿ ನಾವು ಮಾಡಸಾಧ್ಯವಿರುವಂಥ ಅತ್ಯುತ್ತಮ ಆಯ್ಕೆಯನ್ನು ಮಾಡುವಂತೆ ಆತನು ಬಯಸುತ್ತಾನೆ. ಅದೇನಂದರೆ ಆತನ ಸಮೀಪಕ್ಕೆ ಬರುವುದೇ. ಆದರೆ ಯೆಹೋವನು ನಮಗೆ ತನ್ನ ಹೆಸರನ್ನು ಮಾತ್ರ ತಿಳಿಸಿಲ್ಲ. ಆತನು ಅದಕ್ಕಿಂತಲೂ ಹೆಚ್ಚನ್ನು ತಿಳಿಸಿದ್ದಾನೆ. ಆ ಹೆಸರಿನ ಅರ್ಥವೇನೆಂಬುದನ್ನು ಸಹ ಆತನು ಕಲಿಸಿದ್ದಾನೆ.
ದೇವರ ಹೆಸರಿನ ಅರ್ಥ
7. (ಎ) ದೇವರ ವೈಯಕ್ತಿಕ ಹೆಸರಿನ ಅಕ್ಷರಾರ್ಥವೇನು? (ಬಿ) ದೇವರ ಹೆಸರೇನೆಂಬುದಾಗಿ ಮೋಶೆಯು ಕೇಳಿದಾಗ, ಅವನು ನಿಜವಾಗಿ ಕೇಳಲು ಬಯಸಿದ್ದೇನು?
7 ಯೆಹೋವನು ತಾನೇ ತನಗಾಗಿ ಹೆಸರನ್ನು ಆರಿಸಿಕೊಂಡನು, ಮತ್ತು ಅದು ಮಹತ್ವಾರ್ಥವುಳ್ಳ ಒಂದು ಹೆಸರಾಗಿದೆ. “ಯೆಹೋವ” ಎಂಬ ಹೆಸರಿನ ಅಕ್ಷರಾರ್ಥವು, “ಆತನು ಆಗುವಂತೆ ಮಾಡುತ್ತಾನೆ” ಎಂದಾಗಿದೆ. ಸಕಲ ವಸ್ತುಗಳನ್ನು ಆತನು ಅಸ್ತಿತ್ವಕ್ಕೆ ತಂದನೆಂಬುದು ನಿಜ. ಇದು ತಾನೇ ವಿಸ್ಮಯಗೊಳಿಸುವಂಥ ಒಂದು ವಿಚಾರವಾಗಿದೆ. ಆದರೆ ಆತನ ಹೆಸರಿನ ನಿಜ ಅರ್ಥವು ಆತನನ್ನು ಕೇವಲ ಸೃಷ್ಟಿಕರ್ತನೋಪಾದಿ ಗುರುತಿಸುತ್ತದೊ? ಮೋಶೆಯು ಇದಕ್ಕಿಂತಲೂ ಹೆಚ್ಚನ್ನು ತಿಳಿಯಲು ಬಯಸಿದ್ದನೆಂದು ವ್ಯಕ್ತವಾಗುತ್ತದೆ. ನಿಜ ಸಂಗತಿಯೇನಂದರೆ, ಆ ದೈವಿಕ ಹೆಸರು ಹೊಸತೇನಾಗಿರಲಿಲ್ಲ. ಜನರು ಆಗಲೇ ಅನೇಕ ಶತಮಾನಗಳಿಂದ ಅದನ್ನು ಉಪಯೋಗಿಸುತ್ತಾ ಇದ್ದರು. ಆದುದರಿಂದ ದೇವರ ಹೆಸರೇನೆಂಬುದಾಗಿ ಮೋಶೆಯು ಕೇಳಿದಾಗ, ಆ ಹೆಸರಿನಿಂದ ಪ್ರತಿನಿಧಿಸಲ್ಪಟ್ಟಿರುವ ವ್ಯಕ್ತಿಯ ಕುರಿತು ಮೋಶೆಯು ಕೇಳುತ್ತಿದ್ದನು. ಕಾರ್ಯತಃ ಅವನು ಹೀಗನ್ನುತ್ತಿದ್ದನು: ‘ನಿನ್ನ ಜನರಾದ ಇಸ್ರಾಯೇಲ್ಯರು ನಿನ್ನಲ್ಲಿ ನಂಬಿಕೆಯನ್ನು ಕಟ್ಟುವಂತೆ, ನೀನು ನಿಜವಾಗಿ ಅವರನ್ನು ಬಿಡುಗಡೆ ಮಾಡುವಿಯೆಂಬ ಭರವಸೆಯನ್ನು ಹುಟ್ಟಿಸುವಂತೆ ನಿನ್ನ ಬಗ್ಗೆ ನಾನೇನು ಹೇಳಲಿ?’
8, 9. (ಎ) ಯೆಹೋವನು ಮೋಶೆಯ ಪ್ರಶ್ನೆಯನ್ನು ಹೇಗೆ ಉತ್ತರಿಸಿದನು, ಮತ್ತು ಆತನು ಕೊಟ್ಟ ಉತ್ತರವು ಅನೇಕವೇಳೆ ತರ್ಜುಮೆಯಾಗಿರುವ ರೀತಿಯಲ್ಲಿ ತಪ್ಪೇನು? (ಬಿ) “ನಾನು ಏನಾಗಿ ಪರಿಣಮಿಸುವೆನೋ ಅದಾಗಿಯೇ ಪರಿಣಮಿಸುತ್ತೇನೆ” ಎಂಬ ಹೇಳಿಕೆಯ ಅರ್ಥವೇನು?
8 ಇದಕ್ಕೆ ಪ್ರತ್ಯುತ್ತರವಾಗಿ ಯೆಹೋವನು ತನ್ನ ಹೆಸರಿನ ಅರ್ಥವನ್ನು ವಿವರಿಸಿ ಹೇಳಿದನು. ಅವನು ಮೋಶೆಗೆ ಹೇಳಿದ್ದು: “ನಾನು ಏನಾಗಿ ಪರಿಣಮಿಸುವೆನೋ ಅದಾಗಿಯೇ ಪರಿಣಮಿಸುತ್ತೇನೆ.” (ವಿಮೋಚನಕಾಂಡ 3:14, NW) ಅನೇಕ ಬೈಬಲ್ ಭಾಷಾಂತರಗಳು ಇದನ್ನು “ಇರುವಾತನೇ ಆಗಿದ್ದೇನೆ” ಎಂದು ತರ್ಜುಮೆಮಾಡಿವೆ. ಆದರೆ ನೂತನ ಲೋಕ ಭಾಷಾಂತರದ a ಜಾಗರೂಕ ಪರಿಶೀಲನೆಯ ತರ್ಜುಮೆಯು ತೋರಿಸುವುದೇನಂದರೆ, ದೇವರು ಇಲ್ಲಿ ಕೇವಲ ತನ್ನ ಸ್ವಂತ ಅಸ್ತಿತ್ವವನ್ನು ದೃಢಪಡಿಸುತ್ತಿರಲಿಲ್ಲ, ಬದಲಾಗಿ ಆ ಹೆಸರಿನಲ್ಲಿ ಒಳಗೂಡಿರುವ ಅರ್ಥವನ್ನು ಮೋಶೆಗೆ ಮತ್ತು ವಿಸ್ತಾರವಾಗಿ ನಮಗೆಲ್ಲರಿಗೆ ಕಲಿಸುತ್ತಿದ್ದನು. ಯೆಹೋವನು ತನ್ನ ವಾಗ್ದಾನಗಳನ್ನು ಪೂರೈಸಲಿಕ್ಕಾಗಿ ಏನು ಅಗತ್ಯವಿತ್ತೊ ಅದಾಗಿ ‘ಪರಿಣಮಿಸಲಿದ್ದನು’ ಅಥವಾ ಆಗಲಿದ್ದನು. ಜೆ. ಬಿ. ರಾಥರ್‌ಹ್ಯಾಮ್‌ರವರ ಭಾಷಾಂತರವು ಈ ವಚನವನ್ನು ಸ್ಪಷ್ಟವಾಗಿ ಹೀಗೆ ತರ್ಜುಮೆಮಾಡಿದೆ: “ನಾನು ಏನಾಗಲು ಇಷ್ಟಪಡುವೆನೊ ಹಾಗೆ ಆಗುವೆನು.” ಬೈಬಲಿನ ಹೀಬ್ರು ಭಾಷಾ ಪರಿಣತರೊಬ್ಬರು ಈ ವಾಕ್ಯವನ್ನು ಹೀಗೆ ವಿವರಿಸುತ್ತಾರೆ: “ಸನ್ನಿವೇಶ ಅಥವಾ ಆವಶ್ಯಕತೆ ಏನೇ ಇರಲಿ . . . , ದೇವರು ಆ ಆವಶ್ಯಕತೆಗೆ ಪರಿಹಾರ ‘ಆಗುವನು.’”
9 ಅದು ಇಸ್ರಾಯೇಲ್ಯರಿಗೆ ಯಾವ ಅರ್ಥದಲ್ಲಿತ್ತು? ಅವರ ಎದುರಿಗೆ ಯಾವುದೇ ಅಡ್ಡಿತಡೆಗಳು ಬರಲಿ, ಅವರು ಸಿಕ್ಕಿಬೀಳುವಂಥ ಬಿಕ್ಕಟ್ಟು ಎಷ್ಟೇ ಕಷ್ಟಕರವಾಗಿರಲಿ, ಅವರನ್ನು ದಾಸ್ಯದಿಂದ ಬಿಡುಗಡೆಮಾಡಿ ವಾಗ್ದತ್ತ ದೇಶಕ್ಕೆ ಕರೆತರುವುದಕ್ಕೋಸ್ಕರ ಏನು ಅಗತ್ಯವಿದೆಯೊ ಅದೆಲ್ಲಾ ಯೆಹೋವನು ಆಗಲಿದ್ದನು. ನಿಶ್ಚಯವಾಗಿಯೂ ಆ ಹೆಸರು ಅವರಲ್ಲಿ ಭರವಸೆಯನ್ನು ಮೂಡಿಸಿತು. ಇಂದಿರುವ ನಮ್ಮಲ್ಲೂ ಅದು ಭರವಸೆ ಮೂಡಿಸಬಲ್ಲದು. (ಕೀರ್ತನೆ 9:10) ಏಕೆ?
10, 11. ಯೆಹೋವನನ್ನು ಅತ್ಯಂತ ಬಹುಮುಖ ಸಾಮರ್ಥ್ಯವುಳ್ಳವನಾಗಿ ಹಾಗೂ ಊಹಿಸಸಾಧ್ಯವಿರುವುದರಲ್ಲೇ ಅತ್ಯುತ್ತಮನಾದ ತಂದೆಯಾಗಿಯೂ ನೆನಸುವಂತೆ ಆತನ ಹೆಸರು ನಮ್ಮನ್ನು ಹೇಗೆ ಆಮಂತ್ರಿಸುತ್ತದೆ? ದೃಷ್ಟಾಂತಿಸಿರಿ.
10 ದೃಷ್ಟಾಂತಕ್ಕಾಗಿ: ಹೆತ್ತವರಿಗೆ, ತಮ್ಮ ಮಕ್ಕಳ ಪರಿಪಾಲನೆ ಮಾಡುವಾಗ ತಾವು ಹೇಗೆ ಬಹುಮುಖ ಸಾಮರ್ಥ್ಯವುಳ್ಳವರು ಮತ್ತು ಸನ್ನಿವೇಶಕ್ಕೆ ತಕ್ಕಂತೆ ಹೊಂದಿಕೊಳ್ಳುವವರು ಆಗಿರಬೇಕೆಂಬುದು ಚೆನ್ನಾಗಿ ತಿಳಿದಿರುತ್ತದೆ. ಒಂದೇ ದಿನದಲ್ಲಿ ತಂದೆ ಇಲ್ಲವೆ ತಾಯಿ, ಒಬ್ಬ ನರ್ಸ್, ಅಡಿಗೆಭಟ್ಟ, ಶಿಕ್ಷಕ, ಶಿಸ್ತುಗಾರ, ನ್ಯಾಯಾಧೀಶ ಮುಂತಾದ ಇನ್ನೂ ಅನೇಕ ಪಾತ್ರಗಳನ್ನು ವಹಿಸಿಕೊಳ್ಳಬೇಕಾಗುತ್ತದೆ. ತಾವು ವಹಿಸಬೇಕಾಗುವ ಇಂಥ ವಿವಿಧ ಪಾತ್ರಗಳಿಂದಾಗಿ ಅನೇಕರು ಕಂಗಾಲಾಗಿ ಹೋಗುತ್ತಾರೆ. ಅವರ ಪುಟ್ಟ ಮಕ್ಕಳು ಅವರ ಮೇಲಿಟ್ಟಿರುವ ಪೂರಾ ಭರವಸೆಯು ಅವರಿಗೆ ತಿಳಿದೇ ಇದೆ. ಅಪ್ಪ ಇಲ್ಲವೆ ಅಮ್ಮ ತಮ್ಮ ನೋವನ್ನು ಶಮನಮಾಡಬಲ್ಲರು, ಎಲ್ಲಾ ಜಗಳಗಳನ್ನು ಬಗೆಹರಿಸಬಲ್ಲರು, ಮುರಿದಂಥ ಯಾವುದೇ ಆಟಿಕೆಯನ್ನು ಸರಿಮಾಡಬಲ್ಲರು, ಅವರ ಸದಾ ಕುತೂಹಲಿ ಮನಸ್ಸುಗಳಲ್ಲಿ ತಟ್ಟನೆ ಏಳುವಂಥ ಯಾವುದೇ ಪ್ರಶ್ನೆಗೆ ಉತ್ತರ ಕೊಡಬಲ್ಲರೆಂಬ ನಿಸ್ಸಂಶಯ ಭರವಸೆ ಆ ಮಕ್ಕಳಿಗಿರುತ್ತದೆ. ಆ ಭರವಸೆಗೆ ತಾವು ಅರ್ಹರಲ್ಲವೆಂಬ ಅನಿಸಿಕೆ ಕೆಲವು ಹೆತ್ತವರಿಗಿದೆ, ಮತ್ತು ತಮ್ಮ ಇತಿಮಿತಿಗಳಿಂದಾಗಿ ಅವರಿಗೇ ಆಗಾಗ್ಗೆ ನಿರಾಶೆಯಾಗುತ್ತದೆ. ಈ ಪಾತ್ರಗಳಲ್ಲಿ ಹೆಚ್ಚಿನವುಗಳನ್ನು ವಹಿಸಲು ತಮ್ಮಿಂದಾಗದು ಎಂಬ ಕಾಡುತ್ತಿರುವ ಭಾವನೆಯು ಅವರನ್ನು ವ್ಯಥೆಗೀಡುಮಾಡುತ್ತದೆ.
11 ಯೆಹೋವನು ಸಹ ಒಬ್ಬ ಪ್ರೀತಿಯುಳ್ಳ ತಂದೆಯಾಗಿರುತ್ತಾನೆ. ಆದರೆ ಆತನು ತನ್ನ ಸ್ವಂತ ಪರಿಪೂರ್ಣ ಮಟ್ಟಗಳ ಚೌಕಟ್ಟಿನೊಳಗೆ ಇದ್ದುಕೊಂಡು, ಇರುವುದರಲ್ಲೇ ಅತ್ಯುತ್ತಮವಾದ ರೀತಿಯಲ್ಲಿ ತನ್ನ ಭೂಮಕ್ಕಳನ್ನು ಪರಿಪಾಲಿಸುವುದಕ್ಕಾಗಿ ವಹಿಸಲು ಆಗದಂಥ ಪಾತ್ರ ಯಾವುದೂ ಇಲ್ಲ. ಆದುದರಿಂದ ಯೆಹೋವ ಎಂಬ ಆತನ ಹೆಸರು ನಾವು ಆತನನ್ನು, ಊಹಿಸಸಾಧ್ಯವಿರುವುದರಲ್ಲೇ ಅತ್ಯುತ್ತಮನಾದ ತಂದೆಯಾಗಿ ನೆನಸುವಂತೆ ಮಾಡುತ್ತದೆ. (ಯಾಕೋಬ 1:17) ಮೋಶೆ ಮತ್ತು ಇತರ ನಂಬಿಗಸ್ತ ಇಸ್ರಾಯೇಲ್ಯರೆಲ್ಲರು, ಯೆಹೋವನು ತನ್ನ ಹೆಸರಿಗೆ ತಕ್ಕಂತೆ ನಡೆಯುವ ದೇವರೆಂಬುದನ್ನು ಅನುಭವದಿಂದ ತಿಳಿದರು. ಆತನು ತನ್ನನ್ನೇ ಒಬ್ಬ ಅಜೇತ ಸೇನಾಪತಿ, ನಿಸರ್ಗ ಶಕ್ತಿಗಳ ಒಡೆಯ, ಎಣೆಯಿಲ್ಲದ ನ್ಯಾಯವಿಧಾಯಕ, ನ್ಯಾಯಾಧೀಶ, ವಾಸ್ತುಶಿಲ್ಪಿ, ಅನ್ನಪಾನಗಳ ದಾತ, ಬಟ್ಟೆ ಮತ್ತು ಕೆರಗಳ ರಕ್ಷಕನು ಮುಂತಾದವುಗಳಾಗಿ ಮಾಡಿಕೊಂಡಾಗ ಅವರು ಆಶ್ಚರ್ಯಚಕಿತರಾಗಿ ನೋಡುತ್ತಾ ನಿಂತರು.
12. ಯೆಹೋವನ ಕಡೆಗೆ ಫರೋಹನ ಮನೋಭಾವವು ಮೋಶೆಗಿಂತ ಭಿನ್ನವಾಗಿದ್ದದ್ದು ಹೇಗೆ?
12 ಈ ರೀತಿಯಲ್ಲಿ ದೇವರು ತನ್ನ ವೈಯಕ್ತಿಕ ಹೆಸರನ್ನು ತಿಳಿಯಪಡಿಸಿದನು, ಅದರ ಅರ್ಥವನ್ನು ವಿವರಿಸಿ ಹೇಳಿದನು, ಮತ್ತು ತಾನು ತನ್ನ ಹೆಸರಿಗೆ ತಕ್ಕಂತೆ ಜೀವಿಸುವವನೆಂದೂ ರುಜುಪಡಿಸಿದನು. ನಾವು ಆತನನ್ನು ತಿಳಿಯುವಂತೆ ದೇವರು ಬಯಸುತ್ತಾನೆಂಬುದು ನಿಸ್ಸಂಶಯ. ನಾವು ಹೇಗೆ ಪ್ರತಿವರ್ತಿಸುತ್ತೇವೆ? ಮೋಶೆಯು ದೇವರನ್ನು ತಿಳಿದುಕೊಳ್ಳಲು ಬಯಸಿದನು. ಆ ತೀವ್ರಾಭಿಲಾಷೆಯು ಮೋಶೆಯ ಜೀವನ ಮಾರ್ಗವನ್ನು ರೂಪಿಸಿತು ಮತ್ತು ಅವನು ತನ್ನ ಸ್ವರ್ಗೀಯ ತಂದೆಗೆ ತುಂಬ ಸಮೀಪವಾಗುವಂತೆ ನಡಿಸಿತು. (ಅರಣ್ಯಕಾಂಡ 12:6-8; ಇಬ್ರಿಯ 11:27) ಆದರೆ ದುಃಖಕರ ಸಂಗತಿಯೇನೆಂದರೆ, ಮೋಶೆಯ ಸಮಕಾಲೀನರಲ್ಲಿ ಕೇವಲ ಕೆಲವು ಮಂದಿಗೆ ಅಂಥ ಅಪೇಕ್ಷೆಯಿತ್ತು. ಮೋಶೆಯು ಫರೋಹನಿಗೆ ಯೆಹೋವನ ಹೆಸರನ್ನು ಹೇಳಿ ಸೂಚಿಸಿದಾಗ, ಆ ಅಹಂಕಾರಿ ಐಗುಪ್ತ್ಯ ಸಾಮ್ರಾಟನು ಪ್ರತಿಕ್ರಿಯಿಸಿದ್ದು: “ಯೆಹೋವನೆಂಬವನು ಯಾರು?” (ವಿಮೋಚನಕಾಂಡ 5:2) ಯೆಹೋವನ ಕುರಿತು ಇನ್ನಷ್ಟನ್ನು ತಿಳಿಯಲು ಫರೋಹನು ಬಯಸಲಿಲ್ಲ. ಬದಲಿಗೆ, ಇಸ್ರಾಯೇಲ್ಯರ ದೇವರು ಅಮುಖ್ಯನು ಇಲ್ಲವೆ ಅಸಂಬದ್ಧನೆಂದು ಅವನು ತಿರಸ್ಕಾರಭಾವದಿಂದ ನೆನಸಿದನು. ಈ ಹೊರನೋಟವು ಇಂದೂ ಸರ್ವಸಾಮಾನ್ಯವಾಗಿದೆ. ಇದು, ಸಕಲ ಸತ್ಯಗಳಲ್ಲಿ ಅತ್ಯಂತ ಪ್ರಾಮುಖ್ಯವಾದ—ಯೆಹೋವನೇ ಪರಮಾಧಿಕಾರಿ ಕರ್ತನು ಎಂಬ ಸತ್ಯಕ್ಕೆ ಜನರನ್ನು ಕುರುಡರನ್ನಾಗಿ ಮಾಡಿರುತ್ತದೆ.
ಪರಮಾಧಿಕಾರಿ ಕರ್ತನಾದ ಯೆಹೋವ
13, 14. (ಎ) ಬೈಬಲಿನಲ್ಲಿ ಯೆಹೋವನಿಗೆ ಅನೇಕ ಬಿರುದುಗಳು ಇರುವುದೇಕೆ, ಮತ್ತು ಅವುಗಳಲ್ಲಿ ಕೆಲವು ಯಾವುವು? (“ ಯೆಹೋವನ ಕೆಲವು ಬಿರುದುಗಳು” ಚೌಕವನ್ನು ನೋಡಿರಿ.) (ಬಿ) “ಪರಮಾಧಿಕಾರಿ ಕರ್ತ”ನೆಂದು ಕರೆಯಲ್ಪಡಲು ಯೆಹೋವನೊಬ್ಬನೇ ಅರ್ಹನೇಕೆ?
13 ಯೆಹೋವನು ಎಷ್ಟು ಬಹುಮುಖ ಸಾಮರ್ಥ್ಯವುಳ್ಳವನೂ ಸನ್ನಿವೇಶಕ್ಕೆ ತಕ್ಕ ಹಾಗೆ ಹೊಂದಿಕೊಳ್ಳುವವನೂ ಆಗಿದ್ದಾನೆಂದರೆ, ಆತನಿಗೆ ಶಾಸ್ತ್ರವಚನಗಳಲ್ಲಿ ಯಥೋಚಿತವಾಗಿಯೇ ಅನೇಕಾನೇಕ ಬಿರುದುಗಳು ಕೊಡಲ್ಪಟ್ಟಿವೆ. ಈ ಬಿರುದುಗಳು ಆತನ ವೈಯಕ್ತಿಕ ಹೆಸರಿನೊಂದಿಗೆ ಸಂಘರ್ಷಿಸುವುದಿಲ್ಲ; ಬದಲಿಗೆ ಅವು, ಆತನ ನಾಮವು ಏನನ್ನು ಪ್ರತಿನಿಧಿಸುತ್ತದೊ ಅದರ ಕುರಿತು ನಮಗೆ ಹೆಚ್ಚನ್ನು ಕಲಿಸುತ್ತವೆ. ಉದಾಹರಣೆಗೆ, ಆತನು “ಪರಮಾಧಿಕಾರಿ ಕರ್ತನಾದ ಯೆಹೋವ” ಎಂದು ಕರೆಯಲ್ಪಟ್ಟಿದ್ದಾನೆ. (2 ಸಮುವೇಲ 7:22, NW) ಈ ಮಹೋನ್ನತ ಬಿರುದು, ಬೈಬಲಿನ ಮೂಲಗ್ರಂಥಪಾಠದಲ್ಲಿ ನೂರಾರು ಬಾರಿ ಕಂಡುಬರುತ್ತಿದ್ದು, ಯೆಹೋವನ ಪದವಿಯನ್ನು ನಮಗೆ ತಿಳಿಸುತ್ತದೆ. ಆತನೊಬ್ಬನೇ ಇಡೀ ವಿಶ್ವವನ್ನು ಆಳಲು ನ್ಯಾಯವಾದ ಹಕ್ಕುಳ್ಳವನಾಗಿದ್ದಾನೆ. ಏಕೆಂಬುದನ್ನು ಗಮನಿಸಿರಿ.
14 ಸೃಷ್ಟಿಕರ್ತನೋಪಾದಿ ಯೆಹೋವನು ಅಸದೃಶನು. ಪ್ರಕಟನೆ 4:11 ಹೇಳುವುದು: “ಕರ್ತನೇ, [“ಯೆಹೋವನೇ,” NW] ನಮ್ಮ ದೇವರೇ, ನೀನು ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಸಮಸ್ತವನ್ನು ಸೃಷ್ಟಿಸಿದಾತನು ನೀನೇ; ಎಲ್ಲವು ನಿನ್ನ ಚಿತ್ತದಿಂದಲೇ ಇದ್ದವು, ನಿನ್ನ ಚಿತ್ತದಿಂದಲೇ ನಿರ್ಮಿತವಾದವು.” ಈ ಘನಗಾಂಭೀರ್ಯವುಳ್ಳ ಮಾತುಗಳು ಬೇರೆ ಯಾವ ಜೀವಿಗೂ ಅನ್ವಯಿಸಲ್ಪಡಲಾರವು. ವಿಶ್ವದಲ್ಲಿರುವ ಸಕಲ ವಸ್ತುಗಳು ಯೆಹೋವನಿಂದಾಗಿಯೇ ಅಸ್ತಿತ್ವಕ್ಕೆ ಬಂದವು! ಆದುದರಿಂದ ಪರಮಾಧಿಕಾರಿ ಕರ್ತನೂ ಸಕಲ ಸೃಷ್ಟಿಯ ನಿರ್ಮಾಣಿಕನೂ ಆಗಿರುವವನಿಗೇ ತಕ್ಕದ್ದಾಗಿಯೆ ಸಲ್ಲಬೇಕಾದಂಥ ಪ್ರಭಾವ, ಮಾನ, ಬಲಗಳನ್ನು ಹೊಂದಲು ಯೆಹೋವನು ಯೋಗ್ಯನೆಂಬ ವಿಷಯದಲ್ಲಿ ಮರುಮಾತಿಲ್ಲ.
15. ಯೆಹೋವನು “ಸರ್ವಯುಗಗಳ ಅರಸ” ಎಂದು ಕರೆಯಲ್ಪಟ್ಟಿರುವುದೇಕೆ?
15 ಯೆಹೋವನೊಬ್ಬನಿಗೆ ಮಾತ್ರ ಅನ್ವಯಿಸಲ್ಪಡುವ ಇನ್ನೊಂದು ಬಿರುದು, “ಸರ್ವಯುಗಗಳ ಅರಸ” ಎಂದಾಗಿದೆ. (1 ತಿಮೊಥೆಯ 1:17) ಇದರ ಅರ್ಥವೇನು? ನಮ್ಮ ಸೀಮಿತ ಮನಸ್ಸಿಗೆ ಗ್ರಹಿಸಲು ಕಷ್ಟವಾಗುವಂಥ ಸಂಗತಿ ಏನೆಂದರೆ, ಯೆಹೋವನು ಭೂತಕಾಲದಲ್ಲಿ ಮತ್ತು ಭವಿಷ್ಯತ್ ಕಾಲದಲ್ಲೂ ನಿತ್ಯನಾಗಿರುತ್ತಾನೆ. ಕೀರ್ತನೆ 90:2 ಹೇಳುವುದು: “ಯುಗಯುಗಾಂತರಗಳಲ್ಲಿಯೂ ನೀನೇ ದೇವರು.” ಹಾಗಾದರೆ ಯೆಹೋವನಿಗೆ ಆದಿಯಿಲ್ಲ; ಆತನು ಯಾವಾಗಲೂ ಅಸ್ತಿತ್ವದಲ್ಲಿದ್ದನು. ಆತನನ್ನು ಯೋಗ್ಯವಾಗಿಯೆ “ಮಹಾವೃದ್ಧನು” ಎಂದು ಕರೆಯಲಾಗಿದೆ—ವಿಶ್ವದಲ್ಲಿ ಬೇರೆ ಯಾರೊಬ್ಬನೂ ಅಥವಾ ಯಾವುದೊಂದೂ ಅಸ್ತಿತ್ವಕ್ಕೆ ಬರುವ ಮುಂಚೆ ಸರ್ವ ಕಾಲಗಳಲ್ಲಿ ಆತನು ಅಸ್ತಿತ್ವದಲ್ಲಿದ್ದನು! (ದಾನಿಯೇಲ 7:9, 13, 22) ಪರಮಾಧಿಕಾರಿ ಕರ್ತನಾಗಿರುವ ಆತನ ಹಕ್ಕನ್ನು ಯಾರು ತಾನೇ ನ್ಯಾಯವಾಗಿ ಪ್ರಶ್ನಿಸಾರು?
16, 17. (ಎ) ಯೆಹೋವನನ್ನು ನಾವೇಕೆ ನೋಡಲಾರೆವು, ಮತ್ತು ಅದು ನಮ್ಮನ್ನೇಕೆ ಆಶ್ಚರ್ಯಗೊಳಿಸಬಾರದು? (ಬಿ) ನಾವು ಕಣ್ಣಾರೆ ಕಂಡು ಸ್ಪರ್ಶಿಸುವ ಯಾವುದಕ್ಕಿಂತಲೂ ಯೆಹೋವನು ಹೆಚ್ಚು ನೈಜವಾಗಿರುವುದು ಯಾವ ಅರ್ಥದಲ್ಲಿ?
16 ಆದರೂ ಫರೋಹನಂತೆ ಆ ಹಕ್ಕಿನ ಕುರಿತು ಸವಾಲೆತ್ತುವ ಕೆಲವರು ಇದ್ದಾರೆ. ಇದರ ಆಂಶಿಕ ಕಾರಣ, ಅಪರಿಪೂರ್ಣ ಮಾನವರು ಕೇವಲ ತಮ್ಮ ಕಣ್ಣಿಗೆ ಕಾಣುವ ವಿಷಯಗಳ ಮೇಲೆ ತೀರಾ ಹೆಚ್ಚು ಭರವಸೆಯನ್ನಿಡುವುದೇ ಆಗಿದೆ. ಆದರೆ ಪರಮಾಧಿಕಾರಿ ಕರ್ತನನ್ನು ನಾವು ಕಣ್ಣಿನಿಂದ ಕಾಣಲಾರೆವು. ಆತನು ಆತ್ಮಜೀವಿಯಾಗಿರುತ್ತಾನೆ, ಮಾನವ ನೇತ್ರಗಳಿಗೆ ಅದೃಶ್ಯನಾಗಿರುತ್ತಾನೆ. (ಯೋಹಾನ 4:24) ಅದಲ್ಲದೆ ರಕ್ತಮಾಂಸಧಾರಿಯಾದ ಮನುಷ್ಯನೊಬ್ಬನು ಯೆಹೋವ ದೇವರ ಸಮ್ಮುಖದಲ್ಲಿ ನಿಂತರೆ, ಅದು ಅವನಿಗೆ ಮಾರಕವಾಗಿರುವುದು. ಯೆಹೋವನು ತಾನೇ ಮೋಶೆಗೆ ಹೇಳಿದ್ದು: “ನೀನು ನನ್ನ ಮುಖವನ್ನು ನೋಡುವದಕ್ಕಾಗದು; ಮನುಷ್ಯರಲ್ಲಿ ಯಾವನೂ ನನ್ನನ್ನು ನೋಡಿ ಜೀವಿಸಲಾರನು.”—ವಿಮೋಚನಕಾಂಡ 33:20; ಯೋಹಾನ 1:18.
17 ಇದು ನಮ್ಮನ್ನು ಆಶ್ಚರ್ಯಗೊಳಿಸಬಾರದು. ಮೋಶೆಯು ಕಂಡದ್ದು ಯೆಹೋವನ ದಿವ್ಯ ಪ್ರಭೆಯ ಅಲ್ಪಾಂಶವನ್ನು ಮಾತ್ರವೇ, ಅದೂ ಒಬ್ಬ ದೇವದೂತ ಪ್ರತಿನಿಧಿಯ ಮುಖಾಂತರ. ಹೀಗಿದ್ದೂ ಪರಿಣಾಮವೇನಾಗಿತ್ತು? ಮೋಶೆಯ ಮುಖವು ಆಮೇಲೆ ಸ್ವಲ್ಪ ಕಾಲದ ವರೆಗೆ “ಪ್ರಕಾಶಮಾನ”ವಾಗಿತ್ತು. ಮೋಶೆಯ ಮುಖವನ್ನು ನೇರವಾಗಿ ನೋಡುವುದಕ್ಕೂ ಇಸ್ರಾಯೇಲ್ಯರು ಭಯಪಟ್ಟರು. (ವಿಮೋಚನಕಾಂಡ 33:21-23; 34:5-7, 29, 30) ಹೀಗಿರಲಾಗಿ, ಸ್ವತಃ ಪರಮಾಧಿಕಾರಿ ಕರ್ತನು ತನ್ನೆಲ್ಲಾ ದಿವ್ಯ ಪ್ರಭೆಯಿಂದ ಬೆಳಗುವಾಗ ಯಾವನೇ ಬರಿಯ ಮಾನವನು ಆತನನ್ನು ನೋಡಲು ಸಾಧ್ಯವೇ ಇಲ್ಲವೆಂಬುದು ನಿಶ್ಚಯ! ಹಾಗಾದರೆ ಇದರರ್ಥ, ಆತನು ನಾವೇನನ್ನು ಕಣ್ಣಾರೆ ಕಂಡು ಸ್ಪರ್ಶಿಸಸಾಧ್ಯವಿದೆಯೊ ಅದರಷ್ಟು ನೈಜನಲ್ಲವೆಂದೊ? ಇಲ್ಲ, ಯಾಕಂದರೆ ನಾವು ಕಣ್ಣಾರೆ ಕಾಣದ ಅನೇಕ ವಿಷಯಗಳನ್ನು ನಿಜವೆಂದು ಕೂಡಲೆ ಒಪ್ಪುತ್ತೇವಲ್ಲಾ. ಉದಾಹರಣೆಗೆ ಗಾಳಿ, ರೇಡಿಯೊ ತರಂಗಗಳು, ಮತ್ತು ಮನಸ್ಸಿನ ಆಲೋಚನೆಗಳ ಕುರಿತೇನು? ಅದಲ್ಲದೆ, ಯೆಹೋವನು ಕಾಯಂ ಇರುವಾತನು, ಆತನ ಮೇಲೆ ಕಾಲಚಕ್ರದ ಉರುಳುವಿಕೆ, ಹೌದು, ಅಗಣಿತ ಬಿಲ್ಯಾಂತರ ವರ್ಷಗಳೂ ಯಾವುದೇ ಪ್ರಭಾವವನ್ನು ಬೀರುವುದಿಲ್ಲ! ಆ ಅರ್ಥದಲ್ಲಿ, ನಾವು ಕಣ್ಣಾರೆ ಕಾಣುವ ಅಥವಾ ಸ್ಪರ್ಶಿಸಸಾಧ್ಯವಿರುವ ಯಾವುದಕ್ಕಿಂತಲೂ ಆತನು ಎಷ್ಟೋ ಹೆಚ್ಚು ನೈಜ ವ್ಯಕ್ತಿಯಾಗಿರುತ್ತಾನೆ. ಯಾಕಂದರೆ ಭೌತಿಕ ಕ್ಷೇತ್ರವಂತೂ ಕಾಲ ಮತ್ತು ಅಳಿವಿಗೆ ತುತ್ತಾಗಿ ಗತಿಸಿಹೋಗುತ್ತದೆ. (ಮತ್ತಾಯ 6:19) ಹಾಗಾದರೆ, ನಾವಾತನನ್ನು ಬರಿಯ ಒಂದು ಭಾವರೂಪದ, ವ್ಯಕ್ತಿಸ್ವರೂಪವಿಲ್ಲದ ಶಕ್ತಿಯಾಗಿ ಇಲ್ಲವೆ ಅರ್ಥಮಾಡಲಾಗದ ಆದಿಕಾರಣವಾಗಿ ನೆನಸಬೇಕೊ? ನೋಡೋಣ.
ವ್ಯಕ್ತಿತ್ವವುಳ್ಳ ದೇವರು
18. ಯೆಹೆಜ್ಕೇಲನಿಗೆ ಯಾವ ದರ್ಶನವನ್ನು ಕೊಡಲಾಯಿತು, ಮತ್ತು ಯೆಹೋವನ ಹತ್ತಿರದಲ್ಲಿದ್ದ ನಾಲ್ಕು ‘ಜೀವಿಗಳ’ ಮುಖಗಳು ಏನನ್ನು ಸಂಕೇತಿಸುತ್ತವೆ?
18 ನಾವು ದೇವರನ್ನು ಕಾಣಶಕ್ತರಾಗದಿದ್ದರೂ, ಸ್ವರ್ಗದ ನಸುನೋಟಗಳನ್ನು ಕೊಡುವಂಥ ರೋಮಾಂಚಕ ವಚನ ಭಾಗಗಳು ಬೈಬಲಿನಲ್ಲಿವೆ. ಯೆಹೆಜ್ಕೇಲನ ಪುಸ್ತಕದ ಒಂದನೆಯ ಅಧ್ಯಾಯವು ಇದಕ್ಕೆ ಒಂದು ಉದಾಹರಣೆ. ಯೆಹೋವನ ಸ್ವರ್ಗೀಯ ಸಂಸ್ಥೆಯ ಒಂದು ದರ್ಶನವನ್ನು ಯೆಹೆಜ್ಕೇಲನಿಗೆ ಕೊಡಲಾಯಿತು. ಅದರಲ್ಲಿ ಅವನು ಒಂದು ಭಾರಿ ದಿವ್ಯ ರಥವನ್ನು ಕಾಣುತ್ತಾನೆ. ಅದರಲ್ಲಿ ವಿಶೇಷವಾಗಿ ಭಾವಪ್ರಚೋದಕವಾದಂಥ ವಿಷಯವು, ಯೆಹೋವನ ಸುತ್ತಮುತ್ತಲೂ ಇರುವ ಬಲಿಷ್ಠ ಆತ್ಮಜೀವಿಗಳ ವರ್ಣನೆಯೇ. (ಯೆಹೆಜ್ಕೇಲ 1:4-10) ಈ ‘ಜೀವಿಗಳು’ ಯೆಹೋವನೊಂದಿಗೆ ಆಪ್ತ ಸಹವಾಸದಲ್ಲಿರುತ್ತವೆ, ಮತ್ತು ಅವುಗಳ ತೋರಿಕೆಯು ಅವುಗಳು ಸೇವೆಸಲ್ಲಿಸುವ ದೇವರ ಕುರಿತ ಮಹತ್ವದ ವಿಷಯವನ್ನು ನಮಗೆ ತಿಳಿಸುತ್ತದೆ. ಅವುಗಳಲ್ಲಿ ಪ್ರತಿಯೊಂದಕ್ಕೆ ನಾಲ್ಕು ನಾಲ್ಕು ಮುಖಗಳಿವೆ—ಹೋರಿಯದ್ದು, ಸಿಂಹದ್ದು, ಗರುಡಪಕ್ಷಿಯದ್ದು, ಮತ್ತು ಮನುಷ್ಯನದ್ದು. ಇವು ಯೆಹೋವನ ವ್ಯಕ್ತಿತ್ವದ ನಾಲ್ಕು ಎದ್ದುಕಾಣುವ ಗುಣಗಳನ್ನು ಸಂಕೇತಿಸುತ್ತವೆಂದು ವ್ಯಕ್ತವಾಗುತ್ತದೆ.—ಪ್ರಕಟನೆ 4:6-8, 10.
19. ಯಾವ ಗುಣವು (ಎ) ಹೋರಿಯ ಮುಖದಿಂದ (ಬಿ) ಸಿಂಹದ ಮುಖದಿಂದ (ಸಿ) ಗರುಡಪಕ್ಷಿಯ ಮುಖದಿಂದ (ಡಿ) ಮನುಷ್ಯ ಮುಖದಿಂದ ಪ್ರತಿನಿಧಿಸಲ್ಪಟ್ಟಿದೆ?
19 ಬೈಬಲಿನಲ್ಲಿ ಹೋರಿಯು ಹೆಚ್ಚಾಗಿ ಶಕ್ತಿಯನ್ನು ಪ್ರತಿನಿಧಿಸುತ್ತದೆ, ಮತ್ತು ಇದು ಸರಿಯಾಗಿ ಒಪ್ಪುತ್ತದೆ ಯಾಕಂದರೆ ಹೋರಿಯು ಬಹಳ ಬಲಶಾಲಿಯಾದ ಪ್ರಾಣಿ. ಇನ್ನೊಂದು ಕಡೆ, ಸಿಂಹವಾದರೊ ನ್ಯಾಯವನ್ನು ಚಿತ್ರಿಸುತ್ತದೆ ಯಾಕಂದರೆ ನಿಜ ನ್ಯಾಯಕ್ಕಾಗಿ ಧೈರ್ಯ ಅಗತ್ಯ, ಮತ್ತು ಸಿಂಹಗಳು ಈ ಗುಣಕ್ಕಾಗಿ ಪ್ರಖ್ಯಾತವಾಗಿವೆ. ಗರುಡಪಕ್ಷಿಗಳು ತಮ್ಮ ಸೂಕ್ಷ್ಮ ದೃಷ್ಟಿಗೆ ಖ್ಯಾತಿಹೊಂದಿವೆ, ಅನೇಕ ಮೈಲುಗಳಷ್ಟು ದೂರದಲ್ಲಿರುವ ಚಿಕ್ಕಪುಟ್ಟ ವಸ್ತುಗಳನ್ನೂ ಅವು ಕಾಣಶಕ್ತವಾಗಿವೆ. ಹೀಗೆ ಗರುಡಪಕ್ಷಿಯ ಮುಖವು, ದೇವರ ದೂರದೃಷ್ಟಿಯುಳ್ಳ ವಿವೇಕವನ್ನು ಚೆನ್ನಾಗಿ ಚಿತ್ರಿಸುತ್ತದೆ. ಮನುಷ್ಯ ಮುಖದ ಕುರಿತಾಗಿ ಏನು? ದೇವರ ಸ್ವರೂಪದಲ್ಲಿ ನಿರ್ಮಿಸಲ್ಪಟ್ಟಿರುವ ಮನುಷ್ಯನಾದರೊ ದೇವರ ಪ್ರಧಾನ ಗುಣವಾದ ಪ್ರೀತಿಯನ್ನು ಪ್ರದರ್ಶಿಸುವ ಸಾಮರ್ಥ್ಯದಲ್ಲಿ ಅಸದೃಶನು. (ಆದಿಕಾಂಡ 1:26) ಯೆಹೋವನ ವ್ಯಕ್ತಿತ್ವದ ಈ ಗುಣಗಳು—ಶಕ್ತಿ, ನ್ಯಾಯ, ವಿವೇಕ, ಮತ್ತು ಪ್ರೀತಿಯು—ಶಾಸ್ತ್ರವಚನಗಳಲ್ಲಿ ಎಷ್ಟು ಪದೇಪದೇ ಎತ್ತಿಹೇಳಲ್ಪಟ್ಟಿವೆಯೆಂದರೆ ಅವನ್ನು ದೇವರ ಪ್ರಾಮುಖ್ಯ ಗುಣಗಳೆಂದು ಹೇಳಬಹುದಾಗಿದೆ.
20. ಯೆಹೋವನ ವ್ಯಕ್ತಿತ್ವವು ಬದಲಾಗಿರಬಹುದೆಂದು ನಾವು ಚಿಂತಿಸುವ ಅಗತ್ಯವಿದೆಯೆ, ಮತ್ತು ನೀವು ಹಾಗೆ ಉತ್ತರಿಸುವುದೇಕೆ?
20 ಬೈಬಲಿನಲ್ಲಿ ದೇವರ ಕುರಿತು ಈ ರೀತಿಯ ವರ್ಣನೆ ಕೊಡಲ್ಪಟ್ಟು ಸಾವಿರಾರು ವರ್ಷಗಳು ದಾಟಿರಲಾಗಿ, ಆತನು ಒಂದುವೇಳೆ ಬದಲಾಗಿರಬಹುದೆಂದು ನಾವು ಚಿಂತಿಸಬೇಕೊ? ಇಲ್ಲ, ದೇವರ ವ್ಯಕ್ತಿತ್ವವು ಕಿಂಚಿತ್ತೂ ಬದಲಾಗುವುದಿಲ್ಲ. ಆತನೇ ನಮಗೆ ಹೇಳುವುದು: “ಯೆಹೋವನಾದ ನಾನು ಮಾರ್ಪಟ್ಟಿಲ್ಲ.” (ಮಲಾಕಿಯ 3:6) ಯೆಹೋವನು, ಹಠಾತ್ತನೆ ತನಗೆ ಮನಸ್ಸುಬಂದಂತೆ ಬದಲಾಗುವ ಬದಲಿಗೆ, ಪ್ರತಿಯೊಂದು ಸನ್ನಿವೇಶದಲ್ಲೂ ಆತನು ಪ್ರತಿಕ್ರಿಯಿಸುವ ರೀತಿಯಲ್ಲಿ ಒಬ್ಬ ಆದರ್ಶ ತಂದೆಯಾಗಿ ಪರಿಣಮಿಸುತ್ತಾನೆ. ಪ್ರತಿ ಸನ್ನಿವೇಶಕ್ಕೆ ಅತಿ ತಕ್ಕದಾದ ತನ್ನ ವ್ಯಕ್ತಿತ್ವದ ಗುಣಗಳನ್ನು ಆತನು ಪ್ರದರ್ಶಿಸುತ್ತಾನೆ. ಆತನ ನಾಲ್ಕು ಪ್ರಮುಖ ಗುಣಗಳಲ್ಲಿ ಪ್ರಧಾನ ಗುಣವು ಪ್ರೀತಿಯೆ. ದೇವರ ಪ್ರತಿಯೊಂದು ಕಾರ್ಯದಲ್ಲೂ ಅದು ತೋರಿಬರುತ್ತದೆ. ಆತನು ತನ್ನ ಶಕ್ತಿ, ನ್ಯಾಯ, ಮತ್ತು ವಿವೇಕವನ್ನು ಪ್ರೀತಿಪರ ವಿಧದಲ್ಲಿ ತೋರಿಸುತ್ತಾನೆ. ವಾಸ್ತವದಲ್ಲಿ, ದೇವರ ಮತ್ತು ಆತನ ಈ ಗುಣದ ಕುರಿತು ಬೈಬಲು ಒಂದು ಅಸಾಧಾರಣ ವಿಷಯವನ್ನು ತಿಳಿಸುತ್ತದೆ. “ದೇವರು ಪ್ರೀತಿಸ್ವರೂಪಿಯು” ಎನ್ನುತ್ತದೆ ಅದು. (1 ಯೋಹಾನ 4:8) ದೇವರಲ್ಲಿ ಪ್ರೀತಿ ಇದೆ ಎಂದಾಗಲಿ, ದೇವರು ಪ್ರೀತಿಸುವವನು ಎಂದಾಗಲಿ ಅದು ಹೇಳುವುದಿಲ್ಲ ಎಂಬುದನ್ನು ಗಮನಿಸಿರಿ. ಬದಲಿಗೆ ದೇವರು ಪ್ರೀತಿ ಸ್ವರೂಪಿ ಎಂದು ಅದು ಹೇಳುತ್ತದೆ. ಆತನು ಮಾಡುವ ಎಲ್ಲವನ್ನು ಪ್ರೇರೇಪಿಸುವಂಥದ್ದು ಆತನ ಮೂಲಗುಣವಾದ ಪ್ರೀತಿಯೆ.
“ಆಹಾ, ಈತನೇ ನಮ್ಮ ದೇವರು”
21. ಯೆಹೋವನ ಗುಣಗಳ ಕುರಿತು ನಾವು ಹೆಚ್ಚೆಚ್ಚು ಉತ್ತಮವಾಗಿ ತಿಳಿದುಕೊಂಡಂತೆ ನಮಗೆ ಹೇಗನಿಸುವುದು?
21 ಒಬ್ಬ ಪುಟ್ಟ ಬಾಲಕನು ತನ್ನ ಸ್ನೇಹಿತರಿಗೆ ತನ್ನ ತಂದೆಯ ಕಡೆಗೆ ಬೆರಳು ತೋರಿಸಿ, ನಿಷ್ಕಲ್ಮಷ ಸಂತಸ ಹಾಗೂ ಹೆಮ್ಮೆಯಿಂದ “ಅವರೇ ನನ್ನಪ್ಪ” ಎನ್ನುವುದನ್ನು ನೋಡಿದ್ದೀರೊ? ಯೆಹೋವನ ಕುರಿತೂ ತದ್ರೀತಿಯ ಅನಿಸಿಕೆಯನ್ನು ಹೊಂದಲು ದೇವರ ಆರಾಧಕರಿಗೆ ಸಕಾರಣವಿದೆ. “ಆಹಾ, ಈತನೇ ನಮ್ಮ ದೇವರು” ಎಂದು ನಂಬಿಗಸ್ತ ಜನರು ಉದ್ಗಾರವೆತ್ತುವ ಸಮಯವು ಬರುವುದೆಂದು ಬೈಬಲು ಮುಂತಿಳಿಸುತ್ತದೆ. (ಯೆಶಾಯ 25:8, 9) ಯೆಹೋವನ ಗುಣಗಳ ಕುರಿತು ನೀವು ಎಷ್ಟು ಹೆಚ್ಚು ಗಾಢವಾದ ತಿಳಿವಳಿಕೆಯನ್ನು ಪಡೆದುಕೊಳ್ಳುತ್ತೀರೊ ಅಷ್ಟು ಹೆಚ್ಚಾಗಿ ಒಬ್ಬ ಅತ್ಯುತ್ತಮ ಪಿತನು ನಿಮಗಿದ್ದಾನೆಂಬ ಅನಿಸಿಕೆ ನಿಮಗಾಗುವುದು.
22, 23. ಬೈಬಲು ನಮ್ಮ ಸ್ವರ್ಗೀಯ ಪಿತನನ್ನು ಹೇಗೆ ವರ್ಣಿಸುತ್ತದೆ, ಮತ್ತು ನಾವಾತನ ಸಮೀಪಕ್ಕೆ ಬರುವಂತೆ ಆತನು ಬಯಸುತ್ತಾನೆಂದು ನಮಗೆ ತಿಳಿದಿರುವುದು ಹೇಗೆ?
22 ಕೆಲವು ವಿರಕ್ತ ಧಾರ್ಮಿಕರು ಮತ್ತು ತತ್ತ್ವಜ್ಞಾನಿಗಳು, ಈ ತಂದೆಯು ನಿರ್ದಯನೂ, ಪ್ರತ್ಯೇಕನೂ, ದೂರವಾಗಿರುವವನೂ ಆಗಿದ್ದಾನೆಂದು ಕಲಿಸುತ್ತಾರಾದರೂ, ಆತನು ಆ ರೀತಿಯ ಪಿತನಲ್ಲ. ಒಬ್ಬ ನಿರ್ದಯಿ ದೇವರ ಕಡೆಗೆ ನಾವೆಂದೂ ಆಕರ್ಷಿಸಲ್ಪಡಲಾರೆವು, ಮತ್ತು ಬೈಬಲು ನಮ್ಮ ಸ್ವರ್ಗೀಯ ತಂದೆಯನ್ನು ಆ ರೀತಿಯಲ್ಲಿ ವರ್ಣಿಸುವುದೂ ಇಲ್ಲ. ಬದಲಿಗೆ ಅದು ಆತನನ್ನು “ಸಂತೋಷಭರಿತ ದೇವರು” ಎಂದು ಕರೆಯುತ್ತದೆ. (1 ತಿಮೊಥೆಯ 1:11, NW) ಆತನಲ್ಲಿ ತೀಕ್ಷ್ಣವಾದ ಹಾಗೂ ಕೋಮಲವಾದ ಭಾವನೆಗಳಿವೆ. ಆತನ ಬುದ್ಧಿಶಕ್ತಿಯುಳ್ಳ ಸೃಷ್ಟಿಜೀವಿಗಳು ಅವರ ಸುಕ್ಷೇಮಕ್ಕಾಗಿ ಆತನು ಕೊಟ್ಟಿರುವ ಮಾರ್ಗದರ್ಶಕಗಳನ್ನು ಉಲ್ಲಂಘಿಸುವಾಗ ಆತನು “ಹೃದಯದಲ್ಲಿ ನೊಂದು”ಕೊಳ್ಳುತ್ತಾನೆ. (ಆದಿಕಾಂಡ 6:6) ಆದರೆ ಆತನ ವಾಕ್ಯಕ್ಕನುಸಾರ ನಾವು ವಿವೇಕದಿಂದ ವರ್ತಿಸುವಾಗ, ನಾವಾತನ ಹೃದಯವನ್ನು “ಸಂತೋಷಪಡಿಸು”ತ್ತೇವೆ.—ಜ್ಞಾನೋಕ್ತಿ 27:11.
23 ನಮ್ಮ ತಂದೆಯು ನಾವಾತನ ಸಮೀಪಕ್ಕೆ ಬರುವಂತೆ ಬಯಸುತ್ತಾನೆ. ನಾವು ಆತನಿಗಾಗಿ ‘ತಡವಾಡಿ ಕಂಡುಕೊಳ್ಳುವಂತೆ’ ಆತನ ವಾಕ್ಯವು ನಮ್ಮನ್ನು ಉತ್ತೇಜಿಸುತ್ತದೆ. ವಾಸ್ತವದಲ್ಲಿ “ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ.” (ಅ. ಕೃತ್ಯಗಳು 17:27) ಆದರೂ, ವಿಶ್ವದ ಪರಮಾಧಿಕಾರಿ ಕರ್ತನಾದ ಆತನ ಸಮೀಪಕ್ಕೆ ಬರಲು ಮನುಷ್ಯ ಮಾತ್ರದವರಾದ ನಮಗೆ ಹೇಗೆ ಸಾಧ್ಯ?
a ಕನ್ನಡದಲ್ಲಿ ಲಭ್ಯವಿಲ್ಲ.