ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 30

“ಪ್ರೀತಿಯಲ್ಲಿ ನಡೆದುಕೊಳ್ಳಿರಿ”

“ಪ್ರೀತಿಯಲ್ಲಿ ನಡೆದುಕೊಳ್ಳಿರಿ”

1-3. ಪ್ರೀತಿಯನ್ನು ತೋರಿಸುವುದರಲ್ಲಿ ಯೆಹೋವನ ಮಾದರಿಯನ್ನು ನಾವು ಅನುಕರಿಸುವಾಗ, ಏನು ಫಲಿಸುತ್ತದೆ?

 “ತೆಗೆದುಕೊಳ್ಳುವದಕ್ಕಿಂತಲೂ ಕೊಡುವುದರಲ್ಲೇ ಹೆಚ್ಚಿನ ಸಂತೋಷವಿದೆ.” (ಅ. ಕೃತ್ಯಗಳು 20:​35, NW) ಯೇಸುವಿನ ಈ ಮಾತುಗಳು ಈ ಮಹತ್ವಪೂರ್ಣ ಸತ್ಯವನ್ನು ಒತ್ತಿಹೇಳುತ್ತವೆ: ನಿಸ್ವಾರ್ಥ ಪ್ರೀತಿಯು ತನ್ನ ಸ್ವಂತ ಪ್ರತಿಫಲವನ್ನು ಫಲಿಸುತ್ತದೆ. ಪ್ರೀತಿಯನ್ನು ಪಡೆದುಕೊಳ್ಳುವುದರಿಂದ ತುಂಬ ಸಂತೋಷ ಸಿಗುತ್ತದಾದರೂ, ಪ್ರೀತಿಯನ್ನು ಕೊಡುವುದರಲ್ಲಿ ಅಥವಾ ಇತರರಿಗೆ ತೋರಿಸುವುದರಲ್ಲಿ ಇನ್ನೂ ಅಧಿಕವಾದ ಸಂತೋಷವು ಇದೆ.

2 ಇದನ್ನು ನಮ್ಮ ಸ್ವರ್ಗೀಯ ತಂದೆಯು ತಿಳಿದಿರುವಷ್ಟು ಉತ್ತಮವಾಗಿ ಬೇರೆ ಯಾರೂ ತಿಳಿದಿಲ್ಲ. ಈ ವಿಭಾಗದ ಹಿಂದಿನ ಅಧ್ಯಾಯಗಳಲ್ಲಿ ನಾವು ಕಂಡ ಪ್ರಕಾರ, ಯೆಹೋವನು ತಾನೇ ಪ್ರೀತಿಯ ಪರಮೋಚ್ಚ ಮಾದರಿಯಾಗಿದ್ದಾನೆ. ಆತನು ಪ್ರೀತಿಯನ್ನು ತೋರಿಸಿರುವ ವಿಧಗಳಿಗಿಂತಲೂ ಅಧಿಕ ಮಹತ್ತಮ ವಿಧದಲ್ಲಿ ಅಥವಾ ಅಧಿಕ ಕಾಲಾವಧಿಯ ತನಕ ಪ್ರೀತಿಯನ್ನು ತೋರಿಸಿರುವವರು ಬೇರೆ ಯಾರೂ ಇಲ್ಲ. ಹೀಗಿರುವಾಗ, ಆತನು ‘ಸಂತೋಷಭರಿತ ದೇವರು’ ಎಂದು ಕರೆಯಲ್ಪಟ್ಟಿರುವುದರಲ್ಲಿ ಆಶ್ಚರ್ಯವೇನಿಲ್ಲ, ಅಲ್ಲವೇ?​—1 ತಿಮೊಥೆಯ 1:​11, NW.

3 ನಮ್ಮ ಪ್ರೀತಿಯ ದೇವರು ನಾವು ಆತನಂತಾಗಲು ಪ್ರಯತ್ನಿಸಬೇಕೆಂದು ಬಯಸುತ್ತಾನೆ, ವಿಶೇಷವಾಗಿ ಪ್ರೀತಿಯನ್ನು ತೋರಿಸುವ ವಿಷಯದಲ್ಲಿ. ಎಫೆಸ 5:1, 2 ನಮಗೆ ಹೀಗನ್ನುತ್ತದೆ: “ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಸರಿಸುವವರಾಗಿರಿ [“ಅನುಕರಿಸುವವರಾಗಿರಿ,” NW]. . . . ಪ್ರೀತಿಯಲ್ಲಿ ನಡೆದುಕೊಳ್ಳಿರಿ.” ಪ್ರೀತಿಯನ್ನು ತೋರಿಸುವುದರಲ್ಲಿ ನಾವು ಯೆಹೋವನ ಮಾದರಿಯನ್ನು ಅನುಕರಿಸುವಾಗ, ಕೊಡುವುದರಲ್ಲಿರುವ ಹೆಚ್ಚಿನ ಸಂತೋಷ ನಮಗೆ ಲಭಿಸುವುದು. ನಾವು ಯೆಹೋವನನ್ನು ಮೆಚ್ಚಿಸುತ್ತಿದ್ದೇವೆಂಬ ಅರಿವಿನಿಂದಲೂ ನಮಗೆ ಹೆಚ್ಚಿನ ಸಂತೃಪ್ತಿಯು ದೊರಕುತ್ತದೆ, ಯಾಕಂದರೆ ‘ಒಬ್ಬರನ್ನೊಬ್ಬರು ಪ್ರೀತಿಸಿರಿ’ ಎಂದು ಆತನ ವಾಕ್ಯವು ನಮ್ಮನ್ನು ಉತ್ತೇಜಿಸುತ್ತದೆ. (ರೋಮಾಪುರ 13:8) ಆದರೂ ನಾವೇಕೆ ‘ಪ್ರೀತಿಯಲ್ಲಿ ನಡೆದುಕೊಳ್ಳಬೇಕೆಂಬುದಕ್ಕೆ’ ಇನ್ನಿತರ ಕಾರಣಗಳೂ ಇವೆ.

ಪ್ರೀತಿಯು ಏಕೆ ಆವಶ್ಯಕ

4, 5. ಜೊತೆ ವಿಶ್ವಾಸಿಗಳಿಗೆ ನಾವು ಸ್ವತ್ಯಾಗದ ಪ್ರೀತಿಯನ್ನು ತೋರಿಸುವುದು ಏಕೆ ಪ್ರಾಮುಖ್ಯವಾಗಿದೆ?

4 ಜೊತೆ ವಿಶ್ವಾಸಿಗಳಿಗೆ ನಾವು ಪ್ರೀತಿಯನ್ನು ತೋರಿಸುವುದು ಪ್ರಾಮುಖ್ಯವಾಗಿದೆಯೇಕೆ? ಸರಳವಾಗಿ ಹೇಳುವುದಾದರೆ, ಪ್ರೀತಿಯೇ ನಿಜ ಕ್ರೈಸ್ತತ್ವದ ಸಾರ. ಪ್ರೀತಿಯಿಲ್ಲದೆ ನಾವು ಜೊತೆ ಕ್ರೈಸ್ತರೊಂದಿಗೆ ಆಪ್ತ ಬಂಧವನ್ನು ಬೆಳೆಸಲಾರೆವು; ಅದಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾಗಿ, ಪ್ರೀತಿಯಿಲ್ಲದಿದ್ದರೆ ನಮಗೆ ಯೆಹೋವನ ದೃಷ್ಟಿಯಲ್ಲಿ ಏನೂ ಬೆಲೆಯಿಲ್ಲ. ಈ ಸತ್ಯಗಳನ್ನು ದೇವರ ವಾಕ್ಯವು ಹೇಗೆ ಎತ್ತಿಹೇಳುತ್ತದೆಂಬುದನ್ನು ತುಸು ಪರಿಗಣಿಸಿರಿ.

5 ತನ್ನ ಭೂಜೀವಿತದ ಕೊನೆಯ ರಾತ್ರಿಯಂದು ಯೇಸು ತನ್ನ ಹಿಂಬಾಲಕರಿಗೆ ಹೇಳಿದ್ದು: “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು; ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬದೇ. ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾನ 13:34, 35) “ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ”​—ಹೌದು, ಯೇಸು ತೋರಿಸಿದಂಥ ಪ್ರೀತಿಯನ್ನು ತೋರಿಸುವಂತೆ ನಾವು ಆಜ್ಞಾಪಿಸಲ್ಪಟ್ಟಿದ್ದೇವೆ. ಅಧ್ಯಾಯ 29ರಲ್ಲಿ, ಯೇಸು ಇತರರ ಅಗತ್ಯಗಳನ್ನು ಮತ್ತು ಅಭಿರುಚಿಗಳನ್ನು ತನ್ನವುಗಳಿಗಿಂತ ಮುಂದಿಡುತ್ತಾ ಸ್ವತ್ಯಾಗದ ಪ್ರೀತಿಯನ್ನು ತೋರಿಸುವುದರಲ್ಲಿ ಇಟ್ಟ ಅತ್ಯುತ್ಕೃಷ್ಟ ಮಾದರಿಯನ್ನು ನಾವು ನೋಡಿದೆವು. ನಾವು ಸಹ ನಿಸ್ವಾರ್ಥ ಪ್ರೀತಿಯನ್ನು ತೋರಿಸಬೇಕು, ಮತ್ತು ನಾವದನ್ನು ಎಷ್ಟು ಸ್ಪಷ್ಟವಾದ ರೀತಿಯಲ್ಲಿ ತೋರಿಸಬೇಕೆಂದರೆ, ಕ್ರೈಸ್ತ ಸಭೆಯಿಂದ ಹೊರಗಿರುವವರಿಗೂ ನಮ್ಮ ಪ್ರೀತಿಯು ತೋರಿಬರಬೇಕು. ನಿಶ್ಚಯವಾಗಿಯೂ ಸ್ವತ್ಯಾಗದ ಸಹೋದರ ಪ್ರೀತಿಯೇ ನಮ್ಮನ್ನು ಕ್ರಿಸ್ತನ ನಿಜ ಹಿಂಬಾಲಕರೆಂದು ಗುರುತಿಸುವ ಚಿಹ್ನೆಯಾಗಿದೆ.

6, 7. (ಎ) ಪ್ರೀತಿಯನ್ನು ತೋರಿಸುವ ವಿಷಯಕ್ಕೆ ಯೆಹೋವನ ವಾಕ್ಯವು ಅತ್ಯಧಿಕ ಬೆಲೆಯನ್ನು ಕೊಡುತ್ತದೆಂದು ನಮಗೆ ಹೇಗೆ ತಿಳಿದಿದೆ? (ಬಿ) ಒಂದನೆಯ ಕೊರಿಂಥ 13:4-8​ರಲ್ಲಿ ದಾಖಲೆಯಾಗಿರುವ ಪೌಲನ ಮಾತುಗಳು ಪ್ರೀತಿಯ ಯಾವ ವೈಶಿಷ್ಟ್ಯದ ಮೇಲೆ ಕೇಂದ್ರಿಕರಿಸುತ್ತವೆ?

6 ನಮ್ಮಲ್ಲಿ ಪ್ರೀತಿಯ ಕೊರತೆ ಇರುವಲ್ಲಿ ಆಗೇನು? “ನಾನು . . . ಪ್ರೀತಿಯಿಲ್ಲದವನಾಗಿದ್ದರೆ ನಾದಕೊಡುವ ಕಂಚೂ ಗಣಗಣಿಸುವ ತಾಳವೂ ಆಗಿದ್ದೇನೆ” ಎಂದನು ಅಪೊಸ್ತಲ ಪೌಲನು. (1 ಕೊರಿಂಥ 13:1) ಗಣಗಣಿಸುವ ತಾಳವು ಕರ್ಕಶ ಸದ್ದನ್ನು ಉತ್ಪಾದಿಸುತ್ತದೆ. ಕಂಚಿನ ನಾದದ ಕುರಿತೇನು? ಇತರ ಭಾಷಾಂತರಗಳು ಅದನ್ನು “ಗದ್ದಲಮಯ ಜಾಗಟೆ” ಅಥವಾ “ಮೊರೆಯುತ್ತಿರುವ ಜಾಗಟೆ” ಎಂದು ಹೇಳಿವೆ. ಎಷ್ಟು ಸರಿಯಾಗಿ ಹೊಂದುವ ದೃಷ್ಟಾಂತಗಳು! ಒಬ್ಬ ಪ್ರೀತಿರಹಿತ ವ್ಯಕ್ತಿಯು, ಆಕರ್ಷಿಸುವುದರ ಬದಲು ವಿಕರ್ಷಿಸುವಂಥ ಗಟ್ಟಿಯಾಗಿ ಗುಲ್ಲೆಬ್ಬಿಸುವ ಕರ್ಕಶ ಧ್ವನಿಯ ಸಂಗೀತ ಉಪಕರಣದಂತಿದ್ದಾನೆ. ಅಂಥ ವ್ಯಕ್ತಿಯೊಬ್ಬನು ಇತರರೊಂದಿಗೆ ಆಪ್ತ ಸಂಬಂಧದಲ್ಲಿ ಹೇಗೆ ಆನಂದಿಸಾನು? ಪೌಲನು ಹೀಗೂ ಹೇಳಿದ್ದಾನೆ: “ನನಗೆ . . . ಬೆಟ್ಟಗಳನ್ನು ತೆಗೆದಿಡುವದಕ್ಕೆ ಬೇಕಾದಷ್ಟು ನಂಬಿಕೆಯಿದ್ದರೂ ನಾನು ಪ್ರೀತಿಯಿಲ್ಲದವನಾಗಿದ್ದರೆ ಏನೂ ಅಲ್ಲದವನಾಗಿದ್ದೇನೆ.” (1 ಕೊರಿಂಥ 13:2) ತುಸು ಕಲ್ಪಿಸಿಕೊಳ್ಳಿ, ಒಬ್ಬನು ಎಷ್ಟೋ ದೊಡ್ಡ ಕೆಲಸಗಳನ್ನು ಮಾಡುತ್ತಿರಬಹುದಾದರೂ ಅವನಲ್ಲಿ ಪ್ರೀತಿ ಇಲ್ಲದಿದ್ದರೆ ಅವನು “ನಿಷ್ಪ್ರಯೋಜಕ ನಗಣ್ಯ ವ್ಯಕ್ತಿ”ಯಾಗಿದ್ದಾನೆ! (ದಿ ಆ್ಯಂಪ್ಲಿಫೈಡ್‌ ಬೈಬಲ್‌) ಪ್ರೀತಿಯನ್ನು ತೋರಿಸುವ ವಿಷಯಕ್ಕೆ ಯೆಹೋವನ ವಾಕ್ಯವು ಅತ್ಯಧಿಕ ಬೆಲೆಯನ್ನು ಕೊಡುತ್ತದೆ ಎಂಬುದು ಸ್ಪಷ್ಟವಾಗುತ್ತದೆಯಲ್ಲವೇ?

7 ಇತರರೊಂದಿಗಿನ ನಮ್ಮ ವ್ಯವಹಾರಗಳಲ್ಲಿ ಈ ಗುಣವನ್ನು ನಾವು ಪ್ರದರ್ಶಿಸುವುದಾದರೂ ಹೇಗೆ? ಅದನ್ನು ಉತ್ತರಿಸಲಿಕ್ಕಾಗಿ, 1 ಕೊರಿಂಥ 13:4-8​ರಲ್ಲಿ ಕಂಡುಬರುವ ಪೌಲನ ಮಾತುಗಳನ್ನು ನಾವು ಪರೀಕ್ಷಿಸೋಣ. ಈ ವಚನಗಳಲ್ಲಿರುವ ಒತ್ತು, ನಮಗಾಗಿ ದೇವರಿಗಿರುವ ಪ್ರೀತಿಯ ಮೇಲಾಗಲಿ ಅಥವಾ ದೇವರಿಗಾಗಿ ನಮಗಿರುವ ಪ್ರೀತಿಯ ಮೇಲಾಗಲಿ ಇಲ್ಲ. ಬದಲಿಗೆ, ನಾವು ಪರಸ್ಪರರಿಗಾಗಿ ಪ್ರೀತಿಯನ್ನು ಹೇಗೆ ತೋರಿಸಬೇಕೆಂಬುದರ ಮೇಲೆ ಪೌಲನು ಗಮನವನ್ನು ಕೇಂದ್ರೀಕರಿಸಿದನು. ಪ್ರೀತಿಯು ಏನಾಗಿದೆ ಮತ್ತು ಏನಾಗಿಲ್ಲ ಎಂಬ ಕೆಲವು ವಿಷಯಗಳನ್ನು ಅವನು ವಿವರಿಸಿದನು.

ಪ್ರೀತಿ ಏನು ಆಗಿದೆ

8. ಇತರರೊಂದಿಗಿನ ನಮ್ಮ ವ್ಯವಹಾರಗಳಲ್ಲಿ ದೀರ್ಘಶಾಂತಿಯು ನಮಗೆ ಹೇಗೆ ಸಹಾಯಮಾಡಬಲ್ಲದು?

8 “ಪ್ರೀತಿ ಬಹು ತಾಳ್ಮೆ [“ದೀರ್ಘಶಾಂತಿ,” NW] ಯುಳ್ಳದ್ದು.” ದೀರ್ಘಶಾಂತಿಯಿಂದಿರುವುದರ ಅರ್ಥ ಇತರರನ್ನು ತಾಳ್ಮೆಯಿಂದ ಸೈರಿಸಿಕೊಂಡು ಜೀವಿಸುವುದು. (ಕೊಲೊಸ್ಸೆ 3:13) ಅಂಥ ತಾಳ್ಮೆಯು ನಮಗೆ ಅಗತ್ಯವಾಗಿ ಬೇಕು ಅಲ್ಲವೇ? ನಾವು ಅಪರಿಪೂರ್ಣ ಮಾನವರಾಗಿದ್ದು ಹೆಗಲಿಗೆ ಹೆಗಲು ಕೊಟ್ಟು ಕೆಲಸಮಾಡುತ್ತಿರುವ ಕಾರಣ, ಆಗಿಂದಾಗ್ಗೆ ನಮ್ಮ ಕ್ರೈಸ್ತ ಸಹೋದರರು ನಮಗೆ ಸಿಟ್ಟೆಬ್ಬಿಸಬಹುದು ಮತ್ತು ನಾವೂ ಅವರಿಗೆ ಹಾಗೆಯೇ ಮಾಡುವೆವು ಎಂಬುದನ್ನು ನಿರೀಕ್ಷಿಸುವುದು ವಾಸ್ತವಿಕ ಸಂಗತಿಯಾಗಿದೆ. ಆದರೆ, ಇತರರೊಂದಿನ ವ್ಯವಹಾರಗಳಲ್ಲಿ ನಾವು ಅನುಭವಿಸುವ ಚಿಕ್ಕಪುಟ್ಟ ಕಿರುಕುಳಗಳನ್ನು ಮತ್ತು ಮನಸ್ತಾಪಗಳನ್ನು​—ಸಭೆಯ ಶಾಂತಿಯನ್ನು ಭಂಗಗೊಳಿಸದೇ​—ನಿಭಾಯಿಸಲು ತಾಳ್ಮೆ ಮತ್ತು ಸಹನಶೀಲತೆಯು ನಮಗೆ ಸಹಾಯಮಾಡಬಲ್ಲವು.

9. ಯಾವ ವಿಧಗಳಲ್ಲಿ ನಾವು ಇತರರಿಗೆ ದಯೆಯನ್ನು ತೋರಿಸಬಲ್ಲೆವು?

9 “ಪ್ರೀತಿ ದಯೆ ತೋರಿಸುವದು.” ಸಹಾಯಕರ ಕ್ರಿಯೆಗಳು ಮತ್ತು ವಿಚಾರಪರ ಮಾತುಗಳ ಮೂಲಕ ದಯೆಯು ತೋರಿಸಲ್ಪಡುತ್ತದೆ. ದಯೆಯನ್ನು ತೋರಿಸುವ ಮಾರ್ಗಗಳಿಗಾಗಿ ಹುಡುಕುವಂತೆ, ವಿಶೇಷವಾಗಿ ಕೊರತೆಯಲ್ಲಿರುವವರಿಗೆ ನೆರವಾಗುವಂತೆ ಪ್ರೀತಿಯು ನಮ್ಮನ್ನು ಪ್ರೇರೇಪಿಸುತ್ತದೆ. ಉದಾಹರಣೆಗೆ, ಒಬ್ಬ ವೃದ್ಧ ಜೊತೆ ವಿಶ್ವಾಸಿಯು ಒಂಟಿಗನಾಗಿರಬಹುದು ಮತ್ತು ಅವನಿಗೆ ಒಂದು ಪ್ರೋತ್ಸಾಹಕ ಭೇಟಿಯ ಅಗತ್ಯವಿರಬಹುದು. ಒಬ್ಬ ಒಂಟಿ ತಾಯಿ ಅಥವಾ ಧಾರ್ಮಿಕವಾಗಿ ವಿಭಜಿತವಾಗಿರುವ ಮನೆಯಲ್ಲಿ ಜೀವಿಸುತ್ತಿರುವ ಸಹೋದರಿಯೊಬ್ಬಳಿಗೆ ಸ್ವಲ್ಪ ಸಹಾಯದ ಅಗತ್ಯವಿದ್ದೀತು. ಅಸ್ವಸ್ಥರಾಗಿರುವ ಇಲ್ಲವೆ ಆಪತ್ತಿನಲ್ಲಿ ಬಿದ್ದಿರುವವರೊಬ್ಬರಿಗೆ ಒಬ್ಬ ನಿಷ್ಠಾವಂತ ಮಿತ್ರನ ದಯಾಪರ ಮಾತುಗಳನ್ನು ಕೇಳುವ ಅಗತ್ಯವಿದ್ದೀತು. (ಜ್ಞಾನೋಕ್ತಿ 12:25; 17:17) ಈ ರೀತಿಯಲ್ಲಿ ದಯೆಯನ್ನು ತೋರಿಸಲು ನಾವು ಮುಂದಡಿಯಿಡುವಾಗ, ನಮ್ಮ ಪ್ರೀತಿಯು ಯಥಾರ್ಥವಾದದ್ದೆಂಬುದನ್ನು ನಾವು ತೋರಿಸಿಕೊಡುತ್ತೇವೆ.​—2 ಕೊರಿಂಥ 8:8.

10. ಸತ್ಯವನ್ನೇ ಆಡುವುದು ಮತ್ತು ಅದನ್ನು ಎತ್ತಿಹಿಡಿಯುವುದು ಸುಲಭವಿರದಿದ್ದಾಗಲೂ, ಅದನ್ನು ಮಾಡುವಂತೆ ಪ್ರೀತಿಯು ನಮಗೆ ಹೇಗೆ ನೆರವಾಗುತ್ತದೆ?

10 “ಪ್ರೀತಿಯು . . . ಸತ್ಯಕ್ಕೆ ಜಯವಾಗುವಲ್ಲಿ ಸಂತೋಷಪಡುತ್ತದೆ.” ಇನ್ನೊಂದು ಭಾಷಾಂತರವು ಹೇಳುವುದು: “ಪ್ರೀತಿಯು . . . ಸಂತೋಷದಿಂದ ಸತ್ಯದ ಪಕ್ಷವನ್ನು ಹಿಡಿಯುತ್ತದೆ.” ಸತ್ಯವನ್ನು ಎತ್ತಿಹಿಡಿಯಲು ಮತ್ತು ‘ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ನಿಜವನ್ನೇ ಆಡುವಂತೆ’ ಪ್ರೀತಿಯು ನಮ್ಮನ್ನು ಪ್ರೇರಿಸುತ್ತದೆ. (ಜೆಕರ್ಯ 8:​16) ಉದಾಹರಣೆಗಾಗಿ, ನಮ್ಮ ಪ್ರಿಯರಲ್ಲಿ ಒಬ್ಬನು ಒಂದು ಗಂಭೀರವಾದ ಪಾಪದಲ್ಲಿ ಒಳಗೂಡಿದ್ದಲ್ಲಿ, ಆ ಕೆಟ್ಟತನವನ್ನು ಬಚ್ಚಿಡಲು, ಒಂದು ನೆಪಕೊಟ್ಟು ತೇಲಿಸಿಬಿಡಲು, ಅಥವಾ ಅದರ ಕುರಿತು ಸುಳ್ಳುಹೇಳಲು ಸಹ ಪ್ರಯತ್ನಿಸುವ ಬದಲಿಗೆ ದೇವರ ಮಟ್ಟಗಳನ್ನು ವಿಧೇಯತೆಯಿಂದ ಪಾಲಿಸುವಂತೆ, ಯೆಹೋವನಿಗಾಗಿ ಮತ್ತು ಆ ತಪ್ಪಿತಸ್ಥನಿಗಾಗಿ ನಮಗಿರುವ ಪ್ರೀತಿಯು ನಮ್ಮನ್ನು ಪ್ರೇರಿಸುವುದು. ಪರಿಸ್ಥಿತಿಯ ಸತ್ಯವನ್ನು ಒಪ್ಪಿಕೊಳ್ಳಲು ಒಂದುವೇಳೆ ಕಷ್ಟವಾದೀತೆಂಬುದು ಅರ್ಥಮಾಡಿಕೊಳ್ಳಬಹುದಾದ ಮಾತು. ಆದರೆ ನಮ್ಮ ಪ್ರಿಯ ವ್ಯಕ್ತಿಯ ಹಿತಚಿಂತನೆಯು ನಮ್ಮ ಮನಸ್ಸಿನಲ್ಲಿರುವುದರಿಂದ, ಅವನು ದೇವರ ಪ್ರೀತಿಭರಿತ ಶಿಸ್ತಿನ ಅಭಿವ್ಯಕ್ತಿಯನ್ನು ಸ್ವೀಕರಿಸುವಂತೆ ಮತ್ತು ಅದಕ್ಕೆ ಪ್ರತಿವರ್ತನೆ ತೋರಿಸುವಂತೆ ನಾವು ಬಯಸುವೆವು. (ಜ್ಞಾನೋಕ್ತಿ 3:11, 12) ಪ್ರೀತಿ ತೋರಿಸುವ ಕ್ರೈಸ್ತರೋಪಾದಿ, ನಾವು “ಎಲ್ಲಾ ವಿಷಯಗಳಲ್ಲಿ ಸಜ್ಜನರಾಗಿ [“ಪ್ರಾಮಾಣಿಕರಾಗಿ,” NW] ನಡೆದುಕೊಳ್ಳಬೇಕೆಂದು” ಅಪೇಕ್ಷಿಸುವವರೂ ಆಗಿದ್ದೇವೆ.​—ಇಬ್ರಿಯ 13:18.

11. ಪ್ರೀತಿಯು “ಎಲ್ಲವನ್ನೂ ಅಡಗಿಸಿಕೊಳ್ಳು”ವುದರಿಂದ ಜೊತೆ ವಿಶ್ವಾಸಿಗಳ ಕುಂದುಕೊರತೆಗಳ ಸಂಬಂಧದಲ್ಲಿ ನಾವೇನು ಮಾಡಲು ಪ್ರಯತ್ನಿಸಬೇಕು?

11 “ಪ್ರೀತಿಯು . . . ಎಲ್ಲವನ್ನೂ ಅಡಗಿಸಿಕೊಳ್ಳುತ್ತದೆ.” ಈ ಹೇಳಿಕೆಯ ಅಕ್ಷರಾರ್ಥವು “ಅದು ಎಲ್ಲವನ್ನೂ ಮುಚ್ಚಿಬಿಡುತ್ತದೆ” ಎಂಬುದೇ. (ಕಿಂಗ್‌ಡಂ ಇಂಟರ್‌ಲಿನೀಯರ್‌) ಒಂದನೇ ಪೇತ್ರ 4:8 ಹೇಳುವುದು: “ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.” ಹೌದು, ಪ್ರೀತಿಯಿಂದ ನಿಯಂತ್ರಿಸಲ್ಪಡುವ ಕ್ರೈಸ್ತನೊಬ್ಬನು, ತನ್ನ ಕ್ರೈಸ್ತ ಸಹೋದರರ ಅಪರಿಪೂರ್ಣತೆಗಳು ಮತ್ತು ಕುಂದುಕೊರತೆಗಳೆಲ್ಲವನ್ನು ಬೆಳಕಿಗೆ ತರಲು ತುದಿಗಾಲಲ್ಲಿ ನಿಂತಿರುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ, ನಮ್ಮ ಜೊತೆ ವಿಶ್ವಾಸಿಗಳ ತಪ್ಪುಗಳು ಅಥವಾ ದೋಷಗಳು ತೀರ ಚಿಕ್ಕದಾಗಿರುತ್ತವೆ ಮತ್ತು ಪ್ರೀತಿಯ ಹೊದಿಕೆಯಿಂದ ಅವುಗಳನ್ನು ಮುಚ್ಚಿಹಾಕಸಾಧ್ಯವಿದೆ.​—ಜ್ಞಾನೋಕ್ತಿ 10:12; 17:9.

ನಮ್ಮ ಸಹೋದರರಲ್ಲಿ ಭರವಸೆಯನ್ನು ವ್ಯಕ್ತಪಡಿಸಲು ಪ್ರೀತಿಯು ನಮ್ಮನ್ನು ಪ್ರೇರಿಸುತ್ತದೆ

12. ಫಿಲೆಮೋನನ ಕುರಿತಾಗಿ ತಾನು ಉತ್ತಮವಾದದ್ದನ್ನೇ ನಂಬಿದ್ದೇನೆಂದು ಅಪೊಸ್ತಲ ಪೌಲನು ತೋರಿಸಿದ್ದು ಹೇಗೆ, ಮತ್ತು ಪೌಲನ ಮಾದರಿಯಿಂದ ನಾವೇನನ್ನು ಕಲಿಯಬಲ್ಲೆವು?

12 “ಪ್ರೀತಿಯು . . . ಎಲ್ಲವನ್ನೂ ನಂಬುತ್ತದೆ.” ಮಾಫಟ್‌ನ ಭಾಷಾಂತರವು ಪ್ರೀತಿಯು “ಯಾವಾಗಲೂ ಉತ್ತಮವಾದದ್ದನ್ನೇ ನಂಬಲು ಆತುರಪಡುತ್ತದೆ” ಎಂಬದಾಗಿ ಹೇಳಿದೆ. ಪ್ರತಿಯೊಂದು ವಿಷಯದಲ್ಲಿ ಜೊತೆ ಕ್ರೈಸ್ತರ ಹೇತುವೇನಾಗಿರಬಹುದೆಂಬುದನ್ನು ಸಂದೇಹಿಸುತ್ತಾ ಅವರ ವಿಷಯದಲ್ಲಿ ಅತಿಯಾಗಿ ಸಂಶಯಪಡುವ ಜನರು ನಾವಲ್ಲ. ನಮ್ಮ ಸಹೋದರರ ಕುರಿತು “ಉತ್ತಮವಾದದ್ದನ್ನೇ ನಂಬಲು” ಮತ್ತು ಅವರಲ್ಲಿ ಭರವಸೆಯಿಡಲು ಪ್ರೀತಿಯು ನಮಗೆ ಸಹಾಯಮಾಡುತ್ತದೆ. a ಪೌಲನು ಫಿಲೆಮೋನನಿಗೆ ಬರೆದ ಪತ್ರದಲ್ಲಿರುವ ಒಂದು ಉದಾಹರಣೆಯನ್ನು ಗಮನಿಸಿರಿ. ಫಿಲೆಮೋನನು ಕ್ರೈಸ್ತನಾಗಿ ಪರಿಣಮಿಸಿದ್ದ ಓನೇಸಿಮನೆಂಬ ಓಡಿಹೋದ ದಾಸನನ್ನು ದಯೆಯಿಂದ ಸೇರಿಸಿಕೊಳ್ಳುವಂತೆ ಉತ್ತೇಜಿಸುವುದಕ್ಕಾಗಿ ಅವನಿಗೆ ಈ ಪತ್ರವನ್ನು ಬರೆದನು. ಫಿಲೆಮೋನನನ್ನು ಒತ್ತಾಯಮಾಡುವ ಬದಲಿಗೆ ಪ್ರೀತಿಯ ಆಧಾರದ ಮೇಲೆ ಪೌಲನು ಕೋರಿದನು. ಫಿಲೆಮೋನನು ಯೋಗ್ಯವಾದುದ್ದನ್ನೇ ಮಾಡುವನೆಂಬ ಭರವಸೆಯನ್ನು ವ್ಯಕ್ತಪಡಿಸುತ್ತಾ ಪೌಲನಂದದ್ದು: “ನನ್ನ ಮಾತನ್ನು ಕೇಳುವಿ ಎಂಬ ಭರವಸವುಳ್ಳವನಾಗಿ ಈ ಪತ್ರಿಕೆಯನ್ನು ನಿನಗೆ ಬರೆದಿದ್ದೇನೆ. ನಾನು ಹೇಳಿದ್ದಕ್ಕಿಂತಲೂ ಹೆಚ್ಚಾಗಿ ಮಾಡುವಿಯೆಂದು ನನಗೆ ಗೊತ್ತುಂಟು.” (ವಚನ 21) ನಮ್ಮ ಸಹೋದರರಲ್ಲಿ ಅಂಥ ಭರವಸೆಯನ್ನು ವ್ಯಕ್ತಪಡಿಸಲು ಪ್ರೀತಿಯು ನಮ್ಮನ್ನು ಪ್ರೇರಿಸುವಾಗ, ಅವರಲ್ಲಿರುವ ಅತ್ಯುತ್ತಮ ಗುಣಗಳನ್ನು ನಾವು ಹೊರತರುತ್ತೇವೆ.

13. ನಮ್ಮ ಸಹೋದರರಿಗಾಗಿ ನಾವು ಅತ್ಯುತ್ತಮವಾದುದನ್ನೇ ನಿರೀಕ್ಷಿಸುತ್ತೇವೆಂದು ಹೇಗೆ ತೋರಿಸಬಲ್ಲೆವು?

13 “ಪ್ರೀತಿಯು . . . ಎಲ್ಲವನ್ನೂ ನಿರೀಕ್ಷಿಸುತ್ತದೆ.” ಪ್ರೀತಿಯು ಹೇಗೆ ಭರವಸೆಯಿಡುತ್ತದೋ ಹಾಗೆ ನಿರೀಕ್ಷಿಸುತ್ತಲೂ ಇರುತ್ತದೆ. ಪ್ರೀತಿಯಿಂದ ಪ್ರೇರಿತರಾಗಿ ನಾವು ನಮ್ಮ ಸಹೋದರರಿಗಾಗಿ ಅತ್ಯುತ್ತಮವಾದುದನ್ನೇ ನಿರೀಕ್ಷಿಸುವವರಾಗಿದ್ದೇವೆ. ಉದಾಹರಣೆಗೆ, ಒಬ್ಬ ಸಹೋದರನು ತಿಳಿಯದೆ “ಒಂದು ದೋಷದಲ್ಲಿ ಸಿಕ್ಕಿದರೆ,” ಅವನನ್ನು ತಿದ್ದಿಸರಿಮಾಡಲು ಕೊಡಲ್ಪಡುವ ಪ್ರೀತಿಯುಳ್ಳ ಸಹಾಯಕ್ಕೆ ಅವನು ಪ್ರತಿವರ್ತನೆ ತೋರಿಸುವನೆಂದು ನಾವು ನಿರೀಕ್ಷಿಸುವೆವು. (ಗಲಾತ್ಯ 6:1) ಯಾರು ನಂಬಿಕೆಯಲ್ಲಿ ನಿರ್ಬಲರಾಗಿದ್ದಾರೋ ಅವರು ಪುನಃ ಚೇತರಿಸಿಕೊಳ್ಳುವರೆಂಬ ನಿರೀಕ್ಷೆಯನ್ನೂ ನಾವು ನೀಡುತ್ತೇವೆ. ಅಂಥವರೊಂದಿಗೆ ನಾವು ತಾಳ್ಮೆಯಿಂದಿರುತ್ತಾ ನಂಬಿಕೆಯಲ್ಲಿ ಬಲಗೊಳ್ಳುವಂತೆ ನಮ್ಮಿಂದಾದ ಸಹಾಯವನ್ನು ಕೊಡುತ್ತಿರುತ್ತೇವೆ. (ರೋಮಾಪುರ 15:1; 1 ಥೆಸಲೊನೀಕ 5:14) ನಮ್ಮ ಪ್ರಿಯ ವ್ಯಕ್ತಿಯೊಬ್ಬನು ದಾರಿತಪ್ಪಿಹೋದಾಗಲೂ, ಅವನಿಗೆ ಒಂದಾನೊಂದು ದಿನ ಬುದ್ಧಿ ಬಂದು, ಯೇಸುವಿನ ದೃಷ್ಟಾಂತದಲ್ಲಿನ ತಪ್ಪಿಹೋದ ಮಗನಂತೆ, ಯೆಹೋವನ ಬಳಿಗೆ ಮರಳಿ ಬರುವನೆಂಬ ನಿರೀಕ್ಷೆಯನ್ನು ನಾವೆಂದೂ ಬಿಟ್ಟುಬಿಡುವುದಿಲ್ಲ.​—ಲೂಕ 15:17, 18.

14. ಸಭೆಯೊಳಗೆ ನಮ್ಮ ಸಹನೆಯು ಯಾವ ವಿಧಗಳಲ್ಲಿ ಪರೀಕ್ಷಿಸಲ್ಪಡಬಹುದು, ಮತ್ತು ಪ್ರೀತಿಯು ನಾವು ಯಾವ ರೀತಿಯಲ್ಲಿ ಪ್ರತಿವರ್ತನೆ ತೋರಿಸಲು ನಮಗೆ ಸಹಾಯಮಾಡುವುದು?

14 “ಪ್ರೀತಿಯು . . . ಎಲ್ಲವನ್ನೂ ಸಹಿಸಿಕೊಳ್ಳುತ್ತದೆ.” ನಿರಾಶೆಗಳು ಇಲ್ಲವೆ ಸಂಕಷ್ಟಗಳು ನಮ್ಮನ್ನು ಎದುರಾಗುವಾಗ ದೃಢವಾಗಿ ನಿಲ್ಲಲು ಸಹನೆಯು ನಮಗೆ ಶಕ್ತಿಯನ್ನು ಕೊಡುತ್ತದೆ. ನಮ್ಮ ಸಹನೆಯ ಪರೀಕ್ಷೆಗಳು ಸಭೆಯ ಹೊರಗಿನಿಂದ ಮಾತ್ರವೇ ಬರುವುದಿಲ್ಲ. ಕೆಲವೊಮ್ಮೆ ಸಭೆಯ ಒಳಗಿನಿಂದಲೇ ಅವು ಬರಬಹುದು. ಅಪರಿಪೂರ್ಣತೆಯ ಕಾರಣ ನಮ್ಮ ಸಹೋದರರು ಕೆಲವೊಮ್ಮೆ ನಮ್ಮನ್ನು ನಿರಾಶೆಗೊಳಿಸಾರು. ನಿರ್ಲಕ್ಷ್ಯದಿಂದ ನುಡಿದ ಮಾತುಗಳು ನಮ್ಮ ಮನಸ್ಸನ್ನು ನೋಯಿಸಬಹುದು. (ಜ್ಞಾನೋಕ್ತಿ 12:18) ಬಹುಶಃ ಸಭೆಯಲ್ಲಿ ಒಂದು ವಿಷಯವು ನಾವು ನೆನಸುವಂಥ ರೀತಿಯಲ್ಲಿ ನಿರ್ವಹಿಸಲ್ಪಡದಿರಬಹುದು. ಗೌರವಾನ್ವಿತ ಸಹೋದರನೊಬ್ಬನ ನಡವಳಿಕೆಯು ನಮ್ಮ ಮನಸ್ಸನ್ನು ಕಲಕಿಸಬಹುದು. ‘ಒಬ್ಬ ಕ್ರೈಸ್ತನಾದವನು ಹೇಗೆ ಈ ರೀತಿ ವರ್ತಿಸಬಲ್ಲನು?’ ಎಂದು ನಾವು ಯೋಚಿಸುತ್ತಾ ಇರಬಹುದು. ಇಂಥ ಸನ್ನಿವೇಶಗಳು ಎದುರಾಗುವಾಗ, ನಾವು ಸಭೆಯನ್ನು ಬಿಟ್ಟುಹೋಗುವೆವೋ ಮತ್ತು ಯೆಹೋವನನ್ನು ಸೇವಿಸುವುದನ್ನು ನಿಲ್ಲಿಸಿಬಿಡುವೆವೊ? ಪ್ರೀತಿಯಿದ್ದರೆ ಹಾಗೆ ಮಾಡೆವು! ಹೌದು, ಸಹೋದರನೊಬ್ಬನ ಕುಂದುಕೊರತೆಗಳು ಅವನಲ್ಲೇನೂ ಒಳ್ಳೆಯದಿಲ್ಲ, ಇಡೀ ಸಭೆಯಲ್ಲೂ ಇಲ್ಲ ಎಂದು ನೆನಸುವಷ್ಟು ನಮ್ಮನ್ನು ಕುರುಡುಗೊಳಿಸುವುದರಿಂದ ಪ್ರೀತಿಯು ತಡೆಯುತ್ತದೆ. ಇನ್ನೊಬ್ಬ ಅಪರಿಪೂರ್ಣ ಮಾನವನು ಏನೇ ಹೇಳಲಿ ಅಥವಾ ಏನೇ ಮಾಡಲಿ, ದೇವರಿಗೆ ನಂಬಿಗಸ್ತರಾಗಿ ಉಳಿಯಲು ಮತ್ತು ಸಭೆಗೆ ಬೆಂಬಲ ಕೊಡುತ್ತಾ ಇರಲು ಪ್ರೀತಿಯು ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ.​—ಕೀರ್ತನೆ 119:165.

ಪ್ರೀತಿಯು ಏನು ಅಲ್ಲ

15. ಹೊಟ್ಟೆಕಿಚ್ಚು ಎಂದರೇನು, ಮತ್ತು ಈ ವಿನಾಶಕಾರಿ ಭಾವನೆಯಿಂದ ದೂರವಿರಲು ನಮಗೆ ಪ್ರೀತಿ ಹೇಗೆ ನೆರವಾಗಬಲ್ಲದು?

15 “ಪ್ರೀತಿಯು ಹೊಟ್ಟೆಕಿಚ್ಚುಪಡುವದಿಲ್ಲ.” ಹೊಟ್ಟೆಕಿಚ್ಚು ನಮ್ಮನ್ನು, ಇತರರಲ್ಲಿ ಏನಿದೆಯೋ ಅದರ ಬಗ್ಗೆ ಅಂದರೆ ಅವರ ಸ್ವತ್ತುಗಳು, ಸುಯೋಗಗಳು, ಇಲ್ಲವೆ ಸಾಮರ್ಥ್ಯಗಳ ಬಗ್ಗೆ ಈರ್ಷ್ಯೆಪಡುವಂತೆ ಮಾಡುವುದು. ಅಂಥ ಹೊಟ್ಟೆಕಿಚ್ಚು ಒಂದು ಸ್ವಾರ್ಥಪರ, ವಿನಾಶಕಾರಿ ಭಾವನೆಯಾಗಿದೆ, ಮತ್ತು ಅದನ್ನು ಹತೋಟಿಯಲ್ಲಿಡದಿದ್ದಲ್ಲಿ ಅದು ಸಭೆಯ ಶಾಂತಿಯನ್ನು ಕೆಡಿಸೀತು. ಈ ‘ಅಸೂಯೆ ಪಡುವ ಪ್ರವೃತ್ತಿಯನ್ನು’ ಪ್ರತಿರೋಧಿಸಲಿಕ್ಕೆ ನಮಗೆ ಯಾವುದು ನೆರವಾಗಬಲ್ಲದು? (ಯಾಕೋಬ 4:​5, NW) ಪ್ರೀತಿಯೇ ಅದಕ್ಕೆ ಉತ್ತರ. ನಮ್ಮ ಬಳಿ ಇಲ್ಲದಿರುವ ಜೀವನದ ಕೆಲವು ನಿರ್ದಿಷ್ಟ ಅನುಕೂಲತೆಗಳನ್ನು ಹೊಂದಿರುವಂತೆ ತೋರುವ ಇತರರೊಂದಿಗೆ ಉಲ್ಲಾಸಪಡುವಂತೆ ಈ ಅಮೂಲ್ಯ ಗುಣವು ನಮಗೆ ನೆರವಾಗಬಲ್ಲದು. (ರೋಮಾಪುರ 12:15) ಯಾವುದೋ ಅಸಾಧಾರಣ ಸಾಮರ್ಥ್ಯ ಅಥವಾ ಎದ್ದುಕಾಣುವ ಸಾಧನೆಗಾಗಿ ಯಾರಿಗಾದರೂ ಹೊಗಳಿಕೆಯು ಸಿಗುವಾಗ, ನಮಗೆ ಮುಖಭಂಗಮಾಡಲಾಗಿದೆ ಎಂಬ ದೃಷ್ಟಿಕೋನದಿಂದ ನೋಡದಂತೆ ಪ್ರೀತಿಯು ನಮಗೆ ಸಹಾಯಮಾಡುವುದು.

16. ನಾವು ನಮ್ಮ ಸಹೋದರರನ್ನು ನಿಜವಾಗಿ ಪ್ರೀತಿಸುವುದಾದರೆ, ಯೆಹೋವನ ಸೇವೆಯಲ್ಲಿ ನಾವು ಮಾಡುತ್ತಿರುವ ವಿಷಯಗಳ ಕುರಿತು ಜಂಬಕೊಚ್ಚಿಕೊಳ್ಳುವುದರಿಂದ ನಾವೇಕೆ ದೂರವಿರುವೆವು?

16 “ಪ್ರೀತಿಯು . . . ಹೊಗಳಿಕೊಳ್ಳುವದಿಲ್ಲ, ಉಬ್ಬಿಕೊಳ್ಳುವದಿಲ್ಲ.” ನಮ್ಮ ಪ್ರತಿಭೆಗಳ ಅಥವಾ ಸಾಧನೆಗಳ ಪ್ರದರ್ಶನಮಾಡುವುದರಿಂದ ಪ್ರೀತಿಯು ನಮ್ಮನ್ನು ತಡೆಯುತ್ತದೆ. ನಾವು ನಿಜವಾಗಿಯೂ ನಮ್ಮ ಸಹೋದರರನ್ನು ಪ್ರೀತಿಸುವುದಾದರೆ, ಶುಶ್ರೂಷೆಯಲ್ಲಿ ನಮಗೆ ದೊರಕಿದ ಯಶಸ್ಸು ಅಥವಾ ಸಭೆಯಲ್ಲಿ ನಮಗಿರುವ ಸುಯೋಗಗಳ ಕುರಿತು ನಾವು ಯಾವಾಗಲೂ ಹೇಗೆ ತಾನೇ ಹೊಗಳಿಕೊಳ್ಳುವೆವು? ಅಂಥ ಜಂಬಕೊಚ್ಚುವಿಕೆಯು ಇತರರನ್ನು ನಿರಾಶೆಗೊಳಿಸಿ, ನಮಗೆ ಹೋಲಿಸುವಾಗ ಅವರು ಕೆಳಮಟ್ಟದವರೆಂಬ ಭಾವನೆಯನ್ನು ಹುಟ್ಟಿಸೀತು. ದೇವರು ನಮ್ಮನ್ನು ತನ್ನ ಸೇವೆಯಲ್ಲಿ ಏನನ್ನು ಮಾಡುವಂತೆ ಬಿಟ್ಟಿರುತ್ತಾನೋ ಅದರ ಕುರಿತು ಬಡಾಯಿಕೊಚ್ಚಿಕೊಳ್ಳಲು ಪ್ರೀತಿಯು ನಮಗೆ ಅನುಮತಿಯನ್ನೀಯದು. (1 ಕೊರಿಂಥ 3:5-9) ಎಷ್ಟೆಂದರೂ, ಪ್ರೀತಿಯು “ಉಬ್ಬಿಕೊಳ್ಳುವದಿಲ್ಲ,” ಅಥವಾ ಇನ್ನೊಂದು ಭಾಷಾಂತರವು ಹೇಳುವ ಪ್ರಕಾರ, ಅದು “ಸ್ವಪ್ರತಿಷ್ಠೆಯ ಕುರಿತು ಉಬ್ಬಿಕೊಳ್ಳುವುದನ್ನು ನೆಚ್ಚುವದಿಲ್ಲ.” ನಮ್ಮ ಕುರಿತು ನಾವೇ ಹೆಚ್ಚಳಪಡುವುದರಿಂದ ಪ್ರೀತಿಯು ನಮ್ಮನ್ನು ತಡೆಯುತ್ತದೆ.​—ರೋಮಾಪುರ 12:3.

17. ಇತರರಿಗೆ ಯಾವ ಪರಿಗಣನೆಯನ್ನು ತೋರಿಸಲು ಪ್ರೀತಿಯು ನಮ್ಮನ್ನು ಪ್ರೇರಿಸುತ್ತದೆ, ಮತ್ತು ಈ ಕಾರಣದಿಂದ ನಾವು ಯಾವ ರೀತಿಯ ನಡವಳಿಕೆಯಿಂದ ದೂರವಿರುವೆವು?

17 “ಪ್ರೀತಿಯು . . . ಮರ್ಯಾದೆಗೆಟ್ಟು ನಡಿಯುವದಿಲ್ಲ.” ಮರ್ಯಾದೆಗೆಟ್ಟು ನಡಿಯುವ ವ್ಯಕ್ತಿಯೊಬ್ಬನು ತೀರ ಅಸಭ್ಯವಾದ ಅಥವಾ ಜಿಗುಪ್ಸೆ ಹುಟ್ಟಿಸುವ ರೀತಿಯಲ್ಲಿ ವರ್ತಿಸುತ್ತಾನೆ. ಅಂಥ ನಡವಳಿಕೆಯು ಪ್ರೀತಿರಹಿತವಾಗಿದೆ, ಯಾಕಂದರೆ ಅದು ಇತರರ ಭಾವನೆಗಳಿಗೆ ಮತ್ತು ಹಿತಕ್ಕೆ ಸಂಪೂರ್ಣ ತಾತ್ಸಾರವನ್ನು ತೋರಿಸುತ್ತದೆ. ಇದಕ್ಕೆ ವೈದೃಶ್ಯದಲ್ಲಿ, ಇತರರಿಗಾಗಿ ಪರಿಗಣನೆಯನ್ನು ತೋರಿಸಲು ನಮ್ಮನ್ನು ಪ್ರೇರಿಸುವಂಥ ವಿನಯವು ಪ್ರೀತಿಯಲ್ಲಿದೆ. ಪ್ರೀತಿಯು ಸಭ್ಯಾಚಾರಗಳನ್ನು, ದೈವಿಕ ನಡವಳಿಕೆಯನ್ನು, ಮತ್ತು ನಮ್ಮ ಜೊತೆ ವಿಶ್ವಾಸಿಗಳಿಗಾಗಿ ಗೌರವವನ್ನು ಪ್ರವರ್ಧಿಸುತ್ತದೆ. ಹೀಗಿರುವುದರಿಂದ ‘ನಾಚಿಕೆಗೆಟ್ಟ ನಡತೆ’ಯಲ್ಲಿ, ಹೌದು, ನಮ್ಮ ಕ್ರೈಸ್ತ ಸಹೋದರರನ್ನು ದಂಗುಗೊಳಿಸುವಂಥ ಅಥವಾ ಮನನೋಯಿಸುವಂಥ ಯಾವುದೇ ನಡವಳಿಕೆಯಲ್ಲಿ ತೊಡಗುವಂತೆ ಪ್ರೀತಿಯು ನಮ್ಮನ್ನು ಅನುಮತಿಸದು.​—ಎಫೆಸ 5:3, 4.

18. ಒಬ್ಬ ಪ್ರೀತಿಪರ ವ್ಯಕ್ತಿಯು ಎಲ್ಲವು ತನ್ನಿಷ್ಟದ ಪ್ರಕಾರವೇ ನಡೆಯಬೇಕೆಂದು ಯಾಕೆ ಹಟಹಿಡಿಯನು?

18 “ಪ್ರೀತಿಯು . . . ಸ್ವಪ್ರಯೋಜನವನ್ನು ಚಿಂತಿಸುವದಿಲ್ಲ.” ಇನ್ನೊಂದು ಭಾಷಾಂತರವು “ಪ್ರೀತಿ ತನ್ನ ಇಷ್ಟ ಸಾಧಿಸಿಕೊಳ್ಳಲು ಹಟ ಹಿಡಿಯುವದಿಲ್ಲ” ಎಂದು ಹೇಳಿದೆ. ತನ್ನ ಅಭಿಪ್ರಾಯಗಳೇ ಯಾವಾಗಲೂ ಸರಿಯೊ ಎಂಬಂತೆ ಎಲ್ಲವೂ ತನ್ನಿಷ್ಟದ ಪ್ರಕಾರವೇ ನಡಿಯಬೇಕೆಂದು ಪ್ರೀತಿಯುಳ್ಳ ಒಬ್ಬ ವ್ಯಕ್ತಿಯು ತಗಾದೆಮಾಡುವುದಿಲ್ಲ. ಭಿನ್ನವಾದ ನೋಟವಿರುವ ಇತರರು ಸುಸ್ತಾಗಿ ಪ್ರಯತ್ನವನ್ನು ಬಿಟ್ಟುಬಿಡುವಂತೆ ಮಾಡಲಿಕ್ಕಾಗಿ, ಬೇರೆಯವರನ್ನು ಪ್ರಭಾವಿಸಲಿಕ್ಕಾಗಿ ಮನವೊಪ್ಪಿಸಲು ತನಗಿರುವ ಎಲ್ಲಾ ಶಕ್ತಿಯನ್ನು ಬಳಸಿ, ಇತರರ ಮೇಲೆ ಅವನು ತನ್ನ ಕೈಚಳಕವನ್ನು ತೋರಿಸುವುದಿಲ್ಲ. ಅಂಥ ಹಟಸಾಧನೆಯು ಸ್ವಲ್ಪಮಟ್ಟಿಗೆ ಹೆಮ್ಮೆಯನ್ನು ತೋರಿಸುತ್ತದೆ, ಮತ್ತು “ಗರ್ವದಿಂದ ಭಂಗ” ಎನ್ನುತ್ತದೆ ಬೈಬಲು. (ಜ್ಞಾನೋಕ್ತಿ 16:18) ನಾವು ನಿಜವಾಗಿಯೂ ನಮ್ಮ ಸಹೋದರರನ್ನು ಪ್ರೀತಿಸುವುದಾದರೆ, ಅವರ ಅಭಿಪ್ರಾಯಗಳನ್ನು ನಾವು ಗೌರವಿಸುವೆವು, ಮತ್ತು ಎಲ್ಲಿ ಶಕ್ಯವೋ ಅಲ್ಲಿ, ಬಿಟ್ಟುಕೊಡುವ ಸಿದ್ಧಮನಸ್ಸನ್ನು ತೋರಿಸುವೆವು. ಈ ರೀತಿ ಮಣಿಯುವ ಸ್ವಭಾವವು ಪೌಲನ ಮಾತುಗಳಿಗೆ ಹೊಂದಿಕೆಯಲ್ಲಿದೆ: “ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೆ ಪರಹಿತವನ್ನು ಚಿಂತಿಸಲಿ.”​—1 ಕೊರಿಂಥ 10:24.

19. ಇತರರು ನಮ್ಮ ಮನನೋಯಿಸುವಾಗ ಪ್ರೀತಿಯು ನಾವು ಹೇಗೆ ಪ್ರತಿವರ್ತನೆ ತೋರಿಸುವಂತೆ ಸಹಾಯ ಮಾಡುತ್ತದೆ?

19 “ಪ್ರೀತಿಯು . . . ಸಿಟ್ಟುಗೊಳ್ಳುವದಿಲ್ಲ, ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವದಿಲ್ಲ.” ಇತರರು ಏನು ಹೇಳುತ್ತಾರೋ ಅಥವಾ ಮಾಡುತ್ತಾರೋ ಅದರಿಂದ ಪ್ರೀತಿಯು ಸುಲಭವಾಗಿ ಸಿಟ್ಟುಗೊಳ್ಳುವುದಿಲ್ಲ. ಇತರರು ನಮ್ಮ ಮನನೋಯಿಸುವಾಗ ನಮಗೆ ಸಿಟ್ಟುಬರುವುದು ತೀರಾ ಸ್ವಾಭಾವಿಕ ನಿಜ. ಆದರೆ ನ್ಯಾಯವಾದ ಕಾರಣದಿಂದಾಗಿ ನಾವು ಕೋಪಗೊಂಡರೂ, ಸಿಟ್ಟುಗೊಂಡವರಾಗಿಯೇ ಉಳಿಯುವಂತೆ ಪ್ರೀತಿಯು ನಮ್ಮನ್ನು ಬಿಡಲಾರದು. (ಎಫೆಸ 4:26, 27) ಚುಚ್ಚು ಮಾತುಗಳು ಅಥವಾ ಕ್ರಿಯೆಗಳನ್ನು ನಾವು ಮರೆತುಬಿಡದಂತೆ ಜಮಾಖರ್ಚಿನ ಪಟ್ಟಿಯಲ್ಲೊ ಎಂಬಂತೆ ನಾವು ಒಂದು ದಾಖಲೆಯನ್ನಿಡೆವು. ಬದಲಿಗೆ ಪ್ರೀತಿಯು ನಮ್ಮನ್ನು ನಮ್ಮ ಪ್ರೀತಿಯುಳ್ಳ ದೇವರನ್ನು ಅನುಕರಿಸುವಂತೆ ಪ್ರೇರಿಸುತ್ತದೆ. ಅಧ್ಯಾಯ 26ರಲ್ಲಿ ನಾವು ಕಂಡ ಪ್ರಕಾರ, ಕ್ಷಮಿಸಲು ಯೋಗ್ಯ ಕಾರಣಗಳಿರುವಾಗ ಯೆಹೋವನು ಖಂಡಿತವಾಗಿಯೂ ಕ್ಷಮಿಸುತ್ತಾನೆ. ಆತನು ನಮ್ಮನ್ನು ಕ್ಷಮಿಸುವಾಗ, ಅದನ್ನು ಮರೆತೂ ಬಿಡುತ್ತಾನೆ, ಅಂದರೆ ಭವಿಷ್ಯತ್ತಿನಲ್ಲಿ ಆ ಪಾಪಗಳನ್ನು ನಮ್ಮ ವಿರುದ್ಧವಾಗಿ ಎತ್ತಿಹಿಡಿಯುವುದಿಲ್ಲ. ಅಪಕಾರವನ್ನು ಯೆಹೋವನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಇರುವುದಕ್ಕಾಗಿ ನಾವು ಕೃತಜ್ಞರಾಗಿರುವುದಿಲ್ಲವೇ?

20. ಜೊತೆ ವಿಶ್ವಾಸಿಯೊಬ್ಬನು ಕೆಟ್ಟತನದಲ್ಲಿ ಸಿಕ್ಕಿಬಿದ್ದು, ಅದರ ಫಲಿತಾಂಶವಾಗಿ ಕಷ್ಟಕ್ಕೊಳಗಾಗುವಾಗ ನಾವು ಹೇಗೆ ಪ್ರತಿಕ್ರಿಯೆ ತೋರಿಸಬೇಕು?

20 ‘ಪ್ರೀತಿಯು ಅನ್ಯಾಯವನ್ನು ನೋಡಿ ಸಂತೋಷಪಡುವುದಿಲ್ಲ.’ ಇನ್ನೊಂದು ಭಾಷಾಂತರವು ಹೀಗೆ ಬರೆದಿದೆ: “ಪ್ರೀತಿಯು . . . ಬೇರೆ ಮನುಷ್ಯರ ಪಾಪಗಳನ್ನು ಕಂಡು ಹಿಗ್ಗುವದಿಲ್ಲ.” ಮಾಫಟ್‌ನ ಭಾಷಾಂತರವು ಹೇಳುವುದು: “ಇತರರು ತಪ್ಪುಗೈಯುವಾಗ ಪ್ರೀತಿ ಎಂದೂ ಸಂತೋಷಪಡದು.” ಪ್ರೀತಿಯು ಅನೀತಿಯನ್ನು ನೋಡಿ ಸಂತೋಷಪಡುವುದಿಲ್ಲವಾದದರಿಂದ, ಯಾವುದೇ ರೀತಿಯ ಅನೈತಿಕತೆಯನ್ನು ನಾವು ಲಘುವಾಗಿ ಎಣಿಸುವುದಿಲ್ಲ. ಜೊತೆ ವಿಶ್ವಾಸಿಯೊಬ್ಬನು ಪಾಪದ ಬಲೆಯೊಳಗೆ ಸಿಕ್ಕಿಬಿದ್ದು ಕಷ್ಟದಲ್ಲಿ ಒದ್ದಾಡುತ್ತಿದ್ದಲ್ಲಿ ನಾವು ತೋರಿಸುವ ಪ್ರತಿವರ್ತನೆಯೇನು? ‘ಅವನಿಗೆ ಹಾಗಾದದ್ದು ಒಳ್ಳೇದಾಯಿತು! ಅವನಿಗೆ ತಕ್ಕ ಶಾಸ್ತಿ ಆಯಿತು’ ಎನ್ನುತ್ತಾ ಸಂತೋಷಪಡುವಂತೆ ಪ್ರೀತಿಯು ನಮ್ಮನ್ನು ಬಿಡಲಾರದು. (ಜ್ಞಾನೋಕ್ತಿ 17:5) ಆದರೂ, ತನ್ನ ಆಧ್ಯಾತ್ಮಿಕ ಪತನದಿಂದ ಚೇತರಿಸಿಕೊಳ್ಳಲು ಒಬ್ಬ ತಪ್ಪಿತಸ್ಥ ಸಹೋದರನು ನಿಶ್ಚಿತ ಹೆಜ್ಜೆಗಳನ್ನು ತೆಗೆದುಕೊಳ್ಳುವಾಗ ನಾವು ಸಂತೋಷಪಡುತ್ತೇವೆ ನಿಶ್ಚಯ.

“ಉತ್ಕೃಷ್ಟವಾದ ಮಾರ್ಗ”

21-23. (ಎ) “ಪ್ರೀತಿಯು ಎಂದಿಗೂ ಬಿದ್ದುಹೋಗುವದಿಲ್ಲ” ಎಂದು ಪೌಲನು ಹೇಳಿದ್ದರ ಅರ್ಥವೇನಾಗಿತ್ತು? (ಬಿ) ಕೊನೆಯ ಅಧ್ಯಾಯದಲ್ಲಿ ಏನನ್ನು ಚರ್ಚಿಸಲಾಗುವುದು?

21 “ಪ್ರೀತಿಯು ಎಂದಿಗೂ ಬಿದ್ದುಹೋಗುವದಿಲ್ಲ.” ಈ ಮಾತುಗಳಿಂದ ಪೌಲನು ಏನನ್ನು ಅರ್ಥೈಸಿದನು? ಪೂರ್ವಾಪರ ವಚನಗಳು ತೋರಿಸುವ ಮೇರೆಗೆ, ಪೌಲನು ಆದಿ ಕ್ರೈಸ್ತರಲ್ಲಿದ್ದ ಆತ್ಮದ ವರಗಳನ್ನು ಇಲ್ಲಿ ಚರ್ಚಿಸುತ್ತಿದ್ದನು. ಆ ವರಗಳು ಹೊಸದಾಗಿ ರಚಿಸಲ್ಪಟ್ಟ ಸಭೆಯ ಮೇಲೆ ದೇವರ ಅನುಗ್ರಹದ ಸಂಕೇತಗಳಾಗಿದ್ದವು. ಆದರೆ ಕ್ರೈಸ್ತರೆಲ್ಲರೂ ವಾಸಿಮಾಡಲು, ಪ್ರವಾದಿಸಲು, ಅಥವಾ ನಾನಾ ಭಾಷೆಗಳನ್ನು ನುಡಿಯಲು ಶಕ್ತರಾಗಿರಲಿಲ್ಲ. ಇದು ಪ್ರಾಮುಖ್ಯವೂ ಆಗಿರಲಿಲ್ಲ ಯಾಕಂದರೆ ಆ ಅದ್ಭುತಕರವಾದ ವರಗಳು ಕಾಲಕ್ರಮೇಣ ನಿಂತುಹೋಗಲಿದ್ದವು. ಆದರೂ, ಯಾವುದೋ ಒಂದು ವಿಷಯವು ಸದಾ ಉಳಿಯಲಿತ್ತು, ಮತ್ತು ಪ್ರತಿಯೊಬ್ಬ ಕ್ರೈಸ್ತನು ಅದನ್ನು ಬೆಳೆಸಿಕೊಳ್ಳಲು ಶಕ್ತನಿದ್ದನು. ಅದು ಯಾವುದೇ ಅದ್ಭುತಕರ ವರಕ್ಕಿಂತ ಹೆಚ್ಚು ಪ್ರಾಮುಖ್ಯವೂ ಬಾಳಿಕೆ ಬರುವಂಥದ್ದೂ ಆಗಿತ್ತು. ವಾಸ್ತವಿಕವಾಗಿ ಅದನ್ನು ಪೌಲನು ಒಂದು “ಉತ್ಕೃಷ್ಟವಾದ ಮಾರ್ಗ” ಎಂದು ಕರೆದನು. (1 ಕೊರಿಂಥ 12:31) ಈ ‘ಉತ್ಕೃಷ್ಟವಾದ ಮಾರ್ಗವು’ ಏನಾಗಿತ್ತು? ಅದೇ ಪ್ರೀತಿಯ ಮಾರ್ಗ.

ಒಬ್ಬರಿಗೊಬ್ಬರು ತೋರಿಸುವ ಪ್ರೀತಿಯಿಂದ ಯೆಹೋವನ ಜನರು ಗುರುತಿಸಲ್ಪಡುತ್ತಾರೆ

22 ಪೌಲನು ವರ್ಣಿಸಿದ ಆ ಕ್ರೈಸ್ತ ಪ್ರೀತಿಯು “ಎಂದಿಗೂ ಬಿದ್ದುಹೋಗುವದಿಲ್ಲ,” ಅಂದರೆ ಅದೆಂದೂ ಕೊನೆಗೊಳ್ಳುವುದಿಲ್ಲವೆಂಬುದು ನಿಶ್ಚಯ. ಈ ದಿನಗಳ ತನಕವೂ ಸ್ವತ್ಯಾಗದ ಸಹೋದರ ಪ್ರೀತಿಯು ಯೇಸುವಿನ ನಿಜ ಹಿಂಬಾಲಕರನ್ನು ಗುರುತಿಸಿರುತ್ತದೆ. ಅಂಥ ಪ್ರೀತಿಯ ಪುರಾವೆಯನ್ನು ಲೋಕದಾದ್ಯಂತವಿರುವ ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ ನಾವು ಕಾಣುತ್ತೇವಲ್ಲವೇ? ಈ ಪ್ರೀತಿಯು ಸದಾ ಬಾಳುವುದು, ಯಾಕಂದರೆ ತನ್ನ ನಂಬಿಗಸ್ತ ಸೇವಕರಿಗೆ ಯೆಹೋವನು ನಿತ್ಯಜೀವವನ್ನು ವಾಗ್ದಾನಿಸಿರುತ್ತಾನೆ. (ಕೀರ್ತನೆ 37:9-11, 29) ಹೀಗಿರಲಾಗಿ ನಾವು ‘ಪ್ರೀತಿಯಲ್ಲಿ ನಡೆದುಕೊಳ್ಳು’ವಂತೆ ನಮ್ಮಿಂದಾದದೆಲ್ಲವನ್ನು ಮಾಡುತ್ತಿರೋಣ. ಹಾಗೆ ಮಾಡುವ ಮೂಲಕ, ಕೊಡುವುದರಿಂದ ಬರುವ ಹೆಚ್ಚಿನ ಸಂತೋಷವನ್ನು ನಾವು ಅನುಭವಿಸಬಲ್ಲೆವು. ಅದಕ್ಕಿಂತಲೂ ಹೆಚ್ಚಾಗಿ, ನಮ್ಮ ಪ್ರೀತಿಯುಳ್ಳ ದೇವರಾದ ಯೆಹೋವನನ್ನು ಅನುಕರಿಸುತ್ತಾ, ನಾವು ಸದಾಕಾಲಕ್ಕೂ ಜೀವಿಸುತ್ತಾ ಹೌದು, ಪ್ರೀತಿಸುತ್ತಾ ಇರಬಲ್ಲೆವು.

23 ಪ್ರೀತಿಯ ಕುರಿತ ಈ ಭಾಗವನ್ನು ಕೊನೆಗೊಳಿಸುವ ಈ ಅಧ್ಯಾಯದಲ್ಲಿ, ನಾವು ಒಬ್ಬರಿಗೊಬ್ಬರು ಹೇಗೆ ಪ್ರೀತಿಯನ್ನು ತೋರಿಸಬಲ್ಲೆವೆಂಬುದನ್ನು ಚರ್ಚಿಸಿದೆವು. ಆದರೆ ಯೆಹೋವನ ಪ್ರೀತಿಯಿಂದ ಹಾಗೂ ಆತನ ಶಕ್ತಿ, ನ್ಯಾಯ, ಮತ್ತು ವಿವೇಕದಿಂದ ನಾವು ಪ್ರಯೋಜನ ಹೊಂದುವ ಅನೇಕಾನೇಕ ವಿಧಾನಗಳನ್ನು ಮನಸ್ಸಿಗೆ ತರುತ್ತಾ ನಾವು ನಮ್ಮನ್ನು ಹೀಗೆ ಕೇಳಿಕೊಳ್ಳಬಹುದು: ‘ನಾನು ನಿಜವಾಗಿಯೂ ಯೆಹೋವನನ್ನು ಪ್ರೀತಿಸುತ್ತೇನೆಂದು ಆತನಿಗೆ ಹೇಗೆ ತೋರಿಸಬಲ್ಲೆ?’ ಈ ಪ್ರಶ್ನೆಯು ನಮ್ಮ ಕೊನೆಯ ಅಧ್ಯಾಯದಲ್ಲಿ ಚರ್ಚಿಸಲ್ಪಡುವುದು.

a ಆದರೆ ಕ್ರೈಸ್ತ ಪ್ರೀತಿಯು ಸುಲಭವಾಗಿ ನಂಬಿ ಮೋಸಹೋಗುವಂಥದ್ದು ಆಗಿರುವುದಿಲ್ಲ ನಿಶ್ಚಯ. ಬೈಬಲು ನಮಗೆ ಬುದ್ಧಿವಾದ ನೀಡುವುದು: “ಭೇದಗಳನ್ನೂ ವಿಘ್ನಗಳನ್ನೂ ನಿಮ್ಮಲ್ಲಿ ಉಂಟುಮಾಡುವವರನ್ನು ಗುರುತಿಟ್ಟು ಅವರನ್ನು ಬಿಟ್ಟು ತೊಲಗಿ ಹೋಗಿರಿ.”​—ರೋಮಾಪುರ 16:17.