ಅಧ್ಯಾಯ 26
‘ಕ್ಷಮಿಸಲು ಸಿದ್ಧನು’ ಆಗಿರುವ ದೇವರು
1-3. (ಎ) ಯಾವ ಭಾರವಾದ ಹೊರೆಯನ್ನು ಕೀರ್ತನೆಗಾರನಾದ ದಾವೀದನು ಹೊತ್ತಿದ್ದನು, ಮತ್ತು ತನ್ನ ಪ್ರಕ್ಷುಬ್ಧ ಹೃದಯಕ್ಕಾಗಿ ಅವನು ಉಪಶಮನವನ್ನು ಕಂಡುಕೊಂಡದ್ದು ಹೇಗೆ? (ಬಿ) ನಾವು ಪಾಪಮಾಡುವಾಗ ಫಲಿತಾಂಶವಾಗಿ ಯಾವ ಭಾರದ ಹೊರೆಯನ್ನು ಹೊತ್ತುಕೊಳ್ಳಬಹುದು, ಆದರೆ ಯೆಹೋವನು ಯಾವ ಆಶ್ವಾಸನೆಯನ್ನು ಕೊಡುತ್ತಾನೆ?
“ನನ್ನ ಅಪರಾಧಗಳು ನನ್ನನ್ನು ಮುಣುಗಿಸಿಬಿಟ್ಟವೆ,” ಎಂದು ಬರೆದನು ಕೀರ್ತನೆಗಾರನಾದ ದಾವೀದನು. “ಅವು ಹೊರಲಾರದಷ್ಟು ಭಾರವಾದ ಹೊರೆಯಂತೆ ನನ್ನನ್ನು ಅದಿಮಿಬಿಟ್ಟವೆ. ನನಗೆ ಜೋಮುಹಿಡಿದಂತಿದೆ; ಬಹಳ ಮನಗುಂದಿದವನಾದೆನು.” (ಕೀರ್ತನೆ 38:4, 8) ಒಂದು ದೋಷಿ ಮನಸ್ಸಾಕ್ಷಿಯು ಅದೆಷ್ಟು ಭಾರವಾದ ಹೊರೆಯಾಗಿರಸಾಧ್ಯವೆಂಬುದು ದಾವೀದನಿಗೆ ಗೊತ್ತಿತ್ತು. ಆದರೆ ಅವನ ಪ್ರಕ್ಷುಬ್ಧ ಹೃದಯಕ್ಕೆ ಉಪಶಮನ ಸಿಕ್ಕಿತು. ಹೇಗೆಂದರೆ, ಯೆಹೋವನು ಪಾಪವನ್ನು ದ್ವೇಷಿಸುತ್ತಾನಾದರೂ ಅದೇ ಸಮಯದಲ್ಲಿ ಆತನು, ನಿಜವಾಗಿ ಪಶ್ಚಾತ್ತಾಪಪಟ್ಟು ತನ್ನ ಪಾಪಪೂರ್ಣ ಮಾರ್ಗವನ್ನು ತ್ಯಜಿಸಿಬಿಡುವಂಥ ಪಾಪಿಯನ್ನು ದ್ವೇಷಿಸುವುದಿಲ್ಲವೆಂಬುದನ್ನು ದಾವೀದನು ಗ್ರಹಿಸಿದನು. ಪಶ್ಚಾತ್ತಾಪಿಗಳಿಗೆ ಕರುಣೆದೋರುವ ಯೆಹೋವನ ಸಿದ್ಧಮನಸ್ಸಿನಲ್ಲಿ ಪೂರ್ಣ ಭರವಸೆಯಿದ್ದ ದಾವೀದನು ಅಂದದ್ದು: ‘ಓ ಯೆಹೋವನೇ, ನೀನು ಕ್ಷಮಿಸಲು ಸಿದ್ಧನು ಆಗಿದ್ದೀ.’—ಕೀರ್ತನೆ 86:5, NW.
2 ನಾವು ಪಾಪಮಾಡುವಾಗ, ಒಂದು ನೊಂದ ಮನಸ್ಸಾಕ್ಷಿಯ ಹೊರಲಾರದ ಭಾರವನ್ನು ನಾವೂ ಹೊತ್ತೇವು. ಈ ರೀತಿಯ ಪರಿತಾಪವು ಆರೋಗ್ಯಕರ. ಯಾಕಂದರೆ ನಮ್ಮ ತಪ್ಪುಗಳನ್ನು ತಿದ್ದಿ ಸರಿಪಡಿಸಲು ಅದು ನಮ್ಮನ್ನು ಪ್ರೇರಿಸಬಲ್ಲದು. ಆದರೂ, ಅಪರಾಧಿಭಾವದ ಭಾರದಡಿ ಹೂತುಹೋಗುವಂಥ ಗಂಡಾಂತರವು ಸಹ ಇದೆ. ಸ್ವಖಂಡನೆಯನ್ನು ಮಾಡುವ ನಮ್ಮ ಹೃದಯವು, ನಾವೆಷ್ಟೇ ಪಶ್ಚಾತ್ತಾಪಭಾವದವರಾಗಿರಲಿ ಯೆಹೋವನು ನಮ್ಮನ್ನು ಎಂದಿಗೂ ಕ್ಷಮಿಸನೆಂದು ಹಠಹಿಡಿದು ಹೇಳೀತು. ನಾವು ಅಪರಾಧಿಭಾವದಲ್ಲಿ ‘ಮುಳುಗಿಹೋದಲ್ಲಿ,’ ನಾವು ನಿಷ್ಪ್ರಯೋಜಕರು, ಯೆಹೋವನನ್ನು ಸೇವಿಸಲು ಅರ್ಹರೇ ಅಲ್ಲವೆಂದು ನೆನಸುವಂತೆ ಮಾಡಿ, ನಾವು ಬಿಟ್ಟುಕೊಡುವಂತೆ ಸೈತಾನನು ಪ್ರಯತ್ನಿಸಬಹುದು.—2 ಕೊರಿಂಥ 2:5-11.
3 ಯೆಹೋವನು ನಿಜವಾಗಿಯೂ ನಮ್ಮನ್ನು ಅಯೋಗ್ಯರೋಪಾದಿ ವೀಕ್ಷಿಸುತ್ತಾನೋ? ಇಲ್ಲವೇ ಇಲ್ಲ! ಕ್ಷಮೆ ಯೆಹೋವನ ಮಹಾ ಪ್ರೀತಿಯ ಒಂದು ವೈಶಿಷ್ಟ್ಯವಾಗಿದೆ. ನಾವು ನಿಜವಾದ, ಹೃತ್ಪೂರ್ವಕ ಪಶ್ಚಾತ್ತಾಪವನ್ನು ತೋರಿಸುವುದಾದರೆ ಆತನು ಕ್ಷಮಿಸಲು ಸಿದ್ಧನಾಗಿದ್ದಾನೆಂಬ ಆಶ್ವಾಸನೆಯನ್ನು ಆತನು ತನ್ನ ವಾಕ್ಯದಲ್ಲಿ ಕೊಡುತ್ತಾನೆ. (ಜ್ಞಾನೋಕ್ತಿ 28:13) ಯೆಹೋವನ ಕ್ಷಮಾಪಣೆಯು ನಮಗೆ ಲಭ್ಯವಾಗದೆಂದು ಎಂದಾದರೂ ಭಾವಿಸುವುದನ್ನು ತಡೆಯಲಿಕ್ಕಾಗಿ, ಆತನು ಏಕೆ ಮತ್ತು ಹೇಗೆ ಕ್ಷಮಿಸುತ್ತಾನೆಂಬುದನ್ನು ನಾವೀಗ ಪರೀಕ್ಷಿಸೋಣ.
ಯೆಹೋವನು ಏಕೆ ‘ಕ್ಷಮಿಸಲು ಸಿದ್ಧನು’ ಆಗಿದ್ದಾನೆ?
4. ನಮ್ಮ ಪ್ರಕೃತಿಯ ಕುರಿತು ಯೆಹೋವನು ಏನನ್ನು ನೆನಪುಮಾಡುತ್ತಾನೆ, ಮತ್ತು ಇದು ಆತನು ನಮ್ಮನ್ನು ಉಪಚರಿಸುವ ವಿಧದ ಮೇಲೆ ಹೇಗೆ ಪ್ರಭಾವಬೀರುತ್ತದೆ?
4 ನಮ್ಮ ಇತಿಮಿತಿಗಳನ್ನು ಯೆಹೋವನು ಬಲ್ಲನು. “ಆತನು ನಮ್ಮ ಪ್ರಕೃತಿಯನ್ನು [“ರಚನೆಯನ್ನು,” NW] ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ,” ಎನ್ನುತ್ತದೆ ಕೀರ್ತನೆ 103:14. ನಾವು ಧೂಳಿನಿಂದ ಉಂಟುಮಾಡಲ್ಪಟ್ಟವರು, ಅಪರಿಪೂರ್ಣತೆಯಿಂದಾಗಿ ನಮ್ಮಲ್ಲಿ ನಿರ್ಬಲತೆಗಳೂ ಬಲಹೀನತೆಗಳೂ ಇವೆಯೆಂಬುದನ್ನು ಆತನು ಮರೆತುಬಿಡುವುದಿಲ್ಲ. ಆತನು ನಮ್ಮ “ರಚನೆಯನ್ನು” ಬಲ್ಲನು ಎಂಬ ಅಭಿವ್ಯಕ್ತಿಯು, ಬೈಬಲು ಯೆಹೋವನನ್ನು ಒಬ್ಬ ಕುಂಬಾರನಿಗೂ ನಮ್ಮನ್ನು ಆತನಿಂದ ರಚಿಸಲ್ಪಟ್ಟಿರುವ ಮಣ್ಣಿನ ಪಾತ್ರೆಗಳಿಗೂ ಹೋಲಿಸುವುದನ್ನು ಜ್ಞಾಪಕಕ್ಕೆ ತರುತ್ತದೆ. a (ಯೆರೆಮೀಯ 18:2-6) ಈ ಮಹಾ ಕುಂಬಾರನು, ನಮ್ಮ ಬಲಹೀನ ಪಾಪಪೂರ್ಣ ಸ್ವಭಾವಕ್ಕನುಗುಣವಾಗಿ ಮತ್ತು ನಾವು ಆತನ ಮಾರ್ಗದರ್ಶನೆಗೆ ಪ್ರತಿಕ್ರಿಯೆ ತೋರಿಸುವ ಅಥವಾ ತೋರಿಸದೇ ಇರುವ ರೀತಿಗೆ ತಕ್ಕಂತೆ ನಮ್ಮೊಂದಿಗಿನ ತನ್ನ ವ್ಯವಹಾರಗಳನ್ನು ಹದಗೊಳಿಸುತ್ತಾನೆ.
5. ಪಾಪದ ಪ್ರಬಲವಾದ ಹಿಡಿತವನ್ನು ರೋಮಾಪುರ ಪುಸ್ತಕವು ಹೇಗೆ ವರ್ಣಿಸುತ್ತದೆ?
5 ಪಾಪವು ಎಷ್ಟು ಪ್ರಬಲವಾಗಿದೆಯೆಂದು ಯೆಹೋವನಿಗೆ ತಿಳಿದಿರುತ್ತದೆ. ಮನುಷ್ಯನನ್ನು ತನ್ನ ಮಾರಕ ಮುಷ್ಟಿಯೊಳಗೆ ಹಿಡಿದಿಟ್ಟಿರುವ ಬಲಿಷ್ಠ ಶಕ್ತಿಯಾಗಿ ಬೈಬಲು ಪಾಪವನ್ನು ವರ್ಣಿಸುತ್ತದೆ. ಪಾಪದ ಈ ಬಿಗಿಮುಷ್ಟಿಯು ಎಷ್ಟು ಬಲವಾದದ್ದು? ರೋಮಾಪುರ ಪುಸ್ತಕದಲ್ಲಿ ಅಪೊಸ್ತಲ ಪೌಲನು ವಿವರಿಸುವುದು: ಸೈನಿಕರು ತಮ್ಮ ಸೇನಾಪತಿಯ ಕೆಳಗೆ ಹೇಗೋ ಹಾಗೆ ನಾವು ‘ಪಾಪಕ್ಕೆ ಒಳಬಿದ್ದವರು’ ಆಗಿದ್ದೇವೆ (ರೋಮಾಪುರ 3:9); ಪಾಪವು ಮಾನವಕುಲದ ಮೇಲೆ ಒಬ್ಬ ಅರಸನಂತೆ ‘ಅಧಿಕಾರ ನಡಿಸಿದೆ’ (ರೋಮಾಪುರ 5:21); ಅದು ನಮ್ಮೊಳಗೆ ‘ನೆಲೆಗೊಂಡಿದೆ’ (ರೋಮಾಪುರ 7:17, 20); ಅದರ ‘ನಿಯಮವು’ ಕಾರ್ಯತಃ ನಮ್ಮ ಮಾರ್ಗಕ್ರಮವನ್ನು ಹತೋಟಿಯಲ್ಲಿಡಲು ಪ್ರಯತ್ನಿಸುತ್ತಾ ಸದಾ ನಮ್ಮೊಳಗೆ ಜಾರಿಯಲ್ಲಿದೆ. (ರೋಮಾಪುರ 7:23, 25) ನಮ್ಮ ಅಪರಿಪೂರ್ಣ ಶರೀರದ ಮೇಲೆ ಪಾಪದ ಹಿಡಿತವು ಅದೆಷ್ಟು ಪ್ರಬಲವಾಗಿರುತ್ತದೆ!—ರೋಮಾಪುರ 7:21, 24.
6, 7. (ಎ) ಪಶ್ಚಾತ್ತಾಪಿ ಹೃದಯದಿಂದ ತನ್ನ ಕರುಣೆಯನ್ನು ಕೋರುವವರನ್ನು ಯೆಹೋವನು ಹೇಗೆ ವೀಕ್ಷಿಸುತ್ತಾನೆ? (ಬಿ) ದೇವರು ಹೇಗೂ ಕರುಣೆಯನ್ನು ತೋರಿಸುತ್ತಾನೆ ಎಂದು ನಾವು ಭಾವಿಸಬಾರದೇಕೆ?
6 ಆದುದರಿಂದ ನಾವು ಯೆಹೋವನಿಗೆ ಪರಿಪೂರ್ಣ ವಿಧೇಯತೆಯನ್ನು ತೋರಿಸಲು ಎಷ್ಟೇ ಮನಃಪೂರ್ವಕವಾಗಿ ಹಂಬಲಿಸಲಿ, ಅದು ನಮ್ಮಿಂದ ಸಾಧ್ಯವಿಲ್ಲದ ಸಂಗತಿಯೆಂದು ಆತನಿಗೆ ತಿಳಿದದೆ. ನಾವು ಪಶ್ಚಾತ್ತಾಪಿ ಹೃದಯದಿಂದ ಆತನ ಕರುಣೆಗಾಗಿ ಕೋರುವಾಗ, ಆತನು ಕ್ಷಮೆಯನ್ನು ನೀಡುವನೆಂದು ನಮಗೆ ಪ್ರೀತಿಯಿಂದ ಆಶ್ವಾಸನೆಕೊಡುತ್ತಾನೆ. ಕೀರ್ತನೆ 51:17 ಹೇಳುವುದು: “ಕುಗ್ಗಿದ ಮನಸ್ಸೇ ದೇವರಿಗೆ ಇಷ್ಟಯಜ್ಞ; ದೇವರೇ, ಪಶ್ಚಾತ್ತಾಪದಿಂದ ಜಜ್ಜಿಹೋದ ಮನಸ್ಸನ್ನು ನೀನು ತಿರಸ್ಕರಿಸುವದಿಲ್ಲ.” ಅಪರಾಧಿಭಾವದ ಹೊರೆಯಿಂದ “ಜಜ್ಜಿಹೋದ” ಮನಸ್ಸನ್ನು ಯೆಹೋವನೆಂದೂ ತಿರಸ್ಕರಿಸನು ಅಥವಾ ಬಿಟ್ಟುಬಿಡನು.
7 ಇದರರ್ಥ, ದೇವರು ಹೇಗೂ ಕರುಣೆ ತೋರಿಸುತ್ತಾನೆ ಎಂದು ಭಾವಿಸಿ, ನಾವು ನಮ್ಮ ಪಾಪಪೂರ್ಣ ಪ್ರಕೃತಿಯನ್ನು ಪಾಪಗೈಯಲು ಒಂದು ನೆವವಾಗಿ ಉಪಯೋಗಿಸಬಹುದೆಂದೊ? ಖಂಡಿತವಾಗಿಯೂ ಇಲ್ಲ! ಯೆಹೋವನು ಕೇವಲ ಭಾವುಕನಾಗಿ ಕೆಲಸಮಾಡುವ ವ್ಯಕ್ತಿಯಲ್ಲ. ಆತನ ಕರುಣೆಗೂ ಮಿತಿಗಳಿವೆ. ಯಾರು ಪಶ್ಚಾತ್ತಾಪವನ್ನು ತೋರಿಸದೆ, ಕಲ್ಲುಹೃದಯದವರಾಗಿ ಬುದ್ಧಿಪೂರ್ವಕವಾಗಿ ಪಾಪವನ್ನು ನಡಿಸುತ್ತಾ ಹೋಗುತ್ತಾರೊ, ಅಂಥವರನ್ನು ಆತನೆಂದೂ ಕ್ಷಮಿಸನು. (ಇಬ್ರಿಯ 10:26) ಇನ್ನೊಂದು ಕಡೆ, ಪಶ್ಚಾತ್ತಾಪದಿಂದ ಜಜ್ಜಿಹೋದ ಹೃದಯವೊಂದನ್ನು ಆತನು ಕಾಣುವಾಗ ಆತನು ಕ್ಷಮಿಸಲು ಸಿದ್ಧನಾಗಿರುತ್ತಾನೆ. ಯೆಹೋವನ ಪ್ರೀತಿಯ ಈ ಅದ್ಭುತವಾದ ವೈಶಿಷ್ಟ್ಯವನ್ನು ವರ್ಣಿಸಲಿಕ್ಕಾಗಿ ಬೈಬಲಿನಲ್ಲಿ ಉಪಯೋಗಿಸಲ್ಪಟ್ಟಿರುವ ಭಾವಗರ್ಭಿತ ಭಾಷೆಯಲ್ಲಿ ಕೆಲವೊಂದನ್ನು ನಾವೀಗ ಪರಿಗಣಿಸೋಣ.
ಯೆಹೋವನು ಎಷ್ಟು ಪೂರ್ಣವಾಗಿ ಕ್ಷಮಿಸುತ್ತಾನೆ?
8. ನಮ್ಮ ಪಾಪಗಳನ್ನು ಪರಿಹರಿಸಿಬಿಡುವಾಗ ಯೆಹೋವನು ಕಾರ್ಯತಃ ಏನನ್ನು ಮಾಡುತ್ತಾನೆ, ಮತ್ತು ಇದು ನಮಗೆ ಯಾವ ಭರವಸೆಯನ್ನು ಕೊಡುತ್ತದೆ?
8 ಪಶ್ಚಾತ್ತಾಪಿ ದಾವೀದನು ಅಂದದ್ದು: “ನನ್ನ ಪಾಪವನ್ನು ಮರೆಮಾಡದೆ ನಿನಗೆ ನನ್ನ ದೋಷವನ್ನು ತಿಳಿಸಿದೆನು. ನೀನು ನನ್ನ ಅಪರಾಧಪಾಪಗಳನ್ನು ಪರಿಹರಿಸಿಬಿಟ್ಟಿ.” (ಓರೆ ಅಕ್ಷರಗಳು ನಮ್ಮವು.) (ಕೀರ್ತನೆ 32:5) “ಪರಿಹರಿಸಿಬಿಟ್ಟಿ” ಎಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರು ಪದಕ್ಕೆ “ಮೇಲೆತ್ತು” ಅಥವಾ “ಹೊತ್ತುಕೊ” ಎಂಬ ಮೂಲಾರ್ಥವಿದೆ. ಇಲ್ಲಿ ಅದರ ಉಪಯೋಗವು “ಪಾಪ, ದೋಷ, ಅಪರಾಧವನ್ನು” ತೆಗೆದುಹಾಕುವುದನ್ನು ಸೂಚಿಸುತ್ತದೆ. ಹೀಗೆ ಯೆಹೋವನು ಕಾರ್ಯತಃ ದಾವೀದನ ಪಾಪಗಳನ್ನು ಮೇಲಕ್ಕೆತ್ತಿ ಹೊತ್ತುಕೊಂಡು ಹೋದನು. ದಾವೀದನಿಗಿದ್ದ ಅಪರಾಧಿ ಭಾವನೆಗಳನ್ನು ಇದು ನಿಸ್ಸಂದೇಹವಾಗಿ ತಗ್ಗಿಸಿತು. (ಕೀರ್ತನೆ 32:3) ಯಾರು ಯೇಸುವಿನ ಈಡು ಯಜ್ಞದಲ್ಲಿ ನಂಬಿಕೆಯನ್ನಿಟ್ಟು ದೇವರ ಕ್ಷಮಾಪಣೆಗಾಗಿ ಕೋರುತ್ತಾರೋ ಅವರ ಪಾಪಗಳನ್ನೂ ಆತನು ಹೊತ್ತುಕೊಂಡು ದೂರ ಒಯ್ಯುತ್ತಾನೆಂಬ ವಿಷಯದಲ್ಲಿ ನಮಗೂ ಪೂರ್ಣ ಭರವಸೆಯಿರಸಾಧ್ಯವಿದೆ.—ಮತ್ತಾಯ 20:28.
9. ಯೆಹೋವನು ನಮ್ಮ ಪಾಪಗಳನ್ನು ನಮ್ಮಿಂದ ಎಷ್ಟು ದೂರಮಾಡುತ್ತಾನೆ?
9 ಯೆಹೋವನ ಕ್ಷಮಾಪಣೆಯನ್ನು ವರ್ಣಿಸುವುದಕ್ಕೋಸ್ಕರ ದಾವೀದನು ಇನ್ನೊಂದು ಸುವ್ಯಕ್ತ ಹೇಳಿಕೆಯನ್ನು ಉಪಯೋಗಿಸಿದನು: “ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೋ ನಮ್ಮ ದ್ರೋಹಗಳನ್ನು ನಮ್ಮಿಂದ ತೆಗೆದು ಅಷ್ಟು ದೂರ ಮಾಡಿದ್ದಾನೆ.” (ಓರೆ ಅಕ್ಷರಗಳು ನಮ್ಮವು.) (ಕೀರ್ತನೆ 103:12) ಪೂರ್ವಕ್ಕೂ ಪಶ್ಚಿಮಕ್ಕೂ ಇರುವ ದೂರವಾದರೂ ಎಷ್ಟು? ಒಂದರ್ಥದಲ್ಲಿ, ಪೂರ್ವ ದಿಕ್ಕು ಯಾವಾಗಲೂ ಪಶ್ಚಿಮ ದಿಕ್ಕಿನಿಂದ ಊಹಿಸಬಹುದಾದ ಅತ್ಯಂತ ದೂರದ ಅಂತರದಲ್ಲಿದೆ. ಈ ಎರಡೂ ಬಿಂದುಗಳು ಎಂದೂ ಸಂಧಿಸಲಾರವು. ಈ ಅಭಿವ್ಯಕ್ತಿಯ ಅರ್ಥವು “ಸಾಧ್ಯವಾದಷ್ಟು ದೂರ; ನಾವು ಊಹಿಸಬಹುದಾದಷ್ಟು ದೂರ” ಎಂದಾಗಿದೆ ಎಂಬುದಾಗಿ ಒಬ್ಬ ಬೈಬಲ್ ವಿದ್ವಾಂಸನು ಹೇಳುತ್ತಾನೆ. ದಾವೀದನ ಪ್ರೇರಿತ ಮಾತುಗಳು ನಮಗೆ ತಿಳಿಸುವುದೇನಂದರೆ, ಯೆಹೋವನು ಕ್ಷಮಿಸುವಾಗ ನಮ್ಮ ಪಾಪಗಳನ್ನು ಆತನು ನಮ್ಮಿಂದ ಊಹಿಸಸಾಧ್ಯವಿರುವಷ್ಟು ದೂರಕ್ಕೆ ಹಾಕುತ್ತಾನೆ.
10. ಯೆಹೋವನು ನಮ್ಮ ಪಾಪಗಳನ್ನು ಕ್ಷಮಿಸುವಾಗ, ನಾವು ಆ ಪಾಪದ ಕಲೆಯನ್ನು ನಮ್ಮ ಜೀವಮಾನವಿಡೀ ಹೊತ್ತುಕೊಳ್ಳುತ್ತೇವೆಂದು ಭಾವಿಸಬಾರದೇಕೆ?
10 ಒಂದು ತಿಳಿಬಣ್ಣದ ಉಡುಪಿನಿಂದ ಕಲೆಯೊಂದನ್ನು ತೆಗೆದುಹಾಕಲು ನೀವೆಂದಾದರೂ ಪ್ರಯತ್ನಿಸಿದ್ದುಂಟೋ? ನೀವೆಷ್ಟು ಪ್ರಯತ್ನಪಟ್ಟಾಗ್ಯೂ ಆ ಕಲೆಯು ಪ್ರಾಯಶಃ ಇನ್ನೂ ಕಾಣುತ್ತಿರುತ್ತದೆ. ಕ್ಷಮಿಸಲು ತನಗಿರುವ ಸಾಮರ್ಥ್ಯವನ್ನು ಯೆಹೋವನು ಹೇಗೆ ವರ್ಣಿಸುತ್ತಾನೆಂದು ಗಮನಿಸಿರಿ: “ನಿಮ್ಮ ಪಾಪಗಳು ಕಡು ಕೆಂಪಾಗಿದ್ದರೂ ಹಿಮದ ಹಾಗೆ ಬಿಳುಪಾಗುವವು; ಕಿರಮಂಜಿಬಣ್ಣವಾಗಿದ್ದರೂ ಉಣ್ಣೆಯಂತೆ ಬೆಳ್ಳಗಾಗುವವು.” (ಓರೆ ಅಕ್ಷರಗಳು ನಮ್ಮವು.) (ಯೆಶಾಯ 1:18) ‘ಕಡು ಕೆಂಪು’ ಎಂಬ ಪದವು ಗಾಢ ಕೆಂಪು ಬಣ್ಣವನ್ನು ಸೂಚಿಸುತ್ತದೆ. b “ಕಿರಮಂಜಿ” ಬಣ್ಣವು ರಂಗುಹಾಕಿದ ವಸ್ತ್ರದ ಕಡು ಬಣ್ಣಗಳಲ್ಲೊಂದು. (ನಹೂಮ 2:3) ನಾವು ನಮ್ಮ ಸ್ವಂತ ಪ್ರಯತ್ನಗಳಿಂದ ಪಾಪದ ಕಲೆಯನ್ನೆಂದೂ ತೆಗೆಯಲಾರೆವು. ಆದರೆ ಯೆಹೋವನು ಕಡು ಕೆಂಪಾದ ಮತ್ತು ಕಿರಮಂಜಿ ಬಣ್ಣದಂಥ ಪಾಪಗಳನ್ನು ಸಹ ತೆಗೆದುಹಾಕಿ ಹಿಮದ ಹಾಗೆ ಮತ್ತು ಬಣ್ಣಹಾಕದ ಉಣ್ಣೆಯಷ್ಟು ಬೆಳ್ಳಗೆ ಮಾಡಬಲ್ಲನು. ಯೆಹೋವನು ನಮ್ಮ ಪಾಪಗಳನ್ನು ಕ್ಷಮಿಸುವಾಗ, ನಾವು ನಮ್ಮ ಉಳಿದ ಜೀವಮಾನವಿಡೀ ಅಂಥ ಪಾಪಗಳ ಕಲೆಯನ್ನು ಹೊತ್ತುಕೊಂಡಿರುವೆವೆಂದು ಭಾವಿಸುವ ಅಗತ್ಯವಿರುವುದಿಲ್ಲ.
11. ಯಾವ ರೀತಿಯಲ್ಲಿ ಯೆಹೋವನು ನಮ್ಮ ಪಾಪಗಳನ್ನು ತನ್ನ ಬೆನ್ನ ಹಿಂದೆ ಹಾಕಿಬಿಡುತ್ತಾನೆ?
11 ಒಂದು ಪ್ರಾಣಾಂತಕ ರೋಗದಿಂದ ಬದುಕಿಸಲ್ಪಟ್ಟ ಬಳಿಕ ಹಿಜ್ಕೀಯನು ಕೃತಜ್ಞತೆ ತುಂಬಿದ ಒಂದು ಮನಮುಟ್ಟುವ ಗೀತೆಯನ್ನು ರಚಿಸಿದನು. ಅದರಲ್ಲಿ ಅವನು ಯೆಹೋವನಿಗಂದದ್ದು: “ನನ್ನ ಪಾಪಗಳನ್ನೆಲ್ಲಾ ನಿನ್ನ ಬೆನ್ನ ಹಿಂದೆ ಹಾಕಿಬಿಟ್ಟಿದ್ದೀ.” (ಓರೆ ಅಕ್ಷರಗಳು ನಮ್ಮವು.) (ಯೆಶಾಯ 38:17) ಯೆಹೋವನು, ಪಶ್ಚಾತ್ತಾಪಪಟ್ಟ ತಪ್ಪಿತಸ್ಥನ ಪಾಪಗಳನ್ನು ತೆಗೆದುಹಾಕಿ, ಇನ್ನು ಮುಂದೆ ತನಗೆ ಕಾಣದ ಅಥವಾ ಗಮನಕ್ಕೆ ಬಾರದಂಥ ತನ್ನ ಬೆನ್ನಹಿಂದೆ ಎಸೆದುಬಿಡುತ್ತಿರುವಂತೆ ಇಲ್ಲಿ ಚಿತ್ರಿಸಲಾಗಿದೆ. ಒಂದು ಕೃತಿಯು ಈ ವಿಚಾರವನ್ನು ಹೀಗೆ ವ್ಯಕ್ತಪಡಿಸಿದೆ: “ನೀನು [ನನ್ನ ಪಾಪಗಳನ್ನು] ಅವು ಸಂಭವಿಸಿಯೇ ಇಲ್ಲವೊ ಎಂಬಂತೆ ಮಾಡಿರುವಿ.” ಇದರಿಂದ ಹೃದಯಕ್ಕೆ ತಂಪೆರೆದಂತಾಗುತ್ತದೆ ಅಲ್ಲವೇ?
12. ಯೆಹೋವನು ಕ್ಷಮಿಸುವಾಗ, ಆತನು ನಮ್ಮ ಪಾಪಗಳನ್ನು ಶಾಶ್ವತವಾಗಿ ತೆಗೆದುಹಾಕುತ್ತಾನೆಂದು ಪ್ರವಾದಿಯಾದ ಮೀಕನು ಹೇಗೆ ಸೂಚಿಸುತ್ತಾನೆ?
12 ಪುನಸ್ಸ್ಥಾಪನೆಯ ಒಂದು ವಾಗ್ದಾನದಲ್ಲಿ, ತನ್ನ ಪಶ್ಚಾತ್ತಾಪಟ್ಟ ಜನರನ್ನು ಯೆಹೋವನು ಕ್ಷಮಿಸಿಯೇ ಕ್ಷಮಿಸುವನೆಂಬ ತನ್ನ ದೃಢಭರವಸೆಯನ್ನು ಮೀಕನು ವ್ಯಕ್ತಪಡಿಸಿದನು: ‘ನಿನಗೆ ಯಾವ ದೇವರು ಸಮಾನ? ನೀನು ನಿನ್ನ ಸ್ವಾಸ್ತ್ಯದವರಲ್ಲಿ ಉಳಿದವರ ಅಪರಾಧವನ್ನು ಕ್ಷಮಿಸುವವನು, ನಿನ್ನ ಜನರ ಪಾಪಗಳನ್ನೆಲ್ಲಾ ಸಮುದ್ರದ ತಳಕ್ಕೆ ಬಿಸಾಟುಬಿಡುವಿ.’ (ಮೀಕ 7:18, 19) ಬೈಬಲಿನ ಕಾಲದಲ್ಲಿ ಜೀವಿಸುತ್ತಿದ್ದ ಜನರಿಗೆ ಈ ಮಾತುಗಳು ಯಾವ ಅರ್ಥದಲ್ಲಿದ್ದವೆಂಬುದನ್ನು ಕಲ್ಪಿಸಿಕೊಳ್ಳಿರಿ. “ಸಮುದ್ರದ ತಳಕ್ಕೆ” ಬಿಸಾಡಲ್ಪಟ್ಟ ಏನನ್ನಾದರೂ ಮರಳಿಪಡೆದುಕೊಳ್ಳುವ ಯಾವುದೇ ಅವಕಾಶವಿತ್ತೊ? ಹೀಗಿರುವುದರಿಂದ ಯೆಹೋವನು ಕ್ಷಮಿಸುವಾಗ, ಆತನು ನಮ್ಮ ಪಾಪಗಳನ್ನು ಶಾಶ್ವತವಾಗಿ ತೆಗೆದುಹಾಕುತ್ತಾನೆಂದೇ ಮೀಕನ ಆ ಮಾತುಗಳು ಸೂಚಿಸುತ್ತವೆ.
13. “ನಮ್ಮ ಸಾಲಗಳನ್ನು ಕ್ಷಮಿಸು” ಎಂಬ ಯೇಸುವಿನ ಮಾತುಗಳ ಅರ್ಥವೇನು?
13 ಯೆಹೋವನ ಕ್ಷಮಾಶೀಲತೆಯನ್ನು ದೃಷ್ಟಾಂತಿಸಲಿಕ್ಕಾಗಿ ಯೇಸು ಸಾಲಕೊಟ್ಟವರ ಮತ್ತು ಸಾಲಗಾರರ ನಡುವಣ ಸಂಬಂಧವನ್ನು ಉಪಯೋಗಿಸಿದನು. “ನಮ್ಮ ಸಾಲಗಳನ್ನು ಕ್ಷಮಿಸು” ಎಂದು ಪ್ರಾರ್ಥಿಸುವಂತೆ ಯೇಸು ನಮಗೆ ಕಲಿಸಿದ್ದನು. (ಓರೆ ಅಕ್ಷರಗಳು ನಮ್ಮವು.) (ಮತ್ತಾಯ 6:12, ಸತ್ಯವೇದವು Reference Edition ಪಾದಟಿಪ್ಪಣಿ) ಹೀಗೆ ಯೇಸು ಪಾಪಗಳನ್ನು ಸಾಲಗಳಿಗೆ ಹೋಲಿಸಿದನು. ನಾವು ಪಾಪಮಾಡುವಾಗ ಯೆಹೋವನಿಗೆ “ಸಾಲಗಾರ”ರಾಗುತ್ತೇವೆ. “ಕ್ಷಮಿಸು” ಎಂದು ಭಾಷಾಂತರವಾಗಿರುವ ಗ್ರೀಕ್ ಕ್ರಿಯಾಪದದ ಅರ್ಥದ ಕುರಿತು ಒಂದು ಪರಾಮರ್ಶ ಕೃತಿಯು ಹೇಳುವುದು: “ಅದಕ್ಕಾಗಿ ತಗಾದೆ ಮಾಡದಿರುವ ಮೂಲಕ ಸಾಲವನ್ನು ಬಿಟ್ಟುಬಿಡುವುದು, ಬಿಟ್ಟುಕೊಡುವುದು.” ಯೆಹೋವನು ಕ್ಷಮಿಸುವಾಗ, ಒಂದರ್ಥದಲ್ಲಿ ಅನ್ಯಥಾ ನಮ್ಮ ಖಾತೆಗೆ ಕೂಡಿಸಲಾಗುತ್ತಿದ್ದ ಸಾಲವನ್ನು ರದ್ದುಮಾಡಿಬಿಡುತ್ತಾನೆ. ಹೀಗಾಗಿ ಪಶ್ಚಾತ್ತಾಪಪಟ್ಟಿರುವ ಪಾಪಿಗಳು ಸಾಂತ್ವನವನ್ನು ಪಡೆದುಕೊಳ್ಳಬಲ್ಲರು. ಏಕೆಂದರೆ ತಾನು ರದ್ದುಮಾಡಿರುವ ಒಂದು ಸಾಲವನ್ನು ತೀರಿಸುವಂತೆ ಯೆಹೋವನೆಂದೂ ಕೇಳನು!—ಕೀರ್ತನೆ 32:1, 2.
14. “ನಿಮ್ಮ ಪಾಪಗಳನ್ನು ಅಳಿಸಿಬಿಡುವ ಹಾಗೆ” ಎಂಬ ಹೇಳಿಕೆಯು ಯಾವ ಚಿತ್ರಣವನ್ನು ಮನಸ್ಸಿಗೆ ತರುತ್ತದೆ?
14 ಯೆಹೋವನ ಕ್ಷಮಾಶೀಲತೆಯು ಅಪೊಸ್ತಲರ ಕೃತ್ಯಗಳು 3:19ರಲ್ಲಿ ಇನ್ನೂ ಹೆಚ್ಚು ವರ್ಣಿಸಲ್ಪಟ್ಟಿದೆ: “ದೇವರು ನಿಮ್ಮ ಪಾಪಗಳನ್ನು ಅಳಿಸಿಬಿಡುವ ಹಾಗೆ ನೀವು ಪಶ್ಚಾತ್ತಾಪಪಟ್ಟು ಆತನ ಕಡೆಗೆ ತಿರುಗಿಕೊಳ್ಳಿರಿ.” (ಓರೆ ಅಕ್ಷರಗಳು ನಮ್ಮವು.) “ಅಳಿಸಿಬಿಡುವ ಹಾಗೆ” ಎಂದು ಭಾಷಾಂತರವಾದ ಗ್ರೀಕ್ ಕ್ರಿಯಾಪದದ ಅರ್ಥವು “ಒರಸಿಬಿಡು . . . ರದ್ದುಮಾಡು ಅಥವಾ ನಾಶಮಾಡು” ಎಂಬರ್ಥವುಳ್ಳದ್ದಾಗಿರಬಲ್ಲದು. ಕೆಲವು ವಿದ್ವಾಂಸರಿಗೆ ಅನುಸಾರವಾಗಿ, ಇದು ಕೈಬರಹದ ಅಳಿಸುವಿಕೆಯ ಚಿತ್ರವನ್ನು ಮನಸ್ಸಿಗೆ ತರುತ್ತದೆ. ಇದು ಹೇಗೆ ಸಾಧ್ಯ? ಪುರಾತನ ಕಾಲದಲ್ಲಿ ಸಾಮಾನ್ಯವಾಗಿ ಬಳಸಲ್ಪಡುತ್ತಿದ್ದ ಶಾಯಿಯು ಇಂಗಾಲ, ಗೋಂದು, ಮತ್ತು ನೀರಿನ ಮಿಶ್ರಣದಿಂದ ಮಾಡಲ್ಪಡುತ್ತಿತ್ತು. ಒಬ್ಬ ವ್ಯಕ್ತಿಯು ಅಂಥ ಶಾಯಿಯಿಂದ ಬರೆದ ನಂತರ ಕೂಡಲೆ ಒಂದು ಒದ್ದೆ ಸ್ಪಂಜಿನಿಂದ ಆ ಬರವಣಿಗೆಯನ್ನು ಅಳಿಸಬಹುದಿತ್ತು. ಯೆಹೋವನ ಕರುಣೆಯ ಒಂದು ಸುಂದರವಾದ ಚಿತ್ರಣವು ಇಲ್ಲಿ ಕಂಡುಬರುತ್ತದೆ. ಆತನು ನಮ್ಮ ಪಾಪಗಳನ್ನು ಕ್ಷಮಿಸುವಾಗ, ಅದು ಆತನು ಒಂದು ಸ್ಪಂಜನ್ನು ತೆಗೆದುಕೊಂಡು ಅಳಿಸಿಬಿಡುತ್ತಾನೋ ಎಂಬಂತೆ ಇದೆ.
ಯೆಹೋವನು ‘ಕ್ಷಮಿಸಲು ಸಿದ್ಧನು’ ಆಗಿರುವುದನ್ನು ನಾವು ತಿಳಿದುಕೊಳ್ಳಬೇಕೆಂಬುದು ಆತನ ಅಪೇಕ್ಷೆಯಾಗಿದೆ
15. ತನ್ನ ಕುರಿತು ನಾವೇನನ್ನು ತಿಳಿಯುವಂತೆ ಯೆಹೋವನು ಬಯಸುತ್ತಾನೆ?
15 ಈ ಎಲ್ಲಾ ದೃಷ್ಟಾಂತಗಳ ಕುರಿತಾಗಿ ಆಲೋಚಿಸುವಾಗ, ನಾವು ನಿಜವಾಗಿ ಪಶ್ಚಾತ್ತಾಪಪಡುವಲ್ಲಿ ಯೆಹೋವನು ನಮ್ಮ ಪಾಪಗಳನ್ನು ಕ್ಷಮಿಸಲು ನಿಜವಾಗಿಯೂ ಸಿದ್ಧನಾಗಿದ್ದಾನೆಂಬುದನ್ನು ನಾವು ತಿಳಿಯುವಂತೆ ಆತನು ಬಯಸುತ್ತಾನೆಂಬುದು ಸ್ಪಷ್ಟವಾಗುವುದಿಲ್ಲವೊ? ಭವಿಷ್ಯತ್ತಿನಲ್ಲಿ ಅಂಥ ಪಾಪಗಳಿಗಾಗಿ ಆತನು ನಮ್ಮನ್ನು ಖಂಡಿಸುವನೆಂದು ನಾವೆಂದೂ ಹೆದರುವ ಅಗತ್ಯವಿಲ್ಲ. ಯೆಹೋವನ ಮಹಾಕರುಣೆಯ ಕುರಿತು ಬೈಬಲ್ ಪ್ರಕಟಪಡಿಸುವ ಬೇರೊಂದು ವಿಷಯದಿಂದ ಇದು ತೋರಿಸಲ್ಪಟ್ಟಿದೆ: ಆತನು ಕ್ಷಮಿಸುವಾಗ, ಅದನ್ನು ಮರೆತು ಬಿಡುತ್ತಾನೆ ಕೂಡ.
“ಅವರ ಪಾಪವನ್ನು ನನ್ನ ನೆನಪಿಗೆ ಎಂದಿಗೂ ತರುವದಿಲ್ಲ”
16, 17. ಯೆಹೋವನು ನಮ್ಮ ಪಾಪಗಳನ್ನು ಮರೆತುಬಿಡುತ್ತಾನೆಂದು ಬೈಬಲು ಹೇಳುವುದು ಯಾವ ಅರ್ಥದಲ್ಲಿ, ಮತ್ತು ನೀವು ಹಾಗೆ ಉತ್ತರಿಸುವುದೇಕೆ?
16 ಹೊಸ ಒಡಂಬಡಿಕೆಯೊಳಗಿರುವವರ ಕುರಿತು ಯೆಹೋವನು ವಚನವನ್ನಿತ್ತದ್ದು: “ನಾನು ಅವರ ಅಪರಾಧವನ್ನು ಕ್ಷಮಿಸಿ ಅವರ ಪಾಪವನ್ನು ನನ್ನ ನೆನಪಿಗೆ ಎಂದಿಗೂ ತರುವದಿಲ್ಲ.” (ಯೆರೆಮೀಯ 31:34) ಯೆಹೋವನು ಕ್ಷಮಿಸುವಾಗ ಆತನು ಇನ್ನು ಮೇಲೆ ಪಾಪಗಳನ್ನು ನೆನಪಿಗೆ ತರಲು ಅಶಕ್ತನೆಂದು ಇದರ ಅರ್ಥವಾಗುತ್ತದೋ? ಖಂಡಿತವಾಗಿಯೂ ಇಲ್ಲ. ದಾವೀದನನ್ನೂ ಸೇರಿಸಿ, ಯೆಹೋವನು ಕ್ಷಮಿಸಿರುವಂಥ ಅನೇಕ ವ್ಯಕ್ತಿಗಳ ಪಾಪಗಳ ಕುರಿತು ಬೈಬಲು ನಮಗೆ ತಿಳಿಸುತ್ತದೆ. (2 ಸಮುವೇಲ 11:1-17; 12:13) ಅವರು ಗೈದಂಥ ತಪ್ಪುಗಳ ಅರಿವು ಯೆಹೋವನಿಗೆ ಇನ್ನೂ ಇದೆಯೆಂಬುದು ವ್ಯಕ್ತ. ಅವರ ಪಾಪಗಳ ಹಾಗೂ ಅವರ ಪಶ್ಚಾತ್ತಾಪ ಮತ್ತು ದೇವರ ಕ್ಷಮಾಪಣೆಯ ಕುರಿತಾದ ದಾಖಲೆಯು ನಮ್ಮ ಪ್ರಯೋಜನಕ್ಕಾಗಿ ಕಾಪಾಡಿ ಉಳಿಸಲ್ಪಟ್ಟಿದೆ. (ರೋಮಾಪುರ 15:4) ಹಾಗಾದರೆ ಯಾರನ್ನು ಯೆಹೋವನು ಕ್ಷಮಿಸುತ್ತಾನೋ ಅವರ ಪಾಪಗಳನ್ನು ಆತನು “ನೆನಪಿಗೆ” ತರುವುದಿಲ್ಲ ಎಂದು ಬೈಬಲು ಹೇಳಿರುವುದು ಯಾವ ಅರ್ಥದಲ್ಲಿ?
17 ‘ನನ್ನ ನೆನಪಿಗೆ’ ಎಂದು ತರ್ಜುಮೆಯಾಗಿರುವ ಹೀಬ್ರು ಕ್ರಿಯಾಪದವು ಬರೇ ಗತಕಾಲದ ವಿಷಯವನ್ನು ನೆನಪಿಗೆ ತರುವುದಕ್ಕಿಂತ ಹೆಚ್ಚಿನದನ್ನು ಸೂಚಿಸುತ್ತದೆ. ದಿ ಥಿಯಾಲಾಜಿಕಲ್ ವರ್ಡ್ ಬುಕ್ ಆಫ್ ದಿ ಓಲ್ಡ್ ಟೆಸ್ಟಮೆಂಟ್ ತಿಳಿಸುವುದೇನಂದರೆ, ಅದರಲ್ಲಿ “ಸೂಕ್ತವಾದ ಕ್ರಿಯೆಯನ್ನು ಕೈಕೊಳ್ಳುವ ಅಧಿಕ ಅರ್ಥವೂ” ಸೇರಿದೆ. ಹೀಗೆ ಈ ಅರ್ಥದಲ್ಲಿ, “ನೆನಪಿಗೆ” ತರುವುದರಲ್ಲಿ ಪಾಪಿಗಳ ವಿರುದ್ಧ ಕ್ರಿಯೆ ಕೈಕೊಳ್ಳುವುದೂ ಸೇರಿರುತ್ತದೆ. (ಹೋಶೇಯ 9:9) ಆದರೆ “ನಾನು ಅವರ ಪಾಪವನ್ನು ನನ್ನ ನೆನಪಿಗೆ ಎಂದಿಗೂ ತರುವದಿಲ್ಲ” ಎಂದು ದೇವರು ಹೇಳುವಾಗ, ಒಮ್ಮೆ ಆತನು ಪಶ್ಚಾತ್ತಾಪಪಟ್ಟ ಪಾಪಿಗಳನ್ನು ಕ್ಷಮಿಸುವಾಗ ಭವಿಷ್ಯತ್ತಿನಲ್ಲಿ ಮುಂದೆಂದೂ ಆ ಪಾಪಗಳ ನಿಮಿತ್ತ ಅವರಿಗೆ ಶಿಕ್ಷೆ ವಿಧಿಸುವುದಿಲ್ಲವೆಂಬ ಆಶ್ವಾಸನೆಯನ್ನು ನಮಗೆ ಕೊಡುತ್ತಿದ್ದಾನೆ. (ಯೆಹೆಜ್ಕೇಲ 18:21, 22) ನಮ್ಮನ್ನು ಮತ್ತೆ ಮತ್ತೆ ದೂರಲಿಕ್ಕಾಗಿ ಅಥವಾ ಶಿಕ್ಷಿಸಲಿಕ್ಕಾಗಿ ನಮ್ಮ ಪಾಪಗಳನ್ನು ಪುನಃ ಪುನಃ ನೆನಪಿಗೆ ತದಿರುವ ಅರ್ಥದಲ್ಲಿ, ಯೆಹೋವನು ಅವುಗಳನ್ನು ಮರೆತುಬಿಡುತ್ತಾನೆ. ನಮ್ಮ ದೇವರು ಕ್ಷಮಿಸುತ್ತಾನೆ ಮತ್ತು ಮರೆತುಬಿಡುತ್ತಾನೆ ಎಂದು ತಿಳಿಯುವುದು ಸಾಂತ್ವನಕರವಲ್ಲವೇ?
ಪಾಪದ ಫಲಿತಾಂಶಗಳೇನು?
18. ಕ್ಷಮಾಪಣೆಯೆಂದರೆ ಪಶ್ಚಾತ್ತಾಪಪಟ್ಟ ಒಬ್ಬ ಪಾಪಿಯು ತನ್ನ ದುರ್ಮಾರ್ಗದಿಂದಾಗಿ ಬರುವ ಸಕಲ ದುಷ್ಪರಿಣಾಮಗಳಿಂದ ವಿನಾಯಿತಿ ಪಡೆಯುತ್ತಾನೆಂದು ಅರ್ಥವಲ್ಲವೇಕೆ?
18 ಯೆಹೋವನು ಕ್ಷಮಿಸಲು ಸಿದ್ಧನಾಗಿರುವುದು, ಪಶ್ಚಾತ್ತಾಪಪಟ್ಟ ಒಬ್ಬ ಪಾಪಿಯು ತನ್ನ ದುರ್ಮಾರ್ಗದಿಂದಾಗಿ ಬರುವ ಎಲ್ಲಾ ಕೆಟ್ಟ ಫಲಿತಾಂಶಗಳಿಂದ ವಿನಾಯಿತಿ ಪಡೆದುಕೊಳ್ಳುವನೆಂಬುದನ್ನು ಅರ್ಥೈಸುತ್ತದೋ? ಇಲ್ಲವೇ ಇಲ್ಲ. ನಾವು ಪಾಪಮಾಡಿದ ಮೇಲೆ ಅದರಿಂದ ನಮಗೇನೂ ಹಾನಿ ತಟ್ಟದೆಂದು ನಿರೀಕ್ಷಿಸಸಾಧ್ಯವಿಲ್ಲ. ಪೌಲನು ಬರೆದದ್ದು: “ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು.” (ಗಲಾತ್ಯ 6:7) ನಮ್ಮ ಕೃತ್ಯಗಳ ಫಲವಾಗಿ ಕೆಲವು ನಿರ್ದಿಷ್ಟ ಕೆಟ್ಟ ಫಲಿತಾಂಶಗಳನ್ನು ನಾವು ಅನುಭವಿಸಬಹುದು. ಕ್ಷಮೆಯನ್ನು ಕೊಟ್ಟಾದ ಮೇಲೆ ಯೆಹೋವನು ನಮ್ಮ ಮೇಲೆ ಆಪತ್ತನ್ನು ಬರಮಾಡುತ್ತಾನೆಂದು ಇದರ ಅರ್ಥವಲ್ಲ. ತಾಪತ್ರಯಗಳು ಬರುವಾಗ, ‘ಬಹುಶಃ ನಾನು ಹಿಂದೆ ಮಾಡಿದಂಥ ಪಾಪಗಳಿಗಾಗಿ ಯೆಹೋವನು ನನ್ನನ್ನು ಶಿಕ್ಷಿಸುತ್ತಿದ್ದಾನೆ’ ಎಂದು ಒಬ್ಬ ಕ್ರೈಸ್ತನು ಭಾವಿಸಲೇಬಾರದು. (ಯಾಕೋಬ 1:13) ಇನ್ನೊಂದು ಕಡೆ, ನಮ್ಮ ತಪ್ಪು ಕೃತ್ಯಗಳಿಂದಾಗಿ ಬರುವ ಎಲ್ಲಾ ದುಷ್ಪರಿಣಾಮಗಳಿಂದ ಯೆಹೋವನು ನಮ್ಮನ್ನು ರಕ್ಷಿಸುವುದಿಲ್ಲ. ವಿವಾಹ ವಿಚ್ಛೇದ, ಅನಪೇಕ್ಷಿತ ಗರ್ಭಧಾರಣೆ, ರತಿರವಾನಿತ ರೋಗ, ಭರವಸೆ ಇಲ್ಲವೆ ಗೌರವದ ನಷ್ಟ—ಇವೆಲ್ಲವೂ ಪಾಪದಿಂದಾಗಿ ಫಲಿಸುವ ತಪ್ಪಿಸಲಾಗದ ಶೋಚನೀಯ ದುಷ್ಪರಿಣಾಮಗಳಾಗಿರಬಹುದು. ಬತ್ಷೆಬೆ ಮತ್ತು ಊರೀಯನ ಸಂಬಂಧದಲ್ಲಿ ದಾವೀದನು ಗೈದ ಪಾಪಗಳನ್ನು ಕ್ಷಮಿಸಿಬಿಟ್ಟ ನಂತರವೂ, ಹಿಂಬಾಲಿಸಿ ಬಂದ ವಿಪತ್ಕಾರಕ ದುಷ್ಪರಿಣಾಮಗಳಿಂದ ಯೆಹೋವನು ದಾವೀದನನ್ನು ರಕ್ಷಿಸಲಿಲ್ಲವೆಂಬುದನ್ನು ನೆನಪಿಗೆ ತನ್ನಿರಿ.—2 ಸಮುವೇಲ 12:9-12.
19-21. (ಎ) ಯಾಜಕಕಾಂಡ 6:1-7ರಲ್ಲಿ ದಾಖಲೆಯಾದ ನಿಯಮವು ತಪ್ಪಿತಸ್ಥನಿಗೆ ಹಾಗೂ ತಪ್ಪುಗೈಯಲ್ಪಟ್ಟವನಿಗೆ ಹೇಗೆ ಪ್ರಯೋಜನ ನೀಡಿತು? (ಬಿ) ನಮ್ಮ ಪಾಪಗಳಿಂದಾಗಿ ಇತರರಿಗೆ ನೋವಾಗಿರುವಲ್ಲಿ, ನಮ್ಮ ಯಾವ ಕ್ರಿಯೆಯಿಂದ ಯೆಹೋವನು ಸಂತೋಷಪಡುತ್ತಾನೆ?
19 ನಮ್ಮ ಕೃತ್ಯಗಳಿಂದಾಗಿ ವಿಶೇಷವಾಗಿ ಇತರರಿಗೆ ನೋವಾದಾಗಲಂತೂ ಇನ್ನೂ ಹೆಚ್ಚಿನ ದುಷ್ಪರಿಣಾಮಗಳು ಇರುವವು. ಉದಾಹರಣೆಗಾಗಿ ಯಾಜಕಕಾಂಡ 6ನೆಯ ಅಧ್ಯಾಯದಲ್ಲಿರುವ ವೃತ್ತಾಂತವನ್ನು ಗಮನಿಸಿರಿ. ಜೊತೆ ಇಸ್ರಾಯೇಲ್ಯನೊಬ್ಬನ ಸ್ವತ್ತುಗಳನ್ನು ಒಬ್ಬನು ಕಳ್ಳತನ, ಸುಲಿಗೆ, ಅಥವಾ ಮೋಸದಿಂದ ಅಪಹರಿಸುವ ಮೂಲಕ ಒಂದು ಗಂಭೀರವಾದ ಪಾಪವನ್ನು ಮಾಡುವ ವಿಷಯವನ್ನು ಇಲ್ಲಿ ಮೋಶೆಯ ಧರ್ಮಶಾಸ್ತ್ರವು ಸಂಬೋಧಿಸುತ್ತದೆ. ಆ ಪಾಪಿಯು ಅನಂತರ ತನ್ನ ದೋಷವನ್ನು ಅಲ್ಲಗಳೆಯುತ್ತಾನೆ, ಸುಳ್ಳಾಣೆಯಿಟ್ಟು ನಿರಾಕರಿಸುವ ಮಟ್ಟಿಗೂ ಉದ್ಧಟನಾಗುತ್ತಾನೆ. ಇದು ಒಬ್ಬನ ಸಾಕ್ಷಿಯು ಇನ್ನೊಬ್ಬನ ಸಾಕ್ಷಿಗೆ ವಿರುದ್ಧವಾಗಿರುವಂಥ ವ್ಯಾಜ್ಯವಾಗಿದೆ. ಆದರೂ ಅನಂತರ ಆ ತಪ್ಪಿತಸ್ಥನ ಮನಸ್ಸಾಕ್ಷಿಯು ಅವನನ್ನು ಚುಚ್ಚುತ್ತದೆ ಮತ್ತು ಅವನು ತನ್ನ ತಪ್ಪನ್ನು ಅರಿಕೆಮಾಡುತ್ತಾನೆ. ಆದರೆ ದೇವರ ಕ್ಷಮಾಪಣೆಯನ್ನು ಪಡೆಯುವುದಕ್ಕಾಗಿ ಅವನಿಗೆ ಇನ್ನೂ ಮೂರು ವಿಷಯಗಳನ್ನು ಮಾಡಲಿಕ್ಕಿತ್ತು: ತಾನು ಅಪಹರಿಸಿದ ವಸ್ತುಗಳನ್ನು ಪೂರ್ತಿಯಾಗಿ ತಂದುಕೊಡಬೇಕು, ಕದ್ದುಕೊಂಡಿದ್ದ ವಸ್ತುಗಳ ಒಟ್ಟು ಬೆಲೆಯ 20 ಪ್ರತಿಶತ ದಂಡವನ್ನು ತೆರಬೇಕು, ಮತ್ತು ದೋಷ ಪರಿಹಾರಕ್ಕಾಗಿ ಒಂದು ಟಗರನ್ನು ಒಪ್ಪಿಸಬೇಕು. ಅನಂತರ “ಯಾಜಕನು ಅವನಿಗೋಸ್ಕರ ಯೆಹೋವನ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡಿದಾಗ ಅವನು ಯಾವ ವಿಷಯದಲ್ಲಿ ಅಪರಾಧಕ್ಕೆ ಒಳಗಾಗಿದ್ದನೋ ಆ ವಿಷಯದಲ್ಲಿ ಅವನಿಗೆ ಕ್ಷಮಾಪಣೆಯಾಗುವದು” ಎಂದು ಧರ್ಮಶಾಸ್ತ್ರ ಹೇಳುತ್ತದೆ.—ಯಾಜಕಕಾಂಡ 6:1-7.
20 ಈ ಧರ್ಮಶಾಸ್ತ್ರವು ದೇವರಿಂದ ಬಂದ ಒಂದು ಕರುಣಾಭರಿತ ಏರ್ಪಾಡಾಗಿತ್ತು. ಯಾರ ಸೊತ್ತು ಅಪಹರಿಸಲ್ಪಟ್ಟಿತೊ ಆ ವ್ಯಕ್ತಿಗೆ ಅದು ಹಿಂದಿರುಗಿಸಲ್ಪಟ್ಟಾಗ ಅದು ಅವನಿಗೆ ಪ್ರಯೋಜನವನ್ನು ತಂದಿತು ಮಾತ್ರವಲ್ಲ ತಪ್ಪಿತಸ್ಥನು ಕೊನೆಗೆ ತನ್ನ ಪಾಪವನ್ನು ಅಂಗೀಕರಿಸಿದ್ದರಿಂದ ಬಹಳಷ್ಟು ನೆಮ್ಮದಿಯನ್ನೂ ತಂದಿರಬೇಕು ಎಂಬುದರಲ್ಲಿ ಸಂದೇಹವಿಲ್ಲ. ಅದೇ ಸಮಯದಲ್ಲಿ, ತನ್ನ ತಪ್ಪನ್ನು ಅರಿಕೆಮಾಡಿ ಅಪರಾಧವನ್ನು ತಿದ್ದಿಕೊಳ್ಳುವಂತೆ ಯಾರ ಮನಸ್ಸಾಕ್ಷಿಯು ಪ್ರೇರೇಪಿಸಿತೋ ಆ ವ್ಯಕ್ತಿಗೂ ಧರ್ಮಶಾಸ್ತ್ರವು ಪ್ರಯೋಜನ ತಂದಿತು. ಹಾಗೆ ಮಾಡಲು ಒಂದುವೇಳೆ ಅವನು ನಿರಾಕರಿಸಿದ್ದುದಾದರೆ ದೇವರಿಂದ ಅವನಿಗೆ ಕ್ಷಮಾಪಣೆಯು ದೊರೆಯುತ್ತಿದ್ದಿರಲಿಲ್ಲ.
21 ನಾವು ಮೋಶೆಯ ಧರ್ಮಶಾಸ್ತ್ರದ ಕೆಳಗೆ ಇರದಿದ್ದರೂ, ಆ ಧರ್ಮಶಾಸ್ತ್ರವು ಕ್ಷಮಾಪಣೆಯ ವಿಷಯದಲ್ಲಿ ಯೆಹೋವನ ವಿಚಾರಧಾರೆಯನ್ನೂ ಸೇರಿಸಿ, ಆತನ ಯೋಚನಾಧಾಟಿಯ ಬಗ್ಗೆ ಒಳನೋಟವನ್ನು ನಮಗೆ ನೀಡುತ್ತದೆ. (ಕೊಲೊಸ್ಸೆ 2:13, 14) ನಮ್ಮ ಪಾಪಗಳಿಂದಾಗಿ ಇತರರಿಗೆ ನೋವು ಉಂಟಾಗಿದ್ದಲ್ಲಿ, ಆ ತಪ್ಪನ್ನು ಸರಿಪಡಿಸಲಿಕ್ಕಾಗಿ ನಮ್ಮಿಂದಾದುದನ್ನು ನಾವು ಮಾಡುವಾಗ ದೇವರಿಗೆ ಸಂತೋಷವಾಗುತ್ತದೆ. (ಮತ್ತಾಯ 5:23, 24) ಇದರಲ್ಲಿ ನಮ್ಮ ಪಾಪವನ್ನು ಒಪ್ಪಿಕೊಳ್ಳುವುದು, ನಮ್ಮ ದೋಷವನ್ನು ಅರಿಕೆಮಾಡುವುದು, ಮತ್ತು ಯಾರಿಗೆ ತಪ್ಪು ಮಾಡಿದ್ದೇವೋ ಅವರಿಂದ ಕ್ಷಮೆಯಾಚಿಸುವುದೂ ಸೇರಿರಬಹುದು. ಅನಂತರ ನಾವು ಯೇಸುವಿನ ಯಜ್ಞಾರ್ಪಣೆಯ ಆಧಾರದ ಮೇಲೆ ಯೆಹೋವನ ಬಳಿ ಬೇಡಿಕೊಂಡು, ಆತನಿಂದ ಕ್ಷಮಿಸಲ್ಪಟ್ಟಿದ್ದೇವೆಂಬ ಆಶ್ವಾಸನೆಯನ್ನು ಅನುಭವಿಸಬಲ್ಲೆವು.—ಇಬ್ರಿಯ 10:21, 22.
22. ಯೆಹೋವನ ಕ್ಷಮಾಪಣೆಯೊಂದಿಗೆ ಏನು ಜೊತೆಗೂಡಿರಬಹುದು?
22 ಪ್ರೀತಿಯುಳ್ಳ ಯಾವನೇ ಹೆತ್ತವನಂತೆ ಯೆಹೋವನು ಕ್ಷಮಾಪಣೆಯೊಂದಿಗೆ ಒಂದಿಷ್ಟು ಶಿಸ್ತನ್ನೂ ನೀಡಬಹುದು. (ಜ್ಞಾನೋಕ್ತಿ 3:11, 12) ಪಶ್ಚಾತ್ತಾಪಪಟ್ಟಿರುವ ಕ್ರೈಸ್ತನೊಬ್ಬನು ಒಬ್ಬ ಹಿರಿಯನಾಗಿ, ಶುಶ್ರೂಷಾ ಸೇವಕನಾಗಿ, ಅಥವಾ ಪೂರ್ಣ ಸಮಯದ ಸೌವಾರ್ತಿಕನಾಗಿ ಸೇವೆಮಾಡುವ ತನ್ನ ಸುಯೋಗವನ್ನು ಬಿಟ್ಟುಕೊಡಬೇಕಾದೀತು. ಅವನಿಗೆ ಅತ್ಯಮೂಲ್ಯವಾಗಿದ್ದ ಸುಯೋಗಗಳನ್ನು ಸ್ವಲ್ಪ ಕಾಲಾವಧಿಯ ತನಕ ಕಳೆದುಕೊಳ್ಳುವುದು ಅವನ ಮನಸ್ಸನ್ನು ನೋಯಿಸಬಹುದು. ಆದರೂ ಅಂಥ ಶಿಸ್ತಿನ ಕ್ರಮವು ಯೆಹೋವನು ಕ್ಷಮಾಪಣೆಯನ್ನು ತಡೆಹಿಡಿದಿದ್ದಾನೆ ಎಂಬುದನ್ನು ಅರ್ಥೈಸುವುದಿಲ್ಲ. ಯೆಹೋವನಿಂದ ಬರುವ ಶಿಸ್ತು ನಮಗಾಗಿ ಆತನಿಗಿರುವ ಪ್ರೀತಿಯ ರುಜುವಾತೆಂದು ನಾವು ನೆನಪಿನಲ್ಲಿಡಬೇಕು. ಅದನ್ನು ಸ್ವೀಕರಿಸಿ ನಮಗೆ ಅನ್ವಯಿಸಿಕೊಳ್ಳುವುದು ನಮ್ಮ ಉತ್ತಮ ಹಿತಕ್ಕಾಗಿಯೇ ಅದೆ.—ಇಬ್ರಿಯ 12:5-11.
23. ಯೆಹೋವನ ಕ್ಷಮಾಪಣೆಯು ನಮಗೆ ದೊರೆಯಲಾರದೆಂದು ನಾವೆಂದೂ ತೀರ್ಮಾನಿಸಬಾರದೇಕೆ, ಮತ್ತು ಆತನ ಕ್ಷಮಾಶೀಲತೆಯನ್ನು ನಾವೇಕೆ ಅನುಕರಿಸಬೇಕು?
23 ನಮ್ಮ ದೇವರು “ಕ್ಷಮಿಸಲು ಸಿದ್ಧ”ನಾಗಿರುತ್ತಾನೆಂದು ತಿಳಿಯುವುದು ಅದೆಷ್ಟು ಚೈತನ್ಯಕರವು! ನಾವು ತಪ್ಪುಗಳನ್ನು ಮಾಡಿರಬಹುದಾದರೂ, ಯೆಹೋವನ ಕರುಣೆಯು ನಮಗೆಂದೂ ಸಿಗಲಾರದೆಂದು ನಾವು ತೀರ್ಮಾನಿಸಬಾರದು. ನಾವು ನಿಜವಾಗಿಯೂ ಪಶ್ಚಾತ್ತಾಪಪಟ್ಟು, ತಪ್ಪನ್ನು ತಿದ್ದಿಕೊಂಡು ಸರಿಮಾಡಲು ಹೆಜ್ಜೆಗಳನ್ನು ತೆಗೆದುಕೊಳ್ಳುವಲ್ಲಿ, ಮತ್ತು ಕ್ರಿಸ್ತನು ಸುರಿಸಿದ ರಕ್ತದ ಆಧಾರದ ಮೇಲೆ ಕ್ಷಮಾಪಣೆಗಾಗಿ ಯಥಾರ್ಥತೆಯಿಂದ ಪ್ರಾರ್ಥಿಸುವಲ್ಲಿ ಯೆಹೋವನು ನಮ್ಮನ್ನು ಕ್ಷಮಿಸುವನೆಂಬ ಪೂರ್ಣ ಭರವಸೆ ನಮಗಿರಬಲ್ಲದು. (1 ಯೋಹಾನ 1:9) ಒಬ್ಬರನ್ನೊಬ್ಬರು ನಾವು ಉಪಚರಿಸುವ ರೀತಿಯಲ್ಲಿ ನಾವಾತನ ಕ್ಷಮಾಶೀಲತೆಯನ್ನು ಅನುಕರಿಸೋಣ. ಎಷ್ಟೆಂದರೂ, ಪಾಪವನ್ನೇ ಮಾಡದ ಯೆಹೋವ ದೇವರು, ಅಷ್ಟು ಪ್ರೀತಿಪೂರ್ವಕವಾಗಿ ನಮ್ಮನ್ನು ಕ್ಷಮಿಸುತ್ತಾನೆಂದಾದರೆ, ಪಾಪಿ ಮಾನವರಾದ ನಾವು ಒಬ್ಬರನ್ನೊಬ್ಬರು ಕ್ಷಮಿಸಲಿಕ್ಕಾಗಿ ನಮ್ಮಿಂದಾದುದೆಲ್ಲವನ್ನು ಮಾಡಬಾರದೋ?
a “ನಮ್ಮ ರಚನೆ” ಎಂದು ತರ್ಜುಮೆಯಾಗಿರುವ ಹೀಬ್ರು ಪದವು, ಒಬ್ಬ ಕುಂಬಾರನಿಂದ ರೂಪಿಸಲ್ಪಡುವ ಮಣ್ಣಿನ ಪಾತ್ರೆಗಳ ವಿಷಯದಲ್ಲೂ ಉಪಯೋಗಿಸಲ್ಪಡುತ್ತದೆ.—ಯೆಶಾಯ 29:16.
b ಕಡು ಕೆಂಪು ಬಣ್ಣವು “ಗಟ್ಟಿಬಣ್ಣ, ಅಥವಾ ಸ್ಥಿರವಾಗಿರುವ ಬಣ್ಣ”ವಾಗಿತ್ತೆಂಬುದಾಗಿ ಒಬ್ಬ ವಿದ್ವಾಂಸನು ಹೇಳುತ್ತಾನೆ. “ಇಬ್ಬನಿಯಾಗಲಿ ಮಳೆಯಾಗಲಿ ಒಗೆಯುವಿಕೆಯಾಗಲಿ ದೀರ್ಘಕಾಲ ಬಳಕೆಯಾಗಲಿ ಅದನ್ನು ತೆಗೆದುಬಿಡದು.”