ಅಧ್ಯಾಯ 11
“ಆತನು ನಡಿಸುವದೆಲ್ಲಾ ನ್ಯಾಯ”
1, 2. (ಎ) ಯಾವ ಘೋರ ಅನ್ಯಾಯಗಳನ್ನು ಯೋಸೇಫನು ಅನುಭವಿಸಿದನು? (ಬಿ) ಯೆಹೋವನು ಆ ಅನ್ಯಾಯಗಳನ್ನು ಸರಿಪಡಿಸಿದ್ದು ಹೇಗೆ?
ಅದು ಘೋರ ಅನ್ಯಾಯವೇ ಸರಿ. ಆ ಸುಂದರ ಯುವಕನು ಯಾವ ತಪ್ಪನ್ನೂ ಮಾಡಿರಲಿಲ್ಲ. ಆದರೂ, ಬಲಾತ್ಕಾರ ಸಂಭೋಗ ಯತ್ನದ ಸುಳ್ಳಾರೋಪದ ಮೇಲೆ ಅವನನ್ನು ಬಂದೀಖಾನೆಗೆ ಹಾಕಲಾಯಿತು. ಅವನಿಗೆ ಈ ರೀತಿಯ ಅನ್ಯಾಯವಾದದ್ದು ಇದು ಮೊದಲನೆಯ ಬಾರಿಯಲ್ಲ. ವರ್ಷಗಳ ಹಿಂದೆ, ಅವನು 17 ವರ್ಷ ಪ್ರಾಯದವನಾಗಿದ್ದಾಗ, ಈ ಯೌವನಸ್ಥ ಯೋಸೇಫನಿಗೆ ಅವನ ಸ್ವಂತ ಸಹೋದರರೇ ದ್ರೋಹವೆಸಗಿದ್ದರು; ಅವರು ಅವನನ್ನು ಕೊಂದುಹಾಕಲೂ ಅಣಿಯಾಗಿದ್ದರು. ಆದರೆ ಅನಂತರ ಅವನನ್ನು ಪರದೇಶದಲ್ಲಿ ಒಬ್ಬ ಗುಲಾಮನಾಗಿ ಮಾರಲಾಯಿತು. ಅಲ್ಲಿ ಅವನು ತನ್ನ ಯಜಮಾನನ ಪತ್ನಿಯ ಕಾಮಾತುರದ ಬೇಡಿಕೆಗಳನ್ನು ತಳ್ಳಿಹಾಕಿದನು. ಧಿಕ್ಕರಿಸಲ್ಪಟ್ಟ ಆ ಸ್ತ್ರೀಯು ಅವನ ಮೇಲೆ ಸುಳ್ಳಾರೋಪವನ್ನು ಹೂಡಿದ ಕಾರಣದಿಂದಲೇ ಅವನನ್ನು ಬಂದೀಖಾನೆಗೆ ತಳ್ಳಲಾಯಿತು. ಶೋಚನೀಯವಾದ ಸಂಗತಿಯೇನೆಂದರೆ, ಯೋಸೇಫನ ಪರವಾಗಿ ಮಧ್ಯಸ್ಥಿಕೆ ಮಾಡಲು ಯಾರೂ ಇಲ್ಲದಿರುವಂತೆ ತೋರಿತು.
ಯೋಸೇಫನು “ಸೆರೆ”ಯಲ್ಲಿ ಅನ್ಯಾಯವಾಗಿ ಬಾಧೆಪಟ್ಟನು
2 ಆದರೆ, “ನೀತಿನ್ಯಾಯಗಳನ್ನು ಪ್ರೀತಿಸುವ” ದೇವರು ಅವನನ್ನು ಗಮನಿಸುತ್ತಾ ಇದ್ದನು. (ಕೀರ್ತನೆ 33:5) ಅವನಿಗಾದ ಅನ್ಯಾಯಗಳನ್ನು ಸರಿಪಡಿಸಲಿಕ್ಕಾಗಿ ಯೆಹೋವನು ಕಾರ್ಯಕ್ಕಿಳಿದು, ಕಟ್ಟಕಡೆಗೆ ಯೋಸೇಫನಿಗೆ ಬಿಡುಗಡೆಯಾಗುವಂಥ ರೀತಿಯಲ್ಲಿ ಘಟನೆಗಳನ್ನು ನಿರ್ವಹಿಸಿದನು. ಅಷ್ಟುಮಾತ್ರವಲ್ಲದೆ, “ಸೆರೆ”ಮನೆಗೆ ದೊಬ್ಬಲ್ಪಟ್ಟಿದ್ದ ಈ ಯೋಸೇಫನು ಕಟ್ಟಕಡೆಗೆ ದೊಡ್ಡ ಜವಾಬ್ದಾರಿ ಮತ್ತು ವಿಶೇಷವಾಗಿ ಸನ್ಮಾನಯೋಗ್ಯವಾಗಿದ್ದ ಒಂದು ಸ್ಥಾನಕ್ಕೆ ಏರಿಸಲ್ಪಟ್ಟನು. (ಆದಿಕಾಂಡ 40:15; 41:41-43; ಕೀರ್ತನೆ 105:17, 18) ಕೊನೆಯಲ್ಲಿ, ಯೋಸೇಫನು ತಪ್ಪು ಆರೋಪದಿಂದ ಮುಕ್ತನಾಗಿ ನಿರ್ದೋಷೀಕರಿಸಲ್ಪಟ್ಟನು ಮತ್ತು ಅವನು ತನ್ನ ಉನ್ನತ ಹುದ್ದೆಯನ್ನು ದೇವರ ಉದ್ದೇಶದ ಪ್ರವರ್ಧನೆಗಾಗಿ ಉಪಯೋಗಿಸಿದನು.—ಆದಿಕಾಂಡ 45:5-8.
3. ನಾವೆಲ್ಲರೂ ನ್ಯಾಯವಾದ ರೀತಿಯಲ್ಲಿ ಉಪಚರಿಸಲ್ಪಡಲು ಬಯಸುವುದು ಅಚ್ಚರಿಯ ಸಂಗತಿಯಲ್ಲವೇಕೆ?
3 ಇಂಥ ಒಂದು ವೃತ್ತಾಂತವು ನಮ್ಮ ಹೃದಯದಲ್ಲಿ ಅನುಕಂಪವನ್ನು ಹುಟ್ಟಿಸುತ್ತದೆ, ಅಲ್ಲವೇ? ನಮ್ಮಲ್ಲಿ ಯಾರು ತಾನೇ ಅನ್ಯಾಯವನ್ನು ನೋಡಿಲ್ಲ ಇಲ್ಲವೆ ಸ್ವತಃ ಅನುಭವಿಸಿಲ್ಲ? ಹೌದು, ನಾವೆಲ್ಲರೂ ನ್ಯಾಯದಿಂದ, ಭೇದಭಾವವಿಲ್ಲದ ರೀತಿಯಲ್ಲಿ ಉಪಚರಿಸಲ್ಪಡಲು ಹಂಬಲಿಸುತ್ತೇವೆ. ಇದೇನೂ ಅಚ್ಚರಿಯ ಸಂಗತಿಯಲ್ಲ, ಯಾಕಂದರೆ ಯೆಹೋವನು ತನ್ನ ಸ್ವಂತ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವಂಥ ಗುಣಗಳನ್ನು ನಮಗೆ ದಯಪಾಲಿಸಿದ್ದಾನೆ, ಮತ್ತು ನ್ಯಾಯವು ಆತನ ಪ್ರಧಾನ ಗುಣಗಳಲ್ಲಿ ಒಂದಾಗಿದೆ. (ಆದಿಕಾಂಡ ) ಯೆಹೋವನನ್ನು ಚೆನ್ನಾಗಿ ತಿಳಿಯಬೇಕಾದರೆ, ಆತನ ನ್ಯಾಯಪರತೆಯನ್ನು ನಾವು ತಿಳಿದುಕೊಳ್ಳುವ ಅಗತ್ಯವಿದೆ. ಹೀಗೆ ನಾವು ಆತನ ಆಶ್ಚರ್ಯಕರ ಮಾರ್ಗಗಳನ್ನು ಇನ್ನೂ ಹೆಚ್ಚು ಗಣ್ಯಮಾಡುವವರಾಗಿ ಆತನಿಗೆ ಮತ್ತಷ್ಟು ಸಮೀಪ ಬರುವಂತೆ ಪ್ರೇರಿಸಲ್ಪಡುವೆವು. 1:27
ನ್ಯಾಯ ಎಂದರೇನು?
4. ಮಾನವ ದೃಷ್ಟಿಕೋನದಿಂದ ನ್ಯಾಯವನ್ನು ಹೆಚ್ಚಾಗಿ ಹೇಗೆ ತಿಳಿದುಕೊಳ್ಳಲಾಗುತ್ತದೆ?
4 ಮಾನವ ದೃಷ್ಟಿಕೋನದಿಂದ ಹೇಳುವುದಾದರೆ, ನ್ಯಾಯ ಅಂದರೆ ಕಾನೂನು ವ್ಯವಸ್ಥೆಯ ವಿಧಿನಿಯಮಗಳನ್ನು ಭೇದವಿಲ್ಲದೆ ಅನ್ವಯಿಸುವುದು, ಅಷ್ಟೆ. ನ್ಯಾಯಪರತೆ ಮತ್ತು ವಿವೇಚನಾ ಶಕ್ತಿ—ತತ್ವ ಮತ್ತು ಪ್ರಯೋಗದಲ್ಲಿ ನೀತಿಶಾಸ್ತ್ರ (ಇಂಗ್ಲಿಷ್) ಎಂಬ ಪುಸ್ತಕವು “ನ್ಯಾಯವು, ಕಾನೂನು, ಹಂಗುಗಳು, ಹಕ್ಕುಗಳು, ಮತ್ತು ಕರ್ತವ್ಯಗಳಿಗೆ ಜೋಡಿಸಲ್ಪಟ್ಟಿದೆ, ಮತ್ತು ಸಮಾನತೆ ಇಲ್ಲವೆ ಅರ್ಹತೆಗನುಸಾರ ಕೊಡಲ್ಪಡುತ್ತದೆ.” ಯೆಹೋವನ ನ್ಯಾಯದಲ್ಲಾದರೋ, ಕರ್ತವ್ಯ ಅಥವಾ ಹಂಗಿನ ಮೇಲೆ ಆಧಾರಿಸಿದ ನಿಯಮಗಳ ಯಾಂತ್ರಿಕ ಅನ್ವಯಕ್ಕಿಂತ ಹೆಚ್ಚಿನದ್ದು ಸೇರಿದೆ.
5, 6. (ಎ) “ನ್ಯಾಯ” ಎಂದು ಭಾಷಾಂತರಿಸಲ್ಪಟ್ಟ ಮೂಲ ಭಾಷಾ ಪದಗಳ ಅರ್ಥವೇನು? (ಬಿ) ದೇವರು ನ್ಯಾಯವಂತನು ಎಂಬುದರ ಅರ್ಥವೇನು?
5 ಯೆಹೋವನ ನ್ಯಾಯದ ವ್ಯಾಪ್ತಿ ಮತ್ತು ಆಳವನ್ನು, ಬೈಬಲಿನಲ್ಲಿ ಪ್ರಯೋಗಿಸಲ್ಪಟ್ಟ ಮೂಲ ಭಾಷೆಯ ಪದಗಳನ್ನು ಪರಿಗಣಿಸುವ ಮೂಲಕ ಚೆನ್ನಾಗಿ ಅರಿತುಕೊಳ್ಳಬಲ್ಲೆವು. ಹೀಬ್ರು ಶಾಸ್ತ್ರಗಳಲ್ಲಿ ಮೂರು ಪ್ರಧಾನ ಪದಗಳು ಬಳಸಲ್ಪಟ್ಟಿವೆ. ಹೆಚ್ಚಾಗಿ “ನ್ಯಾಯ” ಎಂದು ಭಾಷಾಂತರಿಸಲ್ಪಟ್ಟ ಪದವು, “ಯಾವುದು ಸರಿಯೋ ಅದು” ಎಂಬುದಾಗಿಯೂ ತರ್ಜುಮೆಯಾಗಬಹುದು. (ಆದಿಕಾಂಡ 18:25, NW) ಬೇರೆ ಎರಡು ಪದಗಳು ಸಾಮಾನ್ಯವಾಗಿ “ನೀತಿ” ಎಂಬುದಾಗಿ ಭಾಷಾಂತರಿಸಲ್ಪಟ್ಟಿವೆ. ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ “ನೀತಿ” ಎಂದು ಭಾಷಾಂತರಿಸಲ್ಪಟ್ಟಿರುವ ಪದವು, “ಸರಿಯಾದದ್ದರ ಅಥವಾ ನ್ಯಾಯದ ಪಕ್ಷದಲ್ಲಿರುವ ಗುಣ”ವಾಗಿ ಅರ್ಥವಿವರಿಸಲ್ಪಟ್ಟಿದೆ. ಹಾಗಾದರೆ ಮೂಲತಃ, ನೀತಿ ಮತ್ತು ನ್ಯಾಯದ ನಡುವೆ ಭಿನ್ನತೆಯೇ ಇಲ್ಲ.—ಆಮೋಸ 5:24.
6 ಆದುದರಿಂದ, ದೇವರು ನ್ಯಾಯವಂತನು ಎಂದು ಬೈಬಲು ಹೇಳುವಾಗ, ಆತನು ಸರಿಯಾದದ್ದನ್ನು ಮತ್ತು ನ್ಯಾಯವಾದದ್ದನ್ನೇ ಮಾಡುತ್ತಾನೆ ಹಾಗೂ ಆತನು ಅದನ್ನು ಎಡೆಬಿಡದೆ, ಪಕ್ಷಪಾತವಿಲ್ಲದೆ ಮಾಡುತ್ತಾನೆಂದು ಅದು ಹೇಳುತ್ತದೆ. (ರೋಮಾಪುರ 2:11) ಆತನು ಇದಕ್ಕೆ ತದ್ವಿರುದ್ಧವಾಗಿ ವರ್ತಿಸುವನೆಂದು ಊಹಿಸಲೂ ಸಾಧ್ಯವಿಲ್ಲ. ನಂಬಿಗಸ್ತನಾದ ಎಲೀಹು ಹೇಳಿದ್ದು: “ದೇವರು ಕೆಟ್ಟದ್ದನ್ನು ಮಾಡಾನೆಂಬ ಯೋಚನೆಯೂ ಸರ್ವಶಕ್ತನು ಅನ್ಯಾಯವನ್ನು ನಡಿಸಾನೆಂಬ ಭಾವನೆಯೂ ದೂರವಾಗಿರಲಿ.” (ಯೋಬ 34:10) ಯೆಹೋವನು ‘ಅನ್ಯಾಯವನ್ನು ನಡಿಸಲು’ ಸಾಧ್ಯವೇ ಇಲ್ಲವೆಂಬುದು ನಿಶ್ಚಯ. ಏಕೆ? ಅದಕ್ಕೆ ಎರಡು ಮಹತ್ವಪೂರ್ಣ ಕಾರಣಗಳಿವೆ.
7, 8. (ಎ) ಯೆಹೋವನು ಅನ್ಯಾಯವನ್ನು ನಡಿಸಲು ಸಾಧ್ಯವೇ ಇಲ್ಲವೇಕೆ? (ಬಿ) ತನ್ನ ವ್ಯವಹಾರಗಳಲ್ಲಿ ನೀತಿವಂತ ಅಥವಾ ನ್ಯಾಯವಂತನಾಗಿರಲು ಯೆಹೋವನನ್ನು ಯಾವುದು ಪ್ರೇರೇಪಿಸುತ್ತದೆ?
7 ಮೊದಲನೆಯ ಕಾರಣವು, ಆತನು ಪರಿಶುದ್ಧನಾಗಿರುವುದೇ. ಅಧ್ಯಾಯ 3ರಲ್ಲಿ ನಾವು ಗಮನಿಸಿದ ಪ್ರಕಾರ, ಯೆಹೋವನು ಅಪಾರವಾಗಿ ಶುದ್ಧನೂ ಯಥಾರ್ಥನೂ ಆಗಿರುತ್ತಾನೆ. ಆದುದರಿಂದ ಆತನು ಅನೀತಿಯಿಂದ, ಇಲ್ಲವೆ ಅನ್ಯಾಯದಿಂದ ಕ್ರಿಯೆಗೈಯಲು ಸಾಧ್ಯವೇ ಇಲ್ಲ. ಅದರ ಅರ್ಥವೇನೆಂದು ಪರ್ಯಾಲೋಚಿಸಿರಿ. ನಮ್ಮ ಸ್ವರ್ಗೀಯ ತಂದೆಯ ಪರಿಶುದ್ಧತೆಯು, ಆತನೆಂದೂ ತನ್ನ ಮಕ್ಕಳನ್ನು ದುರುಪಚರಿಸನೆಂದು ನಂಬುವುದಕ್ಕೆ ನಮಗೆ ಬಲವಾದ ಕಾರಣವನ್ನು ಕೊಡುತ್ತದೆ. ಯೇಸುವಿಗೆ ಅಂಥ ಭರವಸೆಯಿತ್ತು. ತನ್ನ ಭೂಜೀವಿತದ ಕೊನೆಯ ರಾತ್ರಿಯಂದು ಅವನು ಪ್ರಾರ್ಥಿಸಿದ್ದು: “ಪವಿತ್ರನಾದ ತಂದೆಯೇ, . . . ನಿನ್ನ ಹೆಸರಿನಲ್ಲಿ ಇವರನ್ನು [ಶಿಷ್ಯರನ್ನು] ಕಾಯಬೇಕು.” (ಯೋಹಾನ 17:11) “ಪವಿತ್ರನಾದ ತಂದೆಯೇ” ಎಂಬ ಈ ಸಂಬೋಧನಾ ರೂಪವು ಶಾಸ್ತ್ರವಚನಗಳಲ್ಲಿ ಕೇವಲ ಯೆಹೋವನಿಗೆ ಮಾತ್ರ ಅನ್ವಯಿಸುತ್ತದೆ. ಇದು ತಕ್ಕದಾದ ಸಂಬೋಧನೆಯಾಗಿದೆ, ಯಾಕಂದರೆ ಯಾವ ಮಾನವ ತಂದೆಯೂ ಆತನ ಪರಿಶುದ್ಧತೆಗೆ ಸಮಾನನಾಗಲಾರನು. ಸಂಪೂರ್ಣವಾಗಿ ಶುದ್ಧನೂ ನಿರ್ಮಲನೂ ಸಕಲ ಪಾಪಪೂರ್ಣತೆಯಿಂದ ಪೂರ್ಣವಾಗಿ ಪ್ರತ್ಯೇಕನೂ ಆಗಿರುವ ತನ್ನ ತಂದೆಯ ಹಸ್ತಗಳಲ್ಲಿ ತನ್ನ ಶಿಷ್ಯರು ಸುರಕ್ಷಿತರಾಗಿರುವರೆಂಬ ಪೂರ್ಣ ಭರವಸೆಯು ಯೇಸುವಿಗಿತ್ತು.—ಮತ್ತಾಯ 23:9.
8 ಎರಡನೆಯ ಕಾರಣವು, ನಿಸ್ವಾರ್ಥ ಪ್ರೀತಿಯು ಯೆಹೋವನ ಸಾಕ್ಷಾತ್ ಪ್ರಕೃತಿಯ ಭಾಗವಾಗಿರುವುದೇ. ಅಂಥ ಪ್ರೀತಿಯು ಆತನನ್ನು, ಇತರರೊಂದಿಗಿನ ತನ್ನ ವ್ಯವಹಾರಗಳಲ್ಲಿ ನೀತಿವಂತನೂ ನ್ಯಾಯಪರನೂ ಆಗಿರುವಂತೆ ಪ್ರೇರೇಪಿಸುತ್ತದೆ. ಅನ್ಯಾಯವಾದರೊ ಅದರ ವಿವಿಧ ರೂಪಗಳಾದ ಜಾತಿವಾದ, ಪಕ್ಷಭೇದ, ಮತ್ತು ಪಕ್ಷಪಾತದ ಸಮೇತ, ಪ್ರೀತಿಗೆ ತದ್ವಿರುದ್ಧವಾಗಿರುವ ದುರಾಶೆ ಮತ್ತು ಸ್ವಾರ್ಥಪರತೆಯಿಂದ ಹೆಚ್ಚಾಗಿ ಹೊರಹೊಮ್ಮುತ್ತದೆ. ಪ್ರೀತಿಪರ ದೇವರ ಕುರಿತು ಬೈಬಲ್ ನಮಗೆ ಆಶ್ವಾಸನೆಯನ್ನೀಯುವುದು: “ನೀತಿಸ್ವರೂಪನಾದ ಯೆಹೋವನು ನೀತಿಯನ್ನು ಮೆಚ್ಚುವವನಾಗಿದ್ದಾನೆ [“ಪ್ರೀತಿಸುತ್ತಾನೆ,” NW].” (ಕೀರ್ತನೆ 11:7) ಯೆಹೋವನು ತಾನೇ ತನ್ನ ಕುರಿತು ಅನ್ನುವುದು: “ಯೆಹೋವನೆಂಬ ನಾನು ನ್ಯಾಯವನ್ನು ಪ್ರೀತಿಸುತ್ತೇನೆ.” (ಯೆಶಾಯ 61:8) ಯಾವುದು ಸರಿಯಾದದ್ದೊ ಅಥವಾ ಯಾವುದು ನ್ಯಾಯವೊ ಅದನ್ನು ಮಾಡುವುದರಲ್ಲಿ ನಮ್ಮ ದೇವರು ಸಂತೋಷಪಡುತ್ತಾನೆಂದು ತಿಳಿಯುವುದು ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತದಲ್ಲವೇ?—ಯೆರೆಮೀಯ 9:24.
ಕರುಣೆ ಮತ್ತು ಯೆಹೋವನ ಪರಿಪೂರ್ಣ ನ್ಯಾಯ
9-11. (ಎ) ಯೆಹೋವನ ನ್ಯಾಯ ಮತ್ತು ಕರುಣೆಯ ಮಧ್ಯೆ ಯಾವ ಸಂಬಂಧವಿದೆ? (ಬಿ) ಪಾಪಿಗಳಾದ ಮಾನವರೊಂದಿಗೆ ಆತನು ವ್ಯವಹರಿಸುವ ರೀತಿಯಲ್ಲಿ ಯೆಹೋವನ ನ್ಯಾಯ ಹಾಗೂ ಕರುಣೆಯು ಹೇಗೆ ತೋರಿಬಂದಿದೆ?
9 ಯೆಹೋವನ ಅತುಲ್ಯ ವ್ಯಕ್ತಿತ್ವದ ಬೇರೆ ಪ್ರತಿಯೊಂದು ಮುಖದಂತೆ ಆತನ ನ್ಯಾಯವು, ಪರಿಪೂರ್ಣವೂ ಯಾವ ಕುಂದೂ ಇಲ್ಲದ್ದೂ ಆಗಿರುತ್ತದೆ. ಯೆಹೋವನನ್ನು ಕೊಂಡಾಡುತ್ತಾ ಮೋಶೆಯು ಬರೆದದ್ದು: “ನಮಗೆ ಶರಣನಾದ ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡಿಸುವದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ.” (ಧರ್ಮೋಪದೇಶಕಾಂಡ 32:3, 4) ಯೆಹೋವನ ನ್ಯಾಯದ ಪ್ರತಿಯೊಂದು ಅಭಿವ್ಯಕ್ತಿಯು ಲೋಪವಿಲ್ಲದ್ದು—ಎಂದಿಗೂ ತೀರ ಸೌಮ್ಯವೂ ಅಲ್ಲ, ಅತಿ ಕಠೋರವೂ ಅಲ್ಲ.
10 ಯೆಹೋವನ ನ್ಯಾಯ ಮತ್ತು ಕರುಣೆಯ ನಡುವೆ ನಿಕಟ ಸಂಬಂಧವಿದೆ. ಕೀರ್ತನೆ 116:5 ಹೇಳುವುದು: “ಯೆಹೋವನು ಕೃಪಾಳುವೂ ನೀತಿವಂತನೂ [“ನ್ಯಾಯವಂತನೂ,” ದ ನ್ಯೂ ಅಮೆರಿಕನ್ ಬೈಬಲ್] ಆಗಿದ್ದಾನೆ; ನಮ್ಮ ದೇವರು ಕನಿಕರವುಳ್ಳವನು [“ಕರುಣೆಯುಳ್ಳವನು,” NW].” ಹೌದು, ಯೆಹೋವನು ನ್ಯಾಯವಂತನೂ ಕರುಣೆಯುಳ್ಳವನೂ ಆಗಿದ್ದಾನೆ. ಈ ಎರಡು ಸ್ವಭಾವಗಳು ಒಂದಕ್ಕೊಂದು ಘರ್ಷಿಸುವುದಿಲ್ಲ. ಆತನು ಕರುಣೆಯನ್ನು ತೋರಿಸುವಾಗ ಅದು ಆತನ ನ್ಯಾಯದ ತೀಕ್ಷ್ಣತೆಯನ್ನು ತಗ್ಗಿಸುವುದಿಲ್ಲ. ಒಂದುವೇಳೆ ಹಾಗಿರುತ್ತಿದ್ದಲ್ಲಿ, ಆತನ ನಾಯ್ಯವು ಬಹಳಷ್ಟು ಕಠೋರವಾಗಿದ್ದು ಅದನ್ನು ಹದಗೊಳಿಸಲು ಕರುಣೆಯ ಅಗತ್ಯವಿದೆಯೋ ಎಂಬಂತಿರುತ್ತಿತ್ತು. ಇದಕ್ಕೆ ಬದಲಾಗಿ, ಆ ಎರಡು ಗುಣಗಳೂ ಅನೇಕಬಾರಿ ಏಕಕಾಲದಲ್ಲಿ, ಒಂದೇ ಕೃತ್ಯದಲ್ಲಿಯೂ ವ್ಯಕ್ತಪಡಿಸಲ್ಪಡುತ್ತವೆ. ಒಂದು ಉದಾಹರಣೆಯನ್ನು ಗಮನಿಸಿರಿ.
11 ಮಾನವರೆಲ್ಲರು ವಂಶಗತವಾಗಿ ಪಾಪಿಗಳಾಗಿದ್ದಾರೆ, ಮತ್ತು ಈ ಕಾರಣದಿಂದ ಪಾಪದ ದಂಡನೆಯಾದ ಮರಣಕ್ಕೆ ಅರ್ಹರಾಗಿದ್ದಾರೆ. (ರೋಮಾಪುರ 5:12) ಆದರೆ ಪಾಪಿಗಳ ಮರಣದಿಂದ ಯೆಹೋವನಿಗೆ ಯಾವುದೇ ರೀತಿಯ ಆನಂದ ಸಿಗುವುದಿಲ್ಲ. ಆತನಾದರೋ, “ಪಾಪಗಳನ್ನು ಕ್ಷಮಿಸುವವನೂ ಕನಿಕರದಯೆಗಳುಳ್ಳವನೂ . . . ಆಗಿರುವ ದೇವರು.” (ನೆಹೆಮೀಯ 9:17) ಆದಾಗ್ಯೂ, ಆತನು ಪರಿಶುದ್ಧನಾಗಿರುವ ಕಾರಣ, ಅನೀತಿಯನ್ನು ಮನ್ನಿಸಿಬಿಡಲಾರನು. ಹೀಗಿರಲಾಗಿ ಹುಟ್ಟಿನಿಂದಲೇ ಪಾಪಿಗಳಾಗಿರುವ ಮನುಷ್ಯರಿಗೆ ಆತನು ಕರುಣೆಯನ್ನು ಹೇಗೆ ತೋರಿಸಸಾಧ್ಯವಿತ್ತು? ಉತ್ತರವು ದೇವರ ವಾಕ್ಯದ ಅತ್ಯಮೂಲ್ಯ ಸತ್ಯಗಳಲ್ಲೊಂದರಲ್ಲಿ ಕಂಡುಬರುತ್ತದೆ. ಮಾನವಕುಲದ ರಕ್ಷಣೆಗಾಗಿ ಯೆಹೋವನು ಮಾಡಿರುವ ಈಡಿನ ಏರ್ಪಾಡೇ ಅದು. ಅಧ್ಯಾಯ 14ರಲ್ಲಿ ಈ ಪ್ರೀತಿಪರ ಏರ್ಪಾಡಿನ ಕುರಿತು ನಾವು ಹೆಚ್ಚನ್ನು ಕಲಿಯಲಿರುವೆವು. ಅದು ಏಕಕಾಲದಲ್ಲೇ ಪೂರ್ಣವಾಗಿ ನ್ಯಾಯವಾದದ್ದೂ ಆಗಿದೆ ಮತ್ತು ಅಪಾರವಾಗಿ ಕರುಣಾಭರಿತವೂ ಆಗಿದೆ. ಆ ಏರ್ಪಾಡಿನ ಮೂಲಕ, ದೇವರು ತನ್ನ ಪರಿಪೂರ್ಣ ನ್ಯಾಯದ ಮಟ್ಟಗಳನ್ನು ಕಾಪಾಡಿಕೊಂಡು, ಅದೇ ಸಮಯದಲ್ಲಿ ಪಶ್ಚಾತ್ತಾಪಿ ಮಾನವರ ಕಡೆಗೆ ಕೋಮಲವಾದ ಕರುಣೆಯನ್ನೂ ತೋರಿಸಶಕ್ತನಾಗುತ್ತಾನೆ.—ರೋಮಾಪುರ 3:21-26.
ಯೆಹೋವನ ನ್ಯಾಯವು ಹೃದಯೋತ್ತೇಜಕ
12, 13. (ಎ) ಯೆಹೋವನ ನ್ಯಾಯವು ನಮ್ಮನ್ನು ಆತನ ಸಮೀಪಕ್ಕೆ ಸೆಳೆಯುತ್ತದೆ ಏಕೆ? (ಬಿ) ಯೆಹೋವನ ನ್ಯಾಯದ ಸಂಬಂಧದಲ್ಲಿ ದಾವೀದನು ಯಾವ ತೀರ್ಮಾನಕ್ಕೆ ಬಂದನು, ಮತ್ತು ಇದು ನಮಗೆ ಹೇಗೆ ಸಾಂತ್ವನ ನೀಡಬಲ್ಲದು?
12 ಯೆಹೋವನ ನ್ಯಾಯವು, ನಮ್ಮನ್ನು ವಿಕರ್ಷಿಸುವಂಥ ಕಠೋರ ಗುಣವಲ್ಲ, ಬದಲಾಗಿ ನಮ್ಮನ್ನು ಆತನ ಸಮೀಪಕ್ಕೆ ಸೆಳೆಯುವ ಮನಮೋಹಕ ಗುಣವಾಗಿರುತ್ತದೆ. ಯೆಹೋವನ ನ್ಯಾಯ, ಅಥವಾ ನೀತಿಯ ಕರುಣಾಭರಿತ ಸ್ವರೂಪವನ್ನು ಬೈಬಲು ಸ್ಪಷ್ಟವಾಗಿ ವರ್ಣಿಸುತ್ತದೆ. ಯೆಹೋವನು ತನ್ನ ನ್ಯಾಯವನ್ನು ನಿರ್ವಹಿಸುವ ಹೃದಯೋತ್ತೇಜಕ ವಿಧಾನಗಳಲ್ಲಿ ಕೆಲವನ್ನು ಪರಿಗಣಿಸೋಣ.
13 ಯೆಹೋವನ ಪರಿಪೂರ್ಣ ನ್ಯಾಯವು, ಆತನು ತನ್ನ ಸೇವಕರ ಕಡೆಗೆ ನಂಬಿಗಸ್ತಿಕೆ ಮತ್ತು ನಿಷ್ಠೆಯನ್ನು ತೋರಿಸುವಂತೆ ಆತನನ್ನು ಪ್ರೇರೇಪಿಸುತ್ತದೆ. ಯೆಹೋವನ ನ್ಯಾಯದ ಈ ಮುಖವನ್ನು ಕೀರ್ತನೆಗಾರನಾದ ದಾವೀದನು ತನ್ನ ಸ್ವಂತ ಅನುಭವದಿಂದ ತಿಳಿದುಕೊಂಡು ಅದನ್ನು ಬಹಳವಾಗಿ ಗಣ್ಯಮಾಡಿದನು. ತನ್ನ ಸ್ವಂತ ಅನುಭವದಿಂದಲೂ ದೇವರು ಕಾರ್ಯನಡಿಸುವ ರೀತಿಯ ಕುರಿತಾದ ಅಧ್ಯಯನದಿಂದಲೂ ದಾವೀದನು ಯಾವ ತೀರ್ಮಾನಕ್ಕೆ ಬಂದನು? ಅವನು ಘೋಷಿಸಿದ್ದು: “ಯೆಹೋವನು ನ್ಯಾಯವನ್ನು ಮೆಚ್ಚುವವನು [“ಪ್ರೀತಿಸುವವನು,” NW]; ತನ್ನ ಭಕ್ತರನ್ನು ಎಂದಿಗೂ ಕೈಬಿಡುವವನಲ್ಲ. ಅವರು ಸದಾಕಾಲವೂ ಸುರಕ್ಷಿತರಾಗಿರುವರು.” (ಕೀರ್ತನೆ 37:28) ಎಷ್ಟು ಸಾಂತ್ವನದಾಯಕ ಆಶ್ವಾಸನೆಯಿದು! ತನಗೆ ನಿಷ್ಠಾವಂತರಾಗಿ ಉಳಿಯುವವರನ್ನು ನಮ್ಮ ದೇವರು ಎಂದಿಗೂ ಕೈಬಿಡನು. ಆದುದರಿಂದ ನಾವಾತನ ಆಪ್ತತೆ ಮತ್ತು ಪ್ರೀತಿಪರ ಚಿಂತನೆಯ ಮೇಲೆ ಪೂರ್ಣವಾಗಿ ಆತುಕೊಂಡಿರಬಲ್ಲೆವು. ಆತನ ನ್ಯಾಯವು ಇದಕ್ಕೆ ಖಾತರಿಕೊಡುತ್ತದೆ!—ಜ್ಞಾನೋಕ್ತಿ 2:7, 8.
14. ಇಸ್ರಾಯೇಲಿಗೆ ಯೆಹೋವನು ಕೊಟ್ಟ ಧರ್ಮಶಾಸ್ತ್ರದಲ್ಲಿ, ಕೊರತೆಯುಳ್ಳವರ ಬಗ್ಗೆ ಆತನ ಪರಿಗಣನೆಯು ಹೇಗೆ ತೋರಿಬರುತ್ತದೆ?
14 ದೈವಿಕ ನ್ಯಾಯವು, ಪೀಡಿತ ಜನರ ಅಗತ್ಯಗಳ ಬಗ್ಗೆ ಸೂಕ್ಷ್ಮ ಅರಿವುಳ್ಳದ್ದಾಗಿದೆ. ಕೊರತೆಯುಳ್ಳವರ ವಿಷಯದಲ್ಲಿ ಯೆಹೋವನಿಗಿರುವ ಚಿಂತೆಯು, ಇಸ್ರಾಯೇಲ್ಯರಿಗೆ ಆತನು ಕೊಟ್ಟ ಧರ್ಮಶಾಸ್ತ್ರದಲ್ಲಿ ತೋರಿಬರುತ್ತದೆ. ಉದಾಹರಣೆಗಾಗಿ, ಅನಾಥರ ಮತ್ತು ವಿಧವೆಯರ ಪರಾಮರಿಕೆಯನ್ನು ನಿಶ್ಚಿತಪಡಿಸಲು ಧರ್ಮಶಾಸ್ತ್ರವು ವಿಶೇಷ ಏರ್ಪಾಡುಗಳನ್ನು ಮಾಡಿತ್ತು. (ಧರ್ಮೋಪದೇಶಕಾಂಡ 24:17-21) ಅಂಥ ಕುಟುಂಬಗಳಿಗೆ ಜೀವನವು ಎಷ್ಟು ಕಷ್ಟಮಯವಾಗಿರುವುದೆಂದು ಅರಿತಿದ್ದ ಯೆಹೋವನು, ಸ್ವತಃ ಅವರ ಪಿತೃಸಮಾನ ನ್ಯಾಯಾಧಿಪತಿಯೂ ರಕ್ಷಕನೂ ಆಗಿ, ‘ತಾಯಿತಂದೆಯಿಲ್ಲದವರ ಮತ್ತು ವಿಧವೆಯರ ನ್ಯಾಯವನ್ನು ಸ್ಥಾಪಿಸಿದನು.’ (ಧರ್ಮೋಪದೇಶಕಾಂಡ 10:18; ಕೀರ್ತನೆ 68:5) ನಿರ್ಗತಿಕರಾದ ಹೆಂಗಸರನ್ನು ಮತ್ತು ಮಕ್ಕಳನ್ನು ಪೀಡಿಸುವಲ್ಲಿ, ಅಂಥವರ ಕೂಗನ್ನು ತಾನು ಖಂಡಿತವಾಗಿಯೂ ಲಾಲಿಸುವೆನೆಂದು ಯೆಹೋವನು ಇಸ್ರಾಯೇಲ್ಯರಿಗೆ ಎಚ್ಚರಿಕೆ ನೀಡಿದ್ದನು. ‘ನಾನು ಕೋಪಿಸುವೆ’ ಎಂದಾತನು ನುಡಿದಿದ್ದನು. (ವಿಮೋಚನಕಾಂಡ 22:22-24) ಕೋಪವು ಯೆಹೋವನ ಪ್ರಧಾನ ಗುಣಗಳಲ್ಲಿ ಒಂದಲ್ಲವಾದರೂ, ಬುದ್ಧಿಪೂರ್ವಕವಾಗಿ ಮಾಡಲ್ಪಡುವ ಅನ್ಯಾಯದ ಕೃತ್ಯಗಳು, ಮತ್ತು ವಿಶೇಷವಾಗಿ ಅದಕ್ಕೆ ಬಲಿಬೀಳುವವರು ಬಡವರೂ ದಿಕ್ಕಿಲ್ಲದವರೂ ಆಗಿರುವಾಗ, ಆತನ ನೀತಿಯುತ ಕ್ರೋಧವು ಕೆರಳುತ್ತದೆ.—ಕೀರ್ತನೆ 103:6.
15, 16. ಯೆಹೋವನ ನಿಷ್ಪಕ್ಷಪಾತದ ನಿಜವಾಗಿಯೂ ಗಮನಾರ್ಹ ಸಾಕ್ಷ್ಯವು ಯಾವುದು?
15 ತಾನು “ದಾಕ್ಷಿಣ್ಯ ನೋಡುವವನಲ್ಲ, ಲಂಚತೆಗೆದುಕೊಳ್ಳುವವನಲ್ಲ” ಎಂಬ ಆಶ್ವಾಸನೆಯನ್ನೂ ಯೆಹೋವನು ನಮಗೆ ಕೊಡುತ್ತಾನೆ. (ಧರ್ಮೋಪದೇಶಕಾಂಡ 10:17) ಶಕ್ತಿ ಅಥವಾ ಪ್ರಾಬಲ್ಯವಿರುವ ಹೆಚ್ಚಿನ ಮಾನವರಂತಿರದೆ ಯೆಹೋವನಾದರೋ ಭೌತಿಕ ಐಶ್ವರ್ಯ ಅಥವಾ ಹೊರಗಣ ತೋರಿಕೆಯಿಂದ ಪ್ರಭಾವಿತನಾಗುವದಿಲ್ಲ. ಪೂರ್ವಕಲ್ಪಿತ ಅಭಿಪ್ರಾಯ ಅಥವಾ ಪಕ್ಷಪಾತದಿಂದ ಆತನು ಪೂರ್ಣ ಮುಕ್ತನು. ಯೆಹೋವನ ನಿಷ್ಪಕ್ಷಪಾತದ ನಿಜವಾಗಿಯೂ ಗಮನಾರ್ಹವಾದ ಒಂದು ಸಾಕ್ಷ್ಯವನ್ನು ತುಸು ಪರಿಗಣಿಸಿರಿ. ಆತನ ನಿಜ ಆರಾಧಕರಾಗುವ ಮತ್ತು ನಿತ್ಯಜೀವದ ಪ್ರತೀಕ್ಷೆಯುಳ್ಳವರಾಗುವ ಸುಸಂದರ್ಭವನ್ನು ಆತನು ಕೇವಲ ಕುಲೀನರಾದ ಕೆಲವೇ ವ್ಯಕ್ತಿಗಳಿಗೆ ಸೀಮಿತಗೊಳಿಸಿರುವುದಿಲ್ಲ. ಬದಲಿಗೆ, “ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ.” (ಅ. ಕೃತ್ಯಗಳು 10:34, 35) ಒಬ್ಬರ ಸಾಮಾಜಿಕ ಅಂತಸ್ತು, ಅವರ ಬಣ್ಣ, ಅವರು ವಾಸಿಸುವ ದೇಶ ಯಾವುದೇ ಆಗಿರಲಿ, ಎಲ್ಲರಿಗೆ ಈ ಅತ್ಯದ್ಭುತ ಪ್ರತೀಕ್ಷೆಯು ತೆರೆದಿರುತ್ತದೆ. ಇದೇ ಅತ್ಯುತ್ಕೃಷ್ಟವಾದ ನಿಜ ನ್ಯಾಯವಲ್ಲವೊ?
16 ನಮ್ಮ ಪರಿಗಣನೆ ಮತ್ತು ಆದರಕ್ಕೆ ಅರ್ಹವಾಗಿರುವ ಯೆಹೋವನ ಪರಿಪೂರ್ಣ ನ್ಯಾಯದ ಇನ್ನೊಂದು ಮುಖವೂ ಇದೆ: ಆತನ ನೀತಿಯುತ ಮಟ್ಟಗಳನ್ನು ಉಲ್ಲಂಘಿಸುವವರೊಂದಿಗೆ ಆತನು ವ್ಯವಹರಿಸುವ ವಿಧವೇ ಅದು.
ಶಿಕ್ಷೆಯಿಂದ ವಿನಾಯಿತಿಯಿಲ್ಲ
17. ಈ ಲೋಕದಲ್ಲಿನ ಅನ್ಯಾಯದ ಕೃತ್ಯಗಳು ಯೆಹೋವನ ನ್ಯಾಯವನ್ನು ಯಾವ ರೀತಿಯಲ್ಲೂ ಖಂಡಿಸುವುದಿಲ್ಲ ಏಕೆಂಬುದನ್ನು ವಿವರಿಸಿರಿ.
17 ಕೆಲವರು ಹೀಗೆ ಆಲೋಚಿಸಬಹುದು: ‘ಯೆಹೋವನು ಅನೀತಿಯ ಕೃತ್ಯಗಳನ್ನು ಮನ್ನಿಸುವುದಿಲ್ಲವಾದರೆ, ಇಂದಿನ ಲೋಕದಲ್ಲಿ ತೀರ ಸಾಮಾನ್ಯವಾಗಿರುವ ಅನ್ಯಾಯ ಮತ್ತು ಭ್ರಷ್ಟ ಕೃತ್ಯಗಳು ಏಕಿವೆ?’ ಇಂಥ ಅನ್ಯಾಯದ ಕೃತ್ಯಗಳು ಯೆಹೋವನ ನ್ಯಾಯವನ್ನು ಯಾವ ರೀತಿಯಲ್ಲೂ ಖಂಡಿಸುವುದಿಲ್ಲ. ಈ ದುಷ್ಟ ಲೋಕದಲ್ಲಿ ನಡೆಯುತ್ತಿರುವ ಅನೇಕ ತರದ ಅನ್ಯಾಯಗಳು, ಮನುಷ್ಯರು ಆದಾಮನಿಂದ ಪಿತ್ರಾರ್ಜಿತವಾಗಿ ಪಡೆದ ಪಾಪದ ಫಲಿತಾಂಶಗಳು. ಅಪರಿಪೂರ್ಣ ಮಾನವರು ತಮ್ಮ ಸ್ವಂತ ಪಾಪಪೂರ್ಣ ಮಾರ್ಗಗಳನ್ನು ಆರಿಸಿಕೊಂಡಿರುವ ಈ ಲೋಕದಲ್ಲಿ, ಅನ್ಯಾಯಗಳು ವ್ಯಾಪಕವಾಗಿ ಹಬ್ಬಿವೆ. ಆದರೆ ಇದು ಹೆಚ್ಚು ಸಮಯ ಮುಂದುವರಿಯದು.—ಧರ್ಮೋಪದೇಶಕಾಂಡ 32:5.
18, 19. ಆತನ ನೀತಿಯ ನಿಯಮಗಳನ್ನು ಬುದ್ಧಿಪೂರ್ವಕವಾಗಿ ಉಲ್ಲಂಘಿಸುವವರನ್ನು ಯೆಹೋವನು ಸದಾ ಸಹಿಸಿಕೊಳ್ಳನೆಂದು ಯಾವುದು ತೋರಿಸುತ್ತದೆ?
18 ಯಥಾರ್ಥ ಮನಸ್ಸಿನಿಂದ ತನ್ನ ಸಮೀಪ ಬರುವವರ ಕಡೆಗೆ ಯೆಹೋವನು ಮಹಾ ಕರುಣೆಯನ್ನು ತೋರಿಸುತ್ತಾನಾದರೂ, ತನ್ನ ಪವಿತ್ರ ನಾಮಕ್ಕೆ ನಿಂದೆಯನ್ನು ತರುವಂಥ ಯಾವುದೇ ಪರಿಸ್ಥಿತಿಯನ್ನು ಆತನು ಸದಾಕಾಲಕ್ಕೂ ಸಹಿಸಿಕೊಳ್ಳುವುದಿಲ್ಲ. (ಕೀರ್ತನೆ 74:10, 22, 23) ನ್ಯಾಯದ ದೇವರು ತಿರಸ್ಕಾರವನ್ನು ಸಹಿಸುವವನಲ್ಲ; ಬುದ್ಧಿಪೂರ್ವಕವಾಗಿ ಪಾಪಮಾಡುವವರಿಗೆ ಸಲ್ಲತಕ್ಕ ಶಿಕ್ಷಾತೀರ್ಪನ್ನು ಅವನು ತಡೆದು ಹಿಡಿಯಲಾರನು. ಯೆಹೋವನು “ಕನಿಕರವೂ [“ಕರುಣೆಯೂ,” NW] ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು; . . . ಆದರೂ [ಅಪರಾಧಗಳನ್ನು] ಶಿಕ್ಷಿಸದೆ ಬಿಡದವನು.” (ವಿಮೋಚನಕಾಂಡ 34:6, 7) ಈ ವಚನಗಳಿಗೆ ಹೊಂದಿಕೆಯಲ್ಲಿ, ಆತನ ನೀತಿಯುತ ನಿಯಮಗಳನ್ನು ಬೇಕುಬೇಕೆಂದು ಉಲ್ಲಂಘಿಸುವವರ ಮೇಲೆ ನ್ಯಾಯತೀರ್ಪನ್ನು ಜಾರಿಗೊಳಿಸುವ ಆವಶ್ಯಕತೆಯನ್ನು ಕೆಲವೊಮ್ಮೆ ಯೆಹೋವನು ಕಂಡುಕೊಂಡಿದ್ದಾನೆ.
19 ಉದಾಹರಣೆಗಾಗಿ, ಪುರಾತನ ಇಸ್ರಾಯೇಲ್ಯರೊಂದಿಗೆ ಯೆಹೋವನಿಗಿದ್ದ ವ್ಯವಹಾರಗಳನ್ನು ಗಮನಕ್ಕೆ ತನ್ನಿರಿ. ವಾಗ್ದತ್ತ ದೇಶದಲ್ಲಿ ನೆಲೆಸಿರುವಾಗಲೂ, ಇಸ್ರಾಯೇಲ್ಯರು ಪದೇಪದೇ ಅಪನಂಬಿಗಸ್ತರಾದರು. ಅವರ ಭ್ರಷ್ಟ ಮಾರ್ಗಗಳು ಯೆಹೋವನನ್ನು “ನೋಯಿಸಿದರೂ,” ಆತನು ಆ ಕೂಡಲೆ ಅವರನ್ನು ತಳ್ಳಿಹಾಕಲಿಲ್ಲ. (ಕೀರ್ತನೆ 78:38-41) ಬದಲಿಗೆ, ಅವರು ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳುವಂತೆ ಆತನು ಕರುಣೆಯಿಂದ ಸಂದರ್ಭಗಳನ್ನು ನೀಡಿದನು. ಆತನು ಬೇಡಿದ್ದು: “ದುಷ್ಟನ ಸಾವಿನಲ್ಲಿ ನನಗೆ ಲೇಶವಾದರೂ ಸಂತೋಷವಿಲ್ಲ; ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವದೇ ನನಗೆ ಸಂತೋಷ. ಇಸ್ರಾಯೇಲ್ ವಂಶದವರೇ, ನಿಮ್ಮ ದುರ್ಮಾರ್ಗಗಳನ್ನು ಬಿಡಿರಿ, ಬಿಟ್ಟುಬಿಡಿರಿ; ನೀವು ಸಾಯಲೇಕೆ?” (ಯೆಹೆಜ್ಕೇಲ 33:11) ಇಸ್ರಾಯೇಲ್ಯರು ತಮ್ಮ ಕೆಟ್ಟ ಮಾರ್ಗಗಳನ್ನು ಬಿಟ್ಟು ಹಿಂದಿರುಗುವಂತೆ ಯೆಹೋವನು ಪದೇಪದೇ ತನ್ನ ಪ್ರವಾದಿಗಳನ್ನು ಕಳುಹಿಸಿಕೊಟ್ಟನು, ಯಾಕಂದರೆ ಆತನ ದೃಷ್ಟಿಯಲ್ಲಿ ಜೀವವು ಅಮೂಲ್ಯವಾಗಿತ್ತು. ಆದರೆ ಒಟ್ಟಿನಲ್ಲಿ, ಆ ಕಲ್ಲುಹೃದಯದ ಜನರು ಕಿವಿಗೊಡಲು ಮತ್ತು ಪಶ್ಚಾತ್ತಾಪಪಡಲು ನಿರಾಕರಿಸಿದರು. ಕೊನೆಗೆ ತನ್ನ ಪರಿಶುದ್ಧ ನಾಮಕ್ಕೋಸ್ಕರವೂ ಆ ನಾಮವು ಪ್ರತಿನಿಧಿಸುವ ಎಲ್ಲಾ ವಿಷಯಗಳಿಗೋಸ್ಕರವೂ, ಯೆಹೋವನು ಅವರನ್ನು ಅವರ ಶತ್ರುಗಳ ಕೈಗೆ ಒಪ್ಪಿಸಿಕೊಟ್ಟನು.—ನೆಹೆಮೀಯ 9:26-30.
20. (ಎ) ಇಸ್ರಾಯೇಲ್ಯರೊಂದಿಗೆ ಯೆಹೋವನ ವ್ಯವಹಾರವು ಆತನ ಕುರಿತು ನಮಗೇನನ್ನು ಕಲಿಸುತ್ತದೆ? (ಬಿ) ಸಿಂಹವು ಯೆಹೋವನ ನ್ಯಾಯದ ತಕ್ಕ ದ್ಯೋತಕವಾಗಿದೆಯೇಕೆ?
20 ಇಸ್ರಾಯೇಲ್ಯರೊಂದಿಗೆ ಯೆಹೋವನು ವ್ಯವಹರಿಸಿದ ರೀತಿಯು ಆತನ ಕುರಿತು ನಮಗೆ ಬಹಳಷ್ಟನ್ನು ಕಲಿಸುತ್ತದೆ. ಎಲ್ಲವನ್ನು ಕಾಣುವ ಆತನ ನೇತ್ರಗಳು ಅನೀತಿಯನ್ನು ಗಮನಿಸುತ್ತಿವೆಯೆಂತಲೂ ಆತನು ನೋಡುವ ವಿಷಯಗಳು ಆತನನ್ನು ಆಳವಾಗಿ ಬಾಧಿಸುತ್ತವೆಯೆಂತಲೂ ನಾವು ಕಲಿಯುತ್ತೇವೆ. (ಜ್ಞಾನೋಕ್ತಿ 15:3) ಕರುಣೆಯನ್ನು ತೋರಿಸಲು ಆಧಾರವಿರುವಲ್ಲಿ ಆತನು ಕರುಣೆಯನ್ನು ಖಂಡಿತವಾಗಿಯೂ ತೋರಿಸುವನೆಂದು ತಿಳಿಯುವುದೂ ನಮ್ಮಲ್ಲಿ ಧೈರ್ಯತುಂಬಿಸುತ್ತದೆ. ಅದಲ್ಲದೆ, ಆತನು ಎಂದೂ ದುಡುಕಿ ನ್ಯಾಯವನ್ನು ಮಾಡುವುದಿಲ್ಲವೆಂಬುದನ್ನು ಕಲಿಯುತ್ತೇವೆ. ಯೆಹೋವನ ತಾಳ್ಮೆ ಮತ್ತು ದೀರ್ಘಶಾಂತಿಯ ಕಾರಣ, ದುಷ್ಟರ ವಿರುದ್ಧ ಆತನೆಂದೂ ನ್ಯಾಯತೀರ್ಪನ್ನು ಜಾರಿಗೊಳಿಸನೆಂದು ಜನರು ತಪ್ಪಾಗಿ ತೀರ್ಮಾನಿಸುತ್ತಾರೆ. ಆದರೆ, ಅದು ಖಂಡಿತವಾಗಿಯೂ ಸತ್ಯವಲ್ಲ, ಯಾಕಂದರೆ ದೈವಿಕ ತಾಳ್ಮೆಗೂ ಮಿತಿಗಳಿವೆಯೆಂದು ಇಸ್ರಾಯೇಲ್ಯರೊಂದಿಗಿನ ದೇವರ ವ್ಯವಹಾರವು ನಮಗೆ ಕಲಿಸುತ್ತದೆ. ಯೆಹೋವನು ನೀತಿಗಾಗಿ ದೃಢನಿಲ್ಲುತ್ತಾನೆ. ನ್ಯಾಯವನ್ನು ನಡಿಸಲು ಹೆಚ್ಚಾಗಿ ಹಿಮ್ಮೆಟ್ಟುವ ಮಾನವರಂತೆ ಯೆಹೋವನಿಲ್ಲ, ಯಾವುದು ಸರಿಯೋ ಅದಕ್ಕಾಗಿ ದೃಢನಿಲ್ಲಲು ಆತನು ಸಂಪೂರ್ಣವಾಗಿ ಧೈರ್ಯಶೀಲನು. ಯೋಗ್ಯವಾಗಿಯೇ, ನಿರ್ಭೀತ ನ್ಯಾಯದ ದ್ಯೋತಕದೋಪಾದಿ ಸಿಂಹವು ದೇವರ ಸಾನ್ನಿಧ್ಯ ಮತ್ತು ಸಿಂಹಾಸನದೊಂದಿಗೆ ಜೊತೆಗೂಡಿದೆ. a (ಯೆಹೆಜ್ಕೇಲ 1:10; ಪ್ರಕಟನೆ 4:7) ಹೀಗಿರುವುದರಿಂದ, ಅನ್ಯಾಯವನ್ನು ಈ ಭೂಮಿಯಿಂದ ತೊಡೆದುಹಾಕುವೆನೆಂಬ ತನ್ನ ವಾಗ್ದಾನವನ್ನು ಆತನು ಪೂರೈಸಿಯೆ ತೀರುವನೆಂಬ ಭರವಸೆಯು ನಮಗಿರಸಾಧ್ಯವಿದೆ. ಹೌದು, ಆತನು ನ್ಯಾಯತೀರಿಸುವ ವಿಧವನ್ನು ಹೀಗೆ ಸಾರಾಂಶಿಸಬಹುದು: ಬೇಕಾದಲ್ಲಿ ದೃಢತೆ, ಶಕ್ಯವಿರುವಲ್ಲಿ ಕರುಣೆ.—2 ಪೇತ್ರ 3:9.
ನ್ಯಾಯದ ದೇವರ ಸಮೀಪಕ್ಕೆ ಬರುವುದು
21. ಯೆಹೋವನು ನ್ಯಾಯವನ್ನು ನಡಿಸುವ ರೀತಿಯ ಕುರಿತು ನಾವು ಧ್ಯಾನಿಸುವಾಗ, ನಾವು ಆತನ ಬಗ್ಗೆ ಯಾವ ರೀತಿಯಲ್ಲಿ ನೆನಸಿಕೊಳ್ಳಬೇಕು, ಮತ್ತು ಏಕೆ?
21 ಯೆಹೋವನು ನ್ಯಾಯವನ್ನು ನಡಿಸುವ ರೀತಿಯ ಕುರಿತು ನಾವು ಧ್ಯಾನಿಸುವಾಗ, ಆತನು ದುಷ್ಕರ್ಮಿಗಳ ಮೇಲೆ ತೀರ್ಪನ್ನು ವಿಧಿಸುವುದರಲ್ಲಿ ಮಾತ್ರ ಚಿಂತಿತನಾಗಿರುವ ಒಬ್ಬ ಕಲ್ಲೆದೆಯ, ಗಡುಸಾದ ನ್ಯಾಯಾಧಿಪತಿಯೆಂದು ನೆನಸಬಾರದು. ಬದಲಿಗೆ, ಆತನು ತನ್ನ ಮಕ್ಕಳೊಂದಿಗೆ ಯಾವಾಗಲೂ ಶಕ್ಯವಿರುವಷ್ಟು ಅತ್ಯುತ್ತಮ ರೀತಿಯಲ್ಲಿ ವ್ಯವಹರಿಸುವ ಪ್ರೀತಿಯುಳ್ಳ ಆದರೆ ದೃಢಚಿತ್ತನಾದ ತಂದೆಯೆಂದು ನೆನಸಬೇಕು. ನ್ಯಾಯವಂತ, ಇಲ್ಲವೆ ನೀತಿವಂತ ತಂದೆಯೋಪಾದಿ ಯೆಹೋವನು ಸರಿಯಾದದ್ದನ್ನೇ ಮಾಡುವ ದೃಢತೆಯನ್ನು, ತನ್ನ ಸಹಾಯ ಮತ್ತು ಕ್ಷಮಾಪಣೆಯ ಅಗತ್ಯವಿರುವ ಭೂಮಕ್ಕಳಿಗಾಗಿ ಕೋಮಲ ಕನಿಕರದೊಂದಿಗೆ ಸಮತೂಕಗೊಳಿಸುತ್ತಾನೆ.—ಕೀರ್ತನೆ 103:10, 13.
22. ತನ್ನ ನ್ಯಾಯದಿಂದ ನಿರ್ದೇಶಿಸಲ್ಪಟ್ಟು, ಯಾವ ಪ್ರತೀಕ್ಷೆಯು ನಮಗಿರುವಂತೆ ಯೆಹೋವನು ಸಾಧ್ಯಗೊಳಿಸಿದ್ದಾನೆ, ಮತ್ತು ಆತನು ನಮ್ಮೊಂದಿಗೆ ಈ ರೀತಿಯಲ್ಲಿ ವ್ಯವಹರಿಸುವುದೇಕೆ?
22 ದೈವಿಕ ನ್ಯಾಯದಲ್ಲಿ, ತಪ್ಪಿತಸ್ಥರಿಗೆ ನ್ಯಾಯತೀರ್ಪನ್ನು ವಿಧಿಸುವುದು ಮಾತ್ರವಲ್ಲ ಅದಕ್ಕಿಂತ ಹೆಚ್ಚಿನದ್ದೂ ಸೇರಿರುತ್ತದೆಂಬುದಕ್ಕೆ ನಾವೆಷ್ಟು ಕೃತಜ್ಞರಾಗಿರಬಲ್ಲೆವು! ತನ್ನ ನ್ಯಾಯದಿಂದ ನಿರ್ದೇಶಿಸಲ್ಪಟ್ಟು, ನಾವು ನಿಜವಾಗಿಯೂ ರೋಮಾಂಚಕವಾದ ಪ್ರತೀಕ್ಷೆಯನ್ನು ಹೊಂದಲು, ಅಂದರೆ ಎಲ್ಲಿ “ನೀತಿಯು ವಾಸವಾಗಿರುವ”ದೋ ಆ ಒಂದು ಲೋಕದಲ್ಲಿ ಪರಿಪೂರ್ಣವೂ ನಿರಂತರವೂ ಆದ ಜೀವಿತವನ್ನು ಹೊಂದುವುದನ್ನು ಯೆಹೋವನು ಸಾಧ್ಯಗೊಳಿಸಿದ್ದಾನೆ. (2 ಪೇತ್ರ 3:13) ದೇವರು ನಮ್ಮೊಂದಿಗೆ ಈ ರೀತಿಯಾಗಿ ವ್ಯವಹರಿಸುವುದು ಏಕೆಂದರೆ, ಆತನ ನ್ಯಾಯವು ರಕ್ಷಿಸಲಿಕ್ಕಾಗಿ ತವಕಪಡುತ್ತದೆಯೇ ಹೊರತು ಖಂಡಿಸಲಿಕ್ಕಾಗಿ ಅಲ್ಲ. ನಿಜವಾಗಿಯೂ, ಯೆಹೋವನ ನ್ಯಾಯದ ಒಂದು ಹೆಚ್ಚು ಉತ್ತಮ ತಿಳಿವಳಿಕೆಯು ನಮ್ಮನ್ನು ಆತನ ಸಮೀಪಕ್ಕೆ ಸೆಳೆಯುತ್ತದೆ! ಯೆಹೋವನು ಈ ಶ್ಲಾಘನೀಯ ಗುಣವನ್ನು ಹೇಗೆ ವ್ಯಕ್ತಪಡಿಸುತ್ತಾನೆಂಬುದನ್ನು ಮುಂದಿನ ಅಧ್ಯಾಯಗಳಲ್ಲಿ ನಾವು ಪರೀಕ್ಷಿಸುವೆವು.
a ಅಪನಂಬಿಗಸ್ತ ಇಸ್ರಾಯೇಲಿನ ಮೇಲೆ ನ್ಯಾಯತೀರ್ಪನ್ನು ನಿರ್ವಹಿಸುವಾಗ ಯೆಹೋವನು ತನ್ನನ್ನು ಒಂದು ಸಿಂಹಕ್ಕೆ ಹೋಲಿಸಿರುವುದು ಆಸಕ್ತಿಕರ ಸಂಗತಿ.—ಯೆರೆಮೀಯ 25:38; ಹೋಶೇಯ 5:14.