ಈ ಗ್ರಂಥದಲ್ಲಿ ಭರವಸೆಯಿಡಸಾಧ್ಯವಿದೆಯೆ?
ಈ ಗ್ರಂಥದಲ್ಲಿ ಭರವಸೆಯಿಡಸಾಧ್ಯವಿದೆಯೆ?
“ನಾನು ಇನ್ನಾವುದೇ ಅಪವಿತ್ರ [ಲೌಕಿಕ] ಇತಿಹಾಸಕ್ಕಿಂತಲೂ ಬೈಬಲಿನಲ್ಲಿ ವಿಶ್ವಾಸಾರ್ಹತೆಯ ಹೆಚ್ಚಿನ ನಿಶ್ಚಿತ ಗುರುತುಗಳನ್ನು ಕಂಡುಕೊಳ್ಳುತ್ತೇನೆ.”—ಪ್ರಸಿದ್ಧ ಇಂಗ್ಲಿಷ್ ವಿಜ್ಞಾನಿ ಸರ್ ಐಸಕ್ ನ್ಯೂಟನ್.1
ಈ ಗ್ರಂಥದಲ್ಲಿ—ಬೈಬಲಿನಲ್ಲಿ—ಭರವಸೆಯಿಡಸಾಧ್ಯವಿದೆಯೆ? ನಿಜವಾಗಿಯೂ ಜೀವಿಸಿದ್ದ ಜನರನ್ನು, ವಾಸ್ತವವಾಗಿ ಅಸ್ತಿತ್ವದಲ್ಲಿದ್ದ ಸ್ಥಳಗಳನ್ನು ಮತ್ತು ಖಂಡಿತವಾಗಿಯೂ ಸಂಭವಿಸಿದ ಘಟನೆಗಳನ್ನು ಅದು ಸೂಚಿಸುತ್ತದೆಯೆ? ಹಾಗಿರುವಲ್ಲಿ, ಅದನ್ನು ಜಾಗರೂಕರಾಗಿದ್ದ ಪ್ರಾಮಾಣಿಕ ಲೇಖಕರು ಬರೆದರೆಂಬುದಕ್ಕೆ ಪುರಾವೆಯಿರಬೇಕು. ರುಜುವಾತು ನಿಶ್ಚಯವಾಗಿಯೂ ಇದೆ. ಅದರಲ್ಲಿ ಹೆಚ್ಚಿನದ್ದು ಭೂಮಿಯಲ್ಲಿ ಹೂತಿಡಲ್ಪಟ್ಟದ್ದಾಗಿ ಕಂಡುಹಿಡಿಯಲ್ಪಟ್ಟಿದೆ ಮತ್ತು ಇನ್ನೂ ಹೆಚ್ಚಿನ ವಿಷಯವು ಆ ಗ್ರಂಥದಲ್ಲಿಯೇ ಅಡಕವಾಗಿದೆ.
ಪುರಾವೆಯನ್ನು ಅಗೆದು ತೆಗೆಯುವುದು
ಬೈಬಲ್ ದೇಶಗಳಲ್ಲಿ ನೆಲದಡಿಯಲ್ಲಿರುವ ಪುರಾತನ ಚಾರಿತ್ರಿಕ ವಸ್ತುಗಳ ಕಂಡುಹಿಡಿತವು ಬೈಬಲಿನ ಐತಿಹಾಸಿಕ ಮತ್ತು ಭೌಗೋಲಿಕ ನಿಷ್ಕೃಷ್ಟತೆಯನ್ನು ಸಮರ್ಥಿಸಿದೆ. ಪ್ರಾಕ್ತನಶಾಸ್ತ್ರಜ್ಞರು ಅಗೆದು ತೆಗೆದ ಕೆಲವೇ ಪುರಾವೆಯನ್ನು ಪರಿಗಣಿಸಿರಿ.
ಇಸ್ರಾಯೇಲಿನ ಅರಸನಾಗಿ ಪರಿಣಮಿಸಿದ ಧೈರ್ಯವಂತ ಯುವ ಕುರುಬನಾದ ದಾವೀದನು ಬೈಬಲಿನ ಓದುಗರಿಗೆ ಸುಪರಿಚಿತನು. ಅವನ ಹೆಸರು ಬೈಬಲಿನಲ್ಲಿ 1,138 ಬಾರಿ ಕಂಡುಬರುತ್ತದೆ ಮತ್ತು ಅನೇಕ ವೇಳೆ ಅವನ ರಾಜಮನೆತನಕ್ಕೆ ಸೂಚಿಸುವ, “ದಾವೀದನ ಮನೆತನ” ಎಂಬ ಅಭಿವ್ಯಕ್ತಿಯು 25 ಬಾರಿ ಕಂಡುಬರುತ್ತದೆ. (1 ಸಮುವೇಲ 16:13; 20:16) ಆದರೆ, ಇತ್ತೀಚಿನ ವರೆಗೆ, ದಾವೀದನು ಬದುಕಿದ್ದನೆಂಬುದಕ್ಕೆ ಬೈಬಲಿನ ಹೊರಗಡೆ ಯಾವುದೇ ಸ್ಪಷ್ಟವಾದ ರುಜುವಾತಿರಲಿಲ್ಲ. ದಾವೀದನು ಬರಿಯ ಕಾಲ್ಪನಿಕ ವ್ಯಕ್ತಿಯಾಗಿದ್ದನೊ?
1993ರಲ್ಲಿ ಪ್ರೊಫೆಸರ್ ಅವ್ರಹಾಮ್ ಬೀರಾನ್ ಎಂಬವರ ನಾಯಕತ್ವದಲ್ಲಿ, ಪ್ರಾಕ್ತನಶಾಸ್ತ್ರಜ್ಞರ ತಂಡವೊಂದು ದಿಗ್ಭ್ರಮೆಗೊಳಿಸುವ ಶೋಧವನ್ನು ಮಾಡಿತು. ಇದನ್ನು ಇಸ್ರಾಯೇಲ್ ಎಕ್ಸ್ಪ್ಲೊರೇಷನ್ ಜರ್ನಲ್ನಲ್ಲಿ ವರದಿಸಲಾಯಿತು. ಇಸ್ರಾಯೇಲಿನ ಉತ್ತರ ಭಾಗದ, ಟೆಲ್ ಡಾನ್ ಎಂಬ ಪುರಾತನ ದಿಬ್ಬದ ನಿವೇಶನದಲ್ಲಿ, ಅವರು ಒಂದು ಕಪ್ಪು ಅಗ್ನಿಶಿಲೆಯನ್ನು ಕಂಡುಹಿಡಿದರು. ಆ ಶಿಲೆಯಲ್ಲಿ “ದಾವೀದನ ಮನೆತನ” ಮತ್ತು “ಇಸ್ರಾಯೇಲ್ಯರ ಅರಸನು” ಎಂಬ ಪದಗಳು ಕೆತ್ತಲ್ಪಟ್ಟಿದ್ದವು.2 ಸಾ.ಶ.ಪೂ. ಒಂಬತ್ತನೆಯ ಶತಮಾನವನ್ನು ನಿರ್ದೇಶಿಸಿದ ಆ ಸ್ಮಾರಕ ಲೇಖನವು ಅರಮೇಯರು—ಪೂರ್ವದಿಕ್ಕಿನಲ್ಲಿ ಜೀವಿಸಿದ್ದ ಇಸ್ರಾಯೇಲಿನ ಶತ್ರುಗಳು—ಕಟ್ಟಿದ್ದ ವಿಜಯ ಸ್ಮಾರಕದ ಭಾಗವಾಗಿತ್ತೆಂದು ಹೇಳಲಾಗುತ್ತದೆ. ಈ ಪುರಾತನ ಸ್ಮಾರಕ ಲೇಖನವು ಅಷ್ಟೊಂದು ಗಮನಾರ್ಹವೇಕೆ?
ಪ್ರೊಫೆಸರ್ ಬೀರಾನ್ ಮತ್ತು ಅವರ ಸಹೋದ್ಯೋಗಿ ಪ್ರೊಫೆಸರ್ ಯೋಸಫ್ ನಾವೇ ಅವರ ಒಂದು ವರದಿಯ ಮೇಲೆ ಆಧಾರಿತವಾದ, ಬಿಬ್ಲಿಕಲ್ ಆರ್ಕಿಯಾಲಜಿ ರಿವ್ಯೂನಲ್ಲಿನ ಲೇಖನವೊಂದು ಹೇಳಿದ್ದು: “ಬೈಬಲಿನ ಹೊರಗಡೆ, ಯಾವುದೇ ಪುರಾತನ ಸ್ಮಾರಕ ಲೇಖನದಲ್ಲಿ ದಾವೀದನ ಹೆಸರು ಕಂಡುಬಂದದ್ದು ಇದೇ ಪ್ರಥಮ ಬಾರಿ.”3 * ಈ ಸ್ಮಾರಕ ಲೇಖನದ ಕುರಿತಾದ ಇನ್ನೊಂದು ವಿಷಯವು ಗಮನಾರ್ಹ. “ದಾವೀದನ ಮನೆತನ” ಎಂಬ ಅಭಿವ್ಯಕ್ತಿಯನ್ನು ಒಂದು ಪದವಾಗಿ ಬರೆಯಲಾಗಿದೆ. ಭಾಷಾ ಪರಿಣತರಾದ ಪ್ರೊಫೆಸರ್ ಆನ್ಸನ್ ರೇನೀ ವಿವರಿಸುವುದು: “ವಿಶೇಷವಾಗಿ ಆ ಸಂಯೋಜನೆಯು ಸುಸ್ಥಾಪಿತವಾದ ಅಂಕಿತ ನಾಮವಾಗಿದ್ದರೆ, ಒಂದು ಪದ ವಿಭಾಜಕವನ್ನು . . . ಅನೇಕ ವೇಳೆ ಬಿಟ್ಟುಬಿಡಲಾಗುತ್ತದೆ. ‘ದಾವೀದನ ಮನೆತನ’ ಎಂಬುದು, ಸಾ.ಶ.ಪೂ. ಒಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ನಿಶ್ಚಯವಾಗಿಯೂ ಅಂತಹ ಒಂದು ಸೂಕ್ತ ರಾಜಕೀಯ ಮತ್ತು ಭೌಗೋಲಿಕ ನಾಮವಾಗಿತ್ತು.”5 ಹೀಗೆ, ರಾಜ ದಾವೀದನೂ ಅವನ ರಾಜಮನೆತನವೂ ಪುರಾತನ ಲೋಕದಲ್ಲಿ ಹೆಸರುವಾಸಿಯಾಗಿತ್ತೆಂಬುದು ವ್ಯಕ್ತ.
ಬೈಬಲಿನಲ್ಲಿ ಅಶ್ಶೂರದ ಮಹಾ ನಗರವೆಂದು ಹೇಳಿರುವ ನಿನೆವೆಯು ನಿಜವಾಗಿಯೂ ಅಸ್ತಿತ್ವದಲ್ಲಿತ್ತೊ? 19ನೆಯ ಶತಮಾನದ ಆದಿಭಾಗದಷ್ಟು ಇತ್ತೀಚೆಗೆ, ಕೆಲವು ಬೈಬಲ್ ವಿಮರ್ಶಕರು ಹಾಗೆ ನಂಬಲು ನಿರಾಕರಿಸಿದರು. ಆದರೆ 1849ರಲ್ಲಿ, ಸರ್ ಆಸ್ಟನ್ ಹೆನ್ರಿ ಲೇಯರ್ಡ್, ಕೂಯಂಜಿಕ್ನಲ್ಲಿ ರಾಜ ಸನ್ಹೇರೀಬನ ಅರಮನೆಯ ಅವಶೇಷಗಳನ್ನು, ಪುರಾತನ ನಿನೆವೆಯ ಭಾಗವಾಗಿ ಪರಿಣಮಿಸಿದ ಒಂದು ನಿವೇಶನವನ್ನು ಕಂಡುಹಿಡಿದನು. ಹೀಗೆ ಆ ಸಂಬಂಧದಲ್ಲಿ ವಿಮರ್ಶಕರ ಬಾಯಿ ಮುಚ್ಚಿಸಲ್ಪಟ್ಟಿತು. ಆದರೆ ಈ ಅವಶೇಷಗಳಿಗೆ ಹೇಳಲಿಕ್ಕೆ ಇನ್ನೂ ಹೆಚ್ಚು ಸಂಗತಿಗಳಿದ್ದವು. ಒಂದು ಸುರಕ್ಷಿತವಾಗಿದ್ದ ಕೋಣೆಯ ಗೋಡೆಗಳ ಮೇಲೆ ಒಂದು ಕೋಟೆಕೊತ್ತಲಗಳುಳ್ಳ ನಗರದ ವಶಪಡಿಸಿಕೊಳ್ಳುವಿಕೆಯನ್ನು ತೋರಿಸುವ ಒಂದು ಚಿತ್ರವಿತ್ತು. ಆಕ್ರಮಣ ಮಾಡಿದ ರಾಜನ ಮುಂದೆ ಖೈದಿಗಳನ್ನು ಮುನ್ನಡೆಸಲಾಗುತ್ತಿತ್ತು. ರಾಜನ
ಮೇಲ್ಗಡೆ ಈ ಸ್ಮಾರಕ ಲೇಖನವಿದೆ: “ಜಗತ್ತಿನ ರಾಜ, ಅಶ್ಶೂರದ ರಾಜ ಸನ್ಹೇರೀಬನು ನಿಮೆಡು ಸಿಂಹಾಸನದ ಮೇಲೆ ಕುಳಿತುಕೊಂಡು, ಲಾಕೀಷ್ (ಲಾಕಿಸು)ನಿಂದ (ತೆಗೆದುಕೊಂಡ) ಕೊಳ್ಳೆಯನ್ನು ಪರೀಕ್ಷಿಸಿದನು.”6ಬ್ರಿಟಿಷ್ ಮ್ಯೂಸಿಯಮ್ನಲ್ಲಿ ನೋಡಸಾಧ್ಯವಿರುವ ಈ ಚಿತ್ರ ಮತ್ತು ಸ್ಮಾರಕ ಲೇಖನವು, 2 ಅರಸುಗಳು 18:13, 14ರಲ್ಲಿ ದಾಖಲೆಯಾಗಿರುವ, ಯೆಹೂದ ನಗರವಾದ ಲಾಕೀಷನ್ನು ಸನ್ಹೇರೀಬನು ವಶಪಡಿಸಿಕೊಂಡ ಬೈಬಲಿನ ವೃತ್ತಾಂತದೊಂದಿಗೆ ಒಮ್ಮತದಿಂದಿದೆ. ಈ ಸಂಶೋಧನೆಯ ವೈಶಿಷ್ಟ್ಯದ ಕುರಿತು ಹೇಳುತ್ತ, ಲೇಯರ್ಡ್ ಬರೆದುದು: “ಈ ಶೋಧಗಳನ್ನು ಮಾಡುವುದಕ್ಕೆ ಮೊದಲು, ನಿನವೆಯನ್ನು ಗುರುತಿಸಿದ ಮಣ್ಣಿನ ಮತ್ತು ಕಸದ ರಾಶಿಯ ಕೆಳಗಡೆ, ಅವು ನಡೆದ ಸಮಯದಲ್ಲೇ ಸ್ವತಃ ಸನ್ಹೇರೀಬನು ಬರೆದ, ಮತ್ತು ಬೈಬಲಿನ ದಾಖಲೆಯ ಸೂಕ್ಷ್ಮ ವಿವರಗಳನ್ನೂ ದೃಢೀಕರಿಸುವ, ಹಿಜ್ಕೀಯ [ಯೆಹೂದದ ರಾಜ] ಮತ್ತು ಸನ್ಹೇರೀಬರ ಮಧ್ಯೆ ನಡೆದ ಯುದ್ಧಗಳ ಇತಿಹಾಸವು ಕಂಡುಹಿಡಿಯಲ್ಪಡುವುದು ಸಂಭವನೀಯ ಅಥವಾ ಸಾಧ್ಯವೆಂಬುದನ್ನು ಯಾರು ತಾನೇ ನಂಬುತ್ತಿದ್ದರು?”7
ಪ್ರಾಕ್ತನಶಾಸ್ತ್ರಜ್ಞರು ಬೈಬಲಿನ ನಿಷ್ಕೃಷ್ಟತೆಯನ್ನು ದೃಢೀಕರಿಸುವ ಇನ್ನೂ ಅನೇಕ ಚಾರಿತ್ರಿಕ ವಸ್ತುಗಳನ್ನು—ಮಣ್ಣಿನ ಪಾತ್ರೆಗಳು, ಕಟ್ಟಡಗಳ ಅವಶೇಷಗಳು, ಜೇಡಿಮಣ್ಣಿನ ಫಲಕಗಳು, ನಾಣ್ಯಗಳು, ಪ್ರಮಾಣ ಪತ್ರಗಳು, ಸ್ಮಾರಕಗಳು, ಮತ್ತು ಸ್ಮಾರಕ ಲೇಖನಗಳನ್ನು ಅಗೆದು ತೆಗೆದಿದ್ದಾರೆ. ಅಬ್ರಹಾಮನು ಜೀವಿಸಿದ್ದ ವಾಣಿಜ್ಯ ಮತ್ತು ಧಾರ್ಮಿಕ ಕೇಂದ್ರವಾದ ಕಲ್ದೀಯರ ಊರ್ ನಗರವನ್ನು ಭೂಶೋಧಕರು ಅನಾವರಣಗೊಳಿಸಿದ್ದಾರೆ.8 (ಆದಿಕಾಂಡ 11:27-31) 19ನೆಯ ಶತಮಾನದಲ್ಲಿ ಅಗೆದು ತೆಗೆದ ನ್ಯಾಬೊನೈಡಿಸ್ ವೃತ್ತಾಂತವು, ಸಾ.ಶ.ಪೂ. 539ರಲ್ಲಿ ಬಾಬೆಲು ಮಹಾ ಕೋರೇಷನೆದುರು ಪತನಗೊಂಡದ್ದನ್ನು ವರ್ಣಿಸುತ್ತದೆ. ಇದು ದಾನಿಯೇಲ 5ನೆಯ ಅಧ್ಯಾಯದಲ್ಲಿ ವರ್ಣಿಸಲ್ಪಟ್ಟಿರುವ ಒಂದು ಘಟನೆಯಾಗಿದೆ.9 ಪುರಾತನ ಥೆಸಲೊನೀಕದ ಕಮಾನು ಬಾಗಿಲೊಂದರ ಮೇಲೆ ಕಂಡುಬಂದ ಒಂದು ಸ್ಮಾರಕ ಲೇಖನ (ಇದರ ಅವಶಿಷ್ಟಗಳು ಬ್ರಿಟಿಷ್ ಮ್ಯೂಸಿಯಮ್ನಲ್ಲಿ ಇಡಲ್ಪಟ್ಟಿವೆ)ದಲ್ಲಿ “ಪಾಲಿಟಾರ್ಕ್ಸ್” (“ಅಧಿಕಾರಿಗಳು”) ಎಂದು ವರ್ಣಿಸಲ್ಪಟ್ಟಿರುವ ಊರಿನ ಅಧಿಕಾರಿಗಳ ಹೆಸರುಗಳು ಅಡಕವಾಗಿವೆ. ಈ ಪದವು ಶ್ರೇಷ್ಠ ಗ್ರೀಕ್ ಸಾಹಿತ್ಯಕ್ಕೆ ಅಜ್ಞಾತವಾಗಿದ್ದರೂ ಬೈಬಲ್ ಲೇಖಕ ಲೂಕನು ಇದನ್ನು ಉಪಯೋಗಿಸಿದನು.10 (ಅ. ಕೃತ್ಯಗಳು 17:6, NW ಪಾದಟಿಪ್ಪಣಿ) ಹೀಗೆ ಇತರ ವಿವರಗಳಲ್ಲಿ ಈಗಾಗಲೇ ಆಗಿರುವಂತೆ, ಲೂಕನ ನಿಷ್ಕೃಷ್ಟತೆಯು ಈ ವಿವರದಲ್ಲಿಯೂ ನಿರ್ದೋಷೀಕರಿಸಲ್ಪಟ್ಟಿತು.—ಲೂಕ 1:3ನ್ನು ಹೋಲಿಸಿ.
ಆದರೆ ಪ್ರಾಕ್ತನಶಾಸ್ತ್ರಜ್ಞರು ಬೈಬಲಿನೊಂದಿಗಂತೂ ಇರಲಿ, ಒಬ್ಬೊರೊಂದಿಗೊಬ್ಬರು ಸದಾ ಒಮ್ಮತದಿಂದಿರುವುದಿಲ್ಲ. ಹೀಗಿದ್ದರೂ, ಅದು ಭರವಸೆಯಿಡಸಾಧ್ಯವಿರುವ ಒಂದು ಗ್ರಂಥವೆಂಬುದಕ್ಕೆ ಬೈಬಲಿನೊಳಗೇ ಬಲವಾದ ರುಜುವಾತಿದೆ.
ಯಥಾರ್ಥತೆಯಿಂದ ಪ್ರಸ್ತುತಪಡಿಸಲ್ಪಟ್ಟದ್ದು
ಪ್ರಾಮಾಣಿಕ ಇತಿಹಾಸಕಾರರು (ಸನ್ಹೇರೀಬನು ಲಾಕೀಷನ್ನು ವಶಮಾಡಿಕೊಂಡ ಕುರಿತಾದ ಸ್ಮಾರಕ ಲೇಖನದಂತಹ) ವಿಜಯಗಳನ್ನಷ್ಟೇಯಲ್ಲ, ಸೋಲುಗಳನ್ನೂ, ಯಶಸ್ಸುಗಳನ್ನಷ್ಟೇಯಲ್ಲ, ವೈಫಲ್ಯಗಳನ್ನೂ, ಶಕ್ತಿಗಳನ್ನಷ್ಟೇಯಲ್ಲ, ದೌರ್ಬಲ್ಯಗಳನ್ನೂ ದಾಖಲೆ ಮಾಡುತ್ತಾರೆ. ಇಂತಹ ಪ್ರಾಮಾಣಿಕತೆಯನ್ನು ಪ್ರತಿಬಿಂಬಿಸುವ ಲೌಕಿಕ ಇತಿಹಾಸಗಳೊ ಕೊಂಚ.
ಅಶ್ಶೂರ್ಯ ಇತಿಹಾಸಕಾರರ ಸಂಬಂಧದಲ್ಲಿ, ಡ್ಯಾನಿಯಲ್ ಡಿ. ಲಕನ್ಬಿಲ್ ವಿವರಿಸುವುದು: “ರಾಜವೈಭವದ ಡಂಭಾಚಾರವು ಐತಿಹಾಸಿಕ ನಿಷ್ಕೃಷ್ಟತೆಯ ಕುರಿತು ಅಸಂಬದ್ಧವಾಗಿ ವರ್ತಿಸುವಂತೆ ಕೇಳಿಕೊಂಡಿತೆಂಬುದು ಅನೇಕ ವೇಳೆ ಸ್ಪಷ್ಟವಾಗುತ್ತದೆ.”11 ಇಂತಹ “ರಾಜವೈಭವದ ಡಂಭಾಚಾರ”ವನ್ನು ಚಿತ್ರಿಸುತ್ತ, ಅಶ್ಶೂರ್ಯ ರಾಜ ಅಶೂರ್ನಸಿರ್ಪಾಲನ ವಂಶಾನುಚರಿತ್ರೆಯು ಜಂಬಕೊಚ್ಚಿಕೊಳ್ಳುವುದು: “ನಾನು ರಾಜಯೋಗ್ಯನು, ಶ್ರೀಮಂತೋಚಿತನು, ಘನತೆಗೇರಿರುವವನು, ಬಲಾಢ್ಯನು, ಸನ್ಮಾನಿತನು, ಮಹಿಮಾನ್ವಿತನು, ಉತ್ತಮೋತ್ತಮನು, ಶಕ್ತಿವಂತನು, ಕೆಚ್ಚೆದೆಯವನು, ಸಿಂಹಧೀರನು, ಮತ್ತು ವೀರೋಚಿತನು!”12 ಇಂತಹ ಚರಿತ್ರೆಗಳಲ್ಲಿ ನೀವು ಓದುವ ಸಕಲವನ್ನೂ ನಿಷ್ಕೃಷ್ಟ ಇತಿಹಾಸವೆಂದು ನೀವು ಅಂಗೀಕರಿಸುವಿರೊ?
ವೈದೃಶ್ಯದಲ್ಲಿ, ಬೈಬಲ್ ಲೇಖಕರಾದರೊ ಚೈತನ್ಯದಾಯಕ ಯಥಾರ್ಥತೆಯನ್ನು ಪ್ರದರ್ಶಿಸಿದರು. ಇಸ್ರಾಯೇಲಿನ ನಾಯಕನಾದ ಮೋಶೆಯು, ತನ್ನ ಅಣ್ಣನಾದ ಆರೋನನ, ತನ್ನ ಅಕ್ಕ ಮಿರ್ಯಾಮಳ, ತನ್ನ ಸೋದರಳಿಯರಾದ ನಾದಾಬ ಮತ್ತು ಅಬೀಹೂ ಅವರ, ತನ್ನ ಜನರ ಹಾಗೂ ತನ್ನ ಸ್ವಂತ ದೋಷಗಳನ್ನೂ ಮುಚ್ಚುಮರೆಯಿಲ್ಲದೆ ವರದಿಮಾಡಿದನು. (ವಿಮೋಚನಕಾಂಡ 14:11, 12; 32:1-6; ಯಾಜಕಕಾಂಡ 10:1, 2; ಅರಣ್ಯಕಾಂಡ 12:1-3; 20:9-12; 27:12-14) ರಾಜ ದಾವೀದನ ಗಂಭೀರವಾದ ತಪ್ಪುಗಳನ್ನು ಮರೆಮಾಚುವ ಬದಲಿಗೆ ಅವನ್ನು ಬರೆದಿಡಲಾಯಿತು—ಅದೂ ದಾವೀದನು ಇನ್ನೂ ಅರಸನಾಗಿ ಆಳುತ್ತಿದ್ದ ಸಮಯದಲ್ಲಿಯೇ. (2 ಸಮುವೇಲ, 11 ಮತ್ತು 24ನೆಯ ಅಧ್ಯಾಯಗಳು) ತನ್ನ ಹೆಸರಿನ ಪುಸ್ತಕವನ್ನು ಬರೆದ ಮತ್ತಾಯನು, ಅಪೊಸ್ತಲರು (ಅವರಲ್ಲಿ ಅವನೂ ಒಬ್ಬನಾಗಿದ್ದನು) ತಮ್ಮ ವೈಯಕ್ತಿಕ ಪ್ರಮುಖತೆಯ ಕುರಿತು ವಾದಿಸಿದ್ದನ್ನು ಮತ್ತು ಯೇಸುವಿನ ದಸ್ತಗಿರಿಯ ರಾತ್ರಿ ಅವನನ್ನು ತ್ಯಜಿಸಿದ ವಿಧವನ್ನು ತಿಳಿಸುತ್ತಾನೆ. (ಮತ್ತಾಯ 20:20-24; 26:56) ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಪತ್ರಿಕೆಗಳ ಲೇಖಕರು ಕೆಲವು ಆದಿ ಕ್ರೈಸ್ತ ಸಭೆಗಳಲ್ಲಿದ್ದ ಸಮಸ್ಯೆಗಳನ್ನು—ಲೈಂಗಿಕ ಅನೈತಿಕತೆ ಮತ್ತು ಭಿನ್ನಾಭಿಪ್ರಾಯಗಳನ್ನು ಸೇರಿಸಿ—ಮುಕ್ತವಾಗಿ ಒಪ್ಪಿಕೊಂಡರು. ಮತ್ತು ಆ ಸಮಸ್ಯೆಗಳನ್ನು ಸಂಬೋಧಿಸಿದಾಗ ಅವರು ಮುಚ್ಚುಮರೆಯಿಲ್ಲದೆ ಮಾತನಾಡಿದರು.—1 ಕೊರಿಂಥ 1:10-13; 5:1-13.
ಇಂತಹ ಮುಚ್ಚುಮರೆಯಿಲ್ಲದ ಯಥಾರ್ಥ ವರದಿ ಮಾಡುವಿಕೆಯು ಸತ್ಯದ ಕಡೆಗಿರುವ ಯಥಾರ್ಥ ಚಿಂತೆಯನ್ನು ಸೂಚಿಸುತ್ತದೆ. ತಮ್ಮ ಪ್ರಿಯರ, ತಮ್ಮ ಜನರ ಮತ್ತು ತಮ್ಮ ಕುರಿತಾಗಿಯೇ ಅಹಿತಕರವಾದ ಮಾಹಿತಿಯನ್ನು ವರದಿಮಾಡುವರೆ ಬೈಬಲ್ ಲೇಖಕರು ಸಿದ್ಧರಾಗಿದ್ದುದರಿಂದ, ಅವರ ಬರವಣಿಗೆಗಳಲ್ಲಿ ಭರವಸೆಯಿಡಲು ಸಕಾರಣವಿಲ್ಲವೆ?
ವಿವರಗಳಲ್ಲಿ ನಿಷ್ಕೃಷ್ಟತೆ
ನ್ಯಾಯ ವಿಚಾರಣೆಗಳಲ್ಲಿ ಒಬ್ಬ ಸಾಕ್ಷಿಯ ಸಾಕ್ಷ್ಯದ ವಿಶ್ವಾಸಾರ್ಹತೆಯನ್ನು ಅನೇಕ ವೇಳೆ ಅಮುಖ್ಯವಾದ ನಿಜತ್ವಗಳ ಆಧಾರದ ಮೇಲೆ ನಿರ್ಧರಿಸಸಾಧ್ಯವಿದೆ. ಅಮುಖ್ಯ ವಿವರಗಳಲ್ಲಿ ಒಮ್ಮತವು ಆ ಸಾಕ್ಷ್ಯವನ್ನು ನಿಷ್ಕೃಷ್ಟವೂ ಪ್ರಾಮಾಣಿಕವೂ ಆಗಿದೆಯೆಂದು ಸ್ಥಿರಪಡಿಸಬಹುದಾಗಿರುವಾಗ, ಗಂಭೀರವಾದ ವ್ಯತ್ಯಾಸಗಳು ಅದನ್ನು ಕಟ್ಟುಕಥೆಯೆಂದು ಬಯಲುಮಾಡಬಲ್ಲವು. ಇನ್ನೊಂದು ಕಡೆಯಲ್ಲಿ, ವಿಪರೀತವಾಗಿ ಅಚ್ಚುಕಟ್ಟಾದ, ಓರಣವಾಗಿ ಜೋಡಿಸಲ್ಪಟ್ಟ ಸೂಕ್ಷ್ಮವಾದ ವಿವರಣೆಯ ವೃತ್ತಾಂತವೂ ಸುಳ್ಳು ಸಾಕ್ಷ್ಯವನ್ನು ಹೊರಗೆಡವಬಹುದು.
ಈ ವಿಷಯದಲ್ಲಿ ಬೈಬಲ್ ಲೇಖಕರ “ಸಾಕ್ಷ್ಯ”ವು ಹೇಗೆ ತಕ್ಕದಾದ ಅರ್ಹತೆಗಳನ್ನು ಹೊಂದಿದೆ? ಬೈಬಲಿನ ಲೇಖಕರು ಗಮನಾರ್ಹವಾದ ಸಾಮಂಜಸ್ಯವನ್ನು ಪ್ರದರ್ಶಿಸಿದರು. ಸೂಕ್ಷ್ಮ ವಿವರಗಳ ಕುರಿತೂ ಒತ್ತಾದ ಒಮ್ಮತವಿದೆ. ಆದರೂ, ಈ ಸಾಮರಸ್ಯವು ಗುಟ್ಟು ಒಪ್ಪಂದದ ಸಂಶಯವನ್ನು ಎಬ್ಬಿಸುತ್ತ, ಜಾಗರೂಕತೆಯಿಂದ ಜೋಡಿಸಲ್ಪಟ್ಟಿರುವುದಿಲ್ಲ. ಕಾಕತಾಳೀಯತೆಗಳಲ್ಲಿ ಸಂಚುಹೂಡಿಕೆಯ ಕೊರತೆಯು ವಿಶದವಾಗುತ್ತದೆ. ಲೇಖಕರು ಅನೇಕ ವೇಳೆ ಅನುದ್ದೇಶಪೂರ್ವಕವಾಗಿ ಒಪ್ಪಿಕೊಳ್ಳುತ್ತಾರೆ. ಕೆಲವು ಉದಾಹರಣೆಗಳನ್ನು ಪರಿಗಣಿಸಿರಿ.
ಬೈಬಲ್ ಲೇಖಕ ಮತ್ತಾಯನು ಬರೆದುದು: “ತರುವಾಯ ಯೇಸು ಪೇತ್ರನ ಮನೆಗೆ ಬಂದು ಅವನ ಅತ್ತೆ ಜ್ವರದಲ್ಲಿ ಬಿದ್ದಿರುವುದನ್ನು” ಕಂಡನು. (ಓರೆಅಕ್ಷರಗಳು ನಮ್ಮವು.) (ಮತ್ತಾಯ 8:14) ಮತ್ತಾಯನು ಇಲ್ಲಿ ಆಸಕ್ತಿಕರವಾದರೂ ಅನಗತ್ಯವಾದ ಒಂದು ವಿವರವನ್ನು ಒದಗಿಸಿದ್ದಾನೆ: ಪೇತ್ರನು ವಿವಾಹಿತನಾಗಿದ್ದನು. ಈ ಅಮುಖ್ಯ ನಿಜತ್ವವನ್ನು ಪೌಲನು ಬೆಂಬಲಿಸಿದನು; ಅವನು ಬರೆದುದು: “ಕ್ರೈಸ್ತ ಸಹೋದರಿಯಾಗಿರುವ ಹೆಂಡತಿಯನ್ನು ಕರಕೊಂಡು ಸಂಚರಿಸುವದಕ್ಕೆ ಮಿಕ್ಕಾದ ಅಪೊಸ್ತಲರಂತೆಯೂ . . . ಕೇಫನಂತೆಯೂ ನಮಗೆ [“ನನಗೆ,” NW] ಹಕ್ಕಿಲ್ಲವೇ.” * (1 ಕೊರಿಂಥ 9:5) ಪೌಲನು ತನ್ನನ್ನು ನಿರಾಧಾರವಾದ ಟೀಕೆಯ ಎದುರು ಇಲ್ಲಿ ಸಮರ್ಥಿಸಿಕೊಳ್ಳುತ್ತಿದ್ದನೆಂದು ಪೂರ್ವಾಪರವು ಸೂಚಿಸುತ್ತದೆ. (1 ಕೊರಿಂಥ 9:1-4) ಪೇತ್ರನು ವಿವಾಹಿತನಾಗಿದ್ದನೆಂಬ ಈ ಚಿಕ್ಕ ನಿಜತ್ವವು, ಮತ್ತಾಯನ ವೃತ್ತಾಂತದ ನಿಷ್ಕೃಷ್ಟತೆಯನ್ನು ಬೆಂಬಲಿಸಲಿಕ್ಕಾಗಿ ಇಲ್ಲಿ ಪೌಲನಿಂದ ಬರೆಯಲ್ಪಡದೆ, ಪ್ರಾಸಂಗಿಕವಾಗಿ ಹೇಳಲ್ಪಟ್ಟಿದೆ.
ಸುವಾರ್ತಾ ಲೇಖಕರಲ್ಲಿ ನಾಲ್ವರೂ—ಮತ್ತಾಯ, ಮಾರ್ಕ, ಲೂಕ ಮತ್ತು ಯೋಹಾನ—ಯೇಸುವಿನ ದಸ್ತಗಿರಿಯ ರಾತ್ರಿಯಲ್ಲಿ, ಅವನ ಶಿಷ್ಯರಲ್ಲೊಬ್ಬನು ಕತ್ತಿಯನ್ನು ಹೊರತೆಗೆದು ಮಹಾಯಾಜಕನ ಸೇವಕನೊಬ್ಬನ ಕಿವಿಯನ್ನು ಕತ್ತರಿಸಿದನೆಂದು ಬರೆಯುತ್ತಾರೆ. ಆದರೆ ಯೋಹಾನನ ಸುವಾರ್ತೆಯು ಮಾತ್ರ ಅನಗತ್ಯವೆಂದು ತೋರುವ ವಿವರವೊಂದನ್ನು ವರದಿಮಾಡುತ್ತದೆ: “ಆ ಆಳಿನ ಹೆಸರು ಮಲ್ಕನು.” (ಯೋಹಾನ 18:10, 26) ಯೋಹಾನನೊಬ್ಬನೇ ಆ ಮನುಷ್ಯನ ಹೆಸರನ್ನು ಕೊಡುವುದೇಕೆ? ಕೆಲವು ವಚನಗಳ ಬಳಿಕ, ಇನ್ನೆಲ್ಲಿಯೂ ಕೊಟ್ಟಿರದ ಒಂದು ಅಮುಖ್ಯ ನಿಜತ್ವವನ್ನು ವೃತ್ತಾಂತವು ಒದಗಿಸುತ್ತದೆ: ಯೋಹಾನನಿಗೆ “ಮಹಾಯಾಜಕನ ಪರಿಚಯ” ಇತ್ತು. ಅವನಿಗೆ ಮಹಾಯಾಜಕನ ಮನೆಯ ಸಿಬ್ಬಂದಿಯ ಪರಿಚಯವೂ ಇತ್ತು; ಸೇವಕರಿಗೆ ಅವನ ಪರಿಚಯ ಮತ್ತು ಅವನಿಗೆ ಅವರ ಪರಿಚಯವಿತ್ತು. (ಯೋಹಾನ 18:15, 16) ಹಾಗಾದರೆ ಯೋಹಾನನು ಆ ಗಾಯಗೊಂಡಿದ್ದ ಮನುಷ್ಯನ ಹೆಸರನ್ನು ಹೇಳುವುದು ಸ್ವಾಭಾವಿಕವಾಗಿತ್ತು. ಇತರ ಸುವಾರ್ತಾ ಲೇಖಕರು, ಆ ಮನುಷ್ಯನು ಅವರಿಗೆ ಅಪರಿಚಿತನಾಗಿದ್ದುದರಿಂದ ಅವನನ್ನು ಹೆಸರಿಸುವುದಿಲ್ಲ.
ಮತ್ತಾಯ 26:67, 68) ಹೊಡೆದವರು ಅವನ ಎದುರಲ್ಲೇ ನಿಂತಿರುವಾಗ, ಹೊಡೆದದ್ದು ಯಾರೆಂದು “ಪ್ರವಾದನೆ” ಹೇಳುವಂತೆ ಅವರು ಯೇಸುವನ್ನು ಏಕೆ ಕೇಳಬೇಕು? ಇದರ ಕುರಿತಾಗಿ ಮತ್ತಾಯನು ವಿವರಿಸುವುದಿಲ್ಲ. ಆದರೆ ಸುವಾರ್ತಾ ಲೇಖಕರಲ್ಲಿ ಇನ್ನಿಬ್ಬರು, ಬಿಟ್ಟುಹೋಗಿರುವ ವಿವರವನ್ನು ಕೊಡುತ್ತಾರೆ: ಯೇಸುವಿನ ಹಿಂಸಕರು ಹೊಡೆಯುವ ಮೊದಲು ಅವನ ಮುಖಕ್ಕೆ ಮುಸುಕುಹಾಕಿದರು. (ಮಾರ್ಕ 14:65; ಲೂಕ 22:64) ಪ್ರತಿಯೊಂದು ಸೂಕ್ಷ್ಮ ವಿವರವು ಕೊಡಲ್ಪಟ್ಟಿದೆಯೊ ಎಂಬ ವಿಷಯದ ಕುರಿತು ಚಿಂತೆಮಾಡದೆ, ಮತ್ತಾಯನು ತನ್ನ ಕಥನವನ್ನು ಸಾದರಪಡಿಸುತ್ತಾನೆ.
ಆಗಾಗ, ಒಂದು ವೃತ್ತಾಂತದಲ್ಲಿ ಸವಿಸ್ತಾರವಾದ ವಿವರಣೆಗಳು ಕೊಡಲ್ಪಡದಿದ್ದರೂ ಬೇರೊಂದು ಕಡೆಯಲ್ಲಿ, ಪ್ರಾಸಂಗಿಕವಾಗಿ ಮಾಡಿರುವ ಹೇಳಿಕೆಗಳ ಮೂಲಕ ಕೊಡಲ್ಪಡುತ್ತವೆ. ದೃಷ್ಟಾಂತಕ್ಕಾಗಿ, ಯೆಹೂದಿ ಹಿರೀಸಭೆ (ಸನ್ಹೆದ್ರಿನ್)ಯ ಮುಂದೆ ನಡೆದ ಯೇಸುವಿನ ವಿಚಾರಣೆಯ ಕುರಿತ ಮತ್ತಾಯನ ವೃತ್ತಾಂತವು, ಹಾಜರಾಗಿದ್ದ “ಕೆಲವರು ಆತನ ಕೆನ್ನೆಗೆ ಏಟುಹಾಕಿ— ಕ್ರಿಸ್ತನೇ, ನಿನ್ನನ್ನು ಹೊಡೆದವರಾರು? ನಮಗೆ ಪ್ರವಾದನೆ ಹೇಳು ಅಂದರು.” (ಓರೆಅಕ್ಷರಗಳು ನಮ್ಮವು.) (ಯೇಸು ಕಲಿಸುವುದನ್ನು ಕೇಳಲು ಒಂದು ದೊಡ್ಡ ಗುಂಪು ಕೂಡಿಬಂದ ಸಂದರ್ಭದ ಕುರಿತು ಯೋಹಾನನ ಸುವಾರ್ತೆಯು ಹೇಳುತ್ತದೆ. ದಾಖಲೆಗನುಸಾರ, ಯೇಸು ಗುಂಪನ್ನು ನೋಡಿದಾಗ, “ಇವರ ಊಟಕ್ಕೆ ನಾವು ಎಲ್ಲಿಂದ ರೊಟ್ಟಿ ಕೊಂಡು ತರೋಣ? ಎಂದು ಫಿಲಿಪ್ಪನನ್ನು ಕೇಳಿದನು.” (ಓರೆಅಕ್ಷರಗಳು ನಮ್ಮವು.) (ಯೋಹಾನ 6:5) ಹಾಜರಾಗಿದ್ದ ಶಿಷ್ಯರೆಲ್ಲರಲ್ಲಿ, ರೊಟ್ಟಿಯನ್ನು ಎಲ್ಲಿ ಕೊಳ್ಳಸಾಧ್ಯವಿದೆ ಎಂಬ ವಿಷಯದಲ್ಲಿ ಯೇಸು ಫಿಲಿಪ್ಪನನ್ನು ಏಕೆ ಕೇಳಿದನು? ಇದಕ್ಕೆ ಕಾರಣವನ್ನು ಲೇಖಕನು ಹೇಳುವುದಿಲ್ಲ. ಆದರೆ ಸಾದೃಶ್ಯ ವೃತ್ತಾಂತದಲ್ಲಿ, ಗಲಿಲಾಯ ಸಮುದ್ರದ ಉತ್ತರ ತೀರಗಳಲ್ಲಿದ್ದ ನಗರವಾದ ಬೇತ್ಸಾಯಿದದ ಹತ್ತಿರ ಈ ಸಂಗತಿ ನಡೆಯಿತೆಂದು ಲೂಕನು ವರದಿಮಾಡುತ್ತಾನೆ ಮತ್ತು ಯೋಹಾನನ ಸುವಾರ್ತೆಯ ಆದಿಭಾಗದಲ್ಲಿ, “ಫಿಲಿಪ್ಪನು ಬೇತ್ಸಾಯಿದದವನು” ಎಂದು ಹೇಳಲಾಗಿದೆ. (ಯೋಹಾನ 1:44; ಲೂಕ 9:10) ಹಾಗಾದರೆ ಯೇಸು ನ್ಯಾಯಸಮ್ಮತವಾಗಿಯೇ ಯಾರ ಸ್ವಂತ ಊರು ಹತ್ತಿರವಿತ್ತೊ ಆ ವ್ಯಕ್ತಿಯೊಂದಿಗೆ ಕೇಳಿದನು. ವಿವರಗಳ ಮಧ್ಯೆ ಇರುವ ಏಕಾಭಿಪ್ರಾಯವು ಗಮನಾರ್ಹವಾಗಿರುವುದಾದರೂ ಅದು ಬುದ್ಧಿಪೂರ್ವಕವಲ್ಲವೆಂಬುದು ಸ್ಪಷ್ಟ.
ಕೆಲವು ಸಂದರ್ಭಗಳಲ್ಲಿ, ನಿರ್ದಿಷ್ಟ ವಿವರಗಳ ಬಿಟ್ಟುಬಿಡುವಿಕೆಯು ಬೈಬಲ್ ಲೇಖಕನ ವಿಶ್ವಾಸಾರ್ಹತೆಗೆ ಕೂಡಿಸುತ್ತದೆ ಅಷ್ಟೇ. ಉದಾಹರಣೆಗೆ, 1 ಅರಸುಗಳು ಪುಸ್ತಕದ ಲೇಖಕನು ಇಸ್ರಾಯೇಲಿಗೆ ಬಂದ ಒಂದು ಕಠಿನ ಬರಗಾಲದ ಕುರಿತು ಹೇಳುತ್ತಾನೆ. ಅದು ಎಷ್ಟು ವಿಪರೀತವಾಗಿತ್ತೆಂದರೆ, ಕುದುರೆಗಳು ಮತ್ತು ಹೇಸರಕತ್ತೆಗಳನ್ನು ಜೀವಂತವಾಗಿ ಉಳಿಸಲು ಸಾಕಷ್ಟು ನೀರು ಮತ್ತು ಹುಲ್ಲನ್ನು ರಾಜನಿಗೆ ಕಂಡುಕೊಳ್ಳಸಾಧ್ಯವಾಗಲಿಲ್ಲ. (1 ಅರಸುಗಳು 17:7; 18:5) ಆದರೂ ಅದೇ ವೃತ್ತಾಂತವು, ಪ್ರಾಯಶಃ 1,000 ಚದರ ಮೀಟರುಗಳಷ್ಟು ವಿಸ್ತೀರ್ಣವಿದ್ದ ಸುತ್ತುಗಟ್ಟಿನ ಕಾಲುವೆಯನ್ನು ತುಂಬಿಸಲು ಸಾಕಾಗುವಷ್ಟು ನೀರು (ಯಜ್ಞದ ಸಂಬಂಧದಲ್ಲಿ ಉಪಯೋಗಿಸಲಿಕ್ಕಾಗಿ) ಕಾರ್ಮೆಲ್ ಬೆಟ್ಟಕ್ಕೆ ತರಲ್ಪಡುವಂತೆ ಎಲೀಯ ಪ್ರವಾದಿಯು ಆಜ್ಞಾಪಿಸಿದನೆಂದು ವರದಿಮಾಡುತ್ತದೆ. (1 ಅರಸುಗಳು 18:33-35) ಆ ಅನಾವೃಷ್ಟಿಯ ಮಧ್ಯೆ, ಅಷ್ಟೆಲ್ಲ ನೀರು ಎಲ್ಲಿಂದ ಬಂತು? 1 ಅರಸುಗಳು ಪುಸ್ತಕದ ಲೇಖಕನು ಅದನ್ನು ವಿವರಿಸಲು ಪ್ರಯತ್ನಿಸಲಿಲ್ಲ. ಆದರೂ, ಆ ಬಳಿಕ ಕಥನವು ಪ್ರಾಸಂಗಿಕವಾಗಿ ಸೂಚಿಸುವಂತೆ, ಇಸ್ರಾಯೇಲಿನಲ್ಲಿ ಜೀವಿಸುತ್ತಿದ್ದ ಯಾರಿಗೇ ಆಗಲಿ ಕಾರ್ಮೆಲ್ ಬೆಟ್ಟವು ಭೂಮಧ್ಯ ಸಮುದ್ರ ತೀರದಲ್ಲಿತ್ತೆಂದು ತಿಳಿದಿತ್ತು. (1 ಅರಸುಗಳು 18:43) ಹೀಗೆ, ಸಮುದ್ರದ ನೀರು ಸುಲಭವಾಗಿ ದೊರೆಯುತ್ತಿತ್ತು. ಬೇರೆ ರೀತಿಯಲ್ಲಿ ವಿವರವಾಗಿರುವ ಈ ಪುಸ್ತಕವು ನಿಜತ್ವದಂತೆ ನಟಿಸುವ ಕಲ್ಪನಾ ಕಥೆಯಾಗಿರುತ್ತಿದ್ದರೆ, ಅದರ ಲೇಖಕನು, ಆ ವಿದ್ಯಮಾನದಲ್ಲಿ ಜಾಣನಾಗಿದ್ದ ನಕಲಿ ದಾಖಲೆಯ ರಚಕನು, ಮೂಲಪಾಠದಲ್ಲಿ ಅಷ್ಟು ಸ್ಪಷ್ಟವಾಗಿ ಹೊಂದಿಕೆಯಿಲ್ಲದಿರುವ ಸಂಗತಿಯನ್ನು ಏಕೆ ಬಿಟ್ಟುಬಿಡುತ್ತಿದ್ದನು?
ಹಾಗಾದರೆ, ಬೈಬಲಿನಲ್ಲಿ ಭರವಸೆಯಿಡಸಾಧ್ಯವಿದೆಯೆ? ಬೈಬಲು ವಾಸ್ತವ ಜನರ, ವಾಸ್ತವವಾದ ಸ್ಥಳಗಳ ಮತ್ತು ವಾಸ್ತವ ಘಟನೆಗಳನ್ನು ಸೂಚಿಸುತ್ತದೆಂಬುದನ್ನು ದೃಢೀಕರಿಸಲು ಪ್ರಾಕ್ತನಶಾಸ್ತ್ರಜ್ಞರು ಸಾಕಷ್ಟು ಚಾರಿತ್ರಿಕ ವಸ್ತುಗಳನ್ನು ಅಗೆದು ತೆಗೆದಿದ್ದಾರೆ. ಆದರೂ, ಬೈಬಲಿನೊಳಗೇ ಕಂಡುಬರುವ ಸಾಕ್ಷ್ಯವು ಇನ್ನೂ ಹೆಚ್ಚು ಆಸಕ್ತಿಯನ್ನು ಕೆರಳಿಸುವಂತಹದ್ದಾಗಿದೆ. ನಿರ್ದಿಷ್ಟವಾಗಿ ಏನು ಸಂಭವಿಸಿತೊ ಅದನ್ನು ದಾಖಲೆಮಾಡುವಾಗ, ಯಥಾರ್ಥ ಲೇಖಕರಾದ ಅವರು ಯಾರನ್ನೂ—ತಮ್ಮನ್ನೂ—ಬಿಟ್ಟುಬಿಡಲಿಲ್ಲ. ಬರವಣಿಗೆಗಳ ಆಂತರಿಕ ಹೊಂದಿಕೆಯು—ಸಂಚುಹೂಡಿಕೆಯಿಲ್ಲದ ಕಾಕತಾಳೀಯತೆಗಳು ಸೇರಿ—“ಸಾಕ್ಷ್ಯ”ಕ್ಕೆ ಸತ್ಯದ ಸ್ಪಷ್ಟವಾದ ನಾದವನ್ನು ಕೊಡುತ್ತದೆ. ಇಂತಹ, “ವಿಶ್ವಾಸಾರ್ಹತೆಯ ನಿಶ್ಚಿತ ಗುರುತುಗಳು” ಇರುವುದರಿಂದ, ಬೈಬಲು ನಿಶ್ಚಯವಾಗಿಯೂ ನೀವು ಭರವಸೆಯಿಡಸಾಧ್ಯವಿರುವ ಒಂದು ಗ್ರಂಥವಾಗಿದೆ.
[ಅಧ್ಯಯನ ಪ್ರಶ್ನೆಗಳು]
^ ಪ್ಯಾರ. 8 ಆ ಶೋಧದ ಬಳಿಕ, 1868ರಲ್ಲಿ ಕಂಡುಹಿಡಿದ ಮೇಶ ಸ್ಟೀಲ (ಮೋಅಬೈಟ್ ಶಿಲೆಯೆಂದೂ ಕರೆಯಲ್ಪಡುತ್ತದೆ)ದಲ್ಲಿ ಹಾಳಾಗಿದ್ದ ಒಂದು ವಾಕ್ಯದ ಪುನಾರಚನೆಯು, ಅದರಲ್ಲಿಯೂ “ದಾವೀದನ ಮನೆತನ”ದ ಸೂಚನೆಯಿದೆಯೆಂಬುದನ್ನು ಪ್ರಕಟಪಡಿಸುತ್ತದೆ ಎಂದು ಪ್ರೊಫೆಸರ್ ಆಂಡ್ರೆ ಲಮೆರ್ ವರದಿಮಾಡಿದರು.4
^ ಪ್ಯಾರ. 21 “ಕೇಫ” ಎಂಬುದು “ಪೇತ್ರ” ಎಂಬುದರ ಸಿಮಿಟಿಕ್ ಸಮಾನಪದ.—ಯೋಹಾನ 1:42.
[ಪುಟ 26 ರಲ್ಲಿರುವ ಚಿತ್ರ]
ಟೆಲ್ ಡಾನ್ ಅವಶಿಷ್ಟ
[ಪುಟ 27 ರಲ್ಲಿರುವ ಚಿತ್ರ]
2 ಅರಸುಗಳು 18:13, 14ರಲ್ಲಿ ಹೇಳಲ್ಪಟ್ಟಿರುವ, ಲಾಕೀಷಿನ ಮುತ್ತಿಗೆಯನ್ನು ಚಿತ್ರಿಸುವ ಅಶ್ಶೂರ್ಯ ಉಬ್ಬುಚಿತ್ರ