ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 7

ಸಂತೃಪ್ತಿಕರವಾದ ಜೀವನ​—ಏಕೆ ಕೈಗೆಟುಕುವುದಿಲ್ಲ?

ಸಂತೃಪ್ತಿಕರವಾದ ಜೀವನ​—ಏಕೆ ಕೈಗೆಟುಕುವುದಿಲ್ಲ?

 ಅನೇಕರು ತಮ್ಮ ಜೀವಿತಗಳಲ್ಲಿ ಯಾವುದೇ ನಿಜಾರ್ಥವನ್ನು ಕಂಡುಹಿಡಿಯಲಾರದೆ ಒದ್ದಾಡುತ್ತಿರುವುದೇಕೆ? “ಸ್ತ್ರೀಯಲ್ಲಿ ಹುಟ್ಟಿದ ಮನುಷ್ಯನು ಅಲ್ಪಾಯುಷ್ಯನಾಗಿಯೂ ಕಳವಳದಿಂದ ತುಂಬಿದವನಾಗಿಯೂ ಇರುವನು. ಹೂವಿನ ಹಾಗೆ ಅರಳಿ ಬಾಡುವನು, ನೆರಳಿನಂತೆ ನಿಲ್ಲದೆ ಓಡಿಹೋಗುವನು.” (ಯೋಬ 14:1, 2) ಪರದೈಸಿನಲ್ಲಿ ಮಾನವಕುಲಕ್ಕಿದ್ದ ಉಜ್ವಲವಾದ ಪ್ರತೀಕ್ಷೆಗಳನ್ನು ಧ್ವಂಸಗೊಳಿಸಿದ ಯಾವುದೊ ಒಂದು ಸಂಗತಿಯು ಆ ಪ್ರಥಮ ಮಾನವ ದಂಪತಿಗೆ ಸಂಭವಿಸಿತು.

2 ಮಾನವ ಕುಟುಂಬವು ನಿಜವಾಗಿಯೂ ಸಂತೋಷದಿಂದಿರಬೇಕಾದರೆ, ಅದಕ್ಕೆ ದೇವರೊಂದಿಗೆ ಒತ್ತಾಯಪೂರ್ವಕವಾದದ್ದಲ್ಲ ಬದಲಾಗಿ ಸ್ವಪ್ರೇರಣೆಯಿಂದ ಬರುವ ಸುಸಂಬಂಧವಿರಬೇಕು. (ಧರ್ಮೋಪದೇಶಕಾಂಡ 30:15-20; ಯೆಹೋಶುವ 24:15) ಪ್ರೀತಿಯಿಂದ ಬರುವ ಹೃತ್ಪೂರ್ವಕ ವಿಧೇಯತೆ ಮತ್ತು ಆರಾಧನೆಗಳನ್ನೇ ಯೆಹೋವನು ಅಪೇಕ್ಷಿಸುತ್ತಾನೆ. (ಧರ್ಮೋಪದೇಶಕಾಂಡ 6:5) ಆದಕಾರಣ ಏದೆನ್‌ ತೋಟದಲ್ಲಿ ಪ್ರಥಮ ಮಾನವನು ತನ್ನ ಹೃತ್ಪೂರ್ವಕವಾದ ನಿಷ್ಠೆಯನ್ನು ರುಜುಪಡಿಸಿ ತೋರಿಸಲು ಅವಕಾಶವನ್ನು ಕೊಡುವ ಒಂದು ನಿರ್ಬಂಧವನ್ನು ಯೆಹೋವನು ಹಾಕಿದನು. ದೇವರು ಆದಾಮನಿಗೆ ಹೇಳಿದ್ದು: “ನೀನು ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಬಹುದು; ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದ ದಿನ ಸತ್ತೇ ಹೋಗುವಿ.” (ಆದಿಕಾಂಡ 2:16, 17) ಅದೊಂದು ಸರಳವಾದ ಪರೀಕ್ಷೆಯಾಗಿತ್ತು. ಆ ತೋಟದಲ್ಲಿದ್ದ ಎಲ್ಲ ಮರಗಳಲ್ಲಿ ಕೇವಲ ಒಂದು ಮರದ ಫಲವನ್ನು ತಿನ್ನಬಾರದೆಂದು ದೇವರು ಹೇಳಿದನು. ಆ ಮರವು, ಯಾವುದು ಸರಿ, ಯಾವುದು ತಪ್ಪು ಎಂದು ನಿರ್ಣಯಿಸುವ ಹಕ್ಕು ಸರ್ವವಿವೇಕಿಯಾದ ದೇವರಿಗಿದೆ ಎಂಬುದನ್ನು ಸಂಕೇತಿಸಿತು. ಆ ಪ್ರಥಮ ಮನುಷ್ಯನು ಈ ದೇವದತ್ತ ಆಜ್ಞೆಯನ್ನು, “[ತನಗೆ] ಸರಿಬೀಳುವ ಸಹಕಾರಿ”ಯಾಗಿರುವಂತೆ ಯೆಹೋವನು ಒದಗಿಸಿದ್ದ ತನ್ನ ಹೆಂಡತಿಗೆ ತಿಳಿಯಪಡಿಸಿದನು. (ಆದಿಕಾಂಡ 2:18) ಗಣ್ಯತಾಭಾವದಿಂದ ದೇವರ ಚಿತ್ತಕ್ಕೆ ಅಧೀನರಾಗುತ್ತಾ, ಹೀಗೆ ತಮ್ಮ ಸೃಷ್ಟಿಕರ್ತನೂ ಜೀವದಾತನೂ ಆಗಿರುವಾತನಿಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾ, ದೇವರ ಆಧಿಪತ್ಯದ ಕೆಳಗೆ ಜೀವಿಸುವ ಈ ಏರ್ಪಾಡಿನೊಂದಿಗೆ ಅವರಿಬ್ಬರೂ ಸಂತೃಪ್ತರಾಗಿದ್ದರು.

3 ಹೀಗಿರುವಾಗ, ಒಂದು ದಿನ ಒಂದು ಸರ್ಪವು ಮಾತಾಡತೊಡಗಿ ಹವ್ವಳನ್ನು ಹೀಗೆ ಕೇಳಿತು: “ಏನವ್ವಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದೆಂದು ದೇವರು ಅಪ್ಪಣೆಕೊಟ್ಟಿರುವದು ನಿಜವೋ”? ಆಗ ಹವ್ವಳು ಉತ್ತರವಾಗಿ, ‘ತಾವು ಸಾಯದಿರುವಂತೆ’ “ತೋಟದ ಮಧ್ಯದಲ್ಲಿರುವ ಈ ಮರದ” ಅಂದರೆ, ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ತಿನ್ನುವ ವಿಷಯದಲ್ಲಿ ಮಾತ್ರ ತಮಗೆ ನಿಷೇಧವಿದೆ ಎಂದು ಹೇಳಿದಳು.—ಆದಿಕಾಂಡ 3:1-3.

4 ಈ ಸರ್ಪವು ಯಾರು? ಬೈಬಲಿನ ಪ್ರಕಟನೆ ಪುಸ್ತಕವು ಆ “ಪುರಾತನ ಸರ್ಪ”ವನ್ನು, “ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ . . . ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ” ಹೆಸರುಳ್ಳವನೆಂದು ಗುರುತಿಸುತ್ತದೆ. (ಪ್ರಕಟನೆ 12:9) ಹಾಗಾದರೆ, ದೇವರು ಪಿಶಾಚನಾದ ಸೈತಾನನನ್ನು ಸೃಷ್ಟಿಸಿದನೊ? ಇಲ್ಲ, ಏಕೆಂದರೆ ಯೆಹೋವನ ಕಾರ್ಯಗಳು ಪರಿಪೂರ್ಣವೂ ಉತ್ತಮವೂ ಆಗಿವೆ. (ಧರ್ಮೋಪದೇಶಕಾಂಡ 32:4) ಈ ಆತ್ಮ ಜೀವಿಯು ಸ್ವತಃ ತನ್ನನ್ನು “ಮಿಥ್ಯಾಪವಾದಿ” ಎಂಬ ಅರ್ಥವಿರುವ ಪಿಶಾಚನನ್ನಾಗಿಯೂ “ಪ್ರತಿಭಟಕ” ಎಂಬ ಅರ್ಥ ಬರುವ ಸೈತಾನನನ್ನಾಗಿಯೂ ಮಾಡಿಕೊಂಡನು. ಅವನು “ತನ್ನಲ್ಲಿರುವ ಆಶಾಪಾಶದಿಂದ,” ಅಂದರೆ ದೇವರ ಸ್ಥಾನವನ್ನು ಆಕ್ರಮಿಸಬೇಕೆಂಬ ಆಸೆಯಿಂದ “ಎಳೆಯಲ್ಪಟ್ಟು” ಸೃಷ್ಟಿಕರ್ತನಿಗೆ ವಿರೋಧವಾಗಿ ದಂಗೆಯೆದ್ದನು.—ಯಾಕೋಬ 1:14.

5 ಪಿಶಾಚನಾದ ಸೈತಾನನು ಹವ್ವಳಿಗೆ ಹೇಳುತ್ತಾ ಮುಂದುವರಿದದ್ದು: “ನೀವು ಹೇಗೂ ಸಾಯುವದಿಲ್ಲ; ನೀವು ಇದರ ಹಣ್ಣನ್ನು ತಿಂದಾಗಲೇ ನಿಮ್ಮ ಕಣ್ಣುಗಳು ತೆರೆಯುವವು; ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ; ಇದು ದೇವರಿಗೆ ಚೆನ್ನಾಗಿ ಗೊತ್ತುಂಟು.” (ಆದಿಕಾಂಡ 3:4, 5) ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಆ ಮರದಿಂದ ತಿನ್ನುವುದು ಬಹು ಆಕರ್ಷಕವಾಗಿ ತೋರುವಂತೆ ಸೈತಾನನು ಮಾಡಿದನು. ಸಾರಾಂಶದಲ್ಲಿ ಅವನ ವಾದವು ಹೀಗಿತ್ತು: ‘ದೇವರು ಒಂದು ಒಳ್ಳೆಯ ಸಂಗತಿಯನ್ನು ನಿಮಗೆ ಕೊಡದೆ ಹಿಡಿದಿಟ್ಟುಕೊಂಡಿದ್ದಾನೆ. ಹೋಗಿ ಆ ಮರದಿಂದ ತಿನ್ನಿರಿ ಮತ್ತು ಆಗ ನೀವು ದೇವರಂತಾಗಿ, ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದನ್ನು ನೀವಾಗಿಯೆ ನಿರ್ಣಯಿಸಶಕ್ತರಾಗುವಿರಿ.’ ಅನೇಕರು ದೇವರನ್ನು ಸೇವಿಸದೆ ಇರಲಿಕ್ಕಾಗಿ ಸೈತಾನನು ಇಂದು ಸಹ ಅದೇ ವಾದಸರಣಿಯನ್ನು ಉಪಯೋಗಿಸುತ್ತಿದ್ದಾನೆ. ಅವನು ಹೇಳುವುದು: ‘ನಿಮಗೆ ಬೇಕಾದದ್ದನ್ನು ಮಾಡಿರಿ. ನಿಮಗೆ ಜೀವಕೊಟ್ಟಾತನಿಗೆ ನೀವು ಏನು ಸಲ್ಲತಕ್ಕದ್ದೊ ಅದನ್ನು ಅಲಕ್ಷ್ಯ ಮಾಡಿಬಿಡಿರಿ ಅಷ್ಟೇ.’—ಪ್ರಕಟನೆ 4:11.

6 ಈಗ ಆ ಮರದ ಹಣ್ಣು ಥಟ್ಟನೆ ತೀರ ಹಾತೊರೆಯಲು ಯೋಗ್ಯವಾದ, ತೀರ ಆಕರ್ಷಕವಾದ ವಿಷಯವಾಗಿ ಪರಿಣಮಿಸಿತು. ಪರಿಣಾಮವಾಗಿ, ಹವ್ವಳು ಆ ಹಣ್ಣನ್ನು ತೆಗೆದುಕೊಂಡು, ತಿಂದು, ಬಳಿಕ ಸ್ವಲ್ಪವನ್ನು ತನ್ನ ಗಂಡನಿಗೂ ಕೊಟ್ಟಳು. ಫಲಿತಾಂಶಗಳೇನಾಗಿರುವವು ಎಂಬ ಪೂರ್ಣ ಪ್ರಜ್ಞೆಯಿದ್ದರೂ, ಆದಾಮನು ತನ್ನ ಹೆಂಡತಿಯ ಮಾತಿಗೆ ಕಿವಿಗೊಟ್ಟು ಆ ಹಣ್ಣನ್ನು ತಿಂದನು. ಪರಿಣಾಮವೇನಾಯಿತು? ಯೆಹೋವನು ಆ ಸ್ತ್ರೀಗೆ ಈ ದಂಡನೆಯನ್ನು ವಿಧಿಸಿದನು: “ನೀನು ಗರ್ಭಿಣಿಯಾಗಿರುವ ಕಾಲದಲ್ಲಿ ಬಹು ಸಂಕಟಪಡಬೇಕೆಂದು ನಾನು ನೇಮಿಸಿದ್ದೇನೆ; ಕಷ್ಟದಿಂದಲೇ ಮಕ್ಕಳನ್ನು ಹೆರುವಿ; ಗಂಡನ ಮೇಲೆ ನಿನಗೆ ಆಶೆಯಿರುವದು; ಅವನು ನಿನಗೆ ಒಡೆಯನಾಗುವನು.” ಮತ್ತು ಪುರುಷನಿಗೆ ಏನು ಹೇಳಲ್ಪಟ್ಟಿತು? “ನಿನ್ನ ನಿಮಿತ್ತ ಭೂಮಿಗೆ ಶಾಪ ಬಂತು. ನಿನ್ನ ಜೀವಮಾನವೆಲ್ಲಾ ದುಡಿದು ದುಡಿದು ಭೂಮಿಯ ಹುಟ್ಟುವಳಿಯನ್ನು ತಿನ್ನಬೇಕು. ಆ ಭೂಮಿಯಲ್ಲಿ ಮುಳ್ಳುಗಿಡಗಳೂ ಕಳೆಗಳೂ ಬಹಳವಾಗಿ ಹುಟ್ಟುವವು. ಹೊಲದ ಬೆಳೆಯನ್ನು ಅನುಭವಿಸುವಿ. ನೀನು ತಿರಿಗಿ ಮಣ್ಣಿಗೆ ಸೇರುವ ತನಕ ಬೆವರಿಡುತ್ತಾ ಬೇಕಾದ ಆಹಾರವನ್ನು ಸಂಪಾದಿಸಬೇಕು. ನೀನು ಮಣ್ಣಿನಿಂದ ತೆಗೆಯಲ್ಪಟ್ಟವನಲ್ಲವೋ; ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದೀ.” ಈಗ ಆದಾಮಹವ್ವರು, ಸಂತೋಷವನ್ನೂ ಸಂತೃಪ್ತಿಯನ್ನೂ ತಮ್ಮ ಸ್ವಂತ ವಿಧದಲ್ಲಿ ಹುಡುಕುವಂತೆ ಬಿಡಲ್ಪಟ್ಟರು. ಆದರೆ ದೈವಿಕ ಉದ್ದೇಶವನ್ನು ತೊರೆದು, ಸಂತೃಪ್ತಿಕರವಾದ ಜೀವಿತವನ್ನು ನಡೆಸುವ ಮಾನವರ ಪ್ರಯತ್ನಗಳು ಜಯ ಪಡೆದಾವೊ? ತೋಟಸದೃಶವಾದ ಪರದೈಸನ್ನು ನೋಡಿಕೊಳ್ಳುವ ಮತ್ತು ಭೂಮಿಯ ಮೂಲೆಮೂಲೆಗೂ ಅದನ್ನು ವಿಸ್ತರಿಸುವ ಆನಂದಕರ ಕೆಲಸದ ಸ್ಥಾನವನ್ನು, ಸೃಷ್ಟಿಕರ್ತನ ಮಹಿಮೆಗಾಗಿ ಏನನ್ನೂ ಮಾಡದೆ, ಕೇವಲ ಬದುಕಿ ಉಳಿಯಲು ಮಾಡಬೇಕಾದ ಗುಲಾಮಚಾಕರಿಯು ಆಕ್ರಮಿಸಿತು.—ಆದಿಕಾಂಡ 3:6-19.

7 ಒಳ್ಳೆಯದರ ಮತ್ತು ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದಿಂದ ತಿಂದ ದಿನವೇ ಪ್ರಥಮ ಮಾನವ ಜೊತೆಯು ದೇವರ ದೃಷ್ಟಿಯಲ್ಲಿ ಮೃತರಾಗಿ, ಶಾರೀರಿಕ ಮರಣಾಭಿಮುಖವಾಗಿ ಅಧೋಗತಿಗೆ ಇಳಿಯ ತೊಡಗಿದರು. ಹಾಗಾದರೆ ಅವರು ಅಂತಿಮವಾಗಿ ಮರಣಪಟ್ಟಾಗ ಅವರಿಗೇನಾಯಿತು? ಬೈಬಲು ಮೃತರ ಸ್ಥಿತಿಯ ಸಂಬಂಧದಲ್ಲಿ ಒಳನೋಟವನ್ನು ಒದಗಿಸುತ್ತದೆ. “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ; ಅವರಿಗೆ ಇನ್ನು ಮೇಲೆ ಪ್ರತಿಫಲವೇನೂ ಇಲ್ಲ, ಅವರ ಜ್ಞಾಪಕವೇ ಹೋಯಿತಲ್ಲವೆ.” (ಪ್ರಸಂಗಿ 9:5; ಕೀರ್ತನೆ 146:4) ಅಂದರೆ, ಮರಣದಲ್ಲಿ ಬದುಕಿ ಉಳಿಯುವ “ಪ್ರಾಣ” (ಸೋಲ್‌) ಎಂಬಂತಹ ವಿಷಯವೇ ಇರುವುದಿಲ್ಲ. ಏಕೆಂದರೆ, ಪಾಪದ ಶಿಕ್ಷೆಯು ಮರಣವೇ ಹೊರತು ಉರಿಯುತ್ತಿರುವ ನರಕವೊಂದರಲ್ಲಿ ಅನುಭವಿಸುವ ಅನಂತ ಯಾತನೆಯಲ್ಲ. ಇದಲ್ಲದೆ, ಮರಣವು ಒಬ್ಬನನ್ನು ಸ್ವರ್ಗದಲ್ಲಿ ನಿತ್ಯ ಪರಮಾನಂದದ ಸ್ಥಿತಿಗೂ ನಡೆಸುವುದಿಲ್ಲ. a

8 ಕಚ್ಚು ಇರುವ ಒಂದು ತಟ್ಟೆಯು ಅದೇ ಗುರುತಿರುವ ಕೇಕನ್ನು ಮಾತ್ರ ತಯಾರಿಸಶಕ್ತವಾಗಿರುವಂತೆಯೇ, ಈಗ ಅಪರಿಪೂರ್ಣರಾಗಿದ್ದ ಸ್ತ್ರೀಪುರುಷರು ಅಪರಿಪೂರ್ಣ ಸಂತತಿಯನ್ನು ಮಾತ್ರ ಉತ್ಪನ್ನ ಮಾಡಸಾಧ್ಯವಿತ್ತು. ಬೈಬಲು ಈ ಕಾರ್ಯವಿಧಾನವನ್ನು ಹೀಗೆ ವಿವರಿಸುತ್ತದೆ: “ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.” (ರೋಮಾಪುರ 5:12) ಹೀಗೆ, ನಾವೆಲ್ಲರೂ ಪಾಪವುಳ್ಳವರಾಗಿ ಹುಟ್ಟಿ, ನಿರರ್ಥಕತೆಯ ಅಧೀನರಾಗಿದ್ದೇವೆ. ಆದಾಮನ ಸಂತಾನದವರ ಜೀವನವು ಹತಾಶೆಯ ಗುಲಾಮಚಾಕರಿಯಾಗಿ ಪರಿಣಮಿಸಿತು. ಆದರೆ ಇದಕ್ಕೆ ಪರಿಹಾರವಿದೆಯೆ?

a ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟ, ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದ 80-89ನೆಯ ಪುಟಗಳಲ್ಲಿ, ಮೃತರ ಸ್ಥಿತಿಯ ಕುರಿತಾದ ಆಸಕ್ತಿಭರಿತ ವಿವರಗಳನ್ನು ನೀವು ಕಂಡುಕೊಳ್ಳುವಿರಿ.