ಅಧ್ಯಾಯ 13
‘ಆಲಯದ ಬಗ್ಗೆ ವರ್ಣಿಸು’
ಮುಖ್ಯ ವಿಷಯ: ಯೆಹೆಜ್ಕೇಲನ ದರ್ಶನದಲ್ಲಿರೋ ಮಹಿಮಾಭರಿತ ಆಲಯದ ಅರ್ಥ
1-3. (ಎ) ಬೃಹತ್ ದೇವಾಲಯದ ದರ್ಶನದಿಂದ ಯೆಹೆಜ್ಕೇಲ ಯಾಕೆ ಸಾಂತ್ವನ ಪಡ್ಕೊಂಡಿರಬೇಕು? (ಆರಂಭದ ಚಿತ್ರ ನೋಡಿ.) (ಬಿ) ಈ ಅಧ್ಯಾಯದಲ್ಲಿ ನಾವೇನನ್ನ ನೋಡಲಿದ್ದೇವೆ?
ಯೆಹೆಜ್ಕೇಲನಿಗೆ ಈಗ 50 ವರ್ಷ, ಅವನು ಕೈದಿಯಾಗಿ ಸುಮಾರು 25 ವರ್ಷ ಆಗಿದೆ. ತುಂಬಾ ವರ್ಷಗಳಿಂದ ಯೆರೂಸಲೇಮ್ ಹಾಳುಬಿದ್ದಿದೆ. ಯೆರೂಸಲೇಮಿಗೆ ಹೋಗಿ ದೇವಾಲಯದಲ್ಲಿ ಪುರೋಹಿತನಾಗಿ ಕೆಲ್ಸ ಮಾಡಬೇಕು ಅನ್ನೋ ಆಸೆ ನೆರವೇರಲ್ಲ ಅಂತ ಅವನಿಗೆ ಗೊತ್ತಾಗಿದೆ. ದೇವಜನರು ಬಂಧಿವಾಸದಿಂದ ಬಿಡುಗಡೆ ಆಗೋಕೆ ಇನ್ನೂ ಸುಮಾರು 56 ವರ್ಷ ಆಗಬೇಕಿತ್ತು. ಹಾಗಾಗಿ ತನ್ನ ಜೀವಮಾನದಲ್ಲಿ ದೇವಜನರು ವಾಪಸ್ಸು ತಮ್ಮ ಸ್ವಂತ ದೇಶಕ್ಕೆ ಹೋಗೋದನ್ನಾಗಲಿ ಅಥವಾ ಅಲ್ಲಿ ದೇವಾಲಯವನ್ನು ಕಟ್ಟೋದನ್ನಾಗಲಿ ತನಗೆ ನೋಡಕ್ಕಾಗಲ್ಲ ಅಂತ ಯೆಹೆಜ್ಕೇಲನಿಗೆ ಗೊತ್ತಾಯ್ತು. (ಯೆರೆ. 25:11) ಈ ವಿಷ್ಯಗಳ ಬಗ್ಗೆ ಯೋಚ್ನೆ ಮಾಡುವಾಗೆಲ್ಲಾ ಯೆಹೆಜ್ಕೇಲನಿಗೆ ತುಂಬ ಬೇಜಾರಾಗಿರಬೇಕು.
2 ಈ ಸಮಯದಲ್ಲೇ ಯೆಹೋವನು ಯೆಹೆಜ್ಕೇಲನಿಗೆ ಒಂದು ಅಮೋಘ ದರ್ಶನವನ್ನು ತೋರಿಸಿದನು. ಇದ್ರಿಂದ ಯೆಹೋವನು ಎಷ್ಟು ಪ್ರೀತಿಯ ದೇವರು ಅಂತ ಗೊತ್ತಾಗುತ್ತೆ. ಈ ದರ್ಶನದಿಂದ ಯೆಹೆಜ್ಕೇಲನಿಗೆ ತುಂಬಾ ಸಾಂತ್ವನ ಮತ್ತು ನಿರೀಕ್ಷೆ ಸಿಕ್ಕಿರುತ್ತೆ. ದೇವರು ಈ ದರ್ಶನದಲ್ಲಿ ಪ್ರವಾದಿಯನ್ನ ಇಸ್ರಾಯೇಲ್ ದೇಶಕ್ಕೆ ಕರಕೊಂಡು ಹೋಗಿ ಅತಿ ಎತ್ತರವಾದ ಬೆಟ್ಟದ ಮೇಲೆ ಇಟ್ಟನು. ಅಲ್ಲಿ ಅವನು ‘ತಾಮ್ರದ ತರ ಹೊಳಿತಿದ್ದ ಒಬ್ಬ ಪುರುಷನನ್ನ ನೋಡಿದ.’ ಆ ಪುರುಷನು ಒಬ್ಬ ದೇವದೂತನಾಗಿದ್ದ. ಆ ದೇವದೂತನು ಯೆಹೆಜ್ಕೇಲನನ್ನ ಕರಕೊಂಡು ಹೋಗಿ ಒಂದು ಬೃಹತ್ ದೇವಾಲಯವನ್ನ ತೋರಿಸಿದ. (ಯೆಹೆಜ್ಕೇಲ 40:1-4 ಓದಿ.) ಅವನು ನೋಡಿದ ಎಲ್ಲ ವಿಷ್ಯಗಳು ನಿಜವಾಗಲೂ ಇರೋ ತರಾನೇ ಕಾಣಿಸ್ತಿದ್ದವು. ಇದ್ರಿಂದಾಗಿ ಯೆಹೆಜ್ಕೇಲನ ನಂಬಿಕೆ ಬಲ ಆಗಿರುತ್ತೆ, ತುಂಬಾ ಸಂತೋಷ ಆಗಿರುತ್ತೆ, ಅದೇ ಸಮಯದಲ್ಲಿ ಸ್ವಲ್ಪ ಆಶ್ಚರ್ಯನೂ ಆಗಿರುತ್ತೆ. ಯೆಹೆಜ್ಕೇಲನಿಗೆ ದೇವಾಲಯದ ಅನೇಕ ವಿಷ್ಯ ಚೆನ್ನಾಗಿ ಗೊತ್ತಿತ್ತು. ಆದ್ರೆ ದರ್ಶನದಲ್ಲಿ ನೋಡಿದ ದೇವಾಲಯವು ಯೆರೂಸಲೇಮಿನಲ್ಲಿದ್ದ ದೇವಾಲಯಕ್ಕಿಂತ ತುಂಬಾ ಭಿನ್ನವಾಗಿತ್ತು.
3 ಯೆಹೆಜ್ಕೇಲ ಪುಸ್ತಕದ ಕೊನೇ 9 ಅಧ್ಯಾಯಗಳಲ್ಲಿ ಈ ದರ್ಶನದ ವಿವರಣೆ ಇದೆ. ನಾವೀಗ ಈ ದರ್ಶನದ ಬಗ್ಗೆ ಮತ್ತು ಅದ್ರ ಅರ್ಥದ ಬಗ್ಗೆ ತಿಳ್ಕೊಳ್ಳುವಾಗ ನಮ್ಮ ಮನೋಭಾವ ಹೇಗಿರಬೇಕು ಅನ್ನೋದನ್ನ ನೋಡೋಣ. ಆಮೇಲೆ ಯೆಹೆಜ್ಕೇಲ ನೋಡಿದ್ದು ಅಪೊಸ್ತಲ ಪೌಲನು ನೂರಾರು ವರ್ಷಗಳ ನಂತ್ರ ಹೇಳಿದ ಆಧ್ಯಾತ್ಮಿಕ ಆಲಯವನ್ನಾ ಅಂತ ನೋಡೋಣ. ಕೊನೆದಾಗಿ ಈ ದರ್ಶನದಿಂದ ಯೆಹೆಜ್ಕೇಲನಿಗೆ ಮತ್ತು ಅವನ ಜೊತೆ ಇದ್ದ ಬೇರೆ ಕೈದಿಗಳಿಗೆ ಯಾವ ಪ್ರಯೋಜ್ನ ಆಯ್ತು ಅಂತ ತಿಳ್ಕೊಳ್ಳೋಣ.
ನಾವು ಅರ್ಥ ಮಾಡಿಕೊಂಡಿದ್ರಲ್ಲಿ ಬದಲಾವಣೆ
4. ದೇವಾಲಯದ ದರ್ಶನವನ್ನ ನಾವು ಹಿಂದೆ ಯಾವ ರೀತಿಯಲ್ಲಿ ಅರ್ಥಮಾಡಿಕೊಂಡಿದ್ವಿ? ಈಗ ಯಾವ ಬದಲಾವಣೆಯಾಗಿದೆ?
4 ಪೌಲನು ದೇವಪ್ರೇರಣೆಯಿಂದ ಇಬ್ರಿಯರಿಗೆ ಬರೆದ ಪತ್ರದಲ್ಲಿ ತಿಳಿಸಿದ ಆಧ್ಯಾತ್ಮಿಕ ಆಲಯವನ್ನ ಯೆಹೆಜ್ಕೇಲನು ತನ್ನ ದರ್ಶನದಲ್ಲಿ ನೋಡಿದನು ಅಂತ ನಾವು ಈ ಹಿಂದೆ ಸಾಹಿತ್ಯಗಳಲ್ಲಿ ಹೇಳಿದ್ವಿ. a ಹಾಗಾಗಿ ಯೆಹೆಜ್ಕೇಲನ ದರ್ಶನದಲ್ಲಿರೋ ದೇವಾಲಯದ ಅನೇಕ ಭಾಗಗಳಿಗೆ ಸಾಂಕೇತಿಕ ಅರ್ಥ ಇರಬಹುದು ಅಂತ ನಾವು ಅಂದ್ಕೊಂಡಿದ್ವಿ. ಅಪೊಸ್ತಲ ಪೌಲ ಪವಿತ್ರ ಡೇರೆಯ ಭಾಗಗಳಿಗೆ ಯಾವ ಸಾಂಕೇತಿಕ ಅರ್ಥಗಳನ್ನ ತಿಳಿಸಿದ್ನೋ ಅದ್ರ ಆಧಾರದ ಮೇಲೆನೇ ಯೆಹೆಜ್ಕೇಲ ತಿಳಿಸಿದ ದೇವಾಲಯದ ಭಾಗಗಳಿಗೂ ಸಾಂಕೇತಿಕ ಅರ್ಥಗಳನ್ನ ತಿಳಿಸಿದ್ವಿ. ಆದ್ರೆ ಈ ವಿಷ್ಯದಲ್ಲಿ ಇನ್ನೂ ಆಳವಾಗಿ ಅಧ್ಯಯನ ಮಾಡಿದಾಗ, ಪ್ರಾರ್ಥನೆ ಮತ್ತು ಧ್ಯಾನ ಮಾಡಿದಾಗ ಯೆಹೆಜ್ಕೇಲನ ದರ್ಶನದ ದೇವಾಲಯ ಪೌಲ ತಿಳಿಸಿದ ಸಾಂಕೇತಿಕ ದೇವಾಲಯ ಅಲ್ಲ ಅಂತ ನಮಗೆ ಗೊತ್ತಾಯ್ತು.
5, 6. (ಎ) ಗುಡಾರದ ಬಗ್ಗೆ ತಿಳಿಸುವಾಗ ಅಪೊಸ್ತಲ ಪೌಲ ಹೇಗೆ ದೀನತೆ ತೋರಿಸಿದ? (ಬಿ) ಗುಡಾರದಲ್ಲಿರೋ ವಸ್ತುಗಳ ಅರ್ಥ ವಿವರಣೆ ಬಗ್ಗೆ ಅವನು ಏನು ಹೇಳಿದ? (ಸಿ) ಯೆಹೆಜ್ಕೇಲ ನೋಡಿದ ದೇವಾಲಯದ ದರ್ಶನವನ್ನ ಅರ್ಥಮಾಡಿಕೊಳ್ಳೋ ವಿಷ್ಯದಲ್ಲಿ ನಾವು ಪೌಲನನ್ನ ಹೇಗೆ ಅನುಕರಿಸಬಹುದು?
5 ಯೆಹೆಜ್ಕೇಲನು ದರ್ಶನದಲ್ಲಿ ನೋಡಿದ ದೇವಾಲಯದ ಪ್ರತಿಯೊಂದು ಭಾಗಗಳಿಗೂ ಸಾಂಕೇತಿಕ ಮತ್ತು ಪ್ರವಾದನಾತ್ಮಕ ಅರ್ಥ ಕೊಡದೇ ಇರೋದು ಒಳ್ಳೇದು. ಯಾಕೆ? ನಾವು ಅದಕ್ಕೊಂದು ಉದಾಹರಣೆ ನೋಡೋಣ. ಅಪೊಸ್ತಲ ಪೌಲನು ಗುಡಾರದ ಬಗ್ಗೆ ಹೇಳಿದಾಗ ಅದ್ರಲ್ಲಿರೋ ವಸ್ತುಗಳ ಬಗ್ಗೆ ತಿಳಿಸಿದನು. ಉದಾಹರಣೆಗೆ ಚಿನ್ನದ ಧೂಪಪಾತ್ರೆ, ಮಂಜೂಷದ ಮುಚ್ಚಳ ಮತ್ತು ಮನ್ನ ಇಟ್ಟಿದ್ದ ಚಿನ್ನದ ಪಾತ್ರೆ. ಆದ್ರೆ ಈ ವಸ್ತುಗಳಿಗೆಲ್ಲಾ ಒಂದು ಪ್ರವಾದನಾತ್ಮಕ ಅರ್ಥ ಇದೆ ಅಂತ ಅವನು ಹೇಳಲಿಲ್ಲ. ಯಾಕೆ? ಯಾಕಂದ್ರೆ ಪವಿತ್ರ ಶಕ್ತಿ ಆ ವಿಷ್ಯಗಳ ಬಗ್ಗೆ ಅವನಿಗೆ ಯಾವುದೇ ಮಾಹಿತಿ ಕೊಡಲಿಲ್ಲ. ಬದಲಿಗೆ ಅವನು “ಈ ವಿಷ್ಯವನ್ನೆಲ್ಲ ಹೇಳೋಕೆ ಇದು ಸಮಯವಲ್ಲ” ಅಂದ. (ಇಬ್ರಿ. 9:4, 5) ಪವಿತ್ರಶಕ್ತಿ ಪ್ರೇರಿಸಿದ್ದನ್ನ ಮಾತ್ರ ಪೌಲನು ಬರೆದನು ಮತ್ತು ಯೆಹೋವ ದೇವರು ಈ ವಿಷಯಗಳ ಬಗ್ಗೆ ತಿಳಿಸೋವರೆಗೂ ಅವನು ತಾಳ್ಮೆಯಿಂದ ಕಾದನು.—ಇಬ್ರಿ. 9:8.
6 ಯೆಹೆಜ್ಕೇಲ ದರ್ಶನದಲ್ಲಿ ಕಂಡ ದೇವಾಲಯದ ಅರ್ಥ ತಿಳ್ಕೊಳ್ಳೋ ವಿಷ್ಯದಲ್ಲೂ ನಾವು ಪೌಲನ ಮನೋಭಾವವನ್ನೇ ತೋರಿಸಬೇಕು. ಯೆಹೆಜ್ಕೇಲನು ಇಲ್ಲಿ ದೇವಾಲಯದ ಭಾಗಗಳ ಬಗ್ಗೆ ತುಂಬಾ ವಿವರಣೆ ಕೊಟ್ಟಿದ್ದಾನೆ. ಆದ್ರೆ ನಾವು ಅವುಗಳ ಅರ್ಥ ತಿಳ್ಕೊಬೇಕಂದ್ರೆ ಯೆಹೋವನು ಅದನ್ನ ತಿಳಿಸೋವರೆಗೂ ತಾಳ್ಮೆಯಿಂದ ಕಾಯ್ತಿರಬೇಕು. (ಮೀಕ 7:7 ಓದಿ.) ಹಾಗಾದ್ರೆ ಈ ದರ್ಶನದ ಬಗ್ಗೆ ಯೆಹೋವನ ಪವಿತ್ರ ಶಕ್ತಿ ಇಲ್ಲಿವರೆಗೂ ಯಾವುದೇ ಅರ್ಥ ವಿವರಣೆಯನ್ನ ನೀಡಿಲ್ವಾ? ಹಾಗೇನಿಲ್ಲ.
ಯೆಹೆಜ್ಕೇಲ ಆಧ್ಯಾತ್ಮಿಕ ಆಲಯವನ್ನ ನೋಡಿದ್ನಾ?
7, 8. (ಎ) ಯಾವ ತಿಳುವಳಿಕೆಯಲ್ಲಿ ಬದಲಾವಣೆಯಾಗಿದೆ? (ಬಿ) ಯೆಹೆಜ್ಕೇಲ ದರ್ಶನದಲ್ಲಿ ನೋಡಿದ ಆಲಯಕ್ಕೂ ಪೌಲನು ತಿಳಿಸಿದ ಆಧ್ಯಾತ್ಮಿಕ ಆಲಯಕ್ಕೂ ಯಾವ ವ್ಯತ್ಯಾಸ ಇದೆ?
7 ನಾವು ಈಗಾಗಲೇ ನೋಡಿದಂತೆ, ಪೌಲನು ಇಬ್ರಿಯ ಕ್ರೈಸ್ತರಿಗೆ ತಿಳಿಸಿದ ಆಧ್ಯಾತ್ಮಿಕ ಆಲಯವನ್ನೇ ಯೆಹೆಜ್ಕೇಲ ದರ್ಶನದಲ್ಲಿ ನೋಡ್ದ ಅಂತ ತುಂಬ ವರ್ಷಗಳಿಂದ ನಮ್ಮ ಪ್ರಕಾಶನಗಳಲ್ಲಿ ತಿಳಿಸಲಾಗಿತ್ತು. ಆದ್ರೆ ಈ ವಿಷ್ಯದ ಬಗ್ಗೆ ಆಳವಾಗಿ ಅಧ್ಯಯನ ನಡೆಸ್ದಾಗ ಯೆಹೆಜ್ಕೇಲನು ದರ್ಶನದಲ್ಲಿ ನೋಡಿದ್ದು ಆಧ್ಯಾತ್ಮಿಕ ಆಲಯವನ್ನಲ್ಲ ಅಂತ ಗೊತ್ತಾಯ್ತು. ಅದು ಹೇಗೆ?
8 ಮೊದಲನೇ ಕಾರಣ, ದೇವಾಲಯದ ಬಗ್ಗೆ ಯೆಹೆಜ್ಕೇಲ ಕೊಟ್ಟ ವಿವರಣೆ ಮತ್ತು ಪೌಲ ಕೊಟ್ಟ ವಿವರಣೆ ಒಂದೇ ರೀತಿ ಇಲ್ಲ. ಉದಾಹರಣೆಗೆ ಇದನ್ನ ಗಮನಿಸಿ. ಮೋಶೆಯ ಸಮಯದಲ್ಲಿದ್ದ ಪವಿತ್ರ ಡೇರೆಯು ಆ ಡೇರೆಗಿಂತ ಮಹತ್ತಾದ ಬೇರೆ ವಿಷ್ಯನ ಸೂಚಿಸುತ್ತೆ ಅಂತ ಪೌಲ ಹೇಳಿದನು. ಸೊಲೊಮೋನ ಹಾಗೂ ಜೆರುಬ್ಬಾಬೆಲ ಕಟ್ಟಿದ ದೇವಾಲಯದಲ್ಲಿ ಇದ್ದ ಹಾಗೆನೇ ಈ ಡೇರೆಯಲ್ಲಿ ಕೂಡ “ಅತಿ ಪವಿತ್ರ ಸ್ಥಳ” ಅನ್ನೋ ಭಾಗ ಇತ್ತು. ಅಪೊಸ್ತಲ ಪೌಲ ಈ ಭಾಗವನ್ನ “ಮನುಷ್ಯರು ಕೈಯಿಂದ ಕಟ್ಟಿದ ಪವಿತ್ರ ಸ್ಥಳ” ಅಂತ ಕರೆದನು. ಇದು ‘ನಿಜ ಪವಿತ್ರ ಸ್ಥಳದ ನಕಲಾಗಿತ್ತು’ ಅಂದನು. ಹಾಗಾದ್ರೆ ನಿಜ ಪವಿತ್ರ ಸ್ಥಳ ಯಾವುದು? ಅದು “ಸ್ವರ್ಗ” ಅಂತ ಪೌಲನು ಹೇಳಿದ್ದಾನೆ. (ಇಬ್ರಿ. 9:3, 24) ಹಾಗಾದ್ರೆ ಯೆಹೆಜ್ಕೇಲ ದರ್ಶನದಲ್ಲಿ ಸ್ವರ್ಗವನ್ನು ನೋಡಿದ್ನಾ? ಇಲ್ಲ, ಯಾಕಂದ್ರೆ ಅವನು ಈ ದರ್ಶನದ ಬಗ್ಗೆ ಕೊಟ್ಟ ವಿವರಣೆಯಲ್ಲಿ ಸ್ವರ್ಗದ ಬಗ್ಗೆಯಾಗಲಿ ಅಲ್ಲಿರೋ ಯಾವುದೇ ವಿಷ್ಯದ ಬಗ್ಗೆ ಆಗಲಿ ಇಲ್ಲ.—ದಾನಿ. 7:9, 10, 13, 14 ಹೋಲಿಸಿ.
9, 10. ಬಲಿಗಳನ್ನ ಅರ್ಪಿಸೋ ವಿಷಯದಲ್ಲಿ ಯೆಹೆಜ್ಕೇಲ ನೋಡಿದ ದರ್ಶನಕ್ಕೂ ಪೌಲನು ತಿಳಿಸಿದ ಆಧ್ಯಾತ್ಮಿಕ ಆಲಯಕ್ಕೂ ಯಾವ ವ್ಯತ್ಯಾಸ ಇದೆ?
9 ಬಲಿಗಳನ್ನು ಅರ್ಪಿಸೋ ವಿಷ್ಯದಲ್ಲೂ ಯೆಹೆಜ್ಕೇಲ ನೋಡಿದ ದರ್ಶನಕ್ಕೆ ಮತ್ತು ಪೌಲನು ಕೊಟ್ಟ ವಿವರಣೆಗೆ ವ್ಯತ್ಯಾಸ ಇತ್ತು. ಅರ್ಪಣೆಯ ವಿಷ್ಯದಲ್ಲಿ ಜನರಿಗೆ, ಪ್ರಧಾನರಿಗೆ ಮತ್ತು ಪುರೋಹಿತರಿಗೆ ಕೊಟ್ಟ ನಿರ್ದೇಶನಗಳನ್ನ ಯೆಹೆಜ್ಕೇಲ ಚೆನ್ನಾಗಿ ಕೇಳಿಸಿಕೊಂಡ. ಅವ್ರು ತಮ್ಮ ಸ್ವಂತ ಪಾಪ ಪರಿಹಾರಕ್ಕಾಗಿ ಬಲಿಯನ್ನ ಅರ್ಪಿಸಬೇಕಿತ್ತು ಮತ್ತು ಸಮಾಧಾನ ಬಲಿಯನ್ನೂ ಅರ್ಪಿಸಬೇಕಿತ್ತು. ಅದನ್ನ ಅವ್ರು ದೇವಾಲಯದ ಊಟದ ಕೋಣೆಯಲ್ಲಿ ಹಂಚಿ ತಿನ್ನಬೇಕಾಗಿತ್ತು. (ಯೆಹೆ. 43:18, 19; 44:11, 15, 27; 45:15-20, 22-25) ಹಾಗಾದ್ರೆ, ಆಧ್ಯಾತ್ಮಿಕ ದೇವಾಲಯದಲ್ಲೂ ಇದೇ ರೀತಿ ಪದೇ ಪದೇ ಬಲಿಗಳನ್ನ ಅರ್ಪಿಸಲಾಯ್ತಾ?
ಯೆಹೆಜ್ಕೇಲ ದರ್ಶನದಲ್ಲಿ ನೋಡಿದ್ದು ಆಧ್ಯಾತ್ಮಿಕ ಆಲಯವನ್ನಲ್ಲ
10 ಇದಕ್ಕೆ ಉತ್ರನ ಪೌಲನೇ ಸ್ಪಷ್ಟವಾಗಿ ತಿಳಿಸಿದ್ದಾನೆ. ಅವನು ಹೀಗೆ ಹೇಳಿದ್ದಾನೆ: “ಕ್ರಿಸ್ತ ಆಶೀರ್ವಾದಗಳನ್ನ ತರೋಕೆ ಮಹಾ ಪುರೋಹಿತನಾದ. ಆ ಆಶೀರ್ವಾದಗಳನ್ನ ಈಗಾಗ್ಲೇ ನಾವು ಪಡ್ಕೊಂಡಿದ್ದೀವಿ. ಕೈಯಿಂದ ಕಟ್ಟಿದ ಅಂದ್ರೆ ಈ ಭೂಮಿಯಲ್ಲಿರೋ ಡೇರೆಯೊಳಗೆ ಆತನು ಹೋಗದೆ ಅದಕ್ಕಿಂತ ಅತಿ ಶ್ರೇಷ್ಠವಾದ, ಹೆಚ್ಚು ಪರಿಪೂರ್ಣವಾದ ಡೇರೆಯೊಳಗೆ ಹೋದ. ಆತನು ಆಡು ಹೋರಿಗಳ ರಕ್ತವನ್ನಲ್ಲ, ತನ್ನ ರಕ್ತವನ್ನೇ ತಗೊಂಡು ಎಲ್ಲ ಕಾಲಕ್ಕೂ ಸೇರಿಸಿ ಒಂದೇ ಸಲ ಪವಿತ್ರ ಸ್ಥಳದ ಒಳಗೆ ಹೋದ ಮತ್ತು ನಮ್ಮನ್ನ ಶಾಶ್ವತವಾಗಿ ಬಿಡುಗಡೆ ಮಾಡಿದ.” (ಇಬ್ರಿ. 9:11, 12) ಆ ಆಶೀರ್ವಾದಗಳನ್ನ ನಾವು ಈಗಾಗಲೇ ಪಡ್ಕೊಂಡಿದ್ದೀವಿ. ಕೈಯಿಂದ ಕಟ್ಟಿದ ಅಂದ್ರೆ ಈ ಭೂಮಿಯಲ್ಲಿರೋ ಡೇರೆಯೊಳಗೆ ಆತನು ಹೋಗದೆ ಅದಕ್ಕಿಂತ ಅತೀ ಶ್ರೇಷ್ಠವಾದ ಹೆಚ್ಚು ಪರಿಪೂರ್ಣವಾದ ಡೇರೆ ಒಳಗೆ ಹೋದನು. ಆತನು ಆಡು ಹೋರಿಗಳ ರಕ್ತವನ್ನಲ್ಲ, ತನ್ನ ಸ್ವಂತ ರಕ್ತವನ್ನು ತೆಗೆದುಕೊಂಡು ಒಂದೇ ಸಲ ಪವಿತ್ರ ಸ್ಥಳಕ್ಕೆ ಹೋದನು ಮತ್ತು ನಮ್ಮನ್ನು ಶಾಶ್ವತವಾಗಿ ಬಿಡುಗಡೆ ಮಾಡಿದನು. ಇದ್ರಿಂದ ನಮ್ಗೆ ಏನು ಗೊತ್ತಾಗುತ್ತೆ ಅಂದ್ರೆ ಆಧ್ಯಾತ್ಮಿಕ ಆಲಯದಲ್ಲಿ ಒಂದೇ ಸಲಕ್ಕೆ, ಒಂದೇ ಬಲಿಯನ್ನ ಅರ್ಪಿಸಲಾಯ್ತು. ಅದೇ ಬಿಡುಗಡೆಯ ಬಲಿ. ಈ ಬಲಿಯನ್ನ ಮಹಾ ಪುರೋಹಿತನಾದ ಯೇಸುವೇ ಅರ್ಪಿಸಿದನು. ಆದ್ರೆ ಯೆಹೆಜ್ಕೇಲ ದರ್ಶನದಲ್ಲಿ ನೋಡಿದ ದೇವಾಲಯದಲ್ಲಿ ಆಡು, ಹೋರಿಗಳ ಬಲಿಗಳನ್ನ ಅರ್ಪಿಸೋದ್ರ ಬಗ್ಗೆ ತಿಳಿಸಲಾಗಿದೆ. ಹಾಗಾಗಿ ಯೆಹೆಜ್ಕೇಲ ನೋಡಿದ್ದು ಆಧ್ಯಾತ್ಮಿಕ ಆಲಯವನ್ನಲ್ಲ ಅಂತ ಸ್ಪಷ್ಟ ಆಗುತ್ತೆ.
11. ಯೆಹೆಜ್ಕೇಲನ ಕಾಲದಲ್ಲಿ ಆಧ್ಯಾತ್ಮಿಕ ಆಲಯದ ಬಗ್ಗೆ ಹೇಳೋ ಸಮಯ ಬಂದಿರಲಿಲ್ಲ ಅಂತ ಯಾಕೆ ಹೇಳಬಹುದು?
11 ಯೆಹೆಜ್ಕೇಲ ನೋಡಿದ್ದು ಆಧ್ಯಾತ್ಮಿಕ ಆಲಯ ಅಲ್ಲ ಅನ್ನೋದಕ್ಕೆ ಎರಡನೇ ಕಾರಣ ನೋಡೋಣ. ಯೆಹೋವ ದೇವ್ರು ಆಧ್ಯಾತ್ಮಿಕ ಆಲಯದ ಬಗ್ಗೆ ತಿಳಿಸುವ ಸಮಯ ಆಗ ಇನ್ನೂ ಬಂದಿರಲಿಲ್ಲ. ಯೆಹೆಜ್ಕೇಲನು ತಾನು ನೋಡಿದ ದರ್ಶನವನ್ನ ಬಾಬೆಲಿನಲ್ಲಿ ಕೈದಿಗಳಾಗಿದ್ದ ಯೆಹೂದ್ಯರಿಗೆ ತಿಳಿಸಿದನು. ಆಗಿನ್ನೂ ಅವ್ರು ಮೋಶೆಯ ನಿಯಮದ ಕೆಳಗೆ ಇದ್ರು. ಅವ್ರು ಬಂಧಿವಾಸದಿಂದ ವಾಪಸ್ ಯೆರೂಸಲೇಮಿಗೆ ಬಂದು ಮೋಶೆಯ ನಿಯಮದ ಪ್ರಕಾರ ದೇವಾಲಯ ಮತ್ತು ಯಜ್ಞವೇದಿಯನ್ನ ಕಟ್ಟಿ ಅಲ್ಲಿ ಶುದ್ಧ ಆರಾಧನೆಯನ್ನ ಮಾಡಬೇಕಿತ್ತು. ಅವ್ರು ಅಲ್ಲಿ ಸುಮಾರು 600 ವರ್ಷಗಳ ತನಕ ಬಲಿಗಳನ್ನ ಅರ್ಪಿಸಿರಬೇಕು. ಒಂದುವೇಳೆ ಯೆಹೆಜ್ಕೇಲನು ಆಧ್ಯಾತ್ಮಿಕ ಆಲಯದ ಬಗ್ಗೆ ಯೆಹೂದ್ಯರಿಗೆ ತಿಳಿಸಿದ್ರೆ ಅವ್ರ ಮೇಲೆ ಯಾವ ರೀತಿಯ ಪರಿಣಾಮ ಬೀರ್ತಿತ್ತು? ಆಧ್ಯಾತ್ಮಿಕ ಆಲಯದಲ್ಲಿ ಸ್ವತಃ ಮಹಾ ಪುರೋಹಿತನೇ ತನ್ನ ಜೀವವನ್ನ ಬಲಿಯಾಗಿ ಅರ್ಪಿಸ್ತಾನೆ, ನಂತ್ರ ಉಳಿದ ಎಲ್ಲ ಬಲಿಗಳು ನಿಂತು ಹೋಗ್ತವೆ ಅಂತ ಹೇಳಿದ್ರೆ ಇದನ್ನ ಅವ್ರು ಯಾವ ರೀತಿ ಅರ್ಥಮಾಡ್ಕೊತಿದ್ರು? ಮೋಶೆಯ ನಿಯಮಗಳನ್ನ ಪಾಲಿಸಬೇಕಾ ಬೇಡ್ವಾ ಅನ್ನೋ ಸಂಶಯ ಅವ್ರಿಗೆ ಬರ್ತಿತ್ತು. ಇದ್ರಿಂದ ನಮಗೇನು ಗೊತ್ತಾಗುತ್ತೆ ಅಂದ್ರೆ ಯೆಹೋವ ದೇವ್ರು ಸರಿಯಾದ ಸಮಯಕ್ಕೆ, ತನ್ನ ಜನ್ರು ವಿಷ್ಯನ ತಿಳ್ಕೊಳ್ಳೋಕೆ ಸಿದ್ಧರಾದಾಗಲೇ ಹೊಸ ವಿಷ್ಯಗಳನ್ನ ತಿಳಿಸ್ತಾನೆ.
12-14. ಯೆಹೆಜ್ಕೇಲನು ದರ್ಶನದಲ್ಲಿ ನೋಡಿದ ಆಲಯಕ್ಕೂ ಪೌಲನು ಆಧ್ಯಾತ್ಮಿಕ ಆಲಯದ ಬಗ್ಗೆ ತಿಳಿಸಿದ ವಿವರಣೆಗೂ ಯಾವ ಸಂಬಂಧ ಇದೆ? (“ಎರಡು ಆಲಯಗಳು ಮತ್ತು ಅವುಗಳಿಂದ ಕಲಿಯೋ ಪಾಠಗಳು” ಅನ್ನೋ ಚೌಕ ನೋಡಿ.)
12 ಹಾಗಾದ್ರೆ ಯೆಹೆಜ್ಕೇಲ ನೋಡಿದ ದೇವಾಲಯದ ದರ್ಶನಕ್ಕೂ, ಆಧ್ಯಾತ್ಮಿಕ ಆಲಯದ ಬಗ್ಗೆ ಪೌಲ ಹೇಳಿದ ವಿವರಣೆಗೂ ಏನ್ ಸಂಬಂಧ ಇದೆ? ಪೌಲನು ಆಧ್ಯಾತ್ಮಿಕ ಆಲಯದ ಬಗ್ಗೆ ಕೊಟ್ಟ ವಿವರಣೆಯು ಯೆಹೆಜ್ಕೇಲ ನೋಡಿದ ದೇವಾಲಯದ ಮೇಲೆ ಆಧರಿಸಿರಲಿಲ್ಲ. ಬದಲಿಗೆ ಮೋಶೆಯ ಸಮಯದಲ್ಲಿದ್ದ ಗುಡಾರದ ಮೇಲೆ ಆಧರಿಸಿತ್ತು ಅನ್ನೋದನ್ನ ಮನಸ್ಸಲ್ಲಿಡಿ. ಆದ್ರೆ ಪೌಲ ತಿಳಿಸಿದ ದೇವಾಲಯದ ಭಾಗಗಳು ಸೊಲೊಮೋನ ಮತ್ತು ಜೆರುಬ್ಬಾಬೆಲ್ ಕಟ್ಟಿದ ದೇವಾಲಯದಲ್ಲೂ ಇದ್ದವು. ಯೆಹೆಜ್ಕೇಲ ದರ್ಶನದಲ್ಲಿ ನೋಡಿದ ದೇವಾಲಯದಲ್ಲೂ ಇದ್ದವು. ಹಾಗಿದ್ರೂ ಯೆಹೆಜ್ಕೇಲ ಮತ್ತು ಪೌಲ ತಿಳಿಸಿದ ಮುಖ್ಯ ವಿಷ್ಯ ಬೇರೆ ಬೇರೆ ಆಗಿತ್ತು. b ಅವ್ರು ಒಂದೇ ವಿಷ್ಯನ ತಿಳಿಸದೇ ಇದ್ರೂ ಅವ್ರು ತಿಳಿಸಿದ ವಿಷ್ಯ ಒಂದಕ್ಕೊಂದು ಸಂಬಂಧಿಸಿತ್ತು. ಅದು ಹೇಗೆ?
13 ಇವರಿಬ್ರೂ ಹೇಳಿದ ವಿಷ್ಯಗಳು ಒಂದಕ್ಕೊಂದು ಸಂಬಂಧಿಸಿವೆ. ಪೌಲನಿಂದ, ಯೆಹೋವ ದೇವರು ಆರಾಧನೆಯ ಬಗ್ಗೆ ಮಾಡಿದ ಏರ್ಪಾಡಿನ ಬಗ್ಗೆ ತಿಳ್ಕೊಬಹುದು. ಆದ್ರೆ ಯೆಹೆಜ್ಕೇಲನಿಂದ ಯೆಹೋವನ ಆರಾಧನೆಯ ಮಟ್ಟಗಳ ಬಗ್ಗೆ ತಿಳ್ಕೊಬಹುದು. ಶುದ್ಧ ಆರಾಧನೆಯ ಬಗ್ಗೆ ಯೆಹೋವನು ಮಾಡಿದ ಏರ್ಪಾಡಿನ ಬಗ್ಗೆ ತಿಳಿಸೋಕೆ ಪೌಲನು ಆಧ್ಯಾತ್ಮಿಕ ಆಲಯದ ಭಾಗವಾಗಿರೋ ಮಹಾ ಪುರೋಹಿತ, ಬಲಿಗಳು, ಯಜ್ಞವೇದಿ ಮತ್ತು ಅತಿ ಪವಿತ್ರ ಸ್ಥಳದ ಅರ್ಥವನ್ನ ತಿಳಿಸ್ತಾನೆ. ಯೆಹೋವನ ಶುದ್ಧ ಆರಾಧನೆಯ ಉನ್ನತ ಮಟ್ಟಗಳನ್ನ ಯೆಹೆಜ್ಕೇಲ ನೋಡಿದ ದರ್ಶನ ಒತ್ತಿ ಹೇಳುತ್ತೆ. ಇದ್ರಿಂದ ನಾವು ಯೆಹೋವನ ಮಟ್ಟಗಳ ಬಗ್ಗೆ ಅನೇಕ ಪಾಠಗಳನ್ನ ಕಲಿತೀವಿ.
14 ಈಗಾಗಲೇ ನೋಡಿದ ಹಾಗೆ ಯೆಹೆಜ್ಕೇಲನ ದರ್ಶನವನ್ನ ನಾವು ಅರ್ಥಮಾಡಿಕೊಂಡಿದ್ರಲ್ಲಿ ಸ್ವಲ್ಪ ಬದಲಾವಣೆ ಆಗಿದೆ. ಹಾಗಿದ್ರೂ ಈ ದರ್ಶನ ಇವತ್ತಿಗೂ ನಮಗೆ ತುಂಬಾ ಪ್ರಾಮುಖ್ಯ. ಈ ದರ್ಶನದಿಂದ ನಾವೇನನ್ನ ಕಲಿಬಹುದು ಅಂತ ತಿಳ್ಕೊಬೇಕಾದ್ರೆ ಮೊದಲು ನಾವು ಯೆಹೆಜ್ಕೇಲನ ಸಮಯದಲ್ಲಿದ್ದ ಮತ್ತು ಅದ್ರ ನಂತ್ರ ಇದ್ದ ನಂಬಿಗಸ್ತ ಯೆಹೂದ್ಯರಿಗೆ ಈ ದರ್ಶನದಿಂದ ಏನ್ ಪ್ರಯೋಜ್ನ ಆಯ್ತು ಅಂತ ತಿಳ್ಕೊಳ್ಳೋಣ.
ಕೈದಿಗಳಾಗಿದ್ದ ಯೆಹೂದ್ಯರಿಗೆ ಯೆಹೆಜ್ಕೇಲನ ದರ್ಶನದಿಂದ ಯಾವ ಪ್ರಯೋಜನ ಸಿಕ್ತು?
15. (ಎ) ಯೆಹೆಜ್ಕೇಲನ ದರ್ಶನದ ಮುಖ್ಯ ಸಂದೇಶ ಏನು? (ಬಿ) ಯೆಹೆಜ್ಕೇಲ 8 ನೇ ಅಧ್ಯಾಯಕ್ಕೂ ಯೆಹೆಜ್ಕೇಲ 40-48 ನೇ ಅಧ್ಯಾಯಕ್ಕೂ ಯಾವ ವ್ಯತ್ಯಾಸ ಇದೆ?
15 ಇದಕ್ಕೆ ಉತ್ರ ತಿಳ್ಕೊಳ್ಳೋಕೆ ಇದಕ್ಕೆ ಸಂಬಂಧಪಟ್ಟ ಕೆಲ್ವು ಪ್ರಶ್ನೆಗಳನ್ನ ನಾವೀಗ ನೋಡೋಣ. ಮೊದಲನೇದಾಗಿ, ಈ ದರ್ಶನದ ಮೂಲಕ ಯೆಹೂದ್ಯರಿಗೆ ಯಾವ ಮುಖ್ಯ ಸಂದೇಶವನ್ನ ತಿಳಿಸಲಾಗಿತ್ತು? ಒಂದು ಮಾತಿನಲ್ಲಿ ಹೇಳೋದಾದ್ರೆ ಈ ದರ್ಶನದ ಮುಖ್ಯ ಸಂದೇಶ ಶುದ್ಧ ಆರಾಧನೆ ಪುನಃಸ್ಥಾಪನೆ ಆಗುತ್ತೆ ಅನ್ನೋದಾಗಿತ್ತು. ಇದು ಯೆಹೆಜ್ಕೇಲನಿಗೆ ಸ್ಪಷ್ಟವಾಗಿ ಅರ್ಥ ಆಗಿತ್ತು. ಇದ್ರ ಬಗ್ಗೆ ಯೆಹೆಜ್ಕೇಲ ಈಗಾಗಲೇ ದಾಖಲೆ ಮಾಡಿದ್ದ. ಅದನ್ನ ಅಧ್ಯಾಯ 8 ರಲ್ಲಿ ನೋಡಬಹುದು. ಅಲ್ಲಿ ಯೆಹೋವನು ಯೆರೂಸಲೇಮಿನ ದೇವಾಲಯದ ಹಾಳು ಬಿದ್ದ ಪರಿಸ್ಥಿತಿಯನ್ನ ಚಿತ್ರಿಸಿದ್ದಾನೆ. ಆದ್ರೆ ಯೆರೂಸಲೇಮಿನಲ್ಲಿ ದೇವಾಲಯವನ್ನ ಕಟ್ಟಲಾಗುತ್ತೆ, ಶುದ್ಧ ಆರಾಧನೆ ಪುನಃಸ್ಥಾಪನೆ ಆಗುತ್ತೆ ಅಂತ ಬರೆಯೋಕೆ ಯೆಹೆಜ್ಕೇಲನಿಗೆ ತುಂಬಾ ಖುಷಿ ಆಗಿರಬೇಕು. ಅದನ್ನ ಅಧ್ಯಾಯ 40 ರಿಂದ 48 ರಲ್ಲಿ ನೋಡಬಹುದು. ಆದ್ರೆ ಇಲ್ಲಿ ಶುದ್ಧ ಆರಾಧನೆ ಭ್ರಷ್ಟವಾಗಿದ್ದರ ಬಗ್ಗೆ ತಿಳಿಸಲಾಗಿಲ್ಲ. ಬದಲಿಗೆ ಶುದ್ಧ ಆರಾಧನೆ ಹೇಗೆ ಇರಬೇಕಿತ್ತು ಮತ್ತು ಮೋಶೆಯ ನಿಯಮದ ಪ್ರಕಾರ ಯೆಹೋವನನ್ನ ಯಾವ ರೀತಿ ಆರಾಧಿಸಬೇಕಿತ್ತು ಅನ್ನೋದ್ರ ಮಾದರಿ ಬಗ್ಗೆ ತಿಳಿಸಲಾಗಿದೆ.
16. ಯೆಶಾಯನು ಸುಮಾರು ನೂರು ವರ್ಷಗಳ ಹಿಂದೆ ಹೇಳಿದ ಮಾತು ನಿಜ ಅಂತ ಯೆಹೆಜ್ಕೇಲನಿಗೆ ಸಿಕ್ಕ ದರ್ಶನ ಹೇಗೆ ಸ್ಪಷ್ಟಪಡಿಸ್ತು?
16 ಯೆಹೋವನ ಆರಾಧನೆ ಪುನಃಸ್ಥಾಪನೆ ಆಗಬೇಕಂದ್ರೆ ಅದು ಬೇರೆಲ್ಲಾ ಆರಾಧನೆಗಿಂತ ಉನ್ನತ ಸ್ಥಾನಕ್ಕೆ ಏರಿಸಲ್ಪಡಬೇಕು. ಯೆಹೆಜ್ಕೇಲನ ಸಮಯಕ್ಕೂ ಸುಮಾರು 100 ವರ್ಷಗಳ ಹಿಂದೆ ಪ್ರವಾದಿ ಯೆಶಾಯ ದೇವಪ್ರೇರಣೆಯಿಂದ ಹೀಗೆ ಬರೆದನು: “ಕೊನೇ ದಿನಗಳಲ್ಲಿ ಯೆಹೋವನ ಆಲಯ ಇರೋ ಬೆಟ್ಟನ ಎಲ್ಲ ಬೆಟ್ಟಗಳಿಗಿಂತ ಎತ್ರದಲ್ಲಿ ದೃಢವಾಗಿ ಸ್ಥಾಪಿಸಲಾಗುತ್ತೆ, ಅದನ್ನ ಎಲ್ಲ ಗುಡ್ಡಗಳಿಗಿಂತ ಎತ್ರಕ್ಕೆ ಏರಿಸಲಾಗುತ್ತೆ.” (ಯೆಶಾ. 2:2) ಯೆಹೋವನ ಆಲಯವನ್ನ ಎತ್ತರವಾದ ಬೆಟ್ಟದ ಮೇಲೆ ಸ್ಥಾಪಿಸಲಾಗುತ್ತೆ ಅಂದ್ರೆ ಯೆಹೋವನ ಶುದ್ಧ ಆರಾಧನೆ ಪುನಃಸ್ಥಾಪನೆಯಾಗುತ್ತೆ ಮತ್ತು ಬೇರೆಲ್ಲಾ ಆರಾಧನೆಗಿಂತ ಉನ್ನತ ಸ್ಥಾನಕ್ಕೆ ಏರಿಸಲ್ಪಡುತ್ತೆ ಅಂತ ಯೆಶಾಯನಿಗೆ ಸ್ಪಷ್ಟವಾಗಿ ಗೊತ್ತಾಯ್ತು. ಯೆಹೆಜ್ಕೇಲ ಸಹ ದರ್ಶನದಲ್ಲಿ “ಅತೀ ಎತ್ತರವಾದ ಒಂದು ಬೆಟ್ಟದ ಮೇಲೆ” ನಿಂತು ಯೆಹೋವನ ಆಲಯವನ್ನ ನೋಡ್ತಿದ್ದ. (ಯೆಹೆ. 40:2) ಹೀಗೆ ಯೆಶಾಯ ಹೇಳಿದ ಹಾಗೆ ಶುದ್ಧ ಆರಾಧನೆ ಪುನಃಸ್ಥಾಪನೆ ಆಗುತ್ತೆ ಅಂತ ಯೆಹೆಜ್ಕೇಲನ ದರ್ಶನ ಗ್ಯಾರಂಟಿ ಕೊಡ್ತು.
17. ಯೆಹೆಜ್ಕೇಲ ಅಧ್ಯಾಯ 40-48 ರವರೆಗೆ ಏನೆಲ್ಲಾ ಇದೆ ಅಂತ ಚುಟುಕಾಗಿ ತಿಳಿಸಿ.
17 ಯೆಹೆಜ್ಕೇಲನು ದರ್ಶನದಲ್ಲಿ ಏನನ್ನ ನೋಡ್ದ, ಏನನ್ನ ಕೇಳಿಸಿಕೊಂಡ ಅನ್ನೋದನ್ನ ಯೆಹೆಜ್ಕೇಲ 40 ರಿಂದ 48 ನೇ ಅಧ್ಯಾಯದಲ್ಲಿ ಕೊಡಲಾಗಿದೆ. ಅದ್ರ ಕಿರುನೋಟವನ್ನ ನಾವೀಗ ನೋಡೋಣ. ಒಬ್ಬ ದೇವದೂತ ದೇವಾಲಯದ ಬಾಗಿಲುಗಳನ್ನ, ಗೋಡೆ, ಮಂಟಪಗಳನ್ನ, ಪವಿತ್ರ ಸ್ಥಳಗಳನ್ನ ಅಳೆಯೋದನ್ನ ಅವನು ನೋಡ್ದ. (ಯೆಹೆ. 40–42) ಆಮೇಲೆ ರೋಮಾಂಚನಕರವಾದ ಇನ್ನೊಂದು ವಿಷ್ಯ ನೋಡ್ದ! ದರ್ಶನದಲ್ಲಿ ಯೆಹೋವನ ಮಹಿಮೆ ಇಡೀ ಆಲಯದಲ್ಲಿ ತುಂಬಿಕೊಂಡಿತು. ಆಮೇಲೆ ಯೆಹೋವ ದೇವರು ದಾರಿ ತಪ್ಪಿ ಹೋದ ಜನರಿಗೆ, ಪುರೋಹಿತರಿಗೆ ಮತ್ತು ಪ್ರಧಾನರಿಗೆ ಬುದ್ಧಿ ಹೇಳಿದನು. (ಯೆಹೆ. 43:1-12; 44:10-31; 45:9-12) ದರ್ಶನದಲ್ಲಿ ಯೆಹೆಜ್ಕೇಲ, ಒಂದು ನದಿ ಪವಿತ್ರ ಸ್ಥಳದಿಂದ ಹುಟ್ಟಿ ಹರಿಯೋದನ್ನ ನೋಡ್ದ. ಅದು ಎಲ್ಲೆಲ್ಲಾ ಹರಿತಿತ್ತೋ ಅಲ್ಲೆಲ್ಲಾ ಜೀವ ಮತ್ತು ಆಶೀರ್ವಾದಗಳನ್ನ ತರುತ್ತಿತ್ತು. ಕೊನೆಗೆ ಆ ನದಿ ಮೃತ ಸಮುದ್ರವನ್ನ ಸೇರುತ್ತಿತ್ತು. (ಯೆಹೆ. 47:1-12) ಆಮೇಲೆ ಅವನು ಒಂದು ಜಾಗ ಸಮವಾಗಿ ವಿಭಾಗಿಸಲ್ಪಡುತ್ತಿರುವುದನ್ನ ಮತ್ತು ಅದ್ರ ಮಧ್ಯದಲ್ಲಿ ಶುದ್ಧ ಆರಾಧನೆಗೆ ಸ್ಥಳ ಇರೋದನ್ನ ನೋಡಿದ. (ಯೆಹೆ. 45:1-8; 47:13–48:35) ಇದನ್ನ ತೋರಿಸೋ ಮೂಲಕ ಯೆಹೋವ ದೇವರು ಶುದ್ಧ ಆರಾಧನೆ ಪುನಃಸ್ಥಾಪಿಸಲಾಗುತ್ತೆ ಮತ್ತು ಅದನ್ನ ಅತ್ಯುನ್ನತ ಸ್ಥಾನಕ್ಕೆ ಏರಿಸಲಾಗುತ್ತೆ ಅಂತ ತನ್ನ ಜನ್ರಿಗೆ ಆಶ್ವಾಸನೆ ನೀಡ್ತಿದ್ದನು. ಯೆಹೋವ ದೇವರು ಆಲಯದಲ್ಲಿ ಇದ್ದು ಆಶೀರ್ವಾದವನ್ನ ಸುರಿಸಲಿದ್ದನು. ಪುನಃಸ್ಥಾಪನೆ ಆದ ದೇಶದಲ್ಲಿ ಎಲ್ರಿಗೂ ಒಳ್ಳೇ ಆರೋಗ್ಯ, ಒಳ್ಳೇ ಜೀವ್ನ ಸಿಗಲಿತ್ತು ಮತ್ತು ಶಾಂತಿ ನೆಮ್ಮದಿಯಿಂದ ಎಲ್ರೂ ವ್ಯವಸ್ಥಿತವಾಗಿ ಇರಲಿದ್ರು.
18. ದರ್ಶನದಲ್ಲಿ ನೋಡಿದ ದೇವಾಲಯ ನಿಜವಾಗಿ ಕಟ್ಟಲಾಗುವ ದೇವಾಲಯವಾಗಿತ್ತಾ? ವಿವರಿಸಿ.
18 ಎರಡನೇದಾಗಿ, ಆ ದೇವಾಲಯ ನಿಜವಾಗಲೂ ಕಟ್ಟಲಾಗುತ್ತೆ ಅನ್ನೋದು ಈ ದರ್ಶನದ ಅರ್ಥವಾಗಿತ್ತಾ? ಅಲ್ಲ. ದರ್ಶನದಲ್ಲಿ ತೋರಿಸಿದ ದೇವಾಲಯವನ್ನ ನಿಜವಾಗಲೂ ಕಟ್ಟಲಾಗುತ್ತೆ ಅಂತ ಯೆಹೆಜ್ಕೇಲನಿಗೆ ಮತ್ತು ಕೈದಿಗಳಾಗಿದ್ದ ಬೇರೆ ಯೆಹೂದ್ಯರಿಗೆ ಅನಿಸಲಿಲ್ಲ. ಇದು ನಮಗೆ ಹೇಗೆ ಗೊತ್ತು? ನಾಲ್ಕು ಕಾರಣಗಳನ್ನ ನೋಡೋಣ. (1) ಯೆಹೆಜ್ಕೇಲನು ನೋಡಿದ ದೇವಾಲಯ “ಅತಿ ಎತ್ತರವಾದ ಒಂದು ಬೆಟ್ಟದ ಮೇಲೆ” ಇತ್ತು. ಯೆಶಾಯನು ಕೂಡ ತನ್ನ ಭವಿಷ್ಯವಾಣಿಯಲ್ಲಿ ದೇವಾಲಯ ಅತಿ ಎತ್ತರವಾದ ಬೆಟ್ಟದ ಮೇಲೆ ಇತ್ತು ಅಂತ ಹೇಳಿದ್ದಾನೆ. ಆದ್ರೆ ಮುಂಚೆ ಇದ್ದ ದೇವಾಲಯ ಅಂದ್ರೆ ಸೊಲೊಮೋನ ಕಟ್ಟಿದ ದೇವಾಲಯ ಮೊರೀಯ ಬೆಟ್ಟದ ಮೇಲಿತ್ತು. ಯೆಹೂದ್ಯರು ವಾಪಸ್ ಬಂದ ಮೇಲೂ ಅಲ್ಲೇ ಆಲಯವನ್ನ ಕಟ್ಟಲಿದ್ರು. ಆದ್ರೆ ಮೊರೀಯ ಬೆಟ್ಟ “ಅತಿ ಎತ್ತರದ ಬೆಟ್ಟ” ಆಗಿರಲಿಲ್ಲ. ಮೊರೀಯ ಬೆಟ್ಟದ ಸುತ್ತ ಮುತ್ತ ಅಷ್ಟೇ ಎತ್ತರವಾಗಿದ್ದ ಮತ್ತು ಅದಕ್ಕಿಂತಲೂ ಎತ್ತರವಾಗಿದ್ದ ಬೇರೆ ಬೆಟ್ಟಗಳೂ ಇದ್ದವು. (2) ದರ್ಶನದಲ್ಲಿದ್ದ ದೇವಾಲಯ ಮತ್ತು ಅದ್ರ ಸುತ್ತ ಇದ್ದ ಜಾಗನೂ ತುಂಬಾ ವಿಶಾಲವಾಗಿತ್ತು ಮತ್ತು ಅದ್ರ ಸುತ್ತ ಗೋಡೆ ಇತ್ತು. ಇಷ್ಟು ವಿಶಾಲವಾದ ದೇವಾಲಯವನ್ನ ಮೊರೀಯ ಬೆಟ್ಟದ ತುದಿಯಲ್ಲಿ ಕಟ್ಟೋಕೆ ಸಾಧ್ಯ ಇರಲಿಲ್ಲ. ಆ ದೇವಾಲಯವನ್ನ ಕಟ್ಟೋಕೆ ಸೊಲೊಮೋನನ ಸಮಯದಲ್ಲಿದ್ದ ಇಡೀ ಯೆರೂಸಲೇಮ್ ಪಟ್ಟಣನೇ ಸಾಕಾಗ್ತಿರಲಿಲ್ಲ. (3) ದರ್ಶನದಲ್ಲಿದ್ದ ಹಾಗೆ ಯೆರೂಸಲೇಮಿನ ದೇವಾಲಯದ ಪವಿತ್ರ ಸ್ಥಳದಿಂದ ಒಂದು ನದಿ ಹರಿದು ಬರೋಕೆ ಮತ್ತು ಆ ನದಿ ಮೃತ ಸಮುದ್ರಕ್ಕೆ ಸೇರಿ ಅಲ್ಲಿನ ಉಪ್ಪುನೀರನ್ನ ಸಿಹಿ ನೀರಾಗಿ ಮಾಡೋಕೆ ಸಾಧ್ಯವಿಲ್ಲ ಅಂತ ಕೈದಿಗಳಾಗಿದ್ದ ಯೆಹೂದ್ಯರಿಗೆ ಗೊತ್ತಿತ್ತು. (4) ಯೆರೂಸಲೇಮ್ ಪ್ರದೇಶ ಬೆಟ್ಟ ಗುಡ್ಡಗಳಿಂದ ಕೂಡಿತ್ತು. ಆದ್ರೆ ದರ್ಶನದಲ್ಲಿ ತಿಳಿಸಲಾದ ಪ್ರದೇಶ ಸಮತಟ್ಟಾಗಿತ್ತು. ಅಲ್ಲಿ ತೋರಿಸಲಾದ ಕುಲಗಳ ಮಧ್ಯೆ ಇರೋ ಗಡಿಗಳು ನೇರವಾಗಿದ್ವು ಮತ್ತು ಅವುಗಳ ಅಂತರ ಸಮವಾಗಿತ್ತು. ಹಾಗಾಗಿ ಯೆಹೆಜ್ಕೇಲನ ದರ್ಶನದಲ್ಲಿ ಕಾಣಿಸಿದ ದೇವಾಲಯ ಯೆಹೂದ್ಯರು ನಿಜವಾಗಿ ಕಟ್ಟಲಿದ್ದ ದೇವಾಲಯ ಅಲ್ಲ ಅಂತ ಗೊತ್ತಾಗುತ್ತೆ.
19-21. ಯೆಹೆಜ್ಕೇಲ ದರ್ಶನದಲ್ಲಿ ನೋಡಿದ ವಿಷಯಗಳು ಜನರ ಮೇಲೆ ಯಾವ ಪ್ರಭಾವ ಬೀರಬೇಕು ಅಂತ ಯೆಹೋವನು ಬಯಸಿದನು? ಮತ್ತು ಜನರಿಗೆ ಯಾಕೆ ಹಾಗನಿಸಬೇಕಿತ್ತು?
19 ಮೂರನೇದಾಗಿ, ಯೆಹೆಜ್ಕೇಲನ ಕಾಲದಲ್ಲಿದ್ದ ಜನ್ರಿಗೆ ಈ ದರ್ಶನದ ಬಗ್ಗೆ ಯಾಕೆ ಹೇಳಲಾಯ್ತು? ಶುದ್ಧ ಆರಾಧನೆಯ ಬಗ್ಗೆ ಇರೋ ಯೆಹೋವನ ಮಟ್ಟಗಳು ಎಷ್ಟು ಉನ್ನತವಾಗಿವೆ ಅಂತ ಯೋಚಿಸುವಾಗ ಜನ್ರಿಗೆ ತಾವು ಮಾಡಿದ ತಪ್ಪಿನ ಬಗ್ಗೆ ನಾಚಿಕೆ ಆಗಬೇಕಿತ್ತು. ಯೆಹೋವನು ಯೆಹೆಜ್ಕೇಲನಿಗೆ, “ನೀನು ನೋಡಿದ ಆಲಯದ ಬಗ್ಗೆ ಅವ್ರಿಗೆ ವರ್ಣಿಸು” ಅಂತ ಹೇಳಿದನು. ‘ಆ ನಕ್ಷೆನ ಜನರು ನೋಡಬೇಕಿತ್ತು’ ಅಂದ್ರೆ ಯೆಹೆಜ್ಕೇಲ ಅವ್ರಿಗೆ ಅರ್ಥವಾಗೋ ರೀತಿಯಲ್ಲಿ ಅದನ್ನ ಚೆನ್ನಾಗಿ ವಿವರಿಸಬೇಕಿತ್ತು. ಜನ್ರು ಯಾಕೆ ಆ ದೇವಾಲಯದ ಬಗ್ಗೆ ಧ್ಯಾನಿಸಬೇಕಿತ್ತು? ದೇವಾಲಯವನ್ನ ಕಟ್ಟೋಕಾಗಿ ಅಲ್ಲ, ಬದಲಿಗೆ ಜನರು ‘ತಾವು ಮಾಡಿದ ಪಾಪಗಳನ್ನ ನೆನಸಿ ನಾಚಿಕೆ ಪಡೋಕಾಗಿ’ ಅದರ ಬಗ್ಗೆ ಧ್ಯಾನಿಸಬೇಕಿತ್ತು ಅಂತ ಯೆಹೋವನು ಹೇಳಿದ್ದನು.—ಯೆಹೆಜ್ಕೇಲ 43:10-12 ಓದಿ.
20 ಈ ದರ್ಶನದ ಬಗ್ಗೆ ತಿಳ್ಕೊಂಡಾಗ ಒಳ್ಳೇ ಜನ್ರ ಮನಸ್ಸಾಕ್ಷಿ ಯಾಕೆ ಚುಚ್ಚಲಿತ್ತು ಮತ್ತು ಅವ್ರಿಗೆ ಯಾಕೆ ನಾಚಿಕೆ ಅನಿಸಬೇಕಿತ್ತು? ಇದರ ಬಗ್ಗೆ ಯೆಹೆಜ್ಕೇಲನು ಏನು ಹೇಳಿದ್ದಾನೆ ಅಂತ ಗಮನಿಸಿ: “ಮನುಷ್ಯಕುಮಾರನೇ, ನಾನು ನಿನಗೆ ಯೆಹೋವನ ಆಲಯದ ಶಾಸನಗಳ ಬಗ್ಗೆ ಮತ್ತು ನಿಯಮಗಳ ಬಗ್ಗೆ ಹೇಳೋ ಪ್ರತಿಯೊಂದು ಮಾತಿಗೆ ಗಮನಕೊಡು, ಅದನ್ನ ಚೆನ್ನಾಗಿ ಕೇಳಿಸ್ಕೊ. ನಾನು ತೋರಿಸೋದನ್ನೆಲ್ಲ ಜಾಗ್ರತೆಯಿಂದ ನೋಡು.” (ಯೆಹೆ. 44:5) ಯೆಹೆಜ್ಕೇಲನು ಶಾಸನಗಳ ಬಗ್ಗೆ ಮತ್ತು ನಿಯಮಗಳ ಬಗ್ಗೆ ಪದೇಪದೇ ಕೇಳಿಸಿಕೊಂಡನು. (ಯೆಹೆ. 43:11, 12; 44:24; 46:14) ಯೆಹೋವನು ತನ್ನ ಮಟ್ಟಗಳ ಬಗ್ಗೆ ಸಹ ನಿಖರವಾಗಿ ಪದೇಪದೇ ಯೆಹೆಜ್ಕೇಲನಿಗೆ ಹೇಳಿದನು. ಎಷ್ಟರ ಮಟ್ಟಿಗೆ ಅಂದ್ರೆ ಆತನು ಒಂದು ಮೊಳ ಎಷ್ಟು ಉದ್ದ ಇರಬೇಕು ಮತ್ತು ತೂಕವನ್ನ ಅಳತೆ ಮಾಡೋ ಮಾಪಕ ಹೇಗಿರಬೇಕು ಅನ್ನೋದ್ರ ಬಗ್ಗೆನೂ ತಿಳಿಸಿದನು. (ಯೆಹೆ. 40:5; 45:10-12; ಜ್ಞಾನೋ. 16:11 ಹೋಲಿಸಿ.) ಅಷ್ಟೇ ಅಲ್ಲ ಯೆಹೆಜ್ಕೇಲನು ಈ ದರ್ಶನದ ಬಗ್ಗೆ ತಿಳಿಸುವಾಗ “ಅಳತೆ” “ಮಾಪಕ” ಮುಂತಾದ ಪದಗಳನ್ನ ಮೂಲ ಭಾಷೆಯಲ್ಲಿ 50ಕ್ಕೂ ಹೆಚ್ಚು ಸಲ ಉಪಯೋಗಿಸಿದ್ದಾನೆ.
21 ಯೆಹೋವನು ಅಳತೆ, ತೂಕ, ನಿಯಮಗಳು ಮತ್ತು ಶಾಸನಗಳ ಬಗ್ಗೆ ಯಾಕೆ ತಿಳಿಸಿದನು? ಶುದ್ಧ ಆರಾಧನೆಯನ್ನ ಹೇಗೆ ಮಾಡಬೇಕು ಅಂತ ಹೇಳೋ ಅರ್ಹತೆ ಇರೋದು ಯೆಹೋವನಿಗೆ ಮಾತ್ರ. ಇದನ್ನ ಜನ್ರಿಗೆ ಮನವರಿಕೆ ಮಾಡಿಸೋದೇ ಆತನ ಉದ್ದೇಶವಾಗಿತ್ತು. ಈ ವಿಷ್ಯಗಳನ್ನ ಕಲಿತಾಗ ಯೆಹೋವನ ಮಾತನ್ನ ತಿರಸ್ಕರಿಸಿದವ್ರು ನಾಚಿಕೆಪಡಬೇಕಾಗಿತ್ತು. ಅವ್ರು ಈ ಪಾಠಗಳನ್ನ ದರ್ಶನದಿಂದ ಹೇಗೆ ಕಲಿತ್ರು? ಮುಂದಿನ ಅಧ್ಯಾಯದಲ್ಲಿ ನಾವು ಇದ್ರ ಬಗ್ಗೆ ಕೆಲವು ಉದಾಹರಣೆಗಳನ್ನ ನೋಡಲಿದ್ದೇವೆ. ದೇವಾಲಯದ ದರ್ಶನದಿಂದ ನಮ್ಗೂ ಪ್ರಯೋಜ್ನ ಇದೆ ಅಂತ ಅರ್ಥಮಾಡ್ಕೊಳ್ಳೋಕೆ ಈ ಉದಾಹರಣೆಗಳು ಸಹಾಯ ಮಾಡುತ್ತವೆ.
a ಯೇಸು ಕ್ರಿಸ್ತನ ಬಿಡುಗಡೆಯ ಬಲಿ ಮೇಲೆ ಆಧರಿಸಿ ಶುದ್ಧ ಆರಾಧನೆಗಾಗಿ ಯೆಹೋವನು ಮಾಡಿದ ಏರ್ಪಾಡೇ ಆಧ್ಯಾತ್ಮಿಕ ಆಲಯ. ಇದು ಕ್ರಿ.ಶ. 29 ರಲ್ಲಿ ಅಸ್ತಿತ್ವಕ್ಕೆ ಬಂತು.