“ಹೊಸ ಹೆಸರು”
ಅಧ್ಯಾಯ ಇಪ್ಪತ್ಮೂರು
“ಹೊಸ ಹೆಸರು”
1. ಯೆಶಾಯ 62ನೆಯ ಅಧ್ಯಾಯದಲ್ಲಿ ಯಾವ ಆಶ್ವಾಸನೆಯು ದಾಖಲಿಸಲ್ಪಟ್ಟಿದೆ?
ಬಾಬೆಲಿನಲ್ಲಿದ್ದ ಯೆಹೂದ್ಯರಿಗೆ ಬೇಕಾಗಿರುವುದು ಪುನರಾಶ್ವಾಸನೆ, ಸಾಂತ್ವನ ಮತ್ತು ಪುನಸ್ಸ್ಥಾಪನೆಯ ನಿರೀಕ್ಷೆಯೇ. ಯೆರೂಸಲೇಮೂ ಅದರ ದೇವಾಲಯವೂ ನಾಶವಾಗಿ ಅನೇಕ ದಶಕಗಳು ಗತಿಸಿದ್ದವು. ಬಾಬೆಲಿನಿಂದ ಸುಮಾರು 800 ಕಿಲೊಮೀಟರ್‌ಗಳಷ್ಟು ದೂರದಲ್ಲಿ ಯೆಹೂದವು ಹಾಳುಬಿದ್ದಿದೆ ಮತ್ತು ಯೆಹೋವನು ಯೆಹೂದ್ಯರನ್ನು ಮರೆತುಬಿಟ್ಟಿರುವಂತೆ ಕಾಣುತ್ತದೆ. ಅವರ ಸ್ಥಿತಿಯನ್ನು ಯಾವುದು ಸುಧಾರಿಸೀತು? ತಾನು ಅವರನ್ನು ಸ್ವದೇಶಕ್ಕೆ ಹಿಂದಿರುಗಿಸಿ, ಶುದ್ಧಾರಾಧನೆಯನ್ನು ಪುನಸ್ಸ್ಥಾಪಿಸುತ್ತೇನೆ ಎಂಬ ಯೆಹೋವನ ವಾಗ್ದಾನಗಳೇ. ಆಗ “ಗಂಡಬಿಟ್ಟವಳು [“ಪೂರ್ತಿಯಾಗಿ ತ್ಯಜಿಸಲ್ಪಟ್ಟಿರುವ ಸ್ತ್ರೀ,” NW]” ಮತ್ತು “ಬಂಜೆ [“ಬಂಜರು,” NW]” ಎಂಬಂತಹ ವರ್ಣನೆಗಳ ಸ್ಥಾನದಲ್ಲಿ, ದೇವರ ಮೆಚ್ಚಿಕೆಯನ್ನು ಸೂಚಿಸುವ ಹೆಸರುಗಳು ಬರುವವು. (ಯೆಶಾಯ 62:4; ಜೆಕರ್ಯ 2:12) ಯೆಶಾಯ 62ನೆಯ ಅಧ್ಯಾಯದಲ್ಲಿ ಇಂತಹ ವಾಗ್ದಾನಗಳೇ ತುಂಬಿಕೊಂಡಿವೆ. ಆದರೂ, ಪುನಸ್ಸ್ಥಾಪನೆಯ ಬೇರೆ ಪ್ರವಾದನೆಗಳಂತೆ, ಈ ಅಧ್ಯಾಯವೂ ಬಾಬೆಲಿನ ಬಂಧಿವಾಸದಿಂದ ಯೆಹೂದ್ಯರ ಬಿಡುಗಡೆಗಿಂತಲೂ ಎಷ್ಟೋ ಹೆಚ್ಚಿನ ವಿಷಯಗಳನ್ನು ಒಳಗೊಂಡಿದೆ. ಯೆಶಾಯ 62ನೆಯ ಅಧ್ಯಾಯದ ಪ್ರಧಾನ ನೆರವೇರಿಕೆಯಲ್ಲಿ, ‘ದೇವರ ಇಸ್ರಾಯೇಲ್’ ಆಗಿರುವ ಯೆಹೋವನ ಆತ್ಮಿಕ ಜನಾಂಗದ ರಕ್ಷಣೆ ಖಂಡಿತವೆಂಬ ಆಶ್ವಾಸನೆಯನ್ನು ಅದು ಕೊಡುತ್ತದೆ.—ಗಲಾತ್ಯ 6:16.
ಯೆಹೋವನು ಮೌನವಾಗಿರನು
2. ಯೆಹೋವನು ಚೀಯೋನನ್ನು ಇನ್ನೊಮ್ಮೆ ಯಾವ ರೀತಿಯಲ್ಲಿ ಕಟಾಕ್ಷಿಸುತ್ತಾನೆ?
2 ಸಾ.ಶ.ಪೂ. 539ರಲ್ಲಿ ಬಾಬೆಲ್ ಪತನವಾಗುತ್ತದೆ. ಆ ಬಳಿಕ ಪಾರಸಿಯ ರಾಜನಾದ ಕೋರೆಷನು, ದೇವಭಯವುಳ್ಳ ಯೆಹೂದ್ಯರು ಯೆರೂಸಲೇಮಿಗೆ ಹಿಂದಿರುಗಿ ಯೆಹೋವನ ಆರಾಧನೆಯನ್ನು ಪುನಸ್ಸ್ಥಾಪಿಸಲು ಶಕ್ತರನ್ನಾಗಿ ಮಾಡಿದ ಒಂದು ಆಜ್ಞೆಯನ್ನು ಹೊರಡಿಸುತ್ತಾನೆ. (ಎಜ್ರ 1:2-4) ಸಾ.ಶ.ಪೂ. 537ರಲ್ಲಿ, ಪ್ರಥಮವಾಗಿ ಹಿಂದಿರುಗಿದ ಯೆಹೂದ್ಯರು ತಮ್ಮ ಸ್ವದೇಶವನ್ನು ತಲಪುತ್ತಾರೆ. ಯೆಹೋವನು ಇನ್ನೊಮ್ಮೆ ಯೆರೂಸಲೇಮನ್ನು ಕಟಾಕ್ಷಿಸುತ್ತಾನೆ. ಇದು ಆತನ ಈ ಪ್ರವಾದನ ಘೋಷಣೆಯ ಪ್ರೀತಿಭಾವದಲ್ಲಿ ತೋರಿಬರುತ್ತದೆ: “ಚೀಯೋನಿನ ಧರ್ಮವು ಪ್ರಕಾಶಗೊಳ್ಳುವ ತನಕ, ಯೆರೂಸಲೇಮಿನ ರಕ್ಷಣೆಯು ದೀವಿಟಿಗೆಯಂತೆ ಪ್ರಜ್ವಲಿಸುವ ವರೆಗೆ ನಾನು ಮೌನವಾಗಿರದೆ ಚೀಯೋನಿನ ಹಿತವನ್ನು ಲಕ್ಷಿಸುತ್ತಿರುವೆನು; ಸುಮ್ಮನಿರದೆ ಯೆರೂಸಲೇಮಿನ ಕ್ಷೇಮವನ್ನು ಚಿಂತಿಸುತ್ತಿರುವೆನು.”—ಯೆಶಾಯ 62:1.
3. (ಎ) ಭೂಮಿಯ ಮೇಲಿನ ಚೀಯೋನನ್ನು ಯೆಹೋವನು ಕೊನೆಯಲ್ಲಿ ತಿರಸ್ಕರಿಸುವುದೇಕೆ, ಮತ್ತು ಆಕೆಯ ಸ್ಥಾನದಲ್ಲಿ ಯಾರನ್ನು ಭರ್ತಿಮಾಡಲಾಯಿತು? (ಬಿ) ಯಾವ ಧರ್ಮಭ್ರಷ್ಟತೆಯುಂಟಾಗುತ್ತದೆ ಮತ್ತು ಯಾವಾಗ ಹಾಗೂ ನಾವಿಂದು ಯಾವ ಸಮಯದಲ್ಲಿ ಜೀವಿಸುತ್ತಿದ್ದೇವೆ?
3 ಸಾ.ಶ.ಪೂ. 537ರಲ್ಲಿ ಚೀಯೋನ್ ಇಲ್ಲವೆ ಯೆರೂಸಲೇಮನ್ನು ಪುನಸ್ಸ್ಥಾಪಿಸುವ ತನ್ನ ವಾಗ್ದಾನವನ್ನು ಯೆಹೋವನು ನೆರವೇರಿಸಿದನು. ಆಕೆಯ ನಿವಾಸಿಗಳು ಆತನಿಂದ ಬಂದ ರಕ್ಷಣೆಯನ್ನು ಅನುಭವಿಸಿದರು ಮತ್ತು ಅವರ ನೀತಿಯು ಉಜ್ವಲವಾಗಿ ಪ್ರಕಾಶಿಸಿತು. ಆದರೆ ತರುವಾಯ ಅವರು ಇನ್ನೊಮ್ಮೆ ಶುದ್ಧಾರಾಧನೆಯಿಂದ ದೂರಹೋದರು. ಕಟ್ಟಕಡೆಗೆ ಅವರು ಮೆಸ್ಸೀಯನಾದ ಯೇಸುವನ್ನು ತಿರಸ್ಕರಿಸಿದಾಗ, ಯೆಹೋವನು ಕೊನೆಯಲ್ಲಿ ಅವರನ್ನು ತನ್ನ ಆಯ್ದುಕೊಂಡ ಜನರೋಪಾದಿ ತ್ಯಜಿಸಿದನು. (ಮತ್ತಾಯ 21:43; 23:38; ಯೋಹಾನ 1:9-13) ಆದರೆ ಯೆಹೋವ ದೇವರು ಒಂದು ಹೊಸ ಜನಾಂಗವನ್ನು, ‘ದೇವರ ಇಸ್ರಾಯೇಲನ್ನು’ ಹುಟ್ಟಿಸಿದನು. ಈ ಹೊಸ ಜನಾಂಗವು ಆತನ ಸ್ವಕೀಯ ಜನವಾಯಿತು ಮತ್ತು ಒಂದನೆಯ ಶತಮಾನದಲ್ಲಿ ಅದರ ಸದಸ್ಯರು ಆಗ ಜ್ಞಾತವಾಗಿದ್ದ ಲೋಕದಲ್ಲೆಲ್ಲ ಸುವಾರ್ತೆಯನ್ನು ಹುರುಪಿನಿಂದ ಸಾರಿದರು. (ಗಲಾತ್ಯ 6:16; ಕೊಲೊಸ್ಸೆ 1:23) ಆದರೆ ಅಸಂತೋಷಕರವಾಗಿ, ಅಪೊಸ್ತಲರ ಮರಣಾನಂತರ ಸತ್ಯ ಧರ್ಮದಿಂದ ಕೆಲವರು ಧರ್ಮಭ್ರಷ್ಟರಾದರು. ಇದರ ಫಲವಾಗಿ, ಕ್ರೈಸ್ತಪ್ರಪಂಚದಲ್ಲಿ ಇಂದು ಕಂಡುಬರುವ ಕ್ರೈಸ್ತತ್ವದ ಧರ್ಮಭ್ರಷ್ಟ ರೂಪವೊಂದು ಬೆಳೆದು ಬಂತು. (ಮತ್ತಾಯ 13:24-30, 36-43; ಅ. ಕೃತ್ಯಗಳು 20:29, 30) ಶತಮಾನಗಳಿಂದ, ಕ್ರೈಸ್ತಪ್ರಪಂಚವು ಯೆಹೋವನ ನಾಮದ ಮೇಲೆ ಮಹಾ ಕಳಂಕವನ್ನು ತರುವಂತೆ ಅನುಮತಿಸಲ್ಪಟ್ಟಿತ್ತು. ಆದರೆ ಕೊನೆಯದಾಗಿ, 1914ರಲ್ಲಿ, ಯೆಶಾಯನ ಪ್ರವಾದನೆಯ ಈ ಭಾಗದ ಪ್ರಧಾನ ನೆರವೇರಿಕೆಯೊಂದಿಗೆ, ಯೆಹೋವನ “ಶುಭವರುಷ”ವು ಆರಂಭಗೊಂಡಿತು.—ಯೆಶಾಯ 61:2.
4, 5. (ಎ) ಚೀಯೋನ್ ಮತ್ತು ಆಕೆಯ ಮಕ್ಕಳು ಇಂದು ಯಾರನ್ನು ಸೂಚಿಸುತ್ತಾರೆ? (ಬಿ) ಚೀಯೋನಿನ “ರಕ್ಷಣೆಯು ದೀವಿಟಿಗೆಯಂತೆ ಪ್ರಜ್ವಲಿಸ”ಲು ಯೆಹೋವನು ಆಕೆಯನ್ನು ಯಾವ ವಿಧದಲ್ಲಿ ಉಪಯೋಗಿಸಿದ್ದಾನೆ?
4 ಚೀಯೋನನ್ನು ಪುನಸ್ಸ್ಥಾಪಿಸುವ ಯೆಹೋವನ ವಾಗ್ದಾನವು, ಇಂದು ಆತನ ಸ್ವರ್ಗೀಯ ಸಂಸ್ಥೆಯಾದ “ಮೇಲಣ ಯೆರೂಸಲೇಮ್”ನಲ್ಲಿ ನೆರವೇರಿದೆ. ಭೂಮಿಯ ಮೇಲೆ ಆಕೆಯ ಮಕ್ಕಳಾದ ಆತ್ಮಾಭಿಷಿಕ್ತ ಕ್ರೈಸ್ತರು ಅವಳನ್ನು ಪ್ರತಿನಿಧಿಸುತ್ತಾರೆ. (ಗಲಾತ್ಯ 4:26) ಯೆಹೋವನ ಸ್ವರ್ಗೀಯ ಸಂಸ್ಥೆಯು ಮನಃಪೂರ್ವಕವಾದ ಸಹಾಯಕಳೋಪಾದಿ, ಅಂದರೆ ಜಾಗರೂಕಳೂ, ಪ್ರೀತಿಸುವವಳೂ, ಉದ್ಯೋಗಶೀಲೆಯೂ ಆಗಿ ಸೇವೆ ಸಲ್ಲಿಸುತ್ತಾಳೆ. 1914ರಲ್ಲಿ ಆಕೆ ಮೆಸ್ಸೀಯನ ರಾಜ್ಯವನ್ನು ಹೆತ್ತಾಗ ಅದೆಷ್ಟು ರೋಮಾಂಚಕ ಸಂದರ್ಭವಾಗಿತ್ತು! (ಪ್ರಕಟನೆ 12:1-5) ವಿಶೇಷವಾಗಿ 1919ರಿಂದ, ಭೂಮಿಯ ಮೇಲಿರುವ ಆಕೆಯ ಮಕ್ಕಳು ಆಕೆಯ ನೀತಿನಿಷ್ಠೆ ಮತ್ತು ರಕ್ಷಣೆಯ ಕುರಿತು ಜನಾಂಗಗಳಿಗೆ ಸಾರಿದ್ದಾರೆ. ಯೆಶಾಯನು ಮುಂತಿಳಿಸಿದಂತೆ ಈ ಮಕ್ಕಳು ತಮ್ಮ ಬೆಳಕನ್ನು ಪ್ರಕಾಶಿಸಿ, ದೀವಿಟಿಗೆಯಂತೆ ಕತ್ತಲೆಯನ್ನು ಬೆಳಗಿಸಿದ್ದಾರೆ.—ಮತ್ತಾಯ 5:15, 16; ಫಿಲಿಪ್ಪಿ 2:15.
5 ಯೆಹೋವನಿಗೆ ಆತನ ಆರಾಧಕರಲ್ಲಿ ಅತ್ಯಾಸಕ್ತಿಯಿರುವುದರಿಂದ, ಆತನು ಚೀಯೋನಿಗೂ ಆಕೆಯ ಮಕ್ಕಳಿಗೂ ಮಾಡಿರುವ ಸಕಲ ವಾಗ್ದಾನಗಳನ್ನು ನೆರವೇರಿಸಿದ ಹೊರತು ವಿಶ್ರಮಿಸನು ಇಲ್ಲವೆ ಮೌನವಾಗಿರನು. ಅಭಿಷಿಕ್ತರಲ್ಲಿ ಉಳಿದವರು ಮತ್ತು ಅವರ ಸಂಗಡಿಗರಾದ “ಬೇರೆ ಕುರಿ”ಗಳು ಸಹ ಮೌನವಾಗಿರಲು ನಿರಾಕರಿಸುತ್ತಾರೆ. (ಯೋಹಾನ 10:16) ಅವರು ರಕ್ಷಣೆಯ ಏಕಮಾತ್ರ ಮಾರ್ಗವನ್ನು ಜನರಿಗೆ ತೋರಿಸುವಾಗ ಗಿಜಿಗುಟ್ಟುತ್ತಾರೆಂಬ ಮಾತು ನಿಜ.—ರೋಮಾಪುರ 10:10.
ಯೆಹೋವನು ಕೊಡುವ “ಹೊಸ ಹೆಸರು”
6. ಚೀಯೋನಿನ ವಿಷಯದಲ್ಲಿ ಯೆಹೋವನಿಗಿರುವ ಉದ್ದೇಶವೇನು?
6 ಪುರಾತನ ಕಾಲದ ಯೆರೂಸಲೇಮಿನಿಂದ ಪ್ರತಿನಿಧಿಸಲ್ಪಟ್ಟಿರುವ ಚೀಯೋನ್ ಅಂದರೆ ಯೆಹೋವನ ಸ್ವರ್ಗೀಯ “ಸ್ತ್ರೀ”ಯ ವಿಷಯದಲ್ಲಿ ಆತನ ಉದ್ದೇಶವೇನು? ಆತನು ಹೇಳುವುದು: “ಜನಾಂಗಗಳು ನಿನ್ನ ಧರ್ಮವನ್ನು, ಸಕಲರಾಜರು ನಿನ್ನ ವೈಭವವನ್ನು ನೋಡುವರು; ಯೆಹೋವನ ಬಾಯಿ ನೇಮಿಸಿದ ಹೊಸ ಹೆಸರು ನಿನಗೆ ದೊರೆಯುವದು.” (ಯೆಶಾಯ 62:2) ಇಸ್ರಾಯೇಲ್ಯರು ನೀತಿಯಿಂದ ವರ್ತಿಸುವಾಗ, ಜನಾಂಗಗಳು ಅವರಿಗೆ ಗಮನಕೊಡುವಂತೆ ಒತ್ತಾಯಿಸಲ್ಪಡುತ್ತಾರೆ. ಅರಸರು ಸಹ, ಯೆಹೋವನು ಯೆರೂಸಲೇಮನ್ನು ಉಪಯೋಗಿಸುತ್ತಾನೆಂಬುದನ್ನು ಮತ್ತು ಯೆಹೋವನ ರಾಜ್ಯಕ್ಕೆ ಹೋಲಿಸುವಾಗ ತಾವು ನಡೆಸುವ ಯಾವುದೇ ಆಳ್ವಿಕೆಯು ಕ್ಷುಲ್ಲಕವೆಂಬುದನ್ನೂ ಒಪ್ಪಿಕೊಳ್ಳುವಂತೆ ನಿರ್ಬಂಧಿಸಲ್ಪಡುವರು.—ಯೆಶಾಯ 49:23.
7. ಚೀಯೋನಿನ ಹೊಸ ಹೆಸರು ಏನನ್ನು ಸೂಚಿಸುತ್ತದೆ?
7 ಯೆಹೋವನು ಈಗ ಚೀಯೋನಿಗೆ ಒಂದು ಹೊಸ ಹೆಸರನ್ನು ಕೊಡುವ ಮೂಲಕ ಆಕೆಯ ಬದಲಾದ ಸ್ಥಿತಿಯನ್ನು ದೃಢಪಡಿಸುತ್ತಾನೆ. ಆ ಹೊಸ ಹೆಸರು, ಭೂಮಿಯ ಮೇಲಿರುವ ಚೀಯೋನಿನ ಮಕ್ಕಳು ಸಾ.ಶ.ಪೂ. 537ರಿಂದ ಮೊದಲ್ಗೊಂಡು ಅನುಭವಿಸುವ ಆಶೀರ್ವದಿತ ಸ್ಥಿತಿ ಮತ್ತು ಘನತೆಯ ಸ್ಥಾನವನ್ನು ಸೂಚಿಸುತ್ತದೆ. a ಚೀಯೋನು ತನಗೆ ಸೇರಿದವಳು ಎಂಬುದನ್ನು ಯೆಹೋವನು ಒಪ್ಪಿಕೊಳ್ಳುತ್ತಾನೆಂದು ಅದು ತೋರಿಸುತ್ತದೆ. ಇಂದು ಇದೇ ವಿಧದಲ್ಲಿ ದೇವರ ಇಸ್ರಾಯೇಲಿನವರು ಯೆಹೋವನ ಸಂತೋಷಕ್ಕೆ ಪಾತ್ರರಾಗಿರುವುದರಿಂದ ರೋಮಾಂಚಿತರಾಗಿದ್ದಾರೆ ಮತ್ತು ಬೇರೆ ಕುರಿಗಳೂ ಅವರೊಂದಿಗೆ ಸಂತೋಷಿಸುತ್ತಾರೆ.
8. ಯೆಹೋವನು ಚೀಯೋನನ್ನು ಯಾವ ವಿಧಗಳಲ್ಲಿ ಸನ್ಮಾನಿಸಿದ್ದಾನೆ?
8 ಚೀಯೋನಿಗೆ ಹೊಸ ಹೆಸರನ್ನು ಕೊಟ್ಟ ನಂತರ, ಯೆಹೋವನು ಈಗ ಹೀಗೆ ವಾಗ್ದಾನ ಮಾಡುತ್ತಾನೆ: “ನೀನು ಯೆಹೋವನ ಕೈಯಲ್ಲಿ ಸುಂದರಕಿರೀಟವಾಗಿಯೂ ನಿನ್ನ ದೇವರ ಹಸ್ತದಲ್ಲಿ ರಾಜಶಿರೋವೇಷ್ಟನವಾಗಿಯೂ ಇರುವಿ.” (ಯೆಶಾಯ 62:3) ಯೆಹೋವನು ತನ್ನ ಸಾಂಕೇತಿಕ ಪತ್ನಿಯಾದ ಸ್ವರ್ಗೀಯ ಯೆರೂಸಲೇಮನ್ನು ಜನರು ಶ್ಲಾಘಿಸುವಂತೆ ಎತ್ತಿಹಿಡಿಯುತ್ತಾನೆ. (ಕೀರ್ತನೆ 48:2; 50:2) ಸುಂದರಕಿರೀಟ ಮತ್ತು “ರಾಜಶಿರೋವೇಷ್ಟನ”ಗಳು, ಆಕೆ ಸನ್ಮಾನ ಮತ್ತು ಅಧಿಕಾರದಿಂದ ಭೂಷಿತಳಾಗಿದ್ದಾಳೆಂದು ಸೂಚಿಸುತ್ತವೆ. (ಜೆಕರ್ಯ 9:16) ಸ್ವರ್ಗೀಯ ಚೀಯೋನ್ ಅಥವಾ “ಮೇಲಣ ಯೆರೂಸಲೇಮ್” ಅನ್ನು ಪ್ರತಿನಿಧಿಸುವ ದೇವರ ಇಸ್ರಾಯೇಲ್, ಕಾರ್ಯನಡೆಸುತ್ತಿರುವ ದೇವರ ಹಸ್ತದ ಅಂದರೆ ಪ್ರಯೋಗಿತ ಶಕ್ತಿಯ ಗಮನಾರ್ಹವಾದ ಫಲಿತಾಂಶವಾಗಿದೆ. (ಗಲಾತ್ಯ 4:26) ಯೆಹೋವನ ಸಹಾಯದಿಂದ, ಆ ಆತ್ಮಿಕ ಜನಾಂಗವು ಸಮಗ್ರತೆ ಮತ್ತು ಪೂರ್ಣ ಭಕ್ತಿಯ ವಿಷಯದಲ್ಲಿ ಒಂದು ಎದ್ದುಕಾಣುವ ದಾಖಲೆಯನ್ನು ಸ್ಥಾಪಿಸಿದೆ. ಅಭಿಷಿಕ್ತರು ಮತ್ತು ಬೇರೆ ಕುರಿಗಳು ಸೇರಿರುವ ದಶಲಕ್ಷಾಂತರ ಮಂದಿ, ತಮ್ಮ ಎದ್ದುಕಾಣುವ ನಂಬಿಕೆ ಮತ್ತು ಪ್ರೀತಿಯನ್ನು ತೋರಿಸಲು ಬಲಗೊಳಿಸಲ್ಪಟ್ಟಿದ್ದಾರೆ. ಕ್ರಿಸ್ತನ ಸಹಸ್ರ ವರ್ಷದಾಳಿಕೆಯಲ್ಲಿ, ತಮ್ಮ ಮಹಿಮಾಭರಿತ ಸ್ವರ್ಗೀಯ ಪ್ರತಿಫಲವನ್ನು ಪಡೆದಿರುವ ಅಭಿಷಿಕ್ತರು, ನರಳಾಡುತ್ತಿರುವ ಸೃಷ್ಟಿಯನ್ನು ನಿತ್ಯಜೀವಕ್ಕೆ ಎತ್ತುವುದರಲ್ಲಿ ಯೆಹೋವನ ಹಸ್ತದ ಸಾಧನಗಳಾಗಿರುವರು.—ರೋಮಾಪುರ 8:21, 22; ಪ್ರಕಟನೆ 22:2.
“ಯೆಹೋವನು ನಿನ್ನಲ್ಲಿ ಉಲ್ಲಾಸಗೊಳ್ಳುತ್ತಾನೆ”
9. ಚೀಯೋನಿನ ಪರಿವರ್ತನೆಯನ್ನು ವರ್ಣಿಸಿ.
9 ಈ ಹೊಸ ನಾಮಕರಣವು, ಭೂಮಿಯ ಮೇಲಿನ ಮಕ್ಕಳಿಂದ ಪ್ರತಿನಿಧಿಸಲ್ಪಟ್ಟ ಸ್ವರ್ಗೀಯ ಚೀಯೋನಿಗಾಗಿರುವ ಉಲ್ಲಾಸಕರ ಪರಿವರ್ತನೆಯ ಭಾಗವಾಗಿದೆ. ನಾವು ಓದುವುದು: “ನೀನು ಇನ್ನು ಮೇಲೆ ಗಂಡಬಿಟ್ಟವಳು ಎನಿಸಿಕೊಳ್ಳೆ, ನಿನ್ನ ಸೀಮೆಗೆ ಬಂಜೆ ಎಂಬ ಹೆಸರು ಇನ್ನಿರದು; ನೀನು ಎನ್ನುಲ್ಲಾಸಿನಿ ಎನಿಸಿಕೊಳ್ಳುವಿ, ನಿನ್ನ ಸೀಮೆಗೆ ವಿವಾಹಿತೆ ಎಂಬ ಹೆಸರಾಗುವದು; ಏಕಂದರೆ ಯೆಹೋವನು ನಿನ್ನಲ್ಲಿ ಉಲ್ಲಾಸಗೊಳ್ಳುತ್ತಾನೆ, ನಿನ್ನ ಸೀಮೆಗೆ [“ದೇಶಕ್ಕೆ,” NW] ವಿವಾಹವಾಗುವದು.” (ಯೆಶಾಯ 62:4) ಸಾ.ಶ.ಪೂ. 607ರಲ್ಲಿ ನಾಶಗೊಂಡಂದಿನಿಂದ ಭೂಮಿಯ ಮೇಲಿನ ಚೀಯೋನು ಹಾಳುಬಿದ್ದಿದೆ. ಆದರೆ ಯೆಹೋವನ ಮಾತುಗಳು, ಆಕೆಯ ಪುನಸ್ಸ್ಥಾಪನೆಯನ್ನು ಮತ್ತು ಆಕೆಯ ದೇಶವು ಪುನಃ ಜನಭರಿತವಾಗುವುದೆಂಬ ಆಶ್ವಾಸನೆಯನ್ನು ನೀಡುತ್ತವೆ. ಒಮ್ಮೆ ಹಾಳು ಬಿದ್ದಿದ್ದ ಚೀಯೋನು ಇನ್ನು ಮೇಲೆ ಪೂರ್ತಿಯಾಗಿ ತ್ಯಜಿಸಲ್ಪಟ್ಟಿರುವ ಸ್ತ್ರೀಯಾಗಿರಳು ಮತ್ತು ಆಕೆಯ ದೇಶವು ಇನ್ನು ಮುಂದೆ ಹಾಳು ಬಿದ್ದಿರದು. ಸಾ.ಶ.ಪೂ. 537ರಲ್ಲಾಗುವ ಯೆರೂಸಲೇಮಿನ ಜೀರ್ಣೋದ್ಧಾರವು, ಆಕೆಯ ಹಿಂದಿನ ಧ್ವಂಸಕರ ಸ್ಥಿತಿಗೆ ಪೂರ್ತಿಯಾಗಿ ವ್ಯತಿರಿಕ್ತವಾದ ಹೊಸ ಸ್ಥಿತಿಯಾಗಿರುವುದು. ಚೀಯೋನು “ಎನ್ನುಲ್ಲಾಸಿನಿ” ಎಂದೂ ಆಕೆಯ ದೇಶವು “ವಿವಾಹಿತೆ” ಎಂದೂ ಕರೆಯಲ್ಪಡುತ್ತಾಳೆಂದು ಯೆಹೋವನು ಹೇಳುತ್ತಾನೆ.—ಯೆಶಾಯ 54:1, 5, 6; 66:8; ಯೆರೆಮೀಯ 23:5-8; 30:17; ಗಲಾತ್ಯ 4:27-31.
10. (ಎ) ದೇವರ ಇಸ್ರಾಯೇಲ್ ಹೇಗೆ ಪರಿವರ್ತಿಸಲ್ಪಟ್ಟಿತು? (ಬಿ) ದೇವರ ಇಸ್ರಾಯೇಲಿನ “ದೇಶ” ಎಂದರೇನು?
10 ಇದೇ ರೀತಿಯ ಬದಲಾವಣೆಯನ್ನು ದೇವರ ಇಸ್ರಾಯೇಲು 1919ರಿಂದ ಅನುಭವಿಸತೊಡಗಿತು. ಒಂದನೆಯ ಲೋಕ ಯುದ್ಧದ ಸಮಯದಲ್ಲಿ ಅಭಿಷಿಕ್ತ ಕ್ರೈಸ್ತರನ್ನು ದೇವರು ತ್ಯಜಿಸಿದ್ದಾನೆಂಬಂತೆ ತೋರುತ್ತಿತ್ತು. ಆದರೆ 1919ರಲ್ಲಿ ಅವರ ಅನುಗ್ರಹಭರಿತ ಸ್ಥಾನವನ್ನು ಅವರಿಗೆ ಹಿಂದಿರುಗಿಸಲಾಯಿತು ಮತ್ತು ಅವರ ಆರಾಧನಾ ರೀತಿಯು ಶುದ್ಧೀಕರಿಸಲ್ಪಟ್ಟಿತು. ಇದು ಅವರ ಬೋಧನೆಗಳು, ಅವರ ಸಂಸ್ಥೆ ಮತ್ತು ಅವರ ಚಟುವಟಿಕೆಯ ಮೇಲೆ ಪ್ರಭಾವಬೀರಿತು. ದೇವರ ಇಸ್ರಾಯೇಲ್ ಅದರ “ದೇಶ”ಕ್ಕೆ, ಅದರ ಆತ್ಮಿಕ ಸ್ಥಿತಿಗೆ ಅಥವಾ ಚಟುವಟಿಕೆಯ ಕ್ಷೇತ್ರಕ್ಕೆ ಬಂತು.—ಯೆಶಾಯ 66:7, 8, 20-22, NW.
11. ಯೆಹೂದ್ಯರು ತಮ್ಮ ತಾಯಿಯನ್ನು ವರಿಸುವುದು ಹೇಗೆ?
11 ತನ್ನ ಜನರ ಹೊಸ, ಅನುಗ್ರಹಭರಿತ ಸ್ಥಾನವನ್ನು ಇನ್ನೂ ಒತ್ತಿಹೇಳುತ್ತ ಯೆಹೋವನು ನುಡಿಯುವುದು: “ಯುವಕನು ಯುವತಿಯನ್ನು ವರಿಸುವಂತೆ ನಿನ್ನ ಮಕ್ಕಳು [“ಪುತ್ರರು,” NW] ನಿನ್ನನ್ನು ವರಿಸುವರು; ವರನು ವಧುವಿನಲ್ಲಿ ಆನಂದಿಸುವ ಹಾಗೆ ನಿನ್ನ ದೇವರು ನಿನ್ನಲ್ಲಿ ಆನಂದಿಸುವನು.” (ಯೆಶಾಯ 62:5) ಆದರೆ, ಚೀಯೋನಿನ ‘ಪುತ್ರರಾದ’ ಯೆಹೂದ್ಯರು ತಮ್ಮ ತಾಯಿಯನ್ನು ವರಿಸುವುದು ಹೇಗೆ? ಹೇಗೆಂದರೆ, ಬಾಬೆಲಿನ ದೇಶಭ್ರಷ್ಟತೆಯಿಂದ ಬಿಡುಗಡೆಹೊಂದಿ ಹಿಂದಿರುಗಿ ಬರುತ್ತಿರುವ ಚೀಯೋನಿನ ಪುತ್ರರು, ತಮ್ಮ ಹಳೆಯ ರಾಜಧಾನಿಯನ್ನು ಸ್ವಾಧೀನಪಡಿಸಿಕೊಂಡು ಅಲ್ಲಿ ಪುನಃ ನೆಲೆಸುವರು. ಅದು ಸಂಭವಿಸುವಾಗ, ಚೀಯೋನ್ ಆ ಬಳಿಕ ನಿರ್ಜನವಾಗಿ ಬಿದ್ದಿರದೆ ಪುತ್ರರಿಂದ ತುಂಬಿರುವಳು.—ಯೆರೆಮೀಯ 3:14.
12. (ಎ) ಅಭಿಷಿಕ್ತ ಕ್ರೈಸ್ತರು ತನಗೆ ವಿವಾಹದಲ್ಲಿ ಜೋಡಿಸಲ್ಪಟ್ಟಿರುವ ಸಂಸ್ಥೆಯ ಭಾಗವಾಗಿದ್ದಾರೆಂದು ಯೆಹೋವನು ಯಾವ ವಿಧದಲ್ಲಿ ಸ್ಪಷ್ಟಪಡಿಸಿದ್ದಾನೆ? (ಬಿ) ಯೆಹೋವನು ತನ್ನ ಜನರೊಂದಿಗೆ ವ್ಯವಹರಿಸುವ ರೀತಿಯು ಇಂದು ಹೇಗೆ ವಿವಾಹಕ್ಕೊಂದು ಉದಾತ್ತ ಮಾದರಿಯನ್ನು ಒದಗಿಸುತ್ತದೆ? (342ನೆಯ ಪುಟದಲ್ಲಿರುವ ರೇಖಾಚೌಕವನ್ನು ನೋಡಿ.)
12 ಇದಕ್ಕೆ ಅನುರೂಪವಾಗಿ, 1919ರಿಂದ ಹಿಡಿದು ಸ್ವರ್ಗೀಯ ಚೀಯೋನಿನ ಮಕ್ಕಳು ತಮ್ಮ ದೇಶವನ್ನು ಅಂದರೆ ಅವರ ಆತ್ಮಿಕ ಸ್ಥಿತಿಯನ್ನು, ಯಾವುದಕ್ಕೆ “ವಿವಾಹಿತೆ” ಎಂಬ ಪ್ರವಾದನ ನಾಮವಿದೆಯೊ ಅದನ್ನು ವಶಪಡಿಸಿಕೊಂಡರು. ಆ ದೇಶದಲ್ಲಿ ಅವರು ನಡೆಸಿರುವ ಕ್ರಿಸ್ತೀಯ ಚಟುವಟಿಕೆಯು, ಈ ಅಭಿಷಿಕ್ತ ಕ್ರೈಸ್ತರು “[ಯೆಹೋವನ] ಹೆಸರಿಗಾಗಿ . . . ಒಂದು ಪ್ರಜೆ”ಯಾಗಿದ್ದಾರೆಂಬುದನ್ನು ತೋರಿಸಿಕೊಟ್ಟಿತು. (ಅ. ಕೃತ್ಯಗಳು 15:14) ಅವರು ರಾಜ್ಯದ ಫಲಗಳನ್ನು ಉತ್ಪಾದಿಸಿ, ಯೆಹೋವನ ನಾಮವನ್ನು ಪ್ರಕಟಿಸಿರುವ ವಿಷಯವು, ಯೆಹೋವನು ಈ ಕ್ರೈಸ್ತರಲ್ಲಿ ಸಂತೋಷಿಸುತ್ತಾನೆಂಬುದನ್ನು ಸ್ಪಷ್ಟಪಡಿಸುತ್ತದೆ. ಇವರು ಮುರಿಯಲಾಗದಂಥ ಐಕ್ಯದಲ್ಲಿ ತನ್ನೊಂದಿಗೆ ಜೋಡಿಸಲ್ಪಟ್ಟಿರುವ ಸಂಸ್ಥೆಯ ಭಾಗವಾಗಿದ್ದಾರೆಂಬುದನ್ನು ಆತನು ಸ್ಪಷ್ಟಪಡಿಸಿದ್ದಾನೆ. ಈ ಕ್ರೈಸ್ತರನ್ನು ಪವಿತ್ರಾತ್ಮದಿಂದ ಅಭಿಷೇಕಿಸಿ, ಆತ್ಮಿಕ ಬಂಧನದಿಂದ ಅವರನ್ನು ಬಿಡಿಸಿ, ಅವರು ರಾಜ್ಯದ ನಿರೀಕ್ಷೆಯನ್ನು ಎಲ್ಲಾ ಮಾನವರಿಗೆ ಸಾರುವಂತೆ ಉಪಯೋಗಿಸುವ ಮೂಲಕ, ವರನು ವಧುವಿನಲ್ಲಿ ಆನಂದಿಸುವಂತೆ ತಾನು ಅವರಲ್ಲಿ ಆನಂದಿಸುತ್ತೇನೆಂಬುದನ್ನು ಯೆಹೋವನು ಪ್ರದರ್ಶಿಸಿದ್ದಾನೆ.—ಯೆರೆಮೀಯ 32:41.
“ನಿಮಗೆ ವಿರಾಮವಿಲ್ಲದಿರಲಿ”
13, 14. (ಎ) ಯೆರೂಸಲೇಮು ಪುರಾತನ ಕಾಲದಲ್ಲಿ ಸುರಕ್ಷೆಯನ್ನು ಒದಗಿಸುವ ಪಟ್ಟಣವಾದದ್ದು ಹೇಗೆ? (ಬಿ) ಆಧುನಿಕ ಸಮಯಗಳಲ್ಲಿ, ಚೀಯೋನು “ಭೂಮಿಯಲ್ಲಿ ಸ್ತುತಿಯಾಗಿ” ಪರಿಣಮಿಸಿರುವುದು ಹೇಗೆ?
13 ಯೆಹೋವನು ಕೊಟ್ಟಿರುವ ಸಾಂಕೇತಿಕ ಹೊಸ ಹೆಸರು ಆತನ ಜನರಿಗೆ ಸುರಕ್ಷತೆಯ ಅನಿಸಿಕೆಯನ್ನು ಉಂಟುಮಾಡುತ್ತದೆ. ಆತನು ತಮ್ಮನ್ನು ಅಂಗೀಕರಿಸುತ್ತಾನೆಂದೂ, ತಾವು ಆತನ ಸ್ವತ್ತೆಂಬುದೂ ಅವರಿಗೆ ತಿಳಿದಿದೆ. ಈಗ ಇನ್ನೊಂದು ಸಾಮ್ಯವನ್ನು ಉಪಯೋಗಿಸುತ್ತ, ಯೆಹೋವನು ಪೌಳಿಗೋಡೆಗಳ ಪಟ್ಟಣಕ್ಕೆ ಮಾತಾಡುತ್ತಿದ್ದಾನೊ ಎಂಬಂತೆ ತನ್ನ ಜನರೊಂದಿಗೆ ಹೀಗೆ ಮಾತಾಡುತ್ತಾನೆ: “ಯೆರೂಸಲೇಮೇ, ನಾನು ನಿನ್ನ ಪೌಳಿಗೋಡೆಗಳಲ್ಲಿ ಕಾವಲುಗಾರರನ್ನು ನೇಮಿಸಿದ್ದೇನೆ; ಅವರು ಹಗಲೂ ಇರುಳೂ ಮೌನವಾಗಿರರು. ಯೆಹೋವನಿಗೆ ಜ್ಞಾಪಿಸುವವರೇ, ಆತನು ಯೆರೂಸಲೇಮನ್ನು ಭದ್ರಪಡಿಸಿ ಲೋಕಪ್ರಸಿದ್ಧಿಗೆ ತರುವ [“ಭೂಮಿಯಲ್ಲಿ ಸ್ತುತಿಯಾಗಿ ಸ್ಥಾಪಿಸುವ,” NW] ತನಕ ನಿಮಗೆ ವಿರಾಮವಿಲ್ಲದಿರಲಿ, ಆತನಿಗೂ ವಿರಾಮಕೊಡದಿರಿ.” (ಯೆಶಾಯ 62:6, 7) ನಂಬಿಗಸ್ತ ಉಳಿಕೆಯವರು ಬಾಬೆಲಿನಿಂದ ಹಿಂದಿರುಗಿದ ಬಳಿಕ, ಯೆಹೋವನ ತಕ್ಕ ಸಮಯದಲ್ಲಿ ಯೆರೂಸಲೇಮು ನಿಜವಾಗಿಯೂ “ಭೂಮಿಯಲ್ಲಿ ಸ್ತುತಿಯಾಗಿ”ಬಿಡುತ್ತದೆ, ಅಂದರೆ ತನ್ನ ನಿವಾಸಿಗಳಿಗೆ ಭದ್ರತೆಯನ್ನೊದಗಿಸುವ ಗೋಡೆಗಳ ಪಟ್ಟಣವಾಗಿ ಪರಿಣಮಿಸುತ್ತದೆ. ಆ ಗೋಡೆಗಳ ಮೇಲಿರುವ ಕಾವಲುಗಾರರು ಹಗಲಿರುಳೂ ಆ ನಗರಕ್ಕೆ ಭದ್ರತೆಯನ್ನು ನೀಡಲು ಮತ್ತು ಅದರ ಪ್ರಜೆಗಳಿಗೆ ಎಚ್ಚರಿಕೆಯ ಸಂದೇಶಗಳನ್ನು ಪ್ರಸಾರಮಾಡಲು ಎಚ್ಚರದಿಂದಿರುತ್ತಾರೆ.—ನೆಹೆಮೀಯ 6:15; 7:3; ಯೆಶಾಯ 52:8.
14 ಈ ಆಧುನಿಕ ಕಾಲಗಳಲ್ಲಿ, ದೀನರಿಗೆ ಸುಳ್ಳು ಧರ್ಮದ ಬಂಧನದಿಂದ ಬಿಡುಗಡೆಯಾಗುವ ದಾರಿಯನ್ನು ತೋರಿಸುವಂತೆ ಯೆಹೋವನು ತನ್ನ ಅಭಿಷಿಕ್ತ ಕಾವಲುಗಾರರನ್ನು ಉಪಯೋಗಿಸಿದ್ದಾನೆ. ಈ ದೀನರು ಆತನ ಸಂಸ್ಥೆಯೊಳಗೆ ಬರುವಂತೆ ಕರೆಯಲ್ಪಟ್ಟಿದ್ದಾರೆ. ಅಲ್ಲಿ ಅವರು ಆತ್ಮಿಕ ಮಾಲಿನ್ಯ, ದುಷ್ಪ್ರಭಾವಗಳು, ಮತ್ತು ಯೆಹೋವನ ಕೋಪದಿಂದ ಸುರಕ್ಷೆಯನ್ನು ಪಡೆಯುತ್ತಾರೆ. (ಯೆರೆಮೀಯ 33:9; ಚೆಫನ್ಯ 3:19) ಇಂತಹ ಸುರಕ್ಷೆಗೆ ಕಾವಲುಗಾರ ವರ್ಗವು ಅಂದರೆ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವಹಿಸುವ ಪಾತ್ರವು ಅತ್ಯಗತ್ಯವಾದದ್ದಾಗಿದೆ. ಈ ಆಳು ವರ್ಗವು “ಹೊತ್ತುಹೊತ್ತಿಗೆ” ಆತ್ಮಿಕ “ಆಹಾರ”ವನ್ನು ಒದಗಿಸುತ್ತದೆ. (ಮತ್ತಾಯ 24:45-47) ಈ ಕಾವಲುಗಾರ ವರ್ಗದೊಂದಿಗೆ ಕೆಲಸ ಮಾಡುವ “ಮಹಾ ಸಮೂಹ”ದವರೂ, ಚೀಯೋನನ್ನು “ಭೂಮಿಯಲ್ಲಿ ಸ್ತುತಿಯಾಗಿ” ಮಾಡುವ ಕೆಲಸದಲ್ಲಿ ವಿಶೇಷ ಪಾತ್ರವನ್ನು ವಹಿಸುತ್ತಾರೆ.—ಪ್ರಕಟನೆ 7:9.
15. ಕಾವಲುಗಾರ ವರ್ಗದವರೂ ಅವರ ಸಂಗಡಿಗರೂ ಯೆಹೋವನನ್ನು ಸತತವಾಗಿ ಸೇವಿಸುವುದು ಹೇಗೆ?
15 ಕಾವಲುಗಾರ ವರ್ಗದ ಮತ್ತು ಅವರ ಸಂಗಡಿಗರ ಸೇವೆಯು ಮುಂದುವರಿಯುತ್ತದೆ! ಇವರ ಪೂರ್ಣಪ್ರಾಣದ ಮನೋಭಾವವು, ಸಂಚಾರ ಮೇಲ್ವಿಚಾರಕರು ಮತ್ತು ಅವರ ಪತ್ನಿಯರು, ಯೆಹೋವನ ಸಾಕ್ಷಿಗಳ ವಿಭಿನ್ನ ಬೆತೆಲ್ ಗೃಹಗಳು ಮತ್ತು ಮುದ್ರಣಾಲಯಗಳಲ್ಲಿರುವ ಸ್ವಯಂಸೇವಕರು, ಮಿಷನೆರಿಗಳು ಮತ್ತು ಸ್ಪೆಷಲ್, ರೆಗ್ಯುಲರ್ ಹಾಗೂ ಆಕ್ಸಿಲಿಯರಿ ಪಯನೀಯರರಿಂದ ಬೆಂಬಲಿಸಲ್ಪಟ್ಟಿರುವ ದಶಲಕ್ಷಾಂತರ ಮಂದಿ ನಂಬಿಗಸ್ತ ವ್ಯಕ್ತಿಗಳ ಹುರುಪಿನ ಚಟುವಟಿಕೆಯಲ್ಲಿ ಕಂಡುಬರುತ್ತದೆ. ಇದಕ್ಕೆ ಕೂಡಿಸಿ, ಅವರು ಹೊಸ ರಾಜ್ಯ ಸಭಾಗೃಹಗಳನ್ನು ಕಟ್ಟುವುದರಲ್ಲಿ, ರೋಗಿಗಳನ್ನು ಭೇಟಿಮಾಡುವುದರಲ್ಲಿ, ಪಂಥಾಹ್ವಾನದಾಯಕ ವೈದ್ಯಕೀಯ ಪರಿಸ್ಥಿತಿಗಳನ್ನು ಎದುರಿಸುವವರಿಗೆ ಸಹಾಯ ಮಾಡುವುದರಲ್ಲಿ ಮತ್ತು ವಿಪತ್ತು ಹಾಗೂ ಅಪಘಾತಗಳಿಗೆ ಗುರಿಯಾದವರಿಗೆ ಸಮಯೋಚಿತವಾದ ಸಹಾಯವನ್ನು ಒದಗಿಸುವುದರಲ್ಲಿ ಕಷ್ಟಪಟ್ಟು ಕೆಲಸಮಾಡುತ್ತಾರೆ. ಇಂತಹ ಆತ್ಮತ್ಯಾಗಿ ವ್ಯಕ್ತಿಗಳಲ್ಲಿ ಅನೇಕರು ಅನೇಕವೇಳೆ ಅಕ್ಷರಾರ್ಥವಾಗಿ “ಹಗಲಿರುಳು” ದುಡಿಯುತ್ತಾರೆ!—ಪ್ರಕಟನೆ 7:14, 15.
16. ಯೆಹೋವನ ಸೇವಕರು ಆತನಿಗೆ ‘ವಿರಾಮಕೊಡದಿರುವುದು’ ಹೇಗೆ?
16 ಯೆಹೋವನ ಸೇವಕರು ಎಡೆಬಿಡದೆ ಪ್ರಾರ್ಥಿಸುವಂತೆ, ‘ನಿನ್ನ ರಾಜ್ಯವು ಬರಲಿ, ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿ ನೆರವೇರಲಿ’ ಎಂದು ದೇವರನ್ನು ಕೇಳಿಕೊಳ್ಳುವಂತೆ ಅವರನ್ನು ಪ್ರೋತ್ಸಾಹಿಸಲಾಗುತ್ತದೆ. (ಮತ್ತಾಯ 6:9, 10; 1 ಥೆಸಲೊನೀಕ 5:17) ಸತ್ಯಾರಾಧನೆಯ ಪುನಸ್ಸ್ಥಾಪನೆಯ ಕುರಿತಾದ ಆಶೆಗಳು ಮತ್ತು ನಿರೀಕ್ಷೆಗಳನ್ನು ಯೆಹೋವನು ಈಡೇರಿಸುವ ತನಕ “ಆತನಿಗೂ ವಿರಾಮಕೊಡದಿರಿ” ಎಂದು ಅವರನ್ನು ಉತ್ತೇಜಿಸಲಾಗಿದೆ. ಯೇಸು ತನ್ನ ಹಿಂಬಾಲಕರಿಗೆ ‘[ದೇವರಿಗೆ] ಹಗಲು ರಾತ್ರಿ ಮೊರೆಯಿಡಲು’ ಪ್ರೋತ್ಸಾಹಿಸುತ್ತಾ, ಸತತವಾಗಿ ಪ್ರಾರ್ಥಿಸುವ ಆವಶ್ಯಕತೆಯನ್ನು ಒತ್ತಿಹೇಳಿದನು.—ಲೂಕ 18:1-8.
ದೇವರ ಸೇವೆಗೆ ಪ್ರತಿಫಲವಿರುವುದು
17, 18. (ಎ) ಚೀಯೋನಿನ ನಿವಾಸಿಗಳು ಯಾವ ವಿಧದಲ್ಲಿ ತಮ್ಮ ಕೆಲಸದ ಫಲಗಳನ್ನು ಅನುಭವಿಸಲು ನಿರೀಕ್ಷಿಸಬಲ್ಲರು? (ಬಿ) ಯೆಹೋವನ ಜನರು ಇಂದು ತಮ್ಮ ಕೆಲಸದ ಫಲಗಳನ್ನು ಹೇಗೆ ಅನುಭವಿಸುತ್ತಾರೆ?
17 ಯೆಹೋವನು ತನ್ನ ಜನರಿಗೆ ಕೊಡುವ ಹೊಸ ಹೆಸರು, ಅವರ ಪ್ರಯತ್ನಗಳು ವ್ಯರ್ಥವಲ್ಲವೆಂಬ ಪುನರಾಶ್ವಾಸನೆಯನ್ನು ಕೊಡುತ್ತದೆ. “ಯೆಹೋವನು ತನ್ನ ಬಲಗೈ ಮೇಲೆ, ತನ್ನ ಭುಜಬಲದ ಮೇಲೆ, ಆಣೆಯಿಟ್ಟು—ನಿನ್ನ ದವಸವನ್ನು ನಿನ್ನ ಶತ್ರುಗಳ ಆಹಾರಕ್ಕೆ ಇನ್ನು ಕೊಡಲೇ ಕೊಡೆನು. ನೀನು ದುಡಿದ ದ್ರಾಕ್ಷಾರಸವನ್ನು ಅನ್ಯರು ಕುಡಿಯುವದೇ ಇಲ್ಲ; ನಿನ್ನ ಬೆಳೆಯನ್ನು ಕೊಯ್ದು ಕುಪ್ಪೆಹಾಕಿದವರೇ ಅದನ್ನು ಉಂಡು ಯೆಹೋವನನ್ನು ಸ್ತುತಿಸುವರು. ನಿನ್ನ ದ್ರಾಕ್ಷೆಯನ್ನು ಕಿತ್ತು ತಂದವರೇ ಅದರ ರಸವನ್ನು ನನ್ನ ಪವಿತ್ರಾಲಯದ ಪ್ರಾಕಾರಗಳಲ್ಲಿ ಕುಡಿಯುವರು ಎಂದು ಹೇಳಿದ್ದಾನೆ.” (ಯೆಶಾಯ 62:8, 9) ಯೆಹೋವನ ಬಲಗೈ ಮತ್ತು ಭುಜಬಲಗಳು ಆತನ ಶಕ್ತಿ ಮತ್ತು ಸಾಮರ್ಥ್ಯದ ಸಂಕೇತಗಳು. (ಧರ್ಮೋಪದೇಶಕಾಂಡ 32:40; ಯೆಹೆಜ್ಕೇಲ 20:5) ಯೆಹೋವನು ಇವುಗಳ ಮೇಲೆ ಆಣೆಯಿಡುವ ವಿಷಯವು, ಆತನು ಚೀಯೋನಿನಲ್ಲಿ ನಡೆಯುವ ಸಂಗತಿಗಳನ್ನು ಅವಶ್ಯವಾಗಿ ಬದಲಾಯಿಸಲು ದೃಢಸಂಕಲ್ಪವನ್ನು ಮಾಡಿದ್ದಾನೆಂದು ತೋರಿಸುತ್ತದೆ. ಸಾ.ಶ.ಪೂ. 607ರಲ್ಲಿ, ಚೀಯೋನಿನ ಶತ್ರುಗಳು ಆಕೆಯನ್ನು ದೋಚಿ ಆಕೆಯ ಸ್ವತ್ತುಗಳನ್ನು ಸೂರೆಮಾಡುವಂತೆ ಯೆಹೋವನು ಅನುಮತಿಸುತ್ತಾನೆ. (ಧರ್ಮೋಪದೇಶಕಾಂಡ 28:33, 51) ಆದರೆ ಈಗ, ಯಾರಿಗೆ ಹಕ್ಕಿದೆಯೋ ಅವರು ಮಾತ್ರ ಚೀಯೋನಿನ ಸ್ವತ್ತುಗಳನ್ನು ಅನುಭೋಗಿಸಲಿದ್ದರು.—ಧರ್ಮೋಪದೇಶಕಾಂಡ 14:22-27.
18 ಈ ವಾಗ್ದಾನದ ಆಧುನಿಕ ದಿನದ ನೆರವೇರಿಕೆಯಲ್ಲಿ, ಯೆಹೋವನ ಪುನಸ್ಸ್ಥಾಪಿತ ಜನರು ಮಹಾ ಆತ್ಮಿಕ ಸಮೃದ್ಧಿಯನ್ನು ಅನುಭವಿಸುತ್ತಾರೆ. ಅವರು ತಾವು ಮಾಡಿರುವ ಕೆಲಸದ ಫಲಗಳನ್ನು, ಅಂದರೆ ಹೆಚ್ಚುತ್ತಿರುವ ಕ್ರೈಸ್ತ ಶಿಷ್ಯರ ಸಂಖ್ಯೆ ಮತ್ತು ಹೇರಳವಾದ ಆತ್ಮಿಕ ಆಹಾರವನ್ನು ಪೂರ್ತಿಯಾಗಿ ಅನುಭವಿಸುತ್ತಾರೆ. (ಯೆಶಾಯ 55:1, 2; 65:14) ಯೆಹೋವನ ಜನರು ನಂಬಿಗಸ್ತರಾಗಿರುವುದರಿಂದ, ಅವರ ಆತ್ಮಿಕ ಸಮೃದ್ಧಿಯಲ್ಲಿ ವೈರಿಗಳು ಹಸ್ತಕ್ಷೇಪಮಾಡುವಂತೆ ಇಲ್ಲವೆ ಅವರ ಪೂರ್ಣಪ್ರಾಣದ ಸೇವೆಯ ಫಲಗಳನ್ನು ಕದಿಯುವಂತೆ ಯೆಹೋವನು ಬಿಡುವುದಿಲ್ಲ. ಯೆಹೋವನ ಸೇವೆಯಲ್ಲಿ ಮಾಡಲ್ಪಡುವ ಯಾವುದೇ ಕೆಲಸವು ವ್ಯರ್ಥವಾಗದು.—ಮಲಾಕಿಯ 3:10-12; ಇಬ್ರಿಯ 6:10.
19, 20. (ಎ) ಯೆಹೂದ್ಯರು ಯೆರೂಸಲೇಮಿಗೆ ಹಿಂದಿರುಗುವಂತೆ ಮಾರ್ಗವು ಹೇಗೆ ಸರಿಮಾಡಲ್ಪಟ್ಟಿತು? (ಬಿ) ಆಧುನಿಕ ಸಮಯಗಳಲ್ಲಿ ದೀನರು ಯೆಹೋವನ ಸಂಸ್ಥೆಗೆ ಬರಲಾಗುವಂತೆ ಮಾರ್ಗವು ಹೇಗೆ ಸರಿಮಾಡಲ್ಪಟ್ಟಿದೆ?
19 ಆ ಹೊಸ ಹೆಸರು, ಪ್ರಾಮಾಣಿಕ ಹೃದಯದ ಜನರಿಗೆ ಯೆಹೋವನ ಸಂಸ್ಥೆಯನ್ನು ಆಕರ್ಷಣೀಯವಾದದ್ದಾಗಿಯೂ ಮಾಡುತ್ತದೆ. ಜನಸಮೂಹಗಳು ಅದರೊಳಗೆ ಹಿಂಡುಹಿಂಡಾಗಿ ಹೋಗುತ್ತವೆ ಮತ್ತು ಅವರಿಗಾಗಿ ಮಾರ್ಗವು ತೆರೆದಿಡಲ್ಪಡುತ್ತದೆ. ಯೆಶಾಯನ ಪ್ರವಾದನೆಯು ಹೇಳುವುದು: “ಊರ ಬಾಗಿಲುಗಳಲ್ಲಿ ಹಾದು ಬನ್ನಿರಿ, ಹಾದು ಬನ್ನಿರಿ, ಜನರಿಗೆ ದಾರಿಯನ್ನು ಸರಿಮಾಡಿರಿ, ರಾಜಮಾರ್ಗವನ್ನು ಎತ್ತರಿಸಿರಿ, ಎತ್ತರಿಸಿರಿ, ಕಲ್ಲುಗಳನ್ನು ತೆಗೆದುಹಾಕಿರಿ, ಜನಾಂಗಗಳಿಗೆ ಧ್ವಜವನ್ನೆತ್ತಿರಿ!” (ಯೆಶಾಯ 62:10) ಮೊದಲನೆಯ ಸಂದರ್ಭದಲ್ಲಿ ಈ ಕರೆಯು, ಯೆರೂಸಲೇಮಿಗೆ ಹಿಂದಿರುಗಲಿಕ್ಕೋಸ್ಕರ ಬಾಬಿಲೋನ್ಯದ ನಗರದ್ವಾರಗಳನ್ನು ದಾಟಿಹೋಗುವುದನ್ನು ಪ್ರಾಯಶಃ ಸೂಚಿಸುತ್ತದೆ. ಹಿಂದಿರುಗುತ್ತಿರುವ ಜನರು ಪ್ರಯಾಣವನ್ನು ಹೆಚ್ಚು ಸುಗಮಗೊಳಿಸುವಂತೆ, ಮಾರ್ಗದಿಂದ ಕಲ್ಲುಗಳನ್ನು ತೊಲಗಿಸಿ, ಇತರರಿಗೆ ದಾರಿ ತೋರಿಸಲು ಧ್ವಜವನ್ನೆತ್ತಬೇಕಾಗಿತ್ತು.—ಯೆಶಾಯ 11:12.
20 ಅಭಿಷಿಕ್ತ ಕ್ರೈಸ್ತರು 1919ರಿಂದ ದೇವರ ಸೇವೆಗೆ ಮೀಸಲಾಗಿಡಲ್ಪಟ್ಟಿದ್ದು, “ಪರಿಶುದ್ಧ ಮಾರ್ಗ”ದಲ್ಲಿ ನಡೆಯುತ್ತಿದ್ದಾರೆ. (ಯೆಶಾಯ 35:8) ಮಹಾ ಬಾಬೆಲಿನಿಂದ ಹೊರಬಂದು, ಆತ್ಮಿಕ ರಾಜಮಾರ್ಗದಲ್ಲಿ ನಡೆದವರಲ್ಲಿ ಇವರೇ ಪ್ರಥಮರಾಗಿದ್ದರು. (ಯೆಶಾಯ 40:3; 48:20) ತನ್ನ ಬಲಿಷ್ಠ ಕಾರ್ಯಗಳ ಕುರಿತು ಸಾರುವುದರಲ್ಲಿ ಮತ್ತು ಇತರರಿಗೆ ರಾಜಮಾರ್ಗಕ್ಕೆ ನಡೆಸುವ ದಾರಿತೋರಿಸುವುದರಲ್ಲಿ ನಾಯಕತ್ವವನ್ನು ವಹಿಸುವ ಸದವಕಾಶವನ್ನು ದೇವರು ಇವರಿಗೆ ಕೊಟ್ಟನು. ಆ ಮಾರ್ಗದಿಂದ ಕಲ್ಲುಗಳನ್ನು ತೊಲಗಿಸುವುದು, ಅಂದರೆ ತಿಳಿವಳಿಕೆಯ ದಾರಿಯಲ್ಲಿದ್ದ ತಡೆಗಳನ್ನು ತೆಗೆಯುವುದು, ಮುಖ್ಯವಾಗಿ ಅವರ ಸ್ವಂತ ಪ್ರಯೋಜನಕ್ಕಾಗಿತ್ತು. (ಯೆಶಾಯ 57:14) ಅವರು ದೇವರ ಉದ್ದೇಶಗಳನ್ನು ಮತ್ತು ಬೋಧನೆಗಳನ್ನು ಸ್ಪಷ್ಟವಾಗಿ ನೋಡುವ ಅಗತ್ಯವಿತ್ತು. ಸುಳ್ಳು ನಂಬಿಕೆಗಳು ಜೀವದ ದಾರಿಯಲ್ಲಿ ಮುಗ್ಗರಿಸುವ ಕಲ್ಲುಗಳಂತಿವೆ. ಆದರೆ ಯೆಹೋವನ ವಾಕ್ಯವು ‘ಬಂಡೆಯನ್ನು ಒಡೆದುಬಿಡುವ ಚಮಟಿಗೆಗೆ ಸಮಾನವಾಗಿದೆ.’ ಇವುಗಳ ಸಹಾಯದಿಂದ ಅಭಿಷಿಕ್ತ ಕ್ರೈಸ್ತರು, ಯೆಹೋವನನ್ನು ಸೇವಿಸಲು ಬಯಸುವವರು ಮುಗ್ಗರಿಸಿ ಬೀಳಸಾಧ್ಯವಿದ್ದ ಕಲ್ಲುಗಳನ್ನು ತೆಗೆದುಹಾಕಿದರು.—ಯೆರೆಮೀಯ 23:29.
21, 22. ಸುಳ್ಳು ಧರ್ಮವನ್ನು ಬಿಟ್ಟು ಬರುವವರಿಗೆ ಯೆಹೋವನು ಯಾವ ಧ್ವಜವನ್ನು ಸ್ಥಾಪಿಸಿದ್ದಾನೆ, ಮತ್ತು ಇದು ನಮಗೆ ಹೇಗೆ ಗೊತ್ತು?
21 ಸಾ.ಶ.ಪೂ. 537ರಲ್ಲಿ ಯೆರೂಸಲೇಮು, ಯೆಹೂದಿ ಉಳಿಕೆಯವರು ಹಿಂದೆಬಂದು ದೇವಾಲಯವನ್ನು ಕಟ್ಟುವಂತೆ ಕರೆನೀಡಿದ ಧ್ವಜವಾಗಿ ಕಾರ್ಯನಡಿಸಿತು. (ಯೆಶಾಯ 49:22) ಅಭಿಷಿಕ್ತ ಉಳಿಕೆಯವರು ಸುಳ್ಳು ಧರ್ಮದ ಬಂಧನದಿಂದ 1919ರಲ್ಲಿ ಬಿಡುಗಡೆ ಹೊಂದಿದಾಗ, ಅವರು ಗೊತ್ತುಗುರಿಯಿಲ್ಲದೆ ಅತ್ತಿತ್ತ ಅಲೆದಾಡಲಿಲ್ಲ. ಅವರು ಮುಟ್ಟಬೇಕಾಗಿದ್ದ ಗುರಿ ಅವರಿಗೆ ತಿಳಿದಿತ್ತು, ಏಕೆಂದರೆ ಯೆಹೋವನು ಅವರಿಗೆ ಒಂದು ಧ್ವಜವನ್ನು ಸ್ಥಾಪಿಸಿದ್ದನು. ಯಾವ ಧ್ವಜವದು? ಅದು ಯೆಶಾಯ 11:10ರಲ್ಲಿ ಮುಂತಿಳಿಸಲ್ಪಟ್ಟಿರುವ ಧ್ವಜವೇ. ಅಲ್ಲಿ ಹೀಗೆ ಹೇಳಲಾಗಿದೆ: “ಆ ದಿನದಲ್ಲಿ ಜನಾಂಗಗಳು ತಮಗೆ ಧ್ವಜಪ್ರಾಯನಾಗಿ ನಿಂತಿರುವ ಇಷಯನ ಅಂಕುರದವನನ್ನು ಆಶ್ರಯಿಸುವರು.” ಅಪೊಸ್ತಲ ಪೌಲನು ಈ ಮಾತುಗಳನ್ನು ಯೇಸುವಿಗೆ ಅನ್ವಯಿಸುತ್ತಾನೆ. (ರೋಮಾಪುರ 15:8, 12) ಹೌದು, ಸ್ವರ್ಗೀಯ ಚೀಯೋನ್ ಬೆಟ್ಟದಿಂದ ಆಳುತ್ತಿರುವ ಕ್ರಿಸ್ತ ಯೇಸುವೇ ಆ ಧ್ವಜವಾಗಿದ್ದಾನೆ!—ಇಬ್ರಿಯ 12:22; ಪ್ರಕಟನೆ 14:1.
22 ಸರ್ವೋನ್ನತನಾದ ದೇವರ ಐಕ್ಯಗೊಳಿಸುವ ಆರಾಧನೆಯಲ್ಲಿ ಭಾಗವಹಿಸಲು, ಅಭಿಷಿಕ್ತ ಕ್ರೈಸ್ತರೂ ಬೇರೆ ಕುರಿಗಳೂ ಯೇಸು ಕ್ರಿಸ್ತನ ಸುತ್ತಲೂ ಒಟ್ಟುಗೂಡಿಸಲ್ಪಟ್ಟಿದ್ದಾರೆ. ಅವನ ಆಳ್ವಿಕೆಯು, ಯೆಹೋವನ ವಿಶ್ವ ಪರಮಾಧಿಕಾರವನ್ನು ನಿರ್ದೋಷೀಕರಿಸುವ ಮತ್ತು ಭೂಮಿಯ ಸಕಲ ಜನಾಂಗಗಳಲ್ಲಿರುವ ಪ್ರಾಮಾಣಿಕ ಹೃದಯಿಗಳನ್ನು ಆಶೀರ್ವದಿಸುವ ವಿಷಯಗಳನ್ನು ಪೂರೈಸುತ್ತದೆ. ಇದು ನಮ್ಮಲ್ಲಿ ಎಲ್ಲರೂ ಆತನಿಗೆ ಸ್ತುತಿಯನ್ನು ಸಲ್ಲಿಸಿ ಆತನನ್ನು ಘನತೆಗೇರಿಸಲು ಕಾರಣವನ್ನು ಕೊಡುವುದಿಲ್ಲವೊ?
“ನಿನ್ನ ರಕ್ಷಣೆಯು ಸಮೀಪವಾಯಿತು”
23, 24. ದೇವರಲ್ಲಿ ನಂಬಿಕೆಯಿಡುವವರಿಗೆ ರಕ್ಷಣೆಯು ಹೇಗೆ ತರಲ್ಪಡುತ್ತದೆ?
23 ಯೆಹೋವನು ತನ್ನ ಪತ್ನಿಸದೃಶ ಸಂಸ್ಥೆಗೆ ಕೊಡುವ ಹೊಸ ಹೆಸರು, ಆಕೆಯ ಮಕ್ಕಳ ನಿತ್ಯರಕ್ಷಣೆಯೊಂದಿಗೆ ಸಂಬಂಧಿಸಿದೆ. ಯೆಶಾಯನು ಬರೆಯುವುದು: “ಇಗೋ, ನಿನ್ನ ರಕ್ಷಣೆಯು ಸಮೀಪವಾಯಿತು, ಯೆಹೋವನು ದಯಪಾಲಿಸುವ ಬಹುಮಾನವು ಆತನೊಂದಿಗಿದೆ, ಆತನು ಅನುಗ್ರಹಿಸುವ ಪ್ರತಿಫಲವು ಆತನ ಮುಂದಿದೆ ಎಂದು ಚೀಯೋನೆಂಬಾಕೆಗೆ ಹೇಳಿರಿ ಎಂಬದಾಗಿ ಯೆಹೋವನು ಭೂಮಿಯ ಕಟ್ಟಕಡೆಯ ವರೆಗೂ ಅಪ್ಪಣೆಮಾಡಿದ್ದಾನೆ.” (ಯೆಶಾಯ 62:11) ಬಾಬೆಲು ಪತನಗೊಂಡು, ಯೆಹೂದ್ಯರು ತಮ್ಮ ಸ್ವದೇಶಕ್ಕೆ ಹಿಂದೆರಳಿದಾಗ ಅವರಿಗೆ ರಕ್ಷಣೆಯು ಒದಗಿಬಂತು. ಆದರೆ ಈ ಮಾತುಗಳು ಅದಕ್ಕಿಂತಲೂ ಶ್ರೇಷ್ಠವಾದದ್ದೇನನ್ನೊ ಸೂಚಿಸುತ್ತವೆ. ಯೆಹೋವನ ಈ ಪ್ರಕಟನೆಯು ಯೆರೂಸಲೇಮಿನ ಕುರಿತು ಜೆಕರ್ಯನು ನುಡಿದ ಪ್ರವಾದನೆಯನ್ನು ನಮ್ಮ ಮನಸ್ಸಿಗೆ ತರುತ್ತದೆ: “ಚೀಯೋನ್ ನಗರಿಯೇ, ಬಹು ಸಂತೋಷಪಡು; ಯೆರೂಸಲೇಮ್ ಪುರಿಯೇ, ಹರ್ಷಧ್ವನಿಗೈ! ನೋಡು, ನಿನ್ನ ಅರಸು ನಿನ್ನ ಬಳಿಗೆ ಬರುತ್ತಾನೆ; ಆತನು ನ್ಯಾಯವಂತನು, ಸುರಕ್ಷಿತನು; ಶಾಂತಗುಣವುಳ್ಳವನಾಗಿಯೂ ಕತ್ತೆಯನ್ನು, ಹೌದು, ಪ್ರಾಯದ ಕತ್ತೆಮರಿಯನ್ನು ಹತ್ತಿದವನಾಗಿಯೂ ಬರುತ್ತಾನೆ.”—ಜೆಕರ್ಯ 9:9.
24 ಯೇಸು ನೀರಿನ ದೀಕ್ಷಾಸ್ನಾನ ಪಡೆದುಕೊಂಡು, ದೇವರಾತ್ಮದಿಂದ ಅಭಿಷೇಕಹೊಂದಿ ಮೂರೂವರೆ ವರ್ಷಗಳು ಕಳೆದ ಬಳಿಕ, ಯೆರೂಸಲೇಮಿಗೆ ಸವಾರಿಮಾಡಿ ಅದರ ದೇವಾಲಯವನ್ನು ಶುದ್ಧೀಕರಿಸಿದನು. (ಮತ್ತಾಯ 21:1-5; ಯೋಹಾನ 12:14-16) ಇಂದು ದೇವರಲ್ಲಿ ನಂಬಿಕೆಯಿರುವ ಸರ್ವರಿಗೆ ಯೆಹೋವನಿಂದ ರಕ್ಷಣೆಯನ್ನು ತರುವವನು ಯೇಸು ಕ್ರಿಸ್ತನೇ. ಯೇಸು 1914ರಲ್ಲಿ ಸಿಂಹಾಸನಾರೂಢನಾದಾಗಿನಿಂದ, ಅವನು ಯೆಹೋವನ ನ್ಯಾಯಾಧೀಶನೂ ತೀರ್ಪನ್ನು ಜಾರಿಗೊಳಿಸುವವನೂ ಆಗಿದ್ದಾನೆ. ಸಿಂಹಾಸನಕ್ಕೇರಿ ಮೂರೂವರೆ ವರ್ಷಗಳ ಬಳಿಕ, ಅಂದರೆ 1918ರಲ್ಲಿ ಅವನು ಯೆಹೋವನ ಆತ್ಮಿಕ ಆಲಯವನ್ನು ಶುದ್ಧೀಕರಿಸಿದನು. ಈ ಆಲಯವು, ಭೂಮಿಯ ಮೇಲೆ ಅಭಿಷಿಕ್ತ ಕ್ರೈಸ್ತರ ಸಭೆಯಿಂದ ಪ್ರತಿನಿಧಿಸಲ್ಪಟ್ಟಿದೆ. (ಮಲಾಕಿಯ 3:1-5) ಅವನು ಒಂದು ಧ್ವಜದಂತೆ ಏರಿಸಲ್ಪಟ್ಟಿರುವುದು, ಮೆಸ್ಸೀಯ ರಾಜ್ಯದ ಬೆಂಬಲಕ್ಕಾಗಿ ಭೂಮಿಯ ಎಲ್ಲ ಕಡೆಗಳಿಂದ ಜನರ ಮಹಾ ಒಟ್ಟುಗೂಡಿಸುವಿಕೆಯ ಆರಂಭವನ್ನು ಗುರುತಿಸಿತು. ಪುರಾತನ ಕಾಲದ ನಮೂನೆಯನ್ನು ಅನುಸರಿಸಿ, 1919ರಲ್ಲಿ ದೇವರ ಇಸ್ರಾಯೇಲು ಮಹಾ ಬಾಬೆಲಿನಿಂದ ಬಿಡುಗಡೆಹೊಂದಿದಾಗ ಅವರಿಗೆ “ರಕ್ಷಣೆ” ದೊರಕಿತು. ಆತ್ಮತ್ಯಾಗಿಗಳಾದ ಈ ಕೊಯ್ಲಿನ ಕೆಲಸಗಾರರ ಮುಂದಿರುವ “ಬಹುಮಾನವು” ಅಥವಾ “ಪ್ರತಿಫಲವು,” ಒಂದೊ ಸ್ವರ್ಗದಲ್ಲಿ ಅಮರ ಜೀವನ ಇಲ್ಲವೆ ಭೂಮಿಯಲ್ಲಿ ನಿತ್ಯಜೀವವಾಗಿರುವುದು. ನಂಬಿಗಸ್ತರಾಗಿರುವ ಎಲ್ಲರೂ, ತಾವು “ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವದಿಲ್ಲ” ಎಂಬ ಭರವಸೆಯಿಂದಿರಬಲ್ಲರು.—1 ಕೊರಿಂಥ 15:58.
25. ಯೆಹೋವನ ಜನರಿಗೆ ಯಾವ ಆಶ್ವಾಸನೆ ನೀಡಲ್ಪಟ್ಟಿದೆ?
25 ಯೆಹೋವನ ಸ್ವರ್ಗೀಯ ಸಂಸ್ಥೆಗೆ, ಈ ಭೂಮಿಯಲ್ಲಿರುವ ಅದರ ಅಭಿಷಿಕ್ತ ಪ್ರತಿನಿಧಿಗಳಿಗೆ ಮತ್ತು ಅವರೊಂದಿಗೆ ಕ್ರಿಯಾಶೀಲರಾಗಿ ಜೊತೆಗೂಡಿರುವ ಪ್ರತಿಯೊಬ್ಬರಿಗೆ ಎಷ್ಟೊಂದು ಆಶಾಜನಕ ಭವಿಷ್ಯವಿದೆ! (ಧರ್ಮೋಪದೇಶಕಾಂಡ 26:19) ಯೆಶಾಯನು ಪ್ರವಾದಿಸಿದ್ದು: “ನಿನ್ನ ಜನರು ಪರಿಶುದ್ಧಜನರು, ಯೆಹೋವನು ವಿಮೋಚಿಸಿದವರು ಎಂದು ಅನ್ನಿಸಿಕೊಳ್ಳುವರು, ನಿನಗೋ ಪತಿಯು ವರಿಸಿ ತ್ಯಜಿಸದ ಪುರಿ ಎಂದು ಹೆಸರು ಬರುವದು.” (ಯೆಶಾಯ 62:12) ಒಂದು ಸಮಯದಲ್ಲಿ, ದೇವರ ಇಸ್ರಾಯೇಲಿನಿಂದ ಪ್ರತಿನಿಧಿಸಲ್ಪಟ್ಟ “ಮೇಲಣ ಯೆರೂಸಲೇಮ್”ಗೆ ತ್ಯಜಿಸಲ್ಪಟ್ಟಿರುವ ಅನುಭವವಾಯಿತು. ಆದರೆ ಇನ್ನೆಂದಿಗೂ ಆಕೆಗೆ ಆ ಅನುಭವವಾಗದು. ಯೆಹೋವನ ಜನರು ಸದಾಕಾಲ ಆತನ ಸಂರಕ್ಷಿತ ಪರಾಮರಿಕೆಯನ್ನು ಪಡೆಯುವ ಜನರಾಗಿದ್ದು, ನಿರಂತರವಾಗಿ ಆತನ ಪ್ರಸನ್ನತೆಯನ್ನು ಅನುಭವಿಸುವರು.
[ಪಾದಟಿಪ್ಪಣಿಗಳು]
a ಬೈಬಲ್ ಪ್ರವಾದನೆಯಲ್ಲಿ “ಹೊಸ ಹೆಸರು,” ಹೊಸ ಸ್ಥಾನ ಅಥವಾ ಸುಯೋಗವನ್ನು ಸೂಚಿಸಬಲ್ಲದು.—ಪ್ರಕಟನೆ 2:17; 3:12.
[ಅಧ್ಯಯನ ಪ್ರಶ್ನೆಗಳು]
[ಪುಟ 342ರಲ್ಲಿರುವ ಚೌಕ]
ವಿವಾಹಕ್ಕೊಂದು ಉದಾತ್ತ ಮಾದರಿ
ಜನರು ಮದುವೆಯಾಗುವಾಗ ಅವರಿಗೆ ವಿವಾಹ ಬಂಧದ ಕುರಿತು ತಮ್ಮ ಸ್ವಂತ ನಿರೀಕ್ಷೆಗಳಿರುತ್ತವೆ. ಆದರೆ ದೇವರ ನಿರೀಕ್ಷಣೆಗಳೇನು? ವಿವಾಹದ ಪದ್ಧತಿ ಆತನಿಂದ ಆರಂಭಗೊಂಡಿತು. ಹಾಗಾದರೆ ಅದರ ವಿಷಯದಲ್ಲಿ ಆತನ ಉದ್ದೇಶವೇನು?
ಈ ವಿಷಯದಲ್ಲಿ ದೇವರ ದೃಷ್ಟಿಕೋನದ ಒಂದು ಸೂಚಕವು, ಇಸ್ರಾಯೇಲ್ ಜನಾಂಗದೊಂದಿಗೆ ಆತನಿಗಿದ್ದ ಸಂಬಂಧದಿಂದ ತಿಳಿದುಬರುತ್ತದೆ. ಯೆಶಾಯನು ಈ ಸಂಬಂಧವನ್ನು ವಿವಾಹದಂತೆ ಚಿತ್ರಿಸುತ್ತಾನೆ. (ಯೆಶಾಯ 62:1-5) “ವರ”ನಾದ ಯೆಹೋವ ದೇವರು ತನ್ನ “ವಧು”ವಿಗೆ ಏನು ಮಾಡುತ್ತಾನೆಂದು ಗಮನಿಸಿ. ಆತನು ಆಕೆಯನ್ನು ಸಂರಕ್ಷಿಸಿ, ಶುದ್ಧಿಮಾಡುತ್ತಾನೆ. (ಯೆಶಾಯ 62:6, 7, 12) ಆತನು ಆಕೆಯನ್ನು ಸನ್ಮಾನಿಸುತ್ತಾನೆ ಮತ್ತು ಅಮೂಲ್ಯಳೆಂದು ಎಣಿಸುತ್ತಾನೆ. (ಯೆಶಾಯ 62:3, 8, 9) ಮತ್ತು ಆತನು ಆಕೆಗೆ ಕೊಟ್ಟ ಹೊಸ ಹೆಸರುಗಳು ಸೂಚಿಸುವಂತೆ ಆತನು ಆಕೆಯಲ್ಲಿ ಆನಂದಿಸುತ್ತಾನೆ.—ಯೆಶಾಯ 62:4, 5, 12.
ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ, ಯೆಹೋವನು ಮತ್ತು ಇಸ್ರಾಯೇಲ್ಯರ ಮಧ್ಯೆ ಇದ್ದ ಸಂಬಂಧದ ಕುರಿತು ಮಾಡಿದ ಯೆಶಾಯನ ವರ್ಣನೆಯನ್ನು ಪೌಲನು ಪ್ರತಿಧ್ವನಿಸುತ್ತಾನೆ. ಗಂಡಹೆಂಡಿರ ಮಧ್ಯೆ ಇರುವ ಸಂಬಂಧವನ್ನು ಅವನು ಕ್ರಿಸ್ತನ ಮತ್ತು ಅಭಿಷಿಕ್ತ ಕ್ರೈಸ್ತ ಸಭೆಯ ಮಧ್ಯೆ ಇರುವ ಸಂಬಂಧಕ್ಕೆ ಹೋಲಿಸುತ್ತಾನೆ.—ಎಫೆಸ 5:21-27.
ಯೇಸು ಮತ್ತು ಸಭೆಯ ಮಧ್ಯೆ ಇದ್ದ ಸಂಬಂಧವನ್ನು ತಮ್ಮ ವಿವಾಹಗಳಲ್ಲಿ ಅನುಕರಿಸುವಂತೆ ಪೌಲನು ಕ್ರೈಸ್ತರನ್ನು ಪ್ರೋತ್ಸಾಹಿಸಿದನು. ಯೆಹೋವನು ಇಸ್ರಾಯೇಲಿನ ಕಡೆಗೆ ಮತ್ತು ಯೇಸು ಸಭೆಯ ಕಡೆಗೆ ತೋರಿಸಿದ ಪ್ರೀತಿಗಿಂತ ಹೆಚ್ಚಿನ ಪ್ರೀತಿಯೇ ಇರಲಾರದು. ಈ ಸಾಂಕೇತಿಕ ಸಂಬಂಧಗಳು, ಕ್ರೈಸ್ತರ ಮಧ್ಯೆ ಯಶಸ್ವಿಕರವಾದ ಹಾಗೂ ಸಂತೋಷಕರವಾದ ವಿವಾಹಕ್ಕಾಗಿ ಉದಾತ್ತ ಮಾದರಿಯನ್ನು ಒದಗಿಸುತ್ತವೆ.—ಎಫೆಸ 5:28-33.
[ಪುಟ 339ರಲ್ಲಿರುವ ಚಿತ್ರ]
ಯೆಹೋವನು ಸ್ವರ್ಗೀಯ ಚೀಯೋನನ್ನು ಹೊಸ ಹೆಸರಿನಿಂದ ಕರೆಯುವನು
[ಪುಟ 347ರಲ್ಲಿರುವ ಚಿತ್ರ]
ಆಧುನಿಕ ಸಮಯಗಳಲ್ಲಿ ಯೆಹೋವನ ಕಾವಲುಗಾರ ವರ್ಗವು ಮೌನವಾಗಿರುವುದಿಲ್ಲ