ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸುಳ್ಳು ಧರ್ಮ—ಅದರ ಹಠಾತ್ತಾದ ಅಂತ್ಯದ ಮುನ್ನೋಟ

ಸುಳ್ಳು ಧರ್ಮ—ಅದರ ಹಠಾತ್ತಾದ ಅಂತ್ಯದ ಮುನ್ನೋಟ

ಅಧ್ಯಾಯ ಎಂಟು

ಸುಳ್ಳು ಧರ್ಮ​—⁠ಅದರ ಹಠಾತ್ತಾದ ಅಂತ್ಯದ ಮುನ್ನೋಟ

ಯೆಶಾಯ 47:​1-15

1, 2. (ಎ) ಲೋಕದ ಧಾರ್ಮಿಕ ವಾತಾವರಣದಲ್ಲಿ ಬೇಗನೆ ತೀವ್ರ ಬದಲಾವಣೆಯಾಗುವುದು ಕೆಲವರಿಗೆ ಅಸಂಭವವಾಗಿ ಕಾಣುವುದೇಕೆ? (ಬಿ) ಯೆಶಾಯ 47ನೆಯ ಅಧ್ಯಾಯದ ಮಾತುಗಳು ಭವಿಷ್ಯತ್ತಿನಲ್ಲಿ ಅನ್ವಯವಾಗುವವೆಂದು ನಮಗೆ ಹೇಗೆ ಗೊತ್ತು? (ಸಿ) ಎಲ್ಲ ಸುಳ್ಳು ಧರ್ಮಕ್ಕೆ ‘ಮಹಾ ಬಾಬೆಲ್‌’ ಎಂಬ ಹೆಸರು ಏಕೆ ಸೂಕ್ತವಾಗಿದೆ?

 “ಧರ್ಮ ಹಿಮ್ಮರಳಿ ಬರುತ್ತದೆ.” ದ ನ್ಯೂ ಯಾರ್ಕ್‌ ಟೈಮ್ಸ್‌ ಮ್ಯಾಗಸಿನ್‌ನಲ್ಲಿ ಬಂದ ಒಂದು ಲೇಖನದಲ್ಲಿ ಈ ಸಂದೇಶವಿತ್ತು. ಕೋಟ್ಯಂತರ ಜನರ ಹೃದಮನಗಳ ಮೇಲೆ ಧರ್ಮಕ್ಕೆ ಈಗಲೂ ಬಿಗಿಯಾದ ಹಿಡಿತವಿರುವಂತೆ ತೋರುತ್ತದೆ ಎಂದು ಆ ಲೇಖನವು ಸೂಚಿಸಿತು. ಹೀಗಿರುವುದರಿಂದ, ಸ್ವಲ್ಪ ಸಮಯದೊಳಗೆ ಲೋಕದ ಧಾರ್ಮಿಕ ವಾತಾವರಣದಲ್ಲಿ ತೀವ್ರ ಬದಲಾವಣೆ ಆಗಲಿದೆ ಎಂಬುದನ್ನು ನಂಬಲು ಕಷ್ಟವಾಗಬಹುದು. ಆದರೆ ಅಂಥ ಬದಲಾವಣೆಯನ್ನೇ ಯೆಶಾಯ 47ನೆಯ ಅಧ್ಯಾಯವು ಸೂಚಿಸುತ್ತದೆ.

2 ಯೆಶಾಯನ ಮಾತುಗಳು 2,500 ವರ್ಷಗಳ ಹಿಂದೆ ನೆರವೇರಿದವು. ಆದರೂ, ಯೆಶಾಯ 47:8ರಲ್ಲಿ ಬರೆದಿರುವ ಮಾತುಗಳನ್ನು ಪ್ರಕಟನೆ ಪುಸ್ತಕವು ಉಲ್ಲೇಖಿಸಿ, ಅದು ಮುಂದಿನ ಕಾಲದಲ್ಲಿ ಅನ್ವಯಿಸುವುದು ಎಂದು ಹೇಳುತ್ತದೆ. ಆ ಪುಸ್ತಕದಲ್ಲಿ ಬೈಬಲು, ‘ಮಹಾ ಬಾಬೆಲ್‌’ ಎಂದು ಕರೆಯಲ್ಪಡುವ, ವೇಶ್ಯೆಯಂತಹ ಸುಳ್ಳು ಧರ್ಮದ ಲೋಕ ಸಾಮ್ರಾಜ್ಯದ ಅಂತ್ಯವನ್ನು ಮುಂತಿಳಿಸುತ್ತದೆ. (ಪ್ರಕಟನೆ 16:19) ಲೋಕದ ಸುಳ್ಳು ಧರ್ಮಗಳಿಗೆ “ಬಾಬೆಲ್‌” ಎಂಬ ಹೆಸರು ಸೂಕ್ತವಾಗಿದೆ, ಏಕೆಂದರೆ ಸುಳ್ಳು ಧರ್ಮವು ಆರಂಭಗೊಂಡದ್ದು ಪುರಾತನ ಬಾಬೆಲಿನಲ್ಲಿಯೇ. ಅಲ್ಲಿಂದ ಅದು ಭೂಮಿಯ ನಾಲ್ಕೂ ದಿಕ್ಕುಗಳಿಗೆ ಹರಡಿತು. (ಆದಿಕಾಂಡ 11:​1-9) ಬಾಬೆಲಿನಲ್ಲಿ ಆರಂಭಗೊಂಡ ಆತ್ಮದ ಅಮರತ್ವ, ನರಕಾಗ್ನಿ ಮತ್ತು ತ್ರಯೈಕ್ಯ ದೇವರುಗಳ ಆರಾಧನೆಯಂತಹ ಧಾರ್ಮಿಕ ಸಿದ್ಧಾಂತಗಳು ಈಗ ಕ್ರೈಸ್ತಪ್ರಪಂಚದ ಸಮೇತ ಕಾರ್ಯತಃ ಎಲ್ಲ ಧರ್ಮಗಳಲ್ಲಿವೆ. a ಹಾಗಾದರೆ, ಯೆಶಾಯನ ಪ್ರವಾದನೆಯು ಧರ್ಮದ ಭವಿಷ್ಯತ್ತಿನ ವಿಷಯದಲ್ಲಿ ಯಾವುದಾದರೂ ಆತ್ಮಿಕ ಒಳನೋಟವನ್ನು ಕೊಡುತ್ತದೆಯೆ?

ಬಾಬೆಲ್‌ ಮಣ್ಣು ಮುಕ್ಕುತ್ತದೆ

3. ಬಾಬೆಲ್‌ ಲೋಕ ಶಕ್ತಿಯು ಎಷ್ಟು ದೊಡ್ಡದಾಗಿತ್ತೆಂಬುದನ್ನು ವರ್ಣಿಸಿರಿ.

3 ಹುರಿದುಂಬಿಸುವ ಈ ದೈವಿಕ ಪ್ರಕಟನೆಗೆ ಕಿವಿಗೊಡಿರಿ: “ಯುವತಿಯೇ, ಬಾಬೆಲ್‌ಪುರಿಯೇ, [“ಬಾಬೆಲಿನ ಕನ್ಯಾಪುತ್ರಿಯೇ,” NW] ಕಳಕ್ಕಿಳಿದು ದೂಳಲ್ಲಿ ಕೂತುಕೋ, ಕಸ್ದೀಯರ ನಗರಿಯೇ, ಸಿಂಹಾಸನರಹಿತಳಾಗಿ ನೆಲದ ಮೇಲೆ ಕುಕ್ಕರಿಸು! ನೀನು ಇನ್ನು ಕೋಮಲೆ, ಸುಕುಮಾರಿ, ಎಂದು ಎನಿಸಿಕೊಳ್ಳೆ.” (ಯೆಶಾಯ 47:⁠1) ಬಾಬೆಲು ಬಹಳ ವರ್ಷಗಳಿಂದ ಪ್ರಮುಖ ಲೋಕ ಶಕ್ತಿಯಾಗಿ ಪಟ್ಟದಲ್ಲಿದೆ. ಅದು “ರಾಜ್ಯಗಳಿಗೆ ಶಿರೋರತ್ನ”ವಾಗಿರುತ್ತದೆ, ಅಂದರೆ ವೃದ್ಧಿಯಾಗುತ್ತಿದ್ದ ಧಾರ್ಮಿಕ, ವಾಣಿಜ್ಯ ಮತ್ತು ಮಿಲಿಟರಿ ಕೇಂದ್ರವಾಗಿದೆ. (ಯೆಶಾಯ 13:19) ಬಾಬೆಲು ಅಧಿಕಾರದ ಶಿಖರದಲ್ಲಿದ್ದಾಗ ಅದರ ಸಾಮ್ರಾಜ್ಯವು ಐಗುಪ್ತದ ಮೇರೆಯನ್ನು ತಲಪುವಷ್ಟು ದಕ್ಷಿಣದ ವರೆಗೆ ಹರಡಿತ್ತು. ಮತ್ತು ಸಾ.ಶ.ಪೂ. 607ರಲ್ಲಿ ಅದು ಯೆರೂಸಲೇಮನ್ನು ಸೋಲಿಸುವಾಗ, ಅದರ ವಿಜಯಯಾತ್ರೆಗಳನ್ನು ದೇವರು ಸಹ ತಡೆಯಶಕ್ತನಲ್ಲವೊ ಎಂಬಂತೆ ತೋರುತ್ತದೆ! ಹೀಗೆ ಅದು ತನ್ನನ್ನೇ “ಕನ್ಯಾಪುತ್ರಿ”ಯಂತೆ, ಅಂದರೆ ವಿದೇಶೀ ಆಕ್ರಮಣಕ್ಕೆ ಎಂದಿಗೂ ಬಲಿಬೀಳದವಳಂತೆ ಪರಿಗಣಿಸಿಕೊಳ್ಳುತ್ತದೆ. b

4. ಬಾಬೆಲು ಏನನ್ನು ಅನುಭವಿಸಲಿದೆ?

4 ಆದರೆ ಈ ಅಹಂಕಾರದ ‘ಕನ್ಯೆ’ಯನ್ನು ನಿರ್ವಿವಾದದ ಲೋಕ ಶಕ್ತಿಯ ಪಟ್ಟದಿಂದ ತಳ್ಳಿಹಾಕಿ, ಅದು ಅವಮಾನದಿಂದ ‘ದೂಳಿನಲ್ಲಿ’ ಕುಳಿತುಕೊಳ್ಳುವಂತೆ ಮಾಡಲಾಗುವುದು. (ಯೆಶಾಯ 26:⁠5) ಮುದ್ದಿಸಿ ಲಾಲನೆ ಮಾಡಿದ ರಾಣಿಯಂತೆ ಅದು ಇನ್ನು ಮುಂದೆ “ಕೋಮಲೆ, ಸುಕುಮಾರಿ” ಆಗಿರುವುದಿಲ್ಲ. ಆದಕಾರಣ ಯೆಹೋವನು ಆಜ್ಞಾಪಿಸುವುದು: “ಬೀಸುವ ಕಲ್ಲನ್ನು ಹಿಡಿದು ಹಿಟ್ಟು ಬೀಸು, ಮುಸುಕನ್ನು ತೆಗೆದುಹಾಕಿ ಈಜಾಡುವ ನೆರಿಗೆಯನ್ನು ಹರಿದುಬಿಟ್ಟು ಬೆತ್ತಲೆಕಾಲಾಗಿ ಹೊಳೆಗಳನ್ನು ಹಾದುಹೋಗು.” (ಯೆಶಾಯ 47:2) ಇಡೀ ಯೆಹೂದ ಜನಾಂಗವನ್ನೇ ಗುಲಾಮರನ್ನಾಗಿ ಮಾಡಿಕೊಂಡ ಬಳಿಕ ಈಗ ಬಾಬೆಲು ತಾನೇ ಗುಲಾಮಸ್ಥಿತಿಗೆ ಬರಲಿಕ್ಕಿದೆ! ಅದನ್ನು ಅಧಿಕಾರದ ಸ್ಥಾನದಿಂದ ತಳ್ಳಿಬಿಡುವ ಮೇದ್ಯಯ ಪಾರಸಿಯರು, ಅದು ತಮ್ಮ ಪರವಾಗಿ ಅವಮಾನಕರವಾದ ಕೆಲಸವನ್ನು ಮಾಡುವಂತೆ ಬಾಬೆಲನ್ನು ಬಲಾತ್ಕರಿಸುವರು.

5. (ಎ) ಬಾಬೆಲಿನ ‘ಮುಸುಕು ಮತ್ತು ಈಜಾಡುವ ನೆರಿಗೆ’ಯನ್ನು ಹೇಗೆ ತೆಗೆದುಹಾಕಲಾಗುವುದು? (ಬಿ) “ಹೊಳೆಗಳನ್ನು ಹಾದುಹೋಗು” ಎಂದು ಅವಳಿಗೆ ಕೊಡಲ್ಪಟ್ಟಿರುವ ಆಜ್ಞೆಯು ಏನನ್ನು ಸೂಚಿಸಬಹುದು?

5 ಹೀಗೆ, ಬಾಬೆಲು ತನ್ನ ‘ಮುಸುಕು ಮತ್ತು ಈಜಾಡುವ ನೆರಿಗೆ’ಯನ್ನು, ಅಂದರೆ ತನ್ನ ಹಿಂದಿನ ಮಹತ್ವ ಮತ್ತು ಘನತೆಯ ಪ್ರತಿಯೊಂದು ಸುಳಿವನ್ನು ಕೂಡ ಕಳೆದುಕೊಳ್ಳುವುದು. ಬಾಬೆಲನ್ನು ದುಡಿಸುವವರು, “ಹೊಳೆಗಳನ್ನು ಹಾದುಹೋಗು” ಎಂದು ಅದಕ್ಕೆ ಆಜ್ಞಾಪಿಸುವರು. ಬಾಬೆಲಿನ ಕೆಲವರಿಗೆ ಪ್ರಾಯಶಃ ಹೊರಗಡೆಯ ಗುಲಾಮ ಚಾಕರಿಯನ್ನು ಮಾಡುವಂತೆಯೂ ಆಜ್ಞಾಪಿಸಲಾದೀತು. ಇಲ್ಲವೆ, ಬಂಧಿವಾಸಕ್ಕೆ ಕೊಂಡೊಯ್ಯಲ್ಪಡುವಾಗ ಅವರಲ್ಲಿ ಕೆಲವರನ್ನು ಅಕ್ಷರಾರ್ಥವಾಗಿ ಹೊಳೆಗಳಾಚೆ ಎಳೆದುಕೊಂಡು ಹೋಗಲಾಗುವುದೆಂದೂ ಈ ಪ್ರವಾದನೆಯು ಅರ್ಥೈಸಬಹುದು. ಹೇಗಿದ್ದರೂ, ಬಾಬೆಲು ಇನ್ನು ಮುಂದೆ, ಒಬ್ಬ ರಾಣಿಯನ್ನು ಹೊಳೆದಾಟಿಸುವಾಗ ಅದನ್ನು ಕುರ್ಚಿಯ ಮೇಲೆ ಅಥವಾ ವಾಹನದಲ್ಲಿ ಕೂರಿಸಿ ದಾಟಿಸಲಾಗುವಂತೆ, ಭವ್ಯ ಶೈಲಿಯಲ್ಲಿ ಪ್ರಯಾಣಿಸುವಂತಿರಲಿಲ್ಲ. ಬದಲಿಗೆ, ಹೊಳೆ ದಾಟುವಾಗ ಲಂಗವನ್ನು ಎತ್ತಿಹಿಡಿದು ಕಾಲುಗಳನ್ನು ಪ್ರದರ್ಶಿಸುತ್ತಾ, ಮರ್ಯಾದೆಯನ್ನು ಬಿಟ್ಟುಬಿಡಬೇಕಾದ ದಾಸಿಯಂತೆ ಬಾಬೆಲಿರುವುದು. ಎಷ್ಟು ಅಪಮಾನಕರ ಸಂಗತಿ!

6. (ಎ) ಬಾಬೆಲಿನ ಮಾನವು ಬೈಲಿಗೆ ಬರುವುದು ಯಾವ ಅರ್ಥದಲ್ಲಿ? (ಬಿ) ದೇವರು ‘ಯಾವ ಮನುಷ್ಯನನ್ನೂ ದಯೆಯಿಂದ ಸಂಧಿಸದೆ’ ಇರುವುದು ಹೇಗೆ? (ಪಾದಟಿಪ್ಪಣಿಯನ್ನು ನೋಡಿ.)

6 ಯೆಹೋವನು ಇನ್ನೂ ಮೂದಲಿಸುವುದು: “ನಿನ್ನ ಮಾನವು ಬೈಲಿಗೆ ಬಿದ್ದು ನೀನು ನಾಚಿಕೆಗೀಡಾಗುವಿ, ನಾನು ಯಾರನ್ನೂ ಕರುಣಿಸದೆ ಮುಯ್ಯಿತೀರಿಸುವೆನು [“ನಾನು ಯಾವ ಮನುಷ್ಯನನ್ನೂ ದಯೆಯಿಂದ ಸಂಧಿಸೆನು,” NW].” (ಯೆಶಾಯ 47:⁠3) c ಹೌದು, ಬಾಬೆಲು ನಾಚಿಕೆ ಮತ್ತು ಅವಮರ್ಯಾದೆಗೊಳಗಾಗುವುದು. ಅದು ದೇವಜನರ ವಿರುದ್ಧ ತೋರಿಸಿರುವ ದುಷ್ಟತ್ವ ಮತ್ತು ಅವರ ಮೇಲೆ ನಡೆಸಿರುವ ಕ್ರೂರಕೃತ್ಯಗಳು ಬಹಿರಂಗವಾಗಿ ಬಯಲುಗೊಳಿಸಲ್ಪಡುವವು. ದೇವರ ಸೇಡನ್ನು ಯಾವ ಮಾನವನೂ ತಡೆದುಹಿಡಿಯನು!

7. (ಎ) ಬಾಬೆಲಿನ ಪತನದ ವಾರ್ತೆಗೆ ಯೆಹೂದಿ ಸೆರೆವಾಸಿಗಳು ಹೇಗೆ ಪ್ರತಿಕ್ರಿಯಿಸುವರು? (ಬಿ) ಯೆಹೋವನು ತನ್ನ ಜನರನ್ನು ಯಾವ ವಿಧದಲ್ಲಿ ಪುನಃ ಕೊಂಡುಕೊಳ್ಳುವನು?

7 ಪ್ರಬಲವಾಗಿದ್ದ ಬಾಬೆಲಿನಲ್ಲಿ 70 ವರ್ಷಗಳ ವರೆಗೆ ಸೆರೆಯಲ್ಲಿದ್ದುದರಿಂದ, ಬಾಬೆಲು ಪತನಗೊಳ್ಳುವಾಗ ದೇವಜನರು ತುಂಬ ಸಂತೋಷಪಡುವರು. ಅವರು ಹೀಗೆ ಕೂಗಿ ಹೇಳುವರು: “ನಮ್ಮ ವಿಮೋಚಕನಿಗೆ ಸೇನಾಧೀಶ್ವರನಾದ ಯೆಹೋವನೆಂಬ ನಾಮಧೇಯ, ಆತನೇ ಇಸ್ರಾಯೇಲ್ಯರ ಸದಮಲಸ್ವಾಮಿ!” (ಯೆಶಾಯ 47:⁠4) ಮೋಶೆಯ ಧರ್ಮಶಾಸ್ತ್ರಕ್ಕನುಸಾರ, ತನ್ನ ಸಾಲ ತೀರಿಸುವ ಸಲುವಾಗಿ ಒಬ್ಬ ಇಸ್ರಾಯೇಲ್ಯನು ತನ್ನನ್ನು ದಾಸನಾಗಿ ಮಾರಿಕೊಳ್ಳುವಲ್ಲಿ, ವಿಮೋಚಕನಾದ ಒಬ್ಬ ವ್ಯಕ್ತಿ (ರಕ್ತಸಂಬಂಧಿ) ಅವನಿಗಾಗಿ ಈಡುಕೊಟ್ಟು ಅವನನ್ನು ಪುನಃ ಕೊಂಡುಕೊಳ್ಳಬಹುದಾಗಿತ್ತು ಇಲ್ಲವೆ ದಾಸ್ಯದಿಂದ ಅವನನ್ನು ಬಿಡಿಸಬಹುದಾಗಿತ್ತು. (ಯಾಜಕಕಾಂಡ 25:​47-54) ಯೆಹೂದ್ಯರು ಬಾಬೆಲಿನ ದಾಸತ್ವಕ್ಕೆ ಮಾರಲ್ಪಟ್ಟಿರುವುದರಿಂದ, ಅವರನ್ನು ಪುನಃ ಕೊಂಡುಕೊಳ್ಳುವ ಅಥವಾ ಬಿಡುಗಡೆಮಾಡುವ ಆವಶ್ಯಕತೆ ಇತ್ತು. ಗುಲಾಮರಿಗಾದರೋ, ಒಂದು ದೇಶದ ಸೋಲು ಇನ್ನೊಬ್ಬ ಯಜಮಾನನ ಕೈಕೆಳಗೆ ಗುಲಾಮ ಚಾಕರಿಮಾಡುವುದನ್ನು ಸೂಚಿಸುತ್ತದೆ. ಆದರೆ ವಿಜೇತ ರಾಜ ಕೋರೆಷನು ಇಸ್ರಾಯೇಲನ್ನು ದಾಸತ್ವದಿಂದ ಬಿಡುಗಡೆಮಾಡುವಂತೆ ಯೆಹೋವನು ಪ್ರಚೋದಿಸುವನು. ಯೆಹೂದ್ಯರಿಗೆ ಬದಲಾಗಿ ಐಗುಪ್ತ, ಕೂಷ್‌ ಮತ್ತು ಸೆಬಾ ದೇಶಗಳು ಕೋರೆಷನಿಗೆ ‘ಈಡಾಗುವವು.’ (ಯೆಶಾಯ 43:⁠3) ಸೂಕ್ತವಾಗಿಯೇ, ಇಸ್ರಾಯೇಲಿನ ವಿಮೋಚಕನು “ಸೇನಾಧೀಶ್ವರನಾದ ಯೆಹೋವನು” ಎಂದು ಕರೆಯಲ್ಪಡುತ್ತಾನೆ. ಏಕೆಂದರೆ ಯೆಹೋವನ ಅದೃಶ್ಯವಾದ ದೂತಸೈನ್ಯಕ್ಕೆ ಹೋಲಿಸುವಾಗ, ಬಾಬೆಲಿನ ಬಲಾಢ್ಯವೆಂದು ತೋರುವ ಸೈನ್ಯವು ಕ್ಷುಲ್ಲಕವಾಗಿದೆ.

ಕ್ರೌರ್ಯಕ್ಕೆ ತಗಲುವ ಬೆಲೆ

8. ಬಾಬೆಲು “ಕತ್ತಲೊಳಗೆ ಹೊಗು”ವುದು ಯಾವ ಅರ್ಥದಲ್ಲಿ?

8 ಯೆಹೋವನು ಬಾಬೆಲಿನ ಪ್ರವಾದನ ಖಂಡನೆಯನ್ನು ಮುಂದುವರಿಸುತ್ತಾನೆ: “ಕಸ್ದೀಯರ ನಗರಿಯೇ, ಮೌನವಾಗಿ ಕೂತುಕೋ, ಕತ್ತಲೊಳಗೆ ಹೊಗು, ನೀನು ಇನ್ನು ರಾಜ್ಯಗಳ ರಾಣಿ ಎನಿಸಿಕೊಳ್ಳೆ.” (ಯೆಶಾಯ 47:5) ಬಾಬೆಲಿಗೆ ಕತ್ತಲೆ ಮತ್ತು ನಿರಾಶೆಗಳೇ ಇರುವವು. ಅದು ಇನ್ನು ಮುಂದೆ ಇತರ ರಾಜ್ಯಗಳ ಮೇಲೆ ಕ್ರೂರ ಯಜಮಾನಿಯಂತೆ ದೊರೆತನ ಮಾಡದು.​—⁠ಯೆಶಾಯ 14:⁠4.

9. ಯೆಹೋವನು ಯೆಹೂದ್ಯರ ಮೇಲೆ ರೋಷಗೊಳ್ಳುವುದೇಕೆ?

9 ಬಾಬೆಲು ದೇವಜನರಿಗೆ ಹಾನಿಮಾಡುವಂತೆ ಬಿಡಲ್ಪಡುವುದಾದರೂ ಏಕೆ? ಯೆಹೋವನು ವಿವರಿಸುವುದು: “ನಾನು ನನ್ನ ಜನರ ಮೇಲೆ ರೋಷಗೊಂಡು ಅವರನ್ನು ನಿನ್ನ ಕೈವಶ ಮಾಡಿ ನನ್ನ ಸ್ವಾಸ್ತ್ಯವನ್ನು ಹೊಲೆಗೆಡಿಸಿದೆನು.” (ಯೆಶಾಯ 47:6ಎ) ಯೆಹೂದ್ಯರ ಮೇಲೆ ರೋಷಗೊಳ್ಳಲು ಯೆಹೋವನಿಗೆ ಸಕಾರಣವಿದೆ. ಈ ಹಿಂದೆ ಆತನು, ಅವರು ತನ್ನ ಧರ್ಮಶಾಸ್ತ್ರಕ್ಕೆ ಅವಿಧೇಯತೆಯನ್ನು ತೋರಿಸುವಲ್ಲಿ, ಅವರು ದೇಶದಿಂದ ಹೊರಹಾಕಲ್ಪಡುವರೆಂದು ಎಚ್ಚರಿಸಿದ್ದನು. (ಧರ್ಮೋಪದೇಶಕಾಂಡ 28:64) ಅವರು ವಿಗ್ರಹಾರಾಧನೆ ಮತ್ತು ಲೈಂಗಿಕ ಅನೈತಿಕತೆಗೆ ಬಲಿಬಿದ್ದಾಗ, ಅವರನ್ನು ಸತ್ಯಾರಾಧನೆಗೆ ಹಿಂದಿರುಗಿಸಲು ಯೆಹೋವನು ಪ್ರೀತಿಯಿಂದ ಪ್ರವಾದಿಗಳನ್ನು ಕಳುಹಿಸಿದನು. ಆದರೆ, “ಅವರು ದೇವಪ್ರೇಷಿತರನ್ನು ಗೇಲಿಮಾಡಿ ಆತನ ಮಾತುಗಳನ್ನು ತುಚ್ಛೀಕರಿಸಿ ಆತನ ಪ್ರವಾದಿಗಳನ್ನು ಹೀಯಾಳಿಸಿದ್ದರಿಂದ ಆತನ ಕೋಪಾಗ್ನಿಯು ಆತನ ಪ್ರಜೆಯ ಮೇಲೆ ಉರಿಯಹತ್ತಿತು, ಅವರ ತಾಪವು ಆರಿಹೋಗಲೇ ಇಲ್ಲ.” (2 ಪೂರ್ವಕಾಲವೃತ್ತಾಂತ 36:16) ಆದಕಾರಣ, ಬಾಬೆಲು ಆ ದೇಶವನ್ನು ಆಕ್ರಮಿಸಿ, ಆತನ ಪವಿತ್ರಾಲಯವನ್ನು ಅಶುದ್ಧಗೊಳಿಸುವಾಗ, ದೇವರು ತನ್ನ ಸ್ವಾಸ್ತ್ಯವಾದ ಯೆಹೂದವು ಹೊಲೆಯಾಗುವಂತೆ ಬಿಡುತ್ತಾನೆ.​—⁠ಕೀರ್ತನೆ 79:1; ಯೆಹೆಜ್ಕೇಲ 24:⁠21.

10, 11. ಬಾಬೆಲು ತನ್ನ ಜನರನ್ನು ಜಯಿಸಬೇಕೆಂಬುದು ಯೆಹೋವನ ಚಿತ್ತವಾಗಿರುವಾಗ, ಆತನು ಅದರ ಮೇಲೆ ಕೋಪಿಸಿಕೊಳ್ಳುವುದೇಕೆ?

10 ಹಾಗಾದರೆ, ಈ ಮೇಲಿನ ಕಾರಣದಿಂದ ಬಾಬೆಲು ಯೆಹೂದ್ಯರನ್ನು ದಾಸತ್ವಕ್ಕೊಳಪಡಿಸುವಾಗ, ಅದು ದೇವರ ಚಿತ್ತವನ್ನೇ ಮಾಡುತ್ತಿಲ್ಲವೊ? ಇಲ್ಲ, ಏಕೆಂದರೆ ದೇವರನ್ನುವುದು: “ನೀನು ಅವರನ್ನು ಹೇಗೂ ಕರುಣಿಸದೆ ಮುದುಕರ ಮೇಲೆಯೂ ಬಹುಭಾರವಾದ ನೊಗವನ್ನು ಹೊರಿಸಿದಿ. ನಾನು ಶಾಶ್ವತವಾದ ರಾಣಿ ಎಂದು ನೀನು ಅಂದುಕೊಂಡು ಅವರ ಹಿಂಸೆಗಳನ್ನು ಮನಸ್ಸಿಗೆ ತಾರದೆ, ಅವುಗಳಿಂದ ನಿನಗಾಗುವ ಪರಿಣಾಮವನ್ನು [“ಮುಕ್ತಾಯವನ್ನು,” NW] ನೆನಸಿಕೊಳ್ಳಲಿಲ್ಲ.” (ಯೆಶಾಯ 47:6ಬಿ, 7) ಬಾಬೆಲು ವಿಪರೀತ ಕ್ರೌರ್ಯವನ್ನು ತೋರಿಸಬೇಕೆಂದು, “ಮುದುಕರ ಮೇಲೆಯೂ” ಕರುಣೆ ತೋರಿಸಬಾರದೆಂದು ದೇವರು ಆಜ್ಞಾಪಿಸಿರಲಿಲ್ಲ. (ಪ್ರಲಾಪಗಳು 4:16; 5:12) ತಮ್ಮ ಯೆಹೂದಿ ಸೆರೆಯಾಳುಗಳನ್ನು ಮೂದಲಿಸುವ ಮೂಲಕ ಕ್ರೂರ ರೀತಿಯ ಸಂತೋಷವನ್ನು ಪಡೆಯಬೇಕೆಂದೂ ಆತನು ಅವರನ್ನು ಪ್ರೋತ್ಸಾಹಿಸಿಲ್ಲ.​—⁠ಕೀರ್ತನೆ 137:⁠3.

11 ಯೆಹೂದ್ಯರ ಮೇಲೆ ತನಗಿರುವ ಹಿಡಿತವು ತಾತ್ಕಾಲಿಕವೆಂಬುದನ್ನು ಬಾಬೆಲು ಗ್ರಹಿಸುವುದಿಲ್ಲ. ಯೆಹೋವನು ತನ್ನ ಜನರನ್ನು ತಕ್ಕ ಕಾಲದಲ್ಲಿ ಬಿಡಿಸುತ್ತಾನೆಂಬ ಯೆಶಾಯನ ಎಚ್ಚರಿಕೆಯನ್ನು ಅದು ಅಸಡ್ಡೆಮಾಡಿದೆ. ತನಗೆ ಯೆಹೂದ್ಯರ ಮೇಲೆ ದೊರೆತನ ಮಾಡುವ ಕಾಯಂ ಹಕ್ಕು ಇದೆಯೊ ಎಂಬಂತೆ ಮತ್ತು ತನಗೆ ಅಧೀನವಾಗಿರುವ ರಾಜ್ಯಗಳ ಮೇಲೆ ಸದಾ ಯಜಮಾನಿಯಾಗಿ ಉಳಿಯುತ್ತೇನೊ ಎಂಬಂತೆ ಅದು ವರ್ತಿಸುತ್ತದೆ. ಅದರ ದಬ್ಬಾಳಿಕೆಗೆ “ಮುಕ್ತಾಯ”ವಿದೆ ಎಂಬ ಸಂದೇಶಕ್ಕೆ ಅದು ಕಿವಿಗೊಡುವುದಿಲ್ಲ!

ಬಾಬೆಲಿನ ಪತನವು ಮುಂತಿಳಿಸಲ್ಪಡುತ್ತದೆ

12. ಬಾಬೆಲನ್ನು ‘ಭೋಗಾಸಕ್ತಳು’ ಎಂದು ಏಕೆ ಕರೆಯಲಾಗಿದೆ?

12 ಯೆಹೋವನು ಹೇಳುವುದು: “ನಾನೇ ಇರುವವಳು, ನನ್ನ ಹೊರತು ಇನ್ನು ಯಾರೂ ಇಲ್ಲ, ನಾನು ವಿಧವೆಯಾಗಿ ಕೂತುಕೊಳ್ಳುವದಿಲ್ಲ, ಪುತ್ರಶೋಕವನ್ನು ಅನುಭವಿಸುವದಿಲ್ಲ ಅಂದುಕೊಳ್ಳುವವಳೇ, ಭೋಗಾಸಕ್ತಳೇ, ನೆಮ್ಮದಿಯಾಗಿ ನೆಲೆಗೊಂಡಿರುವವಳೇ, ಈಗ ಇದನ್ನು ಕೇಳು.” (ಯೆಶಾಯ 47:8) ಬಾಬೆಲು ಭೋಗಾಸಕ್ತಿಗೆ ಸುಪ್ರಸಿದ್ಧವಾಗಿದೆ. ಸಾ.ಶ.ಪೂ. ಐದನೆಯ ಶತಮಾನದ ಇತಿಹಾಸಕಾರ ಹಿರಾಡಟಸ್‌, ಬಾಬೆಲಿನವರ “ಅತಿ ಲಜ್ಜಾಸ್ಪದವಾದ ಪದ್ಧತಿ”ಯ ಕುರಿತು ಹೇಳುತ್ತಾನೆ. ಎಲ್ಲ ಸ್ತ್ರೀಯರು ತಮ್ಮ ಪ್ರೇಮದೇವತೆಯ ಗೌರವಾರ್ಥವಾಗಿ ವೇಶ್ಯೆಯರಾಗಿ ವರ್ತಿಸಬೇಕು ಎಂಬುದೇ ಆ ಪದ್ಧತಿಯಾಗಿದೆ. ಪುರಾತನ ಇತಿಹಾಸಕಾರ ಕರ್ಟಿಯಸ್‌ ಸಹ ಹೀಗಂದನು: “ನಗರದ ರೀತಿನೀತಿಗಳು ವಿಪರೀತವಾಗಿ ಮಲಿನಗೊಂಡಿವೆ. ಅತಿ ಭೋಗಾಸಕ್ತಿಗೆ ಇನ್ನಾವ ಭ್ರಷ್ಟತೆಯೂ ಅಷ್ಟೊಂದು ಉತ್ತೇಜನ ಮತ್ತು ಆಸೆಯನ್ನು ತೋರಿಸಲಿಕ್ಕಿಲ್ಲ.”

13. ಬಾಬೆಲಿಗಿರುವ ಭೋಗಾಸಕ್ತ ಪ್ರವೃತ್ತಿ ಅದರ ಪತನವನ್ನು ಹೇಗೆ ಶೀಘ್ರಗೊಳಿಸುತ್ತದೆ?

13 ಬಾಬೆಲಿನ ಭೋಗಾಸಕ್ತಿಯು ಅದರ ಪತನವನ್ನು ಶೀಘ್ರಗೊಳಿಸುವುದು. ಅದರ ಪತನದ ರಾತ್ರಿ ಅದರ ಅರಸನೂ ಅವನ ಮುಖಂಡರೂ ಔತಣದಲ್ಲಿ ಅಮಲಾಗುವಷ್ಟರ ಮಟ್ಟಿಗೆ ಕಂಠಪೂರ್ತಿ ಕುಡಿಯುವರು. ಹೀಗಿರುವುದರಿಂದ ಅವರು, ಮೇದ್ಯಯ ಪಾರಸಿಯ ಸೈನ್ಯಗಳು ಪಟ್ಟಣಕ್ಕೆ ಮುತ್ತಿಗೆ ಹಾಕುವುದನ್ನು ಲಕ್ಷಿಸುವುದಿಲ್ಲ. (ದಾನಿಯೇಲ 5:​1-4) “ನೆಮ್ಮದಿಯಲ್ಲಿ ನೆಲೆಗೊಂಡಿರುವ” ಬಾಬೆಲು, ಭದ್ರವಾಗಿರುವಂತೆ ತೋರುವ ಅದರ ಗೋಡೆಗಳು ಮತ್ತು ಕಂದಕವು ಅದನ್ನು ಆಕ್ರಮಣದಿಂದ ರಕ್ಷಿಸುವದು ಎಂದು ಭಾವಿಸುತ್ತದೆ. ತನ್ನ ಪರಮ ಶ್ರೇಷ್ಠತೆಯ ಸ್ಥಾನವನ್ನು ತೆಗೆದುಕೊಳ್ಳಲು “ನನ್ನ ಹೊರತು ಇನ್ನು ಯಾರೂ ಇಲ್ಲ” ಎಂದು ಅದು ಹೇಳಿಕೊಳ್ಳುತ್ತದೆ. ತನ್ನ ಚಕ್ರವರ್ತಿಯನ್ನು ಕಳೆದುಕೊಂಡು ತಾನು “ವಿಧವೆ”ಯಾಗುವೆನೆಂದೂ ತನ್ನ “ಪುತ್ರ”ರನ್ನು ಅಥವಾ ಪ್ರಜೆಗಳನ್ನು ಕಳೆದುಕೊಳ್ಳುವೆನೆಂದೂ ಅದು ಭಾವಿಸುವುದಿಲ್ಲ. ಆದರೆ ಯೆಹೋವ ದೇವರ ಮುಯ್ಯಿ ತೀರಿಸುವ ಹಸ್ತದಿಂದ ಅದನ್ನು ಯಾವ ಗೋಡೆಯೂ ರಕ್ಷಿಸದು! ಯೆಹೋವನು ಬಳಿಕ ಹೀಗೆ ಹೇಳುವನು: “ಬಾಬೆಲು ಆಕಾಶದ ತನಕ ಬೆಳೆದು ಎತ್ತರವಾಗಿಯೂ ಬಲವಾಗಿಯೂ ಇರುವ ತನ್ನ ಕೋಟೆಕೊತ್ತಲಗಳನ್ನು ಭದ್ರಪಡಿಸಿದರೂ ಹಾಳುಮಾಡುವವರು ನನ್ನ ಅಪ್ಪಣೆಯಿಂದ ಅದರ ಮೇಲೆ ಬೀಳುವರು.”​—⁠ಯೆರೆಮೀಯ 51:⁠53.

14. ಬಾಬೆಲು ಯಾವ ವಿಧದಲ್ಲಿ ‘ಪುತ್ರಶೋಕ, ವೈಧವ್ಯ’ ಇವೆರಡನ್ನೂ ಅನುಭವಿಸುವುದು?

14 ಬಾಬೆಲಿಗೆ ಏನಾಗುವುದು? ಯೆಹೋವನು ಮುಂದುವರಿಸುವುದು: “ಒಂದೇ ದಿನದೊಳಗೆ, ಒಂದು ಕ್ಷಣದಲ್ಲಿ, ಪುತ್ರಶೋಕ, ವೈಧವ್ಯ, ಇವೆರಡೂ ನಿನಗುಂಟಾಗುವವು; ನೀನು ಎಷ್ಟು ಮಾಟಮಾಡಿದರೂ ಎಷ್ಟೇ ಮಂತ್ರತಂತ್ರಗಳನ್ನು ನಡಿಸಿದರೂ ಇವುಗಳನ್ನು ಸಂಪೂರ್ಣವಾಗಿ ಅನುಭವಿಸುವಿ.” (ಯೆಶಾಯ 47:9) ಹೌದು, ಲೋಕ ಶಕ್ತಿಯಾಗಿರುವ ಬಾಬೆಲಿನ ಪರಮ ಶ್ರೇಷ್ಠತೆಯು ಇದ್ದಕ್ಕಿದ್ದಂತೆ ಅಂತ್ಯಗೊಳ್ಳುವುದು. ಪುರಾತನಕಾಲದ ಪ್ರಾಚ್ಯ ದೇಶಗಳಲ್ಲಿ, ಗಂಡನನ್ನು ಮತ್ತು ಮಕ್ಕಳನ್ನು ಕಳೆದುಕೊಳ್ಳುವುದು ಒಬ್ಬ ಸ್ತ್ರೀಗೆ ತೀರ ವಿಪತ್ಕಾರಕ ಅನುಭವವಾಗಿತ್ತು. ಆ ಪತನದ ರಾತ್ರಿ, ಅದು ಎಷ್ಟು ಮಂದಿ “ಪುತ್ರ”ರನ್ನು ಕಳೆದುಕೊಂಡಿತ್ತೆಂಬುದು ನಮಗೆ ತಿಳಿಯದು. d ಆದರೆ, ಸಮಯಾನಂತರ ಆ ನಗರವನ್ನು ಜನರು ಪೂರ್ತಿಯಾಗಿ ಬಿಟ್ಟುಹೋಗಲಿದ್ದರು. (ಯೆರೆಮೀಯ 51:29) ಅದು ವೈಧವ್ಯವನ್ನೂ ಅನುಭವಿಸಲಿತ್ತು, ಏಕೆಂದರೆ ಅದರ ರಾಜರು ಪಟ್ಟದಿಂದ ತಳ್ಳಿಹಾಕಲ್ಪಡುವರು.

15. ಬಾಬೆಲು ಯೆಹೂದ್ಯರಿಗೆ ತೋರಿಸಿದ ಕ್ರೌರ್ಯಕ್ಕಲ್ಲದೆ ಇನ್ನಾವ ಕಾರಣಕ್ಕೆ ಯೆಹೋವನು ಅದರ ಮೇಲೆ ಕೋಪಗೊಳ್ಳುತ್ತಾನೆ?

15 ಆದರೂ, ಬಾಬೆಲು ಯೆಹೂದ್ಯರನ್ನು ದುರುಪಚರಿಸಿದ್ದು, ಯೆಹೋವನ ಕೋಪಕ್ಕೆ ಒಂದೇ ಕಾರಣವಾಗಿರುವುದಿಲ್ಲ. ಅದರ ಅತ್ಯಧಿಕ ‘ಮಾಟವು’ ಕೂಡ ಆತನಿಗೆ ಕೋಪವೆಬ್ಬಿಸುತ್ತದೆ. ಇಸ್ರಾಯೇಲಿಗೆ ದೇವರು ಕೊಟ್ಟ ಆಜ್ಞೆಯು ಪ್ರೇತವ್ಯವಹಾರವಾದವನ್ನು ಖಂಡಿಸುತ್ತದೆ, ಆದರೆ ಬಾಬೆಲು ಅಂತಹ ಮಾಂತ್ರಿಕತೆಯನ್ನು ಉತ್ಸುಕತೆಯಿಂದ ಆಚರಿಸುತ್ತದೆ. (ಧರ್ಮೋಪದೇಶಕಾಂಡ 18:​10-12; ಯೆಹೆಜ್ಕೇಲ 21:21) ಅಶ್ಶೂರ್ಯರು ಮತ್ತು ಬಾಬೆಲಿನವರ ಸಾಮಾಜಿಕ ಜೀವನ (ಇಂಗ್ಲಿಷ್‌) ಎಂಬ ಪುಸ್ತಕವು ಹೇಳುವುದೇನೆಂದರೆ, ಬಾಬೆಲಿನವರು “ಬಹುಸಂಖ್ಯೆಯಲ್ಲಿ ದೆವ್ವಗಳು ತಮ್ಮನ್ನು ಸುತ್ತುವರಿದಿವೆ ಎಂದು ನಂಬಿ, ಅವುಗಳ ನಿರಂತರ ಭಯದಲ್ಲಿ ಜೀವಿಸಿದರು.”

ಕೆಟ್ಟದ್ದರಲ್ಲಿ ಭರವಸೆ

16, 17. (ಎ) ಬಾಬೆಲು ‘ಕೇಡಿಗೆ ಭಯಪಡದೆ’ ಇರುವುದು ಹೇಗೆ? (ಬಿ) ಬಾಬೆಲಿನ ಅಂತ್ಯವನ್ನು ಏಕೆ ತಪ್ಪಿಸಲು ಸಾಧ್ಯವಿಲ್ಲ?

16 ಬಾಬೆಲಿನ ಭವಿಷ್ಯಹೇಳುವವರು ಅದನ್ನು ರಕ್ಷಿಸಾರೊ? ಯೆಹೋವನು ಉತ್ತರ ಕೊಡುವುದು: “ನೀನು ಮಾಡಿದ ಕೇಡಿಗೆ ಭಯಪಡದೆ ನನ್ನನ್ನು ಯಾರೂ ನೋಡರು ಎಂದುಕೊಂಡಿದ್ದೀ; ನಿನ್ನ ಜ್ಞಾನವಿವೇಕಗಳು ನಿನ್ನನ್ನು ಸೊಟ್ಟಗೆ ತಿರುಗಿಸಿದ್ದರಿಂದ ನಾನೇ ಇರುವವಳು, ನನ್ನ ಹೊರತು ಇನ್ನು ಯಾರೂ ಇಲ್ಲವೆಂದು ಯೋಚಿಸಿಕೊಂಡಿದ್ದೀ.” (ಯೆಶಾಯ 47:10) ತನ್ನ ಐಹಿಕ ಮತ್ತು ಧಾರ್ಮಿಕ ವಿವೇಕ, ಮಿಲಿಟರಿ ಸೇನಾಬಲ ಮತ್ತು ಕುಯುಕ್ತಿಯ ಕ್ರೌರ್ಯದ ಕಾರಣ ತಾನು ಲೋಕ ಶಕ್ತಿಯ ಸ್ಥಾನದಲ್ಲೇ ಕುಳಿತುಕೊಂಡಿರುವೆನೆಂದು ಬಾಬೆಲು ಅಭಿಪ್ರಯಿಸುತ್ತದೆ. ತನ್ನನ್ನು ಯಾರೂ “ನೋಡರು,” ಅಂದರೆ ತನ್ನ ದುಷ್ಕೃತ್ಯಗಳಿಗೆ ತನ್ನನ್ನು ಯಾರೂ ಜವಾಬ್ದಾರಳನ್ನಾಗಿ ಮಾಡರು ಎಂದು ಅದು ನೆನಸುತ್ತದೆ ಮಾತ್ರವಲ್ಲ, ತನಗೆ ಪ್ರತಿಸ್ಪರ್ಧಿಯಾಗಿ ಎದ್ದುಬರುವ ಯಾರೂ ಅದಕ್ಕೆ ಕಂಡುಬರುವುದಿಲ್ಲ. “ನಾನೇ ಇರುವವಳು, ನನ್ನ ಹೊರತು ಇನ್ನು ಯಾರೂ ಇಲ್ಲ” ಎಂದು ಬಾಬೆಲು ತನ್ನಲ್ಲೇ ಹೇಳಿಕೊಳ್ಳುತ್ತದೆ.

17 ಆದರೂ, ಯೆಹೋವನು ತನ್ನ ಇನ್ನೊಬ್ಬ ಪ್ರವಾದಿಯ ಮೂಲಕ ಎಚ್ಚರಿಸುವುದು: “ನನ್ನ ಕಣ್ಣಿಗೆ ಬೀಳದಂತೆ ಯಾವನಾದರೂ ಗುಪ್ತಸ್ಥಳಗಳಲ್ಲಿ ತನ್ನನ್ನು ಮರೆಮಾಡಿಕೊಂಡಾನೇ?” (ಯೆರೆಮೀಯ 23:24; ಇಬ್ರಿಯ 4:13) ಈ ಕಾರಣದಿಂದ ಯೆಹೋವನು ಹೇಳುವುದು: “ಹೀಗಿರಲು ನೀನು ಮಂತ್ರಿಸಿ ನಿವಾರಿಸಲಾರದ ಕೇಡು ನಿನಗೆ ಸಂಭವಿಸುವದು, ನೀನು ಪರಿಹರಿಸಲಾಗದ ವಿಪತ್ತು ನಿನ್ನ ಮೇಲೆ ಬೀಳುವದು; ನೀನು ತಪ್ಪಿಸಲರಿಯದ ನಾಶನವು ನಿನಗೇ ತಟ್ಟನೆ ಉಂಟಾಗುವದು.” (ಯೆಶಾಯ 47:11) ಬಾಬೆಲಿನ ದೇವತೆಗಳಾಗಲಿ ಅದರ ಪ್ರೇತ ವ್ಯವಹಾರವಾದಿಗಳು “ಮಂತ್ರಿಸಿ” ಮಾಡುವ ಸಂಗತಿಗಳಾಗಲಿ, ಅದು ಹಿಂದೆಂದೂ ಅನುಭವಿಸಿರದಂತಹ ಬರಲಿರುವ ವಿಪತ್ತನ್ನು ತಪ್ಪಿಸಲಾರವು!

ಬಾಬೆಲಿನ ಮಂತ್ರಾಲೋಚಕರು ವಿಫಲಗೊಳ್ಳುತ್ತಾರೆ

18, 19. ತನ್ನ ಮಂತ್ರಾಲೋಚಕರ ಮೇಲೆ ಬಾಬೆಲಿನ ಆತುಕೊಳ್ಳುವಿಕೆಯು ಹೇಗೆ ವಿಪತ್ಕಾರಕವಾಗಿ ಪರಿಣಮಿಸುವುದು?

18 ಈಗ ಕೆಣಕುವ ನುಡಿಗಳಿಂದ ಯೆಹೋವನು ಆಜ್ಞಾಪಿಸುವುದು: “ಎದ್ದು ನಿಲ್ಲು, ನೀನು ಬಾಲ್ಯಾರಭ್ಯ ಪ್ರಯಾಸಪಟ್ಟು ಅಭ್ಯಾಸಿಸಿರುವ ನಿನ್ನ ಮಂತ್ರತಂತ್ರಗಳನ್ನೂ ಲೆಕ್ಕವಿಲ್ಲದ ನಿನ್ನ ಮಾಟಗಳನ್ನೂ ಪ್ರಯೋಗಿಸು; ಇದರಿಂದ ಒಂದು ವೇಳೆ ನಿನಗೆ ಪ್ರಯೋಜನವಾದೀತು, ಒಂದು ವೇಳೆ [ನಿನ್ನ ಶತ್ರುವಿನಲ್ಲಿ] ಭಯಹುಟ್ಟೀತು.” (ಯೆಶಾಯ 47:12) ಮಂತ್ರತಂತ್ರಗಳಲ್ಲಿ ಅದಕ್ಕಿರುವ ಭರವಸೆಯಲ್ಲಿ “ಎದ್ದುನಿಲ್ಲು”ವಂತೆ ಅಥವಾ ಬದಲಾಗದೆ ಮುಂದೆಸಾಗುವಂತೆ ಬಾಬೆಲಿಗೆ ಸವಾಲೊಡ್ಡಲಾಗುತ್ತದೆ. ಹೇಗೂ ಒಂದು ಜನಾಂಗದೋಪಾದಿ ಅದು “ಬಾಲ್ಯಾರಭ್ಯ”ದಿಂದಲೂ ತನ್ನ ಐಂದ್ರಜಾಲಿಕ ವಿದ್ಯೆಯ ಬೆಳವಣಿಗೆಗಾಗಿ ತುಂಬ ಪ್ರಯಾಸಪಟ್ಟಿದೆ.

19 ಆದರೆ ಯೆಹೋವನು ಅದನ್ನು ಮೂದಲಿಸುತ್ತಾ ಹೇಳುವುದು: “ಮಂತ್ರಾಲೋಚನೆಗಳನ್ನು ಕೇಳಿ ಕೇಳಿ ನಿನಗೆ ಸಾಕಾಯಿತಲ್ಲವೇ; ಖಗೋಲಜ್ಞರು [“ಆಕಾಶವನ್ನು ಆರಾಧಿಸುವವರು,” NW], ಜೋಯಿಸರು, ಪಂಚಾಂಗದವರು, ಇವರೆಲ್ಲರೂ ನಿಂತು ನಿನಗೆ ಬರುವ ವಿಪತ್ತುಗಳಿಂದ ನಿನ್ನನ್ನು ಉದ್ಧರಿಸಲಿ.” (ಯೆಶಾಯ 47:13) e ತನ್ನ ಮಂತ್ರಾಲೋಚಕರು ತೀರ ವಿಫಲರಾಗುವುದನ್ನು ಬಾಬೆಲು ನೋಡುವುದು. ನಿಜ, ಬಾಬೆಲಿನ ಜ್ಯೋತಿಶ್ಶಾಸ್ತ್ರದ ವಿಕಸನಕ್ಕೆ ಎಷ್ಟೋ ಶತಮಾನಗಳ ಖಗೋಲ ಪರಿಶೀಲನೆ ತಗಲಿದ್ದಿರಬಹುದು. ಆದರೆ, ತನ್ನ ಪತನದ ರಾತ್ರಿಯಂದು ಅದರ ಜ್ಯೋತಿಷಿಗಳ ವೈಫಲ್ಯವು, ಕಣಿ ಹೇಳುವಿಕೆಯು ನಿರರ್ಥಕವೆಂಬುದನ್ನು ಬಯಲುಮಾಡುವುದು.​—⁠ದಾನಿಯೇಲ 5:​7, 8.

20. ಬಾಬೆಲಿನ ಮಂತ್ರಾಲೋಚಕರ ಗತಿ ಏನಾಗುವುದು?

20 ಯೆಹೋವನು ಹೀಗೆ ಹೇಳುತ್ತ, ಪ್ರವಾದನೆಯ ಈ ಭಾಗವನ್ನು ಮುಕ್ತಾಯಗೊಳಿಸುತ್ತಾನೆ: “ಆಹಾ, ಇವರೆಲ್ಲಾ ಕೂಳೆಯಂತಿರುವರು, ಬೆಂಕಿಯು ಅವರನ್ನು ಸುಟ್ಟುಬಿಡುವದು, ಜ್ವಾಲೆಯ ರಭಸದಿಂದ ತಮ್ಮನ್ನು ರಕ್ಷಿಸಿಕೊಳ್ಳಲಾರರು; ಅದು ಕಾಯಿಸಿಕೊಳ್ಳುವ ಕೆಂಡವಲ್ಲ, ಮುಂದೆ ಕುಳಿತರೆ ಹಾಯಾಗಿರುವ ಉರಿಯಲ್ಲ. ನೀನು ಪ್ರಯಾಸಪಟ್ಟವುಗಳೆಲ್ಲಾ ನಿನಗೆ ಹೀಗಾಗುವವು; ನಿನ್ನ ಬಾಲ್ಯದಿಂದ ನಿನ್ನಲ್ಲಿ ವ್ಯಾಪಾರ ಮಾಡಿದವರೆಲ್ಲರೂ ಚದರಿ ತಮ್ಮ ತಮ್ಮ ಪ್ರಾಂತಕ್ಕೆ ಹೋಗಿಬಿಡುವರು; ನಿನ್ನನ್ನು ರಕ್ಷಿಸಲು ಒಬ್ಬನೂ ಇರನು.” (ಯೆಶಾಯ 47:​14, 15) ಹೌದು, ಈ ಸುಳ್ಳು ಮಂತ್ರಾಲೋಚಕರ ಮೇಲೆ ಬೆಂಕಿಯಂಥ ಸಮಯಗಳು ಬರುವವು. ಅದು, ಜನರು ಚಳಿ ಕಾಯಿಸಲು ಕುಳಿತುಕೊಳ್ಳುವ ಬೆಚ್ಚಗಿಡುವ ಬೆಂಕಿಯಾಗಿರದು. ಬದಲಿಗೆ, ಆ ಸುಳ್ಳು ಮಂತ್ರಾಲೋಚಕರು ಕೂಳೆಯಷ್ಟು ನಿಷ್ಪ್ರಯೋಜಕರೆಂದು ತೋರಿಸುವ ನಾಶಕಾರಕ, ಸುಡುವ ಬೆಂಕಿ ಅದಾಗಿರುವುದು. ಹೀಗಿರುವುದರಿಂದ ಬಾಬೆಲಿನ ಮಂತ್ರಾಲೋಚಕರು ಭಯದಿಂದ ಪಲಾಯನಗೈಯುವುದು ಆಶ್ಚರ್ಯಕರವೇನಲ್ಲ! ಬಾಬೆಲಿನ ಕೊನೆಯ ಆಸರೆಯಾಗಿರುವ ಇವರು ಇಲ್ಲದೆಹೋಗುವಾಗ, ಅದನ್ನು ರಕ್ಷಿಸಲು ಇನ್ನಾರೂ ಇರುವುದಿಲ್ಲ. ಅದು ಯೆರೂಸಲೇಮಿನ ಮೇಲೆ ತಂದಿದ್ದ ಅಂತ್ಯವಿಧಿಯನ್ನು ಸ್ವತಃ ಅನುಭವಿಸುವುದು.​—⁠ಯೆರೆಮೀಯ 11:⁠12.

21. ಯೆಶಾಯನ ಪ್ರವಾದನ ಮಾತುಗಳು ಹೇಗೆ ಮತ್ತು ಯಾವಾಗ ನಿಜವಾಗಿ ಪರಿಣಮಿಸುತ್ತವೆ?

21 ಸಾ.ಶ.ಪೂ. 539ರಲ್ಲಿ ಈ ಪ್ರೇರಿತ ಮಾತುಗಳು ನೆರವೇರಲಾರಂಭಿಸುತ್ತವೆ. ಕೋರೆಷನ ನಾಯಕತ್ವದಲ್ಲಿ ಮೇದ್ಯಯ ಪಾರಸಿಯ ಸೈನ್ಯಗಳು ನಗರವನ್ನು ವಶಪಡಿಸಿಕೊಂಡು, ಆಗ ನಗರದಲ್ಲಿದ್ದ ರಾಜನಾದ ಬೇಲ್ಶಚ್ಚರನನ್ನು ಕೊಲ್ಲುತ್ತವೆ. (ದಾನಿಯೇಲ 5:​1-4, 30) ಒಂದೇ ರಾತ್ರಿಯಲ್ಲಿ ಬಾಬೆಲು ತನ್ನ ಲೋಕಾಧಿಕಾರದ ಸ್ಥಾನದಿಂದ ಕೆಡವಲ್ಪಡುತ್ತದೆ. ಹೀಗೆ, ಶತಮಾನಗಳಿಂದ ಇದ್ದ ಶೇಮನ ಸಂತಾನದವರ ಅಧಿಕಾರವು ಅಂತ್ಯಗೊಂಡು, ಲೋಕವು ಈಗ ಆರ್ಯ ಜನರ ಮುಷ್ಟಿಯೊಳಗೆ ಬರುತ್ತದೆ. ಬಾಬೆಲು ಮುಂದಿನ ಶತಮಾನಗಳಲ್ಲಿ ಅವನತಿಹೊಂದುತ್ತದೆ. ಸಾ.ಶ. ನಾಲ್ಕನೆಯ ಶತಮಾನದೊಳಗೆ ಬಾಬೆಲು ಕೇವಲ “ಹಾಳುದಿಬ್ಬ”ವಾಗಿರುತ್ತದೆ. (ಯೆರೆಮೀಯ 51:37) ಹೀಗೆ, ಯೆಶಾಯನ ಪ್ರವಾದನೆ ಪೂರ್ಣವಾಗಿ ನೆರವೇರುತ್ತದೆ.

ಆಧುನಿಕ ದಿನದ ಬಾಬೆಲ್‌

22. ಬಾಬೆಲಿನ ಪತನವು ಹೆಮ್ಮೆಯ ವಿಷಯದಲ್ಲಿ ನಮಗೆ ಯಾವ ಪಾಠವನ್ನು ಕಲಿಸುತ್ತದೆ?

22 ಯೆಶಾಯನ ಪ್ರವಾದನೆಯು ನಾವು ಇನ್ನೂ ಹೆಚ್ಚು ವಿಷಯಗಳನ್ನು ಆಲೋಚಿಸುವಂತೆ ಮಾಡುತ್ತದೆ. ಒಂದನೆಯದಾಗಿ, ಅದು ಹೆಮ್ಮೆ ಮತ್ತು ಅಹಂಕಾರದಿಂದ ಬರುವ ಅಪಾಯಗಳನ್ನು ಒತ್ತಿಹೇಳುತ್ತದೆ. ಅಹಂಕಾರಿ ಬಾಬೆಲಿನ ಪತನವು, “ಗರ್ವದಿಂದ ಭಂಗ; ಉಬ್ಬಿನಿಂದ ದೊಬ್ಬು” ಎಂಬ ಬೈಬಲ್‌ ಜ್ಞಾನೋಕ್ತಿಯನ್ನು ಉತ್ತಮವಾಗಿ ದೃಷ್ಟಾಂತಿಸುತ್ತದೆ. (ಜ್ಞಾನೋಕ್ತಿ 16:18) ಕೆಲವು ವೇಳೆ, ಹೆಮ್ಮೆಯು ನಮ್ಮ ಅಪೂರ್ಣ ಸ್ವಭಾವಗಳ ಮೇಲೆ ದೊರೆತನ ನಡೆಸುತ್ತದಾದರೂ, ಹೆಮ್ಮೆಯಿಂದ ‘ಉಬ್ಬಿಕೊಳ್ಳುವುದು’ ನಮ್ಮನ್ನು “ನಿಂದೆಗೆ” ಮತ್ತು “ಸೈತಾನನ ಉರ್ಲಿನೊಳಗೆ” ನಡೆಸಬಲ್ಲದು. (1 ತಿಮೊಥೆಯ 3:​6, 7) ಆದುದರಿಂದ, ನಾವು ಯಾಕೋಬನ ಈ ಬುದ್ಧಿವಾದಕ್ಕೆ ಕಿವಿಗೊಡುವುದು ಒಳ್ಳೆಯದು: “ಕರ್ತನ [“ಯೆಹೋವನ,” NW] ಮುಂದೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆಗಲಾತನು ನಿಮ್ಮನ್ನು ಮೇಲಕ್ಕೆ ತರುವನು.”​—⁠ಯಾಕೋಬ 4:⁠10.

23. ಯೆಶಾಯನ ಪ್ರವಾದನೆಯು ನಮಗೆ ಯಾವ ಭರವಸೆಯಿರುವಂತೆ ಸಹಾಯಮಾಡುತ್ತದೆ?

23 ಆ ಪ್ರವಾದನ ಮಾತುಗಳು, ತನ್ನ ವಿರೋಧಿಗಳಿಗಿಂತಲೂ ಬಲಿಷ್ಠನಾಗಿರುವ ಯೆಹೋವನಲ್ಲಿ ಭರವಸೆಯಿಡುವಂತೆಯೂ ನಮಗೆ ಸಹಾಯಮಾಡುತ್ತವೆ. (ಕೀರ್ತನೆ 24:8; 34:7; 50:15; 91:​14, 15) ಈ ಕಷ್ಟಕರ ದಿನಗಳಲ್ಲಿ ಇದೊಂದು ಸಾಂತ್ವನದಾಯಕ ಮರುಜ್ಞಾಪನವಾಗಿದೆ. ಯೆಹೋವನಲ್ಲಿಡುವ ಭರವಸೆಯು ನಾವು ಆತನ ದೃಷ್ಟಿಯಲ್ಲಿ ನಿರ್ದೋಷಿಗಳಾಗಿರುವಂತೆ ನಮ್ಮನ್ನು ಬಲಪಡಿಸುತ್ತದೆ. ಏಕೆಂದರೆ, ಆ ‘ನಿರ್ದೋಷಿಯ ಭವಿಷ್ಯತ್ತು ನೆಮ್ಮದಿಯದ್ದಾಗಿರುವುದು.’ (ಕೀರ್ತನೆ 37:​37, 38, NW) ಸೈತಾನನ “ತಂತ್ರೋಪಾಯಗಳ” ಎದುರಿನಲ್ಲಿ ನಮ್ಮ ಸ್ವಂತ ಸಾಮರ್ಥ್ಯಗಳ ಮೇಲೆ ಆತುಕೊಳ್ಳುವ ಬದಲು ಯಾವಾಗಲೂ ಯೆಹೋವನ ಕಡೆಗೆ ನೋಡುವುದು ವಿವೇಕಪ್ರದವಾಗಿದೆ.​—⁠ಎಫೆಸ 6:​10-13.

24, 25. (ಎ) ಜ್ಯೋತಿಶ್ಶಾಸ್ತ್ರವು ತರ್ಕಬದ್ಧವಲ್ಲವೇಕೆ, ಆದರೆ ಅನೇಕರು ಅದರ ಕಡೆಗೆ ತಿರುಗುವುದೇಕೆ? (ಬಿ) ಕ್ರೈಸ್ತರು ಮೂಢನಂಬಿಕೆಯನ್ನು ತ್ಯಜಿಸಲು ಕೆಲವು ಕಾರಣಗಳಾವುವು?

24 ಗಮನಾರ್ಹವಾಗಿ, ನಮಗೆ ಪ್ರೇತ ವ್ಯವಹಾರವಾದದ ಸಂಬಂಧದಲ್ಲಿ, ವಿಶೇಷವಾಗಿ ಜ್ಯೋತಿಶ್ಶಾಸ್ತ್ರದ ವಿಷಯದಲ್ಲಿ ಎಚ್ಚರಿಕೆ ಕೊಡಲಾಗಿದೆ. (ಗಲಾತ್ಯ 5:​20, 21) ಬಾಬೆಲ್‌ ಪತನಗೊಂಡರೂ, ಜ್ಯೋತಿಶ್ಶಾಸ್ತ್ರವು ಮಾತ್ರ ಜನರ ಮೇಲೆ ತನಗಿದ್ದ ಹಿಡಿತವನ್ನು ಕಳೆದುಕೊಳ್ಳಲಿಲ್ಲ. ಆಸಕ್ತಿಕರವಾಗಿ, ಪ್ರಾಚೀನ ಜಗತ್ತಿನ ಮಹಾ ನಗರಗಳು (ಇಂಗ್ಲಿಷ್‌) ಎಂಬ ಪುಸ್ತಕವು, ಬಾಬೆಲಿನವರು ರೇಖಿಸಿದ ನಕ್ಷತ್ರಪುಂಜಗಳು ತಮ್ಮ ಹಿಂದಿನ ಸ್ಥಾನಗಳಿಂದ “ಅಗಲಿ ಹೋಗಿವೆ” ಮತ್ತು “[ಜ್ಯೋತಿಶ್ಶಾಸ್ತ್ರದ] ಸಂಪೂರ್ಣ ವಿಚಾರವನ್ನೇ ಅರ್ಥಹೀನವಾಗಿ ಮಾಡಿವೆ” ಎಂದು ಹೇಳುತ್ತದೆ. ಆದರೆ ಈಗಲೂ ಜ್ಯೋತಿಶ್ಶಾಸ್ತ್ರವು ಸಮೃದ್ಧವಾಗಿ ಬೆಳೆಯುತ್ತಿದ್ದು, ಅನೇಕ ವಾರ್ತಾಪತ್ರಗಳು ತಮ್ಮ ಅಂಕಣಗಳಲ್ಲಿ ಓದುಗರಿಗೆ ಜಾತಕಗಳನ್ನು ಸುಲಭವಾಗಿ ಲಭ್ಯಗೊಳಿಸುತ್ತವೆ.

25 ಜನರು, ವಿದ್ಯಾವಂತರು ಸಹ, ನಕ್ಷತ್ರಗಳನ್ನು ವಿಚಾರಿಸುವಂತೆ ಅಥವಾ ತರ್ಕಬದ್ಧವಲ್ಲದ ಮತ್ತು ಮೂಢನಂಬಿಕೆಯ ಇತರ ಆಚಾರಗಳಲ್ಲಿ ಪಾಲ್ಗೊಳ್ಳುವಂತೆ ಯಾವುದು ಮಾಡುತ್ತದೆ? ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲೊಪೀಡಿಯ ಹೇಳುವುದು: “ಜನರು ಪರಸ್ಪರ ಭಯದಿಂದಿದ್ದು, ಭವಿಷ್ಯದ ವಿಷಯದಲ್ಲಿ ಅನಿಶ್ಚಿತರಾಗಿರುವಷ್ಟು ಸಮಯ, ಮೂಢನಂಬಿಕೆಗಳು ಪ್ರಾಯಶಃ ಜೀವನದ ಒಂದು ಭಾಗವಾಗಿರುವವು.” ಭಯ ಮತ್ತು ಅನಿಶ್ಚಿತತೆಯು ಜನರನ್ನು ಮೂಢನಂಬಿಕೆಗೆ ನಡೆಸೀತು. ಆದರೆ ಕ್ರೈಸ್ತರು ಮೂಢನಂಬಿಕೆಯನ್ನು ತ್ಯಜಿಸುತ್ತಾರೆ. ಅವರು ಮನುಷ್ಯರಿಗೆ ಭಯಪಡುವುದಿಲ್ಲ. ಯೆಹೋವನೇ ಅವರಿಗೆ ಬೆಂಬಲಿಗನಾಗಿದ್ದಾನೆ. (ಕೀರ್ತನೆ 6:​4-10) ಮತ್ತು ಅವರು ಭವಿಷ್ಯದ ಕುರಿತು ಅನಿಶ್ಚಿತರಾಗಿರುವುದಿಲ್ಲ; ಅವರಿಗೆ ಯೆಹೋವನ ಪ್ರಕಟಿತ ಉದ್ದೇಶಗಳು ತಿಳಿದಿವೆ ಮತ್ತು “ಯೆಹೋವನ ಆಲೋಚನೆಯೋ ಶಾಶ್ವತವಾಗಿಯೇ ನಿಲ್ಲುವದು” ಎಂಬ ಖಾತ್ರಿ ಅವರಿಗಿದೆ. (ಕೀರ್ತನೆ 33:11) ಯೆಹೋವನ ಸಲಹೆಗನುಸಾರ ನಮ್ಮ ಜೀವಿತಗಳನ್ನು ನಡೆಸಿದರೆ ನಮಗೆ ಖಂಡಿತವಾಗಿಯೂ ಸಂತೋಷದ ಮತ್ತು ದೀರ್ಘಾವಧಿಯ ಭವಿಷ್ಯತ್ತು ಇರುವುದು.

26. “ಜ್ಞಾನಿಗಳ ಯೋಚನೆಗಳು ನಿಷ್ಫಲ”ವಾಗಿ ಪರಿಣಮಿಸಿರುವುದು ಹೇಗೆ?

26 ಇತ್ತೀಚಿನ ವರ್ಷಗಳಲ್ಲಿ, ಕೆಲವರು ಹೆಚ್ಚು “ವೈಜ್ಞಾನಿಕ” ರೀತಿಗಳಲ್ಲಿ ಭವಿಷ್ಯವನ್ನು ಗ್ರಹಿಸಲು ಪ್ರಯತ್ನಿಸಿದ್ದಾರೆ. ಭವಿಷ್ಯಾನುಮಾನ ಎಂಬ ಒಂದು ಶಿಕ್ಷಣ ರೀತಿಯೂ ಈಗ ರೂಢಿಯಲ್ಲಿದೆ. ಇದನ್ನು “ಪ್ರಚಲಿತ ಪ್ರವೃತ್ತಿಗಳ ಮೇಲೆ ಆಧಾರಿಸಿರುವ ಭಾವೀ ಸಾಧ್ಯತೆಗಳ ಅಧ್ಯಯನ” ಎಂದು ಅರ್ಥನಿರೂಪಿಸಲಾಗಿದೆ. ಉದಾಹರಣೆಗೆ, ಹಿಂದೆ 1972ರಲ್ಲಿ ಕ್ಲಬ್‌ ಆಫ್‌ ರೋಮ್‌ ಎಂದು ಪ್ರಸಿದ್ಧವಾಗಿರುವ ಪಂಡಿತರು ಮತ್ತು ವ್ಯಾಪಾರಿಗಳ ಒಂದು ಗುಂಪು, 1992ರೊಳಗೆ ಲೋಕದಲ್ಲಿರುವ ಎಲ್ಲ ಚಿನ್ನ, ಪಾದರಸ, ಸತು (ಸಿಂಕ್‌) ಮತ್ತು ಪೆಟ್ರೋಲಿಯಮ್‌ನ ದಾಸ್ತಾನು ಖಾಲಿಯಾಗಿ ಹೋಗುವುದು ಎಂದು ಮುಂತಿಳಿಸಿತು. ಲೋಕವು 1972ರಿಂದ ಭಯಂಕರ ಸಮಸ್ಯೆಗಳನ್ನು ಎದುರಿಸಿದೆಯಾದರೂ, ಆ ಭವಿಷ್ಯನುಡಿ ಮಾತ್ರ ಸಂಪೂರ್ಣವಾಗಿ ತಪ್ಪಾಗಿ ರುಜುವಾಗಿದೆ. ಭೂಮಿಯಲ್ಲಿ ಚಿನ್ನ, ಪಾದರಸ, ಸತು ಮತ್ತು ಪೆಟ್ರೋಲಿಯಮ್‌ನ ದಾಸ್ತಾನು ಇನ್ನೂ ಇದೆ. ಮನುಷ್ಯನು ಭವಿಷ್ಯವನ್ನು ಮುಂತಿಳಿಸಲು ಬಹಳಷ್ಟು ಹೆಣಗಾಡಿದ್ದಾನೆಂಬುದು ನಿಜವಾದರೂ, ಅವನ ಊಹೆಗಳು ಸದಾ ಅವಿಶ್ವಾಸಾರ್ಹವಾಗಿ ಪರಿಣಮಿಸಿವೆ. “ಜ್ಞಾನಿಗಳ ಯೋಚನೆಗಳು ನಿಷ್ಫಲ”ವೆಂಬುದು ಸತ್ಯ.​—⁠1 ಕೊರಿಂಥ 3:20.

ಮಹಾ ಬಾಬೆಲಿಗೆ ಬರಲಿರುವ ಅಂತ್ಯ

27. ಮಹಾ ಬಾಬೆಲು ಸಾ.ಶ.ಪೂ. 539ರಲ್ಲಿ ಬಾಬೆಲಿಗಾಗಿದ್ದ ರೀತಿಯ ಪತನವನ್ನು ಯಾವಾಗ ಮತ್ತು ಯಾವ ವಿಧದಲ್ಲಿ ಅನುಭವಿಸಿತು?

27 ಆಧುನಿಕ ದಿನದ ಧರ್ಮಗಳು ಪುರಾತನ ಬಾಬೆಲಿನ ಅನೇಕ ಬೋಧನೆಗಳನ್ನು ಅನುಸರಿಸುತ್ತ ಮುಂದುವರಿದಿವೆ. ಆದಕಾರಣ, ಸುಳ್ಳು ಧರ್ಮದ ಲೋಕ ಸಾಮ್ರಾಜ್ಯಕ್ಕೆ ಮಹಾ ಬಾಬೆಲೆಂಬ ಹೆಸರನ್ನು ಕೊಟ್ಟಿರುವುದು ಯೋಗ್ಯವಾಗಿದೆ. (ಪ್ರಕಟನೆ 17:⁠5) ಆ ಅಂತರ್‌ರಾಷ್ಟ್ರೀಯ ಧಾರ್ಮಿಕ ಕಲಬೆರಕೆಯು, ಸಾ.ಶ.ಪೂ. 539ರಲ್ಲಿ ಪುರಾತನ ಬಾಬೆಲು ಪತನಗೊಂಡಂತೆಯೇ ಈಗಾಗಲೇ ಪತನಗೊಂಡಿದೆ. (ಪ್ರಕಟನೆ 14:8; 18:⁠2) ಕ್ರಿಸ್ತನ ಸಹೋದರರಲ್ಲಿ ಉಳಿಕೆಯವರು 1919ರಲ್ಲಿ ಆತ್ಮಿಕ ಬಂಧನದಿಂದ ಹೊರಗೆ ಬಂದು, ಮಹಾ ಬಾಬೆಲಿನ ಪ್ರಧಾನ ಭಾಗವಾದ ಕ್ರೈಸ್ತಪ್ರಪಂಚದ ಧಾರ್ಮಿಕ ಪ್ರಭಾವವನ್ನು ತಮ್ಮಿಂದ ತೊಲಗಿಸಿಬಿಟ್ಟರು. ಅಂದಿನಿಂದ ಈ ಹಿಂದೆ ಅನೇಕ ದೇಶಗಳಲ್ಲಿ ಬಲಾಢ್ಯವಾಗಿದ್ದ ಕ್ರೈಸ್ತಪ್ರಪಂಚವು ತನ್ನ ಹೆಚ್ಚಿನ ಪ್ರಭಾವವನ್ನು ಕಳೆದುಕೊಂಡಿದೆ.

28. ಮಹಾ ಬಾಬೆಲು ಏನೆಂದು ಜಂಬಕೊಚ್ಚಿಕೊಳ್ಳುತ್ತದೆ, ಆದರೆ ಅದಕ್ಕೆ ಏನು ಕಾದಿದೆ?

28 ಆದರೆ ಆ ಪತನವು ಸುಳ್ಳು ಧರ್ಮದ ಅಂತಿಮ ನಾಶನದ ಒಂದು ಮುನ್‌ಸೂಚನೆಯಾಗಿತ್ತಷ್ಟೆ. ಆಸಕ್ತಿಕರವಾಗಿ, ಮಹಾ ಬಾಬೆಲಿನ ನಾಶನದ ಕುರಿತಾದ ಪ್ರಕಟನೆ ಪುಸ್ತಕದ ಪ್ರವಾದನೆಯು, ಯೆಶಾಯ 47:​8, 9ರಲ್ಲಿ ದಾಖಲಿಸಲ್ಪಟ್ಟಿರುವ ಪ್ರವಾದನ ಮಾತುಗಳನ್ನು ನಮ್ಮ ಜ್ಞಾಪಕಕ್ಕೆ ತರುತ್ತದೆ. ಪುರಾತನ ಬಾಬೆಲಿನಂತೆಯೇ ಆಧುನಿಕ ಬಾಬೆಲು ಸಹ, “ನಾನು ರಾಣಿಯಾಗಿ ಕೂತುಕೊಂಡಿದ್ದೇನೆ, ನಾನು ವಿಧವೆಯಲ್ಲ, ದುಃಖವನ್ನು ಕಾಣುವದೇ ಇಲ್ಲ” ಎಂದು ಹೇಳುತ್ತದೆ. ಆದರೆ, “ಅವಳಿಗೆ ಕೊಲೆ ದುಃಖ ಕ್ಷಾಮ ಎಂಬೀ ಉಪದ್ರವಗಳು ಒಂದೇ ದಿನದಲ್ಲಿ ಸಂಭವಿಸುವವು. ಅವಳು ಬೆಂಕಿಯಿಂದ ಸುಟ್ಟುಹೋಗುವಳು; ಅವಳಿಗೆ ದಂಡನೆಯನ್ನು ವಿಧಿಸಿದ ದೇವರಾಗಿರುವ ಕರ್ತನು [“ಯೆಹೋವನು,” NW] ಬಲಿಷ್ಠನಾಗಿದ್ದಾನೆ.” ಆದಕಾರಣ, ಯೆಶಾಯ 47ನೆಯ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟಿರುವ ಪ್ರವಾದನ ಮಾತುಗಳು, ಇನ್ನೂ ಸುಳ್ಳು ಧರ್ಮಗಳಲ್ಲಿರುವವರಿಗೆ ಒಂದು ಎಚ್ಚರಿಕೆಯಾಗಿವೆ. ಅದರ ನಾಶನದಲ್ಲಿ ಭಾಗಿಗಳಾಗುವುದನ್ನು ತಪ್ಪಿಸಿಕೊಳ್ಳಬೇಕಾದರೆ, “ಅವಳನ್ನು ಬಿಟ್ಟುಬನ್ನಿರಿ” ಎಂಬ ಪ್ರೇರಿತ ಆಜ್ಞೆಗೆ ಅವರು ಕಿವಿಗೊಡಲಿ!​—⁠ಪ್ರಕಟನೆ 18:​4, 7, 8.

[ಪಾದಟಿಪ್ಪಣಿಗಳು]

a ಸುಳ್ಳು ಧಾರ್ಮಿಕ ಸಿದ್ಧಾಂತಗಳ ಬೆಳವಣಿಗೆಯ ಕುರಿತಾದ ವಿವರವಾದ ಮಾಹಿತಿಗಾಗಿ, ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿತ, ದೇವರಿಗಾಗಿ ಮಾನವಕುಲದ ಅನ್ವೇಷಣೆ (ಇಂಗ್ಲಿಷ್‌) ಎಂಬ ಪುಸ್ತಕವನ್ನು ನೋಡಿ.

b ಹೀಬ್ರು ಭಾಷೆಯಲ್ಲಿ, “ಬಾಬೆಲಿನ ಕನ್ಯಾಪುತ್ರಿ” ಎಂಬುದು, ಬಾಬೆಲನ್ನು ಇಲ್ಲವೆ ಬಾಬೆಲಿನ ನಿವಾಸಿಗಳನ್ನು ಸೂಚಿಸುವ ಒಂದು ನುಡಿಗಟ್ಟು. ಅದು ಲೋಕ ಶಕ್ತಿಯಾದಂದಿನಿಂದ ಅದನ್ನು ಯಾರೂ ಜಯಿಸಿ ಸೂರೆಮಾಡದೆ ಇರುವುದರಿಂದಲೇ ಅದು ‘ಕನ್ಯೆ’ ಆಗಿದೆ.

c “ನಾನು ಯಾವ ಮನುಷ್ಯನನ್ನೂ ದಯೆಯಿಂದ ಸಂಧಿಸೆನು” ಎಂದು ಭಾಷಾಂತರವಾಗಿರುವ ಹೇಳಿಕೆಯನ್ನು ವಿದ್ವಾಂಸರು, ಭಾಷಾಂತರ ಮಾಡಲು “ತೀರ ಕಷ್ಟಕರವಾದ ವಾಕ್ಸರಣಿ” ಎಂದು ವರ್ಣಿಸಿದ್ದಾರೆ. ಇಲ್ಲಿ ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌, “ದಯೆಯಿಂದ” ಎಂಬರ್ಥದ ಇಂಗ್ಲಿಷ್‌ ಪದವನ್ನು ಸೇರಿಸುತ್ತದೆ. ಹೊರಗಿನವರು ಯಾರೂ ಬಾಬೆಲಿನ ಸಹಾಯಕ್ಕೆ ಬರಲು ಬಿಡಲ್ಪಡುವುದಿಲ್ಲ ಎಂಬ ವಿಚಾರವನ್ನು ಸೂಚಿಸಲಿಕ್ಕಾಗಿಯೇ ಹೀಗೆ ಮಾಡಲಾಗಿದೆ. ಜ್ಯೂವಿಷ್‌ ಪಬ್ಲಿಕೇಷನ್‌ ಸೊಸೈಟಿಯ ಒಂದು ಭಾಷಾಂತರವು ಇದನ್ನು, “ಯಾವ ಮನುಷ್ಯನೂ ಮಧ್ಯಸ್ಥಿಕೆ . . . ವಹಿಸುವಂತೆ ನಾನು ಬಿಡೆನು” ಎಂದು ಭಾಷಾಂತರಿಸುತ್ತದೆ.

d ರೇಮಂಡ್‌ ಫಿಲಿಪ್‌ ಡವರ್ಟಿಯವರು ಬರೆದ ನೆಬೊನೈಡಸ್‌ ಮತ್ತು ಬೆಲ್‌ಶಾಸರ್‌ (ಇಂಗ್ಲಿಷ್‌) ಎಂಬ ಪುಸ್ತಕವು, ನೆಬೊನೈಡಸ್‌ ವೃತ್ತಾಂತವು ಬಾಬೆಲಿನ ಆಕ್ರಮಣಕಾರರು “ಯುದ್ಧಮಾಡದೆ” ನಗರವನ್ನು ಪ್ರವೇಶಿಸಿದರು ಎಂದು ಹೇಳುವಾಗ, ಗ್ರೀಕ್‌ ಇತಿಹಾಸಕಾರ ಸಿನಫನ್‌, ಅಲ್ಲಿ ತುಂಬ ರಕ್ತಪಾತವಿದ್ದಿರಬಹುದು ಎಂದು ಹೇಳುತ್ತಾನೆ.

e “ಆಕಾಶವನ್ನು ಆರಾಧಿಸುವವರು” ಎಂದು ಭಾಷಾಂತರವಾಗಿರುವ ಹೀಬ್ರು ಪದಗಳನ್ನು ಕೆಲವರು, “ಆಕಾಶವನ್ನು ವಿಭಾಗಿಸುವವರು” ಎಂದು ತರ್ಜುಮೆಮಾಡಿದ್ದಾರೆ. ಇದು ಜಾತಕ ಬರೆಯಲು ಆಕಾಶವನ್ನು ಅನೇಕ ಕ್ಷೇತ್ರಗಳಾಗಿ ವಿಭಾಗಿಸುವ ಪದ್ಧತಿಗೆ ಸೂಚಿಸುತ್ತದೆ.

[ಅಧ್ಯಯನ ಪ್ರಶ್ನೆಗಳು]

[ಪುಟ 111ರಲ್ಲಿರುವ ಚಿತ್ರಗಳು]

ಭೋಗಾಸಕ್ತ ಬಾಬೆಲು ಮಣ್ಣುಪಾಲಾಗುವುದು

[ಪುಟ 114ರಲ್ಲಿರುವ ಚಿತ್ರ]

ಬಾಬೆಲಿನ ಜ್ಯೋತಿಷಿಗಳು ಆಕೆಯ ಪತನವನ್ನು ಮುಂತಿಳಿಸಲು ಅಶಕ್ತರಾಗಿರುವರು

[ಪುಟ 116ರಲ್ಲಿರುವ ಚಿತ್ರ]

ಬಾಬೆಲಿನ ಜ್ಯೋತಿಷಿ ಪಂಚಾಂಗ, ಸಾ.ಶ.ಪೂ. ಒಂದನೆಯ ಸಹಸ್ರಮಾನದ್ದು

[ಪುಟ 119ರಲ್ಲಿರುವ ಚಿತ್ರಗಳು]

ಆಧುನಿಕ ದಿನದ ಬಾಬೆಲು ಬೇಗನೆ ಇಲ್ಲದೆ ಹೋಗುವುದು