ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಪ್ರಭುಗಳಲ್ಲಿ ಭರವಸವಿಡಬೇಡಿರಿ”

“ಪ್ರಭುಗಳಲ್ಲಿ ಭರವಸವಿಡಬೇಡಿರಿ”

ಅಧ್ಯಾಯ ಹನ್ನೊಂದು

“ಪ್ರಭುಗಳಲ್ಲಿ ಭರವಸವಿಡಬೇಡಿರಿ”

ಯೆಶಾಯ 50:​1-11

1, 2. (ಎ) ಯೆಹೂದ್ಯರು ಯಾವ ಪ್ರೇರಿತ ಬುದ್ಧಿವಾದಕ್ಕೆ ಕಿವಿಗೊಡಲು ತಪ್ಪುತ್ತಾರೆ, ಮತ್ತು ಪರಿಣಾಮವೇನು? (ಬಿ) ‘ತ್ಯಾಗಪತ್ರವೆಲ್ಲಿ’ ಎಂದು ಯೆಹೋವನು ಕೇಳುವುದೇಕೆ?

 “ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನವನನ್ನು ನೆಚ್ಚಬೇಡಿರಿ, ಅವನು ಸಹಾಯ ಮಾಡ ಶಕ್ತನಲ್ಲ; . . . ಯಾವನಿಗೆ ಯಾಕೋಬನ ದೇವರು ಸಹಾಯಕನೋ ಯಾವನು ತನ್ನ ದೇವರಾದ ಯೆಹೋವನನ್ನು ನಂಬಿರುತ್ತಾನೋ ಅವನೇ ಧನ್ಯನು.” (ಕೀರ್ತನೆ 146:​3-6) ಯೆಶಾಯನ ದಿನಗಳಲ್ಲಿ ಜೀವಿಸುತ್ತಿದ್ದ ಯೆಹೂದ್ಯರು ಕೀರ್ತನೆಗಾರನ ಆ ಬುದ್ಧಿವಾದವನ್ನು ಪಾಲಿಸುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು! ಅವರು ತಮ್ಮ ಭರವಸವನ್ನು ಐಗುಪ್ತದ ಮೇಲಾಗಲಿ ಇತರ ವಿಧರ್ಮಿ ಜನಾಂಗಗಳ ಮೇಲಾಗಲಿ ಇಡದೆ, ‘ಯಾಕೋಬನ ದೇವರಲ್ಲಿ’ ಇಡುತ್ತಿದ್ದರೆ ಎಷ್ಟು ಒಳ್ಳೇದಿತ್ತು! ಹಾಗಿರುತ್ತಿದ್ದಲ್ಲಿ, ಯೆಹೂದದ ಮೇಲೆ ವೈರಿಗಳು ಆಕ್ರಮಣಮಾಡುತ್ತಿದ್ದಾಗ ಯೆಹೋವನು ಅದನ್ನು ಸಂರಕ್ಷಿಸುತ್ತಿದ್ದನು. ಆದರೆ, ಯೆಹೂದವು ಸಹಾಯಕ್ಕಾಗಿ ಯೆಹೋವನ ಕಡೆಗೆ ತಿರುಗಲು ನಿರಾಕರಿಸಿದೆ. ಆದಕಾರಣ, ಯೆರೂಸಲೇಮು ನಾಶವಾಗುವಂತೆಯೂ, ಯೆಹೂದದ ನಿವಾಸಿಗಳು ಬಾಬೆಲಿನಲ್ಲಿ ಸೆರೆಯಾಳುಗಳಾಗಿ ಇರುವಂತೆಯೂ ಯೆಹೋವನು ಅನುಮತಿಸುವನು.

2 ಈ ಸ್ಥಿತಿಗೆ ಕಾರಣ ಯೆಹೂದವೇ ಹೊರತು ಇನ್ನಾರೂ ಅಲ್ಲ. ಅದರ ನಾಶನವು ಯೆಹೋವನು ತಮಗೆ ದ್ರೋಹಮಾಡಿದ ಕಾರಣ ಅಥವಾ ಆ ಜನಾಂಗದೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಅಲಕ್ಷ್ಯಮಾಡಿದ ಕಾರಣ ಬಂತೆಂದು ಅವರು ಸಕಾರಣ ಕೊಟ್ಟು ವಾದಿಸಸಾಧ್ಯವಿಲ್ಲ. ಏಕೆಂದರೆ ಸೃಷ್ಟಿಕರ್ತನು ಒಡಂಬಡಿಕೆಯನ್ನು ಮುರಿಯುವಾತನಲ್ಲ. (ಯೆರೆಮೀಯ 31:32; ದಾನಿಯೇಲ 9:27; ಪ್ರಕಟನೆ 15:⁠4) ಈ ನಿಜತ್ವವನ್ನು ಒತ್ತಿಹೇಳುತ್ತ ಯೆಹೋವನು ಯೆಹೂದ್ಯರನ್ನು ಪ್ರಶ್ನಿಸುವುದು: “ನಾನು ನಿಮ್ಮ ತಾಯಿಯನ್ನು ತ್ಯಜಿಸಿದ ತ್ಯಾಗಪತ್ರವು ಎಲ್ಲಿ?” (ಯೆಶಾಯ 50:1ಎ) ಮೋಶೆಯ ಧರ್ಮಶಾಸ್ತ್ರಕ್ಕನುಸಾರ, ತನ್ನ ಪತ್ನಿಯನ್ನು ತ್ಯಜಿಸುವ ಮನುಷ್ಯನು ಅವಳಿಗೆ ತ್ಯಾಗಪತ್ರವನ್ನು ಕೊಡಲೇಬೇಕು. ಆಗ ಆಕೆ ಇನ್ನೊಬ್ಬ ವ್ಯಕ್ತಿಯ ಹೆಂಡತಿಯಾಗಲು ಸ್ವತಂತ್ರಳು. (ಧರ್ಮೋಪದೇಶಕಾಂಡ 24:​1, 2) ಸಾಂಕೇತಿಕ ಅರ್ಥದಲ್ಲಿ, ಯೆಹೋವನು ಯೆಹೂದದ ಸೋದರಿ ರಾಜ್ಯವಾದ ಇಸ್ರಾಯೇಲಿಗೆ ಅಂತಹ ಒಂದು ಪತ್ರವನ್ನು ಕೊಟ್ಟಿದ್ದಾನಾದರೂ, ಯೆಹೂದಕ್ಕೆ ಹಾಗೆ ಮಾಡಿರಲಿಲ್ಲ. a ಆತನು ಇನ್ನೂ ಆಕೆಯ “ಪತಿ” ಆಗಿದ್ದಾನೆ. (ಯೆರೆಮೀಯ 3:​8, 14) ವಿಧರ್ಮಿ ಜನಾಂಗಗಳೊಂದಿಗೆ ಜೊತೆಗೂಡಲು ಯೆಹೂದಕ್ಕೆ ಖಂಡಿತವಾಗಿಯೂ ಸ್ವಾತಂತ್ರ್ಯವಿಲ್ಲ. ಆಕೆಯೊಂದಿಗಿನ ಯೆಹೋವನ ಸಂಬಂಧವು “ರಾಜದಂಡವನ್ನು ಹಿಡಿಯತಕ್ಕವನು [“ಶಿಲೋವನೆಂಬವನು,” ಪಾದಟಿಪ್ಪಣಿ] [ಮೆಸ್ಸೀಯನು] ಬರುವ ತನಕ” ಮುಂದುವರಿಯುವುದು.​—⁠ಆದಿಕಾಂಡ 49:⁠10.

3. ಯೆಹೋವನು ತನ್ನ ಜನರನ್ನು ಯಾವ ಕಾರಣಕ್ಕಾಗಿ ‘ಮಾರು’ತ್ತಾನೆ?

3“ನನ್ನ ಸಾಲಗಾರರಲ್ಲಿ ಯಾರಿಗೆ ನಿಮ್ಮನ್ನು ಮಾರಿ ಬಿಟ್ಟಿದ್ದೇನೆ?” ಎಂದೂ ಯೆಹೋವನು ಯೆಹೂದವನ್ನು ಪ್ರಶ್ನಿಸುತ್ತಾನೆ. (ಯೆಶಾಯ 50:1ಬಿ) ಯೆಹೂದ್ಯರು ಬಾಬೆಲಿಗೆ ದೇಶಭ್ರಷ್ಟರಾಗಿ ಕಳುಹಿಸಲ್ಪಡುವುದು ಯೆಹೋವನು ಯಾವುದೊ ಸಾಲದಲ್ಲಿ ಬಿದ್ದಿರುವ ಕಾರಣದಿಂದಲ್ಲ. ಯೆಹೋವನ ಸ್ಥಿತಿಯು, ಸಾಲವನ್ನು ತೀರಿಸಲಿಕ್ಕಾಗಿ ತನ್ನ ಮಕ್ಕಳನ್ನು ಆ ಸಾಲಗಾರನಿಗೆ ಮಾರಲೇಬೇಕಾಗಿರುವ ಒಬ್ಬ ಬಡ ಇಸ್ರಾಯೇಲ್ಯನ ಸ್ಥಿತಿಯಂತಿಲ್ಲ. (ವಿಮೋಚನಕಾಂಡ 21:⁠7) ಬದಲಿಗೆ, ತನ್ನ ಜನರು ದಾಸರಾಗಲಿರುವುದಕ್ಕೆ ಇರುವ ನಿಜ ಕಾರಣವನ್ನು ಯೆಹೋವನು ಸೂಚಿಸುತ್ತಾನೆ: “ನೋಡಿರಿ, ನಿಮ್ಮ ದೋಷಗಳ ನಿಮಿತ್ತ ನಿಮ್ಮನ್ನು ಮಾರಿದೆನು, ನಿಮ್ಮ ದ್ರೋಹಗಳಿಗಾಗಿ ನಿಮ್ಮ ತಾಯಿಯನ್ನು ಬಿಟ್ಟೆನು.” (ಯೆಶಾಯ 50:1ಸಿ) ಯೆಹೋವನನ್ನು ತ್ಯಜಿಸಿದ್ದು ಯೆಹೂದ್ಯರೇ; ಆತನು ಅವರನ್ನು ತ್ಯಜಿಸಿಲ್ಲ.

4, 5. ಯೆಹೋವನು ತನ್ನ ಜನರ ಕಡೆಗೆ ಹೇಗೆ ಪ್ರೀತಿ ತೋರಿಸುತ್ತಾನೆ, ಆದರೆ ಯೆಹೂದವು ಹೇಗೆ ಸ್ಪಂದಿಸುತ್ತದೆ?

4 ಯೆಹೋವನ ಮುಂದಿನ ಪ್ರಶ್ನೆ ಆತನಿಗೆ ತನ್ನ ಜನರ ಮೇಲಿರುವ ಪ್ರೀತಿಯನ್ನು ಸ್ಪಷ್ಟವಾಗಿ ಒತ್ತಿಹೇಳುತ್ತದೆ: “ನಾನು ಬಂದಾಗ ಏಕೆ ಯಾರೂ ಕಾದಿರಲಿಲ್ಲ, ನಾನು ಕರೆದಾಗ ಏಕೆ ಯಾರೂ ಉತ್ತರಕೊಡಲಿಲ್ಲ?” (ಯೆಶಾಯ 50:2ಎ) ತನ್ನ ಜನರು ಪೂರ್ಣ ಹೃದಯದಿಂದ ತನ್ನ ಬಳಿಗೆ ತಿರುಗುವಂತೆ ಬೇಡಿಕೊಳ್ಳಲು ಯೆಹೋವನು ತನ್ನ ಸೇವಕರಾದ ಪ್ರವಾದಿಗಳ ಮೂಲಕ ಅವರ ಮನೆಗೇ ಬಂದಂತಿತ್ತು. ಆದರೆ ಅವರೊ ಉತ್ತರ ಕೊಡದೆ ಮೌನವಾಗಿದ್ದರು. ಬೆಂಬಲಕ್ಕಾಗಿ ಆ ಯೆಹೂದ್ಯರು ಮಾನವರ ಕಡೆಗೆ, ಹಲವು ಬಾರಿ ಐಗುಪ್ತದ ಕಡೆಗೂ ನೋಡಲು ಇಷ್ಟಪಟ್ಟರು.​—⁠ಯೆಶಾಯ 30:2; 31:​1-3; ಯೆರೆಮೀಯ 37:​5-7.

5 ಐಗುಪ್ತವು ಯೆಹೋವನಿಗಿಂತಲೂ ವಿಶ್ವಾಸಾರ್ಹವಾಗಿದ್ದ ರಕ್ಷಕನಾಗಿದೆಯೊ? ಶತಮಾನಗಳಿಗೆ ಮೊದಲು ತಮ್ಮ ಜನಾಂಗದ ಹುಟ್ಟಿಗೆ ನಡೆಸಿದ ಘಟನೆಗಳನ್ನು ಆ ಅಪನಂಬಿಗಸ್ತ ಯೆಹೂದ್ಯರು ಮರೆತಿದ್ದಿರಬೇಕು. ಯೆಹೋವನು ಅವರನ್ನು ಪ್ರಶ್ನಿಸುವುದು: “ನನ್ನ ಹಸ್ತವು ರಕ್ಷಿಸಲಾರದ ಮೋಟುಗೈಯೋ? ಉದ್ಧರಿಸುವ ಶಕ್ತಿಯು ನನ್ನಲ್ಲಿಲ್ಲವೋ? ಇಗೋ, ನನ್ನ ತರ್ಜನದಿಂದಲೇ ಸಮುದ್ರವನ್ನು ಬತ್ತಿಸಿ ನದಿಗಳನ್ನು ಒಣಕಾಡನ್ನಾಗಿ ಮಾಡುತ್ತೇನೆ; ನೀರಿಲ್ಲದೆ ಅಲ್ಲಿನ ಮೀನುಗಳು ಬಾಯಾರಿ ಸತ್ತು ನಾರುವವು. ಆಕಾಶಕ್ಕೆ ಅಂಧಕಾರವನ್ನು ಹೊದಿಸಿ ಗೋಣಿತಟ್ಟಿನ ಮುಸುಕನ್ನು ಹಾಕುತ್ತೇನೆ.”​—ಯೆಶಾಯ 50:2ಬಿ, 3.

6, 7. ಐಗುಪ್ತದ ಬೆದರಿಕೆಯ ಎದುರಿನಲ್ಲಿ ಯೆಹೋವನು ತನ್ನ ರಕ್ಷಣಾ ಶಕ್ತಿಯನ್ನು ಹೇಗೆ ತೋರಿಸಿದನು?

6 ಐಗುಪ್ತವು ಸಾ.ಶ.ಪೂ. 1513ರಲ್ಲಿ ದೇವಜನರ ಹಿಂಸಕನಾಗಿತ್ತೇ ಹೊರತು ನಿರೀಕ್ಷಿತ ರಕ್ಷಕನಾಗಿರಲಿಲ್ಲ. ಆ ವಿಧರ್ಮಿ ದೇಶದಲ್ಲಿ ಇಸ್ರಾಯೇಲ್ಯರು ಗುಲಾಮರಾಗಿದ್ದರು. ಆದರೆ ಯೆಹೋವನು ಅವರನ್ನು ಬಿಡುಗಡೆ ಮಾಡಿದನು, ಮತ್ತು ಅದೆಂತಹ ರೋಮಾಂಚಕ ಬಿಡುಗಡೆಯಾಗಿತ್ತು! ಪ್ರಥಮವಾಗಿ, ಆತನು ಆ ದೇಶದ ಮೇಲೆ ಹತ್ತು ಬಾಧೆಗಳನ್ನು ಬರಮಾಡಿದನು. ವಿಶೇಷವಾಗಿ ವಿಪತ್ಕಾರಕವಾಗಿದ್ದ ಹತ್ತನೆಯ ಬಾಧೆಯ ಬಳಿಕ, ಐಗುಪ್ತದ ಫರೋಹನೇ ಇಸ್ರಾಯೇಲ್ಯರು ದೇಶವನ್ನು ಬಿಟ್ಟುಹೋಗುವಂತೆ ಉತ್ತೇಜಿಸಿದನು. (ವಿಮೋಚನಕಾಂಡ 7:​14–12:31) ಆದರೆ ಅವರು ಬಿಟ್ಟುಹೋದ ಸ್ಪಲ್ಪ ಸಮಯದೊಳಗೇ ಫರೋಹನು ಮನಸ್ಸು ಬದಲಾಯಿಸಿದನು. ಅವನು ತನ್ನ ಸೈನ್ಯಗಳನ್ನು ಒಟ್ಟುಗೂಡಿಸಿಕೊಂಡು, ಇಸ್ರಾಯೇಲ್ಯರು ಐಗುಪ್ತಕ್ಕೆ ಹಿಂದಿರುಗುವಂತೆ ಬಲಾತ್ಕರಿಸಲು ಅವರನ್ನು ಬೆನ್ನಟ್ಟಿಹೋದನು. (ವಿಮೋಚನಕಾಂಡ 14:​5-9) ಇಸ್ರಾಯೇಲ್ಯರ ಹಿಂದಿನಿಂದ ಐಗುಪ್ತದ ಸೈನಿಕರ ದಳಗಳು ಬೆನ್ನಟ್ಟಿ ಬರುತ್ತಿದ್ದವು, ಮತ್ತು ಅವರ ಮುಂದೆ ಕೆಂಪು ಸಮುದ್ರವು ಇತ್ತು. ಇವುಗಳ ಮಧ್ಯದಲ್ಲಿ ಇಸ್ರಾಯೇಲ್ಯರು ಸಿಕ್ಕಿಬಿದ್ದಿದ್ದರು! ಆದರೆ ಅವರ ಪರವಾಗಿ ಹೋರಾಡಲು ಅವರ ಪಕ್ಷದಲ್ಲಿ ಯೆಹೋವನಿದ್ದನು.

7 ಯೆಹೋವನು ಐಗುಪ್ತ್ಯರ ಮತ್ತು ಇಸ್ರಾಯೇಲ್ಯರ ನಡುವೆ ಒಂದು ಮೇಘಸ್ತಂಭವನ್ನು ನಿಲ್ಲಿಸಿ ಅವರನ್ನು ತಡೆದನು. ಐಗುಪ್ತ್ಯರಿದ್ದ ದಿಕ್ಕಿನಲ್ಲಿ ಆ ಮೇಘರಾಶಿಯು ಕತ್ತಲೆಯನ್ನು ಬರಮಾಡಿದಾಗ, ಇಸ್ರಾಯೇಲ್ಯರಿಗೆ ಅದು ಬೆಳಕನ್ನು ಬರಮಾಡಿತು. (ವಿಮೋಚನಕಾಂಡ 14:20) ಹೀಗೆ ಐಗುಪ್ತ್ಯರ ಸೈನ್ಯಗಳು ತಡೆಹಿಡಿಯಲ್ಪಟ್ಟಾಗ, “ಯೆಹೋವನು ಆ ರಾತ್ರಿಯೆಲ್ಲಾ ಮೂಡಣ ದಿಕ್ಕಿನಿಂದ ಬಲವಾದ ಬಿರುಗಾಳಿಯನ್ನು ಬೀಸುವಂತೆ ಮಾಡಿ ಸಮುದ್ರದ ನೀರನ್ನು ಒಂದು ಕಡೆಗೆ ನೂಕಿ ಅದರ ತಳದಲ್ಲಿ ಒಣನೆಲವು ಕಾಣಿಸುವಂತೆ ಮಾಡಿದನು.” (ವಿಮೋಚನಕಾಂಡ 14:21) ನೀರು ಹೀಗೆ ಇಬ್ಭಾಗವಾದಾಗ, ಜನರೆಲ್ಲರೂ ಅಂದರೆ ಪುರುಷರು, ಸ್ತ್ರೀಯರು ಮತ್ತು ಮಕ್ಕಳೆಲ್ಲರೂ ಕೆಂಪು ಸಮುದ್ರವನ್ನು ಸುರಕ್ಷಿತವಾಗಿ ದಾಟಿದರು. ತನ್ನ ಜನರು ಆಚೆ ದಡವನ್ನು ತಲಪಿದಾಗ, ಯೆಹೋವನು ಆ ಮೇಘರಾಶಿಯನ್ನು ಮೇಲೆತ್ತಿದನು. ತರಾತುರಿಯಿಂದ ಐಗುಪ್ತ್ಯರು ರಭಸವಾಗಿ ಸಮುದ್ರತಳಕ್ಕೆ ಮುನ್ನುಗ್ಗಿದರು. ಆದರೆ, ತನ್ನ ಜನರು ಆಚೆ ದಡವನ್ನು ಸುರಕ್ಷಿತವಾಗಿ ಸೇರಿದಾಗ, ಯೆಹೋವನು ಜಲರಾಶಿಗಳು ಪುನಃ ಹಿಂದಿರುಗಿ ಸ್ವಸ್ಥಾನಕ್ಕೆ ಬರುವಂತೆ ಮಾಡಿ, ಫರೋಹನನ್ನೂ ಅವನ ಸೈನ್ಯವನ್ನೂ ಅದರಲ್ಲಿ ಮುಳುಗಿಸಿ ಹತಿಸಿದನು. ಹೀಗೆ ಯೆಹೋವನು ತನ್ನ ಜನರ ಪರವಾಗಿ ಹೋರಾಡಿದನು. ಅದು ಇಂದು ಕ್ರೈಸ್ತರಿಗೆ ಎಷ್ಟು ಉತ್ತೇಜನದಾಯಕವಾಗಿದೆ!​—⁠ವಿಮೋಚನಕಾಂಡ 14:​23-28.

8. ಯೆಹೂದದ ನಿವಾಸಿಗಳು ಯಾವ ಎಚ್ಚರಿಕೆಗಳನ್ನು ಅಸಡ್ಡೆಮಾಡುವ ಕಾರಣ ಕೊನೆಗೆ ದೇಶಭ್ರಷ್ಟರಾಗಿ ಕೊಂಡೊಯ್ಯಲ್ಪಡುತ್ತಾರೆ?

8 ಯೆಶಾಯನ ಸಮಯದಷ್ಟಕ್ಕೆ ಈ ದೈವಿಕ ವಿಜಯವು ನಡೆದು ಏಳುನೂರು ವರುಷಗಳಾಗಿದ್ದವು. ಈಗ ಸ್ವತಃ ಯೆಹೂದವು ಒಂದು ಜನಾಂಗವಾಗಿದೆ. ಅದು ಆಗಾಗ ಅಶ್ಶೂರ ಮತ್ತು ಐಗುಪ್ತದಂತಹ ವಿದೇಶೀ ಸರಕಾರಗಳೊಂದಿಗೆ ರಾಜತಾಂತ್ರಿಕ ಸಂಧಾನಗಳನ್ನು ಮಾಡಿಕೊಳ್ಳುತ್ತದೆ. ಆದರೆ ಈ ವಿಧರ್ಮಿ ಜನಾಂಗಗಳ ನಾಯಕರು ಭರವಸಾರ್ಹರಲ್ಲ. ಅವರು ಯೆಹೂದದೊಂದಿಗೆ ಮಾಡುವ ಯಾವುದೇ ಕರಾರುಗಳಲ್ಲಿ ಸದಾ ತಮ್ಮ ಅಭಿರುಚಿಗಳನ್ನೇ ಪ್ರಥಮವಾಗಿಡುತ್ತಾರೆ. ಆಗ ಪ್ರವಾದಿಗಳು ಯೆಹೋವನ ಹೆಸರಿನಲ್ಲಿ ಮಾತಾಡುತ್ತ, ಜನರು ಇಂತಹ ವ್ಯಕ್ತಿಗಳಲ್ಲಿ ಭರವಸವಿಡಬಾರದೆಂದು ಎಚ್ಚರಿಸಿದರೂ ಅವರು ಪ್ರವಾದಿಗಳ ಮಾತುಗಳಿಗೆ ಕಿವಿಗೊಡುವುದಿಲ್ಲ. ಈ ಕಾರಣ, ಕೊನೆಯಲ್ಲಿ ಈ ಜನರು 70 ವರುಷಗಳ ಕಾಲ ದಾಸತ್ವದಲ್ಲಿ ಕಳೆಯಲು ಬಾಬೆಲಿಗೆ ದೇಶಭ್ರಷ್ಟರಾಗಿ ಕೊಂಡೊಯ್ಯಲ್ಪಡುವರು. (ಯೆರೆಮೀಯ 25:11) ಆದರೆ ಯೆಹೋವನು ತನ್ನ ಜನರನ್ನು ಮರೆಯುವುದೂ ಇಲ್ಲ, ಅವರನ್ನು ಶಾಶ್ವತವಾಗಿ ತ್ಯಜಿಸುವುದೂ ಇಲ್ಲ. ನೇಮಿತ ಸಮಯದಲ್ಲಿ ಆತನು ಅವರನ್ನು ಜ್ಞಾಪಿಸಿಕೊಂಡು, ಅವರು ಶುದ್ಧಾರಾಧನೆಯನ್ನು ಸ್ಥಾಪಿಸಲಿಕ್ಕಾಗಿ ಸ್ವದೇಶಕ್ಕೆ ಹಿಂದಿರುಗುವಂತೆ ಅವರಿಗೆ ದಾರಿ ತೆರೆಯುವನು. ಯಾವ ಉದ್ದೇಶದಿಂದ? ಶಿಲೋವಿನ, ಅಂದರೆ ಸಕಲ ಜನಾಂಗಗಳ ವಿಧೇಯತೆ ಯಾರಿಗೆ ಸಲ್ಲತಕ್ಕದ್ದೊ ಅವನ ಬರೋಣಕ್ಕೆ ಸಿದ್ಧತೆಯನ್ನು ಮಾಡುವ ಉದ್ದೇಶದಿಂದಲೇ!

ಶಿಲೋವ ಬರುತ್ತಾನೆ

9. ಶಿಲೋವ ಯಾರು, ಮತ್ತು ಅವನು ಯಾವ ರೀತಿಯ ಬೋಧಕನು?

9 ಶತಮಾನಗಳು ದಾಟಿಹೋಗುತ್ತವೆ. “ಕಾಲವು ಪರಿಪೂರ್ಣ”ವಾಗುತ್ತದೆ. ಶಿಲೋವ ಎಂದು ಕರೆಯಲ್ಪಟ್ಟಿರುವ ಕರ್ತನಾದ ಯೇಸು ಕ್ರಿಸ್ತನು ಭೂಮಿಯಲ್ಲಿ ತೋರಿಬರುತ್ತಾನೆ. (ಗಲಾತ್ಯ 4:4; ಇಬ್ರಿಯ 1:​1, 2) ತನ್ನ ಅತ್ಯಾಪ್ತ ಸಂಗಾತಿಯನ್ನು ಯೆಹೂದ್ಯರಿಗೆ ತನ್ನ ವದನಕನಾಗಿ ನೇಮಿಸಿರುವ ನಿಜತ್ವವು, ಯೆಹೋವನು ತನ್ನ ಜನರನ್ನು ಎಷ್ಟು ಪ್ರೀತಿಸುತ್ತಾನೆಂಬುದನ್ನು ತೋರಿಸುತ್ತದೆ. ಯೇಸು ಯಾವ ವಿಧದ ವದನಕನಾಗಿ ಪರಿಣಮಿಸುತ್ತಾನೆ? ಅತ್ಯುತ್ಕೃಷ್ಟ ಮಟ್ಟದ ವದನಕನಾಗಿಯೇ! ಯೇಸು ಕೇವಲ ಒಬ್ಬ ವದನಕನಲ್ಲ, ಒಬ್ಬ ಬೋಧಕನು, ಅದರಲ್ಲೂ ಕುಶಲ ಬೋಧಕನಾಗಿದ್ದಾನೆ. ಅವನು ಹೀಗಿರುವುದರಲ್ಲಿ ಆಶ್ಚರ್ಯವಿಲ್ಲ, ಏಕೆಂದರೆ ಅವನಿಗೊಬ್ಬ ಉತ್ಕೃಷ್ಟನಾದ ಶಿಕ್ಷಕನಿದ್ದಾನೆ. ಆತನು ಯೆಹೋವ ದೇವರೇ. (ಯೋಹಾನ 5:30; 6:45; 7:​15, 16, 46; 8:26) ಯೇಸು ಪ್ರವಾದನಾರೂಪವಾಗಿ ಯೆಶಾಯನ ಮೂಲಕ ಹೇಳುವ ಮಾತುಗಳಿಂದ ಇದು ಸ್ಪಷ್ಟೀಕರಿಸಲ್ಪಡುತ್ತದೆ: “ಬಳಲಿಹೋದವರನ್ನು ಮಾತುಗಳಿಂದ ಸುದಾರಿಸುವದಕ್ಕೆ ನಾನು ಬಲ್ಲವನಾಗುವಂತೆ ಕರ್ತನಾದ ಯೆಹೋವನು ಶಿಕ್ಷಿತರ ನಾಲಿಗೆಯನ್ನು ನನಗೆ ದಯಪಾಲಿಸಿದ್ದಾನೆ; ಬೆಳಬೆಳಗೂ ನನ್ನನ್ನು ಎಚ್ಚರಿಸಿ ಶಿಕ್ಷಿತರಂತೆ ನಾನು ಕೇಳುವ ಹಾಗೆ ನನ್ನ ಕಿವಿಯನ್ನು ಜಾಗರಗೊಳಿಸುತ್ತಾನೆ.”​—ಯೆಶಾಯ 50:⁠4. b

10. ಯೆಹೋವನು ತನ್ನ ಜನರ ಕಡೆಗೆ ತೋರಿಸುವ ಪ್ರೀತಿಯನ್ನು ಯೇಸು ಹೇಗೆ ಪ್ರತಿಬಿಂಬಿಸುತ್ತಾನೆ, ಮತ್ತು ಯೇಸುವಿನ ಕಡೆಗೆ ಜನರ ಪ್ರತಿವರ್ತನೆಯೇನು?

10 ಭೂಮಿಗೆ ಬರುವ ಮುನ್ನ, ಯೇಸು ಸ್ವರ್ಗದಲ್ಲಿ ತನ್ನ ತಂದೆಯ ಬಳಿ ಕೆಲಸ ಮಾಡಿದನು. ತಂದೆ ಮತ್ತು ಮಗನ ಮಧ್ಯೆ ಇದ್ದ ಆದರದ ಸಂಬಂಧವನ್ನು ಜ್ಞಾನೋಕ್ತಿ 8:30ರಲ್ಲಿ ಕಾವ್ಯಮಯವಾಗಿ ವರ್ಣಿಸಲಾಗಿದೆ: “ನಾನು ಆತನ [ಯೆಹೋವನ] ಹತ್ತಿರ ಶಿಲ್ಪಿಯಾಗಿದ್ದುಕೊಂಡು ಪ್ರತಿದಿನವೂ ಆನಂದಿಸುತ್ತಾ ಯಾವಾಗಲೂ ಆತನ ಮುಂದೆ ವಿನೋದಿಸುತ್ತಾ” ಇದ್ದೆನು. ತನ್ನ ತಂದೆಗೆ ಕಿವಿಗೊಡುವುದು ಯೇಸುವಿಗೆ ಮಹಾ ಸಂತೋಷವನ್ನು ತಂದಿತು. “ಮಾನವಸಂತಾನ”ಕ್ಕಾಗಿ ಅವನ ತಂದೆಗಿದ್ದ ಪ್ರೀತಿ ಇವನಿಗೂ ಇತ್ತು. (ಜ್ಞಾನೋಕ್ತಿ 8:31) ಯೇಸು ಭೂಮಿಗೆ ಬಂದಾಗ “ಬಳಲಿಹೋದವರನ್ನು ಮಾತುಗಳಿಂದ” ಸಂತೈಸುತ್ತಾನೆ. ಅವನು ತನ್ನ ಶುಶ್ರೂಷೆಯನ್ನು ಯೆಶಾಯನ ಪ್ರವಾದನೆಯ ಸಾಂತ್ವನದ ಮಾತುಗಳನ್ನು ಓದುವ ಮೂಲಕ ಆರಂಭಿಸುತ್ತಾನೆ: ‘ಕರ್ತನ [“ಯೆಹೋವನ,” NW] ಆತ್ಮವು ನನ್ನ ಮೇಲೆ ಅದೆ, ಆತನು ನನ್ನನ್ನು ಬಡವರಿಗೆ ಶುಭವರ್ತಮಾನವನ್ನು ಸಾರುವದಕ್ಕೂ . . . ಮನಮುರಿದವರನ್ನು ಬಿಡಿಸಿಕಳುಹಿಸುವದಕ್ಕೂ ಅಭಿಷೇಕಿಸಿದನು.’ (ಲೂಕ 4:18; ಯೆಶಾಯ 61:1) ಬಡವರಿಗೆ ಶುಭವರ್ತಮಾನ! ಬಳಲಿರುವವರಿಗೆ ಚೈತನ್ಯ! ಆ ಪ್ರಕಟನೆಯು ಜನರಿಗೆ ಎಷ್ಟೊಂದು ಸಂತೋಷವನ್ನು ತರಬೇಕಿತ್ತು! ಕೆಲವರು ಹರ್ಷಿಸಿದ್ದೇನೊ ನಿಜ, ಆದರೆ ಎಲ್ಲರೂ ಹರ್ಷಿಸಲಿಲ್ಲ. ಕೊನೆಯಲ್ಲಿ ಅನೇಕರು ಯೆಹೋವನಿಂದ ಬೋಧಿಸಲ್ಪಟ್ಟ ಯೇಸುವಿನ ಅರ್ಹತೆಗಳನ್ನು ಅಂಗೀಕರಿಸಲು ನಿರಾಕರಿಸುತ್ತಾರೆ.

11. ಯೇಸುವಿನೊಂದಿಗೆ ಯಾರು ನೊಗವನ್ನು ಹೊರುತ್ತಾರೆ, ಮತ್ತು ಅವರಿಗಾಗುವ ಅನುಭವವೇನು?

11 ಆದರೂ, ಕೆಲವರು ಇನ್ನೂ ಹೆಚ್ಚನ್ನು ಕೇಳಲು ಬಯಸುತ್ತಾರೆ. ಅವರು ಯೇಸುವಿನ ಈ ಪ್ರೋತ್ಸಾಹಕರವಾದ ಆಮಂತ್ರಣಕ್ಕೆ ಓಗೊಡುತ್ತಾರೆ: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು. ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ.” (ಮತ್ತಾಯ 11:28, 29) ಯೇಸುವಿನ ಬಳಿ ಬಂದವರಲ್ಲಿ ಅವನ ಅಪೊಸ್ತಲರಾದವರು ಕೆಲವರು. ಯೇಸುವಿನೊಂದಿಗೆ ನೊಗವನ್ನು ಹೊರುವುದರಲ್ಲಿ ಕಠಿನ ಕೆಲಸವು ಒಳಗೊಂಡಿದೆಯೆಂಬುದು ಅವರಿಗೆ ಗೊತ್ತು. ಈ ಕೆಲಸದಲ್ಲಿ ಬೇರೆ ವಿಷಯಗಳಲ್ಲದೆ, ಭೂಮಿಯ ಕಟ್ಟಕಡೆಯ ವರೆಗೆ ರಾಜ್ಯದ ಸುವಾರ್ತೆಯನ್ನು ಸಾರುವುದೂ ಸೇರಿದೆ. (ಮತ್ತಾಯ 24:14) ಈ ಕೆಲಸದಲ್ಲಿ ಅಪೊಸ್ತಲರೂ ಇತರ ಶಿಷ್ಯರೂ ಒಳಗೂಡುವಾಗ, ಇದರಿಂದ ಅವರಿಗೆ ನಿಜವಾಗಿಯೂ ವಿಶ್ರಾಂತಿ ದೊರೆಯುತ್ತದೆಂದು ಅವರು ಕಂಡುಕೊಳ್ಳುತ್ತಾರೆ. ಇಂದು ನಂಬಿಗಸ್ತ ಕ್ರೈಸ್ತರು ಅದೇ ಕೆಲಸವನ್ನು ಮಾಡುತ್ತಾರೆ ಮತ್ತು ಅದರಲ್ಲಿ ಭಾಗಿಗಳಾಗುವುದರಿಂದ ಅವರಿಗೂ ಅದೇ ರೀತಿಯ ಸಂತೋಷವು ಸಿಗುತ್ತದೆ.

ಅವನು ಎದುರು ಬೀಳುವವನಲ್ಲ

12. ಯೇಸು ತನ್ನ ಸ್ವರ್ಗೀಯ ತಂದೆಗೆ ಯಾವ ವಿಧಗಳಲ್ಲಿ ವಿಧೇಯತೆಯನ್ನು ತೋರಿಸುತ್ತಾನೆ?

12 ತಾನು ಭೂಮಿಗೆ ಬರುವ ಉದ್ದೇಶವು ದೇವರ ಚಿತ್ತವನ್ನು ಮಾಡುವುದಾಗಿದೆ ಎಂಬುದನ್ನು ಯೇಸು ಎಂದೂ ಮರೆಯುವುದಿಲ್ಲ. ಆ ವಿಷಯದಲ್ಲಿ ಅವನ ದೃಷ್ಟಿಕೋನವು ಮುಂತಿಳಿಸಲ್ಪಟ್ಟಿದೆ: “ಕರ್ತನಾದ ಯೆಹೋವನು ನನ್ನ ಕಿವಿಯನ್ನು ತೆರೆದಿದ್ದಾನೆ; ನಾನು ಎದುರು ಬೀಳಲಿಲ್ಲ, ವಿಮುಖನಾಗಲೂ ಇಲ್ಲ.” (ಯೆಶಾಯ 50:5) ಯೇಸು ಯಾವಾಗಲೂ ದೇವರಿಗೆ ವಿಧೇಯನಾಗಿರುತ್ತಾನೆ. “ತಂದೆಯು ಮಾಡುವದನ್ನು ಕಂಡು ಮಗನು ಮಾಡುತ್ತಾನೆ ಹೊರತು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು,” ಎನ್ನುವಷ್ಟರ ಮಟ್ಟಿಗೆ ಯೇಸು ವಿಧೇಯತೆ ತೋರಿಸುತ್ತಾನೆ. (ಯೋಹಾನ 5:19) ತನ್ನ ಮಾನವಪೂರ್ವ ಅಸ್ತಿತ್ವದಲ್ಲಿ, ಯೇಸು ತನ್ನ ತಂದೆಯೊಂದಿಗೆ ಲಕ್ಷಾಂತರ ಹೌದು, ಕೋಟ್ಯಂತರ ವರುಷಗಳ ವರೆಗೆ ಕೆಲಸಮಾಡಿದ್ದಿರಬೇಕು. ಭೂಮಿಗೆ ಬಂದಾಗಲೂ ಅವನು ಯೆಹೋವನ ಸೂಚನೆಗಳನ್ನು ಅನುಸರಿಸುತ್ತ ಹೋಗುತ್ತಾನೆ. ಹೀಗಿರುವಾಗ, ಕ್ರಿಸ್ತನ ಅಪರಿಪೂರ್ಣ ಹಿಂಬಾಲಕರಾದ ನಾವು ಯೆಹೋವನು ಹೇಳುವುದನ್ನು ಇನ್ನೆಷ್ಟು ಹೆಚ್ಚಾಗಿ ಮಾಡಲು ಜಾಗ್ರತೆ ವಹಿಸಬೇಕು!

13. ಯೇಸುವಿಗೆ ಮುಂದೆ ಏನು ಕಾದಿದೆ, ಆದರೆ ತಾನು ಧೈರ್ಯವಂತನೆಂದು ಅವನು ಹೇಗೆ ತೋರಿಸಿಕೊಡುತ್ತಾನೆ?

13 ಯೆಹೋವನ ಏಕಜಾತ ಪುತ್ರನನ್ನು ನಿರಾಕರಿಸುವ ಕೆಲವರು ಅವನಿಗೆ ಹಿಂಸೆ ಕೊಡುತ್ತಾರೆ. ಇದು ಸಹ ಮುಂತಿಳಿಸಲ್ಪಟ್ಟಿದೆ: “ಹೊಡೆಯುವವರಿಗೆ ಬೆನ್ನುಕೊಟ್ಟು ಕೂದಲುಕೀಳುವವರಿಗೆ ಗಡ್ಡವನ್ನು ಒಡ್ಡಿದೆನು; ಉಗುಳಿಸಿಕೊಳ್ಳುವ ಅವಮಾನಕ್ಕೆ ನನ್ನ ಮುಖವನ್ನು ಮರೆಮಾಡಲಿಲ್ಲ.” (ಯೆಶಾಯ 50:6) ಈ ಪ್ರವಾದನೆಗನುಸಾರ, ವಿರೋಧಿಗಳ ಕೈಯಿಂದ ಮೆಸ್ಸೀಯನು ನೋವು ಮತ್ತು ಅವಮಾನವನ್ನು ಅನುಭವಿಸುವನು. ಯೇಸುವಿಗೆ ಇದು ತಿಳಿದದೆ. ಮತ್ತು ಈ ಹಿಂಸೆ ಎಷ್ಟರ ತನಕ ಮುಂದುವರಿಯುತ್ತದೆಂದೂ ಅವನಿಗೆ ಗೊತ್ತಿದೆ. ಹೀಗಿದ್ದರೂ, ಅವನ ಭೂಜೀವನದ ಅಂತ್ಯವು ಹತ್ತರಿಸುತ್ತಿದ್ದಾಗ ಅವನು ಕಿಂಚಿತ್ತೂ ಭಯವನ್ನು ತೋರಿಸುವುದಿಲ್ಲ. ಕಗ್ಗಲ್ಲಿಗೆ ಸಮಾನವಾದ ದೃಢನಿರ್ಧಾರದಿಂದ ಅವನು ತನ್ನ ಮಾನವ ಜೀವಿತವು ಎಲ್ಲಿ ಕೊನೆಗೊಳ್ಳಲಿಕ್ಕಿತ್ತೊ ಆ ಯೆರೂಸಲೇಮಿಗೆ ಹೊರಡುತ್ತಾನೆ. ಅಲ್ಲಿಗೆ ಹೋಗುವ ದಾರಿಯಲ್ಲಿ ಯೇಸು ತನ್ನ ಶಿಷ್ಯರಿಗನ್ನುವುದು: “ನೋಡಿರಿ, ನಾವು ಯೆರೂಸಲೇಮಿಗೆ ಹೋಗುತ್ತಾ ಇದ್ದೇವೆ. ಮತ್ತು ಮನುಷ್ಯಕುಮಾರನನ್ನು ಮಹಾಯಾಜಕರ ಮತ್ತು ಶಾಸ್ತ್ರಿಗಳ ಕೈಗೆ ಹಿಡುಕೊಡುವರು. ಅವರು ಅವನಿಗೆ ಮರಣದಂಡನೆಯನ್ನು ವಿಧಿಸಿ ಅವನನ್ನು ಅನ್ಯರ ಕೈಗೆ ಒಪ್ಪಿಸುವರು. ಇವರು ಅವನನ್ನು ಅಪಹಾಸ್ಯಮಾಡುವರು, ಅವನ ಮೇಲೆ ಉಗುಳುವರು, ಅವನನ್ನು ಕೊರಡೆಗಳಿಂದ ಹೊಡೆಯುವರು, ಕೊಂದುಹಾಕುವರು, ಅವನು ಮೂರು ದಿನದ ಮೇಲೆ ಜೀವಿತನಾಗಿ ಎದ್ದು ಬರುವನು.” (ಮಾರ್ಕ 10:33, 34) ಈ ಎಲ್ಲ ದುರ್ವರ್ತನೆಗಳು, ಯೇಸುವೇ ವಾಗ್ದತ್ತ ಮೆಸ್ಸೀಯನೆಂಬುದನ್ನು ಪ್ರವಾದನೆಗಳಿಂದ ಹೆಚ್ಚು ಉತ್ತಮವಾಗಿ ತಿಳಿದವರಾಗಬೇಕಾಗಿದ್ದ ಮಹಾಯಾಜಕರು ಮತ್ತು ಶಾಸ್ತ್ರಿಗಳ ಪ್ರೇರಣೆಯಿಂದ ನಡೆಯಲಿಕ್ಕಿದ್ದವು.

14, 15. ಯೇಸುವನ್ನು ಹೊಡೆದು ಅವಮಾನಿಸಲಾಗುವುದೆಂದು ಹೇಳಿದ ಯೆಶಾಯನ ಮಾತುಗಳು ಹೇಗೆ ನೆರವೇರಿದವು?

14 ಸಾ.ಶ. 33ರ ನೈಸಾನ್‌ 14ರ ರಾತ್ರಿ, ಯೇಸು ತನ್ನ ಕೆಲವರು ಶಿಷ್ಯರೊಂದಿಗೆ ಗೆತ್ಸೇಮನೆ ತೋಟದಲ್ಲಿದ್ದಾನೆ. ಅವನು ಪ್ರಾರ್ಥಿಸುತ್ತಿದ್ದಾನೆ. ಆಗ ಥಟ್ಟನೆ ಜನರ ಗುಂಪೊಂದು ಬಂದು ಅವನನ್ನು ಸೆರೆಹಿಡಿಯುತ್ತದೆ. ಆದರೆ ಅವನು ಭಯಪಡುವುದಿಲ್ಲ. ಯೆಹೋವನು ತನ್ನೊಂದಿಗಿದ್ದಾನೆಂಬುದು ಅವನಿಗೆ ತಿಳಿದದೆ. ಯೇಸು ತನ್ನ ಭಯಭೀತ ಶಿಷ್ಯರಿಗೆ, ತನಗೆ ಮನಸ್ಸಿರುವಲ್ಲಿ ತನ್ನನ್ನು ರಕ್ಷಿಸಲಿಕ್ಕಾಗಿ ಹನ್ನೆರಡು ಗಣ ದೇವದೂತರನ್ನು ಕಳುಹಿಸುವಂತೆ ತನ್ನ ತಂದೆಯನ್ನು ಕೇಳಿಕೊಳ್ಳಬಲ್ಲೆನೆಂದು ಹೇಳುತ್ತಾನೆ. ಆದರೆ ಅವನು ಕೂಡಿಸಿ ಹೇಳುವುದು: “ಕಳುಹಿಸಿಕೊಟ್ಟರೆ ನನಗೆ ಇಂಥಿಂಥದು ಆಗಬೇಕೆಂಬುವ ಶಾಸ್ತ್ರದ ಮಾತುಗಳು ನೆರವೇರುವದು ಹೇಗೆ”?​—⁠ಮತ್ತಾಯ 26:36, 47, 53, 54.

15 ಯೇಸುವಿನ ನ್ಯಾಯವಿಚಾರಣೆ ಮತ್ತು ಮರಣದ ಕುರಿತು ಮುಂತಿಳಿಸಲ್ಪಟ್ಟ ಎಲ್ಲ ಸಂಗತಿಗಳು ನೆರವೇರುತ್ತವೆ. ಹಿರೀಸಭೆಯ ಮುಂದೆ ನಡೆದ ಮೋಸದ ನ್ಯಾಯವಿಚಾರಣೆಯ ಅನಂತರ, ಪೊಂತ್ಯ ಪಿಲಾತನು ಯೇಸುವನ್ನು ವಿಚಾರಿಸಿ, ಚಾವಟಿಯಿಂದ ಹೊಡೆಸುತ್ತಾನೆ. ರೋಮನ್‌ ಸೈನಿಕರು, “ಆತನ ತಲೆಯ ಮೇಲೆ ಹೊಡೆದು ಆತನ ಮೇಲೆ ಉಗುಳಿ”ಬಿಡುತ್ತಾರೆ. ಹೀಗೆ ಯೆಶಾಯನ ಮಾತುಗಳು ನೆರವೇರುತ್ತವೆ. (ಮಾರ್ಕ 14:65; 15:19; ಮತ್ತಾಯ 26:​67, 68) ಗಡ್ಡದ ಕೂದಲನ್ನು ಕೀಳುವುದು ವಿಪರೀತ ಅವಮಾನದ ಸಂಕೇತವಾಗಿತ್ತು. ಇದನ್ನು ನಿಜವಾಗಿಯೂ ಯೇಸುವಿನೊಂದಿಗೆ ಮಾಡಲಾಗಿತ್ತೆಂದು ಬೈಬಲು ಹೇಳುವುದಿಲ್ಲವಾದರೂ, ಯೆಶಾಯನು ಹೇಳಿದಂತೆಯೇ ಇದೂ ಸಂಭವಿಸಿತೆಂಬುದರಲ್ಲಿ ಸಂದೇಹವಿಲ್ಲ. c​—⁠ನೆಹೆಮೀಯ 13:⁠25.

16. ಭಾರೀ ಒತ್ತಡದ ಸಮಯದಲ್ಲಿಯೂ ಯೇಸುವಿನ ವರ್ತನೆ ಹೇಗಿದೆ, ಮತ್ತು ಅವನು ನಾಚಿಕೆಗೊಳಪಡದಿರುವುದೇಕೆ?

16 ಯೇಸು ಪಿಲಾತನ ಮುಂದೆ ನಿಂತಾಗ, ತನ್ನ ಜೀವವನ್ನು ಉಳಿಸಿಕೊಡಬೇಕೆಂದು ಬೇಡಿಕೊಳ್ಳದೆ ಶಾಂತಚಿತ್ತನಾಗಿರುತ್ತಾನೆ. ಶಾಸ್ತ್ರಗಳು ನೆರವೇರಬೇಕಾದರೆ ತಾನು ಸಾಯಬೇಕೆಂಬುದು ಅವನಿಗೆ ಗೊತ್ತಿದೆ. ಯೇಸುವಿಗೆ ಮರಣ ಶಿಕ್ಷೆ ವಿಧಿಸಲು ಇಲ್ಲವೆ ಅವನನ್ನು ಬಿಡುಗಡೆಮಾಡಲು ತನಗೆ ಹಕ್ಕಿದೆ ಎಂದು ಹೇಳಿದ ರೋಮನ್‌ ದೇಶಾಧಿಪತಿಯ ಮಾತಿಗೆ ಯೇಸು ಭಯವಿಲ್ಲದೆ ಉತ್ತರ ಕೊಟ್ಟದ್ದು: “ಮೇಲಣಿಂದ ನಿನಗೆ ಕೊಡಲ್ಪಡದಿದ್ದರೆ ನನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇರುತ್ತಿರಲಿಲ್ಲ.” (ಯೋಹಾನ 19:11) ಪಿಲಾತನ ಸೈನಿಕರು ಯೇಸುವಿನೊಂದಿಗೆ ಅಮಾನುಷವಾಗಿ ವರ್ತಿಸಿದರೂ ಅವನನ್ನು ನಾಚಿಕೆಗೊಳಪಡಿಸುವುದರಲ್ಲಿ ವಿಫಲಗೊಳ್ಳುತ್ತಾರೆ. ಅವನು ಏಕೆ ನಾಚಿಕೆಪಡಬೇಕು? ಏಕೆಂದರೆ ಅವನು ಮಾಡಿದ ಯಾವುದೊ ತಪ್ಪಿಗಾಗಿ ಅಲ್ಲಿ ಅವನಿಗೆ ತಕ್ಕ ಶಿಕ್ಷೆಯು ಕೊಡಲ್ಪಡುತ್ತಿರಲಿಲ್ಲ. ಬದಲಿಗೆ ಅವನು ಹಿಂಸಿಸಲ್ಪಡುತ್ತಿರುವುದು ನೀತಿಗಾಗಿಯೇ. ಈ ಸಂಬಂಧದಲ್ಲಿ, ಯೆಶಾಯನ ಮುಂದಿನ ಪ್ರವಾದನ ವಾಕ್ಯಗಳು ನೆರವೇರುತ್ತವೆ. “ಕರ್ತನಾದ ಯೆಹೋವನು ನನಗೆ ಸಹಾಯಮಾಡುವನು; ಆದಕಾರಣ ನಾನು ನಾಚಿಕೆಯಿಂದ ಕೊರಗಲಿಲ್ಲ; ನನ್ನ ಮುಖವನ್ನು ಕಗ್ಗಲ್ಲಿನಂತೆ ಗಟ್ಟಿಮಾಡಿಕೊಂಡಿದ್ದೇನೆ; ಆಶಾಭಂಗಪಡಲಾರನೆಂದು [“ನಾಚಿಕೆಪಡೆನೆಂದು,” NW] ನನಗೆ ಗೊತ್ತು.”​—ಯೆಶಾಯ 50:⁠7.

17. ಯೇಸುವಿನ ಶುಶ್ರೂಷೆಯ ಸಮಯದಲ್ಲೆಲ್ಲ ಯೆಹೋವನು ಯಾವ ವಿಧಗಳಲ್ಲಿ ಯೇಸುವಿಗೆ ಬೆಂಬಲವಾಗಿದ್ದಾನೆ?

17 ಯೇಸುವಿನ ಧೈರ್ಯಕ್ಕೆ ಬುನಾದಿಯು ಯೆಹೋವನಲ್ಲಿ ಅವನಿಟ್ಟ ಪೂರ್ಣ ಭರವಸೆಯೇ ಆಗಿದೆ. ಅವನ ವರ್ತನೆಯು ಯೆಶಾಯನ ಮಾತುಗಳಿಗೆ ಪೂರ್ತಿ ಅನುಗುಣವಾಗಿದೆ: “ನನ್ನ ನ್ಯಾಯಸ್ಥಾಪಕನು ಸಮೀಪದಲ್ಲಿದ್ದಾನೆ; ನನ್ನೊಡನೆ ಯಾರು ವ್ಯಾಜ್ಯವಾಡುವರು? ನಾವಿಬ್ಬರು [ನ್ಯಾಯಾಸನದ ಮುಂದೆ] ನಿಂತುಕೊಳ್ಳುವ; ನನಗೆ ಪ್ರತಿಕಕ್ಷಿಯು ಯಾರು? ನನ್ನ ಬಳಿಗೆ ಬರಲಿ. ಆಹಾ, ಕರ್ತನಾದ ಯೆಹೋವನು ನನಗೆ ಸಹಾಯಮಾಡುವನು; ನನ್ನನ್ನು ಅಪರಾಧಿ ಎಂದು ನಿರ್ಣಯಿಸುವವನು ಯಾರು? ಇಗೋ, ಅವರೆಲ್ಲರೂ ವಸ್ತ್ರದಂತೆ ಜೀರ್ಣವಾಗುವರು; ಅವರನ್ನು ನುಸಿಯು ತಿಂದುಬಿಡುವದು.” (ಯೆಶಾಯ 50:​8, 9) ಯೇಸುವಿನ ದೀಕ್ಷಾಸ್ನಾನದ ದಿನ, ಯೆಹೋವನು ಯೇಸುವನ್ನು ದೇವರ ಆತ್ಮಿಕ ಪುತ್ರನಾಗಿ ನೀತಿವಂತನೆಂದು ಘೋಷಿಸುತ್ತಾನೆ. ವಾಸ್ತವವೇನಂದರೆ ಆ ಸಂದರ್ಭದಲ್ಲಿ, “ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ” ಎಂದು ಹೇಳುತ್ತಿರುವ ದೇವರ ಸ್ವಂತ ಸ್ವರವು ಕೇಳಿಬರುತ್ತದೆ. (ಮತ್ತಾಯ 3:17) ತನ್ನ ಭೂಜೀವನದ ಕೊನೆಯಲ್ಲಿ, ಯೇಸು ಗೆತ್ಸೇಮನೆ ತೋಟದಲ್ಲಿ ಮೊಣಕಾಲೂರಿ ಪ್ರಾರ್ಥಿಸುತ್ತಿದ್ದಾಗ, ‘ಒಬ್ಬ ದೇವದೂತನು ಆತನಿಗೆ ಕಾಣಿಸಿಕೊಂಡು ಆತನನ್ನು ಬಲಪಡಿಸುತ್ತಾನೆ.’ (ಲೂಕ 22:41-43) ಹೀಗೆ, ತನ್ನ ಜೀವನಕ್ರಮವು ತನ್ನ ತಂದೆಗೆ ಒಪ್ಪಿಗೆಯದ್ದಾಗಿದೆಯೆಂದು ಯೇಸುವಿಗೆ ಗೊತ್ತಾಗುತ್ತದೆ. ಪರಿಪೂರ್ಣನಾದ ಈ ದೇವಪುತ್ರನು ಯಾವ ಪಾಪವನ್ನೂ ಮಾಡಿರುವುದಿಲ್ಲ. (1 ಪೇತ್ರ 2:22) ಯೇಸುವಿನ ವೈರಿಗಳು ಅವನ ಮೇಲೆ, ಸಬ್ಬತ್ತನ್ನು ಉಲ್ಲಂಘಿಸುವವನು, ಕುಡುಕನು, ದೆವ್ವ ಹಿಡಿದವನು ಎಂಬ ಆರೋಪ ಹೊರಿಸಿದರೂ, ಅವನು ಈ ಸುಳ್ಳುಗಳಿಂದ ಅವಮಾನಕ್ಕೊಳಗಾಗುವುದಿಲ್ಲ. ದೇವರು ಅವನೊಂದಿಗಿರುವಾಗ, ಯಾರು ಅವನಿಗೆ ವಿರೋಧಮಾಡಬಲ್ಲನು?​—⁠ಲೂಕ 7:34; ಯೋಹಾನ 5:18; 7:20; ರೋಮಾಪುರ 8:31; ಇಬ್ರಿಯ 12:⁠3.

18, 19. ಅಭಿಷಿಕ್ತ ಕ್ರೈಸ್ತರಿಗೆ ಯೇಸುವಿಗಾದಂತಹ ರೀತಿಯ ಯಾವ ಅನುಭವಗಳಾಗಿವೆ?

18 “ಅವರು ನನ್ನನ್ನು ಹಿಂಸೆಪಡಿಸಿದರೆ ನಿಮ್ಮನ್ನು ಸಹ ಹಿಂಸೆಪಡಿಸುವರು,” ಎಂದು ಯೇಸು ತನ್ನ ಶಿಷ್ಯರನ್ನು ಎಚ್ಚರಿಸುತ್ತಾನೆ. (ಯೋಹಾನ 15:20) ಸ್ವಲ್ಪ ಸಮಯದಲ್ಲೇ ಇದು ನಿಜವಾಗಿ ಪರಿಣಮಿಸುತ್ತದೆ. ಸಾ.ಶ. 33ರ ಪಂಚಾಶತ್ತಮದಲ್ಲಿ, ಯೇಸುವಿನ ನಂಬಿಗಸ್ತ ಶಿಷ್ಯರ ಮೇಲೆ ಪವಿತ್ರಾತ್ಮವು ಬರಲಾಗಿ ಕ್ರೈಸ್ತ ಸಭೆಯು ಹುಟ್ಟುತ್ತದೆ. ಬಹುಮಟ್ಟಿಗೆ ಒಡನೆಯೇ ಧಾರ್ಮಿಕ ನಾಯಕರು “ಅಬ್ರಹಾಮನ ಸಂತಾನ”ದ ಭಾಗವಾಗಿ ಈಗ ಯೇಸುವಿನೊಂದಿಗೆ ಜೊತೆಗೂಡಿರುವ ಮತ್ತು ದೇವರ ಆತ್ಮಿಕ ಪುತ್ರರಾಗಿ ಆರಿಸಲ್ಪಟ್ಟಿರುವ, ಈ ನಂಬಿಗಸ್ತ ಪುರುಷ ಮತ್ತು ಸ್ತ್ರೀಯರ ಸಾರುವ ಕಾರ್ಯವನ್ನು ತಡೆದು ನಿಲ್ಲಿಸಲು ಪ್ರಯತ್ನಿಸುತ್ತಾರೆ. (ಗಲಾತ್ಯ 3:​26, 29; 4:​5, 6) ಪ್ರಥಮ ಶತಮಾನದಿಂದ ಹಿಡಿದು ಈಗಿನ ವರೆಗೆ ಅಭಿಷಿಕ್ತ ಕ್ರೈಸ್ತರು ನೀತಿಯ ಪಕ್ಷದಲ್ಲಿ ಸ್ಥಿರವಾದ ಸ್ಥಾನವನ್ನು ವಹಿಸಿಕೊಂಡಿದ್ದಾರೆ, ಆದರೆ ಅದೇ ಸಮಯದಲ್ಲಿ ಅವರು, ಯೇಸುವಿನ ವೈರಿಗಳಿಂದ ಸುಳ್ಳು ಅಪವಾದ ಮತ್ತು ಕಠಿನ ಹಿಂಸೆಯೊಂದಿಗೆ ಹೋರಾಡಬೇಕಾಗಿ ಬಂದಿದೆ.

19 ಆದರೂ, ಅವರು ಯೇಸುವಿನ ಈ ಪ್ರೋತ್ಸಾಹಕರವಾದ ಮಾತುಗಳನ್ನು ನೆನಪಿಸಿಕೊಳ್ಳುತ್ತಾರೆ: “ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು. ಸಂತೋಷಪಡಿರಿ, ಉಲ್ಲಾಸಪಡಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವದು.” (ಮತ್ತಾಯ 5:11, 12) ಆದಕಾರಣ, ಎಷ್ಟೇ ಕಠಿನವಾದ ವಿರೋಧವು ಬಂದರೂ ಅಭಿಷಿಕ್ತ ಕ್ರೈಸ್ತರು ಎದೆಗುಂದದೆ ಮೆರೆಯುತ್ತಾರೆ. ಅವರ ವಿರೋಧಿಗಳು ಏನೇ ಹೇಳಲಿ, ದೇವರು ಅವರನ್ನು ನೀತಿವಂತರೆಂದು ನಿರ್ಣಯಿಸಿದ್ದಾನೆಂದು ಅವರಿಗೆ ತಿಳಿದಿದೆ. ಆತನ ದೃಷ್ಟಿಯಲ್ಲಿ ಅವರು ‘ನಿರ್ದೋಷಿಗಳೂ ನಿರಪರಾಧಿಗಳೂ’ ಆಗಿದ್ದಾರೆ.​—⁠ಕೊಲೊಸ್ಸೆ 1:​21, 22.

20. (ಎ) ಅಭಿಷಿಕ್ತ ಕ್ರೈಸ್ತರನ್ನು ಯಾರು ಬೆಂಬಲಿಸುತ್ತಾರೆ, ಮತ್ತು ಅವರಿಗಾಗಿರುವ ಅನುಭವವೇನು? (ಬಿ) ಅಭಿಷಿಕ್ತ ಕ್ರೈಸ್ತರಿಗೂ “ಬೇರೆ ಕುರಿ”ಗಳಿಗೂ ಶಿಕ್ಷಿತರ ನಾಲಿಗೆಯಿರುವುದು ಹೇಗೆ?

20 ಆಧುನಿಕ ದಿನಗಳಲ್ಲಿ, ಅಭಿಷಿಕ್ತ ಕ್ರೈಸ್ತರಿಗೆ “ಬೇರೆ ಕುರಿಗಳ” “ಮಹಾ ಸಮೂಹ”ದ ಬೆಂಬಲವಿದೆ. ಇವರೂ ನೀತಿಯ ಪಕ್ಷದಲ್ಲಿ ನಿಲ್ಲುತ್ತಾರೆ. ಈ ಕಾರಣದಿಂದ ಅವರು ತಮ್ಮ ಅಭಿಷಿಕ್ತ ಸಹೋದರರೊಂದಿಗೆ ಕಷ್ಟಾನುಭವಿಸಿ, “ಯಜ್ಞದ ಕುರಿಯಾದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿದ್ದಾರೆ.” ‘ಮಹಾ ಸಂಕಟ’ವನ್ನು ಪಾರಾಗಿ ಉಳಿಯುವ ನೋಟದಿಂದ ಅವರನ್ನು ನೀತಿವಂತರೆಂದು ಯೆಹೋವನು ಘೋಷಿಸಿದ್ದಾನೆ. (ಪ್ರಕಟನೆ 7:9, 14, 15; ಯೋಹಾನ 10:16; ಯಾಕೋಬ 2:23) ಅವರ ವಿರೋಧಿಗಳು ಈ ಸಮಯದಲ್ಲಿ ಬಲಾಢ್ಯರೆಂದು ತೋರಿಬರುವುದಾದರೂ, ದೇವರ ಕ್ಲುಪ್ತ ಸಮಯದಲ್ಲಿ ಈ ವಿರೋಧಿಗಳು ಕೇವಲ ಬಿಸಾಡಲು ಯೋಗ್ಯವಾಗಿರುವ ನುಸಿತಿಂದ ಬಟ್ಟೆಯಂತಿರುವರು. ಈ ಮಧ್ಯೆ, ಅಭಿಷಿಕ್ತ ಕ್ರೈಸ್ತರೂ “ಬೇರೆ ಕುರಿಗಳೂ” ಕ್ರಮವಾದ ಪ್ರಾರ್ಥನೆ, ದೇವರ ವಾಕ್ಯದ ಅಧ್ಯಯನ ಮತ್ತು ಆರಾಧನಾ ಕೂಟಗಳ ಹಾಜರಿಯ ಮೂಲಕ ತಮ್ಮನ್ನು ಬಲಪಡಿಸಿಕೊಳ್ಳುತ್ತಾರೆ. ಹೀಗೆ ಅವರು ಯೆಹೋವನಿಂದ ಕಲಿಸಲ್ಪಟ್ಟು, ಶಿಕ್ಷಿತರ ನಾಲಿಗೆಯುಳ್ಳವರಾಗಿ ಮಾತಾಡುತ್ತಾರೆ.

ಯೆಹೋವನ ನಾಮದಲ್ಲಿ ಭರವಸೆ

21. (ಎ) ಬೆಳಕಿನಲ್ಲಿ ನಡೆಯುವವರಾರು, ಅವರಿಗೆ ಇರುವ ಪ್ರತಿಫಲವೇನು? (ಬಿ) ಕತ್ತಲಲ್ಲಿ ನಡೆಯುವವರಿಗೆ ಏನಾಗುತ್ತದೆ?

21 ಈಗ ತೀರ ವ್ಯತಿರಿಕ್ತವಾಗಿರುವ ವಿಷಯವೊಂದನ್ನು ಗಮನಿಸಿ: “ನಿಮ್ಮೊಳಗೆ ಯಾವನು ಯೆಹೋವನಲ್ಲಿ ಭಯಭಕ್ತಿಯಿಟ್ಟು ಆತನ ಸೇವಕನ ಮಾತನ್ನು ಕೇಳುವನು? ಕತ್ತಲಲ್ಲಿ ನಡೆಯುತ್ತಾ ಬೆಳಕಿಲ್ಲದವನು ಯೆಹೋವನ ನಾಮದಲ್ಲಿ ಭರವಸವಿಟ್ಟು ತನ್ನ ದೇವರನ್ನು ಆಧಾರಮಾಡಿಕೊಳ್ಳಲಿ.” (ಯೆಶಾಯ 50:10) ದೇವರ ಸೇವಕನಾದ ಯೇಸು ಕ್ರಿಸ್ತನ ಮಾತನ್ನು ಕೇಳುವವರು ಬೆಳಕಿನಲ್ಲಿ ನಡೆಯುತ್ತಾರೆ. (ಯೋಹಾನ 3:21) ಅವರು ಯೆಹೋವ ಎಂಬ ದೈವಿಕ ಹೆಸರನ್ನು ಬಳಸುತ್ತಾರೆ ಮಾತ್ರವಲ್ಲ, ಆ ಹೆಸರುಳ್ಳಾತನಲ್ಲಿ ಭರವಸೆಯನ್ನೂ ಇಡುತ್ತಾರೆ. ಅವರು ಒಂದೊಮ್ಮೆ ಕತ್ತಲೆಯಲ್ಲಿ ನಡೆಯುತ್ತಿದ್ದರೂ, ಈಗ ಅವರು ಮನುಷ್ಯರಿಗೆ ಭಯಪಡುವುದಿಲ್ಲ. ಅವರು ದೇವರನ್ನು ತಮ್ಮ ಆಧಾರವಾಗಿರಿಸಿಕೊಳ್ಳುತ್ತಾರೆ. ಆದರೆ, ಯಾರು ಕತ್ತಲಲ್ಲಿ ಪಟ್ಟುಹಿಡಿದು ನಡೆಯುತ್ತಾರೊ ಅವರನ್ನು ಮಾನವ ಭಯವು ಬಿಗಿಯಾಗಿ ಮುಷ್ಟಿಯಲ್ಲಿಡುತ್ತದೆ. ಪೊಂತ್ಯ ಪಿಲಾತನ ವಿಷಯದಲ್ಲಿ ಇದು ಸತ್ಯವಾಗಿದೆ. ಯೇಸುವಿನ ಮೇಲೆ ಹಾಕಲ್ಪಟ್ಟ ಸುಳ್ಳು ಅಪವಾದದ ವಿಷಯದಲ್ಲಿ ಯೇಸು ನಿರಪರಾಧಿಯೆಂದು ಅವನಿಗೆ ತಿಳಿದಿದ್ದರೂ, ಯೇಸುವನ್ನು ಬಿಡುಗಡೆಮಾಡುವ ವಿಷಯದಲ್ಲಿ ಆ ರೋಮನ್‌ ಅಧಿಕಾರಿಯನ್ನು ಭಯವು ತಡೆಯುತ್ತದೆ. ರೋಮನ್‌ ಸೈನಿಕರು ದೇವಕುಮಾರನನ್ನು ಕೊಲ್ಲುತ್ತಾರೆ ನಿಜ, ಆದರೆ ಯೆಹೋವನು ಅವನನ್ನು ಪುನರುತ್ಥಾನಗೊಳಿಸಿ ಅವನಿಗೆ ಮಹಿಮೆಯನ್ನೂ ಘನತೆಯನ್ನೂ ಕೊಡುತ್ತಾನೆ. ಪಿಲಾತನಿಗೆ ಏನಾಗುತ್ತದೆ? ಯೆಹೂದಿ ಇತಿಹಾಸಕಾರ ಫ್ಲೇವಿಯಸ್‌ ಜೋಸೀಫಸ್‌ ಎಂಬವನಿಗನುಸಾರ, ಯೇಸು ಮರಣಪಟ್ಟು ಕೇವಲ ನಾಲ್ಕೇ ವರುಷಗಳಲ್ಲಿ ಪಿಲಾತನನ್ನು ರೋಮನ್‌ ದೇಶಾಧಿಪತಿ ಸ್ಥಾನದಿಂದ ತೆಗೆದುಹಾಕಲಾಯಿತು. ಗಂಭೀರವಾದ ತಪ್ಪುಗಳ ಆರೋಪಗಳಿಗೆ ಉತ್ತರಕೊಡಲು ರೋಮಿಗೆ ಹಿಂದಿರುಗುವಂತೆ ಅವನಿಗೆ ಆಜ್ಞಾಪಿಸಲಾಯಿತು. ಯೇಸುವನ್ನು ಮರಣಕ್ಕೆ ನಡೆಸಿದ ಯೆಹೂದ್ಯರಿಗೆ ಏನಾಯಿತು? ಮುಂದಿನ ನಾಲ್ಕು ದಶಕಗಳೊಳಗೆ, ರೋಮನ್‌ ಸೈನ್ಯಗಳು ಯೆರೂಸಲೇಮನ್ನು ನಾಶಮಾಡಿದಾಗ, ಅದರ ನಿವಾಸಿಗಳು ಕೊಲ್ಲಲ್ಪಟ್ಟರು ಅಥವಾ ಗುಲಾಮರಾಗಿ ಒಯ್ಯಲ್ಪಟ್ಟರು. ಕತ್ತಲೆಯನ್ನು ಇಷ್ಟಪಡುವವರಿಗೆ ಉಜ್ವಲವಾದ ಪ್ರಕಾಶದ ಪ್ರತಿಫಲವಿಲ್ಲ!​—⁠ಯೋಹಾನ 3:⁠19.

22. ರಕ್ಷಣೆಗಾಗಿ ಮಾನವನ ಕಡೆಗೆ ತಿರುಗುವುದು ಮಹಾ ಮೂರ್ಖತನವೇಕೆ?

22 ರಕ್ಷಣೆಗಾಗಿ ಮನುಷ್ಯರ ಕಡೆಗೆ ತಿರುಗುವುದು ಮಹಾ ಮೂರ್ಖತನ. ಅದು ಏಕೆಂಬುದನ್ನು ಯೆಶಾಯನ ಪ್ರವಾದನೆಯು ವಿವರಿಸುತ್ತದೆ: “ಓಹೋ, ಬೆಂಕಿಯಿಕ್ಕಿ ಸುತ್ತುಮುತ್ತಲು ಕೊಳ್ಳಿಗಳನ್ನು ಹತ್ತಿಸಿಕೊಂಡಿರುವವರೇ, ನಿಮ್ಮ ಬೆಂಕಿಯ ಬೆಳಕಿನಲ್ಲಿಯೂ ನೀವು ಹತ್ತಿಸಿದ ಕೊಳ್ಳಿಗಳ ನಡುವೆಯೂ ನಡೆದರೂ ನಡೆಯಿರಿ. ಇಗೋ, ನನ್ನ ಹಸ್ತದಿಂದ ನಿಮಗಾಗುವ ಗತಿಯು ಇದೇ, ದುಃಖಕ್ಕೆ ಒಳಗಾಗಿ ಸಾಯುವಿರಿ.” (ಯೆಶಾಯ 50:11) ಮಾನವ ನಾಯಕರು ಬರುತ್ತಾರೆ ಮತ್ತು ಹೋಗುತ್ತಾರೆ. ಪ್ರಭಾವಶಾಲಿಯಾದ ವ್ಯಕ್ತಿಯೊಬ್ಬನು ಸ್ವಲ್ಪ ಸಮಯಕ್ಕೆ ಜನರ ಕಲ್ಪನಾಶಕ್ತಿಯನ್ನು ಪ್ರಭಾವಿಸಬಹುದು ನಿಜ. ಆದರೆ ಮಾನವನು ಎಷ್ಟೇ ಯಥಾರ್ಥವಂತನಾಗಿರಲಿ, ಅವನು ಸಾಧಿಸುವ ವಿಷಯಗಳು ಸೀಮಿತವಾದವುಗಳೇ ಸರಿ. ಅವನ ಬೆಂಬಲಿಗರ ನಿರೀಕ್ಷೆಯಂತೆ ಧಗಧಗನೆ ಉರಿಯುವ ಬೆಂಕಿಯನ್ನು ಹೊತ್ತಿಸುವ ಬದಲು, ಅವನು ಕೊಂಚ ಬೆಳಕನ್ನು ಮತ್ತು ಕಾವನ್ನು ಕೊಟ್ಟು ಬೇಗನೆ ಆರಿಹೋಗುವ ಕಿಡಿಗಳನ್ನು ಹೊತ್ತಿಸುವುದರಲ್ಲಿ ಮಾತ್ರ ಯಶಸ್ವಿಯಾಗಬಹುದು. ಆದರೆ, ಶಿಲೋವನಲ್ಲಿ ಅಂದರೆ ದೇವರ ವಾಗ್ದತ್ತ ಮೆಸ್ಸೀಯನಲ್ಲಿ ಭರವಸೆಯಿಡುವವನು ಎಂದಿಗೂ ನಿರಾಶೆಗೊಳಗಾಗನು.

[ಪಾದಟಿಪ್ಪಣಿಗಳು]

a ಯೆಶಾಯ 50ನೆಯ ಅಧ್ಯಾಯದ ಪ್ರಥಮ ಮೂರು ವಚನಗಳಲ್ಲಿ ಯೆಹೋವನು ಯೆಹೂದ ಜನಾಂಗವನ್ನು ಸಾಮೂಹಿಕವಾಗಿ ತನ್ನ ಪತ್ನಿಯೆಂದೂ ಅದರ ನಿವಾಸಿಗಳನ್ನು ಒಬ್ಬೊಬ್ಬರಾಗಿ ಆಕೆಯ ಮಕ್ಕಳೆಂದೂ ವರ್ಣಿಸುತ್ತಾನೆ.

b ನಾಲ್ಕನೆಯ ವಚನದಿಂದ ಹಿಡಿದು ಆ ಅಧ್ಯಾಯದ ಅಂತ್ಯದ ತನಕ ಲೇಖಕನು ತನ್ನ ಕುರಿತಾಗಿಯೇ ಮಾತಾಡುತ್ತಿರುವಂತೆ ತೋರಿಬರುತ್ತದೆ. ಈ ವಚನಗಳಲ್ಲಿ ಹೇಳಿರುವ ಕೆಲವು ಪರೀಕ್ಷೆಗಳನ್ನು ಯೆಶಾಯನು ತಾನೇ ಅನುಭವಿಸಿರಬಹುದು. ಆದರೆ, ಪೂರ್ಣಾರ್ಥದಲ್ಲಿ ಈ ಪ್ರವಾದನೆ ಯೇಸು ಕ್ರಿಸ್ತನಲ್ಲಿ ನೆರವೇರುತ್ತದೆ.

c ಆಸಕ್ತಿಕರವಾಗಿಯೇ, ಸೆಪ್ಟ್ಯುಅಜಿಂಟ್‌ನಲ್ಲಿ ಯೆಶಾಯ 50:6 ಹೇಳುವುದು: “ನನ್ನ ಬೆನ್ನನ್ನು ಹೊಡೆತಗಳಿಗೂ ನನ್ನ ಗಲ್ಲಗಳನ್ನು ಪೆಟ್ಟುಗಳಿಗೂ ಒಡ್ಡಿದೆನು.”

[ಅಧ್ಯಯನ ಪ್ರಶ್ನೆಗಳು]

[ಪುಟ 155ರಲ್ಲಿರುವ ಚಿತ್ರ]

ಯೆಹೂದ್ಯರು ಯೆಹೋವನ ಬದಲಿಗೆ ಮಾನವ ಅಧಿಪತಿಗಳ ಮೊರೆಹೋಗುತ್ತಾರೆ

[ಪುಟ 156, 157ರಲ್ಲಿರುವ ಚಿತ್ರವಿವರಣೆ]

ಕೆಂಪು ಸಮುದ್ರದ ಬಳಿ ಐಗುಪ್ತ್ಯರ ಮತ್ತು ತನ್ನ ಜನರ ಮಧ್ಯೆ ಒಂದು ಮೇಘಸ್ತಂಭವನ್ನು ನಿಲ್ಲಿಸಿ ಯೆಹೋವನು ತನ್ನ ಜನರನ್ನು ಕಾಪಾಡಿದನು