ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎದೆಗುಂದಿರುವ ಬಂಧಿವಾಸಿಗಳಿಗೆ ನಿರೀಕ್ಷೆಯ ಸಂದೇಶ

ಎದೆಗುಂದಿರುವ ಬಂಧಿವಾಸಿಗಳಿಗೆ ನಿರೀಕ್ಷೆಯ ಸಂದೇಶ

ಅಧ್ಯಾಯ ಹದಿನಾರು

ಎದೆಗುಂದಿರುವ ಬಂಧಿವಾಸಿಗಳಿಗೆ ನಿರೀಕ್ಷೆಯ ಸಂದೇಶ

ಯೆಶಾಯ 55:1-13

1. ಬಾಬೆಲಿನಲ್ಲಿದ್ದ ಯೆಹೂದಿ ದೇಶಭ್ರಷ್ಟರ ಸನ್ನಿವೇಶವನ್ನು ವರ್ಣಿಸಿರಿ.

 ಯೆಹೂದದ ಇತಿಹಾಸದಲ್ಲೇ ಅದು ಅಂಧಕಾರದ ಸಮಯವಾಗಿತ್ತು. ದೇವರ ಒಡಂಬಡಿಕೆಯ ಜನರನ್ನು ಅವರ ಸ್ವದೇಶದಿಂದ ಬಲಾತ್ಕಾರವಾಗಿ ಒಯ್ಯಲಾಗಿತ್ತು. ಅವರು ಈಗ ಬಾಬೆಲಿನಲ್ಲಿ ಬಂದಿಗಳಾಗಿ ಕಷ್ಟಾನುಭವಿಸುತ್ತಿದ್ದರು. ತಮ್ಮ ದೈನಂದಿನ ವ್ಯವಹಾರಗಳನ್ನು ಪೂರೈಸಲಿಕ್ಕಾಗಿ ಅವರಿಗೆ ಸ್ವಲ್ಪಮಟ್ಟಿಗೆ ಸ್ವಾತಂತ್ರ್ಯವು ಕೊಡಲ್ಪಟ್ಟಿತ್ತೆಂಬುದು ಒಪ್ಪಿಕೊಳ್ಳತಕ್ಕ ವಿಷಯವೇ. (ಯೆರೆಮೀಯ 29:​4-7) ಕೆಲವರು ವೃತ್ತಿಪರ ಕೆಲಸಗಳಲ್ಲಿ ಕೌಶಲವನ್ನು ಪಡೆದರು ಇಲ್ಲವೆ ವ್ಯಾಪಾರ ವ್ಯವಹಾರಗಳಲ್ಲಿ ಭಾಗವಹಿಸಿದರು. a (ನೆಹೆಮೀಯ 3:​8, 31, 32) ಹೀಗಿದ್ದರೂ, ಯೆಹೂದಿ ಬಂದಿಗಳಿಗೆ ಜೀವನವು ಸುಲಭವಾಗಿರಲಿಲ್ಲ. ಅವರು ಶಾರೀರಿಕವಾಗಿಯೂ ಆತ್ಮಿಕವಾಗಿಯೂ ದಾಸತ್ವದಲ್ಲಿದ್ದರು. ಅದು ಹೇಗೆಂಬುದನ್ನು ನಾವು ನೋಡೋಣ.

2, 3. ಯೆಹೂದ್ಯರು ಯೆಹೋವನಿಗೆ ಸಲ್ಲಿಸುತ್ತಿದ್ದ ಆರಾಧನೆಯ ಮೇಲೆ ದೇಶಭ್ರಷ್ಟತೆಯು ಹೇಗೆ ಪರಿಣಾಮ ಬೀರಿತು?

2 ಸಾ.ಶ.ಪೂ. 607ರಲ್ಲಿ ಬಾಬೆಲಿನ ಸೈನ್ಯಗಳು ಯೆರೂಸಲೇಮನ್ನು ನಾಶಮಾಡಿದಾಗ, ಅವು ಒಂದು ಜನಾಂಗವನ್ನು ಧ್ವಂಸಮಾಡಿದ್ದಷ್ಟೇಯಲ್ಲ, ಅವು ಸತ್ಯಾರಾಧನೆಗೂ ಹೊಡೆತವನ್ನು ನೀಡಿದವು. ಆ ಸೈನ್ಯಗಳು ಯೆಹೋವನ ಆಲಯವನ್ನು ಸೂರೆಮಾಡಿ ನಾಶಗೊಳಿಸಿದವು. ಅವು ಲೇವಿಕುಲದ ಕೆಲವರನ್ನು ಬಂದಿಗಳಾಗಿ ಒಯ್ದು, ಇತರರನ್ನು ಕೊಂದು ಯಾಜಕತ್ವದ ಏರ್ಪಾಡನ್ನು ಕುಂಟುಗೊಳಿಸಿದವು. ಆರಾಧನಾಲಯವಾಗಲಿ, ಯಜ್ಞವೇದಿಯಾಗಲಿ, ಸಂಘಟಿಸಲ್ಪಟ್ಟ ಯಾಜಕತ್ವವಾಗಲಿ ಇಲ್ಲದೆ, ಧರ್ಮಶಾಸ್ತ್ರದಲ್ಲಿ ತಿಳಿಸಲ್ಪಟ್ಟಿರುವಂತೆ ಸತ್ಯದೇವರಿಗೆ ಯಜ್ಞಗಳನ್ನು ಅರ್ಪಿಸಲು ಯೆಹೂದ್ಯರಿಗೆ ಸಾಧ್ಯವಾಗದೆ ಹೋಯಿತು.

3 ಸುನ್ನತಿ ಮಾಡಿಸಿಕೊಳ್ಳುವ ಮೂಲಕ ಮತ್ತು ತಮ್ಮಿಂದ ಸಾಧ್ಯವಿರುವಷ್ಟರ ಮಟ್ಟಿಗೆ ಧರ್ಮಶಾಸ್ತ್ರವನ್ನು ಪಾಲಿಸುವ ಮೂಲಕ, ನಂಬಿಗಸ್ತ ಯೆಹೂದ್ಯರು ತಮ್ಮ ಧಾರ್ಮಿಕ ಗುರುತನ್ನು ಇನ್ನೂ ಕಾಪಾಡಿಕೊಳ್ಳಸಾಧ್ಯವಿತ್ತು. ಉದಾಹರಣೆಗೆ, ನಿಷೇಧಿಸಲ್ಪಟ್ಟಿದ್ದ ಆಹಾರವನ್ನು ಅವರು ತಿನ್ನದಿರಸಾಧ್ಯವಿತ್ತು ಮತ್ತು ಸಬ್ಬತ್ತನ್ನು ಆಚರಿಸಬಹುದಿತ್ತು. ಆದರೆ ಇವುಗಳನ್ನು ಮಾಡುವಾಗ ಅವರನ್ನು ಬಂಧಿಸಿದವರ ನಿಂದೆಗೆ ಅವರು ಗುರಿಯಾಗಸಾಧ್ಯವಿತ್ತು. ಏಕೆಂದರೆ ಬಾಬೆಲಿನವರು ಯೆಹೂದ್ಯರ ಧಾರ್ಮಿಕ ಸಂಸ್ಕಾರಗಳನ್ನು ಹುಚ್ಚುತನವೆಂದೆಣಿಸುತ್ತಿದ್ದರು. ಈ ದೇಶಭ್ರಷ್ಟರ ನಿರುತ್ಸಾಹಕರ ಪರಿಸ್ಥಿತಿಯನ್ನು ಕೀರ್ತನೆಗಾರನ ಈ ಮಾತುಗಳಲ್ಲಿ ನಾವು ನೋಡಬಲ್ಲೆವು: “ನಾವು ಬಾಬೆಲ್‌ ದೇಶದ ನದಿಗಳ ಬಳಿಯಲ್ಲಿ ಕೂತುಕೊಂಡು ಚೀಯೋನನ್ನು ನೆನಸಿ ಅತ್ತೆವು. ಆ ದೇಶದ ನೀರವಂಜಿ ಮರಗಳಿಗೆ ನಮ್ಮ ಕಿನ್ನರಿಗಳನ್ನು ತೂಗಹಾಕಿದೆವು. ನಮ್ಮನ್ನು ಸೆರೆಹಿಡಿದು ಪೀಡಿಸುತ್ತಿದ್ದವರು ನಮಗೆ​—⁠ನೀವು ಚೀಯೋನಿನ ಗೀತಗಳಲ್ಲಿ ಒಂದನ್ನು ನಮ್ಮ ವಿನೋದಕ್ಕಾಗಿ ಹಾಡಿರಿ ಎಂದು ಹೇಳುತ್ತಿದ್ದರು.”​—⁠ಕೀರ್ತನೆ 137:1-3.

4. ಯೆಹೂದ್ಯರು ತಮ್ಮ ವಿಮೋಚನೆಗಾಗಿ ಇತರ ಜನಾಂಗಗಳ ಕಡೆಗೆ ನೋಡುವುದು ಏಕೆ ವ್ಯರ್ಥವಾಗಿರುವುದು, ಆದರೆ ಸಹಾಯಕ್ಕಾಗಿ ಅವರು ಯಾರ ಕಡೆಗೆ ತಿರುಗಬಲ್ಲರು?

4 ಹಾಗಾದರೆ, ಈ ಯೆಹೂದಿ ಬಂದಿಗಳು ಸಾಂತ್ವನಕ್ಕಾಗಿ ಯಾರ ಕಡೆಗೆ ತಿರುಗಸಾಧ್ಯವಿತ್ತು? ಅವರ ರಕ್ಷಣೆ ಎಲ್ಲಿಂದ ಬರುವುದು? ಅದು ಅವರ ಸುತ್ತಮುತ್ತಲಿನ ಜನಾಂಗಗಳಿಂದ ಖಂಡಿತವಾಗಿಯೂ ಬರಲಿಕ್ಕಿಲ್ಲ! ಏಕೆಂದರೆ ಆ ಎಲ್ಲ ಜನಾಂಗಗಳವರು ಬಾಬೆಲಿನ ಸೈನ್ಯಗಳ ಎದುರು ಬಲಶೂನ್ಯರಾಗಿದ್ದುದು ಮಾತ್ರವಲ್ಲ, ಅನೇಕರು ಯೆಹೂದ್ಯರ ವಿರೋಧಿಗಳೂ ಆಗಿದ್ದರು. ಆದರೆ ಸನ್ನಿವೇಶವು ನಿರೀಕ್ಷಾಹೀನವಾಗಿರಲಿಲ್ಲ. ತಾವು ಸ್ವತಂತ್ರರಾಗಿದ್ದಾಗ ಅವರು ಯಾರ ವಿರುದ್ಧ ದಂಗೆಯೆದ್ದಿದ್ದರೊ ಆ ಯೆಹೋವನು ಅವರು ಈಗ ದೇಶಭ್ರಷ್ಟರಾಗಿದ್ದರೂ ಅವರಿಗೆ ಸ್ನೇಹಪೂರ್ವಕವಾಗಿ ಹಾರ್ದಿಕ ಆಮಂತ್ರಣವನ್ನು ಕೊಟ್ಟನು.

“ನೀರಿನ ಬಳಿಗೆ ಬನ್ನಿರಿ”

5. “ನೀರಿನ ಬಳಿಗೆ ಬನ್ನಿರಿ” ಎಂಬ ಮಾತುಗಳ ವೈಶಿಷ್ಟ್ಯವೇನು?

5 ಯೆಹೋವನು ಯೆಶಾಯನ ಮೂಲಕ ಪ್ರವಾದನಾರೂಪವಾಗಿ ಬಾಬೆಲಿನಲ್ಲಿರುವ ಯೆಹೂದಿ ಬಂದಿಗಳಿಗೆ ಹೇಳುವುದು: “ಎಲೈ, ಬಾಯಾರಿದ ಸಕಲಜನರೇ, ನೀರಿನ ಬಳಿಗೆ ಬನ್ನಿರಿ, ಹಣವಿಲ್ಲದವನು ಸಹ ಬರಲಿ! ಬನ್ನಿರಿ, ಕೊಂಡುಕೊಳ್ಳಿರಿ, ಉಣ್ಣಿರಿ! ಬಂದು ದ್ರಾಕ್ಷಾರಸವನ್ನೂ ಹಾಲನ್ನೂ ಹಣಕೊಡದೆ ಕ್ರಯವಿಲ್ಲದೆ ತೆಗೆದುಕೊಳ್ಳಿರಿ.” (ಯೆಶಾಯ 55:1) ಈ ಮಾತುಗಳಲ್ಲಿ ಬಹಳಷ್ಟು ಸಾಂಕೇತಿಕ ಅರ್ಥವಿದೆ. ಉದಾಹರಣೆಗೆ, “ನೀರಿನ ಬಳಿಗೆ ಬನ್ನಿರಿ” ಎಂಬ ಆಮಂತ್ರಣವನ್ನು ಪರಿಗಣಿಸಿ. ನೀರಿಲ್ಲದಿರುವಲ್ಲಿ ಜೀವಿಸುವುದು ಅಸಾಧ್ಯ. ಆ ಅಮೂಲ್ಯ ದ್ರವವಿಲ್ಲದಿರುವಲ್ಲಿ ಮನುಷ್ಯರಾದ ನಾವು ಸುಮಾರು ಒಂದು ವಾರದ ತನಕ ಮಾತ್ರ ಬದುಕಿರಬಲ್ಲೆವು. ಆದುದರಿಂದ, ಈ ಮಾತುಗಳು ಯೆಹೂದಿ ಬಂಧಿವಾಸಿಗಳ ಮೇಲೆ ಬೀರಲಿದ್ದ ಪರಿಣಾಮದ ಕಾರಣ, ಯೆಹೋವನು ನೀರನ್ನು ರೂಪಕಾಲಂಕಾರವಾಗಿ ಉಪಯೋಗಿಸಿರುವುದು ಯಥೋಚಿತವಾಗಿದೆ. ಆತನ ಸಂದೇಶವು ಅವರನ್ನು, ಸೆಕೆಯ ದಿನದಲ್ಲಿ ತಣ್ಣೀರಿನಂತೆ ಚೈತನ್ಯಗೊಳಿಸುವುದು. ಇದು ಅವರನ್ನು ಅವರ ಖಿನ್ನ ಸ್ಥಿತಿಯಿಂದ ಹೊರತಂದು, ಸತ್ಯ ಮತ್ತು ನೀತಿಗಾಗಿ ಅವರಿಗಿರುವ ಬಾಯಾರಿಕೆಯನ್ನು ತಣಿಸುವುದು. ಇದು ಅವರಲ್ಲಿ ಬಂಧನದಿಂದ ಬಿಡುಗಡೆಯಾಗುವ ನಿರೀಕ್ಷೆಯನ್ನೂ ತುಂಬುವುದು. ಆದರೂ, ಇದರಿಂದ ಪ್ರಯೋಜನ ಪಡೆಯಬೇಕಾದರೆ, ಈ ಯೆಹೂದಿ ದೇಶಭ್ರಷ್ಟರು ದೇವರ ಸಂದೇಶವನ್ನು ಕುಡಿದು, ಅದಕ್ಕೆ ಗಮನಕೊಟ್ಟು, ಅದರಂತೆ ಕ್ರಿಯೆಗೈಯಬೇಕು.

6. ಯೆಹೂದ್ಯರು “ದ್ರಾಕ್ಷಾರಸವನ್ನೂ ಹಾಲನ್ನೂ” ಕೊಳ್ಳುವುದರಿಂದ ಹೇಗೆ ಪ್ರಯೋಜನ ಹೊಂದುವರು?

6 ಯೆಹೋವನು “ದ್ರಾಕ್ಷಾರಸವನ್ನೂ ಹಾಲನ್ನೂ” ಕೊಡುತ್ತಾನೆ. ಹಾಲು ಎಳೆಯ ಶರೀರಗಳನ್ನು ಬಲಗೊಳಿಸಿ, ಮಕ್ಕಳು ಬೆಳೆಯುವಂತೆ ಸಹಾಯಮಾಡುತ್ತದೆ. ಹಾಗೆಯೇ, ಯೆಹೋವನ ಮಾತುಗಳು ಆತನ ಜನರನ್ನು ಆತ್ಮಿಕವಾಗಿ ಬಲಪಡಿಸಿ, ಆತನೊಂದಿಗೆ ಅವರಿಗಿರುವ ಸಂಬಂಧವನ್ನು ದೃಢಪಡಿಸುವಂತೆ ಶಕ್ತರನ್ನಾಗಿ ಮಾಡುತ್ತವೆ. ಆದರೆ ದ್ರಾಕ್ಷಾರಸದ ಕುರಿತಾಗಿ ಏನು? ದ್ರಾಕ್ಷಾರಸವನ್ನು ಅನೇಕವೇಳೆ ಸಂತೋಷದ ಸಮಾರಂಭಗಳಲ್ಲಿ ಉಪಯೋಗಿಸಲಾಗುತ್ತದೆ. ಬೈಬಲಿನಲ್ಲಿ ಇದನ್ನು ಸಮೃದ್ಧಿ ಮತ್ತು ಹರ್ಷೋಲ್ಲಾಸದೊಂದಿಗೆ ಜೋಡಿಸಲಾಗಿದೆ. (ಕೀರ್ತನೆ 104:15) ತನ್ನ ಜನರು ‘ದ್ರಾಕ್ಷಾರಸವನ್ನು ಕೊಳ್ಳಬೇಕೆಂದು’ ಹೇಳುವ ಮೂಲಕ, ಅವರು ಪೂರ್ಣಹೃದಯದಿಂದ ಸತ್ಯಾರಾಧನೆಗೆ ಹಿಂದಿರುಗುವಲ್ಲಿ, ಅದು ಅವರಿಗೆ “ಬಹಳ ಆನಂದ”ವನ್ನು ನೀಡುವುದೆಂಬ ಆಶ್ವಾಸನೆಯನ್ನು ಯೆಹೋವನು ಕೊಡುತ್ತಾನೆ.​—⁠ಧರ್ಮೋಪದೇಶಕಾಂಡ 16:15; ಕೀರ್ತನೆ 19:8; ಜ್ಞಾನೋಕ್ತಿ 10:⁠22.

7. ದೇಶಭ್ರಷ್ಟರ ವಿಷಯದಲ್ಲಿ ಯೆಹೋವನು ತೋರಿಸುವ ಸಹಾನುಭೂತಿಯು ಗಮನಾರ್ಹವೇಕೆ, ಮತ್ತು ಆತನ ಕುರಿತು ಇದು ನಮಗೇನನ್ನು ಕಲಿಸುತ್ತದೆ?

7 ದೇಶಭ್ರಷ್ಟರಾಗಿದ್ದ ಯೆಹೂದ್ಯರಿಗೆ ಇಂತಹ ಆತ್ಮಿಕ ಚೈತನ್ಯವನ್ನು ಕೊಡುವುದರಿಂದ ಯೆಹೋವನು ಎಂತಹ ಕರುಣೆಯನ್ನು ತೋರಿಸುತ್ತಾನೆ! ಯೆಹೂದ್ಯರ ಹಟಮಾರಿತನ ಮತ್ತು ದಂಗೆಕೋರ ಇತಿಹಾಸವನ್ನು ನಾವು ಜ್ಞಾಪಿಸಿಕೊಳ್ಳುವಲ್ಲಿ, ಆತನು ಅವರಿಗೆ ತೋರಿಸುವ ಸಹಾನುಭೂತಿಯು ಇನ್ನೂ ಹೆಚ್ಚು ಗಮನಾರ್ಹವಾಗಿರುತ್ತದೆ. ಅವರು ಯೆಹೋವನ ಅಂಗೀಕಾರಕ್ಕೆ ಅರ್ಹರಾಗಿರುವುದಿಲ್ಲ. ಆದರೂ, ಕೀರ್ತನೆಗಾರ ದಾವೀದನು ಶತಮಾನಗಳಿಗೆ ಮೊದಲೇ ಬರೆದುದು: “ಯೆಹೋವನು ಕನಿಕರವೂ ದಯೆಯೂ ದೀರ್ಘಶಾಂತಿಯೂ ಪೂರ್ಣಪ್ರೀತಿಯೂ ಉಳ್ಳವನು. ಆತನು ಯಾವಾಗಲೂ ತಪ್ಪುಹುಡುಕುವವನಲ್ಲ; ನಿತ್ಯವೂ ಕೋಪಿಸುವವನಲ್ಲ.” (ಕೀರ್ತನೆ 103:8, 9) ಯೆಹೋವನು ಅವರೊಂದಿಗಿನ ಸಂಬಂಧವನ್ನು ಕಡಿದುಕೊಳ್ಳದೆ, ಅವರೊಂದಿಗೆ ರಾಜಿಮಾಡಿಕೊಳ್ಳಲು ಮೊದಲನೆಯ ಹೆಜ್ಜೆಯನ್ನು ತಾನೇ ತೆಗೆದುಕೊಳ್ಳುತ್ತಾನೆ. ನಿಜವಾಗಿಯೂ, ದೇವರಿಗೆ “ಕರುಣೆಯೇ ಇಷ್ಟ.”​—⁠ಮೀಕ 7:⁠18.

ತಪ್ಪಾಗಿ ಇಡಲ್ಪಟ್ಟ ಭರವಸೆ

8. ಅನೇಕ ಮಂದಿ ಯೆಹೂದ್ಯರು ಯಾರ ಮೇಲೆ ಭರವಸವಿಟ್ಟರು, ಮತ್ತು ಯಾವ ಎಚ್ಚರಿಕೆಯ ಹೊರತೂ ಅವರು ಹಾಗೆ ಮಾಡಿದರು?

8 ಇದುವರೆಗೆ ಅನೇಕ ಮಂದಿ ಯೆಹೂದ್ಯರು ರಕ್ಷಣೆಗಾಗಿ ತಮ್ಮ ಪೂರ್ಣ ಭರವಸೆಯನ್ನು ಯೆಹೋವನ ಮೇಲೆ ಇಟ್ಟಿಲ್ಲ. ಉದಾಹರಣೆಗೆ, ಯೆರೂಸಲೇಮಿನ ಪತನಕ್ಕೆ ಮೊದಲು ಆಕೆಯ ಪ್ರಭುಗಳು ಬೆಂಬಲಕ್ಕಾಗಿ ಬಲಾಢ್ಯ ಜನಾಂಗಗಳ ಮೊರೆಹೋದರು, ಐಗುಪ್ತ ಮತ್ತು ಬಾಬೆಲ್‌ನೊಂದಿಗೆ ಸೂಳೆತನವನ್ನು ನಡೆಸಿದರು. (ಯೆಹೆಜ್ಕೇಲ 16:​26-29; 23:14) ಸಕಾರಣದಿಂದಲೇ ಯೆರೆಮೀಯನು ಅವರನ್ನು ಎಚ್ಚರಿಸಿದ್ದು: “ಮಾನವಮಾತ್ರದವರಲ್ಲಿ ಭರವಸವಿಟ್ಟು ನರಜನ್ಮದವರನ್ನು ತನ್ನ ಭುಜಬಲವೆಂದು ತಿಳಿದು ಯೆಹೋವನನ್ನು ತೊರೆಯುವ ಮನಸ್ಸುಳ್ಳವನು ಶಾಪಗ್ರಸ್ತನು.” (ಯೆರೆಮೀಯ 17:5) ಆದರೆ ದೇವಜನರು ಅದನ್ನೇ ಮಾಡಿದರು!

9. ಅನೇಕ ಮಂದಿ ಯೆಹೂದ್ಯರು, “ಆಹಾರವಲ್ಲದ್ದಕ್ಕೆ ಹಣವನ್ನು” ಹೇಗೆ ಕೊಡುತ್ತಿರಬಹುದು?

9 ಈಗ ಅವರು ತಾವು ಭರವಸವಿಟ್ಟಿದ್ದ ಜನಾಂಗಗಳಲ್ಲಿಯೇ ಒಂದಕ್ಕೆ ದಾಸರಾಗಿದ್ದಾರೆ. ಅವರು ಪಾಠವನ್ನು ಕಲಿತಿದ್ದಾರೊ? ಅನೇಕರು ಕಲಿಯದೆ ಇದ್ದಿರಬಹುದು, ಏಕೆಂದರೆ ಯೆಹೋವನು ಕೇಳುವುದು: “ಆಹಾರವಲ್ಲದ್ದಕ್ಕೆ ಹಣವನ್ನು ಏಕೆ ವ್ರಯಮಾಡುತ್ತೀರಿ? ತೃಪ್ತಿಗೊಳಿಸದ ಪದಾರ್ಥಕ್ಕೆ ನಿಮ್ಮ ದುಡಿತವನ್ನು ವೆಚ್ಚಮಾಡುವದೇಕೆ?” (ಯೆಶಾಯ 55:2ಎ) ಬಂದಿಗಳಾದ ಯೆಹೂದ್ಯರು ಯೆಹೋವನನ್ನು ಬಿಟ್ಟು ಇನ್ನಾರಲ್ಲಿಯಾದರೂ ಭರವಸೆಯಿಡುವಲ್ಲಿ, ಅವರು “ಆಹಾರವಲ್ಲದ್ದಕ್ಕೆ ಹಣವನ್ನು . . . ವ್ರಯ”ಮಾಡುವವರಾಗುತ್ತಾರೆ. ಅವರಿಗೆ ಬಾಬೆಲಿನಿಂದ ಖಂಡಿತವಾಗಿಯೂ ಬಿಡುಗಡೆಯಾಗುವುದಿಲ್ಲ, ಏಕೆಂದರೆ ಬಂದಿಗಳನ್ನು ಎಂದಿಗೂ ಸ್ವದೇಶಕ್ಕೆ ಹಿಂದಿರುಗುವಂತೆ ಬಿಡದಿರುವುದು ಬಾಬೆಲಿನ ಕಾರ್ಯನೀತಿಯಾಗಿದೆ. ಸತ್ಯ ವಿಷಯವೇನಂದರೆ, ಸಾಮ್ರಾಜ್ಯಶಾಹಿ ಸರಕಾರ, ವಾಣಿಜ್ಯವಾದ ಮತ್ತು ಸುಳ್ಳಾರಾಧನೆಯುಳ್ಳ ಬಾಬೆಲಿನ ಬಳಿ ದೇಶಭ್ರಷ್ಟರಾದ ಯೆಹೂದ್ಯರಿಗೆ ನೀಡಲು ಏನೂ ಇಲ್ಲ.

10. (ಎ) ದೇಶಭ್ರಷ್ಟರಾಗಿದ್ದ ಯೆಹೂದ್ಯರು ಯೆಹೋವನಿಗೆ ಕಿವಿಗೊಡುವಲ್ಲಿ ಆತನು ಅವರಿಗೆ ಹೇಗೆ ಪ್ರತಿಫಲ ಕೊಡುವನು? (ಬಿ) ಯೆಹೋವನು ದಾವೀದನೊಂದಿಗೆ ಯಾವ ಒಡಂಬಡಿಕೆಯನ್ನು ಮಾಡಿಕೊಂಡಿದ್ದನು?

10 ಯೆಹೋವನು ತನ್ನ ಜನರಿಗೆ ದೈನ್ಯದಿಂದ ಬೇಡಿಕೊಳ್ಳುವುದು: “ಕಿವಿಗೊಟ್ಟು ನನ್ನ ಮಾತನ್ನು ಕೇಳಿರಿ, ಒಳ್ಳೇದನ್ನೇ ಉಂಡು ಮೃಷ್ಟಾನ್ನದಲ್ಲಿ ಆನಂದಪಡಿರಿ. ಕಿವಿಯನ್ನು ಇತ್ತ ತಿರುಗಿಸಿರಿ, ನನ್ನ ಬಳಿಗೆ ಬನ್ನಿರಿ; ಆಲಿಸಿದರೆ ಬದುಕಿ ಬಾಳುವಿರಿ. ದಾವೀದನಿಗೆ ಖಂಡಿತವಾಗಿ ವಾಗ್ದಾನಮಾಡಿದ ಕೃಪಾವರಗಳನ್ನು ನಿಮಗೆ ಕೊಡುತ್ತೇನೆಂಬ ಶಾಶ್ವತವಾದ ಒಡಂಬಡಿಕೆಯನ್ನು ನಿಮ್ಮೊಂದಿಗೆ ಮಾಡಿಕೊಳ್ಳುವೆನು.” (ಯೆಶಾಯ 55:2ಬಿ, 3) ಆತ್ಮಿಕವಾಗಿ ನ್ಯೂನಪೋಷಣೆಗೊಳಗಾಗಿರುವ ಜನರಿಗಿರುವ ಏಕಮಾತ್ರ ನಿರೀಕ್ಷೆಯು, ಈಗ ಪ್ರವಾದನಾರೂಪವಾಗಿ ಯೆಶಾಯನ ಮೂಲಕ ಅವರೊಂದಿಗೆ ಮಾತಾಡುತ್ತಿರುವ ಯೆಹೋವನೇ ಆಗಿದ್ದಾನೆ. ದೇವರ ಸಂದೇಶಕ್ಕೆ ಕಿವಿಗೊಡುವುದರ ಮೇಲೆ ಮಾತ್ರ ಅವರ ಜೀವವು ಅವಲಂಬಿಸಿದೆ. ಏಕೆಂದರೆ, ಹಾಗೆ ಮಾಡುವಲ್ಲಿ “ಬದುಕಿ ಬಾಳುವಿರಿ” ಎಂದು ಆತನು ಹೇಳುತ್ತಾನೆ. ಆದರೆ ಯೆಹೋವನು ತನಗೆ ಕಿವಿಗೊಡುವವರೊಂದಿಗೆ ಮಾಡಿಕೊಳ್ಳುವ “ಶಾಶ್ವತವಾದ ಒಡಂಬಡಿಕೆ” ಏನಾಗಿದೆ? “ದಾವೀದನಿಗೆ . . . ವಾಗ್ದಾನಮಾಡಿದ ಕೃಪಾವರ”ಗಳ ಕುರಿತಾದ ಒಡಂಬಡಿಕೆಯೇ ಅದಾಗಿದೆ. ಶತಮಾನಗಳಿಗೆ ಮೊದಲೇ ಯೆಹೋವನು ದಾವೀದನಿಗೆ, ಅವನ ಸಿಂಹಾಸನವು “ಶಾಶ್ವತವಾಗಿರುವದು” ಎಂದು ವಾಗ್ದಾನಿಸಿದ್ದನು. (2 ಸಮುವೇಲ 17:16) ಆದಕಾರಣ, ಇಲ್ಲಿ ಹೇಳಲಾಗಿರುವ “ಶಾಶ್ವತವಾದ ಒಡಂಬಡಿಕೆ”ಯು ಆಳ್ವಿಕೆಗೆ ಸಂಬಂಧಿಸಿದೆ.

ಶಾಶ್ವತವಾದ ರಾಜ್ಯಕ್ಕೆ ಕಾಯಂ ಬಾಧ್ಯಸ್ಥನು

11. ಬಾಬೆಲಿನಲ್ಲಿದ್ದ ದೇಶಭ್ರಷ್ಟರಿಗೆ, ದೇವರು ದಾವೀದನಿಗೆ ಕೊಟ್ಟ ವಾಗ್ದಾನದ ನೆರವೇರಿಕೆ ಅಸಂಭವವೆಂದು ಏಕೆ ತೋರಬಹುದು?

11 ದಾವೀದನ ವಂಶದಲ್ಲಿ ಬರಲಿರುವ ಆಳ್ವಿಕೆಯ ವಿಷಯವು ಆ ಯೆಹೂದಿ ದೇಶಭ್ರಷ್ಟರಿಗೆ ಅಸಾಧ್ಯವಾದ ಸಂಗತಿಯಂತೆ ತೋರಿರಬಹುದು. ಅವರು ತಮ್ಮ ದೇಶವನ್ನು ಮಾತ್ರವಲ್ಲ ರಾಷ್ಟ್ರತ್ವವನ್ನೂ ಕಳೆದುಕೊಂಡಿದ್ದರು! ಆದರೆ ಅದು ತಾತ್ಕಾಲಿಕವಾಗಿದೆ. ಯೆಹೋವನು ದಾವೀದನೊಂದಿಗೆ ಮಾಡಿದ ತನ್ನ ಒಡಂಬಡಿಕೆಯನ್ನು ಮರೆತಿರುವುದಿಲ್ಲ. ಮಾನವ ದೃಷ್ಟಿಕೋನದಿಂದ ಅದೆಷ್ಟೇ ಅಸಂಭವವಾಗಿ ತೋರಲಿ, ದಾವೀದನ ವಂಶದಲ್ಲಿ ಬರಲಿದ್ದ ಶಾಶ್ವತ ರಾಜ್ಯದ ಕುರಿತಾದ ದೇವರ ಉದ್ದೇಶವು ಖಂಡಿತವಾಗಿಯೂ ಯಶಸ್ವಿಯಾಗುವುದು. ಆದರೆ ಹೇಗೆ ಮತ್ತು ಯಾವಾಗ? ಸಾ.ಶ.ಪೂ. 537ರಲ್ಲಿ ಯೆಹೋವನು ತನ್ನ ಜನರನ್ನು ಬಾಬೆಲಿನ ಬಂಧಿವಾಸದಿಂದ ಬಿಡಿಸಿ, ಅವರ ಸ್ವದೇಶದಲ್ಲಿ ಅವರನ್ನು ಪುನಸ್ಸ್ಥಾಪಿಸುತ್ತಾನೆ. ಆದರೆ ಇದರಿಂದಾಗಿ ಶಾಶ್ವತವಾದ ರಾಜ್ಯದ ಸ್ಥಾಪನೆಯಾಗುತ್ತದೆಯೆ? ಇಲ್ಲ, ಏಕೆಂದರೆ ಅವರು ಈಗ ಇನ್ನೊಂದು ವಿಧರ್ಮಿ ಸಾಮ್ರಾಜ್ಯವಾದ ಮೇದ್ಯಯ ಪಾರಸಿಯರಿಗೆ ಅಡಿಯಾಳುಗಳಾಗಿ ಮುಂದುವರಿಯುತ್ತಾರೆ. ಅನ್ಯದೇಶಗಳವರಿಗೆ ಆಳಲಿಕ್ಕಾಗಿ ಅನುಮತಿಸಲ್ಪಟ್ಟಿದ್ದ ‘ಸಮಯಗಳು’ ಇನ್ನೂ ಅಂತ್ಯಗೊಂಡಿರಲಿಲ್ಲ. (ಲೂಕ 21:24) ಇಸ್ರಾಯೇಲಿನಲ್ಲಿ ಒಬ್ಬ ಅರಸನು ಇಲ್ಲದೆ ಇರುವುದರಿಂದ, ದಾವೀದನಿಗೆ ಯೆಹೋವನು ಕೊಟ್ಟ ವಾಗ್ದಾನವು ಅನೇಕ ಶತಮಾನಗಳ ವರೆಗೆ ನೆರವೇರುವುದಿಲ್ಲ.

12. ದಾವೀದನೊಂದಿಗೆ ಮಾಡಿದ ರಾಜ್ಯದ ಒಡಂಬಡಿಕೆಯನ್ನು ನೆರವೇರಿಸಲಿಕ್ಕಾಗಿ ಯೆಹೋವನು ಯಾವ ಹೆಜ್ಜೆಯನ್ನು ತೆಗೆದುಕೊಂಡನು?

12 ಬಾಬೆಲಿನ ಬಂಧಿವಾಸದಿಂದ ಇಸ್ರಾಯೇಲನ್ನು ಬಿಡಿಸಿ 500ಕ್ಕೂ ಹೆಚ್ಚು ವರ್ಷಗಳು ಕಳೆದ ನಂತರ, ರಾಜ್ಯದ ಒಡಂಬಡಿಕೆಯನ್ನು ನೆರವೇರಿಸಲಿಕ್ಕಾಗಿ ಯೆಹೋವನು ಒಂದು ದೊಡ್ಡ ಹೆಜ್ಜೆಯನ್ನು ತೆಗೆದುಕೊಂಡನು. ತನ್ನ ಸೃಷ್ಟಿಕಾರ್ಯದ ಆರಂಭವಾಗಿದ್ದ ತನ್ನ ಏಕಜಾತ ಪುತ್ರನ ಜೀವವನ್ನು ಸ್ವರ್ಗೀಯ ಮಹಿಮೆಯಿಂದ ತೆಗೆದು ಯೆಹೂದಿ ಕನ್ಯೆಯಾದ ಮರಿಯಳ ಗರ್ಭಕ್ಕೆ ಸ್ಥಳಾಂತರಿಸಿದನು. (ಕೊಲೊಸ್ಸೆ 1:​15-17) ಆ ಘಟನೆಯನ್ನು ಪ್ರಕಟಿಸುವಾಗ, ಯೆಹೋವನ ದೂತನು ಮರಿಯಳಿಗೆ ಹೇಳಿದ್ದು: “ಆತನು ಮಹಾಪುರುಷನಾಗಿ ಪರಾತ್ಪರನ ಕುಮಾರನೆನಿಸಿಕೊಳ್ಳುವನು; ಇದಲ್ಲದೆ ದೇವರಾಗಿರುವ ಕರ್ತನು [“ಯೆಹೋವನು,” NW] ಆತನ ಮೂಲಪಿತನಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡುವನು. ಆತನು ಯಾಕೋಬನ ವಂಶವನ್ನು ಸದಾಕಾಲ ಆಳುವನು; ಆತನ ರಾಜ್ಯಕ್ಕೆ ಅಂತ್ಯವೇ ಇಲ್ಲ.” (ಲೂಕ 1:32, 33) ಹೀಗೆ ಯೇಸು ದಾವೀದ ರಾಜನ ವಂಶದಲ್ಲಿ ಜನಿಸಿ, ರಾಜತ್ವದ ಹಕ್ಕನ್ನು ಬಾಧ್ಯತೆಯಾಗಿ ಪಡೆದನು. ಒಮ್ಮೆ ಸಿಂಹಾಸನಾರೂಢನಾದ ಬಳಿಕ ಯೇಸು “ಯಾವಾಗಲೂ” ಆಳುವನು. (ಯೆಶಾಯ 9:7; ದಾನಿಯೇಲ 7:14) ಹೀಗೆ, ದಾವೀದ ರಾಜನಿಗೆ ಕಾಯಂ ಬಾಧ್ಯಸ್ಥನನ್ನು ಒದಗಿಸುವ ಯೆಹೋವನ ಶತಮಾನಗಳಷ್ಟು ಹಳೆಯ ವಾಗ್ದಾನದ ನೆರವೇರಿಕೆಗೆ ಈಗ ದಾರಿ ತೆರೆದಿತ್ತು.

‘ಜನಾಂಗಗಳಿಗೆ ಅಧಿಪತಿ’

13. ಯೇಸು ತನ್ನ ಶುಶ್ರೂಷೆಯ ಸಮಯದಲ್ಲಿಯೂ ಸ್ವರ್ಗಾರೋಹಣದ ಬಳಿಕವೂ “ಜನಾಂಗಗಳಿಗೆ ಸಾಕ್ಷಿ”ಯಾಗಿದ್ದುದು ಹೇಗೆ?

13 ಈ ಭಾವೀ ಅರಸನು ಏನು ಮಾಡುವನು? ಯೆಹೋವನು ಹೇಳುವುದು: “ಇಗೋ, ನಾನು ಅವನನ್ನು ಜನಾಂಗಗಳಿಗೆ ಸಾಕ್ಷಿಯನ್ನಾಗಿಯೂ ನಾಯಕನನ್ನಾಗಿಯೂ ಅಧಿಪತಿಯನ್ನಾಗಿಯೂ ನೇಮಿಸಿದೆನು.” (ಯೆಶಾಯ 55:4) ಯೇಸು ದೊಡ್ಡವನಾದಾಗ, ಅವನು ಭೂಮಿಯಲ್ಲಿ ದೇವರ ಪ್ರತಿನಿಧಿಯೂ ಜನಾಂಗಗಳಿಗೆ ದೇವರ ಸಾಕ್ಷಿಯೂ ಆಗಿದ್ದನು. ಅವನ ಮಾನವ ಜೀವನಾವಧಿಯಲ್ಲಿ, ಅವನ ಶುಶ್ರೂಷೆಯು “ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರಾಯೇಲನ ಮನೆತನದವರ” ಕಡೆಗೆ ನಿರ್ದೇಶಿಸಲ್ಪಟ್ಟಿತ್ತು. ಆದರೆ ತನ್ನ ಸ್ವರ್ಗಾರೋಹಣಕ್ಕೆ ತುಸು ಮೊದಲು ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ. . . . ನೋಡಿರಿ, ನಾನು ಯುಗದ ಸಮಾಪ್ತಿಯ ವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ.” (ಮತ್ತಾಯ 10:​5, 6; 15:24; 28:​19, 20) ಹೀಗೆ, ಸಕಾಲದಲ್ಲಿ ರಾಜ್ಯ ಸಂದೇಶವು ಇಸ್ರಾಯೇಲ್ಯೇತರರಿಗೆ ಕೊಂಡೊಯ್ಯಲ್ಪಟ್ಟು, ಅವರಲ್ಲಿ ಕೆಲವರು ದಾವೀದನೊಂದಿಗೆ ಮಾಡಲ್ಪಟ್ಟಿದ್ದ ಒಡಂಬಡಿಕೆಯ ನೆರವೇರಿಕೆಯಲ್ಲಿ ಭಾಗಿಗಳಾದರು. (ಅ. ಕೃತ್ಯಗಳು 13:46) ಈ ವಿಧದಲ್ಲಿ, ಯೇಸುವಿನ ಮರಣ, ಪುನರುತ್ಥಾನ ಮತ್ತು ಸ್ವರ್ಗಾರೋಹಣದ ಬಳಿಕವೂ ಅವನು ಯೆಹೋವನ “ಜನಾಂಗಗಳಿಗೆ ಸಾಕ್ಷಿ”ಯಾಗಿ ಮುಂದುವರಿದನು.

14, 15. (ಎ) ತಾನು ‘ನಾಯಕನೂ ಅಧಿಪತಿಯೂ’ ಆಗಿದ್ದೇನೆಂದು ಯೇಸು ಹೇಗೆ ತೋರಿಸಿಕೊಟ್ಟನು? (ಬಿ) ಯೇಸು ಕ್ರಿಸ್ತನ ಒಂದನೆಯ ಶತಮಾನದ ಹಿಂಬಾಲಕರಿಗೆ ಯಾವ ಪ್ರತೀಕ್ಷೆಯಿತ್ತು?

14 ಯೇಸು ಒಬ್ಬ ‘ನಾಯಕನೂ ಅಧಿಪತಿಯೂ’ ಆಗಿರಬೇಕಿತ್ತು. ಈ ಪ್ರವಾದನ ವರ್ಣನೆಗನುಸಾರ, ಯೇಸು ಭೂಮಿಯಲ್ಲಿದ್ದಾಗ ತನ್ನ ತಲೆತನದ ಜವಾಬ್ದಾರಿಗಳನ್ನು ಪೂರ್ಣವಾಗಿ ಅಂಗೀಕರಿಸಿದನು. ಅವನು ಪ್ರತಿಯೊಂದು ವಿಧದಲ್ಲಿಯೂ ನಾಯಕತ್ವವನ್ನು ವಹಿಸಿಕೊಂಡು, ದೊಡ್ಡ ಜನಸಮೂಹಗಳನ್ನು ಆಕರ್ಷಿಸಿ, ಸತ್ಯವಾಕ್ಯವನ್ನು ಅವರಿಗೆ ಕಲಿಸಿ, ತನ್ನ ನಾಯಕತ್ವವನ್ನು ಅನುಸರಿಸುವವರಿಗೆ ಸಿಗುವ ಪ್ರಯೋಜನಗಳನ್ನು ತಿಳಿಸಿದನು. (ಮತ್ತಾಯ 4:24; 7:​28, 29; 11:⁠5) ಅವನು ತನ್ನ ಶಿಷ್ಯರಿಗೆ ಕಾರ್ಯಸಾಧಕ ತರಬೇತನ್ನು ಕೊಟ್ಟು, ಮುಂದಿದ್ದ ಸಾರುವ ಕಾರ್ಯಾಚರಣೆಯನ್ನು ವಹಿಸಿಕೊಳ್ಳುವಂತೆ ಅವರನ್ನು ಸಿದ್ಧಪಡಿಸಿದನು. (ಲೂಕ 10:​1-12; ಅ. ಕೃತ್ಯಗಳು 1:8; ಕೊಲೊಸ್ಸೆ 1:23) ಕೇವಲ ಮೂರೂವರೆ ವರ್ಷಗಳಲ್ಲಿ ಯೇಸು, ಅನೇಕ ಕುಲಗಳಿಂದ ಬರಲಿದ್ದ ಸಾವಿರಾರು ಮಂದಿ ಸದಸ್ಯರಿಂದ ಕೂಡಿದ್ದ ಒಂದು ಐಕ್ಯ, ಅಂತಾರಾಷ್ಟ್ರೀಯ ಸಭೆಗೆ ಅಸ್ತಿವಾರವನ್ನು ಹಾಕಿದನು! ಅಷ್ಟು ಮಹತ್ತಾದ ಕೆಲಸವನ್ನು ನಿಜವಾದ ಒಬ್ಬ ‘ನಾಯಕನು ಮತ್ತು ಅಧಿಪತಿಯು’ ಮಾತ್ರ ಪೂರೈಸಸಾಧ್ಯವಿತ್ತು. b

15 ಒಂದನೆಯ ಶತಮಾನದಲ್ಲಿ ಕ್ರೈಸ್ತ ಸಭೆಗೆ ಒಟ್ಟುಗೂಡಿಸಲ್ಪಟ್ಟವರು ದೇವರ ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟರು. ಅವರಿಗೆ ಯೇಸು ಕ್ರಿಸ್ತನೊಂದಿಗೆ ಅವನ ಸ್ವರ್ಗೀಯ ರಾಜ್ಯದಲ್ಲಿ ಜೊತೆಪ್ರಭುಗಳಾಗುವ ಪ್ರತೀಕ್ಷೆಯಿತ್ತು. (ಪ್ರಕಟನೆ 14:⁠1) ಆದರೂ, ಯೆಶಾಯನ ಪ್ರವಾದನೆಯು ಆದಿ ಕ್ರೈಸ್ತತ್ವದ ಸಮಯಕ್ಕಿಂತಲೂ ಮುಂದಕ್ಕೆ ದೃಷ್ಟಿ ಹರಿಸುತ್ತದೆ. ಯೇಸು ಕ್ರಿಸ್ತನು ದೇವರ ರಾಜ್ಯದ ರಾಜನಾಗಿ ಆಳಲಾರಂಭಿಸಿದ್ದು ಕೇವಲ 1914ರಲ್ಲೆಂದು ರುಜುವಾತು ತೋರಿಸುತ್ತದೆ. ಆ ಬಳಿಕ ಸ್ವಲ್ಪದರಲ್ಲಿ, ಭೂಮಿಯಲ್ಲಿದ್ದ ಅಭಿಷಿಕ್ತರ ಮಧ್ಯೆ, ಸಾ.ಶ.ಪೂ. ಆರನೆಯ ಶತಮಾನದಲ್ಲಿ ದೇಶಭ್ರಷ್ಟರಾಗಿದ್ದ ಯೆಹೂದ್ಯರ ಸ್ಥಿತಿಯೊಂದಿಗೆ ಅನೇಕ ರೀತಿಗಳಲ್ಲಿ ಸಮಾನಾಂತರವಾದ ಪರಿಸ್ಥಿತಿಯು ಬೆಳೆದು ಬಂತು. ವಾಸ್ತವವೇನಂದರೆ, ಆ ಕ್ರೈಸ್ತರಿಗೆ ಏನು ಸಂಭವಿಸಿತೊ ಅದು ಯೆಶಾಯನ ಪ್ರವಾದನೆಯ ಮಹಾ ನೆರವೇರಿಕೆಯಾಗಿದೆ.

ಆಧುನಿಕ ದಿನಗಳ ಬಂಧಿವಾಸ ಮತ್ತು ಬಿಡುಗಡೆ

16. ಇಸವಿ 1914ರಲ್ಲಿ ಯೇಸುವಿನ ಸಿಂಹಾಸನಾರೋಹಣದ ನಂತರ ಯಾವ ಸಂಕಟವು ಬಂತು?

16 ಇಸವಿ 1914ರಲ್ಲಾದ ಯೇಸುವಿನ ಸಿಂಹಾಸನಾರೋಹಣವು, ಅಭೂತಪೂರ್ವ ಲೋಕ ಸಂಕಟದಿಂದ ಗುರುತಿಸಲ್ಪಟ್ಟಿತು. ಏಕೆ? ಏಕೆಂದರೆ, ಯೇಸು ಅರಸನಾದಾಗ, ಅವನು ಸೈತಾನನನ್ನೂ ಇತರ ದುಷ್ಟಾತ್ಮ ಜೀವಿಗಳನ್ನೂ ಸ್ವರ್ಗದಿಂದ ಕೆಳಗೆ ದೊಬ್ಬಿದನು. ಹೀಗೆ ಭೂಮಿಗೆ ನಿರ್ಬಂಧಿಸಲ್ಪಟ್ಟ ಸೈತಾನನು, ಇಲ್ಲಿ ಉಳಿದಿರುವ ಪವಿತ್ರ ಜನರ ಮೇಲೆ, ಅಂದರೆ ಅಭಿಷಿಕ್ತ ಕ್ರೈಸ್ತರಲ್ಲಿ ಉಳಿಕೆಯವರ ಮೇಲೆ ಯುದ್ಧ ಮಾಡಲಾರಂಭಿಸಿದನು. (ಪ್ರಕಟನೆ 12:​7-12, 17) 1918ರಲ್ಲಿ ಬಹಿರಂಗವಾಗಿ ಸಾರುವ ಕೆಲಸವು ಕಾರ್ಯತಃ ನಿಂತುಹೋಗಿ, ವಾಚ್‌ ಟವರ್‌ ಸೊಸೈಟಿಯ ಜವಾಬ್ದಾರಿಯುತ ಅಧಿಕಾರಿಗಳು ರಾಜ್ಯದ್ರೋಹದ ಸುಳ್ಳು ಆರೋಪಗಳ ಮೇಲೆ ಬಂಧಿಸಲ್ಪಟ್ಟಾಗ ಇದು ಪರಮಾವಧಿಗೇರಿತು. ಈ ರೀತಿಯಲ್ಲಿ ಯೆಹೋವನ ಆಧುನಿಕ ದಿನಗಳ ಸೇವಕರು, ಪುರಾತನ ಕಾಲದ ಯೆಹೂದ್ಯರು ಶಾರೀರಿಕ ಬಂಧಿವಾಸಕ್ಕೊಳಗಾದಂತೆಯೇ ಆತ್ಮಿಕ ಬಂಧಿವಾಸಕ್ಕೊಳಗಾದರು. ಅವರಿಗೆ ಮಹಾ ಕಳಂಕವು ಅಂಟಿಕೊಂಡಿತು.

17. ಅಭಿಷಿಕ್ತರ ಸ್ಥಿತಿಗತಿಯು 1919ರಲ್ಲಿ ಹೇಗೆ ಬದಲಾಯಿತು, ಮತ್ತು ಅವರನ್ನು ಆಗ ಹೇಗೆ ಬಲಪಡಿಸಲಾಯಿತು?

17 ಆದರೆ ದೇವರ ಅಭಿಷಿಕ್ತ ಸೇವಕರ ಬಂಧನದ ಸ್ಥಿತಿ ಹೆಚ್ಚು ಕಾಲ ಬಾಳಲಿಲ್ಲ. 1919ರ ಮಾರ್ಚ್‌ 26ರಂದು, ಬಂಧಿತ ಅಧಿಕಾರಿಗಳನ್ನು ಬಿಡುಗಡೆಮಾಡಿ, ಅನಂತರ ಅವರ ಮೇಲಿದ್ದ ಎಲ್ಲ ಆರೋಪಗಳನ್ನು ರದ್ದುಮಾಡಲಾಯಿತು. ಯೆಹೋವನು ತನ್ನ ವಿಮೋಚಿತ ಜನರ ಮೇಲೆ ಪವಿತ್ರಾತ್ಮವನ್ನು ಸುರಿಸಿ, ಮುಂದಿದ್ದ ಕೆಲಸಕ್ಕಾಗಿ ಅವರನ್ನು ಬಲಗೊಳಿಸಿದನು. ಅವರು ಆನಂದದಿಂದ ‘ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಿರಿ’ ಎಂಬ ಆಮಂತ್ರಣಕ್ಕೆ ಓಗೊಟ್ಟರು. (ಪ್ರಕಟನೆ 22:17) ಅವರು “ದ್ರಾಕ್ಷಾರಸವನ್ನೂ ಹಾಲನ್ನೂ ಹಣಕೊಡದೆ ಕ್ರಯವಿಲ್ಲದೆ” ಕೊಂಡುಕೊಂಡು, ಮುಂದೆ ಸಂಭವಿಸಲಿಕ್ಕಿದ್ದ ಆದರೆ ಅಭಿಷಿಕ್ತ ಉಳಿಕೆಯವರು ಮುನ್ನೋಡದೆ ಇದ್ದ ಅದ್ಭುತಕರವಾದ ವಿಸ್ತರಣೆಯ ಕಾರ್ಯಕ್ಕೆ ಆತ್ಮಿಕವಾಗಿ ಬಲಗೊಳಿಸಲ್ಪಟ್ಟರು.

ಒಂದು ಮಹಾ ಸಮೂಹವು ದೇವರ ಅಭಿಷಿಕ್ತರ ಬಳಿಗೆ ಓಡಿಬರುತ್ತದೆ

18. ಯೇಸು ಕ್ರಿಸ್ತನ ಶಿಷ್ಯರ ಮಧ್ಯೆ ಯಾವ ಎರಡು ಗುಂಪುಗಳು ಇವೆ, ಮತ್ತು ಅವು ಇಂದು ಏನಾಗುತ್ತವೆ?

18 ಯೇಸುವಿನ ಶಿಷ್ಯರಿಗೆ ಎರಡು ನಿರೀಕ್ಷೆಗಳಲ್ಲಿ ಯಾವುದಾದರೊಂದು ಇರುತ್ತದೆ. ಮೊದಲನೆಯದಾಗಿ, 1,44,000 ಮಂದಿಯಿರುವ ಒಂದು “ಚಿಕ್ಕ ಹಿಂಡು” ಒಟ್ಟುಗೂಡಿಸಲ್ಪಡುತ್ತದೆ. ಇವರು ಯೆಹೂದ್ಯ ಮತ್ತು ಯೆಹೂದ್ಯೇತರ ಹಿನ್ನೆಲೆಯಿಂದ ಬಂದಿರುವ ಅಭಿಷಿಕ್ತ ಕ್ರೈಸ್ತರು. ಇವರು ‘ದೇವರ ಇಸ್ರಾಯೇಲ್‌’ ಆಗಿದ್ದು, ಯೇಸುವಿನ ಸ್ವರ್ಗೀಯ ರಾಜ್ಯದಲ್ಲಿ ಅವನೊಂದಿಗೆ ಆಳುವ ನಿರೀಕ್ಷೆಯಿರುವವರು. (ಲೂಕ 12:32; ಗಲಾತ್ಯ 6:16; ಪ್ರಕಟನೆ 14:⁠1) ಎರಡನೆಯದಾಗಿ, ಕಡೇ ದಿವಸಗಳಲ್ಲಿ “ಬೇರೆ ಕುರಿಗಳ” ಒಂದು “ಮಹಾ ಸಮೂಹವು” ಪ್ರತ್ಯಕ್ಷವಾಗಿದೆ. ಇವರಿಗೆ ಪರದೈಸ ಭೂಮಿಯೊಂದರಲ್ಲಿ ಜೀವಿಸುವ ನಿರೀಕ್ಷೆಯಿದೆ. ಮಹಾ ಸಂಕಟವು ಆರಂಭವಾಗುವ ಮೊದಲು, ಯಾವುದರ ಸಂಖ್ಯೆಯನ್ನು ಮುಂದಾಗಿಯೇ ನಿಗದಿಪಡಿಸಿಲ್ಲವೊ ಆ ಮಹಾ ಸಮೂಹವು ಚಿಕ್ಕ ಹಿಂಡಿನೊಂದಿಗೆ ಸೇವೆಮಾಡುತ್ತದೆ, ಮತ್ತು ಈ ಎರಡೂ ಗುಂಪುಗಳು “ಒಬ್ಬನೇ ಕುರುಬ”ನ ಕೆಳಗೆ “ಒಂದೇ ಹಿಂಡು” ಆಗಿರುವವು.​—⁠ಪ್ರಕಟನೆ 7:​9, 10; ಯೋಹಾನ 10:⁠16.

19. ದೇವರ ಇಸ್ರಾಯೇಲಿಗೆ ಈ ಮೊದಲು ಪರಿಚಯವಿಲ್ಲದಿದ್ದ “ಜನಾಂಗ”ವು ಆ ಆತ್ಮಿಕ ಜನಾಂಗದ ಕರೆಗೆ ಓಗೊಟ್ಟಿರುವುದು ಹೇಗೆ?

19 ಈ ಮಹಾ ಸಮೂಹದ ಒಟ್ಟುಗೂಡಿಸುವಿಕೆಯನ್ನು, ಯೆಶಾಯನ ಪ್ರವಾದನೆಯ ಈ ಕೆಳಗಿನ ಮಾತುಗಳಿಂದ ಗ್ರಹಿಸಿಕೊಳ್ಳಸಾಧ್ಯವಿದೆ: “ನಿನಗೆ ಗೊತ್ತಿಲ್ಲದ ಜನಾಂಗವನ್ನು ನಿನ್ನ ಅಧೀನಕ್ಕೆ ಕರೆಯುವಿ, ಇಸ್ರಾಯೇಲಿನ ಸದಮಲಸ್ವಾಮಿ ಎನಿಸಿಕೊಳ್ಳುವ ನಿನ್ನ ದೇವರಾದ ಯೆಹೋವನು ನಿನಗೆ ವೈಭವಕೊಟ್ಟಿರುವದನ್ನು ನೋಡಿ ನಿನ್ನನ್ನು ತಿಳಿಯದ ಜನಾಂಗವು ನಿನ್ನ ಆಶ್ರಯಕ್ಕೆ ಓಡಿಬರುವದು.” (ಯೆಶಾಯ 55:5) ಅಭಿಷಿಕ್ತ ಉಳಿಕೆಯವರು ಆತ್ಮಿಕ ಬಂಧಿವಾಸದಿಂದ ಬಿಡುಗಡೆಯಾದ ನಂತರದ ವರುಷಗಳಲ್ಲಿ, ತಾವು ಅರ್ಮಗೆದೋನಿಗೆ ಮುಂಚೆ ಯೆಹೋವನ ಆರಾಧನೆಗೆ ಒಂದು ದೊಡ್ಡ “ಜನಾಂಗ”ವನ್ನು ಕರೆಯಲು ಉಪಯೋಗಿಸಲ್ಪಡುವೆವೆಂಬ ವಿಷಯವು ಆರಂಭದಲ್ಲಿ ಅವರಿಗೆ ಅರ್ಥವಾಗಲಿಲ್ಲ. ಆದರೆ ಸಮಯವು ದಾಟಿದಂತೆ, ಸ್ವರ್ಗೀಯ ನಿರೀಕ್ಷೆ ಇಲ್ಲದಿದ್ದ ಅನೇಕ ಪ್ರಾಮಾಣಿಕ ಹೃದಯದ ಜನರು ಅಭಿಷಿಕ್ತರೊಂದಿಗೆ ಜೊತೆಗೂಡಿ, ಅಭಿಷಿಕ್ತರಿಗಿದ್ದಷ್ಟೇ ಹುರುಪಿನಿಂದ ಯೆಹೋವನನ್ನು ಸೇವಿಸತೊಡಗಿದರು. ಈ ಹೊಸಬರು, ದೇವಜನರ ಅಂದಗೊಳಿಸಲ್ಪಟ್ಟಿರುವ ಸ್ಥಿತಿಯನ್ನು ಗಮನಿಸಿ, ಯೆಹೋವನು ಅವರೊಂದಿಗೆ ಇದ್ದಾನೆಂಬುದನ್ನು ಗುರುತಿಸಿದರು. (ಜೆಕರ್ಯ 8:23) ಅಭಿಷಿಕ್ತರು 1930ನೆಯ ದಶಕದಲ್ಲಿ ತಮ್ಮ ಮಧ್ಯೆ ಅಸಂಖ್ಯಾತವಾಗಿ ಬೆಳೆಯುತ್ತಿದ್ದ ಈ ಗುಂಪಿನ ನಿಜ ಗುರುತನ್ನು ತಿಳಿದುಕೊಂಡರು. ತಮ್ಮ ಮುಂದೆ ಇನ್ನೂ ದೊಡ್ಡದಾದ ಒಟ್ಟುಗೂಡಿಸುವಿಕೆಯಿದೆ ಎಂಬುದನ್ನು ಅವರು ಆಗ ಗ್ರಹಿಸಿದರು. ದೇವರ ಒಡಂಬಡಿಕೆಯ ಜನರೊಂದಿಗೆ ಜೊತೆಗೂಡಲು ಮಹಾ ಸಮೂಹವು ಸಕಾರಣದಿಂದಲೇ ಓಡಿಬರುತ್ತಿತ್ತು.

20. (ಎ) ನಮ್ಮ ದಿನಗಳಲ್ಲಿ ‘ಯೆಹೋವನನ್ನು ಆಶ್ರಯಿಸುವುದು’ ತುರ್ತಿನದ್ದಾಗಿದೆಯೇಕೆ, ಮತ್ತು ಅದನ್ನು ಹೇಗೆ ಮಾಡಲಾಗುತ್ತದೆ? (ಬಿ) ತನ್ನನ್ನು ಆಶ್ರಯಿಸುವವರಿಗೆ ಯೆಹೋವನು ಹೇಗೆ ಪ್ರತಿಕ್ರಿಯಿಸುವನು?

20 ಯೆಶಾಯನ ದಿನಗಳಲ್ಲಿ ಈ ಕರೆಯು ಕೊಡಲ್ಪಟ್ಟಿತು: “ಯೆಹೋವನು ಸಿಕ್ಕುವ ಕಾಲದಲ್ಲಿ ಆತನನ್ನು ಆಶ್ರಯಿಸಿರಿ, ಆತನು ಸಮೀಪದಲ್ಲಿರುವಾಗ ಆತನಿಗೆ ಬಿನ್ನಹಮಾಡಿರಿ.” (ಯೆಶಾಯ 55:6) ನಮ್ಮ ದಿನಗಳಲ್ಲಿ ದೇವರ ಇಸ್ರಾಯೇಲಿನ ಜನರಿಗೆ ಮತ್ತು ಬೆಳೆಯುತ್ತಿರುವ ಮಹಾ ಸಮೂಹಕ್ಕೆ ಈ ಮಾತುಗಳು ಯಥೋಚಿತವಾಗಿವೆ. ಯೆಹೋವನ ಆಶೀರ್ವಾದವು ಷರತ್ತುರಹಿತವಾದದ್ದೂ ಅಲ್ಲ, ಮತ್ತು ಆತನ ಆಮಂತ್ರಣವು ಸದಾಕಾಲಕ್ಕೆ ಮುಂದುವರಿಯುವುದೂ ಇಲ್ಲ. ದೇವರ ಅನುಗ್ರಹವನ್ನು ಪಡೆದುಕೊಳ್ಳಲು ಪ್ರಯತ್ನಿಸುವ ಸಮಯವು ಇದೇ. ಯೆಹೋವನ ತೀರ್ಪಿನ ನೇಮಿತ ಸಮಯ ಬರುವಾಗ, ಕಾಲವು ಮಿಂಚಿಹೋಗಿರುವುದು. ಆದಕಾರಣ ಯೆಶಾಯನು ಹೇಳುವುದು: “ದುಷ್ಟನು ತನ್ನ ದುರ್ಮಾರ್ಗವನ್ನು ಬಿಡಲಿ, ಕೆಡುಕನು ತನ್ನ ದುರಾಲೋಚನೆಗಳನ್ನು ತ್ಯಜಿಸಲಿ; ಯೆಹೋವನ ಕಡೆಗೆ ತಿರುಗಿಕೊಂಡು ಬರಲಿ, ಆತನು ಅವನನ್ನು ಕರುಣಿಸುವನು; ನಮ್ಮ ದೇವರನ್ನು ಆಶ್ರಯಿಸಲಿ; ಆತನು ಮಹಾಕೃಪೆಯಿಂದ ಕ್ಷಮಿಸುವನು.”​—ಯೆಶಾಯ 55:⁠7.

21. ತಮ್ಮ ಪೂರ್ವಜರು ಮಾಡಿದ್ದ ಘೋಷಣೆಗೆ ಇಸ್ರಾಯೇಲ್‌ ಜನಾಂಗವು ಹೇಗೆ ಅಪನಂಬಿಗಸ್ತವಾಗಿ ಪರಿಣಮಿಸಿದೆ?

21 “ಯೆಹೋವನ ಕಡೆಗೆ ತಿರುಗಿಕೊಂಡು ಬರಲಿ” ಎಂಬ ಪದಗಳು, ಪಶ್ಚಾತ್ತಾಪಪಡುವ ಅಗತ್ಯವಿರುವವರಿಗೆ ಇದಕ್ಕಿಂತ ಮೊದಲು ದೇವರೊಂದಿಗೆ ಒಂದು ಸಂಬಂಧವಿತ್ತು ಎಂಬುದನ್ನು ಸೂಚಿಸುತ್ತವೆ. ಈ ಮಾತುಗಳು, ಯೆಶಾಯನ ಪ್ರವಾದನೆಯ ಈ ಭಾಗದ ಅನೇಕ ಅಂಶಗಳು, ಬಾಬೆಲಿನಲ್ಲಿದ್ದ ಯೆಹೂದಿ ಬಂದಿಗಳಿಗೆ ಪ್ರಥಮವಾಗಿ ಅನ್ವಯಿಸಿದವೆಂಬುದನ್ನು ನಮಗೆ ಜ್ಞಾಪಕಹುಟ್ಟಿಸುತ್ತವೆ. ಈ ಬಂದಿಗಳ ಪೂರ್ವಜರು ಅನೇಕ ಶತಮಾನಗಳ ಹಿಂದೆ, “ಯೆಹೋವನ ಸೇವೆಯನ್ನು ಬಿಟ್ಟು ಅನ್ಯದೇವತೆಗಳನ್ನು ಸೇವಿಸುವದು ನಮಗೆ ದೂರವಾಗಿರಲಿ” ಎಂದು ಹೇಳುವ ಮೂಲಕ ಯೆಹೋವನಿಗೆ ವಿಧೇಯರಾಗುವ ತಮ್ಮ ದೃಢನಿರ್ಧಾರವನ್ನು ಘೋಷಿಸಿದ್ದರು. (ಯೆಹೋಶುವ 24:16) ಆದರೆ ಅವರು “ದೂರವಾಗಿರಲಿ” ಎಂದು ಹೇಳಿದ ಸಂಗತಿಯೇ ಪದೇ ಪದೇ ಮಾಡಲ್ಪಟ್ಟಿತ್ತೆಂದು ಇತಿಹಾಸವು ತೋರಿಸುತ್ತದೆ! ದೇವಜನರು ಈಗ ಬಾಬೆಲಿನಲ್ಲಿ ದೇಶಭ್ರಷ್ಟರಾಗಿರಲು ಕಾರಣವು ಅವರ ಆ ನಂಬಿಕೆಯ ಕೊರತೆಯೇ ಆಗಿತ್ತು.

22. ತನ್ನ ಆಲೋಚನೆಗಳೂ ಮಾರ್ಗಗಳೂ ಮಾನವರದಕ್ಕಿಂತ ಹೆಚ್ಚು ಉನ್ನತವೆಂದು ಯೆಹೋವನು ಹೇಳುವುದೇಕೆ?

22 ಅವರು ಪಶ್ಚಾತ್ತಾಪಪಡುವಲ್ಲಿ ಏನು ಸಂಭವಿಸುವುದು? ಯೆಶಾಯನ ಮೂಲಕ ಯೆಹೋವನು ತಾನು “ಮಹಾಕೃಪೆಯಿಂದ ಕ್ಷಮಿಸು”ವೆನು ಎಂದು ವಾಗ್ದಾನಿಸುತ್ತಾನೆ. ಮತ್ತು ಅವನು ಕೂಡಿಸುವುದು: “ಯೆಹೋವನು ಹೀಗನ್ನುತ್ತಾನೆ​—⁠ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ, ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ. ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ ಅಷ್ಟು ಉನ್ನತವಾಗಿವೆ.” (ಯೆಶಾಯ 55:8, 9) ಯೆಹೋವನು ಪರಿಪೂರ್ಣನು. ಮತ್ತು ಆತನ ಆಲೋಚನೆಗಳು ಹಾಗೂ ಮಾರ್ಗಗಳು ನಿಲುಕಲಾರದಷ್ಟು ಉನ್ನತವಾಗಿವೆ. ಆತನ ಕರುಣೆಯೂ ಮಾನವರಾದ ನಾವು ಎಂದಿಗೂ ತಲಪುವ ನಿರೀಕ್ಷೆಯನ್ನೂ ಇಡಲಾರದಷ್ಟು ಎತ್ತರದಲ್ಲಿದೆ. ಇದನ್ನು ಪರಿಗಣಿಸಿರಿ: ನಾವು ಒಬ್ಬ ಜೊತೆಮಾನವನನ್ನು ಕ್ಷಮಿಸುವಾಗ, ಅದು ಒಬ್ಬ ಪಾಪಿಯು ಇನ್ನೊಬ್ಬ ಪಾಪಿಯನ್ನು ಕ್ಷಮಿಸುವ ವಿಷಯವಾಗಿದೆ. ಇಂದೊ ನಾಳೆಯೊ ಆ ಜೊತೆಮಾನವನು ನಮ್ಮನ್ನು ಕ್ಷಮಿಸಬೇಕಾಗುವ ಸಂದರ್ಭ ಬರುವುದು ಎಂಬ ಅರಿವು ನಮಗಿರುತ್ತದೆ. (ಮತ್ತಾಯ 6:12) ಆದರೆ ಯೆಹೋವನನ್ನು ಯಾರೂ ಕ್ಷಮಿಸುವ ಅಗತ್ಯವಿಲ್ಲದಿದ್ದರೂ ಆತನು “ಮಹಾಕೃಪೆಯಿಂದ ಕ್ಷಮಿಸು”ತ್ತಾನೆ! ಆತನು ನಿಜವಾಗಿಯೂ ಮಹಾ ಪ್ರೀತಿದಯೆಯ ದೇವರು. ಮತ್ತು ತನ್ನ ಕರುಣೆಯಿಂದ ಯೆಹೋವನು, ಹೃತ್ಪೂರ್ವಕವಾಗಿ ತನ್ನ ಬಳಿಗೆ ತಿರುಗುವವರಿಗೆ ಸ್ವರ್ಗದ ದ್ವಾರಗಳನ್ನು ತೆರೆದು ಆಶೀರ್ವಾದಗಳನ್ನು ಸುರಿಸುವನು.​—⁠ಮಲಾಕಿಯ 3:⁠10.

ಯೆಹೋವನ ಬಳಿಗೆ ಹಿಂದಿರುಗುವವರಿಗೆ ಆಶೀರ್ವಾದಗಳು

23. ತನ್ನ ಮಾತಿನ ನೆರವೇರಿಕೆಯ ಖಾತ್ರಿಯನ್ನು ಯೆಹೋವನು ಹೇಗೆ ಚಿತ್ರಿಸುತ್ತಾನೆ?

23 ಯೆಹೋವನು ತನ್ನ ಜನರಿಗೆ ವಾಗ್ದಾನಿಸುವುದು: “ಮಳೆಯೂ ಹಿಮವೂ ಆಕಾಶದಿಂದ ಬಿದ್ದು ಭೂಮಿಯನ್ನು ತೋಯಿಸಿ ಹಸರುಗೊಳಿಸಿ ಫಲಿಸುವಂತೆ ಮಾಡಿ ಬಿತ್ತುವವನಿಗೆ ಬೀಜವನ್ನು, ಉಣ್ಣುವವನಿಗೆ ಆಹಾರವನ್ನು ಒದಗಿಸಿದ ಹೊರತು ಹೇಗೆ ಆಕಾಶಕ್ಕೆ ಸುಮ್ಮನೆ ಹಿಂದಿರುಗುವದಿಲ್ಲವೋ ಹಾಗೆಯೇ ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.” (ಯೆಶಾಯ 55:​10, 11) ಯೆಹೋವನು ಹೇಳುವ ಪ್ರತಿಯೊಂದು ಮಾತೂ ನೆರವೇರುವುದು ನಿಶ್ಚಯ. ಆಕಾಶದಿಂದ ಬೀಳುವ ಮಳೆ ಮತ್ತು ಹಿಮವು, ಭೂಮಿಯನ್ನು ತೋಯಿಸಿ ಫಲವನ್ನು ಬೆಳೆಸುವ ತಮ್ಮ ಉದ್ದೇಶವನ್ನು ಸಾಧಿಸುವಂತೆಯೇ, ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತು ಸಂಪೂರ್ಣ ವಿಶ್ವಾಸಾರ್ಹವಾಗಿದೆ. ಆತನು ಏನನ್ನು ವಾಗ್ದಾನಿಸುತ್ತಾನೊ ಅದನ್ನು ಖಂಡಿತವಾಗಿಯೂ ನೆರವೇರಿಸುವನು.​—⁠ಅರಣ್ಯಕಾಂಡ 23:⁠19.

24, 25. ಯೆಶಾಯನ ಮೂಲಕ ಕೊಡಲ್ಪಟ್ಟ ಯೆಹೋವನ ಸಂದೇಶಕ್ಕೆ ಅನುಸಾರವಾಗಿ ವರ್ತಿಸುವ ಯೆಹೂದಿ ದೇಶಭ್ರಷ್ಟರಿಗೆ ಮುಂದೆ ಯಾವ ಆಶೀರ್ವಾದಗಳು ಕಾದಿವೆ?

24 ಆದಕಾರಣ, ಯೆಹೂದ್ಯರು ಯೆಶಾಯನ ಮೂಲಕ ಪ್ರವಾದನಾರೂಪವಾಗಿ ತಮಗೆ ಹೇಳಲಾಗಿರುವ ಮಾತುಗಳಿಗೆ ಕಿವಿಗೊಡುವುದಾದರೆ, ಯೆಹೋವನು ವಾಗ್ದಾನಿಸಿರುವ ರಕ್ಷಣೆಯನ್ನು ಅವರು ಖಂಡಿತವಾಗಿಯೂ ಪಡೆಯುವರು. ಇದರ ಫಲವಾಗಿ ಅವರು ಮಹಾ ಸಂತೋಷವನ್ನು ಅನುಭವಿಸುವರು. ಯೆಹೋವನು ಹೇಳುವುದು: “ನೀವು ಆನಂದಭರಿತರಾಗಿ ಹೊರಡುವಿರಿ, ಸಮಾಧಾನದಿಂದ ಮೆರವಣಿಗೆಯಾಗಿ ಬರುವಿರಿ; ಬೆಟ್ಟಗುಡ್ಡಗಳು ನಿಮ್ಮ ಮುಂದೆ ಜಯಘೋಷಮಾಡುವವು, ಅಡವಿಯ ಮರಗಳೆಲ್ಲಾ ಚಪ್ಪಾಳೆಹೊಡೆಯುವವು. ಮುಳ್ಳಿಗೆ ಬದಲಾಗಿ ತುರಾಯಿಯೂ ದತ್ತೂರಿಗೆ ಪ್ರತಿಯಾಗಿ ಸುಗಂಧವೂ ಬೆಳೆಯುವವು; ಆ ವನವು ಯೆಹೋವನಾಮಸ್ಮರಣೆಗೆ [“ಪ್ರಸಿದ್ಧವಾದ ಸಂಗತಿಯಾಗಿ,” NW] ಶಾಶ್ವತವಾದ ಗುರುತಾಗಿ ಎಂದಿಗೂ ಅಳಿಯದಿರುವದು.”​—ಯೆಶಾಯ 55:12, 13.

25 ಸಾ.ಶ.ಪೂ. 537ರಲ್ಲಿ, ಯೆಹೂದಿ ದೇಶಭ್ರಷ್ಟರು ಬಾಬೆಲನ್ನು ಬಿಟ್ಟುಹೋಗುವಾಗ ನಿಜವಾಗಿಯೂ ಹರ್ಷೋಲ್ಲಾಸಪಡುತ್ತಾರೆ. (ಕೀರ್ತನೆ 126:​1, 2) ಅವರು ಯೆರೂಸಲೇಮಿಗೆ ಹಿಂದಿರುಗಿದಾಗ, ಆ ದೇಶವು ಮುಳ್ಳಿನ ಪೊದೆಗಳಿಂದಲೂ ದತ್ತೂರಿ ಗಿಡಗಳಿಂದಲೂ ತುಂಬಿಹೋಗಿತ್ತು. ಅನೇಕ ದಶಕಗಳ ತನಕ ಆ ದೇಶವು ಹಾಳುಬಿದ್ದಿತ್ತೆಂಬುದು ನೆನಪಿರಲಿ. ಆದರೆ ಹಿಂದಿರುಗಿ ಬಂದಿರುವ ದೇವಜನರು ಈಗ ಒಂದು ಸುಂದರವಾದ ಪರಿವರ್ತನೆಯನ್ನು ಮಾಡಬಲ್ಲರು! ಮುಳ್ಳು ಪೊದೆಗಳು ಮತ್ತು ದತ್ತೂರಿಗೆ ಬದಲಾಗಿ ತುರಾಯಿ ಮತ್ತು ಸುಗಂಧದ ಜಾತಿಯ ಎತ್ತರವಾದ ಮರಗಳು ಬರುತ್ತವೆ. ಯೆಹೋವನ ಜನರು ‘ಜಯಘೋಷದಿಂದ’ ಆತನ ಸೇವೆಮಾಡುವಾಗ, ಆತನ ಆಶೀರ್ವಾದವು ತತ್‌ಕ್ಷಣ ವ್ಯಕ್ತವಾಗುತ್ತದೆ. ಅದು ಆ ಪ್ರದೇಶವೇ ಹರ್ಷಿಸುತ್ತದೊ ಎಂಬಂತಿದೆ.

26. ದೇವಜನರು ಇಂದು ಯಾವ ಆಶೀರ್ವದಿತ ಸ್ಥಿತಿಯನ್ನು ಅನುಭವಿಸುತ್ತಾರೆ?

26 ಅಭಿಷಿಕ್ತ ಕ್ರೈಸ್ತರಲ್ಲಿ ಉಳಿಕೆಯವರಿಗೆ 1919ರಲ್ಲಿ ಆತ್ಮಿಕ ಬಂಧನದಿಂದ ಬಿಡುಗಡೆಯಾಯಿತು. (ಯೆಶಾಯ 66:⁠8) ಈಗ ಅವರು ಬೇರೆ ಕುರಿಗಳ ಮಹಾ ಸಮೂಹದೊಂದಿಗೆ ದೇವರನ್ನು ಹರ್ಷದಿಂದ ಆತ್ಮಿಕ ಪರದೈಸಿನಲ್ಲಿ ಸೇವಿಸುತ್ತಿದ್ದಾರೆ. ಬಾಬೆಲಿನ ಪ್ರಭಾವದ ಯಾವ ಮಾಲಿನ್ಯವೂ ಇಲ್ಲದವರಾಗಿ, ಯಾವುದು ಯೆಹೋವನಿಗೆ “ಪ್ರಸಿದ್ಧವಾದ ಸಂಗತಿ”ಯಾಗಿರುವುದೊ ಅಂತಹ ಒಂದು ಅನುಗ್ರಹಭರಿತ ಸ್ಥಿತಿಯನ್ನು ಅವರು ಅನುಭವಿಸುತ್ತಾರೆ. ಅವರ ಆತ್ಮಿಕ ಸಮೃದ್ಧಿಯು ಆತನ ನಾಮವನ್ನು ಮಹಿಮೆಪಡಿಸಿ, ಸತ್ಯ ಪ್ರವಾದನೆಯ ದೇವರೆಂದು ಆತನನ್ನು ಘನತೆಗೇರಿಸುತ್ತದೆ. ಯೆಹೋವನು ಅವರಿಗಾಗಿ ಏನನ್ನು ಸಾಧಿಸಿದ್ದಾನೊ ಅದು ಆತನ ದೇವತ್ವವನ್ನು ರುಜುಪಡಿಸುತ್ತದೆ, ತನ್ನ ಮಾತಿಗೆ ಆತನು ನಂಬಿಗಸ್ತನೆಂಬುದಕ್ಕೆ ಮತ್ತು ಪಶ್ಚಾತ್ತಾಪಪಡುವವರ ಕಡೆಗೆ ಆತನಿಗಿರುವ ಕರುಣೆಗೆ ರುಜುವಾತಾಗಿದೆ. “ದ್ರಾಕ್ಷಾರಸವನ್ನೂ ಹಾಲನ್ನೂ ಹಣಕೊಡದೆ ಕ್ರಯವಿಲ್ಲದೆ” ಕೊಳ್ಳುತ್ತಿರುವವರೆಲ್ಲರೂ ಆತನನ್ನು ಸದಾಕಾಲ ಸೇವಿಸುವುದರಲ್ಲಿ ಸಂತೋಷಿಸಲಿ!

[ಪಾದಟಿಪ್ಪಣಿಗಳು]

a ಅನೇಕ ಯೆಹೂದಿ ಹೆಸರುಗಳು ಪುರಾತನ ಬಾಬೆಲಿನ ವ್ಯಾಪಾರ ದಾಖಲೆಗಳಲ್ಲಿ ಕಂಡುಬಂದಿವೆ.

b ಯೇಸು ಶಿಷ್ಯರನ್ನಾಗಿ ಮಾಡುವ ಕೆಲಸದ ಮೇಲ್ವಿಚಾರಣೆಯನ್ನು ವಹಿಸುತ್ತ ಮುಂದವರಿಯುತ್ತಾನೆ. (ಪ್ರಕಟನೆ 14:​14-16) ಇಂದು, ಕ್ರೈಸ್ತ ಪುರುಷರೂ ಸ್ತ್ರೀಯರೂ ಯೇಸುವನ್ನು ಸಭೆಯ ಶಿರಸ್ಸಾಗಿ ಪರಿಗಣಿಸುತ್ತಾರೆ. (1 ಕೊರಿಂಥ 11:⁠3) ಮತ್ತು ದೇವರ ಕ್ಲುಪ್ತಕಾಲದಲ್ಲಿ ಯೇಸು ಇನ್ನೊಂದು ವಿಧದಲ್ಲೂ ‘ನಾಯಕನೂ ಅಧಿಪತಿಯೂ’ ಆಗಿ ವರ್ತಿಸುವನು. ಅವನು ಅರ್ಮಗೆದೋನ್‌ ಯುದ್ಧದಲ್ಲಿ ದೇವರ ಶತ್ರುಗಳ ವಿರುದ್ಧ ಒಂದು ನಿರ್ಣಾಯಕ ಕದನವನ್ನು ನಿರ್ದೇಶಿಸುವನು.​—⁠ಪ್ರಕಟನೆ 19:​19-21.

[ಅಧ್ಯಯನ ಪ್ರಶ್ನೆಗಳು]

[ಪುಟ 234ರಲ್ಲಿರುವ ಚಿತ್ರ]

ಆತ್ಮಿಕ ಬಾಯಾರಿಕೆಯಿರುವ ಯೆಹೂದ್ಯರನ್ನು “ನೀರಿನ ಬಳಿಗೆ” ಬರುವಂತೆ ಮತ್ತು “ದ್ರಾಕ್ಷಾರಸವನ್ನೂ ಹಾಲನ್ನೂ” ಕೊಳ್ಳುವಂತೆ ಆಮಂತ್ರಿಸಲಾಗುತ್ತದೆ

[ಪುಟ 239ರಲ್ಲಿರುವ ಚಿತ್ರ]

ಯೇಸು ಜನಾಂಗಗಳಿಗೆ ತಾನು ‘ನಾಯಕನೂ ಅಧಿಪತಿಯೂ’ ಆಗಿದ್ದೇನೆಂದು ರುಜುಪಡಿಸಿದನು

[ಪುಟ 244, 245ರಲ್ಲಿರುವ ಚಿತ್ರಗಳು]

“ದುಷ್ಟನು ತನ್ನ ದುರ್ಮಾರ್ಗವನ್ನು ಬಿಡಲಿ”