ಅಶ್ಶೂರಕ್ಕೆ ಭಯಪಡಬೇಡಿರಿ
ಅಧ್ಯಾಯ ಹನ್ನೆರಡು
ಅಶ್ಶೂರಕ್ಕೆ ಭಯಪಡಬೇಡಿರಿ
1, 2. (ಎ) ಯೋನನು ಅಶ್ಶೂರ್ಯರಿಗೆ ಸಾರುವ ನೇಮಕವನ್ನು ಪಡೆದುಕೊಂಡಿದ್ದರೂ, ಅದನ್ನು ಸ್ವೀಕರಿಸಲು ಹಿಂಜರಿದದ್ದು ಮಾನವ ದೃಷ್ಟಿಯಿಂದ ಸರಿಯಾದದ್ದೆಂದು ಏಕೆ ತೋರಿತು? (ಬಿ) ನಿನೆವೆಯ ಜನರು ಯೋನನ ಸಂದೇಶಕ್ಕೆ ಹೇಗೆ ಪ್ರತಿಕ್ರಿಯಿಸಿದರು?
ಸಾಮಾನ್ಯ ಶಕ ಪೂರ್ವ ಒಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ, ಅಮಿತ್ತೈಯ ಮಗನೂ ಹೀಬ್ರು ಪ್ರವಾದಿಯೂ ಆದ ಯೋನನು ಅಶ್ಶೂರ ಸಾಮ್ರಾಜ್ಯದ ರಾಜಧಾನಿ ನಗರವಾದ ನಿನೆವೆಯೊಳಗೆ ಕಾಲಿಡುವ ಸಾಹಸಮಾಡಿದನು. ಅಲ್ಲಿ ಅವನು ಒಂದು ಗಂಭೀರವಾದ ಸಂದೇಶವನ್ನು ಸಾರಬೇಕಿತ್ತು. ಯೆಹೋವನು ಅವನಿಗೆ ಹೇಳಿದ್ದು: “ನೀನೆದ್ದು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ಗಟ್ಟಿಯಾಗಿ ಕೂಗುತ್ತಾ ಅದನ್ನು ಖಂಡಿಸು; ಅದರ ನಿವಾಸಿಗಳ ದುಷ್ಟತನವು ನನ್ನ ಸನ್ನಿಧಿಗೆ ಮುಟ್ಟಿದೆ.”—ಯೋನ 1:2, 3.
2 ತನ್ನ ನೇಮಕವನ್ನು ಮೊದಲಾಗಿ ಪಡೆದುಕೊಂಡಾಗ ಯೋನನು, ವಿರುದ್ಧ ದಿಕ್ಕಿನಲ್ಲಿರುವ ತಾರ್ಷೀಷಿಗೆ ಓಡಿಹೋದನು. ಮಾನವ ದೃಷ್ಟಿಕೋನದಿಂದ ಯೋಚಿಸಿದರೆ, ನಿನೆವೆಗೆ ಹೋಗದಿರಲು ಯೋನನಿಗೆ ಕಾರಣವಿತ್ತು. ಏಕೆಂದರೆ ಅಶ್ಶೂರರು ಕ್ರೂರ ಜನರಾಗಿದ್ದರು. ಒಬ್ಬ ಅಶ್ಶೂರ ಸಾಮ್ರಾಟನು ತನ್ನ ವೈರಿಗಳೊಂದಿಗೆ ಹೇಗೆ ನಡೆದುಕೊಂಡನೆಂಬುದನ್ನು ಗಮನಿಸಿರಿ: “ನಾನು ಅಧಿಕಾರಿಗಳ ಕಾಲುಗಳನ್ನು ಕತ್ತರಿಸಿಬಿಟ್ಟೆ . . . ಸೆರೆಯಾಳುಗಳಲ್ಲಿ ಅನೇಕರನ್ನು ಸುಟ್ಟು, ಅನೇಕರನ್ನು ಜೀವಂತವಾಗಿ ಉಳಿಸಿದೆ. ಅವರಲ್ಲಿ ಕೆಲವರ ಕೈಗಳನ್ನು ಮತ್ತು ಬೆರಳುಗಳನ್ನು ಕತ್ತರಿಸಿ, ಇತರರ ಮೂಗುಗಳನ್ನು ತುಂಡರಿಸಿಬಿಟ್ಟೆ.” ಹಾಗಿದ್ದರೂ, ಯೋನನು ಕೊನೆಗೆ ಅಲ್ಲಿಗೆ ಹೋಗಿ ಯೆಹೋವನ ಸಂದೇಶವನ್ನು ಸಾರಿದಾಗ, ನಿನೆವೆಯ ಜನರು ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟರು. ಆಗ ಯೆಹೋವನು ಆ ನಗರವನ್ನು ನಾಶಮಾಡದೆ ಉಳಿಸಿದನು.—ಯೋನ 3:3-10; ಮತ್ತಾಯ 12:41.
ಯೆಹೋವನು ‘ಕೋಲನ್ನು’ ತೆಗೆದುಕೊಳ್ಳುತ್ತಾನೆ
3. ಯೆಹೋವನ ಪ್ರವಾದಿಗಳು ನೀಡಿದ ಎಚ್ಚರಿಕೆಗಳಿಗೆ ಇಸ್ರಾಯೇಲ್ಯರ ಮತ್ತು ನಿನೆವೆಯ ಜನರ ಪ್ರತಿಕ್ರಿಯೆಯು ಹೇಗೆ ಭಿನ್ನಭಿನ್ನವಾಗಿದೆ?
3 ಯೋನನು ಇಸ್ರಾಯೇಲ್ಯರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದಾಗ, ಅವರೂ ಒಳ್ಳೆಯ ಪ್ರತಿಕ್ರಿಯೆಯನ್ನು ತೋರಿಸಿದರೊ? (2 ಅರಸುಗಳು 14:25) ಇಲ್ಲ. ಅವರು ಶುದ್ಧಾರಾಧನೆಯಿಂದ ದೂರ ಸರಿದರು. ಮತ್ತು ‘ಆಕಾಶಸೈನ್ಯ ಬಾಳ್‌ದೇವತೆಗಳನ್ನು ಪೂಜಿಸಿದರು.’ ಅಷ್ಟೇ ಅಲ್ಲ, “ತಮ್ಮ ಗಂಡು ಹೆಣ್ಣು ಮಕ್ಕಳನ್ನು ಆಹುತಿಕೊಟ್ಟರು; ಯೆಹೋವನ ದೃಷ್ಟಿಯಲ್ಲಿ ಕೆಟ್ಟವುಗಳಾಗಿರುವ ಕಣಿಹೇಳುವದು, ಯಂತ್ರಮಂತ್ರಗಳನ್ನು ಮಾಡುವದು ಮೊದಲಾದ ದುಷ್ಕೃತ್ಯಗಳಿಗೆ ತಮ್ಮನ್ನು ಮಾರಿಬಿಟ್ಟು ಆತನಿಗೆ ಕೋಪವನ್ನೆಬ್ಬಿಸಿದರು.” (2 ಅರಸುಗಳು 17:16, 17) ಇಸ್ರಾಯೇಲ್ಯರನ್ನು ಎಚ್ಚರಿಸಲು ಯೆಹೋವನು ತನ್ನ ಪ್ರವಾದಿಗಳನ್ನು ಕಳುಹಿಸಿದಾಗ, ಅವರು ನಿನೆವೆಯ ಜನರಂತೆ ಪ್ರತಿಕ್ರಿಯಿಸುವುದಿಲ್ಲ. ಆದುದರಿಂದ, ಬಲವಾದ ಕ್ರಮಗಳನ್ನು ಕೈಗೊಳ್ಳಲು ಯೆಹೋವನು ನಿರ್ಧರಿಸುತ್ತಾನೆ.
4, 5. (ಎ) ಯೆಹೋವನು ಅಶ್ಶೂರವನ್ನು ಒಂದು ‘ಕೋಲಿನಂತೆ’ ಹೇಗೆ ಉಪಯೋಗಿಸುವನು? (ಬಿ) ಸಮಾರ್ಯ ಯಾವಾಗ ನಾಶವಾಗುತ್ತದೆ?
4 ಯೋನನು ನಿನೆವೆಗೆ ಭೇಟಿಯಿತ್ತ ಸ್ವಲ್ಪ ಸಮಯದ ವರೆಗೆ, ಅಶ್ಶೂರರ ಆಕ್ರಮಣ ಪ್ರವೃತ್ತಿಯು ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ. a ಆದರೆ, ಸಾ.ಶ.ಪೂ. ಎಂಟನೆಯ ಶತಮಾನದ ಆರಂಭದಲ್ಲಿ, ಅಶ್ಶೂರವು ಪುನಃ ಒಮ್ಮೆ ತನ್ನನ್ನು ಒಂದು ಮಿಲಿಟರಿ ಶಕ್ತಿಯಾಗಿ ಸಾರಿಕೊಳ್ಳುತ್ತದೆ. ಮತ್ತು ಈಗ, ಯೆಹೋವನು ಅದನ್ನು ವಿಸ್ಮಯಕರವಾದ ರೀತಿಯಲ್ಲಿ ಉಪಯೋಗಿಸುತ್ತಾನೆ. ಇಸ್ರಾಯೇಲಿನ ಉತ್ತರ ರಾಜ್ಯಕ್ಕೆ ಪ್ರವಾದಿ ಯೆಶಾಯನು ಯೆಹೋವನಿಂದ ಬಂದ ಎಚ್ಚರಿಕೆಯನ್ನು ನೀಡುತ್ತಾನೆ: “ಆಹಾ, ಅಶ್ಶೂರವೇ, ನೀನು ನನ್ನ ಕೋಪವೆಂಬ ಕೋಲು, ನಿನ್ನ ಕೈಯಲ್ಲಿರುವ ದೊಣ್ಣೆಯು ನನ್ನ ರೋಷವೇ! ನಾನು ಅದನ್ನು ಭ್ರಷ್ಟ ಜನರಿಗೆ ವಿರುದ್ಧವಾಗಿ ಕಳುಹಿಸಿ ನನ್ನ ಕೋಪಕ್ಕೆ ಗುರಿಯಾದ [ನನ್ನ] ಪ್ರಜೆಯನ್ನು ಸೂರೆಮಾಡಿ ಕೊಳ್ಳೆಹೊಡೆದು ಬೀದಿಯ ಕೆಸರನ್ನೋ ಎಂಬಂತೆ ತುಳಿದುಹಾಕಬೇಕೆಂದು ಅದಕ್ಕೆ ಅಪ್ಪಣೆ ಕೊಡುವೆನು.”—ಯೆಶಾಯ 10:5, 6.
5 ಇಸ್ರಾಯೇಲ್ಯರಿಗೆ ಎಂತಹ ಅವಮಾನ! ದೇವರು ಒಂದು ವಿಧರ್ಮಿ ಜನಾಂಗವಾದ ಅಶ್ಶೂರವನ್ನು ‘ಕೋಲಿನಂತೆ’ ಉಪಯೋಗಿಸಿ, ಅವರನ್ನು ದಂಡಿಸುತ್ತಾನೆ. ಸಾ.ಶ.ಪೂ. 742ರಲ್ಲಿ ಅಶ್ಶೂರರ ರಾಜನಾದ Vನೆಯ ಶಲ್ಮನೆಸೆರನು, ಧರ್ಮಭ್ರಷ್ಟ ಇಸ್ರಾಯೇಲಿನ ರಾಜಧಾನಿಯಾದ ಸಮಾರ್ಯದ ಮೇಲೆ ಮುತ್ತಿಗೆ ಹಾಕಿದನು. ಸಮಾರ್ಯವು ಒಂದು ಸುರಕ್ಷಿತ ಸ್ಥಾನದಲ್ಲಿ, ಅಂದರೆ ಸುಮಾರು 90 ಮೀಟರುಗಳ ಎತ್ತರದಲ್ಲಿ ಒಂದು ಬೆಟ್ಟದ ಮೇಲೆ ನೆಲೆಸಿದೆ. ಆದುದರಿಂದ ಅದು ಮೂರು ವರ್ಷಗಳ ಕಾಲ ವೈರಿಯಿಂದ ತಪ್ಪಿಸಿಕೊಳ್ಳುತ್ತಾ ಬಂದಿದೆ. ಆದರೆ, ಯಾವ ಮಾನವ ತಂತ್ರವೂ ದೇವರ ಉದ್ದೇಶವನ್ನು ತಡೆಯಸಾಧ್ಯವಿಲ್ಲ. ಸಾ.ಶ.ಪೂ. 740ರಲ್ಲಿ, ಅಶ್ಶೂರರು ಸಮಾರ್ಯವನ್ನು ತಮ್ಮ ಕಾಲಕೆಳಗೆ ಹಾಕಿ ತುಳಿದಾಡಿಬಿಡುತ್ತಾರೆ.—2 ಅರಸುಗಳು 18:9ಬಿ, 10.
6. ಯಾವ ರೀತಿಯಲ್ಲಿ ಅಶ್ಶೂರವು ಯೆಹೋವನ ಉದ್ದೇಶವನ್ನು ಮೀರಿ ನಡೆದುಕೊಳ್ಳುತ್ತದೆ?
6 ಯೆಹೋವನು ಅಶ್ಶೂರ್ಯರನ್ನು ಉಪಯೋಗಿಸಿ ತನ್ನ ಜನರಿಗೆ ಪಾಠ ಕಲಿಸಿದರೂ, ಸ್ವತಃ ಅಶ್ಶೂರವೇ ಯೆಹೋವನನ್ನು ಅಂಗೀಕರಿಸುವುದಿಲ್ಲ. ಆದುದರಿಂದಲೇ, ಆತನು ಹೇಳುವುದು: “ಅದರ [ಅಶ್ಶೂರದ] ಅಭಿಪ್ರಾಯವೋ ಹಾಗಲ್ಲ; ಅನೇಕಾನೇಕ ಜನಾಂಗಗಳನ್ನು ತಾನೇ ಸಂಹರಿಸಿ ನಿರ್ಮೂಲಮಾಡುವೆನೆಂಬದೇ ಹೊರತು ಈ ಯೋಚನೆಯು ಅದರ ಮನಸ್ಸಿನಲ್ಲಿ ಇಲ್ಲವೇ ಇಲ್ಲ.” (ಯೆಶಾಯ 10:7) ಅಶ್ಶೂರವು ದೈವಿಕ ಹಸ್ತದಲ್ಲಿ ಕೇವಲ ಒಂದು ಸಾಧನವಾಗಿರುವಂತೆ ಯೆಹೋವನು ಉದ್ದೇಶಿಸುತ್ತಾನೆ. ಆದರೆ ಬೇರೇನನ್ನೊ ಮಾಡಲು ಈ ಅಶ್ಶೂರವು ಬಯಸುತ್ತದೆ. ಅದರ ಹೃದಯವು, ಆಗಿನ ಲೋಕವನ್ನೇ ಜಯಿಸುವ ಸಂಚುಹೂಡುತ್ತದೆ!
7. (ಎ) “ನನ್ನ ಅಧಿಪತಿಗಳೆಲ್ಲಾ ರಾಜರಲ್ಲವೇ” ಎಂಬ ವಾಕ್ಸರಣಿಯ ವಿವರಣೆ ನೀಡಿರಿ. (ಬಿ) ಇಂದು ಯೆಹೋವನನ್ನು ತ್ಯಜಿಸುವವರು ಏನನ್ನು ಗಮನಕ್ಕೆ ತಂದುಕೊಳ್ಳಬೇಕು?
7 ಅಶ್ಶೂರವು ಜಯಿಸಿದ ಅನೇಕ ಇಸ್ರಾಯೇಲ್ಯೇತರ ನಗರಗಳು, ಈ ಹಿಂದೆ ಅರಸರುಗಳಿಂದ ಆಳಲ್ಪಟ್ಟವು. ಈ ಮಾಜಿ ಅರಸರು ಈಗ ಅಶ್ಶೂರದ ರಾಜನಿಗೆ ಸಾಮಂತ ಅಧಿಪತಿಗಳಾಗಿ ಅಧೀನರಾಗಬೇಕು. ಆದುದರಿಂದಲೇ ಅದು ಜಂಬಕೊಚ್ಚುವುದು: “ನನ್ನ ಅಧಿಪತಿಗಳೆಲ್ಲಾ ರಾಜರಲ್ಲವೆ”? (ಯೆಶಾಯ 10:8) ಈ ಜನಾಂಗಗಳ ಪ್ರಧಾನ ನಗರಗಳಲ್ಲಿ ಆರಾಧಿಸಲಾಗುತ್ತಿದ್ದ ಸುಳ್ಳು ದೇವರುಗಳು, ತಮ್ಮ ಆರಾಧಕರನ್ನು ನಾಶನದಿಂದ ರಕ್ಷಿಸಲಿಲ್ಲ. ಹಾಗೆಯೇ, ಸಮಾರ್ಯದ ನಿವಾಸಿಗಳು ಆರಾಧಿಸುತ್ತಿರುವ ಬಾಳನು, ಮೋಲೆಕನು ಮತ್ತು ಬಂಗಾರದ ಬಸವನ ಮೂರ್ತಿಗಳು ಆ ನಗರವನ್ನು ರಕ್ಷಿಸಲಾರವು. ಯೆಹೋವನು ತನಗಾಗಿ ಹಸ್ತಕ್ಷೇಪ ಮಾಡುವನೆಂದು ನಿರೀಕ್ಷಿಸುವ ಹಕ್ಕೂ ಸಮಾರ್ಯಕ್ಕಿಲ್ಲ, ಏಕೆಂದರೆ ಅದು ಯೆಹೋವನನ್ನು ತೊರೆದುಬಿಟ್ಟಿದೆ. ಇಂದು ಯೆಹೋವನನ್ನು ತೊರೆದುಬಿಡುವವರು, ಸಮಾರ್ಯಕ್ಕಾದ ಗತಿಯನ್ನು ಲಕ್ಷ್ಯಕ್ಕೆ ತಂದುಕೊಳ್ಳಲಿ! ಆದಕಾರಣ, ಅಶ್ಶೂರವು ತಾನು ಜಯಿಸಿರುವ ಸಮಾರ್ಯ ಮತ್ತು ಇತರ ನಗರಗಳ ಕುರಿತು ಹೀಗೆ ಜಂಬಕೊಚ್ಚಿಕೊಳ್ಳಬಹುದಿತ್ತು: “ಕರ್ಕೆಮೀಷಿನ ಗತಿಯು ಕಲ್ನೋವಿಗೂ ಆಯಿತಲ್ಲವೆ, ಅರ್ಪದಿಗೆ ಆದ ಪಾಡು ಹಮಾತಿಗೂ ಬಂತಷ್ಟೆ, ದಮಸ್ಕದ ಅವಸ್ಥೆಯು ಸಮಾರ್ಯಕ್ಕೂ ಸಂಭವಿಸಿತಲ್ಲಾ.” (ಯೆಶಾಯ 10:9) ಅಶ್ಶೂರಕ್ಕೆ, ಈ ನಗರಗಳಲ್ಲಿ ಯಾವ ವ್ಯತ್ಯಾಸವೂ ಕಾಣುವುದಿಲ್ಲ, ಅವು ಯುದ್ಧದಲ್ಲಿ ಹೊಡೆದ ಕೊಳ್ಳೆಯಷ್ಟೇ.
8, 9. ಅಶ್ಶೂರವು ಯೆರೂಸಲೇಮನ್ನು ಜಯಿಸಲು ಯೋಜಿಸುವಾಗ ಹೇಗೆ ಮಿತಿಮೀರಿ ಹೋಗುತ್ತದೆ?
8 ಆದರೆ, ಈ ಅಶ್ಶೂರವು ಮಿತಿಮೀರಿ ಜಂಬಕೊಚ್ಚಿಕೊಳ್ಳುತ್ತದೆ. ಅದು ಹೇಳುವುದು: “ಯೆರೂಸಲೇಮಿನ ಮತ್ತು ಸಮಾರ್ಯದ ವಿಗ್ರಹಗಳಿಗಿಂತ ವಿಶೇಷ ವಿಗ್ರಹಗಳುಳ್ಳ ದೇವತೆಗಳ ವಶವಾಗಿರುವ ರಾಜ್ಯಗಳ ಮೇಲೆ ನಾನು ಕೈ ಮಾಡಿದಂತೆಯೂ ಸಮಾರ್ಯವನ್ನೂ ಅದರ ವಿಗ್ರಹಗಳನ್ನೂ ನಾನು ಕೆಡವಿಬಿಟ್ಟಹಾಗೂ ಯೆರೂಸಲೇಮನ್ನೂ ಅದರ ಬೊಂಬೆಗಳನ್ನೂ ಕೆಡವಲಾರೆನೋ?” (ಯೆಶಾಯ 10:10, 11) ಈ ಅಶ್ಶೂರವು ಈಗಾಗಲೇ ಸೋಲಿಸಿರುವ ರಾಜ್ಯಗಳಲ್ಲಿ, ಯೆರೂಸಲೇಮ್ ಇಲ್ಲವೆ ಸಮಾರ್ಯದಲ್ಲಿ ಇರುವುದಕ್ಕಿಂತಲೂ ಹೆಚ್ಚಿನ ಮೂರ್ತಿಗಳಿದ್ದವು. ಆದುದರಿಂದ, ‘ನಾನು ಸಮಾರ್ಯಕ್ಕೆ ಮಾಡಿದಂತೆಯೇ ಯೆರೂಸಲೇಮನ್ನು ನಾಶಮಾಡುವುದರಿಂದ ಯಾವುದು ನನ್ನನ್ನು ತಡೆಯುವುದು?’ ಎಂದು ಅವನು ತರ್ಕಿಸುತ್ತಾನೆ.
9 ಎಂತಹ ಜಂಬದ ದೇಶ! ಯೆರೂಸಲೇಮಿನ ಮೇಲೆ ಜಯಸಾಧಿಸಲು ಯೆಹೋವನು ಅದನ್ನು ಬಿಡಲಾರನು. ಸತ್ಯಾರಾಧನೆಯನ್ನು ಬೆಂಬಲಿಸುವ ವಿಷಯದಲ್ಲಿ ಯೆಹೂದವು ಅನೇಕ ಸಾರಿ ತಪ್ಪಿಹೋಗಿತ್ತು ನಿಜ. (2 ಅರಸುಗಳು 16:7-9; 2 ಪೂರ್ವಕಾಲವೃತ್ತಾಂತ 28:24) ಯೆಹೂದವು ತನ್ನ ಅಪನಂಬಿಗಸ್ತಿಕೆಯ ಕಾರಣ ಅಶ್ಶೂರರ ಆಕ್ರಮಣದಿಂದ ಬಹಳ ಕಷ್ಟಾನುಭವಿಸುವುದೆಂದು ಯೆಹೋವನೇ ಎಚ್ಚರಿಕೆ ನೀಡಿದ್ದನು. ಆದರೆ ಯೆರೂಸಲೇಮ್ ಬದುಕಿ ಉಳಿಯುವುದು. (ಯೆಶಾಯ 1:7, 8) ಅಶ್ಶೂರವು ಆಕ್ರಮಣಗೈಯುವಾಗ ಹಿಜ್ಕೀಯನು ಯೆರೂಸಲೇಮಿನಲ್ಲಿ ಆಳುತ್ತಿದ್ದಾನೆ. ಅವನು ತನ್ನ ತಂದೆಯಾದ ಆಹಾಜನ ಹಾಗೆ ದಂಗೆಕೋರನಾಗಿರುವುದಿಲ್ಲ. ಅವನು ತನ್ನ ಆಳ್ವಿಕೆಯ ಮೊದಲನೆಯ ತಿಂಗಳಲ್ಲೇ, ದೇವಾಲಯದ ಬಾಗಿಲುಗಳನ್ನು ತೆರೆಯಿಸಿ, ಶುದ್ಧಾರಾಧನೆಯನ್ನು ಪುನಸ್ಸ್ಥಾಪಿಸುತ್ತಾನೆ!—2 ಪೂರ್ವಕಾಲವೃತ್ತಾಂತ 29:3-5.
10. ಅಶ್ಶೂರದ ಕುರಿತು ಯೆಹೋವನು ಏನನ್ನು ವಾಗ್ದಾನಿಸುತ್ತಾನೆ?
10 ಹೀಗೆ, ಅಶ್ಶೂರವು ಯೆರೂಸಲೇಮಿನ ಮೇಲೆ ಯೋಜಿಸಿರುವ ದಾಳಿಗೆ ಯೆಹೋವನ ಸಮ್ಮತಿಯಿಲ್ಲ. ಆ ಅಹಂಕಾರಿ ಲೋಕ ಶಕ್ತಿಯಿಂದ ಲೆಕ್ಕ ಕೇಳಿಕೊಳ್ಳುವ ಆಶ್ವಾಸನೆಯನ್ನು ಯೆಹೋವನು ನೀಡುತ್ತಾನೆ: “ಆದಕಾರಣ ಕರ್ತನಾದ ನಾನು ಚೀಯೋನ್ ಪರ್ವತದಲ್ಲಿಯೂ ಯೆರೂಸಲೇಮಿನಲ್ಲಿಯೂ ನನ್ನ ಉದ್ದೇಶವನ್ನೆಲ್ಲಾ ನೆರವೇರಿಸಿದ ಮೇಲೆ ಅಶ್ಶೂರದ ರಾಜನ ಉಬ್ಬಟೆಯ ಕೊಚ್ಚಾಟಕ್ಕೂ ಗರ್ವದೃಷ್ಟಿಯ ಮೆರೆದಾಟಕ್ಕೂ ತಕ್ಕ ದಂಡನೆಯನ್ನು ಮಾಡುವೆನು.”—ಯೆಶಾಯ 10:12.
ಯೆಹೂದ ಮತ್ತು ಯೆರೂಸಲೇಮಿಗೆ!
11. ಯೆರೂಸಲೇಮನ್ನು ಸುಲಭವಾಗಿ ಸೋಲಿಸಬಹುದೆಂದು ಅಶ್ಶೂರವು ಯೋಚಿಸುವುದೇಕೆ?
11 ಉತ್ತರ ರಾಜ್ಯವು ಸಾ.ಶ.ಪೂ. 740ರಲ್ಲಿ ನಾಶವಾಯಿತು. ಎಂಟು ವರ್ಷಗಳ ನಂತರ, ಅಶ್ಶೂರರ ಹೊಸ ಸಾಮ್ರಾಟನಾದ ಸನ್ಹೇರೀಬನು ಯೆರೂಸಲೇಮಿನ ವಿರುದ್ಧ ದಂಡೆತ್ತಿ ಹೋದನು. ಸನ್ಹೇರೀಬನ ಅತಿ ಪ್ರತಿಷ್ಠೆಯ ಯೋಜನೆಯನ್ನು ಯೆಶಾಯನು ಕಾವ್ಯಾತ್ಮಕವಾಗಿ ವರ್ಣಿಸುವುದು: “ಜನಾಂಗಗಳ ಎಲ್ಲೆಗಳನ್ನು ಕಿತ್ತು ಅವರ ನಿಧಿನಿಕ್ಷೇಪಗಳನ್ನು ಸೂರೆಮಾಡಿ ಸಿಂಹಾಸನಾರೂಢರನ್ನು ಮಹಾವೀರನಂತೆ ಕೆಡವಿಬಿಟ್ಟಿದ್ದೇನೆ; ಜನಗಳ ಆಸ್ತಿಪಾಸ್ತಿಯು ಗೂಡಿನಂತೆ ನನ್ನ ಕೈಗೆ ಸಿಕ್ಕಿದೆ; ಪಕ್ಷಿಯು ಇಟ್ಟುಹೋದ ಮೊಟ್ಟೆಗಳನ್ನು ಸಂಗ್ರಹಿಸಿಕೊಳ್ಳುವವನಂತೆ ಭೂಮಿಯನ್ನೆಲ್ಲಾ ಸಂಗ್ರಹಿಸಿಕೊಂಡಿದ್ದೇನೆ; ರೆಕ್ಕೆಯಾಡಿಸಿ ಬಾಯಿದೆರೆದು ಕೀಚುಗುಟ್ಟುವ ಯಾರೂ ಇರಲಿಲ್ಲ.” (ಯೆಶಾಯ 10:13, 14) ಬೇರೆ ನಗರಗಳು ನಾಶವಾಗಿವೆ, ಸಮಾರ್ಯವು ಇನ್ನಿಲ್ಲ, ಆದುದರಿಂದ ಯೆರೂಸಲೇಮನ್ನು ಸುಲಭವಾಗಿ ಸೋಲಿಸಬಹುದೆಂದು ಸನ್ಹೇರೀಬನು ಲೆಕ್ಕಹಾಕುತ್ತಾನೆ! ಆ ನಗರದ ನಿವಾಸಿಗಳು ಒಂದಿಷ್ಟು ಪ್ರತಿಭಟನೆಯನ್ನು ತೋರಿಸಬಹುದಾದರೂ, ಅವರು ಸುಲಭವಾಗಿ ಸೋಲಿಸಲ್ಪಡುವರು. ಮತ್ತು ತ್ಯಜಿಸಲ್ಪಟ್ಟ ಗೂಡಿನಿಂದ ಮೊಟ್ಟೆಗಳನ್ನು ತೆಗೆಯುವಂತೆಯೇ ಅವರ ಆಸ್ತಿಪಾಸ್ತಿಗಳು ತೆಗೆಯಲ್ಪಡುವವು.
12. ಅಶ್ಶೂರವು ಜಂಬಕೊಚ್ಚಿಕೊಂಡ ವಿಷಯಗಳನ್ನು, ಯಾವ ವಿಧದಲ್ಲಿ ವೀಕ್ಷಿಸುವುದು ಸರಿಯೆಂದು ಯೆಹೋವನು ತೋರಿಸಿದನು?
12 ಆದರೆ, ಸನ್ಹೇರೀಬನು ಒಂದು ವಿಷಯವನ್ನು ಮರೆಯುತ್ತಿದ್ದಾನೆ. ಧರ್ಮಭ್ರಷ್ಟ ಸಮಾರ್ಯವು ಯಾವ ಶಿಕ್ಷೆಗೆ ಅರ್ಹವಾಗಿತ್ತೊ ಅದನ್ನು ಅನುಭವಿಸಿತು. ಆದರೆ ರಾಜ ಹಿಜ್ಕೀಯನ ನೇತೃತ್ವದಲ್ಲಿ, ಯೆರೂಸಲೇಮ್ ಮತ್ತೊಮ್ಮೆ ಶುದ್ಧಾರಾಧನೆಯ ಆಶ್ರಯದುರ್ಗವಾಗಿದೆ. ಮತ್ತು ಯೆರೂಸಲೇಮನ್ನು ಮುಟ್ಟಲು ಬಯಸುವವರು ಯೆಹೋವನ ವೈರ ಕಟ್ಟಿಕೊಳ್ಳಬೇಕೆಂಬುದನ್ನು ಮರೆಯಬಾರದು! ಕೋಪದಿಂದ ಯೆಶಾಯನು ಕೇಳುವುದು: “ಕೊಡಲಿಯು ಕಡಿಯುವವನಿಗೆ ವಿರುದ್ಧವಾಗಿ ಕೊಚ್ಚಿಕೊಂಡೀತೇ? ಗರಗಸವು ಆಡಿಸುವವನಿಗೆ ಪ್ರತಿಯಾಗಿ ತನ್ನನ್ನು ಹೆಚ್ಚಿಸಿಕೊಂಡೀತೇ? ಎತ್ತಿಕೊಂಡವನನ್ನು ಕೋಲು ಬೀಸಿದಂತಾಯಿತು, ಮರಕ್ಕಿಂತ ಶ್ರೇಷ್ಠನಾಗಿರುವ ಮನುಷ್ಯನನ್ನು ದೊಣ್ಣೆಯು ಎತ್ತಿಕೊಂಡ ಹಾಗಾಯಿತು.” (ಯೆಶಾಯ 10:15) ಹೇಗೆ ಒಂದು ಕೊಡಲಿ, ಗರಗಸ, ಕೋಲು ಇಲ್ಲವೆ ದೊಣ್ಣೆಯನ್ನು ಒಬ್ಬ ಅರಣ್ಯವಾಸಿ, ಮರ ಕಡಿಯುವವ, ಇಲ್ಲವೆ ಕುರುಬನು ಉಪಯೋಗಿಸುವನೊ ಹಾಗೆಯೇ ಅಶ್ಶೂರ ಸಾಮ್ರಾಜ್ಯವು ಯೆಹೋವನ ಕೈಯಲ್ಲಿ ಕೇವಲ ಒಂದು ಸಾಧನವಾಗಿದೆ. ಆದರೆ ತನ್ನನ್ನು ಉಪಯೋಗಿಸುವ ವ್ಯಕ್ತಿಗಿಂತಲೂ ತಾನೇ ಶ್ರೇಷ್ಠವೆಂದೆಣಿಸಿಕೊಳ್ಳುವ ಕೋಲಿಗೆ ಎಷ್ಟು ಧೈರ್ಯ!
13. (ಎ) “ಕೊಬ್ಬಿದ” ಜನರು, (ಬಿ) ‘ಮುಳ್ಳುಗಿಳ್ಳುಗಳು’ (ಸಿ) “ತೋಟದ ವೈಭವ” ಯಾರೆಂದು ಗುರುತಿಸಿ, ಅವರಿಗೆ ಏನು ಸಂಭವಿಸುತ್ತದೆ ಎಂಬುದನ್ನು ತಿಳಿಸಿರಿ.
13 ಈ ಅಶ್ಶೂರಕ್ಕೆ ಏನು ಸಂಭವಿಸುವುದು? “ಆದಕಾರಣ ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಅವನ ಕೊಬ್ಬಿದ ಪ್ರಜೆಗಳಿಗೆ ಕ್ಷಯವನ್ನುಂಟುಮಾಡುವನು; ದಹಿಸುವ ಅಗ್ನಿಯಂತಿರುವ ಉರಿಯೊಂದು ಅವನ ವೈಭವದ ಕೆಳಗೆ ಹತ್ತಿಕೊಳ್ಳುವದು. ಇಸ್ರಾಯೇಲ್ಯರ ಪರಂಜ್ಯೋತಿಯು ದಹಿಸುವ ಅಗ್ನಿಯಾಗುವದು, ಅವರ ಸದಮಲಸ್ವಾಮಿಯು ಜ್ವಾಲೆಯಂತಿರುವನು; ಅದು ಒಂದೇ ದಿವಸದಲ್ಲಿ ಅಶ್ಶೂರದ ಮುಳ್ಳುಗಿಳ್ಳನ್ನು ಸುಟ್ಟು ನುಂಗಿಬಿಡುವದು. ಅದು ದೇಹಾತ್ಮಗಳನ್ನುಳಿಸದೆ ಅಲ್ಲಿನ ವನದ ಮತ್ತು ತೋಟದ ವೈಭವವನ್ನು ನಿರ್ಮೂಲಮಾಡುವದು; ದೇಶವೋ ಉಡುಗುತ್ತಿರುವ ರೋಗಿಯಂತಿರುವದು. ಅದರ ವನವೃಕ್ಷಗಳ ಸಂಖ್ಯೆಯು ಮಗು ಬರೆದು ಎಣಿಸುವಷ್ಟು ಕಡಿಮೆಯಾಗುವದು.” (ಯೆಶಾಯ 10:16-19) ಹೌದು, ಯೆಹೋವನು ಆ ಅಶ್ಶೂರವೆಂಬ ‘ಕೋಲಿನ’ ಸೊಕ್ಕನ್ನು ಅಡಗಿಸುವನು! ಅವನ ಸೇನೆಯಲ್ಲಿರುವ “ಕೊಬ್ಬಿದ” ಜನರು, ಅಂದರೆ ಅವನ ಗಟ್ಟಿಮುಟ್ಟಾದ ಸೈನಿಕರು “ಕ್ಷಯ”ದಿಂದ ಬಳಲುವರು. ಆಗ ಅವರೇನೂ ಅಷ್ಟು ಗಟ್ಟಿಮುಟ್ಟಾಗಿ ಕಾಣಿಸಲಾರರು! ಅಶ್ಶೂರದ ಭೂದಂಡುಗಳು, ಇಸ್ರಾಯೇಲ್ಯರ ಪರಂಜ್ಯೋತಿಯಾಗಿರುವ ಯೆಹೋವ ದೇವರಿಂದ ಮುಳ್ಳುಗಿಡಗಳಂತೆ ಸುಟ್ಟು ಬೂದಿಯಾಗುವವು. ಮತ್ತು ಅದರ “ತೋಟದ ವೈಭವ”ದಂತಿರುವ ಮಿಲಿಟರಿ ಅಧಿಕಾರಿಗಳು ನಿರ್ಮೂಲವಾಗುವರು. ಈ ಅಶ್ಶೂರವನ್ನು ಮುಗಿಸಿದ ಮೇಲೆ, ಅಲ್ಲಿ ಉಳಿದಿರುವ ಬೆರಳೆಣಿಕೆಯ ಅಧಿಕಾರಿಗಳನ್ನು ಒಂದು ಚಿಕ್ಕ ಮಗು ಎಣಿಸಶಕ್ತವಾಗಿರುವುದು!—ಯೆಶಾಯ 10:33, 34ನ್ನು ಸಹ ನೋಡಿರಿ.
14. ಸಾ.ಶ.ಪೂ. 732ರೊಳಗೆ ಅಶ್ಶೂರವು ಯೆಹೂದದ ಕಡೆಗೆ ಹೇಗೆ ಮುನ್ನುಗ್ಗುತ್ತದೆಂಬುದನ್ನು ವಿವರಿಸಿರಿ.
14 ಹಾಗಿದ್ದರೂ, ಸಾ.ಶ.ಪೂ. 732ರಲ್ಲಿ ಯೆರೂಸಲೇಮಿನಲ್ಲಿ ಜೀವಿಸುತ್ತಿರುವ ಯೆಹೂದ್ಯರಿಗೆ, ಈ ಅಶ್ಶೂರವು ಸೋಲಲಿದೆಯೆಂಬುದನ್ನು ನಂಬಲು ಸಾಧ್ಯವೇ ಆಗುತ್ತಿಲ್ಲ. ಏಕೆಂದರೆ, ಈ ದೊಡ್ಡ ಅಶ್ಶೂರ ಸೇನೆಯು ಪಟ್ಟು ಬಿಡದೆ ಮುನ್ನುಗ್ಗುತ್ತಿದೆ. ಅದರ ವಶಕ್ಕೆ ಬಿದ್ದಿರುವ ಯೆಹೂದ ನಗರಗಳ ಪಟ್ಟಿಯ ಕಡೆಗೆ ಸ್ವಲ್ಪ ಗಮನಹರಿಸಿರಿ: ‘ಅಯ್ಯಾಥ್ . . . ಮಿಗ್ರೋನ್ . . . ಮಿಕ್ಮಾಷ್ . . . ಗೆಬ . . . ರಾಮಾ . . . ಸೌಲನ ಗಿಬೆಯ . . . ಗಲ್ಲೀಮ್ . . . ಲಯೆಷ . . . ಅನಾತೋತ . . . ಮದ್ಮೇನ . . . ಗೇಬೀಮ್ . . . ನೋಬ್.’ (ಯೆಶಾಯ 10:28-32ಎ) b ಕೊನೆಗೂ ಈ ದಾಳಿಮಾಡುವ ದಂಡು ಯೆರೂಸಲೇಮಿನಿಂದ ಕೇವಲ 50 ಕಿಲೊಮೀಟರುಗಳಷ್ಟು ದೂರದಲ್ಲಿರುವ ಲಾಕೀಷ್ ಕ್ಷೇತ್ರವನ್ನು ತಲಪುತ್ತದೆ. ಬೇಗನೆ ಅಶ್ಶೂರ್ಯರ ಒಂದು ದೊಡ್ಡ ಸೇನೆಯು ಯೆರೂಸಲೇಮ್ ನಗರಕ್ಕೆ ಬೆದರಿಕೆಯನ್ನೊಡ್ಡುತ್ತದೆ. “[ಶತ್ರುಗಳು] ಚೀಯೋನ್ ನಗರಿಯ ಪರ್ವತದ ಕಡೆಗೆ, ಯೆರೂಸಲೇಮಿನ ಬೆಟ್ಟದ ಕಡೆಗೆ, ಕೈ ಬೀಸುತ್ತಾರೆ.” (ಯೆಶಾಯ 10:32ಬಿ) ಈ ಅಶ್ಶೂರವನ್ನು ಯಾರು ತಡೆಯಬಲ್ಲರು?
15, 16. (ಎ) ರಾಜ ಹಿಜ್ಕೀಯನಿಗೆ ಬಲವಾದ ನಂಬಿಕೆಯ ಅಗತ್ಯ ಏಕಿದೆ? (ಬಿ) ಯೆಹೋವನು ತನ್ನ ನೆರವಿಗೆ ಬರುವನೆಂಬ ಹಿಜ್ಕೀಯನ ನಂಬಿಕೆಗೆ ಯಾವ ಆಧಾರವಿದೆ?
15 ಈ ಕಡೆ ಯೆರೂಸಲೇಮಿನ ಅರಮನೆಯಲ್ಲಿ, ರಾಜ ಹಿಜ್ಕೀಯನು ಕಳವಳಗೊಳ್ಳುತ್ತಾನೆ. ಅವನು ತನ್ನ ಬಟ್ಟೆಗಳನ್ನು ಹರಿದುಕೊಂಡು ಗೋಣೀತಟ್ಟನ್ನು ಕಟ್ಟಿಕೊಳ್ಳುತ್ತಾನೆ. (ಯೆಶಾಯ 37:1) ಯೆಹೂದದ ಪರವಾಗಿ ಯೆಹೋವನಲ್ಲಿ ಪ್ರಾರ್ಥಿಸುವಂತೆ ರಾಜನು ಪ್ರವಾದಿಯಾದ ಯೆಶಾಯನ ಬಳಿ ತನ್ನ ಮನುಷ್ಯರನ್ನು ಕಳುಹಿಸುತ್ತಾನೆ. ಅವರು ಯೆಹೋವನ ಉತ್ತರದೊಂದಿಗೆ ಬೇಗನೆ ಹಿಂದಿರುಗಿ ಬಂದು ಹೇಳುವುದು: “ಹೆದರಬೇಡ. . . . ಇದನ್ನು ಉಳಿಸಿ ಕಾಪಾಡುವೆನು.” (ಯೆಶಾಯ 37:6, 35) ಅಷ್ಟಾದರೂ, ಅಶ್ಶೂರ್ಯರು ಬೆದರಿಕೆಯನ್ನು ಒಡ್ಡುತ್ತಾರೆ ಮಾತ್ರವಲ್ಲ ಅವರು ತುಂಬ ಆತ್ಮಭರವಸೆಯಿಂದ ಮೆರೆಯುತ್ತಾರೆ.
16 ಈ ಸಂದಿಗ್ಧ ಸಮಯದಲ್ಲಿ ರಾಜ ಹಿಜ್ಕೀಯನಿಗೆ ಆಸರೆಯಾಗಿರುವಂತಹದ್ದು ನಂಬಿಕೆಯೇ ಹೊರತು ಬೇರೇನೂ ಅಲ್ಲ. ನಂಬಿಕೆ, “ಕಣ್ಣಿಗೆ ಕಾಣದವುಗಳನ್ನು ನಿಜವೆಂದು ತಿಳುಕೊಳ್ಳುವದು ಆಗಿದೆ.” (ಇಬ್ರಿಯ 11:1) ಹೌದು ಕಣ್ಣಿಗೆ ಗೋಚರಿಸದವುಗಳನ್ನು ಕಾಣುತ್ತೇವೋ ಎಂಬುದಕ್ಕೆ ಅದು ಸಮಾನವಾಗಿದೆ. ಆದರೆ ನಂಬಿಕೆಯು ಜ್ಞಾನದ ಮೇಲೆ ಆಧರಿಸಿದೆ. ಬಹಳ ಹಿಂದೆಯೇ ಯೆಹೋವನು ಸಾಂತ್ವನದಾಯಕ ಮಾತುಗಳನ್ನು ನುಡಿದಿರುವುದನ್ನು ಹಿಜ್ಕೀಯನು ಬಹುಶಃ ಜ್ಞಾಪಿಸಿಕೊಳ್ಳುತ್ತಾನೆ: “ಚೀಯೋನಿನಲ್ಲಿ ವಾಸಿಸುವ ನನ್ನ ಜನರೇ, . . . ಅಶ್ಶೂರ್ಯರಿಗೆ ಭಯಪಡಬೇಡಿರಿ. ಬಹು ಸ್ವಲ್ಪ ಕಾಲದೊಳಗೆ [ನಿಮ್ಮ ಮೇಲಿನ] ಉಗ್ರವು ತೀರಿ ನನ್ನ ಕೋಪವು ಅವರ ನಾಶನಕ್ಕಾಗುವದು. ಸೇನಾಧೀಶ್ವರನಾದ ಯೆಹೋವನು ಓರೇಬನ ಬಂಡೆಯ ಹತ್ತಿರ ಮಿದ್ಯಾನ್ಯರನ್ನು ಹತಮಾಡಿದಂತೆ ಅವರ ಮೇಲೆಯೂ ಕೊರಡೆಯನ್ನು ಬೀಸುವನು; ಆತನು ದಂಡವನ್ನು ಸಮುದ್ರದ ಮೇಲೆ ಚಾಚಿ ಐಗುಪ್ತ್ಯರ ಮೇಲೆ ಎತ್ತಿದಂತೆ ಎತ್ತುವನು.” (ಯೆಶಾಯ 10:24-26) c ಹೌದು, ಈ ಮುಂಚೆಯೂ ದೇವಜನರು ಕಷ್ಟಕರ ಸನ್ನಿವೇಶಗಳನ್ನು ಅನುಭವಿಸಿದ್ದಾರೆ. ಉದಾಹರಣೆಗೆ, ಕೆಂಪು ಸಮುದ್ರದ ಬಳಿ ಹಿಜ್ಕೀಯನ ಪೂರ್ವಜರು ಐಗುಪ್ತ ಸೇನೆಯ ಮುಂದೆ ಇನ್ನೇನು ಸೋಲನ್ನು ಅನುಭವಿಸಲಿರುವಂತೆ ತೋರಿತು. ಶತಮಾನಗಳ ಹಿಂದೆ ಗಿದ್ಯೋನನಿಗೆ, ಇಸ್ರಾಯೇಲನ್ನು ಆಕ್ರಮಿಸುತ್ತಿದ್ದ ಮಿದ್ಯಾನ್ಯ ಹಾಗೂ ಅಮಾಲೇಕ್ಯರ ಮುಂದೆ ಸೋಲನ್ನು ಅನುಭವಿಸುವ ಸಾಧ್ಯತೆಯೇ ಹೆಚ್ಚಾಗಿತ್ತು. ಆದರೂ, ಯೆಹೋವನು ತನ್ನ ಜನರನ್ನು ಈ ಎರಡೂ ಸಂದರ್ಭಗಳಲ್ಲಿ ಸಂರಕ್ಷಿಸಿದನು.—ವಿಮೋಚನಕಾಂಡ 14:7-9, 13, 28; ನ್ಯಾಯಸ್ಥಾಪಕರು 6:33; 7:21, 22.
17. ಅಶ್ಶೂರದ ನೊಗವು ಹೇಗೆ ‘ಮುರಿದು ಹೋಗುವದು’ ಮತ್ತು ಏಕೆ?
17 ಯೆಹೋವನು ಮುಂಚಿನ ಆ ಎರಡು ಸಂದರ್ಭಗಳಲ್ಲಿ ಮಾಡಿದಂತೆ ಈಗಲೂ ಮಾಡುವನೊ? ಹೌದು. ಯೆಹೋವನು ವಾಗ್ದಾನಿಸುವುದು: “ಆ ದಿನದಲ್ಲಿ ಅವರು ಹೊರಿಸಿದ ಹೊರೆಯು ನಿಮ್ಮ ಬೆನ್ನಿನಿಂದಲೂ ಹೂಡಿದ ನೊಗವು ಕತ್ತಿನಿಂದಲೂ ತೊಲಗುವವು; ನೀವು ಪುಷ್ಟರಾದ [“ಎಣ್ಣೆಯ,” NW] ಕಾರಣ ನೊಗವು ಮುರಿದು ಹೋಗುವದು.” (ಯೆಶಾಯ 10:27) ಅಶ್ಶೂರವೆಂಬ ನೊಗವು ದೇವರ ಒಡಂಬಡಿಕೆಯ ಜನರ ಬೆನ್ನಿನಿಂದಲೂ ಕತ್ತಿನಿಂದಲೂ ತೊಲಗುವುದು. ವಾಸ್ತವದಲ್ಲಿ, ಆ ನೊಗವು “ಮುರಿದು ಹೋಗುವದು,” ಮತ್ತು ಅದು ನಿಜವಾಗಿಯೂ ಮುರಿದು ಹೋಯಿತು! ಒಂದೇ ರಾತ್ರಿಯಲ್ಲಿ ಯೆಹೋವನ ದೂತನು, 1,85,000 ಅಶ್ಶೂರ್ಯರನ್ನು ಕೊಂದುಹಾಕುತ್ತಾನೆ. ಆಗ, ಬೆದರಿಕೆಯು ತೆಗೆದುಹಾಕಲ್ಪಡುತ್ತದೆ, ಮತ್ತು ಅಶ್ಶೂರ್ಯರು ಯೆಹೂದವನ್ನು ಹಿಂದಿರುಗಿಯೂ ನೋಡದೆ ಅಲ್ಲಿಂದ ಓಡಿಹೋಗುತ್ತಾರೆ. (2 ಅರಸುಗಳು 19:35, 36) ಏಕೆ? “ಎಣ್ಣೆಯ ಕಾರಣ.” ದಾವೀದನ ವಂಶದಲ್ಲಿ ಹಿಜ್ಕೀಯನನ್ನು ರಾಜನಾಗಿ ಅಭಿಷೇಕಿಸಲು ಉಪಯೋಗಿಸಲ್ಪಟ್ಟ ಎಣ್ಣೆಯನ್ನು ಇದು ಸೂಚಿಸಬಹುದು. ಹೀಗೆ ಯೆಹೋವನು ತನ್ನ ವಾಗ್ದಾನವನ್ನು ನೆರವೇರಿಸುತ್ತಾನೆ: “ನನಗೋಸ್ಕರವಾಗಿಯೂ ನನ್ನ ಸೇವಕನಾದ ದಾವೀದನಿಗೋಸ್ಕರವಾಗಿಯೂ ಇದನ್ನು ಉಳಿಸಿ ಕಾಪಾಡುವೆನು.”—2 ಅರಸುಗಳು 19:34.
18. (ಎ) ಯೆಶಾಯನ ಪ್ರವಾದನೆಗೆ ಒಂದಕ್ಕಿಂತಲೂ ಹೆಚ್ಚಿನ ನೆರವೇರಿಕೆ ಇದೆಯೊ? ವಿವರಿಸಿರಿ. (ಬಿ) ಇಂದು ಯಾವ ಸಂಘಟನೆ ಪುರಾತನ ಸಮಾರ್ಯದಂತಿದೆ?
18 ಈ ಅಧ್ಯಾಯದಲ್ಲಿ ಚರ್ಚಿಸಲ್ಪಟ್ಟ ಯೆಶಾಯನ ವೃತ್ತಾಂತವು, ಸುಮಾರು 2,700ಕ್ಕಿಂತಲೂ ಹೆಚ್ಚಿನ ವರ್ಷಗಳ ಹಿಂದೆ ಯೆಹೂದದಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿದೆ. ಆದರೆ ಆ ಘಟನೆಗಳು ಇಂದು ನಮ್ಮ ದಿನಕ್ಕೆ ಅತ್ಯಂತ ಹೆಚ್ಚಾಗಿ ಸಂಬಂಧಿಸುತ್ತವೆ. (ರೋಮಾಪುರ 15:4) ಈ ರೋಮಾಂಚಕ ಕಥನದ ಮುಖ್ಯ ಪಾತ್ರಧಾರಿಗಳಾದ ಸಮಾರ್ಯ ಮತ್ತು ಯೆರೂಸಲೇಮಿನ ನಿವಾಸಿಗಳು ಹಾಗೂ ಅಶ್ಶೂರ್ಯರಿಗೆ ಆಧುನಿಕ ದಿನದ ಪ್ರತಿರೂಪಗಳಿದ್ದಾರೊ? ಹೌದು, ಖಂಡಿತವಾಗಿಯೂ ಇದ್ದಾರೆ. ಮೂರ್ತಿಪೂಜೆಯಲ್ಲಿ ಮುಳುಗಿದ್ದ ಸಮಾರ್ಯದಂತೆ, ಇಂದು ಕ್ರೈಸ್ತಪ್ರಪಂಚವು ಯೆಹೋವನನ್ನು ಆರಾಧಿಸುವ ಪ್ರತಿಪಾದನೆಯನ್ನು ಮಾಡಿದರೂ ಪೂರ್ಣಪ್ರಮಾಣದಲ್ಲಿ ಧರ್ಮಭ್ರಷ್ಟವಾಗಿದೆ. ಕ್ರೈಸ್ತ ಸಿದ್ಧಾಂತದ ವಿಕಸನದ ಕುರಿತು ಒಂದು ಪ್ರಬಂಧ (ಇಂಗ್ಲಿಷ್)ದಲ್ಲಿ, ರೋಮನ್ ಕ್ಯಾಥೊಲಿಕ್ ಜಾನ್ ಹೆನ್ರಿ ಕಾರ್ಡಿನಲ್ ನ್ಯೂಮನ್ ಒಪ್ಪಿಕೊಳ್ಳುವುದೇನೆಂದರೆ, ಕ್ರೈಸ್ತಪ್ರಪಂಚವು ಶತಮಾನಗಳಿಂದಲೂ ಉಪಯೋಗಿಸುತ್ತಾ ಬಂದಿರುವ, ಧೂಪ, ಕ್ಯಾಂಡಲ್, ಪವಿತ್ರ ಜಲ, ವೈದಿಕರ ವಸ್ತ್ರ ಮತ್ತು ಮೂರ್ತಿಗಳು “ವಿಧರ್ಮಿ ಮೂಲಗಳಿಂದ ಬಂದವುಗಳಾಗಿವೆ.” ಹೇಗೆ ಯೆಹೋವನು ಸಮಾರ್ಯದ ಮೂರ್ತಿಪೂಜೆಯಿಂದ ಸಂತುಷ್ಟನಾಗಿರಲಿಲ್ಲವೊ ಹಾಗೆಯೇ ಇಂದು ಕ್ರೈಸ್ತಪ್ರಪಂಚದ ವಿಧರ್ಮಿ ಮಿಶ್ರಿತ ಆರಾಧನೆಯಿಂದ ಆತನು ಸಂತುಷ್ಟನಾಗಿರುವುದಿಲ್ಲ.
19. ಕ್ರೈಸ್ತಪ್ರಪಂಚಕ್ಕೆ ಯಾವ ಎಚ್ಚರಿಕೆ ನೀಡಲಾಗಿದೆ, ಮತ್ತು ಯಾರಿಂದ?
19 ಯೆಹೋವನ ಸಾಕ್ಷಿಗಳು ಅನೇಕ ವರ್ಷಗಳಿಂದ ಆತನ ಅಪ್ರಸನ್ನತೆಯ ಕುರಿತು ಕ್ರೈಸ್ತಪ್ರಪಂಚಕ್ಕೆ ಎಚ್ಚರಿಕೆಯನ್ನು ಕೊಡುತ್ತಾ ಬಂದಿದ್ದಾರೆ. ಉದಾಹರಣೆಗೆ 1955ರಲ್ಲಿ, “ಕ್ರೈಸ್ತಪ್ರಪಂಚ ಅಥವಾ ಕ್ರೈಸ್ತತ್ವ—ಯಾವುದು ‘ಈ ಲೋಕದ ಬೆಳಕಾಗಿದೆ’?” ಎಂಬ ಶೀರ್ಷಿಕೆಯ ಬಹಿರಂಗ ಭಾಷಣವನ್ನು ಲೋಕವ್ಯಾಪಕವಾಗಿ ನೀಡಲಾಯಿತು. ಯಾವ ರೀತಿಯಲ್ಲಿ ಕ್ರೈಸ್ತಪ್ರಪಂಚವು ಯಥಾರ್ಥವಾದ ಕ್ರೈಸ್ತ ತತ್ವ ಹಾಗೂ ಆಚರಣೆಯಿಂದ ದೂರ ಸರಿದಿದೆ ಎಂಬುದನ್ನು ಆ ಭಾಷಣವು ಸುಸ್ಪಷ್ಟವಾಗಿ ವಿವರಿಸಿತು. ತರುವಾಯ, ಈ ಪ್ರಭಾವಶಾಲಿ ಭಾಷಣದ ಪ್ರತಿಗಳನ್ನು ಅನೇಕ ದೇಶಗಳ ವೈದಿಕರಿಗೆ ಕಳುಹಿಸಲಾಯಿತು. ಒಂದು ಸಂಘಟನೆಯೋಪಾದಿ, ಕ್ರೈಸ್ತಪ್ರಪಂಚವು ಈ ಎಚ್ಚರಿಕೆಗೆ ಕಿವಿಗೊಡಲು ತಪ್ಪಿದೆ. ಆದಕಾರಣ, ಕ್ರೈಸ್ತಪ್ರಪಂಚವನ್ನು ‘ಕೋಲಿನಿಂದ’ ಶಿಕ್ಷಿಸದೆ ಯೆಹೋವನಿಗೆ ಬೇರೆ ಮಾರ್ಗವಿಲ್ಲ.
20. (ಎ) ಆಧುನಿಕ ದಿನದ ಅಶ್ಶೂರದಂತೆ ಯಾವುದು ಕಾರ್ಯಮಾಡುವುದು, ಮತ್ತು ಅದು ಹೇಗೆ ಒಂದು ಕೋಲಿನಂತೆ ಉಪಯೋಗಿಸಲ್ಪಡುವುದು? (ಬಿ) ಎಷ್ಟರ ಮಟ್ಟಿಗೆ ಕ್ರೈಸ್ತಪ್ರಪಂಚವು ಶಿಕ್ಷಿಸಲ್ಪಡುವುದು?
20 ಈ ದಂಗೆಕೋರ ಕ್ರೈಸ್ತಪ್ರಪಂಚಕ್ಕೆ ಶಿಕ್ಷೆಯನ್ನು ನೀಡಲು ಯೆಹೋವನು ಯಾರನ್ನು ಉಪಯೋಗಿಸುವನು? ಇದಕ್ಕೆ ಉತ್ತರವನ್ನು ನಾವು ಪ್ರಕಟನೆಯ 17ನೆಯ ಅಧ್ಯಾಯದಲ್ಲಿ ಕಂಡುಕೊಳ್ಳುತ್ತೇವೆ. ಅಲ್ಲಿ “ಮಹಾ ಬಾಬೆಲ್” ಎಂಬ ಜಾರಸ್ತ್ರೀಯನ್ನು ನಮಗೆ ಪರಿಚಯಪಡಿಸಲಾಗುತ್ತದೆ. ಇವಳು ಕ್ರೈಸ್ತಪ್ರಪಂಚವನ್ನು ಸೇರಿಸಿ ಲೋಕದ ಎಲ್ಲ ಸುಳ್ಳು ಧರ್ಮಗಳನ್ನು ಪ್ರತಿನಿಧಿಸುತ್ತಾಳೆ. ಈ ಜಾರಸ್ತ್ರೀಯು ಕುಳಿತುಕೊಂಡಿರುವ ರಕ್ತವರ್ಣದ ಮೃಗಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಇವೆ. (ಪ್ರಕಟನೆ 17:3, 5, 7-12) ಈ ಮೃಗವು ವಿಶ್ವ ಸಂಸ್ಥೆಯನ್ನು ಪ್ರತಿನಿಧಿಸುತ್ತದೆ. d ಹೇಗೆ ಪುರಾತನ ಅಶ್ಶೂರವು ಸಮಾರ್ಯವನ್ನು ನಾಶಮಾಡಿತೊ, ಹಾಗೆಯೇ ರಕ್ತವರ್ಣದ ಮೃಗವು “ಆ ಜಾರಸ್ತ್ರೀಯನ್ನು ದ್ವೇಷಿಸಿ ಅವಳನ್ನು ಗತಿಗೆಟ್ಟವಳನ್ನಾಗಿಯೂ ಬಟ್ಟೆಯಿಲ್ಲದವಳನ್ನಾಗಿಯೂ ಮಾಡಿ ಅವಳ ಮಾಂಸವನ್ನು ತಿಂದು ಅವಳನ್ನು ಬೆಂಕಿಯಿಂದ ಸುಟ್ಟುಬಿಡು”ವುದು. (ಪ್ರಕಟನೆ 17:16) ಹೀಗೆ, ಆಧುನಿಕ ದಿನದ ಅಶ್ಶೂರವು (ವಿಶ್ವಸಂಸ್ಥೆಯ ಜೊತೆಗೆ ಸಂಬಂಧಿಸಲ್ಪಟ್ಟಿರುವ ರಾಷ್ಟ್ರಗಳು) ಕ್ರೈಸ್ತಪ್ರಪಂಚವನ್ನು ಬಲವಾಗಿ ಹೊಡೆದು ಅವಳನ್ನು ನಿರ್ಮೂಲಮಾಡಿಬಿಡುವುದು.
21, 22. ದೇವಜನರ ಮೇಲೆ ದಾಳಿಮಾಡುವಂತೆ ಯಾರು ಮೃಗಕ್ಕೆ ಪ್ರಚೋದನೆ ನೀಡುವರು?
21 ಮಹಾ ಬಾಬೆಲಿನ ಜೊತೆಗೆ ಯೆಹೋವನ ನಂಬಿಗಸ್ತ ಸಾಕ್ಷಿಗಳು ಕೂಡ ನಾಶವಾಗುವರೊ? ಇಲ್ಲ. ಯೆಹೋವನು ಇವರನ್ನು ಮೆಚ್ಚಿಕೊಂಡಿದ್ದಾನೆ. ಶುದ್ಧಾರಾಧನೆಯು ಬದುಕಿ ಉಳಿಯುವುದು. ಆದರೆ, ಮಹಾ ಬಾಬೆಲನ್ನು ನಾಶಮಾಡಿದ ಮೃಗವು ಈಗ ಯೆಹೋವನ ಜನರ ಕಡೆಗೆ ಅತ್ಯಾಶೆಯಿಂದ ದುರುಗುಟ್ಟಿ ನೋಡುತ್ತದೆ. ಹೀಗೆ ಮಾಡುವ ಮೂಲಕ, ಮೃಗವು ದೇವರ ಉದ್ದೇಶವನ್ನಲ್ಲ, ಬೇರೆ ಯಾರೊ ಒಬ್ಬನ ಉದ್ದೇಶವನ್ನು ನೆರವೇರಿಸುತ್ತಿದೆ. ಯಾರದು? ಪಿಶಾಚನಾದ ಸೈತಾನನಲ್ಲದೆ ಮತ್ತಾರೂ ಅಲ್ಲ.
22 ಸೈತಾನನ ದುಷ್ಟ ಯೋಜನೆಯನ್ನು ಯೆಹೋವನು ಬಹಿರಂಗಪಡಿಸುತ್ತಾನೆ. “ಆಗ ನಿನ್ನ [ಸೈತಾನನ] ಮನಸ್ಸಿನಲ್ಲಿ ಆಲೋಚನೆಗಳು ಹುಟ್ಟುವವು; ನೀನು—ಆಹಾ, ನಾನು . . . [ರಕ್ಷಣಾತ್ಮಕ] ಗೋಡೆಗಳಿಲ್ಲದೆ ನೆಮ್ಮದಿಯಿಂದ ನಿರ್ಭಯವಾಗಿರುವವರ ಮೇಲೆ ಬೀಳುವೆನು ಅಂದುಕೊಂಡು ಸೂರೆಗೆಯ್ದು ಕೊಳ್ಳೆಹೊಡೆಯಬೇಕೆಂತಲೂ . . . ಕುತಂತ್ರವನ್ನು ಕಲ್ಪಿಸುವಿ.” (ಯೆಹೆಜ್ಕೇಲ 38:10-12) ಸೈತಾನನು ಹೀಗೆ ತರ್ಕಿಸುವನು: ‘ಯೆಹೋವನ ಸಾಕ್ಷಿಗಳ ಮೇಲೆ ದಾಳಿಮಾಡುವಂತೆ ಈ ರಾಷ್ಟ್ರಗಳನ್ನು ಏಕೆ ಪ್ರಚೋದಿಸಬಾರದು? ಅವರು ಸುಲಭಭೇದ್ಯರು ಮಾತ್ರವಲ್ಲ, ರಾಜಕೀಯ ಪ್ರಭಾವವಿಲ್ಲದೆ ಅಸುರಕ್ಷಿತರೂ ಆಗಿದ್ದಾರೆ. ಅವರು ಕಿಂಚಿತ್ತೂ ಪ್ರತಿಭಟಿಸಲಾರರು. ಯಾವ ರಕ್ಷಣೆಯೂ ಇಲ್ಲದ ಗೂಡಿನಿಂದ ಮೊಟ್ಟೆಗಳನ್ನು ಕಿತ್ತುಕೊಳ್ಳುವಂತೆ ಅವರನ್ನು ಕೀಳುವುದು ಎಷ್ಟು ಸುಲಭ!’
23. ಆಧುನಿಕ ದಿನದ ಅಶ್ಶೂರವು ಕ್ರೈಸ್ತಪ್ರಪಂಚಕ್ಕೆ ಏನನ್ನು ಮಾಡುತ್ತದೊ ಅದನ್ನೇ ದೇವರ ಜನರಿಗೆ ಮಾಡಲು ಅಸಮರ್ಥವಾಗಿರುವುದು ಏಕೆ?
23 ಆದರೆ ರಾಷ್ಟ್ರಗಳೇ, ಎಚ್ಚರವಹಿಸಿ! ನೀವು ಯೆಹೋವನ ಜನರನ್ನು ಮುಟ್ಟಿದರೆ, ದೇವರ ವೈರ ಕಟ್ಟಿಕೊಳ್ಳಬೇಕಾಗುತ್ತದೆ ಎಂಬುದು ನಿಮಗೆ ತಿಳಿದಿರಲಿ! ಯೆಹೋವನು ತನ್ನ ಜನರನ್ನು ಪ್ರೀತಿಸುತ್ತಾನೆ, ಮತ್ತು ಹಿಜ್ಕೀಯನ ದಿನಗಳಲ್ಲಿ ಹೇಗೆ ಆತನು ಯೆರೂಸಲೇಮಿಗಾಗಿ ಹೋರಾಡಿದನೊ ಹಾಗೆಯೇ ಇವರಿಗಾಗಿ ಹೋರಾಡುವನು. ಆಧುನಿಕ ದಿನದ ಅಶ್ಶೂರವು ಯೆಹೋವನ ಸೇವಕರನ್ನು ನಾಶಮಾಡಲು ಪ್ರಯತ್ನಿಸುವಾಗ, ಅದು ವಾಸ್ತವದಲ್ಲಿ ಯೆಹೋವ ದೇವರು ಮತ್ತು ಕುರಿಯಾದಾತನಾದ ಯೇಸು ಕ್ರಿಸ್ತನ ವಿರುದ್ಧ ಹೋರಾಡುತ್ತಿದೆ. ಈ ಹೋರಾಟದಲ್ಲಿ ‘ಅಶ್ಶೂರವು’ ಖಂಡಿತವಾಗಿಯೂ ಜಯಸಾಧಿಸಲಾರದು. ಏಕೆಂದರೆ, ‘ಕುರಿಯಾದಾತನು’ “ಕರ್ತರ ಕರ್ತನೂ ರಾಜಾಧಿರಾಜನೂ ಆಗಿರುವದರಿಂದ, ಅವರನ್ನು ಜಯಿಸುವನು” ಎಂದು ಬೈಬಲು ಹೇಳುತ್ತದೆ. (ಪ್ರಕಟನೆ 17:14; ಹೋಲಿಸಿ ಮತ್ತಾಯ 25:40.) ಗತಕಾಲದ ಅಶ್ಶೂರದಂತೆ, ರಕ್ತವರ್ಣದ ಮೃಗವು ‘ನಾಶನಕ್ಕೆ ಹೋಗುವದು.’ ಅದರ ಭಯವು ಇನ್ನಿರದು.—ಪ್ರಕಟನೆ 17:11.
24. (ಎ) ಭವಿಷ್ಯತ್ತಿಗಾಗಿ ತಯಾರಿಸಲು ಸತ್ಯ ಕ್ರೈಸ್ತರು ಯಾವ ನಿರ್ಧಾರವನ್ನು ಮಾಡಿದ್ದಾರೆ? (ಬಿ) ಯೆಶಾಯನು ಭವಿಷ್ಯತ್ತಿನ ಕಡೆಗೆ ನೋಟ ಹರಿಸುವುದು ಹೇಗೆ? (155ನೆಯ ಪುಟದಲ್ಲಿರುವ ರೇಖಾಚೌಕವನ್ನು ನೋಡಿರಿ.)
24 ನಿಜ ಕ್ರೈಸ್ತರು ಯೆಹೋವನೊಂದಿಗಿನ ತಮ್ಮ ಸಂಬಂಧವನ್ನು ಬಲಪಡಿಸಿಕೊಂಡು, ಆತನ ಚಿತ್ತಕ್ಕೆ ತಮ್ಮ ಜೀವಿತದಲ್ಲಿ ಪ್ರಥಮ ಸ್ಥಾನವನ್ನು ಕೊಟ್ಟರೆ, ಯಾವ ಭಯವೂ ಇಲ್ಲದೆ ಭವಿಷ್ಯತ್ತನ್ನು ಎದುರಿಸಬಹುದು. (ಮತ್ತಾಯ 6:33) ಆಗ ಅವರು ‘ಕೇಡಿಗೆ ಹೆದರುವ’ ಅಗತ್ಯವಿಲ್ಲ. (ಕೀರ್ತನೆ 23:4) ದೇವರ ಬಲಿಷ್ಠ ಕೈ ಎತ್ತಲ್ಪಟ್ಟಿರುವುದನ್ನು ಅವರು ನಂಬಿಕೆಯ ಕಣ್ಣುಗಳಿಂದ ನೋಡುವರು. ಆ ಕೈ ಅವರನ್ನು ಶಿಕ್ಷಿಸಲಿಕ್ಕಾಗಿ ಅಲ್ಲ ಬದಲಿಗೆ ಅವರನ್ನು ವೈರಿಗಳಿಂದ ರಕ್ಷಿಸಲಿಕ್ಕಾಗಿಯೇ ಎತ್ತಲ್ಪಟ್ಟಿದೆ. ಮತ್ತು ಅವರ ಕಿವಿಗಳು, “ಭಯಪಡಬೇಡಿರಿ” ಎಂಬ ಆಶ್ವಾಸನಾದಾಯಕ ಮಾತುಗಳನ್ನೇ ಕೇಳುವವು.—ಯೆಶಾಯ 10:24.
[ಪಾದಟಿಪ್ಪಣಿಗಳು]
a ಶಾಸ್ತ್ರಗಳ ಒಳನೋಟ (ಇಂಗ್ಲಿಷ್) ಸಂಪುಟ 1, ಪುಟ 203ನ್ನು ನೋಡಿರಿ.
b ವಿಷಯಗಳನ್ನು ಸ್ಪಷ್ಟಗೊಳಿಸುವುದಕ್ಕಾಗಿ, ಯೆಶಾಯ 10:20-27ನ್ನು ಚರ್ಚಿಸುವ ಮೊದಲು ಯೆಶಾಯ 10:28-32ನ್ನು ಚರ್ಚಿಸಲಾಗಿದೆ.
c ಯೆಶಾಯ 10:20-23ನೆಯ ವಚನಗಳ ಚರ್ಚೆಗಾಗಿ, 155ನೆಯ ಪುಟದಲ್ಲಿರುವ “ಯೆಶಾಯನು ಭವಿಷ್ಯತ್ತಿನ ಕಡೆಗೆ ನೋಟ ಹರಿಸುತ್ತಾನೆ” ಎಂಬ ವಿಷಯವನ್ನು ನೋಡಿರಿ.
d ಜಾರಸ್ತ್ರೀ ಮತ್ತು ರಕ್ತವರ್ಣದ ಮೃಗದ ಗುರುತಿನ ಕುರಿತಾದ ಹೆಚ್ಚಿನ ಮಾಹಿತಿಯು, ವಾಚ್‌ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ! ಎಂಬ ಪುಸ್ತಕದ 34 ಮತ್ತು 35ನೆಯ ಅಧ್ಯಾಯಗಳಲ್ಲಿ ಕೊಡಲ್ಪಟ್ಟಿದೆ.
[ಅಧ್ಯಯನ ಪ್ರಶ್ನೆಗಳು]
[ಪುಟ 155, 156ರಲ್ಲಿರುವ ಚೌಕ/ಚಿತ್ರಗಳು]
ಯೆಶಾಯನು ಭವಿಷ್ಯತ್ತಿನ ಕಡೆಗೆ ನೋಟ ಹರಿಸುತ್ತಾನೆ
ಯೆಶಾಯನ 10ನೆಯ ಅಧ್ಯಾಯವು, ಇಸ್ರಾಯೇಲಿನ ಮೇಲೆ ನ್ಯಾಯ ವಿಧಿಸಲು ಯೆಹೋವನು ಅಶ್ಶೂರರ ಆಕ್ರಮಣವನ್ನು ಹೇಗೆ ಉಪಯೋಗಿಸುವನೆಂಬುದರ ಮೇಲೆ ಮತ್ತು ಯೆರೂಸಲೇಮನ್ನು ರಕ್ಷಿಸುವ ವಿಷಯದಲ್ಲಿ ಆತನು ಮಾಡಿರುವ ವಾಗ್ದಾನದ ಮೇಲೆ ಮುಖ್ಯವಾಗಿ ಗಮನವನ್ನು ಕೇಂದ್ರೀಕರಿಸುತ್ತದೆ. 20ರಿಂದ 23ನೇ ವಚನಗಳು ಈ ಪ್ರವಾದನೆಯ ಮಧ್ಯಭಾಗದಲ್ಲಿರುವುದರಿಂದ, ಅವು ಅದೇ ಸಮಯಾವಧಿಯಲ್ಲಿ ಸಾಮಾನ್ಯ ನೆರವೇರಿಕೆಯನ್ನು ಕಂಡುಕೊಳ್ಳುತ್ತಿರಬಹುದೆಂದು ಯೋಚಿಸಸಾಧ್ಯವಿದೆ. (ಹೋಲಿಸಿ ಯೆಶಾಯ 1:7-9.) ಆದರೆ ಈ ವಚನಗಳ ಶಬ್ದಪ್ರಯೋಗವು ಸೂಚಿಸುವುದೇನೆಂದರೆ, ಯೆರೂಸಲೇಮು ತನ್ನ ನಿವಾಸಿಗಳ ಪಾಪಗಳಿಗೆ ಉತ್ತರ ಕೊಡಬೇಕಾದ ನಂತರದ ಅವಧಿಗಳಿಗೆ ಈ ವಚನಗಳು ನಿರ್ದಿಷ್ಟವಾಗಿ ಕೈತೋರಿಸುತ್ತವೆ.
ಭದ್ರತೆಗಾಗಿ ರಾಜ ಆಹಾಜನು ಅಶ್ಶೂರರ ಸಹಾಯವನ್ನು ಕೋರಲು ಪ್ರಯತ್ನಿಸುತ್ತಾನೆ. ಆದರೆ ಇಂತಹ ಮೂರ್ಖ ಹೆಜ್ಜೆಯನ್ನು, ಬದುಕಿ ಉಳಿದ ಇಸ್ರಾಯೇಲಿನ ಮನೆತನದವರಾರೂ ಮುಂದಕ್ಕೆ ತೆಗೆದುಕೊಳ್ಳಲಾರರು ಎಂದು ಪ್ರವಾದಿಯಾದ ಯೆಶಾಯನು ಮುಂತಿಳಿಸುತ್ತಾನೆ. ಯೆಶಾಯ 10:20 ಹೇಳುವುದೇನೆಂದರೆ, ಅವರು “ಯೆಹೋವನೆಂಬ ಇಸ್ರಾಯೇಲ್ಯರ ಸದಮಲಸ್ವಾಮಿಯನ್ನು ಯಥಾರ್ಥವಾಗಿ ಆಧಾರಮಾಡಿಕೊಳ್ಳುವರು.” ಆದರೆ ಕೆಲವರೇ ಹಾಗೆ ಮಾಡುವರೆಂದು 21ನೆಯ ವಚನವು ತೋರಿಸುತ್ತದೆ: “ಜನಶೇಷವು . . . ದೇವರ ಕಡೆಗೆ ತಿರುಗಿಕೊಳ್ಳುವದು.” ಇದು ನಮಗೆ ಶೆಯರ್ ಯಾಶೂಬನೆಂಬ ಯೆಶಾಯನ ಮಗನ ಜ್ಞಾಪಕವನ್ನುಂಟುಮಾಡುತ್ತದೆ. ಅವನು ಇಸ್ರಾಯೇಲಿನಲ್ಲಿ ಒಂದು ಗುರುತಾಗಿದ್ದಾನೆ ಮತ್ತು ಅವನ ಹೆಸರಿನ ಅರ್ಥ, ಒಂದು “ಜನಶೇಷವು ಮಾತ್ರ ಹಿಂದಿರುಗುವದು” ಎಂದಾಗಿದೆ. (ಯೆಶಾಯ 7:3) 10ನೆಯ ಅಧ್ಯಾಯದ 22ನೆಯ ವಚನವು, ನಿಶ್ಚಿತಗೊಳಿಸಲ್ಪಟ್ಟಿರುವ ಒಂದು “ಪ್ರಲಯ”ವು ಬರಲಿದೆ ಎಂಬ ಎಚ್ಚರಿಕೆಯನ್ನು ನೀಡುತ್ತದೆ. ಇಂತಹ ಪ್ರಲಯವು ನ್ಯಾಯವಾಗಿರಲಿದೆ, ಏಕೆಂದರೆ ಇದು ದಂಗೆಕೋರ ಜನರಿಗೆ ನೀಡಲ್ಪಟ್ಟ ಯೋಗ್ಯ ಶಿಕ್ಷೆಯಾಗಿದೆ. ಆದುದರಿಂದ ‘ಸಮುದ್ರದ ಉಸುಬಿನಂತೆ ಅಸಂಖ್ಯವಾಗಿರುವ’ ಜನನಿಬಿಡವಾದ ಜನಾಂಗದಿಂದ ಕೇವಲ ಒಂದು ಶೇಷವು ಮಾತ್ರ ಹಿಂದಿರುಗುವುದು. ಬರಲಿರುವ ಈ ಪ್ರಲಯವು ಇಡೀ ದೇಶವನ್ನೇ ಬಾಧಿಸುವುದೆಂದು 23ನೆಯ ವಚನವು ಎಚ್ಚರಿಸುತ್ತದೆ. ಈ ಸಮಯ ಯೆರೂಸಲೇಮ್ ಖಂಡಿತವಾಗಿಯೂ ನಾಶವಾಗುವುದು.
ಯೆಹೋವನು ಬಾಬೆಲ್ ಸಾಮ್ರಾಜ್ಯವನ್ನು ತನ್ನ ‘ಕೋಲಿನಂತೆ’ ಉಪಯೋಗಿಸಿದಾಗ, ಸಾ.ಶ.ಪೂ. 607ರಲ್ಲಿ ಏನು ಸಂಭವಿಸಿತೆಂಬುದನ್ನು ಈ ವಚನಗಳು ಚೆನ್ನಾಗಿ ವರ್ಣಿಸುತ್ತವೆ. ಯೆರೂಸಲೇಮಿನೊಂದಿಗೆ ಇಡೀ ಜನಾಂಗವು ಆಕ್ರಮಣಕಾರನಿಗೆ ಶರಣಾಯಿತು.
ಯೆಹೂದ್ಯರು 70 ವರ್ಷಗಳ ವರೆಗೆ ಬಾಬೆಲಿನಲ್ಲಿ ಸೆರೆವಾಸಿಗಳಾಗಿದ್ದರು. ತರುವಾಯ, ‘ಒಂದು ಶೇಷವು ಮಾತ್ರ’ ಸತ್ಯಾರಾಧನೆಯನ್ನು ಪುನಃ ಸ್ಥಾಪಿಸಲು ಯೆರೂಸಲೇಮಿಗೆ ಹಿಂದಿರುಗಿತು.ಯೆಶಾಯ 10:20-23ರಲ್ಲಿರುವ ಪ್ರವಾದನೆಗೆ ಪ್ರಥಮ ಶತಮಾನದಲ್ಲಿ ಒಂದು ಹೆಚ್ಚಿನ ನೆರವೇರಿಕೆಯಿತ್ತೆಂಬುದನ್ನು ರೋಮಾಪುರ 9:27, 28 ತೋರಿಸುತ್ತದೆ. (ಹೋಲಿಸಿ ಯೆಶಾಯ 1:9; ರೋಮಾಪುರ 9:29.) ಆತ್ಮಿಕ ಅರ್ಥದಲ್ಲಿ ಯೆಹೂದ್ಯರ ಒಂದು ‘ಶೇಷವು’ ಸಾ.ಶ. ಒಂದನೆಯ ಶತಮಾನದಲ್ಲಿ ಯೆಹೋವನಿಗೆ ‘ಹಿಂದಿರುಗಿತು’ ಎಂದು ಪೌಲನು ವಿವರಿಸುತ್ತಾನೆ. ಇದು ಹೇಗೆಂದರೆ, ನಂಬಿಗಸ್ತ ಯೆಹೂದ್ಯರಲ್ಲಿ ಕೆಲವರು ಯೇಸು ಕ್ರಿಸ್ತನ ಹಿಂಬಾಲಕರಾದರು ಮತ್ತು ಯೆಹೋವನನ್ನು ‘ಆತ್ಮದಿಂದಲೂ ಸತ್ಯದಿಂದಲೂ’ ಆರಾಧಿಸಲಾರಂಭಿಸಿದರು. (ಯೋಹಾನ 4:24) ತದನಂತರ ವಿಶ್ವಾಸವಿಟ್ಟ ಅನ್ಯರು ಇವರೊಂದಿಗೆ ಸೇರಿ, ಆತ್ಮಿಕ ರಾಷ್ಟ್ರವನ್ನು ಅಂದರೆ ‘ದೇವರ ಇಸ್ರಾಯೇಲನ್ನು’ ಸೃಷ್ಟಿಸಿದರು. (ಗಲಾತ್ಯ 6:16) ಈ ಸಂದರ್ಭದಲ್ಲಿ ಯೆಶಾಯ 10:20ರ ಮಾತುಗಳು ನೆರವೇರಿದವು: ಯೆಹೋವನಿಗೆ ಸಮರ್ಪಿತವಾದ ಜನಾಂಗವು ಮತ್ತೊಮ್ಮೆ ಆತನನ್ನು “ಬಿಟ್ಟು,” ಬೆಂಬಲಕ್ಕಾಗಿ ಮಾನವ ಮೂಲಗಳ ಕಡೆಗೆ ನೋಡಲೇ ಇಲ್ಲ.
[ಪುಟ 147ರಲ್ಲಿರುವ ಚಿತ್ರ]
ಜನಾಂಗಗಳನ್ನು ಸಂಗ್ರಹಿಸಿಕೊಳ್ಳುವುದು, ಒಂದು ಗೂಡಿನಿಂದ ಮೊಟ್ಟೆಗಳನ್ನು ಸಂಗ್ರಹಿಸಿಕೊಳ್ಳುವಷ್ಟೇ ಸುಲಭವಾಗಿದೆಯೆಂದು ಸನ್ಹೇರೀಬನು ತರ್ಕಿಸುತ್ತಾನೆ