ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 25

ನಂಬಿಕೆ, ನಡವಳಿಕೆ ಮತ್ತು ಪ್ರೀತಿಯ ಕುರಿತು ಸಲಹೆ

ನಂಬಿಕೆ, ನಡವಳಿಕೆ ಮತ್ತು ಪ್ರೀತಿಯ ಕುರಿತು ಸಲಹೆ

ಯಾಕೋಬ, ಪೇತ್ರ, ಯೋಹಾನ ಮತ್ತು ಯೂದರು ತಮ್ಮ ಜೊತೆ ವಿಶ್ವಾಸಿಗಳನ್ನು ಪ್ರೋತ್ಸಾಹಿಸಲಿಕ್ಕಾಗಿ ಪತ್ರಗಳನ್ನು ಬರೆಯುತ್ತಾರೆ

ಯಾಕೋಬ ಮತ್ತು ಯೂದ ಯೇಸುವಿನ ಮಲಸಹೋದರರಾಗಿದ್ದರೆ, ಪೇತ್ರ ಹಾಗೂ ಯೋಹಾನ ಯೇಸುವಿನ 12 ಅಪೊಸ್ತಲರಲ್ಲಿ ಇಬ್ಬರಾಗಿದ್ದರು. ಆ ನಾಲ್ವರು ಒಟ್ಟು ಏಳು ಪತ್ರಗಳನ್ನು ಬರೆದಿದ್ದು ಅವುಗಳನ್ನು ನಾವು ಕ್ರೈಸ್ತ ಗ್ರೀಕ್‌ ಶಾಸ್ತ್ರದಲ್ಲಿ ಕಾಣಬಹುದು. ಆ ಪ್ರತಿಯೊಂದು ಪತ್ರಕ್ಕೂ ಅದರ ಲೇಖಕನ ಹೆಸರನ್ನೇ ಕೊಡಲಾಗಿದೆ. ಯೆಹೋವನಿಗೂ ಆತನ ರಾಜ್ಯಕ್ಕೂ ನಿಷ್ಠಾವಂತರಾಗಿರುವಂತೆ ಕ್ರೈಸ್ತರಿಗೆ ಸಹಾಯಮಾಡುವುದೇ ಆ ಪತ್ರಗಳ ಉದ್ದೇಶವಾಗಿತ್ತು. ಅವುಗಳಲ್ಲಿರುವ ಬುದ್ಧಿವಾದವು ದೇವರಿಂದ ಪ್ರೇರಿಸಲ್ಪಟ್ಟದ್ದಾಗಿವೆ.

ನಂಬಿಕೆಯನ್ನು ತೋರಿಸಿಕೊಡಿ. ಕೇವಲ ನಂಬಿಕೆಯಿದೆ ಎಂದು ಹೇಳಿದರೆ ಸಾಲದು. ಏಕೆಂದರೆ, ನಿಜ ನಂಬಿಕೆಯು ಕ್ರಿಯೆ ಮಾಡುವಂತೆ ಪ್ರಚೋದಿಸುತ್ತದೆ. ಆದ್ದರಿಂದಲೇ, ‘ಕ್ರಿಯೆಗಳಿಲ್ಲದ ನಂಬಿಕೆಯು ಸತ್ತದ್ದಾಗಿದೆ’ ಎಂದು ಯಾಕೋಬನು ಬರೆದನು. (ಯಾಕೋಬ 2:26) ಕಷ್ಟಕಾರ್ಪಣ್ಯಗಳ ಸಮಯದಲ್ಲಿ ನಂಬಿಕೆಯಿಂದ ಕ್ರಿಯೆಗೈಯುವಾಗ ನಮ್ಮ ತಾಳ್ಮೆಯು ಹೆಚ್ಚುತ್ತದೆ. ಒಬ್ಬ ಕ್ರೈಸ್ತನು ಕಷ್ಟಕಾರ್ಪಣ್ಯಗಳನ್ನು ಯಶಸ್ವಿಯಾಗಿ ಜಯಿಸಬೇಕಾದರೆ ವಿವೇಕಕ್ಕಾಗಿ ದೇವರಲ್ಲಿ ಮೊರೆಯಿಡಬೇಕು. ತನಗೆ ದೇವರು ವಿವೇಕವನ್ನು ದಯಪಾಲಿಸುವನು ಎಂಬ ನಂಬಿಕೆ ಅವನಲ್ಲಿರಬೇಕು. ಹೀಗೆ ತಾಳ್ಮೆಯನ್ನು ತೋರಿಸುವಾಗ ಅವನು ದೇವರ ಅನುಗ್ರಹವನ್ನು ಸಂಪಾದಿಸುತ್ತಾನೆ. (ಯಾಕೋಬ 1:2-6, 12) ಯೆಹೋವ ದೇವರ ಆರಾಧಕನು ನಂಬಿಕೆಯಿಂದ ಸಮಗ್ರತೆ ಕಾಪಾಡಿಕೊಳ್ಳುವಲ್ಲಿ ದೇವರು ಖಂಡಿತವಾಗಿಯೂ ಅದಕ್ಕೆ ಪ್ರತಿಕ್ರಿಯೆ ತೋರಿಸುವನು. ಅದನ್ನೇ ಯಾಕೋಬನು ಹೀಗೆ ಹೇಳಿದನು: “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.”—ಯಾಕೋಬ 4:8.

ಒಬ್ಬ ಕ್ರೈಸ್ತನ ನಂಬಿಕೆಯು ಪ್ರಲೋಭನೆ ಹಾಗೂ ಅನೈತಿಕ ಪ್ರಭಾವಗಳನ್ನು ತಡೆದು ನಿಲ್ಲಿಸುವಷ್ಟು ಬಲವಾಗಿರಬೇಕು. ದಿನದಿನವೂ ಹದಗೆಡುತ್ತಿದ್ದ ನೈತಿಕತೆಯನ್ನು ನೋಡಿ ಯೂದನು ತನ್ನ ಜೊತೆ ವಿಶ್ವಾಸಿಗಳಿಗೆ ‘ನಂಬಿಕೆಗಾಗಿ ನೀವು ಕಠಿನ ಹೋರಾಟವನ್ನು ಮಾಡಿರಿ’ ಎಂಬ ಎಚ್ಚರಿಕೆಯ ಮಾತನ್ನು ಬರೆದನು.—ಯೂದ 3.

ಸದಾ ಶುದ್ಧ ನಡವಳಿಕೆಯಿರಲಿ. ತನ್ನ ಆರಾಧಕರು ಪವಿತ್ರರಾಗಿರಬೇಕೆಂದು ಯೆಹೋವನು ಬಯಸುತ್ತಾನೆ. ಅಂದರೆ ಅವರು ಎಲ್ಲ ವಿಷಯಗಳಲ್ಲೂ ಶುದ್ಧರೂ ನಿರ್ಮಲರೂ ಆಗಿರಬೇಕು. ಅದರ ಕುರಿತು ಪೇತ್ರನು ಹೀಗೆ ಬರೆಯುತ್ತಾನೆ, “ನಿಮ್ಮ ಎಲ್ಲ ನಡವಳಿಕೆಯಲ್ಲಿ ನೀವು ಸಹ ಪವಿತ್ರರಾಗಿರಿ. ಏಕೆಂದರೆ, ‘ನಾನು [ಯೆಹೋವನು] ಪವಿತ್ರನಾಗಿರುವುದರಿಂದ ನೀವೂ ಪವಿತ್ರರಾಗಿರಬೇಕು’ ಎಂದು ಬರೆಯಲ್ಪಟ್ಟಿದೆ.” (1 ಪೇತ್ರ 1:15, 16) ಪೇತ್ರನು ಇನ್ನೊಂದು ವಿಷಯವನ್ನೂ ತಿಳಿಸಿದನು. “ಕ್ರಿಸ್ತನು ಸಹ ನಿಮಗೋಸ್ಕರ ಕಷ್ಟವನ್ನು ಅನುಭವಿಸಿ ನೀವು ತನ್ನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸುವಂತೆ ನಿಮಗೋಸ್ಕರ ಮಾದರಿಯನ್ನು ತೋರಿಸಿ ಹೋದನು” ಎಂದು ಅವನು ಬರೆದನು. (1 ಪೇತ್ರ 2:21) ಹೌದು, ಅನುಸರಿಸಲಿಕ್ಕಾಗಿ ಕ್ರೈಸ್ತರಿಗೆ ಕ್ರಿಸ್ತನು ಉತ್ತಮ ಮಾದರಿ ಇಟ್ಟಿದ್ದಾನೆ. ದೇವರ ಮಟ್ಟಕ್ಕನುಸಾರ ಜೀವಿಸಲಿಕ್ಕಾಗಿ ಕೆಲವೊಮ್ಮೆ ಕ್ರೈಸ್ತರು ಕಷ್ಟತೊಂದರೆಗಳನ್ನು ಸಹಿಸಿಕೊಳ್ಳಬೇಕಾದರೂ ಅವರು “ಒಳ್ಳೇ ಮನಸ್ಸಾಕ್ಷಿಯುಳ್ಳವರಾಗಿ” ಇರುತ್ತಾರೆ. (1 ಪೇತ್ರ 3:16, 17) ಕ್ರೈಸ್ತರು ದೇವರ ನ್ಯಾಯತೀರ್ಪಿನ ದಿನಕ್ಕಾಗಿ ಹಾಗೂ ‘ನೀತಿಯು ವಾಸವಾಗಿರುವ’ ನೂತನ ಲೋಕಕ್ಕಾಗಿ ಎದುರು ನೋಡುತ್ತಿರುವಾಗ ಪವಿತ್ರ ನಡತೆಯುಳ್ಳವರೂ ದೇವಭಕ್ತಿಯ ಕ್ರಿಯೆಗಳುಳ್ಳವರೂ ಆಗಿರುವಂತೆ ಪೇತ್ರನು ಪ್ರೋತ್ಸಾಹ ನೀಡುತ್ತಾನೆ.—2 ಪೇತ್ರ 3:11-13.

“ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.”—ಯಾಕೋಬ 4:8

ಪ್ರೀತಿಯನ್ನು ತೋರಿಸಿ. “ದೇವರು ಪ್ರೀತಿಯಾಗಿದ್ದಾನೆ” ಎಂದು ಯೋಹಾನನು ಬರೆಯುತ್ತಾನೆ. ಯೇಸುವನ್ನು “ನಮ್ಮ ಪಾಪಗಳಿಗಾಗಿ ಪಾಪನಿವಾರಣಾರ್ಥಕ ಯಜ್ಞವಾಗಿ” ಕಳುಹಿಸಿಕೊಡುವ ಮೂಲಕ ದೇವರು ತನ್ನ ಮಹಾ ಪ್ರೀತಿಯನ್ನು ತೋರಿಸಿಕೊಟ್ಟನೆಂಬುದಕ್ಕೆ ಯೋಹಾನನು ನಮ್ಮ ಗಮನ ಸೆಳೆಯುತ್ತಾನೆ. ದೇವರ ಈ ಪ್ರೀತಿಗೆ ಕ್ರೈಸ್ತರು ಹೇಗೆ ಪ್ರತಿಕ್ರಿಯಿಸಬೇಕು? ಯೋಹಾನನು ವಿವರಿಸಿದ್ದು, “ಪ್ರಿಯರೇ, ದೇವರು ನಮ್ಮನ್ನು ಹೀಗೆ ಪ್ರೀತಿಸಿರುವಲ್ಲಿ, ನಾವು ಸಹ ಒಬ್ಬರನ್ನೊಬ್ಬರು ಪ್ರೀತಿಸುವ ಹಂಗಿನಲ್ಲಿದ್ದೇವೆ.” (1 ಯೋಹಾನ 4:8-11) ನಾವು ಹಾಗೆ ಪ್ರೀತಿ ತೋರಿಸುವ ಒಂದು ವಿಧವು ನಮ್ಮ ಜೊತೆ ವಿಶ್ವಾಸಿಗಳಿಗೆ ಅತಿಥಿ ಸತ್ಕಾರ ಮಾಡುವ ಮೂಲಕವಾಗಿದೆ.—3 ಯೋಹಾನ 5-8.

ಯೆಹೋವನ ಆರಾಧಕರು ಆತನೆಡೆಗೆ ತಮಗಿರುವ ಪ್ರೀತಿಯನ್ನು ಹೇಗೆ ತೋರಿಸಬಲ್ಲರು? ಈ ಪ್ರಶ್ನೆಗೆ ಯೋಹಾನನು, “ದೇವರ ಮೇಲಣ ಪ್ರೀತಿ ಏನೆಂದರೆ ನಾವು ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವುದೇ; ಆದರೂ ಆತನ ಆಜ್ಞೆಗಳು ಭಾರವಾದವುಗಳಲ್ಲ” ಎಂದು ಉತ್ತರಿಸುತ್ತಾನೆ. (1 ಯೋಹಾನ 5:3; 2 ಯೋಹಾನ 6) ಆದುದರಿಂದ, “ನಿತ್ಯಜೀವವನ್ನು ದೃಷ್ಟಿಯಲ್ಲಿಟ್ಟವರಾಗಿ” ದೇವರಿಗೆ ವಿಧೇಯರಾಗಿರುವವರು ದೇವರು ತಮ್ಮನ್ನು ಸದಾ ಪ್ರೀತಿಸುತ್ತಾನೆಂಬ ಆಶ್ವಾಸನೆಯನ್ನು ಹೊಂದಿರಬಲ್ಲರು.—ಯೂದ 21.

ಯಾಕೋಬ; 1 ಪೇತ್ರ; 2 ಪೇತ್ರ; 1 ಯೋಹಾನ; 2 ಯೋಹಾನ; 3 ಯೋಹಾನ; ಯೂದ ಪುಸ್ತಕಗಳ ಮೇಲೆ ಆಧಾರಿತವಾಗಿದೆ.