ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ ಹದಿನೈದು

ದೇವರು ಒಪ್ಪುವ ಆರಾಧನೆ

ದೇವರು ಒಪ್ಪುವ ಆರಾಧನೆ
  • ಎಲ್ಲ ಧರ್ಮಗಳು ದೇವರಿಗೆ ಮೆಚ್ಚಿಗೆಯಾಗುತ್ತವೊ?

  • ನಾವು ಸತ್ಯಧರ್ಮವನ್ನು ಹೇಗೆ ಗುರುತಿಸಬಲ್ಲೆವು?

  • ಇಂದು ಭೂಮಿಯಲ್ಲಿ ಯಾರು ದೇವರ ಸತ್ಯಾರಾಧಕರಾಗಿದ್ದಾರೆ?

1. ದೇವರನ್ನು ಸರಿಯಾದ ರೀತಿಯಲ್ಲಿ ಆರಾಧಿಸುವಲ್ಲಿ ನಾವು ಹೇಗೆ ಪ್ರಯೋಜನಪಡೆಯುವೆವು?

 ಯೆಹೋವ ದೇವರು ನಮ್ಮ ವಿಷಯದಲ್ಲಿ ಗಾಢವಾಗಿ ಚಿಂತಿಸುತ್ತಾನೆ ಮತ್ತು ಆತನ ಪ್ರೀತಿಯ ಮಾರ್ಗದರ್ಶನದಿಂದ ನಮಗೆ ಪ್ರಯೋಜನವಾಗಬೇಕೆಂಬುದೇ ಆತನ ಬಯಕೆ. ಸರಿಯಾದ ರೀತಿಯಲ್ಲಿ ನಾವಾತನನ್ನು ಆರಾಧಿಸುವಲ್ಲಿ, ನಾವು ಸಂತೋಷದಿಂದಿರುವೆವು ಮತ್ತು ಜೀವನದಲ್ಲಿ ಅನೇಕ ಸಮಸ್ಯೆಗಳಿಂದ ದೂರವಿರುವೆವು. ನಮಗೆ ಆತನ ಆಶೀರ್ವಾದವೂ ಸಹಾಯವೂ ಇರುವುದು. (ಯೆಶಾಯ 48:17) ಆದರೂ, ದೇವರ ಬಗ್ಗೆ ಸತ್ಯವನ್ನು ಬೋಧಿಸುತ್ತವೆಂದು ಹೇಳಿಕೊಳ್ಳುವ ನೂರಾರು ಧರ್ಮಗಳಿವೆ. ಆದರೆ ದೇವರು ಯಾರು ಮತ್ತು ಆತನು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆಂಬ ವಿಷಯದಲ್ಲಿ ಈ ಎಲ್ಲ ಧರ್ಮಗಳ ಬೋಧನೆಗಳಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ.

2. ಯೆಹೋವನನ್ನು ಆರಾಧಿಸುವ ಸರಿಯಾದ ಮಾರ್ಗವನ್ನು ನಾವು ಹೇಗೆ ತಿಳಿದುಕೊಳ್ಳಬಲ್ಲೆವು, ಮತ್ತು ಇದನ್ನು ಅರ್ಥಮಾಡಿಕೊಳ್ಳಲು ಯಾವ ದೃಷ್ಟಾಂತವು ನಮಗೆ ಸಹಾಯಮಾಡುತ್ತದೆ?

2 ಯೆಹೋವನನ್ನು ಆರಾಧಿಸುವ ಸರಿಯಾದ ಮಾರ್ಗವು ಯಾವುದೆಂದು ನೀವು ಹೇಗೆ ತಿಳಿದುಕೊಳ್ಳಬಲ್ಲಿರಿ? ಅದಕ್ಕೆ ಎಲ್ಲ ಧರ್ಮಗಳ ಬೋಧನೆಗಳನ್ನು ನೀವು ಅಧ್ಯಯನ ಮಾಡಿ ಅವನ್ನು ಹೋಲಿಸಿ ನೋಡಬೇಕಾಗಿರುವುದಿಲ್ಲ. ಸತ್ಯಾರಾಧನೆಯ ಬಗ್ಗೆ ಬೈಬಲು ನಿಜವಾಗಿಯೂ ಏನನ್ನು ಬೋಧಿಸುತ್ತದೆ ಎಂದು ಕಲಿತುಕೊಳ್ಳುವುದು ಮಾತ್ರ ಅಗತ್ಯ. ದೃಷ್ಟಾಂತಕ್ಕೆ: ಅನೇಕ ದೇಶಗಳಲ್ಲಿ ಖೋಟಾ ನೋಟುಗಳ ಸಮಸ್ಯೆಯಿದೆ. ನಿಮಗೆ ಅಂತಹ ಖೋಟಾ ನೋಟುಗಳನ್ನು ಪತ್ತೆಹಚ್ಚುವ ಕೆಲಸ ಕೊಡಲ್ಪಡುವಲ್ಲಿ, ನೀವು ಏನು ಮಾಡುವಿರಿ? ಪ್ರತಿಯೊಂದು ಖೋಟಾ ನೋಟು ಹೇಗೆ ತೋರುತ್ತದೆಂಬುದನ್ನು ನೆನಪಿನಲ್ಲಿಡುತ್ತ ಹೋಗುವಿರೊ? ಇಲ್ಲ. ನೀವು ಅಸಲಿ ನೋಟು ಹೇಗೆ ಇರುತ್ತದೆಂಬುದನ್ನು ಪರೀಕ್ಷಿಸುವುದರಲ್ಲಿ ಸಮಯವನ್ನು ಕಳೆಯುವುದು ಹೆಚ್ಚು ಪ್ರಯೋಜನಕರ. ಅಸಲಿ ನೋಟು ಹೇಗೆ ಕಾಣುತ್ತದೆಂದು ನೀವು ಒಮ್ಮೆ ಪರೀಕ್ಷಿಸಿ ಕಂಡುಹಿಡಿಯುವಲ್ಲಿ, ಖೋಟಾ ನೋಟನ್ನು ನೀವು ಗುರುತಿಸಶಕ್ತರಾಗುವಿರಿ. ತದ್ರೀತಿ, ಸತ್ಯಧರ್ಮವನ್ನು ಗುರುತಿಸುವುದು ಹೇಗೆಂದು ನಾವು ಕಲಿತುಕೊಳ್ಳುವಲ್ಲಿ, ಸುಳ್ಳುಧರ್ಮಗಳನ್ನು ನಾವು ಗುರುತಿಸಶಕ್ತರಾಗುವೆವು.

3. ಯೇಸುವಿಗನುಸಾರ, ನಮಗೆ ದೇವರ ಒಪ್ಪಿಗೆಯಿರಬೇಕಾದರೆ ನಾವೇನು ಮಾಡತಕ್ಕದ್ದು?

3 ನಾವು ಯೆಹೋವನನ್ನು ಆತನು ಒಪ್ಪುವ ರೀತಿಯಲ್ಲಿ ಆರಾಧಿಸುವುದು ಪ್ರಾಮುಖ್ಯ. ಎಲ್ಲ ಧರ್ಮಗಳು ದೇವರಿಗೆ ಮೆಚ್ಚಿಗೆಯಾಗಿವೆಯೆಂದು ಅನೇಕರು ನಂಬುತ್ತಾರಾದರೂ, ಬೈಬಲು ಹಾಗೆ ಬೋಧಿಸುವುದಿಲ್ಲ. ಕ್ರೈಸ್ತರೆಂದು ಕೇವಲ ಹೇಳಿಕೊಳ್ಳುವುದು ಸಹ ಸಾಲದು. ಯೇಸು ಹೇಳಿದ್ದು: “ನನ್ನನ್ನು ಸ್ವಾಮೀ, ಸ್ವಾಮೀ ಅನ್ನುವವರೆಲ್ಲರು ಪರಲೋಕರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ; ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ಪರಲೋಕರಾಜ್ಯಕ್ಕೆ ಸೇರುವನು.” ಆದುದರಿಂದ, ದೇವರ ಒಪ್ಪಿಗೆಯಿರಬೇಕಾದರೆ, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ ಎಂಬುದನ್ನು ಕಲಿತು ಅದನ್ನು ಮಾಡಬೇಕಾಗಿದೆ. ದೇವರ ಚಿತ್ತವನ್ನು ಮಾಡದಿರುವವರನ್ನು ಯೇಸು “ಧರ್ಮವನ್ನು ಮೀರಿನಡೆಯುವವರೇ” ಎಂದು ಕರೆದನು. (ಮತ್ತಾಯ 7:21-23) ಖೋಟಾ ನೋಟುಗಳಂತೆಯೇ, ಸುಳ್ಳುಧರ್ಮಕ್ಕೆ ಯಾವುದೇ ನಿಜ ಬೆಲೆ ಇರುವುದಿಲ್ಲ. ಇನ್ನೂ ಹೇಳುವುದಾದರೆ, ಅಂತಹ ಧರ್ಮ ವಾಸ್ತವವಾಗಿ ಹಾನಿಕಾರಕವಾಗಿದೆ.

4. ಎರಡು ದಾರಿಗಳ ವಿಷಯದಲ್ಲಿ ಯೇಸು ಹೇಳಿದ ಮಾತುಗಳ ಅರ್ಥವೇನು, ಮತ್ತು ಅವುಗಳಲ್ಲಿ ಪ್ರತಿಯೊಂದು ದಾರಿಯು ಎಲ್ಲಿಗೆ ನಡೆಸುತ್ತದೆ?

4 ಯೆಹೋವನು ಭೂಮಿಯಲ್ಲಿರುವ ಪ್ರತಿಯೊಬ್ಬನಿಗೂ ನಿತ್ಯಜೀವವನ್ನು ಪಡೆದುಕೊಳ್ಳುವ ಅವಕಾಶವನ್ನು ಕೊಡುತ್ತಾನೆ. ಆದರೆ, ಪರದೈಸಿನಲ್ಲಿ ನಿತ್ಯಜೀವ ಪಡೆಯಬೇಕಾದರೆ ನಾವು ದೇವರನ್ನು ಸರಿಯಾದ ವಿಧದಲ್ಲಿ ಆರಾಧಿಸಿ, ಆತನಿಗೆ ಒಪ್ಪಿಗೆಯಾಗುವ ರೀತಿಯಲ್ಲಿ ಈಗ ಜೀವಿಸತಕ್ಕದ್ದು. ವಿಷಾದಕರ ಸಂಗತಿಯೇನೆಂದರೆ, ಹಾಗೆ ಮಾಡಲು ಅನೇಕರು ನಿರಾಕರಿಸುತ್ತಾರೆ. ಈ ಕಾರಣದಿಂದಲೇ ಯೇಸು ಹೇಳಿದ್ದು: “ಇಕ್ಕಟ್ಟಾದ ಬಾಗಲಿನಿಂದ ಒಳಕ್ಕೆ ಹೋಗಿರಿ. ನಾಶಕ್ಕೆ ಹೋಗುವ ಬಾಗಲು ದೊಡ್ಡದು, ದಾರಿ ಅಗಲವು; ಅದರಲ್ಲಿ ಹೋಗುವವರು ಬಹು ಜನ. ನಿತ್ಯಜೀವಕ್ಕೆ ಹೋಗುವ ಬಾಗಲು ಇಕ್ಕಟ್ಟು, ದಾರಿ ಬಿಕ್ಕಟ್ಟು; ಅದನ್ನು ಕಂಡುಹಿಡಿಯುವವರು ಸ್ವಲ್ಪ ಜನ.” (ಮತ್ತಾಯ 7:13, 14) ಸತ್ಯಧರ್ಮವು ನಿತ್ಯಜೀವಕ್ಕೆ ನಡೆಸುತ್ತದೆ. ಆದರೆ ಸುಳ್ಳುಧರ್ಮವು ನಾಶನಕ್ಕೆ ನಡೆಸುತ್ತದೆ. ಯಾವ ಮನುಷ್ಯನೂ ನಾಶವಾಗಲು ಯೆಹೋವನು ಬಯಸದ ಕಾರಣ ಎಲ್ಲೆಲ್ಲಿಯೂ ಇರುವ ಜನರು ತನ್ನ ಕುರಿತು ಕಲಿಯುವಂತೆ ಆತನು ಅವರಿಗೆ ಸಂದರ್ಭವನ್ನು ಕೊಡುತ್ತಿದ್ದಾನೆ. (2 ಪೇತ್ರ 3:9) ಹಾಗಾದರೆ ವಾಸ್ತವವಾದ ವಿಷಯವೇನಂದರೆ, ನಾವು ದೇವರನ್ನು ಆರಾಧಿಸುವ ರೀತಿಯು ನಮಗೆ ಒಂದೇ ಜೀವ ಇಲ್ಲವೆ ಮರಣವಾಗಿ ಪರಿಣಮಿಸುತ್ತದೆ.

ಸತ್ಯಧರ್ಮವನ್ನು ಗುರುತಿಸುವ ವಿಧ

5. ಸತ್ಯಧರ್ಮವನ್ನು ಕಾರ್ಯರೂಪಕ್ಕೆ ಹಾಕುವವರನ್ನು ನಾವು ಹೇಗೆ ಗುರುತಿಸಬಲ್ಲೆವು?

5 ‘ನಿತ್ಯಜೀವಕ್ಕೆ ಹೋಗುವ ದಾರಿಯನ್ನು’ ಕಂಡುಹಿಡಿಯುವುದು ಹೇಗೆ? ಸತ್ಯಧರ್ಮವು, ಅದನ್ನು ಕಾರ್ಯರೂಪಕ್ಕೆ ಹಾಕುವವರ ಜೀವನಗಳಿಂದ ವ್ಯಕ್ತವಾಗುವುದೆಂದು ಯೇಸು ನುಡಿದನು. “ಅವರ ಫಲಗಳಿಂದ ಅವರನ್ನು ತಿಳುಕೊಳ್ಳುವಿರಿ” ಎಂದನವನು. “ಒಳ್ಳೇ ಮರಗಳೆಲ್ಲಾ ಒಳ್ಳೇ ಫಲವನ್ನು ಕೊಡುವವು.” (ಮತ್ತಾಯ 7:16, 17) ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಸತ್ಯಧರ್ಮವನ್ನು ಕಾರ್ಯರೂಪಕ್ಕೆ ಹಾಕುವವರನ್ನು ಅವರು ಏನನ್ನು ನಂಬುತ್ತಾರೊ ಅದರಿಂದ ಮತ್ತು ಅವರ ನಡತೆಯಿಂದ ಗುರುತಿಸಬಹುದು. ಸತ್ಯಾರಾಧಕರು ಪರಿಪೂರ್ಣರಲ್ಲವಾದರೂ ಮತ್ತು ತಪ್ಪುಗಳನ್ನು ಮಾಡುತ್ತಾರಾದರೂ, ಒಂದು ಗುಂಪಾಗಿ ಅವರು ದೇವರ ಚಿತ್ತವನ್ನು ಮಾಡಲು ಪ್ರಯತ್ನಿಸುತ್ತಾರೆ. ಆದುದರಿಂದ, ಸತ್ಯಧರ್ಮವನ್ನು ಕಾರ್ಯರೂಪಕ್ಕೆ ಹಾಕುವವರನ್ನು ಗುರುತಿಸುವ ಆರು ವಿಶಿಷ್ಟಾಂಶಗಳನ್ನು ಪರಿಗಣಿಸೋಣ.

6, 7. ಬೈಬಲಿನ ಬಗ್ಗೆ ದೇವರ ಸೇವಕರಿಗೆ ಯಾವ ನೋಟವಿದೆ, ಮತ್ತು ಈ ವಿಷಯದಲ್ಲಿ ಯೇಸು ಹೇಗೆ ಮಾದರಿಯನ್ನಿಟ್ಟನು?

6 ದೇವರ ಸೇವಕರು ತಮ್ಮ ಬೋಧನೆಗಳನ್ನು ಬೈಬಲಿನ ಮೇಲೆ ಆಧರಿಸುತ್ತಾರೆ. ಬೈಬಲು ತಾನೇ ಹೇಳುವುದು: “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧನಾಗುವನು.” (2 ತಿಮೊಥೆಯ 3:16, 17) ಅಪೊಸ್ತಲ ಪೌಲನು ಜೊತೆಕ್ರೈಸ್ತರಿಗೆ ಬರೆದುದು: ‘ನೀವು ದೇವರ ವಾಕ್ಯವನ್ನು ನಮ್ಮಿಂದ ಕೇಳಿದಾಗ ಅದನ್ನು ಮನುಷ್ಯರ ವಾಕ್ಯವೆಂದೆಣಿಸದೆ ದೇವರ ವಾಕ್ಯವೆಂದೇ ತಿಳಿದು ಅಂಗೀಕರಿಸಿದ್ದೀರಿ.’ (1 ಥೆಸಲೊನೀಕ 2:13) ಆದಕಾರಣ, ಸತ್ಯಧರ್ಮದ ನಂಬಿಕೆಗಳು ಹಾಗೂ ಆಚರಣೆಗಳು, ಮಾನವ ದೃಷ್ಟಿಕೋನಗಳು ಮತ್ತು ಸಂಪ್ರದಾಯಗಳ ಮೇಲೆ ಹೊಂದಿಕೊಂಡಿರುವುದಿಲ್ಲ. ಅವುಗಳಿಗೆ ಆಧಾರವು ದೇವರ ಪ್ರೇರಿತ ವಾಕ್ಯವಾದ ಬೈಬಲಾಗಿರುತ್ತದೆ.

7 ಈ ವಿಷಯದಲ್ಲಿ ಯೇಸು ಕ್ರಿಸ್ತನು ಸರಿಯಾದ ಮಾದರಿಯನ್ನಿಟ್ಟನು. ಅವನು ತನ್ನ ಬೋಧನೆಗಳನ್ನು ದೇವರ ವಾಕ್ಯದ ಮೇಲೆ ಆಧರಿಸಿದನು. ತನ್ನ ಸ್ವರ್ಗೀಯ ತಂದೆಗೆ ಮಾಡಿದ ಪ್ರಾರ್ಥನೆಯಲ್ಲಿ, “ನಿನ್ನ ವಾಕ್ಯವೇ ಸತ್ಯವು” ಎಂದು ಅವನು ಹೇಳಿದನು. (ಯೋಹಾನ 17:17) ದೇವರ ವಾಕ್ಯದಲ್ಲಿ ಯೇಸುವಿಗೆ ವಿಶ್ವಾಸವಿತ್ತು ಮತ್ತು ಅವನು ಬೋಧಿಸಿದ ಸರ್ವವೂ ಶಾಸ್ತ್ರಗಳಿಗೆ ಹೊಂದಿಕೆಯಲ್ಲಿತ್ತು. ಯೇಸು ಅನೇಕಾವರ್ತಿ, “ಎಂದು ಬರೆದದೆ” ಎಂದು ಹೇಳಿದನು. (ಮತ್ತಾಯ 4:4, 7, 10) ಅದಕ್ಕೆ ಮೊದಲು ಯೇಸು ಒಂದು ಶಾಸ್ತ್ರವಚನವನ್ನು ಎತ್ತಿ ಹೇಳುತ್ತಿದ್ದನು. ಆ ಪ್ರಕಾರವೇ, ದೇವಜನರು ಇಂದು ತಮ್ಮ ಸ್ವಂತ ವಿಚಾರಗಳನ್ನು ಬೋಧಿಸುವುದಿಲ್ಲ. ಬೈಬಲು ದೇವರ ವಾಕ್ಯವೆಂದು ಅವರಿಗೆ ವಿಶ್ವಾಸವಿದೆ ಮತ್ತು ಅದು ಏನನ್ನುತ್ತದೊ ಅದರ ಮೇಲೆ ಅವರು ತಮ್ಮ ಬೋಧನೆಗಳನ್ನು ಸ್ಥಿರವಾಗಿ ಆಧರಿಸುತ್ತಾರೆ.

8. ಯೆಹೋವನನ್ನು ಆರಾಧಿಸುವುದರಲ್ಲಿ ಏನು ಒಳಗೂಡಿದೆ?

8 ಸತ್ಯಧರ್ಮವನ್ನು ಕಾರ್ಯರೂಪಕ್ಕೆ ಹಾಕುವವರು ಯೆಹೋವನನ್ನು ಮಾತ್ರ ಆರಾಧಿಸುತ್ತಾರೆ ಮತ್ತು ಆತನ ನಾಮವನ್ನು ಪ್ರಸಿದ್ಧಪಡಿಸುತ್ತಾರೆ. ಯೇಸು ಘೋಷಿಸಿದ್ದು: “ದೇವರಾಗಿರುವ ಕರ್ತನಿಗೆ [“ಯೆಹೋವನಿಗೆ,” NW] ಅಡ್ಡಬಿದ್ದು ಆತನೊಬ್ಬನನ್ನೇ ಆರಾಧಿಸಬೇಕು.” (ಮತ್ತಾಯ 4:10) ಆದುದರಿಂದ ದೇವರ ಸೇವಕರು ಯೆಹೋವನನ್ನಲ್ಲದೆ ಇನ್ನಾರನ್ನೂ ಆರಾಧಿಸರು. ಈ ಆರಾಧನೆಯಲ್ಲಿ ಸತ್ಯ ದೇವರ ಹೆಸರೇನೆಂದು ಮತ್ತು ಆತನು ಎಂಥವನೆಂದು ಜನರಿಗೆ ತಿಳಿಯಪಡಿಸುವುದೂ ಸೇರಿದೆ. ಕೀರ್ತನೆ 83:18 ಹೇಳುವುದು: “ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನು.” ದೇವರನ್ನು ತಿಳಿದುಕೊಳ್ಳುವಂತೆ ಇತರರಿಗೆ ಸಹಾಯಮಾಡುವುದರಲ್ಲಿ ಯೇಸು ಮಾದರಿಯನ್ನಿಟ್ಟನು. ಅವನು ಪ್ರಾರ್ಥನೆಯಲ್ಲಿ ಹೇಳಿದ್ದು: “ಲೋಕದೊಳಗಿಂದ ನೀನು ನನಗೆ ಕೊಟ್ಟ ಮನುಷ್ಯರಿಗೆ ನಿನ್ನ ಹೆಸರನ್ನು ತಿಳಿಯಪಡಿಸಿದೆನು.” (ಯೋಹಾನ 17:6) ತದ್ರೀತಿ, ಇಂದು ಸತ್ಯಾರಾಧಕರು ಇತರರಿಗೆ ದೇವರ ಹೆಸರು, ಆತನ ಉದ್ದೇಶಗಳು ಮತ್ತು ಆತನ ಗುಣಗಳ ಕುರಿತು ಕಲಿಸುತ್ತಾರೆ.

9, 10. ಸತ್ಯ ಕ್ರೈಸ್ತರು ಯಾವ ರೀತಿಯಲ್ಲಿ ಪರಸ್ಪರ ಪ್ರೀತಿ ತೋರಿಸುತ್ತಾರೆ?

9 ದೇವಜನರು ಪರಸ್ಪರರಿಗಾಗಿ ನಿಜವಾದ, ನಿಸ್ವಾರ್ಥ ಪ್ರೀತಿಯನ್ನು ತೋರಿಸುತ್ತಾರೆ. ಯೇಸು ಹೇಳಿದ್ದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾನ 13:35) ಆದಿ ಕ್ರೈಸ್ತರ ನಡುವೆ ಅಂತಹ ಪ್ರೀತಿಯಿತ್ತು. ಈ ದಿವ್ಯ ಪ್ರೀತಿಯು ಜಾತೀಯ, ಸಾಮಾಜಿಕ ಮತ್ತು ರಾಷ್ಟ್ರೀಯ ತಡೆಗಳನ್ನು ದಾಟಿ, ನಿಜ ಸಹೋದರತ್ವದ ಮುರಿಯಲಾಗದ ಬಂಧದೊಳಕ್ಕೆ ಜನರನ್ನು ಸೆಳೆಯುತ್ತದೆ. (ಕೊಲೊಸ್ಸೆ 3:14) ಸುಳ್ಳುಧರ್ಮಗಳ ಸದಸ್ಯರಲ್ಲಿ ಇಂತಹ ಪ್ರೀತಿಯ ಸಹೋದರತ್ವವಿಲ್ಲ. ಅದು ನಮಗೆ ಹೇಗೆ ಗೊತ್ತು? ಹೇಗೆಂದರೆ, ಅವರು ರಾಷ್ಟ್ರೀಯ ಅಥವಾ ಬುಡಕಟ್ಟಿನ ಭೇದಭಾವಗಳ ಕಾರಣ ಒಬ್ಬರನ್ನೊಬ್ಬರು ಹತಿಸುತ್ತಾರೆ. ಸತ್ಯ ಕ್ರೈಸ್ತರು ತಮ್ಮ ಕ್ರೈಸ್ತ ಸಹೋದರರನ್ನಾಗಲಿ ಇನ್ನಾರನ್ನೇ ಆಗಲಿ ಕೊಲ್ಲಲು ಆಯುಧಗಳನ್ನು ಕೈಗೆತ್ತಿಕೊಳ್ಳುವುದಿಲ್ಲ. ಬೈಬಲು ಹೇಳುವುದು: “ಇವರು ದೇವರ ಮಕ್ಕಳೆಂಬದೂ ಅವರು ಸೈತಾನನ ಮಕ್ಕಳೆಂಬದೂ ಇದರಿಂದ ವ್ಯಕ್ತವಾಗುತ್ತದೆ. ನೀತಿಯನ್ನು ಅನುಸರಿಸದವನೂ ತನ್ನ ಸಹೋದರರನ್ನು ಪ್ರೀತಿಸದವನೂ ದೇವರಿಂದ ಹುಟ್ಟಿದವರಲ್ಲ. ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ ನೀವು ಮೊದಲಿನಿಂದಲೂ ಕೇಳಿದ ವಾಕ್ಯವಾಗಿದೆ. ಕೆಡುಕನಿಂದ ಹುಟ್ಟಿ ತನ್ನ ತಮ್ಮನನ್ನು ಕೊಂದುಹಾಕಿದ ಕಾಯಿನನಂತೆ ನಾವು ಇರಬಾರದು.”—1 ಯೋಹಾನ 3:10-12; 4:20, 21.

10 ಹೌದು, ನಿಜವಾದ ಪ್ರೀತಿಯಲ್ಲಿ ಕೇವಲ ಇತರರನ್ನು ಕೊಲ್ಲದೆ ಇರುವುದಕ್ಕಿಂತ ಹೆಚ್ಚಿನದ್ದು ಸೇರಿದೆಯೆಂಬುದು ನಿಜ. ಸತ್ಯ ಕ್ರೈಸ್ತರು ತಮ್ಮ ಸಮಯ, ಶಕ್ತಿ ಮತ್ತು ಸಂಪತ್ತನ್ನು ಪರಸ್ಪರ ಸಹಾಯಮಾಡಲಿಕ್ಕಾಗಿ ಹಾಗೂ ಪ್ರೋತ್ಸಾಹಕ್ಕಾಗಿ ಬಳಸುತ್ತಾರೆ. (ಇಬ್ರಿಯ 10:24, 25) ಸಂಕಷ್ಟದ ಸಮಯಗಳಲ್ಲಿ ಅವರು ಒಬ್ಬರಿಗೊಬ್ಬರು ಸಹಾಯಮಾಡುತ್ತಾರೆ ಮತ್ತು ಅವರು ಇತರರೊಂದಿಗೆ ಪ್ರಾಮಾಣಿಕತೆಯಿಂದ ವ್ಯವಹರಿಸುತ್ತಾರೆ. ವಾಸ್ತವದಲ್ಲಿ, “ಎಲ್ಲರಿಗೆ ಒಳ್ಳೇದನ್ನು ಮಾಡೋಣ” ಎಂಬ ಬೈಬಲ್‌ ಸಲಹೆಯನ್ನು ಅವರು ತಮ್ಮ ಜೀವಿತಗಳಲ್ಲಿ ಅನ್ವಯಿಸಿಕೊಳ್ಳುತ್ತಾರೆ.—ಗಲಾತ್ಯ 6:10.

11. ಯೇಸು ಕ್ರಿಸ್ತನನ್ನು ರಕ್ಷಣೆಗಾಗಿರುವ ದೇವರ ಮಾಧ್ಯಮವಾಗಿ ಅಂಗೀಕರಿಸುವುದು ಏಕೆ ಪ್ರಾಮುಖ್ಯ?

11 ಸತ್ಯ ಕ್ರೈಸ್ತರು ಯೇಸು ಕ್ರಿಸ್ತನನ್ನು ರಕ್ಷಣೆಗಾಗಿರುವ ದೇವರ ಮಾಧ್ಯಮವಾಗಿ ಅಂಗೀಕರಿಸುತ್ತಾರೆ. ಬೈಬಲ್‌ ಹೀಗನ್ನುತ್ತದೆ: “ಬರಬೇಕಾದ ರಕ್ಷಣೆಯು ಇನ್ನಾರಲ್ಲಿಯೂ ಸಿಕ್ಕುವದಿಲ್ಲ; ಆ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವದಿಲ್ಲ.” (ಅ. ಕೃತ್ಯಗಳು 4:12) ನಾವು 5ನೆಯ ಅಧ್ಯಾಯದಲ್ಲಿ ನೋಡಿದಂತೆ, ವಿಧೇಯ ಮಾನವರಿಗಾಗಿ ಯೇಸು ತನ್ನ ಜೀವವನ್ನು ವಿಮೋಚನಾ ಮೌಲ್ಯವಾಗಿ ಕೊಟ್ಟನು. (ಮತ್ತಾಯ 20:28) ಇದಲ್ಲದೆ, ಯೇಸು ಇಡೀ ಭೂಮಿಯನ್ನು ಆಳಲಿರುವ ಸ್ವರ್ಗೀಯ ರಾಜ್ಯದ ದೇವನೇಮಿತ ಅರಸನಾಗಿದ್ದಾನೆ. ಮತ್ತು ನಾವು ನಿತ್ಯಜೀವವನ್ನು ಬಯಸುವಲ್ಲಿ, ನಾವು ಯೇಸುವಿಗೆ ವಿಧೇಯರಾಗಿ ಅವನ ಬೋಧನೆಗಳನ್ನು ಅನ್ವಯಿಸಿಕೊಳ್ಳಬೇಕೆಂದು ದೇವರು ಅಪೇಕ್ಷಿಸುತ್ತಾನೆ. ಈ ಕಾರಣದಿಂದಲೇ ಬೈಬಲು ಹೇಳುವುದು: “ಆತನ ಮಗನನ್ನು ನಂಬುವವನಿಗೆ ನಿತ್ಯಜೀವ ಉಂಟು; ಮಗನಿಗೆ ಒಳಗಾಗದವನು ಜೀವವನ್ನು ಕಾಣುವದೇ ಇಲ್ಲ.”—ಯೋಹಾನ 3:36.

12. ಲೋಕದ ಭಾಗವಾಗಿರದೆ ಇರುವುದರಲ್ಲಿ ಏನು ಸೇರಿದೆ?

12 ಸತ್ಯಾರಾಧಕರು ಈ ಲೋಕದ ಭಾಗವಾಗಿರುವುದಿಲ್ಲ. ರೋಮನ್‌ ಅಧಿಪತಿಯಾದ ಪಿಲಾತನ ಮುಂದೆ ನಡೆದ ವಿಚಾರಣೆಯಲ್ಲಿ ಯೇಸು ಹೇಳಿದ್ದು: “ನನ್ನ ರಾಜ್ಯವು ಈ ಲೋಕದ್ದಲ್ಲ” ಇಲ್ಲವೆ ಈ ಲೋಕದ ಭಾಗವಾಗಿರುವುದಿಲ್ಲ. (ಯೋಹಾನ 18:36) ಯೇಸುವಿನ ನಿಜ ಹಿಂಬಾಲಕರು ಯಾವುದೇ ದೇಶದಲ್ಲಿ ಜೀವಿಸುತ್ತಿರಲಿ, ಅವರು ಅವನ ಸ್ವರ್ಗೀಯ ರಾಜ್ಯದ ಪ್ರಜೆಗಳಾಗಿದ್ದಾರೆ ಮತ್ತು ಈ ಕಾರಣದಿಂದ ಅವರು ಈ ಲೋಕದ ರಾಜಕೀಯ ವಿಚಾರಗಳಲ್ಲಿ ಕಟ್ಟುನಿಟ್ಟಾದ ತಾಟಸ್ಥ್ಯವನ್ನು ಕಾಪಾಡಿಕೊಳ್ಳುತ್ತಾರೆ. ಅದರ ತಿಕ್ಕಾಟಗಳಲ್ಲಿ ಅವರು ಭಾಗವಹಿಸುವುದಿಲ್ಲ. ಆದರೂ, ರಾಜಕೀಯ ಪಕ್ಷಕ್ಕೆ ಸೇರುವ ವಿಷಯದಲ್ಲಿ, ರಾಜಕೀಯ ಹುದ್ದೆಯ ಚುನಾವಣೆಗೆ ಅಭ್ಯರ್ಥಿಯಾಗುವುದರಲ್ಲಿ, ಅಥವಾ ಮತಹಾಕುವ ವಿಷಯದಲ್ಲಿ ಇತರರು ಯಾವ ಆಯ್ಕೆಮಾಡುತ್ತಾರೊ ಅದರಲ್ಲಿ ಯೆಹೋವನ ಆರಾಧಕರು ಹಸ್ತಕ್ಷೇಪಮಾಡುವುದಿಲ್ಲ. ಮತ್ತು ರಾಜಕೀಯದ ವಿಷಯದಲ್ಲಿ ದೇವರ ಸತ್ಯಾರಾಧಕರು ತಟಸ್ಥರಾದರೂ, ಅವರು ನಿಯಮಪಾಲಕರಾಗಿದ್ದಾರೆ. ಏಕೆ? ಏಕೆಂದರೆ, ತಮ್ಮ “ಮೇಲಿರುವ ಅಧಿಕಾರಿಗಳಿಗೆ” ಅವರು “ಅಧೀನ”ರಾಗಿರಬೇಕೆಂದು ದೇವರ ವಾಕ್ಯವು ಅವರಿಗೆ ಆಜ್ಞೆ ಕೊಡುತ್ತದೆ. (ರೋಮಾಪುರ 13:1) ಆದರೆ ದೇವರು ಏನನ್ನು ಅಪೇಕ್ಷಿಸುತ್ತಾನೊ ಅದರ ಮತ್ತು ರಾಜಕೀಯ ವ್ಯವಸ್ಥೆಯು ಏನನ್ನು ಅಪೇಕ್ಷಿಸುತ್ತದೊ ಅದರ ಮಧ್ಯೆ ಘರ್ಷಣೆಯಾಗುವಲ್ಲಿ, ಸತ್ಯಾರಾಧಕರು “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ” ಎಂದು ಹೇಳಿದಂಥ ಅಪೊಸ್ತಲರ ಮಾದರಿಯನ್ನು ಅನುಸರಿಸುತ್ತಾರೆ.—ಅ. ಕೃತ್ಯಗಳು 5:29; ಮಾರ್ಕ 12:17.

13. ದೇವರ ರಾಜ್ಯದ ಬಗ್ಗೆ ಯೇಸುವಿನ ನಿಜ ಹಿಂಬಾಲಕರ ನೋಟವೇನು, ಮತ್ತು ಈ ಕಾರಣದಿಂದ ಅವರು ಯಾವ ಕೆಲಸಮಾಡುತ್ತಾರೆ?

13 ಯೇಸುವಿನ ನಿಜ ಹಿಂಬಾಲಕರು, ದೇವರ ರಾಜ್ಯವೇ ಮಾನವಕುಲಕ್ಕಿರುವ ಏಕಮಾತ್ರ ನಿರೀಕ್ಷೆ ಎಂದು ಸಾರುತ್ತಾರೆ. ಯೇಸು ಮುಂತಿಳಿಸಿದ್ದು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” (ಮತ್ತಾಯ 24:14) ಯೇಸು ಕ್ರಿಸ್ತನ ನಿಜ ಹಿಂಬಾಲಕರು, ಜನರು ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ಮಾನವ ಪ್ರಭುಗಳ ಕಡೆಗೆ ನೋಡುವಂತೆ ಪ್ರೋತ್ಸಾಹಿಸುವ ಬದಲಾಗಿ ದೇವರ ಸ್ವರ್ಗೀಯ ರಾಜ್ಯವೇ ಮಾನವಕುಲದ ಏಕಮಾತ್ರ ನಿರೀಕ್ಷೆಯೆಂದು ಸಾರಿಹೇಳುತ್ತಾರೆ. (ಕೀರ್ತನೆ 146:3) “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ” ಎಂದು ಹೇಳಿದಾಗ ಯೇಸು ಆ ಪರಿಪೂರ್ಣ ಸರಕಾರಕ್ಕಾಗಿ ಪ್ರಾರ್ಥಿಸುವಂತೆ ನಮಗೆ ಕಲಿಸಿದನು. (ಮತ್ತಾಯ 6:10) ಈ ಸ್ವರ್ಗೀಯ ರಾಜ್ಯವು ಈಗ ಅಸ್ತಿತ್ವದಲ್ಲಿರುವ “ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು” ಎಂದು ದೇವರ ವಾಕ್ಯವು ಮುಂತಿಳಿಸಿತು.—ದಾನಿಯೇಲ 2:44.

14. ಸತ್ಯಾರಾಧನೆಯ ಆವಶ್ಯಕತೆಗಳನ್ನು ಯಾವ ಧಾರ್ಮಿಕ ಗುಂಪು ಪೂರೈಸುತ್ತದೆಂಬುದು ನಿಮ್ಮ ಅಭಿಪ್ರಾಯ?

14 ನಾವು ಈಗ ತಾನೇ ಪರಿಗಣಿಸಿದ ವಿಷಯದ ಆಧಾರದ ಮೇರೆಗೆ, ಹೀಗೆ ಕೇಳಿಕೊಳ್ಳಿರಿ: ‘ಯಾವ ಧಾರ್ಮಿಕ ಗುಂಪು ತನ್ನ ಬೋಧನೆಗಳನ್ನೆಲ್ಲ ಬೈಬಲಿನ ಮೇಲೆ ಆಧರಿಸಿ, ಯೆಹೋವನ ನಾಮವನ್ನು ಪ್ರಸಿದ್ಧಪಡಿಸುತ್ತದೆ? ಯಾವ ಗುಂಪು ಯೆಹೋವನು ಕಲಿಸುವಂಥ ರೀತಿಯ ಪ್ರೀತಿಯನ್ನು ಕಾರ್ಯರೂಪದಲ್ಲಿ ತೋರಿಸುತ್ತದೆ ಮತ್ತು ಯೇಸುವಿನಲ್ಲಿ ನಂಬಿಕೆಯನ್ನು ವ್ಯಕ್ತಪಡಿಸುತ್ತದೆ? ಯಾವ ಗುಂಪು ಲೋಕದ ಭಾಗವಾಗಿಲ್ಲದಿದ್ದು, ಮಾನವಕುಲದ ಏಕಮಾತ್ರ ನಿಜ ನಿರೀಕ್ಷೆಯು ದೇವರ ರಾಜ್ಯವೆಂದು ಸಾರಿ ಹೇಳುತ್ತದೆ? ಭೂಮಿಯ ಮೇಲಿರುವ ಸಕಲ ಧಾರ್ಮಿಕ ಗುಂಪುಗಳಲ್ಲಿ, ಈ ಎಲ್ಲ ಆವಶ್ಯಕತೆಗಳನ್ನು ಪೂರೈಸುವ ಗುಂಪು ಯಾವುದು?’ ಯೆಹೋವನ ಸಾಕ್ಷಿಗಳೇ ಈ ಧಾರ್ಮಿಕ ಗುಂಪಾಗಿದ್ದಾರೆ ಎಂದು ನಿಜತ್ವಗಳು ಸ್ಪಷ್ಟವಾಗಿ ತೋರಿಸಿಕೊಡುತ್ತವೆ.—ಯೆಶಾಯ 43:10-12.

ನೀವೇನು ಮಾಡುವಿರಿ?

15. ದೇವರಿದ್ದಾನೆಂದು ನಂಬುವುದಲ್ಲದೆ ಇನ್ನೇನನ್ನು ಮಾಡುವಂತೆ ದೇವರು ಅಪೇಕ್ಷಿಸುತ್ತಾನೆ?

15 ದೇವರನ್ನು ಮೆಚ್ಚಿಸಲು ಕೇವಲ ಆತನನ್ನು ನಂಬುವುದು ಮಾತ್ರ ಸಾಲದು. ಏಕೆಂದರೆ, ದೇವರಿದ್ದಾನೆಂದು ದೆವ್ವಗಳೂ ನಂಬುತ್ತವೆಂದು ಬೈಬಲು ಹೇಳುತ್ತದೆ. (ಯಾಕೋಬ 2:19) ಆದರೂ, ಆ ದೆವ್ವಗಳು ದೇವರ ಚಿತ್ತವನ್ನು ಮಾಡುವುದೂ ಇಲ್ಲ, ಆತನ ಒಪ್ಪಿಗೆಯೂ ಅವುಗಳಿಗೆ ಇಲ್ಲವೆಂಬುದು ಸುವ್ಯಕ್ತ. ದೇವರ ಒಪ್ಪಿಗೆಯನ್ನು ಪಡೆಯಬೇಕಾದರೆ, ನಾವು ಆತನ ಅಸ್ತಿತ್ವವನ್ನು ನಂಬಬೇಕು ಮಾತ್ರವಲ್ಲ, ನಾವಾತನ ಚಿತ್ತವನ್ನೂ ಮಾಡಬೇಕು. ಅಲ್ಲದೆ, ಸುಳ್ಳುಧರ್ಮದಿಂದ ನಮ್ಮನ್ನು ಪ್ರತ್ಯೇಕಿಸಿಕೊಂಡು ಸತ್ಯಾರಾಧನೆಯನ್ನು ಅವಲಂಬಿಸಬೇಕು.

16. ಸುಳ್ಳುಧರ್ಮದಲ್ಲಿ ಭಾಗವಹಿಸುವ ವಿಷಯದಲ್ಲಿ ಏನು ಮಾಡಬೇಕು?

16 ನಾವು ಸುಳ್ಳು ಆರಾಧನೆಯಲ್ಲಿ ಭಾಗವಹಿಸಬಾರದು ಎಂಬುದನ್ನು ಅಪೊಸ್ತಲ ಪೌಲನು ತೋರಿಸಿದನು. ಅವನು ಬರೆದುದು: ‘ಅನ್ಯಜನರ ಮಧ್ಯದಲ್ಲಿಂದ ಹೊರಟು ಬಂದು ಪ್ರತ್ಯೇಕವಾಗಿರಿ; ಅಶುದ್ಧವಾದ ಯಾವದನ್ನೂ ಮುಟ್ಟದಿರಿ. ನಾನು ನಿಮ್ಮನ್ನು ಸೇರಿಸಿಕೊಳ್ಳುವೆನು ಎಂದು ಕರ್ತನು [“ಯೆಹೋವನು,” NW] ಹೇಳುತ್ತಾನೆ.’ (2 ಕೊರಿಂಥ 6:17, 18; ಯೆಶಾಯ 52:11) ಆದಕಾರಣ, ಮಿಥ್ಯಾರಾಧನೆಗೆ ಸಂಬಂಧಪಟ್ಟ ಯಾವುದರಿಂದಲೂ ಸತ್ಯ ಕ್ರೈಸ್ತರು ದೂರವಿರುತ್ತಾರೆ.

17, 18. ‘ಮಹಾ ಬಾಬೆಲ್‌’ ಎಂದರೇನು, ಮತ್ತು ‘ಅವಳನ್ನು ಬಿಟ್ಟುಬರುವುದು’ ಏಕೆ ತುರ್ತಿನದ್ದಾಗಿದೆ?

17 ಸುಳ್ಳುಧರ್ಮದ ವಿವಿಧ ರೂಪಗಳೆಲ್ಲವೂ ‘ಮಹಾ ಬಾಬೆಲಿನ’ ಭಾಗವಾಗಿವೆಯೆಂದು ಬೈಬಲು ತೋರಿಸುತ್ತದೆ. a (ಪ್ರಕಟನೆ 17:5) ಆ ಹೆಸರು ನಮಗೆ ಪೂರ್ವಕಾಲದ ಬಾಬೆಲ್‌ ನಗರವನ್ನು ನೆನಪಿಗೆ ತರುತ್ತದೆ. ಏಕೆಂದರೆ, ನೋಹನ ದಿನಗಳ ಜಲಪ್ರಳಯದ ಬಳಿಕ ಸುಳ್ಳುಧರ್ಮವು ತಲೆಯೆತ್ತಿದ್ದು ಅಲ್ಲಿಯೇ. ಇಂದು ಸುಳ್ಳುಧರ್ಮದಲ್ಲಿ ಸರ್ವಸಾಮಾನ್ಯವಾಗಿರುವ ಅನೇಕ ಬೋಧನೆಗಳು ಮತ್ತು ಆಚರಣೆಗಳು ಬಹುಕಾಲಗಳ ಹಿಂದೆ ಬಾಬೆಲಿನಿಂದ ಬಂದವುಗಳಾಗಿವೆ. ದೃಷ್ಟಾಂತಕ್ಕಾಗಿ, ಬಾಬೆಲಿನವರು ತ್ರಯೈಕ್ಯ ದೇವತೆಗಳನ್ನು ಆರಾಧಿಸುತ್ತಿದ್ದರು. ಇಂದು ತ್ರಯೈಕ್ಯವು ಅನೇಕ ಧರ್ಮಗಳ ಕೇಂದ್ರ ಬೋಧನೆಯಾಗಿದೆ. ಆದರೆ ಬೈಬಲು, ಯೆಹೋವನೊಬ್ಬನೇ ಏಕಮಾತ್ರ ಸತ್ಯದೇವರೆಂದೂ ಯೇಸು ಕ್ರಿಸ್ತನು ಆತನ ಪುತ್ರನೆಂದೂ ಸ್ಪಷ್ಟವಾಗಿ ಬೋಧಿಸುತ್ತದೆ. (ಯೋಹಾನ 17:3) ಬಾಬೆಲಿನವರು, ಮಾನವರಲ್ಲಿ ಅಮರವಾದ ಆತ್ಮವೊಂದಿದೆ ಎಂದೂ ಅದು ಮರಣಾನಂತರ ದೇಹದ ಹೊರಗೆ ಜೀವಿಸುವುದನ್ನು ಮುಂದುವರಿಸುವ ಮತ್ತು ಯಾತನೆಯ ಸ್ಥಳವೊಂದರಲ್ಲಿ ನರಳುವ ಸಾಧ್ಯತೆಯಿದೆಯೆಂದೂ ನಂಬಿದರು. ಇಂದು ಹೆಚ್ಚಿನ ಧರ್ಮಗಳು ನರಕಾಗ್ನಿಯಲ್ಲಿ ಯಾತನೆ ಅನುಭವಿಸಬಲ್ಲ ಅಮರ ಆತ್ಮದ ನಂಬಿಕೆಯನ್ನು ಬೋಧಿಸುತ್ತವೆ.

18 ಈ ಪ್ರಾಚೀನ ಬಾಬೆಲಿನ ಆರಾಧನೆಯು ಭೂಮಿಯಲ್ಲೆಲ್ಲ ಹಬ್ಬಿತು. ಆದುದರಿಂದ, ಆಧುನಿಕ ಮಹಾ ಬಾಬೆಲನ್ನು ಸೂಕ್ತವಾಗಿಯೇ ಸುಳ್ಳುಧರ್ಮದ ಲೋಕ ಸಾಮ್ರಾಜ್ಯವಾಗಿ ಗುರುತಿಸಸಾಧ್ಯವಿದೆ. ಮತ್ತು ಈ ಸುಳ್ಳುಧರ್ಮದ ಸಾಮ್ರಾಜ್ಯವು ಇದ್ದಕ್ಕಿದ್ದ ಹಾಗೆ ಥಟ್ಟನೆ ಅಂತ್ಯಗೊಳ್ಳುವುದೆಂದು ದೇವರು ಮುಂತಿಳಿಸಿದ್ದಾನೆ. (ಪ್ರಕಟನೆ 18:8) ಹೀಗಿರುವುದರಿಂದ ಮಹಾ ಬಾಬೆಲಿನ ಪ್ರತಿಯೊಂದು ಭಾಗದಿಂದ ನೀವು ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಬೇಕಾಗಿರುವ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತೀರೊ? ನೀವು ಇನ್ನೂ ಸಮಯವಿರುವಾಗಲೇ, ಬೇಗನೆ ‘ಅವಳನ್ನು ಬಿಟ್ಟುಬರುವಂತೆ’ ಯೆಹೋವ ದೇವರು ಬಯಸುತ್ತಾನೆ.—ಪ್ರಕಟನೆ 18:4.

ಯೆಹೋವನ ಜನರೊಂದಿಗೆ ಆತನನ್ನು ಸೇವಿಸುವ ಮೂಲಕ ನೀವೇನು ಗಳಿಸುವಿರೊ ಅದು, ನೀವು ಕಳೆದುಕೊಂಡದ್ದಕ್ಕಿಂತಲೂ ಎಷ್ಟೋ ಹೆಚ್ಚಿನದ್ದಾಗಿರುವುದು

19. ಯೆಹೋವನನ್ನು ಸೇವಿಸುವ ಮೂಲಕ ನೀವೇನು ಗಳಿಸುವಿರಿ?

19 ಸುಳ್ಳು ಧರ್ಮಾಚರಣೆಯನ್ನು ಬಿಟ್ಟುಬಿಡಲು ನೀವು ಮಾಡಿರುವ ನಿರ್ಣಯದ ನಿಮಿತ್ತ, ಕೆಲವರು ನಿಮ್ಮೊಂದಿಗೆ ಒಡನಾಟವನ್ನು ನಿಲ್ಲಿಸಿಬಿಡಬಹುದು. ಆದರೆ, ಯೆಹೋವನ ಜನರೊಂದಿಗೆ ಆತನನ್ನು ಸೇವಿಸುವ ಮೂಲಕ ನೀವೇನನ್ನು ಗಳಿಸುವಿರೊ ಅದು, ನೀವು ಕಳೆದುಕೊಂಡದ್ದಕ್ಕಿಂತಲೂ ಎಷ್ಟೋ ಹೆಚ್ಚಿನದ್ದಾಗಿರುವುದು. ಯೇಸುವನ್ನು ಹಿಂಬಾಲಿಸಲಿಕ್ಕಾಗಿ ಬೇರೆ ವಿಷಯಗಳನ್ನು ಬಿಟ್ಟುಬಂದ ಅವನ ಆದಿ ಶಿಷ್ಯರಂತೆ, ನಿಮಗೂ ಅನೇಕ ಮಂದಿ ಆಧ್ಯಾತ್ಮಿಕ ಸಹೋದರ ಸಹೋದರಿಯರು ದೊರೆಯುವರು. ನಿಮಗೆ ನಿಜವಾದ ಪ್ರೀತಿಯನ್ನು ತೋರಿಸುವ ಲಕ್ಷಾಂತರ ಮಂದಿ ನಿಜ ಕ್ರೈಸ್ತರ ಒಂದು ಲೋಕವ್ಯಾಪಕ ಕುಟುಂಬದ ಭಾಗವಾಗುವಿರಿ. ಮತ್ತು “ಮುಂದಣ ಲೋಕದಲ್ಲಿ” ನಿತ್ಯಜೀವದ ಅದ್ಭುತಕರವಾದ ನಿರೀಕ್ಷೆಯು ನಿಮ್ಮದಾಗುವುದು. (ಮಾರ್ಕ 10:28-30) ಪ್ರಾಯಶಃ ಕಾಲಾನಂತರ, ನಿಮ್ಮ ನಂಬಿಕೆಗಳಿಗಾಗಿ ನಿಮ್ಮನ್ನು ಬಿಟ್ಟುಹೋಗಿರುವವರು ಬೈಬಲು ಏನನ್ನು ಬೋಧಿಸುತ್ತದೆ ಎಂಬುದನ್ನು ಪರೀಕ್ಷಿಸಿ ಯೆಹೋವನ ಆರಾಧಕರಾಗಲೂ ಬಹುದು.

20. ಸತ್ಯಧರ್ಮವನ್ನು ಕಾರ್ಯರೂಪಕ್ಕೆ ಹಾಕುವವರಿಗೆ ಭಾವೀ ಪ್ರತೀಕ್ಷೆ ಏನಾಗಿರುತ್ತದೆ?

20 ದೇವರು ಈ ದುಷ್ಟ ವ್ಯವಸ್ಥೆಗೆ ಬೇಗನೆ ಅಂತ್ಯ ತಂದು, ಅದರ ಸ್ಥಾನದಲ್ಲಿ ತನ್ನ ರಾಜ್ಯಾಳಿಕೆಯ ಕೆಳಗಿರುವ ನೀತಿಯ ನೂತನ ಲೋಕವನ್ನು ನಿಲ್ಲಿಸುವನೆಂದೂ ಬೈಬಲು ಬೋಧಿಸುತ್ತದೆ. (2 ಪೇತ್ರ 3:9, 13) ಅದೆಷ್ಟು ಅದ್ಭುತಕರವಾದ ಜಗತ್ತಾಗಿರುವುದು! ಮತ್ತು ಆ ನೀತಿಭರಿತ ನೂತನ ವ್ಯವಸ್ಥೆಯಲ್ಲಿ ಒಂದೇ ಒಂದು ಧರ್ಮ ಅಂದರೆ ಆರಾಧನೆಯ ಒಂದೇ ಸತ್ಯ ರೂಪವು ಇರುವುದು. ಹೀಗಿರುವುದರಿಂದ, ನೀವು ಸತ್ಯಾರಾಧಕರೊಂದಿಗೆ ಒಡನಾಟಮಾಡಲು ಅಗತ್ಯವಿರುವ ಹೆಜ್ಜೆಗಳನ್ನು ಈಗಲೇ ತೆಗೆದುಕೊಳ್ಳುವುದು ವಿವೇಕಯುತವಲ್ಲವೊ?

a ಮಹಾ ಬಾಬೆಲ್‌ ಸುಳ್ಳುಧರ್ಮದ ಲೋಕ ಸಾಮ್ರಾಜ್ಯವನ್ನು ಏಕೆ ಪ್ರತಿನಿಧಿಸುತ್ತದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ ಪರಿಶಿಷ್ಟದ 219-20ನೇ ಪುಟಗಳನ್ನು ನೋಡಿ.